ಯುವರ್ ಆನರ್.. ಜಿರಲೆ ಎಂದು ಯುವಜನರನ್ನು ಕಡೆಗಣಿಸಬೇಡಿ. ‘ನಿರುದ್ಯೋಗಿಗಳಿಗೆ ಕೆಲಸ ಕೊಡಿ ಇಲ್ಲವೇ ಖುರ್ಚಿ ಖಾಲಿ ಮಾಡಿ’ ಎಂದು ಆಳುವ ಪ್ರಭುಗಳಿಗೆ ಹೇಳಿ. ದೊರೆಗಳ ಕೃಪಾಕಟಾಕ್ಷದಲ್ಲಿರುವ ನೀವು ಹಾಗೆ ಹೇಳಿ ನಿವೃತ್ತಿಯ ಬಳಿಕ ಪ್ರತಿಫಲವಾಗಿ ದೊರೆಯಬಹುದಾದ ಘನಂದಾರಿ ಹುದ್ದೆಗಳನ್ನು ಕಳೆದುಕೊಳ್ಳಲಾರಿರಿ ಎಂದು ಎಲ್ಲರಿಗೂ ಗೊತ್ತಿದೆ. ಮನುಷ್ಯ ರೂಪದ ಇಲಿ ಹೆಗ್ಗಣ ತಿಮಿಂಗಿಲಗಳು ಈ ದೇಶದ ಸಕಲ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ, ಸಾಧ್ಯವಾದರೆ ಅದರ ವಿರುದ್ಧ ಧ್ವನಿ ಎತ್ತಿ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ನೀವು ನಿರುದ್ಯೋಗದಿಂದ ಬಳಲುತ್ತಿದ್ದೀರಾ? ವೃತ್ತಿಯಲ್ಲಿ ಯಾವುದೇ ಸ್ಥಾನ ಲಭಿಸುತ್ತಿಲ್ಲವೇ? ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದೀರಾ? ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದೀರಾ? ಹಾಗಾದರೆ ನೀವು ಖಂಡಿತಾ ಮನುಷ್ಯರಲ್ಲ. ನೀವೆಲ್ಲಾ ಜಿರಲೆಗಳು. ಹಾಗಂತ ನಾನು ಹೇಳುತ್ತಿಲ್ಲಾ ಸ್ವಾಮಿ, ನಮ್ಮ ದೇಶದ ಸುಪ್ರೀಂ ಕೋರ್ಟಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಮಾನ್ಯ ಸೂರ್ಯಕಾಂತರವರು ಓಪನ್ ಕೋರ್ಟ್ ಲಿ ಹೇಳಿದ್ದಾರೆ.
ಎಸ್.. ಹೌದು ಯುವರ್ ಆನರ್. ಸರಿಯಾಗಿ ಹೇಳಿದ್ರಿ. ನಾವು ಮಾಡಲು ಉದ್ಯೋಗ ಇಲ್ಲದ ನಿರುದ್ಯೋಗಿಗಳು, ಮಾಡೋಕೆ ಕೆಲಸಾ ಇಲ್ಲದೆ ಸದಾ ಸೋಶಿಯಲ್ ಮೀಡಿಯಾ ಗಳಲ್ಲಿ ಟೈಂ ಪಾಸ್ ಮಾಡ್ತಾ ಇರೋರು. ಅಚ್ಚರಿ ಏನೆಂದರೆ ನಮಗೇ ಗೊತ್ತಿರಲಿಲ್ಲ ನಾವೆಲ್ಲಾ ಜಿರಲೆಗಳು ಅಂತಾ. ಇಷ್ಟು ದಿನಾ ಮನುಷ್ಯರು ಅಂದ್ಕೊಂಡಿದ್ವಿ. ನಮ್ಮ ಅಸಲೀತನ ತೋರಿಸಿದ್ದಕ್ಕೆ ಧನ್ಯವಾದಗಳು ಯುವರ್ ಆನರ್.
ಅಲ್ಲಾ ಜಡ್ಜ್ ಸಾಹೇಬರೇ, ನಾವು ದೇಶಾದ್ಯಂತ ಇರುವ ಕೋಟಿ ಕೋಟಿ ನಿರುದ್ಯೋಗಿಗಳಾಗಿದ್ದು ಕೆಲಸ ಮಾಡಲು ಬೆಟ್ಟದಷ್ಟು ಆಸೆ ಇದೆ. ಆದರೆ ನಮ್ಮಂತಾ ಜಿರಲೆಗಳಿಗೆ ಯಾರೂ ಓದಿಗೆ ತಕ್ಕ ನೌಕರಿ ಕೊಡ್ತಿಲ್ಲ. ಸರಕಾರಿ ನೌಕರಿಗಾಗಿ ಅರ್ಜಿ ಹಾಕೋದರಲ್ಲೇ ಎಷ್ಟೋ ಜನರ ವಯಸ್ಸು ಮೀರಿಹೋಯ್ತು.
