ಬಿಎಸ್‌ವೈ ಅಭಿಮಾನೋತ್ಸವ!! ಬಿಜೆಪಿಯಿಂದ ಇದೆಂಥಾ ಕುಚೋದ್ಯ?

ಬಿಜೆಪಿ ಈಗ ಬಿಎಸ್‌ವೈಗೆ ಅಭಿಮಾನೋತ್ಸವ ಮಾಡಲು ಹೊರಟಿರೋದು ಅಭಿಮಾನದ ಕಾರಣಕ್ಕಂತೂ ಖಂಡಿತ ಅಲ್ಲ; ಒನ್ಸ್‌ ಎಗೇನ್‌, ಅವರ ಬೆನ್ನಿಗಿರುವ ಲಿಂಗಾಯತ ವೋಟ್‌ಬ್ಯಾಂಕ್‌ ಕಾರಣಕ್ಕೆ! – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.

ಬಿಜೆಪಿ ಪಕ್ಷವು ಯಡಿಯೂರಪ್ಪನವರ ಅಭಿಮಾನೋತ್ಸವ ಆಚರಿಸಲು ಹೊರಟಿದೆ. ಯಡಿಯೂರಪ್ಪನವರು ಕರ್ನಾಟಕ ಬಿಜೆಪಿ ಪಾಲಿಗೆ ಅಂತಹ ಸೆಲಬ್ರೇಟೆಡ್‌ ಲೀಡರ್‍‌ ಅನ್ನೋದ್ರಲ್ಲಿ ಅನುಮಾನವಿಲ್ಲ. ಎರಡಂಕಿ ದಾಟಲು ಹೆಣಗಾಡುತ್ತಿದ್ದ ಬಿಜೆಪಿಗೆ ಕರ್ನಾಟಕದ ಅಧಿಕಾರ ರುಚಿ ತೋರಿಸಿದ್ದೇ ಅವರು. ಆದರೆ ಯಡಿಯೂರಪ್ಪನವರನ್ನ ಸೆಲಬ್ರೇಟ್‌ ಮಾಡುವ ನೈತಿಕತೆ ಬಿಜೆಪಿಗೆ ಉಳಿದಿದೆಯಾ? ಅನ್ನೋದು ಪ್ರಶ್ನೆ.

ಒಂದಲ್ಲ; ಎರಡೆರಡು ಸಲ ಯಡಿಯೂರಪ್ಪನವರನ್ನು ಹೀನಾಯವಾಗಿ ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದ ಬಿಜೆಪಿ ನಾಯಕರೇ, ಇವತ್ತು ಕೇವಲ ಯಡಿಯೂರಪ್ಪನವರ ಬೆನ್ನಿಗಿರುವ ಲಿಂಗಾಯತ ವೋಟ್‌ಬ್ಯಾಂಕ್‌ ಭದ್ರ ಮಾಡಿಕೊಳ್ಳಲು ಅಭಿಮಾನೋತ್ಸವ ಮಾಡುತ್ತೇವೆ ಎನ್ನುವುದು ಕುಚೋದ್ಯವಲ್ಲದೆ ಇನ್ನೇನು?

