ನಮ್ಮ ಭಾರತದ ಸಂವಿಧಾನಕ್ಕೆ ಕರುಣೆ ಮತ್ತು ಮೈತ್ರಿಯೆಂಬ ಬುದ್ಧನ ಉದಾತ್ತ ಮೌಲ್ಯಗಳು ಆಧಾರವಾಗಿರದಿದ್ದರೆ ಸರ್ವರೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಬುದ್ಧ ಎಂಬ ಕರುಣೆಯ ಬೆಳದಿಂಗಳು ಸಮಸ್ತ ವಿಶ್ವಕ್ಕೆ ತಂಪಾದ ಶಾಂತಿಯ ಬೆಳಕಾಗಿ ಸದಾ ಬೆಳಗುತ್ತಿದೆ -ಪರಮೇಶ್ವರ ಕೆ ಆಲಳ್ಳಿ , ಶಿಕ್ಷಕರು.
ಗೋಳು-ಗೊಂದಲಗಳಿಂದ ಕೂಡಿದ ಜೀವನಕ್ಕೆ ನೆಮ್ಮದಿಯ ದಾರಿಯನ್ನು ತೋರಿದ ಮಹಾನ್ ಮಾರ್ಗದಾತ ಗೌತಮ ಬುದ್ಧ. ಒಮ್ಮೆ ಏಷ್ಯಾ ಖಂಡದ ಬೆಳಕಾಗಿ ಕೀರ್ತಿಸಲ್ಪಟ್ಟ ಬುದ್ಧನು ಇಂದು ಇಡೀ ಜಗತ್ತಿಗೆ ಕರುಣೆಯ ಧಮ್ಮದ ಬೆಳಕಾಗಿದ್ದಾನೆ. “ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ” ಎಂದು ಪಠಿಸುವ ಮನಸ್ಸುಗಳು ದಿನೇದಿನೇ ಹೆಚ್ಚುತ್ತಿವೆ.
“ಯಾವ ಧರ್ಮವು ಮನುಷ್ಯನ ಘನತೆ, ಗೌರವ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುತ್ತದೆಯೋ ಅಂತಹ ಧರ್ಮವನ್ನು ನಾನು ಇಷ್ಟಪಡುತ್ತೇನೆ” ಎಂದು ಹೇಳಿದ ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ಕ್ಷಣದಿಂದಲೇ, ಬುದ್ಧನು ಉರುಳಿಸಿದ ಧಮ್ಮಚಕ್ರವು ಪುನಃ ಇಲ್ಲಿ ಚಲಿಸಲಾರಂಭಿಸಿತು.
ಜನಸಾಮಾನ್ಯರ ಭಾಷೆಯಲ್ಲಿ ಗೌತಮ ಬುದ್ಧ ಬೋಧಿಸಿದ ಧಮ್ಮವು ಸರಳವೂ ಮಧ್ಯಮ ಮಾರ್ಗವೂ ಆಗಿತ್ತು. ಆದ್ದರಿಂದ ಬುದ್ಧರ ಧಮ್ಮವು ಸಾಮಾನ್ಯರಿಂದ ಹಿಡಿದು ರಾಜಾ-ಮಹಾರಾಜರವರೆಗೆ ಎಲ್ಲರಿಗೂ ಪ್ರೀತಿಪಾತ್ರವಾಯಿತು. ಅದು ಜಾತಿ, ವರ್ಣ, ವರ್ಗ, ಸ್ಥಾನಮಾನ ಮತ್ತು ಲಿಂಗ ಬೇಧವಿಲ್ಲದೆ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡಿತು.
