ಅಹಮದಾಬಾದ್ : ನಾಳೆ ಏಪ್ರಿಲ್ 30ರಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಇದೇ ಸೀಜನ್ ನಲ್ಲಿ ಇತ್ತಂಡಗಳ ನಡುವಿನ ಸ್ಪರ್ಧೆಯಲ್ಲಿ ಆರ್ ಸಿಬಿ ಜಯಭೇರಿ ಬಾರಿಸಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 8 ಪಂದ್ಯಗಳಲ್ಲಿ 6 ಗೆಲುವು, 2 ಸೋಲುಗಳೊಂದಿಗೆ 12 ಅಂಕಗಳೊಂದಿಗೆ ಟೇಬಲ್ನಲ್ಲಿ 2ನೇ ಸ್ಥಾನ ಗಳಿಸಿದೆ. ಎಲ್ಲ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್ +1.919 ಹೊಂದಿರುವ ಆರ್ ಸಿಬಿ ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ.
ಆರ್ ಸಿಬಿಯ ಆರಂಭಿಕ ಆಟಗಾರರು ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತ ಬಂದಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ್ ಪಡಿಕ್ಕಲ್ ಬ್ಯಾಟ್ ಗಳಿಂದ ರನ್ ನಿಯಂತ್ರಿಸುವುದು ಎದುರಾಳಿ ತಂಡಗಳಿಗೆ ತಲೆನೋವಿನ ವಿಷಯವಾಗಿದೆ. ಅನಾರೋಗ್ಯದಿಂದ ಎರಡು ಪಂದ್ಯಗಳಿಂದ ದೂರ ಉಳಿದಿದ್ದ ಸಾಲ್ಟ್ ಈ ಪಂದ್ಯಕ್ಕೆ ಲಭ್ಯರಿರುವ ಸಾಧ್ಯತೆ ಇದ್ದು, ತಂಡದ ಉನ್ನತ ಕ್ರಮಾಂಕವನ್ನು ಬಲಗೊಳಿಸುವ ಸಾಧ್ಯತೆ ಇದೆ. ಇದು ಗುಜರಾತ್ ಟೈಟನ್ ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆರ್ ಸಿ ಬಿಯ ಮಧ್ಯಮ ಕ್ರಮಾಂಕ ಉಳಿದೆಲ್ಲ ತಂಡಗಳಿಗಿಂತ ಸುಭದ್ರವಾಗಿದೆ. ರಜತ್ ಪಟಿದಾರ್ ಅತ್ಯುತ್ತಮ ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಮಾಡುತ್ತಿದ್ದಾರೆ. ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್ ಹೀಗೆ ಬಲವಾದ ದಾಂಡಿಗರ ದಂಡೇ ಆರ್ ಸಿಬಿಯಲ್ಲಿದೆ.
ಆದರೆ ಇದೆಲ್ಲಕ್ಕಿಂತ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ತಲೆನೋವಾಗಿರುವುದು ಮಧ್ಯಮ ವೇಗಿಗಳಾದ ಭುವನೇಶ್ವರ ಕುಮಾರ್ ಮತ್ತು ಜೋಷ್ ಹೇಜಲ್ ವುಡ್. ದೆಹಲಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಆರು ವಿಕೆಟ್ ಗಳನ್ನು ಕೇವಲ ಎಂಟು ರನ್ ಗಳಿಗೆ ಈ ಜೋಡಿ ಉರುಳಿಸಿ ದಾಖಲೆ ಸೃಷ್ಟಿಸಿತ್ತು. ಅನುಭವಿ ಆಟಗಾರರಾದ ಭುವಿ ಮತ್ತು ಹೇಜಲ್ ವುಡ್ ಆಕ್ರಮಣಕಾರಿಯಾಗಿ ಬೌಲ್ ಮಾಡುತ್ತಿದ್ದು ಜಿಟಿ ಆಟಗಾರರು ಅಗ್ನಿಪರೀಕ್ಷೆ ಎದುರಿಸಬೇಕಿದೆ.
ಗುಜರಾತ್ ಟೈಟನ್ಸ್ : 8 ಪಂದ್ಯಗಳಲ್ಲಿ 4 ಗೆಲುವು, 4 ಸೋಲುಗಳೊಂದಿಗೆ 8 ಅಂಕಗಳನ್ನು ಗಳಿಸಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಅವರು ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಬೌಲಿಂಗ್ನಲ್ಲಿ ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ಪ್ರಸಿದ್ಧ ಕೃಷ್ಣ ಮಿಂಚುತ್ತಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ಗೆ ಸಹಾಯಕವಾಗಿದ್ದು ಹೆಚ್ಚು ರನ್ ಹರಿದು ಬರುವ ಸಾಧ್ಯತೆ ಇದೆ. ರಾತ್ರಿ ಪಂದ್ಯವಾಗುವುದರಿಂದ ಎರಡನೇ ಇನ್ನಿಂಗ್ಸ್ ನಲ್ಲಿ ಮಂಜು ಬೀಳುವ ಸಾಧ್ಯತೆಯಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