ಆಪರೇಷನ್‌ ಕಮಲ ಎನ್ನುವ ಪೊಲಿಟಿಕಲ್‌ ವಿಕೃತಿಯನ್ನು ಉತ್ಪಾದಿಸುವವರೆಗೆ ಯಡಿಯೂರಪ್ಪ ತಕ್ಕಮಟ್ಟಿಗೆ ಡೀಸೆಂಟ್‌ ರಾಜಕಾರಣವನ್ನೆ ಮಾಡಿಕೊಂಡು ಬಂದವರು. ಬಾಬ್ರಿ ಮಸೀದಿ ಧ್ವಂಸದ ನಂತರ ತೊಂಬತ್ತರ ದಶಕದಲ್ಲಿ ಇಡೀ ದೇಶ ಹಿಂದೂತ್ವದ ಉನ್ಮಾದಕ್ಕೆ ತುತ್ತಾಗುತ್ತಿದ್ದರೂ, ಯಡಿಯೂರಪ್ಪ ಹಿಂದೂತ್ವದ ವಕ್ತಾರಿಕೆಯಲ್ಲಿ ತೇಲಿಹೋಗದೆ ಕರ್ನಾಟಕದ ಪೊಲಿಟಿಕಲ್‌ ಸೈಕಾಲಜಿಗೆ ತಕ್ಕಂತೆ ಜಾತಿ ಮತ್ತು ರೈತರ ಹೆಸರಿನಲ್ಲಿ ಬಿಜೆಪಿಯ ಬುನಾದಿಯನ್ನು ಗಟ್ಟಿಗೊಳಿಸುತ್ತಾ ಬಂದರು. ರೈತರ ಬಗ್ಗೆ ಯಡಿಯೂರಪ್ಪನವರಿಗೆ ಇದ್ದ ಕಾಳಜಿ ಎಷ್ಟು ಅವಕಾಶವಾದಿತನದ್ದು ಅನ್ನೋದನ್ನು, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ನಡೆಸಿದ ಗೋಲಿಬಾರ್ ನಮಗೆ ಅರ್ಥ ಮಾಡಿಸುತ್ತೆ. ಆದರೆ ಜಾತಿಯನ್ನು ರಾಜಕಾರಣಕ್ಕೆ ಬಳಸಿಕೊಂಡವರಲ್ಲಿ ಅವರು ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ.

ಸಾರಾಂಶದಲ್ಲಿ ನೋಡುವುದಾದರೆ, ಇಡೀ ಬಿಜೆಪಿ ದೇಶಾದ್ಯಂತ ಹಿಂದೂತ್ವದ ಅಲೆಯಲ್ಲಿ ಮಿಂದೇಳುತ್ತಿರುವ ಕಾಲಘಟ್ಟದಲ್ಲೂ ಕರ್ನಾಟಕದ ಬಿಜೆಪಿಯನ್ನು ಕಟ್ಟಲು ಯಡಿಯೂರಪ್ಪ ಅದರ ಮೊರೆ ಹೋಗಲಿಲ್ಲ. ಒಂದುವೇಳೆ, ಉತ್ತರ ಭಾರತದ ರಾಜಕಾರಣಿಗಳಂತೆ ಹಿಂದೂತ್ವವನ್ನು ಅವಲಂಬಿಸಲು ಮುಂದಾಗಿದ್ದರೆ, ಯಡಿಯೂರಪ್ಪನವರು ಇಲ್ಲಿ ಯಶಸ್ವಿಯಾಗುತ್ತಿರಲಿಲ್ಲ, ತತ್ಪರಿಣಾಮ ಬಿಜೆಪಿಯೂ ಯಶ ಕಾಣುತ್ತಿರಲಿಲ್ಲ. ಹಾಗಾಗಿಯೇ ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಯ್ತು. ಇದು ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಳೆಸಿದ ಯಡಿಯೂರಪ್ಪನವರ ಬೆನ್ನಿಗಿರುವ ಟ್ರ್ಯಾಕ್ ರೆಕಾರ್ಡ್‌.