ಅಶೋಕ ನಂತಹ ಮಹಾ ಸಾಮ್ರಾಟರು ಬುದ್ಧನ ಬೋಧನೆಗೆ ಮನಸೋತು ಧಮ್ಮವನ್ನು ಸ್ವೀಕರಿಸಿದರು. ಅವರು ಧಮ್ಮದ ವಿಸ್ತರಣೆಗೆ ಬಹುವಾಗಿ ಶ್ರಮಿಸಿದರು. ಅವರು ಬುದ್ಧನ ಸಂದೇಶವನ್ನು ದೇಶದ ಮೂಲೆಮೂಲೆಗಳಿಗೆ ಹಾಗೂ ವಿದೇಶಗಳಿಗೂ ತಲುಪಿಸುವ ಮಹಾಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ನೆರವೇರಿಸಿದರು. ಹೀಗಾಗಿ ಅನೇಕ ಶತಮಾನಗಳ ಕಾಲ ಇತಿಹಾಸದಲ್ಲಿ ಅದು ಬುದ್ಧನ ಯುಗವೆಂದು ಗುರುತಿಸಲ್ಪಟ್ಟ ಮಹತ್ವದ ಕಾಲಘಟ್ಟವಾಯಿತು.

ಬುದ್ಧನ ಮೊದಲ ಹೆಸರು ಸಿದ್ಧಾರ್ಥ. ಕಪಿಲ ವಸ್ತುವಿನ ರಾಜ ಶುದ್ಧೋದನನ ಮಗ. ಆತನು ರಾಜಕುಮಾರನಾದ ಸಂದರ್ಭದಲ್ಲಿ ಶಾಕ್ಯ ಮತ್ತು ಕೊಹಿಲ ಎಂಬ ಎರಡು ರಾಜ್ಯಗಳ ನಡುವೆ ರೋಹಿಣಿ ನದಿ ನೀರನ್ನು ಹಂಚಿಕೊಳ್ಳುವಲ್ಲಿ ವಾದ ವಿವಾದಗಳು ಆಗುತ್ತವೆ. ಅಂತಿಮವಾಗಿ ಯುದ್ಧದಿಂದ ನಿರ್ಧಾರವಾಗಲಿ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಯುವರಾಜನಾದ ಸಿದ್ಧಾರ್ಥನು ಯುದ್ಧದಿಂದ ಆಗುವ ಅನಾಹುತಗಳನ್ನು ನೆನೆದು ಯುದ್ಧವನ್ನು ವಿರೋಧಿಸುತ್ತಾನೆ. ಇದರ ಫಲವಾಗಿ ಆತ ಗಡಿಪಾರಿನ ಶಿಕ್ಷೆಯನ್ನು ಹೊಂದುತ್ತಾನೆ. ದೇಶವನ್ನು ತೊರೆಯುತ್ತಾನೆ. ಊರೂರು ಸುತ್ತುತ್ತಾನೆ. ಅನೇಕ ಘಟನೆಗಳನ್ನು ಕಾಣುತ್ತಾನೆ. ಜೀವನ ಅತ್ಯಂತ ದುಃಖಮಯ (Suffering) ಎಂದು ಮನಗಾಣುತ್ತಾನೆ. ಅದಕ್ಕೆ ಕಾರಣ ಮತ್ತು ಉತ್ತರಕ್ಕಾಗಿ ಪ್ರಯತ್ನಿಸುತ್ತಾನೆ. ಆತ ಅನೇಕ ಜ್ಞಾನಿಗಳ ಜೊತೆ ಚರ್ಚೆ, ವಾದ, ಸಂವಾದಗಳನ್ನೆಲ್ಲ ಮಾಡುತ್ತಾನೆ. ಅವರ ಉತ್ತರಗಳು ಅವನಿಗೆ ತೃಪ್ತಿ ಕೊಡುವುದಿಲ್ಲ. ತಾನೇ ಸರಿಯಾದ ಉತ್ತರ ಕಂಡುಕೊಳ್ಳಲು ವರ್ಷಗಟ್ಟಲೇ ತಪಸ್ಸು, ಧ್ಯಾನ ಮಾಡಿ ಜ್ಞಾನೋದಯ ಹೊಂದುತ್ತಾನೆ. ಹೀಗೇ ಜ್ಞಾನೋದಯಗೊಂಡು ಬುದ್ಧನಾಗುತ್ತಾನೆ. ಬುದ್ಧ ಅಂದರೆ ತಿಳಿದವ, ಅರಹಂತ ಸ್ಥಿತಿಯನ್ನು ತಲುಪಿದವ ಎಂದರ್ಥ.