ನಮ್ಮ ಪ್ರಧಾನಿಗಳು 2014 ರಲ್ಲೇ ಪ್ರತಿ ವರ್ಷ ಎರಡು ಕೋಟಿ ಜನಕ್ಕೆ ನೌಕರಿ ಕೊಡ್ತೇವೆ ಅಂತಾ ಹೇಳಿದ್ರು. ಅದನ್ನ ನಂಬಿ ಸಮಸ್ತ ಜಿರಲೇ ಜನ ಓಟ್ ಹಾಕಿದ್ರು. ಯಾರಿಗೂ ನೌಕರಿ ಕೊಡಲಿಲ್ಲ. ಮಾತು ಕೊಟ್ಟಂಗೆ ನೌಕರಿ ಕೊಟ್ಟಿದ್ರೆ 12 ವರ್ಷದಲ್ಲಿ 24 ಕೋಟಿ ಜನರಿಗೆ ನೌಕರಿ ಸಿಕ್ಕು ಅಷ್ಟೊಂದು ಜಿರಲೆಗಳು ಮನುಷ್ಯರಾಗಿರ್ತಾ ಇದ್ರು. ಕೆಲಸಾ ಕೊಡಿ ಅಂತಾ ಕೇಳಿದ್ರೆ ಪಕೋಡಾ ಮಾರಿ ಅಂತಾ ಸಲಹೆ ಕೊಟ್ರು. ಎಲ್ಲರೂ ಪಕೋಡಾ ಮಾಡಿ ಮಾರಿದ್ರೆ ಕೊಂಡು ತಿನ್ನೋರು ಯಾರು ಸ್ವಾಮಿ. ಗ್ಯಾಸ್ ಸಿಗ್ತಿಲ್ಲಾ, ಎಣ್ಣೆ ನೆಲೆ ಕೈಗೆಟಕ್ತಾ ಇಲ್ಲಾ. ಇನ್ನು ಪಕೋಡಾ ಮಾಡೋದಾದ್ರೂ ಹೇಗೆ?
ಲಕ್ಷಾಂತರ ರೂಪಾಯಿ ಡೊನೇಶನ್ನು ಫೀಸು ಕಟ್ಟಿ ಇಂಜನೀಯರಿಂಗ್ ಮಾಡಿ ಕೆಲಸ ಸಿಗದ ಎಂಜನೀಯರ್ ಜಿರಲೆಗಳೂ ಕೋಟಿ ಲೆಕ್ಕದಲ್ಲಿವೆ. ಆದರೆ ಓದಿಗೆ ತಕ್ಕಂತೆ ನೌಕರಿ ಕೊಡುವ ಹೊಣೆಗಾರಿಕೆ ಸರಕಾರದ್ದು ಅಲ್ವಾ ಯುವರ್ ಆನರ್.

