ಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯಗಳ ಮುಂದೆ ಈಗ ಚಪ್ಪಲಿ ಕಳ್ಳರಿದ್ದಾರೆ ಎನ್ನುವ ಬೋರ್ಡ್‌ಗಳು ಹೋಗಿ ಹುಂಡಿ ಕಳ್ಳರಿದ್ದಾರೆ ಎನ್ನುವ ಬೋರ್ಡ್‌ಗಳನ್ನು ಹಾಕಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು.
ನಗರದ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರಕ್ಕೆ ಸೇರಿದ 200 ಕೋಟಿ ರೂ. ದೇಣಿಗೆ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಆಮೆಗತಿಯಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ದುರ್ಬಳಕೆಯಾಗಿರುವ 200 ಕೋಟಿ ರೂ. ಹಣಕ್ಕೆ ಕರ್ನಾಟಕದ ನಂಟಿದೆ. ಕರ್ನಾಟಕ ಮೂಲದ ವ್ಯಕ್ತಿಗೂ ಹಣ ತಲುಪಿದೆ. ಈ ಹಿಂದೆ ಗೋ ಹತ್ಯೆ ತಡೆ ಕಾಯ್ದೆ ಜಾರಿ ತರಲು ಸಹಕರಿಸಿದಕ್ಕಾಗಿ ವ್ಯಕ್ತಿಗೆ ಹಲವು ರಿವಾರ್ಡ್‌ಗಳು ಬಂದಿವೆ. ಈ ಬಗ್ಗೆ ನ್ಯಾಯಯುತವಾಗಿ ಸಮಗ್ರ ತನಿಖೆ ನಡೆಸಿದಾಗ ಸತ್ಯ ಹೊರಬರಲಿದೆ ಎಂದರು.
ಗ್ಯಾರಂಟಿ ಯೋಜನೆಯ ಹಣ ಬರುತ್ತಿದೆ ಎಂದು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯನ್ನು ನಿರ್ಲಕ್ಷ್ಯಿಸಬೇಡಿ. ನಾನಾ ಕಾರಣಗಳಿಂದ ಪಟ್ಟಿಯಿಂದ ಕೈ ಬಿಟ್ಟರೆ ಸರ್ಕಾರದ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್ ಕಡೆಯಿಂದ ಪ್ರತ್ಯೇಕ ಎಸ್ಐಆರ್ ಕೈಗೊಂಡಿದ್ದು, ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ನೈಜತೆ ಪರಿಶೀಲಿಸಲಿದ್ದಾರೆ. ರಾಜ್ಯದೆಲ್ಲೆಡೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್ಆರ್) ನಿಯೋಜಿಸಲಾಗಿದೆ. ಕಾಂಗ್ರೆಸ್ ಸೋತ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಂದ ಅಗತ್ಯಕ್ಕೆ ಅನುಗುಣವಾಗಿ ಬಿಎಲ್ಆರ್‌ಗಳಣ್ನು ನಿಯೋಜಿಸದಿದ್ದರಿಂದ ಹಿನ್ನಡೆಯಾಗಿದೆ ಎಂದು ಹೇಳಿದರು.
ಬಿಜೆಪಿ ಹೈಕಮಾಂಡ್ ಜಿಬಿಎ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ನಾಯಕ ರಾಮ್ ಮಾಧವ್ ಅವರನ್ನು ನೇಮಕ ಮಾಡಿದೆ. ಇವರು ಕೊಲಂಬೊ, ಲಂಡನ್ ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ. ಇತ್ತೀಚೆಗೆ ಅವರ ಗುರುಗಳಾದ ಮೋಹನ್ ಭಾಗವತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ನಾನು ಮಾತನಾಡಿದಾಗ 2 ವರ್ಷ ನನ್ನ ಹಿಂದೆ ಬಿದ್ದಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಬಳಿಕ ನನ್ನ ಸಹವಾಸ ಬಿಟ್ಟರು ಎಂದರು.
ಪಾಕಿಸ್ತಾನದವರೊಂದಿಗೆ ರಹಸ್ಯ ಸಭೆ ಮಾಡಲು ಅಧಿಕಾರ ಕೊಟ್ಟವರು ಯಾರು. ಇವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ, ಸಂಸದರೂ ಅಲ್ಲ. ಆರ್‌ಎಸ್‌ಎಸ್ ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು. ಯಾವ ಅಧಿಕಾರ ಇಟ್ಟುಕೊಂಡು ಆರ್ ಎಸ್ಎಸ್ ನವರು ವಿದೇಶಾಂಗ ನೀತಿ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ. ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ. ಆಪರೇಷನ್ ಸಿಂಧೂರ್ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ಪಾಕಿಸ್ತಾನದ ಜೊತೆ ನಂಟು ಹೊಂದಿದ್ದಾರೆ.

