ಬೆಂಗಳೂರು, ಆಗಸ್ಟ್ 14: ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಡಳಿತದ ತಮ್ಮ ಆದ್ಯತೆಗಳು ಹಾಗೂ ಸದನದ ಸದಸ್ಯರೊಂದಿಗೆ ಹೊಂದಾಣಿಕೆಯ ರಾಜಕಾರಣದ ಸಂದೇಶವನ್ನು ನೀಡಿದ್ದಾರೆ. ‘ಇದು ಆಲೋಚನೆ ಮತ್ತು ಹೊಸ ನಂಬಿಕೆಯ ಸರ್ಕಾರ. ಇದೊಂದು ಟೀಂ ಕರ್ನಾಟಕ’ ಎಂದು ಅವರು ಹೇಳಿದ್ದು, ಆಡಳಿತದಲ್ಲಿ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಪಾಲಿಗೆ ಆಡಳಿತ ಪಕ್ಷ-ವಿಪಕ್ಷ ಎಂಬ ಭೇದವಿಲ್ಲ ಎಂದು ಸ್ಪಷ್ಟಪಡಿಸಿದರು. ‘ಇಲ್ಲಿರುವ 224 ಶಾಸಕರೂ ನನಗೆ ಒಂದೇ’ ಎಂದು ಹೇಳಿದ ಅವರು, ಪ್ರತಿಪಕ್ಷಗಳ ವಿಶ್ವಾಸವನ್ನೂ ಪಡೆದುಕೊಂಡು ಸರ್ಕಾರ ನಡೆಸುವುದು ತಮ್ಮ ಕರ್ತವ್ಯ ಎಂದರು. ಚುನಾವಣೆ ಬಂದಾಗ ರಾಜೀನಾಮೆ ಮಾಡೋಣ ಎಂದು ಹೇಳುವ ಮೂಲಕ ಅಧಿಕಾರಕ್ಕಿಂತ ಜನರ ವಿಶ್ವಾಸವೇ ಮುಖ್ಯ ಎಂಬ ಸಂದೇಶವನ್ನು ನೀಡಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ಗೌರವ ನೀಡುವುದು ತಮ್ಮ ಕರ್ತವ್ಯ ಎಂದು ಹೇಳಿದ ಅವರು, ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ತಾವು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದನ್ನು ಪ್ರಸ್ತಾಪಿಸಿದರು. ವಿಧಾನಸಭೆಯಲ್ಲಿರುವ ಹಲವು ಹಿರಿಯ ಸದಸ್ಯರು ಈ ಹಿಂದೆ ಸಚಿವರು ಹಾಗೂ ಆಡಳಿತದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಜನರ ವಿಶ್ವಾಸವನ್ನು ಗಳಿಸುವುದು ಎಲ್ಲ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಹಿಂದೆ ನಡೆದಿರುವ ವಿಚಾರಗಳನ್ನು ಮರೆತು, ರಾಜ್ಯದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂಬ ಮನವಿಯನ್ನೂ ಡಿ.ಕೆ. ಶಿವಕುಮಾರ್ ಮಾಡಿದರು. ಈ ಹಿಂದೆ ರಾಜ್ಯವನ್ನು ಮುನ್ನಡೆಸಿದ ಮುಖ್ಯಮಂತ್ರಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನೀಡಿದ ಹಲವು ‘ಭಾಗ್ಯ’ ಯೋಜನೆಗಳನ್ನು ಮುಂದುವರಿಸಿಕೊಂಡು ಸರ್ಕಾರ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ವಿಧಾನಸಭೆಯ ಸಭಾಧ್ಯಕ್ಷರ ಪೀಠಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಅಗೌರವ ತೋರಿಸುವ ಉದ್ದೇಶ ಇರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು. ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸಭಾಧ್ಯಕ್ಷರ ಹೆಸರು ಘೋಷಣೆಯಾಗಿದ್ದ ವಿಚಾರದ ಬಗ್ಗೆ ಸದನದಲ್ಲಿ ಸ್ಪಷ್ಟನೆ ನೀಡಿದ ಅವರು, ‘ನಮ್ಮ ಪಕ್ಷದಿಂದ ನಿಮ್ಮನ್ನು ನೇಮಕ ಮಾಡಲಾಗಿದೆ ಅಷ್ಟೇ. ಆದರೆ ಸ್ಪೀಕರ್ ಹುದ್ದೆಗೆ ಅಗೌರವ ತೋರುವ ಉದ್ದೇಶ ಇರಲಿಲ್ಲ’ ಎಂದು ಹೇಳಿದರು.
ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆಯೂ ಡಿ.ಕೆ. ಶಿವಕುಮಾರ್ ಸದನದಲ್ಲಿ ಸೌಹಾರ್ದದ ಮಾತುಗಳನ್ನಾಡಿದರು. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಮುಖ ಖಾತೆಯ ಸಚಿವರಾಗಿದ್ದಾರೆ. ಅವರಿಗೆ ರಾಜ್ಯದಲ್ಲಿ ಸರ್ಕಾರದಿಂದ ಯಾವುದೇ ಜಾಗ ಅಥವಾ ಸಹಕಾರ ಬೇಕಿದ್ದರೆ ನೀಡಲು ಸಿದ್ಧ ಎಂದು ಹೇಳಿದ ಅವರು, ‘ಕುಮಾರಸ್ವಾಮಿ ಜೊತೆ ಕೆಲಸ ಮಾಡಲು ನಾನು ರೆಡಿ ಇದ್ದೇನೆ’ ಎಂದರು.
ತಮ್ಮ ರಾಜಕೀಯ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ ಎಂದು ಹೇಳಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಸುಮಾರು ಎಂಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದ್ದು, ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು. ಆ ಯೋಜನೆಗಳನ್ನು ಮುಂದುವರಿಸಿಕೊಂಡು ರಾಜ್ಯದ ಜನರ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