ಹಗೆಯಿಂದ ಹಗೆಯನ್ನು ಎಂದಿಗೂ ಗೆಲ್ಲಲಾಗದು; ಹಗೆಯನ್ನು ಪ್ರೀತಿಯಿಂದ ಮಾತ್ರ ಗೆಲ್ಲಬಹುದು. ಯುದ್ಧದಿಂದ ಯುದ್ಧವನ್ನು ಎಂದೂ ಜಯಿಸಲಾಗದು, ಪ್ರೀತಿಯಿಂದ ಯುದ್ಧವನ್ನು ಗೆಲ್ಲಬಹುದು ಎಂದು ಗೌತಮ ಬುದ್ಧ ಬೋಧಿಸಿದ್ದಾನೆ. ಯಾರೂ ನಿನಗೆ ಏನು ಮಾಡಿದರೆ ಸಹಿಸಲಾರೆಯೋ, ಅದನ್ನು ನೀನು ಯಾರಿಗೂ ಮಾಡಬೇಡ ಎಂದು ಆತನು ತಿಳಿಸಿದ್ದಾನೆ. ರಥದ ಗಾಲಿಗಳು ಕುದುರೆಯ ಕಾಲಿನ ಗುರುತುಗಳನ್ನು ಹೇಗೆ ಹಿಂಬಾಲಿಸುತ್ತವೆಯೋ, ಹಾಗೆಯೇ ನಮ್ಮ ಕಾರ್ಯಗಳ ಫಲಗಳು ನಮ್ಮನ್ನು ಹಿಂಬಾಲಿಸುತ್ತವೆ. ಒಳ್ಳೆಯ ವರ್ತನೆಗಳು ಒಳ್ಳೆಯ ಫಲ ತರುತ್ತವೆ; ಪಾಪಕಾರ್ಯಗಳು ದುಃಖವನ್ನು ತರುತ್ತವೆ. ಪ್ರಕೃತಿಯೊಂದಿಗೆ ಸ್ನೇಹಪೂರ್ವಕನಾಗಿರು, ನಿನ್ನ ವರ್ತನೆಗಳಿಗೆ ಮನಸ್ಸೇ ಮೂಲ, ಆದ್ದರಿಂದ ಮನಸ್ಸನ್ನು ಸದಾ ಶುದ್ಧವಾಗಿರಿಸು ಎಂದು ಬುದ್ಧನು ಉಪದೇಶಿಸಿದ್ದಾನೆ. ಈ ರೀತಿಯ ಅನೇಕ ಸಾಲುಸಾಲು ಬೋಧನೆಗಳು ನಮ್ಮೊಳಗಿನ ವರ್ತನೆಗಳನ್ನು ಸಂಸ್ಕರಿಸಿ, ನೈತಿಕ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸುತ್ತವೆ.
ಬುದ್ಧನು ಮನುಷ್ಯನನ್ನೇ ಧಮ್ಮದ ಕೇಂದ್ರವಾಗಿಸಿದ್ದಾನೆ. ಒಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ಪ್ರೀತಿಸಲು ಅಗತ್ಯವಾದುದೇ ನೈತಿಕತೆ ಎಂದು ಸಾರಿದ್ದಾನೆ. ಈ ನೈತಿಕತೆಯೇ ಆತನು ನೀಡಿದ ಧಮ್ಮವಾಗಿದೆ.
