ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ಗೆ ಬಾರದೆ ಬೆಂಗಳೂರಿನಿಂದ ಗೋವಾಕ್ಕೆ ಹೊಸ ವಂದೇ ಭಾರತ್ ರೈಲು
ಈತನಕ ಬೆಂಗಳೂರಿನಿಂದ ಗೋವಾ ಕಡೆಗೆ ಹೋಗುವ ಎಲ್ಲಾ ರೈಲುಗಳು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾದ ಮಂಗಳೂರು ಜಂಕ್ಷನ್ ಅಥವಾ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ವಾಪಸ್ ಹೋಗುತ್ತವೆ. ಆದರೆ ಈ ಹೊಸ ವಂದೇ ಭಾರತ್ ರೈಲು ಮಾರ್ಗವನ್ನು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮತ್ತು ಪಡೀಲ್ ಮೂಲಕ ಸಾಗುವಂತೆ ಯೋಜಿಸಲಾಗಿದೆ. ಯಶವಂತಪುರದಿಂದ ಮಡಗಾಂವ್ ವರೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ಇನ್ನೂ ಅಂತಿಮ ಅನುಮೋದನೆ ಸಿಗಬೇಕಿದ್ದು, ಪ್ರಯಾಣದ ಸಮಯವು ಸುಮಾರು 14ರಿಂದ 15 ಗಂಟೆಗಳವರೆಗೆ ಇರುವ ಸಾಧ್ಯತೆ ಇದ್ದು ಅದೀಗ ಚರ್ಚೆಗೆ ಕಾರಣವಾಗಿದೆ.
ಪಶ್ಚಿಮಘಟ್ಟ ಪ್ರದೇಶದ ಭೌಗೋಳಿಕ ಸವಾಲುಗಳ ಕಾರಣದಿಂದ ರೈಲು ವೇಗವನ್ನು ಕೆಲವು ಭಾಗಗಳಲ್ಲಿ ಗಣನೀಯವಾಗಿ ಕಡಿಮೆ ಮಾಡಬೇಕಾಗುತ್ತದೆ, ತಿರುವು-ಮುರುವುಗಳಿರುವ ಹಾದಿ ಹಾಗೂ ಏರುಪೇರುಗಳಿರುವ ಭೂಪ್ರದೇಶವು ವೇಗದ ನಿರ್ಬಂಧಕ್ಕೆ ಕಾರಣವಾಗುತ್ತಿದೆ, ಘಟ್ಟ ಪ್ರದೇಶಗಳಲ್ಲಿ ಕೆಲವೆಡೆ ವೇಗ 30 ಕಿಮೀ ತನಕ ಇಳಿಯಬಹುದು, ಇದರಿಂದಲೇ ಒಟ್ಟು ಪ್ರಯಾಣ ಸಮಯ ಹೆಚ್ಚಾಗುತ್ತಿರುವುದು ಹಾಗೂ ಕೆಲವು ನಿಲ್ದಾಣಗಳ ಆಯ್ಕೆ ಮರುಪರಿಶೀಲನೆಗೆ ಒಳಪಡುತ್ತಿರುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಕೆಲವು ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳಾದ ನೀರು ಪೂರೈಕೆ ವ್ಯವಸ್ಥೆಗಳು ಇನ್ನೂ ಸಂಪೂರ್ಣವಾಗಿ ಲಭ್ಯವಿಲ್ಲ. ಪ್ರಯಾಣಿಕರ ಸ್ವಚ್ಛತೆ ಮತ್ತು ಸೇವಾ ಗುಣಮಟ್ಟವನ್ನು ಕಾಪಾಡಲು ಈ ಸೌಲಭ್ಯಗಳು ಅಗತ್ಯವಾಗಿರು ವುದರಿಂದ, ಮಾರ್ಗ ಮತ್ತು ನಿಲ್ದಾಣಗಳ ಆಯ್ಕೆಯಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ. ಯೋಜನೆಗೆ ಅಂತಿಮ ಅನುಮೋದನೆ ನೀಡುವ ಪ್ರಕ್ರಿಯೆಯು ಕಠಿಣ ಸುರಕ್ಷತಾ ಪರಿಶೀಲನೆಗಳನ್ನು ಒಳಗೊಂಡಿದೆ. ರೈಲು ಸುರಕ್ಷತಾ ಆಯುಕ್ತರ ಅನುಮೋದನೆ ಇಲ್ಲದೆ ಯಾವುದೇ ಸೇವೆ ಪ್ರಾರಂಭವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದು ಅವರ ನಿಲುವಾಗಿದೆ.
ವೇಗವಿಲ್ಲದ ರೈಲಿಗೆ ವಿದೇಶಿ ರೈಲು ದರ ಏಕೆ ?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಮೂಲಸೌಕರ್ಯ ಹಾಗೂ ದರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. “ಪ್ರೀಮಿಯಂ ರೈಲು ಎಂದರೆ ವೇಗ ಮತ್ತು ಸೌಲಭ್ಯಗಳೂ ತಕ್ಕಮಟ್ಟಿಗೆ ಇರಬೇಕು. ಆದರೆ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ಮಧ್ಯೆ ಘಾಟ್ ಮಾರ್ಗದಲ್ಲಿ ಘಂಟೆಗೆ 30 ಕಿಮೀ ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲಿನ ಪ್ರಯೋಜನವೇನು ? ಬೆಂಗಳೂರಿನಿಂದ ಕೇವಲ 700 ಕಿಮೀ ದೂರದ ಗೋವಾ ತಲುಪಲು 15 ಘಂಟೆ ಏಕೆ ?” ಎಂದು ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ ಪ್ರಶ್ನಿಸುತ್ತಾರೆ. ವಂದೇ ಭಾರತ್ ರೈಲುಗಳ ದರಗಳು ವಿದೇಶಿ ರೈಲುಗಳಿಗಿಂತ ಹೆಚ್ಚಾಗಿವೆ ಎಂದೂ ಅವರು ಆಕ್ಷೇಪಿಸಿದ್ದಾರೆ.
ಮಂಗಳೂರು ಸಂಸದರತ್ತ ರೈಲು ಪ್ರಯಾಣಿಕರ ಚಿತ್ತ
ದಕ್ಷಿಣ, ಪಶ್ಚಿಮ, ದಕ್ಷಿಣ ಹಾಗೂ ಕೊಂಕಣ ರೈಲ್ವೆಗಳು ಸೇರಿ ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿವೆ. ಈ ರೈಲು ಮಂಗಳೂರಿಗೆ ಬಾರದೆ ಇದ್ದರೆ ಈ ಬಗ್ಗೆ ಮಂಗಳೂರು ಸಂಸದರು ರೈಲ್ವೇ ಸಚಿವರನ್ನು ಭೇಟಿಯಾಗಿ, ಲಿಖಿತವಾಗಿ ಮನವಿ ಸಲ್ಲಿಸಬೇಕು. ವಿಷಯದ ಗಂಭೀರತೆಯನ್ನು ಅರಿತು ಅವರು ಕೂಡಲೇ ಕಾರ್ಯಾಚರಿಸ ಬೇಕು. ರೈಲು ಮಂಗಳೂರಿಗೆ ಬರಬೇಕೆನ್ನುವ ನಿರೀಕ್ಷೆಯನ್ನು ಓಟು ನೀಡಿದ ಮತದಾರರು ಇಟ್ಟುಕೊಂಡಿದ್ದಾರೆ ಅನ್ನುವುದನ್ನು ಸಂಸದರು ಮರೆಯಬಾರದು ಎಂದು ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ ಹೇಳಿದ್ದಾರೆ.