ಹೋಗಲಿ.. ವಾಟ್ಸಾಪ್ಪು, ಇನ್ಸ್ಟಾಗ್ರಾಂ, ಫೇಸ್ಬುಕ್ ಬಳಸೋ ಜಿರಲೆಗಳು ನೂರಾರು ಕೋಟಿ ಇದ್ದಾವೆ. ಏನೋ ತಮ್ಮ ಕಷ್ಟ ನೋವು ಹೇಳಿಕೊಳ್ತಾವೆ. ಸರಕಾರ ಕರೆದು ತಿಂಡಿ ಊಟಕ್ಕೆ ವ್ಯವಸ್ಥೆ ಮಾಡ್ತದಾ ಅಂತಾ ಕಾಯ್ತಾ ಇರ್ತಾವೆ. ಆದರೆ ಏನು ಮಾಡೋದು ಸ್ವಾಮಿ, ಮಾಡೋಕೇನು ಕೇಮೆ ಇಲ್ಲವಾದ್ದರಿಂದ ಜಿರಲೆಗಳೆಲ್ಲಾ ಸಾಮಾಜಿಕ ಜಾಲತಾಣದೊಳಗೆ ಸೇರಿಕೊಂಡು ಮುಳಗೇಳ್ತಾ ಇರ್ತಾವೆ.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿದ್ದಾದರೂ ಯಾಕೆ? ಕಾರ್ಯಾಂಗ ಶಾಸಕಾಂಗಗಳ ಕಾರ್ಯವೈಕರಿಗಳ ಕುರಿತು ಮಾಹಿತಿ ಪಡೆಯೋಕೆ. ಸರಕಾರದ ಆಯಕಟ್ಟಿನ ಜಾಗದಲ್ಲಿ ಕೂತು ಸಿಕ್ಕಿದ್ದನ್ನೆಲ್ಲಾ ನುಂಗತಿರೋ ಇಲಿ ಹೆಗ್ಗಣ ತಿಮಿಂಗಿಲಗಳ ಬಗ್ಗೆ ಮಾಹಿತಿ ಪಡೆಯೋಕೆ. ಯಾಕೆಂದ್ರೆ ಈ ಆರ್ಟಿಐ ಜಿರಲೆಗಳಿಗೆ ಮಾಡೋಕೆ ಬೇರೆ ಉದ್ಯೋಗ ಇಲ್ಲಾ ನೋಡಿ, ಅದಕ್ಕೆ ಕೈಕೆರದಾಗೆಲ್ಲಾ ಆರ್ಟಿಐ ಅರ್ಜಿ ಹಾಕ್ತಾವೆ. ಅಲ್ಲಾ ಸ್ವಾಮಿ ಯಾರು ಎಷ್ಟು ನುಂಗಿದರೇನು, ಯಾರು ಅದೆಷ್ಟು ಭ್ರಷ್ಟರಾದರೇನು, ಯಾರು ಎಷ್ಟು ಲಂಚ ಪಡೆದ್ರೇನು, ಈ ಜಿರಲೆಗಳಿಗ್ಯಾಕೆ ಬೇಕು ಸರಕಾರಿ ಹೆಗ್ಗಣಗಳ ಉಸಾಬರಿ.
ಹೌದು.. ನೀವು ಸರಿಯಾಗಿಯೇ ಹೇಳಿದ್ರಿ, ಈ ನಿರುದ್ಯೋಗಿ ಯುವಕರು ಜಿರಲೆಗಳಿದ್ದಂತೆ ಸಮಾಜವನ್ನು ಕಾಡುತ್ತಾರೆ ಅಂತ. ಈ ಜಿರಲೆಗಳಿಗೆಲ್ಲಾ ನಿಮ್ಮ ತರ ಅವರವರ ಯೋಗ್ಯತೆಗೆ ತಕ್ಕಂತೆ ನೌಕರಿ ಕೊಡಲು ಸರಕಾರಕ್ಕೆ ಹೇಳಿ. ಆಗ ಜಿರಲೆಗಳ ಹಾವಳಿ ಇರೋದೆ ಇಲ್ಲವಲ್ಲ. ಎಲ್ಲರೂ ನಿಮ್ಮಂತೆ ಗೌರವಯುತವಾಗಿ ಮನುಷ್ಯರಾಗಬಹುದಲ್ಲ. ನಿಮ್ಮ ಸಮಸ್ತ ನ್ಯಾಯಾಲಯಗಳ ಮುಂದೆ ಕೇಸೇ ಇಲ್ಲದೇ ಪರದಾಡುವ ಬೇಕಾದಷ್ಟು ವಕೀಲ ಜಿರಲೆಗಳು ಇದ್ದಾವಲ್ಲ. ಅವುಗಳಿಗಾದರೂ ನೀವು ಏನಾದರೂ ಮಾಡಿ ಮನುಷ್ಯರನ್ನಾಗಿಸಬಹುದಲ್ಲ.