ಬುದ್ಧನು ಬೋಧಿಸಿದ ಪಂಚಶೀಲಗಳು ನೈತಿಕ ಜೀವನದ ಮೂಲಬೇರುಗಳಾಗಿವೆ. ಅವು:
ಪ್ರಾಣಹತ್ಯೆ ಮಾಡದಿರುವುದು, ಸುಳ್ಳು ಹೇಳದಿರುವುದು, ಕಳ್ಳತನ ಮಾಡದಿರುವುದು, ವ್ಯಭಿಚಾರ ಮಾಡದಿರುವುದು, ಮದ್ಯ ಅಥವಾ ಮಾದಕ ವಸ್ತುಗಳನ್ನು ಸೇವಿಸದಿರುವುದು. ಈ ಪಂಚಶೀಲಗಳು ವ್ಯಕ್ತಿಯನ್ನು ಶಾಂತಿ, ಪ್ರೀತಿ, ಶುದ್ಧತೆ ಮತ್ತು ಸಮಾಜದ ಒಳ್ಳೆಯ ಬದುಕಿನ ಕಡೆಗೆ ಕರೆದೊಯ್ಯುತ್ತವೆ.
ಬುದ್ಧನ ಬೋಧನೆಗಳಿಗೆ ಅಪಾರವಾದ ಕರುಣೆ ಮತ್ತು ಮೈತ್ರಿಯೇ ಬುನಾದಿ. ಆತನದು ಸಂಹಾರದ ದಾರಿ ಅಲ್ಲ, ಪರಿವರ್ತನೆಯ ದಾರಿ. ವ್ಯಕ್ತಿಯು ಎಂತಹ ದುಷ್ಟನಾಗಿರಲಿ, ಕ್ರೂರಿಯಾಗಿರಲಿ, ತನ್ನ ಬೋಧನೆಗಳ ಮೂಲಕ ಆತನನ್ನು ಪರಿವರ್ತನೆಗೊಳಿಸುವ ಅಪಾರ ತಾಳ್ಮೆ, ಕರುಣೆ ಮತ್ತು ಪ್ರೀತಿ ಅವನದು. ಆತನ ಕರುಣೆಗೆ ಕ್ರೌರ್ಯವೂ ಕರಗುತ್ತದೆ ಎಂಬುದನ್ನು ಬುದ್ಧ ಮತ್ತು ಅಂಗುಲಿಮಾಲನ ಪ್ರಸಂಗದಲ್ಲಿ ನಾವು ನೋಡಬಹುದು.
ಬುದ್ಧ ಗುರುವಿನ ವಿಶೇಷವೆಂದರೆ, ತನ್ನ ಧಮ್ಮದಲ್ಲಾಗಲಿ, ಬೋಧನೆಗಳಲ್ಲಾಗಲಿ ದೇವರು, ಆತ್ಮ, ಪರಮಾತ್ಮ, ಜನ್ಮ, ಪುನರ್ಜನ್ಮ ಇವುಗಳಂತಹ ಕೊನೆಗಾಣದ ತರ್ಕದ ವಿಷಯಗಳ ಗೊಡವೆಗೆ ಹೆಚ್ಚು ಗಮನ ನೀಡುವುದಿಲ್ಲ. ಹಾಗೆಯೇ ಜಾತಿ, ಲಿಂಗ, ವರ್ಣ, ವರ್ಗ ಈ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಆತ ಒಪ್ಪುವುದಿಲ್ಲ. ಬುದ್ಧನು ಎಲ್ಲರಿಗೂ ತನ್ನ ಬೋಧನೆಯನ್ನು ನೀಡಿದನು. ಧಮ್ಮದಲ್ಲಿ ಪ್ರವೇಶವನ್ನೂ ಕೊಟ್ಟನು. ರಾಜಾ ಮಹಾರಾಜರು ಅವನ ಅನುಯಾಯಿಗಳಾದಂತೆ, ಸೋಪಕ ಎಂಬ ಅಸ್ಪೃಶ್ಯ, ಉಪಾಲಿ ಎಂಬ ಕ್ಷೌರಿಕ, ಆಮ್ರಪಾಲಿ, ಕಿಸಾ ಗೌತಮಿಯರಂತಹ ಮಹಿಳೆಯರು ಹೀಗೆ ಎಲ್ಲರೂ ಸಂಘದಲ್ಲಿ ಇದ್ದು ಧಮ್ಮವನ್ನು ಪಾಲಿಸುತ್ತಿದ್ದರು. ಬುದ್ಧ ಹೇಳುತ್ತಾನೆ ” ನನ್ನ ಧಮ್ಮ ಸಾಗರವಿದ್ದ ಹಾಗೆ, ಭಿನ್ನ ಭಿನ್ನ ದಿಕ್ಕುಗಳಿಂದ ಹುಟ್ಟಿ ಹರಿದು ಸಾಗರ ಸೇರಿ ತಮ್ಮ ಎಲ್ಲಾ ಅಸ್ತಿತ್ವ ತ್ಯಜಿಸಿ ಸಾಗರ ಎಂಬ ಒಂದೇ ಹೆಸರಿನಲ್ಲಿ ಒಂದಾಗುತ್ತವೆ.”

