ಬೆಂಗಳೂರು: ವಿಧಾನಸಭೆ ಅಧಿವೇಶನದ ವೇಳೆ ಜೆಡಿಎಸ್ ಶಾಸಕರ ನಡುವೆಯೇ ಕಿತ್ತಾಟ ನಡೆದ ಘಟನೆ ನಡೆದಿದೆ. ಸ್ಪೀಕರ್ ಚುನಾವಣೆ ಬಹಿಷ್ಕರಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಸದನದೊಳಗೆ ಯಾರು ಇರಬೇಕು, ಯಾರು ಇರಬಾರದು ಎಂಬ ವಿಚಾರದಲ್ಲಿ ಜೆಡಿಎಸ್ ಶಾಸಕರ ನಡುವೆ ಗದ್ದಲ ಉಂಟಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸ್ಪೀಕರ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಆದರೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಸದನದೊಳಗೆ ಕುಳಿತಿರುವುದನ್ನು ಗಮನಿಸಿದ ಪಕ್ಷದ ನಾಯಕರು, “ಚುನಾವಣೆಯನ್ನು ಬಹಿಷ್ಕರಿಸಿದ್ದರೂ ಸದನದ ಒಳಗೆ ಯಾಕೆ ಕುಳಿತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶರಣಗೌಡ ಕಂದಕೂರು, “ನನಗೆಈ ಬಗ್ಗೆ ಮಾಹಿತಿ ಇರಲಿಲ್ಲ” ಎಂದು ಹೇಳಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕ ಸುರೇಶ್ ಬಾಬು, ಸಿಬ್ಬಂದಿಯಿಂದ ಮೆಸೇಜ್ ಬಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶರಣಗೌಡ ಕಂದಕೂರು, “ಮೆಸೇಜ್ ಹಾಕಲು ಅವರು ಯಾರು? ನೀವೇ ನನಗೆ ಕರೆ ಮಾಡಬೇಕಿತ್ತು. ನೀವೇಕೆ ಕರೆ ಮಾಡಲಿಲ್ಲ?” ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡಿದ್ದು, ಕಂದಕೂರು ಪಡಸಾಲೆಯಲ್ಲೇ ಜೋರಾಗಿ ಕೂಗಾಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಅವರು ಶರಣಗೌಡ ಕಂದಕೂರು ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೆ ಕಂದಕೂರು ಆಕ್ರೋಶದಿಂದಲೇ ಮಾತನಾಡುತ್ತಿದ್ದು, ಬಳಿಕ ಕೂಗಾಡುತ್ತಲೇ ಸ್ಥಳದಿಂದ ಹೊರನಡೆದಿದ್ದಾರೆ.
ಜೆಡಿಎಸ್ನಲ್ಲೇ ಶಾಸಕರ ನಡುವೆ ಸಮನ್ವಯದ ಕೊರತೆ ಕಂಡುಬಂದಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಶರಣಗೌಡ ಕಂದಕೂರು ಅವರು ಈ ಹಿಂದೆಯೂ ವಿಧಾನಸಭೆಯ ಕಲಾಪದ ವೇಳೆ ತಮ್ಮ ನೇರ ಹಾಗೂ ಆಕ್ರಮಣಕಾರಿ ನಿಲುವಿನಿಂದ ಗಮನ ಸೆಳೆದಿದ್ದರು.