ಬಿ ಎಸ್‌ ಯಡಿಯೂರಪ್ಪ

Obviously, ಅಲ್ಲೊಂದಷ್ಟು ಕಪ್ಪುಚುಕ್ಕೆಗಳು ಇದ್ದೇ ಇರುತ್ತವೆ. ಆದರೆ ದಕ್ಷಿಣ ಭಾರತದ ಮಟ್ಟಿಗೆ ಯಡಿಯೂರಪ್ಪ ಬಿಜೆಪಿ ಪಾಲಿನ ದೊಡ್ಡ ಟ್ರಂಪ್‌ಕಾರ್ಡ್‌ ಅನ್ನುವುದಂತೂ ಸುಳ್ಳಲ್ಲ. ಹಾಗಾಗಿಯೇ 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ, ಬಿಜೆಪಿ ಅದನ್ನು ದೊಡ್ಡ ಮಟ್ಟದಲ್ಲಿ ಸೆಲಬ್ರೇಟ್‌ ಮಾಡಿತ್ತು. ಅಡ್ವಾಣಿ, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಮುರುಳಿಮನೋಹರ ಜೋಷಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್‌, ಪ್ರಕಾಶ್‌ ಸಿಂಗ್ ಬಾದಲ್, ಇವತ್ತಿನ ಪ್ರಧಾನಿ ಮೋದಿ (ಅಂದು ಗುಜರಾತ್‌ ಸಿಎಂ) ಮೊದಲಾದ ಘಟಾನುಘಟಿಗಳು ಜಮಾಯಿಸಿ, ಆ ಕಾರ್ಯಕ್ರಮ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿದ್ದರು. ಯಾಕೆಂದರೆ, ಯಡಿಯೂರಪ್ಪನವರ ಮೂಲಕ ದಕ್ಕಿದ ಆ ಅಧಿಕಾರ, ದಕ್ಷಿಣ ಭಾರತವನ್ನು ಪ್ರವೇಶಿಸಲು ಎಷ್ಟು crucial ಅನ್ನೋದು ಬಿಜೆಪಿಗೆ ಗೊತ್ತಿತ್ತು.

ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಯಡಿಯೂರಪ್ಪನವರಿಗೆ ಕೊಟ್ಟಿದ್ದೇನು? ನಿರಂತರ ಕಿರುಕುಳ, ಅವಮಾನ, ಪಕ್ಷವನ್ನೆ ತೊರೆದುಹೋಗುವಂತಹ ಮಾನಸಿಕ ಹಿಂಸೆ!

ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರ ಮಾಡದೆ ವಚನಭ್ರಷ್ಟರಾದ ಕುಮಾರಸ್ವಾಮಿಯವರ ವಿರುದ್ಧ ನಾಡಿನ ತುಂಬಾ ಕಣ್ಣೀರುಗರೆದು, 2008ರಲ್ಲಿ ಯಡಿಯೂರಪ್ಪನವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸಿಎಂ ಗದ್ದುಗೆಯೇರಿದರು. ತದನಂತರ ಆಪರೇಷನ್‌ ಕಮಲವೆಂಬ ಅನಿಷ್ಟದ ಮೂಲಕ ಬಿಜೆಪಿಗೆ ಅಧಿಕಾರವನ್ನು ಆ ಅವಧಿಗೆ ಶಾಶ್ವತಗೊಳಿಸಿದರೂ ಅವರನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲು ಪಕ್ಷದೊಳಗಿನಿಂದಲೇ ವ್ಯವಸ್ಥಿತ ಸಂಚು ನಡೆಸಲಾಯ್ತು. ಗಣಿ ಹಗರಣ, ಡೀ-ನೋಟಿಫಿಕೇಷನ್‌ ರಾದ್ದಾಂತಗಳು ಹೊರಬಂದಿದ್ದೇ ಬಿಜೆಪಿ ನಾಯಕರ ಚಿತಾವಣೆಯಿಂದ ಅನ್ನೋ ಆರೋಪವನ್ನು ಸ್ವತಃ ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದ ಸಂದರ್ಭದಲ್ಲಿ ಮಾಡಿದ್ದುಂಟು. ಇವತ್ತಿಗೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂದರ್ಶನವೊಂದರ ತುಣುಕಿನಲ್ಲಿ ಶೋಭಾ ಕರಂದ್ಲಾಜೆಯವರು, ಬಿಜೆಪಿ ಹೇಗೆಲ್ಲಾ ಯಡಿಯೂರಪ್ಪನವರನ್ನು ಅವಮಾನಿಸಿತು ಎಂಬುದನ್ನು ವಿವರಿಸಿದ್ದಾರೆ.

ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಮಾತ್ರವಲ್ಲ, ಅವರೇ ತಂದುಕೂರಿಸಿದ ಸದಾನಂದ ಗೌಡರೂ ಯಡಿಯೂರಪ್ಪನವರ ವಿರುದ್ಧ ತಿರುಗಿಬೀಳುವಂತೆ ಪುಸಲಾಯಿಸಲಾಯ್ತು. ಕೊನೆಗೆ ತಮ್ಮದೇ ಜಾತಿಯ ಜಗದೀಶ್‌ ಶೆಟ್ಟರ್‍‌ರನ್ನು ಸಿಎಂ ಮಾಡಿದರು. ಅವರಿಂದಲೂ ಯಡಿಯೂರಪ್ಪನವರಿಗೆ ಅವಮಾನಗಳಾಗುವಂತೆ ಪಕ್ಷ ನಡೆದುಕೊಂಡಿತು. ಬೇಸತ್ತು ಪಕ್ಷ ತೊರೆದು ಕೆಜೆಪಿ ಕಟ್ಟಿದರು. ಆಗಂತೂ ಈಶ್ವರಪ್ಪ, ಅನಂತ್‌ಕುಮಾರ್, ಸಿಟಿ ರವಿ ತರಹದ ನಾಯಕರು ಯಡಿಯೂರಪ್ಪನವರನ್ನು ಬಾಯಿಗೆ ಬಂದಂತೆ ನಿಂದಿಸಿದರು. ಅವರು ಪಕ್ಷ ತೊರೆದಿದ್ದರಿಂದ ಈಗ ಬಿಜೆಪಿ ಶುದ್ದವಾಗಿದೆ ಎಂದು ಲೇವಡಿಯಾಡಿದರು. ಪ್ರತಾಪ್‌ ಸಿಂಹನಂತೂ ಮಹಾಭ್ರಷ್ಟ ಎಂದು ಪುಸ್ತಕ ಬರೆದ.

ಯಡಿಯೂರಪ್ಪ ಕೆಜೆಪಿ ಕಟ್ಟಿ ಯಶಸ್ವಿಯಾಗದಿದ್ದರೂ, ತಾನಿಲ್ಲದೆ ಹೋದರೆ ಬಿಜೆಪಿಗೆ ಎಂಥಾ ದುರ್ಗತಿ ಬರಲಿದೆ ಎಂಬುದನ್ನು 2013ರ ಚುನಾವಣೆಯಲ್ಲಿ ಸಾಬೀತು ಮಾಡಿ ತೋರಿದರು. 2014ರ ಲೋಕಸಭಾ ಚುನಾವಣೆ ವೇಳೆಗೆ, ಪ್ರಧಾನಿಯಾಗುವ ಹುಮ್ಮಸ್ಸಿನಲ್ಲಿದ್ದ ಮೋದಿಯವರ ಲೆಕ್ಕಾಚಾರದ ಭಾಗವಾಗಿ ಯಡಿಯೂರಪ್ಪನವರನ್ನು ಪಕ್ಷಕ್ಕೆ ಕರೆತರಲಾಯ್ತು. ಮತ್ತೆ ಪಕ್ಷ ಕಟ್ಟಲು ಯಡಿಯೂರಪ್ಪನವರನ್ನು ಬಿಜೆಪಿ ಬಳಸಿಕೊಂಡಿತು. ಸಿಎಂ ಆಗುವ ಉಮೇದಿನಲ್ಲಿದ್ದ ಅವರು ಕೂಡಾ ಹಗಲುಕಂಡ ಬಾವಿಗೆ ರಾತ್ರಿ ಬಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಯನ್ನು ಧರ್ಮ ಒಡೆಯುವ ಸಂಚೆಂದು ಅಪಪ್ರಚಾರ ಮಾಡಿದ ಸಂಘಪರಿವಾರದ ಹುನ್ನಾರಕ್ಕೆ ಯಡಿಯೂರಪ್ಪ (ಆ ಶಿಫಾರಸ್ಸು ಮಾಡಿದ್ದೇ ಅವರಾದರೂ) ಧ್ವನಿಯಾದರು.