ಅನೇಕರು ಬುದ್ಧನ ವ್ಯಕ್ತಿತ್ವ ಮತ್ತು ಆತನ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ. ಆ ಕಾಲದಲ್ಲಿ ಆಳಿದ ಅನೇಕ ರಾಜರು ಹಾಗೂ ಅವರ ಮನೆತನಗಳೇ ಬುದ್ಧನ ಅನುಯಾಯಿಗಳಾಗಿ ಧಮ್ಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹನ್ನೆರಡನೇ ಶತಮಾನದ ವಚನ ಚಳುವಳಿಗೆ ಬುದ್ಧನ ಬೋಧನೆಗಳ ಮರುಸೃಷ್ಟಿಯಾಗಿದೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ಬಸವಣ್ಣನ ವಚನದ ಸಾಲುಗಳು ಬುದ್ಧನ ಪಂಚಶೀಲಗಳನ್ನೇ ಪುನರುಚ್ಚರಿಸಿವೆ.
ಸತ್ಯ, ಶಾಂತಿ, ಅಹಿಂಸೆ, ಪರಧರ್ಮ ಸಹಿಷ್ಣುತೆ (ಕರುಣೆ) ಎಂದು ಹೇಳಿದ ಮಹಾತ್ಮ ಗಾಂಧೀಜಿ ಅವರ ತತ್ವಗಳು ಮೂಲತಃ ಬುದ್ಧನ ಬೋಧನೆಯ ಮುಖ್ಯ ಸಾರವೇ ಆಗಿದೆ. ದಾಸ ಸಾಹಿತ್ಯವು ಬುದ್ಧನ ನೈತಿಕ ಬೋಧನೆಯ ಆದರ್ಶಗಳಿಂದ ಪ್ರಭಾವಗೊಂಡಿದೆ. ನಾರಾಯಣಗುರು, ಪುಲೆ ದಂಪತಿಗಳು, ಸ್ವಾಮಿ ವಿವೇಕಾನಂದರು ಆದಿಯಾಗಿ ಅನೇಕರು ಬುದ್ಧನ ಧಮ್ಮದ ಪ್ರಭಾವಕ್ಕೆ ಒಳಗಾದವರು.
ಇನ್ನೊಂದು ಮಹತ್ವದ ಅಂಶವೆಂದರೆ, ನಮ್ಮ ಭಾರತದ ಸಂವಿಧಾನಕ್ಕೆ ಕರುಣೆ ಮತ್ತು ಮೈತ್ರಿಯೆಂಬ ಬುದ್ಧನ ಉದಾತ್ತ ಮೌಲ್ಯಗಳು ಆಧಾರವಾಗಿರದಿದ್ದರೆ ಸರ್ವರೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಬುದ್ಧ ಎಂಬ ಕರುಣೆಯ ಬೆಳದಿಂಗಳು ಸಮಸ್ತ ವಿಶ್ವಕ್ಕೆ ತಂಪಾದ ಶಾಂತಿಯ ಬೆಳಕಾಗಿ ಸದಾ ಬೆಳಗುತ್ತಿದೆ.
ಪರಮೇಶ್ವರ ಕೆ ಆಲಳ್ಳಿ.
ಶಿಕ್ಷಕರು, ಸಾಗರ
ಇದನ್ನೂ ಓದಿ – ಭಾರತೀಯರ ವಿಮೋಚನೆಗಾಗಿ ನವ ಬೌದ್ಧಯಾನ