ಹೋಗಲಿ ಈ ಭವ್ಯ ಭಾರತದಲ್ಲಿ ನಿರುದ್ಯೋಗಿ ಜಿರಲೆಗಳ ಸಂಖ್ಯೆಯನ್ನು ಯಾರು ಸ್ವಾಮಿ ಹೆಚ್ಚಿಸಿರೋದು. ಆಳುವ ಸರಕಾರಿ ವ್ಯವಸ್ಥೆ ಅಲ್ವಾ?. ಸಂವಿಧಾನದ ಪ್ರಕಾರ ಸಂಪತ್ತು ಸಂಪನ್ಮೂಲ ಅವಕಾಶಗಳನ್ನು ಎಲ್ಲಾ ಜಿರಲೆಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಹಂಚಿದ್ದರೆ ನಿಮಗೆ ಈ ಜಿರಲೆಗಳ ತರಲೆ ಇರ್ತಾನೇ ಇರಲಿಲ್ಲವಲ್ಲ. ಘನತೆವೆತ್ತ ನ್ಯಾಯಮೂರ್ತಿಗಳಾದ ನೀವು ಮನುಷ್ಯರನ್ನು ಜಿರಲೆಯಾಗಿಸಿದ ಆಳುವ ಸರಕಾರಗಳನ್ನ ಯಾಕೆ ಸ್ವಾಮಿ ತರಾಟೆಗೆ ತೆಗೆದುಕೊಂಡಿಲ್ಲ?. ಹೋ ಮರೆತಿದ್ದೆ ನಿಮಗೂ ಉನ್ನತ ಹುದ್ದೆ ಕೊಟ್ಟು ಗೌರವಾನ್ವಿತ ಮನುಷ್ಯರನ್ನಾಗಿಸಿದ್ದೂ ಇದೇ ಸರಕಾರಿ ವ್ಯವಸ್ಥೆ ಅಲ್ವರಾ? ಮತ್ತೆ ಮಹಾಮಾನವ ಪ್ರಧಾನಿಗಳನ್ನು ತರಾಟೆಗೆ ತೆಗೆದುಕೊಳ್ಳೋದು ನಿಮ್ಮಿಂದ ಸಾಧ್ಯವಿಲ್ಲ ಬಿಡಿ. ಕನಿಷ್ಠ ಕೊಟ್ಟ ಮಾತಿನಂತೆ ವರ್ಷಕ್ಕೆರಡು ಕೋಟಿ ಲೆಕ್ಕದಲ್ಲಿ 24 ಕೋಟಿ ಜಿರಲೆಗಳಿಗಾದರೂ ಸರಕಾರಿ ಕೆಲಸ ಕೊಟ್ಟು ಮನುಷ್ಯರನ್ನಾಗಿ ಮಾಡಲು ಮಾನ್ಯ ಪ್ರಧಾನಿಗಳಿಗೆ ನೀವು ಸಲಹೆ ಕೊಡಬಹುದಲ್ವಾ ಯುವರ್ ಆನರ್.
ಸಮಸ್ತ ಸರಕಾರಿ ಸಂಸ್ಥೆಗಳಲ್ಲಿ ಕೋಟ್ಯಂತರ ನೌಕರಿಗಳು ಖಾಲಿ ಬಿದ್ದಿವೆ. ಅವುಗಳನ್ನಾದರೂ ಭರ್ತಿ ಮಾಡಿದರೆ ಒಂದಿಷ್ಟು ಕೋಟಿ ಜಿರಲೆಗಳು ಮನುಷ್ಯರಾಗಬಹುದಲ್ವಾ ಸ್ವಾಮಿ. ನಿಮಗೆ ಜಿರಲೆಗಳ ಸಮಸ್ಯೆ, ಜಿರಲೆಗಳಿಗೆ ನಿರುದ್ಯೋಗದ ಸಮಸ್ಯೆ, ಈ ಜಿರಲೆಗಳನ್ನು ಹೇಗೆ ಓಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಬೇಕು ಎನ್ನುವುದು ರಾಜಕಾರಣಿಗಳ ಸಮಸ್ಯೆ. ಈ ಸಮಸ್ಯೆಗಳಿಗೆ ಮನುಷ್ಯರಾದ ನಿಮ್ಮಂತವರು, ಇಲ್ಲಾ ಭರವಸೆ ಕೊಟ್ಟು ಈಡೇರಿಸಲಾರದ ಮಹಾಮಾನವರು ಯಾವುದಾದರೊಂದು ಪರಿಹಾರ ಕಂಡು ಹಿಡಿಯಬೇಕಲ್ಲವೇ ಮಹಾಸ್ವಾಮಿ.
ಈ ಚುನಾವಣಾ ವ್ಯವಸ್ಥೆ ಇಲ್ಲದೇ ಇದ್ದಿದ್ದರೆ ಯಾವತ್ತೋ ವಿಶ್ವಮಾನವರು ಸಮಸ್ತ ನಿರುದ್ಯೋಗಿ ಕೋಕ್ರೋಚ್ ಗಳಿಗೆ ಕ್ರಿಮಿನಾಶಕ ಸಿಂಪಡಿಸಿ ನಾಶ ಪಡಿಸುತ್ತಿದ್ದರು. ಹಾಗೆ ಎಲ್ಲರೂ ನಾಶವಾದರೆ ಅವರಿಗೆ ಓಟ್ ಹಾಕೋದು ಯಾರು? ಕೋಟ್ಯಂತರ ಜಿರಲೆಗಳ ಓಟಿನಿಂದಲೇ ಪ್ರಧಾನಿ ಪಟ್ಟ ಸಿಕ್ಕೋದು ಗ್ಯಾರಂಟಿ ಆಗಿದ್ದರಿಂದ ಉಚಿತ ಅಕ್ಕಿನೋ ಬೇಳೇನೋ ಕೊಟ್ಟು ಜಿರಲೆಗಳು ಸಾಯದಂತೆ ಕಾಪಾಡಿಕೊಂಡು ಬರಲಾಗ್ತಾ ಇದೆ ಸ್ವಾಮಿ.