ಬಿ ಎಸ್‌ ವೈ ಅಭಿಮಾನೋತ್ಸವದ ಪೂರ್ವಭಾವಿ ಸಭೆ

ತತ್ಪರಿಣಾಮದಿಂದ, 2018ರ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದಾಗ್ಯೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದಾಗಿ ಅಧಿಕಾರ ಯಡಿಯೂರಪ್ಪನವರ ಕೈತಪ್ಪಿತು. ಅವರ ಸಿಎಂ ಆಸೆಯನ್ನು ಪ್ರಚೋದಿಸಿ, ಆಪರೇಷನ್‌ ಕಮಲದ ರಿಸ್ಕ್‌ ಮೈಮೇಲೆ ಎಳೆದುಕೊಳ್ಳುವಂತೆ ಮಾಡಿ, ಮತ್ತೊಮ್ಮೆ ಯಡಿಯೂರಪ್ಪ ಮೂಲಕ ಮಧ್ಯಂತರದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಿಜೆಪಿ ಯಶಸ್ವಿಯಾಯಿತಾದರೂ ಆ ಸಲವೂ ಸೇಮ್‌ ಟು ಸೇಮ್‌! ಅವರಿಗೆ ವಯಸ್ಸಾಗಿದೆ ಎಂಬ ನೆಪವೊಡ್ಡಿದ ಬಿಜೆಪಿ ಹೀನಾಯವಾಗಿ ಅವರನ್ನು ಕೆಳಗಿಳಿಸಿತು. ಯಥಾ ಪ್ರಕಾರ ಅವರೇ ತಂದು‌ ಕೂರಿಸಿದ ಬಸವರಾಜ್‌ ಬೊಮ್ಮಾಯಿ ಕೂಡಾ ಯಡಿಯೂರಪ್ಪನವರಿಗೆ ತಿರುಗಿಬೀಳುವಂತೆ ಮಾಡಿ, ಅವರನ್ನು ಅವಮಾನಿಸಲಾಯ್ತು. ತಮ್ಮ ಮಗನನ್ನು ರಾಜ್ಯಾಧ್ಯಕ್ಷ ಮಾಡಬೇಕೆಂಬ ಅವರ ಆಸೆಗೆ ಅಡ್ಡಗಾಲು ಹಾಕಲಾಯ್ತು. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ, ನಿರಂತರವಾಗಿ ಬಂಡಾಯವನ್ನು ಉತ್ಪಾದಿಸಿ ಕಿರುಕುಳ ನೀಡಲಾಯ್ತು.

ಇಷ್ಟೆಲ್ಲಾ ಮಾಡಿದ ಬಿಜೆಪಿ ಈಗ ಬಿಎಸ್‌ವೈಗೆ ಅಭಿಮಾನೋತ್ಸವ ಮಾಡಲು ಹೊರಟಿರೋದು ಅಭಿಮಾನದ ಕಾರಣಕ್ಕಂತೂ ಖಂಡಿತ ಅಲ್ಲ; ಒನ್ಸ್‌ ಎಗೇನ್‌, ಅವರ ಬೆನ್ನಿಗಿರುವ ಲಿಂಗಾಯತ ವೋಟ್‌ಬ್ಯಾಂಕ್‌ ಕಾರಣಕ್ಕೆ!

2023ರ ಅಸೆಂಬ್ಲಿ ಚುನಾವಣೆಗು ಮುನ್ನ ದಾವಣೆಗೆರೆಯಲ್ಲಿ ಕಾಂಗ್ರೆಸ್‌ ನಡೆಸಿದ ಸಿದ್ದರಾಮೋತ್ಸವ ಕಾರ್ಯಕ್ರಮದ ಅತ್ಯದ್ಭುತ ಯಶಸ್ಸು, ಕಾಂಗ್ರೆಸ್‌ ಗೆಲುವಿನ ದೊಡ್ಡ ಕಿಕ್‌ಸ್ಟಾರ್ಟ್‌ ಎನ್ನಬಹುದು. ಈಗ ಬಿಜೆಪಿ, ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಅದನ್ನು ನಕಲು ಮಾಡಲು ಮುಂದಾಗಿದೆ. ಮಗ ವಿಜಯೇಂದ್ರನ ರಾಜಕೀಯ ಭವಿಷ್ಯಕ್ಕೆ ಇದರಿಂದ ನೆರವಾಗಬಹುದೇನೋ ಎಂಬ ಆಲೋಚನೆಯಲ್ಲಿ ಯಡಿಯೂರಪ್ಪನವರು ಮತ್ತೊಮ್ಮೆ ಬಿಜೆಪಿಯ ಪಗಡೆಯಾಟಕ್ಕೆ ದಾಳವಾಗಿ ಬಳಕೆಗೊಳ್ಳುತ್ತಿದ್ದಾರೆ.

ಆದರೆ ಯಡಿಯೂರಪ್ಪನವರನ್ನು ಬಳಸಿಕೊಂಡು ಬಿಸಾಡಿದ್ದ ಬಿಜೆಪಿ ಅವರ ಮಗ ವಿಜಯೇಂದ್ರಗೆ ಪ್ರೋತ್ಸಾಹ ನೀಡುತ್ತದೆಯೇ? ಅನುಮಾನದ ಮಾತು!. ಅವತ್ತು ಯಾವೆಲ್ಲಾ ನಾಯಕರು ಯಡಿಯೂರಪ್ಪನವರನ್ನು ತುಳಿದು, ಮೂಲೆಗುಂಪು ಮಾಡಲು ಯತ್ನಿಸಿದ್ದರೋ ಇವತ್ತು ಅದೇ ಬಿಜೆಪಿ ನಾಯಕರು ಚಿತ್ರದುರ್ಗದ ಕಾರ್ಯಕ್ರಮ ಆಯೋಜಿಸಲು ಬಹಳ ತರಾತುರಿಯಿಂದ ಓಡಾಡುತ್ತಿದ್ದಾರೆ. ಅವರ್‍ಯಾರಲ್ಲೂ ಯಡಿಯೂರಪ್ಪನವರ ಮೇಲೆ ಕಿಂಚಿತ್ತೂ ಅಭಿಮಾನವಿಲ್ಲ; ಯಡಿಯೂರಪ್ಪನವರಿಂದಾಗಿ ಬರಬಹುದಾದ ಲಿಂಗಾಯತ ಓಟ್‌ಬ್ಯಾಂಕ್‌ ಮೇಲೆ ಕಣ್ಣಷ್ಟೆ! ಅದಕ್ಕಾಗಿಯೇ ಲಿಂಗಾಯತ ಮಠಗಳು ಪ್ರಾಬಲ್ಯ ಹೊಂದಿರುವ ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದಾರೆ!!

ಯೂಸ್‌ ಅಂಡ್‌ ಥ್ರೋ ರೀತಿಯಲ್ಲಿ ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾ ಬಂದ ವ್ಯಕ್ತಿಯ ಬಗ್ಗೆ ತಮಗೆ ಅಪಾರ ಅಭಿಮಾನವಿದೆಯೆಂದೂ, ಅದಕ್ಕೋಸ್ಕರ ಅಭಿಮಾನೋತ್ಸವ ಮಾಡುತ್ತೇವೆಂದೂ ಬಿಜೆಪಿ ನಾಯಕರು ಹೇಳುತ್ತಿರುವುದು ಕುಚೋದ್ಯವಲ್ಲದೆ ಇನ್ನೇನು? ಅಷ್ಟೊಂದು ಅಭಿಮಾನವಿದ್ದುದು ನಿಜವೇ ಆದಲ್ಲಿ, ಅವರನ್ನು ಬಲವಂತವಾಗಿ ಎರಡೆರಡು ಬಾರಿ ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ?

ಅಂದಹಾಗೆ, ಕುಚೋದ್ಯಗಳಿಗೆ ಉತ್ತರಗಳಿರುವುದಿಲ್ಲ!!

ಮಾಚಯ್ಯ ಎಂ ಹಿಪ್ಪರಿಗಿ,

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಶೋಭಕ್ಕ ಮತ್ತು ಸೂಚ್ಯಂಕ

More articles

Latest article

Most read