ಈಗ ಹೇಳಿ ಯುವರ್ ಆನರ್. ನಿರುದ್ಯೋಗಕ್ಕೆ ಕಾರಣರು ಯಾರು? ಉದ್ಯೋಗಗಳು ಇದ್ದರೂ ನೇಮಕಾತಿ ಮಾಡದೇ ಇರುವುದಕ್ಕೆ ಹೊಣೆಗಾರರು ಯಾರು? ಉದ್ಯೋಗ ಕೊಡಲು ಆಗದೇ ಇದ್ದರೆ ನಿರುದ್ಯೋಗಿ ಜಿರಲೆಗಳನ್ನು ಸೃಷ್ಟಿಸುವ ಕಾರ್ಖಾನೆಗಳಾದ ಈ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಭಾರತದ ತುಂಬಾ ಯಾಕಿವೆ? ಈ ದೇಶದ ಸಮಸ್ತ ಜೆನ್ ಜಿ ನಿರುದ್ಯೋಗಿ ಜಿರಲೆಗಳು ಬೀದಿಗಿಳಿದು ಹಲ್ಲಾ ಬೋಲ್ ಅಂದ್ರೆ ಉಂಡು ತಿಂದು ಗುಂಡಗಾದ ಹೆಗ್ಗಣಗಳು ತಲೆಮರೆಸಿಕೊಂಡು ಬಿಲ ಸೇರಬೇಕಾಗುತ್ತದೆ.
ಆದ್ದರಿಂದ ಯುವರ್ ಆನರ್.. ಜಿರಲೆ ಎಂದು ಯುವಜನರನ್ನು ಕಡೆಗಣಿಸಬೇಡಿ. ‘ನಿರುದ್ಯೋಗಿಗಳಿಗೆ ಕೆಲಸ ಕೊಡಿ ಇಲ್ಲವೇ ಖುರ್ಚಿ ಖಾಲಿ ಮಾಡಿ’ ಎಂದು ಆಳುವ ಪ್ರಭುಗಳಿಗೆ ಹೇಳಿ. ದೊರೆಗಳ ಕೃಪಾಕಟಾಕ್ಷದಲ್ಲಿರುವ ನೀವು ಹಾಗೆ ಹೇಳಿ ನಿವೃತ್ತಿಯ ಬಳಿಕ ಪ್ರತಿಫಲವಾಗಿ ದೊರೆಯಬಹುದಾದ ಘನಂದಾರಿ ಹುದ್ದೆಗಳನ್ನು ಕಳೆದುಕೊಳ್ಳಲಾರಿರಿ ಎಂದು ಎಲ್ಲರಿಗೂ ಗೊತ್ತಿದೆ. ಮನುಷ್ಯ ರೂಪದ ಇಲಿ ಹೆಗ್ಗಣ ತಿಮಿಂಗಿಲಗಳು ಈ ದೇಶದ ಸಕಲ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ, ಸಾಧ್ಯವಾದರೆ ಅದರ ವಿರುದ್ಧ ದ್ವನಿ ಎತ್ತಿ. ನಿಮ್ಮದೇ ನ್ಯಾಯಾಂಗ ವ್ಯವಸ್ಥೆಯ ಒಳಗಿದ್ದು ಜನರ ನೆತ್ತರು ಹೀರುವ ತಿಗಣೆಗಳಿಗೆ ಮದ್ದರೆಯಿರಿ ಎಂಬುದು ಸಮಸ್ತ ನಿರುದ್ಯೋಗಿ ಜಿರಲೆಗಳ ಪರವಾಗಿ ವಿನಂತಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಹಿಜಾಬ್ ನಿಷೇಧ ಅಮಾನ್ಯ; ಶಿಕ್ಷಣದಲ್ಲಿಲ್ಲ ಮತಾಂಧತೆಗೆ ಮೌಲ್ಯ


