ನಿಜವಾದ ಧರ್ಮವಿರುವುದು ಪ್ರಭುತ್ವಗಳು ಸೃಷ್ಟಿಸುವ ಯುದ್ಧದಲ್ಲಿ ಅಲ್ಲ, ಬದಲಾಗಿ ಸಹಬಾಳ್ವೆ ಮತ್ತು ಬದುಕಿನ ಸರಳತೆಯಲ್ಲಿ.
ಯುದ್ಧವೆನ್ನುವುದು ಮಾನವ ಇತಿಹಾಸದ ಅತಿದೊಡ್ಡ ವಿರೋಧಾಭಾಸ. ಒಂದೆಡೆ ಇದು ಶಕ್ತಿ, ಸ್ವಾತಂತ್ರ್ಯ ಮತ್ತು ದೇಶಪ್ರೇಮದ ಸಂಕೇತವೆಂದು ವೈಭವೀಕರಿಸಲ್ಪಟ್ಟರೆ, ಮತ್ತೊಂದೆಡೆ ಅದು ಕೊಲೆ, ಲೂಟಿ, ವಿನಾಶ ಮತ್ತು ಅಮಾನವೀಯತೆಯ ಮೂರ್ತರೂಪವಾಗಿ ನಿಲ್ಲುತ್ತದೆ. ಲಿಯೋ ಟಾಲ್ಸ್ಟಾಯ್ ಅವರ ‘ಯುದ್ಧ ಮತ್ತು ಶಾಂತಿ’ ಕಾದಂಬರಿಯು ಈ ವಿರೋಧಾಭಾಸವನ್ನು ಅದರ ಇಡೀ ವಿಸ್ತಾರದಲ್ಲಿ ಬಿಚ್ಚಿಡುತ್ತದೆ. ನೆಪೋಲಿಯನ್ ಯುಗದ ಯುದ್ಧಗಳ ಹಿನ್ನೆಲೆಯಲ್ಲಿ ಬರೆದ ಈ ಮಹಾಕಾದಂಬರಿಯು, ಇಂದಿನ ರಷ್ಯಾ-ಉಕ್ರೇನ್, ಇಸ್ರೇಲ್-ಪ್ಯಾಲೆಸ್ಟೀನ್, ಇಸ್ರೇಲ್-ಇರಾನ್ ಸಂಘರ್ಷಗಳಿಗೂ, ಅಮೆರಿಕ-ವೆನೆಜುವೆಲಾ ವಿವಾದ ಹಾಗೂ ಪಾಕಿಸ್ತಾನ-ಅಫ್ಘಾನಿಸ್ತಾನಗಳ ಕದನಕ್ಕೂ ಅತ್ಯಂತ ಪ್ರಸ್ತುತವಾಗಿ ಕಾಣುತ್ತದೆ. ಯುದ್ಧವನ್ನು ಕೇವಲ ಒಂದು ರಾಜಕೀಯ ಅಥವಾ ಮಿಲಿಟರಿ ವಿದ್ಯಮಾನವಾಗಿ ನೋಡದೆ, ಅದರ ತಾತ್ವಿಕ, ನೈತಿಕ ಮತ್ತು ಮಾನಸಿಕ ಆಯಾಮಗಳನ್ನು ವಿಶ್ಲೇಷಿಸುವ ಟಾಲ್ಸ್ಟಾಯ್ ಅವರ ದೃಷ್ಟಿಕೋನವೇ ಈ ಬರಹದ ಕೇಂದ್ರಬಿಂದು. ಇದರ ಮುಖೇನ, ಸಾಮ್ರಾಜ್ಯಶಾಹಿ ಶಕ್ತಿಗಳ ಮತ್ತು ಯುದ್ಧಕೋರ ಪ್ರಭುತ್ವಗಳ ಕಪಟತನವನ್ನು ನಿರ್ದಾಕ್ಷಿಣ್ಯವಾಗಿ ಬಯಲು ಮಾಡಬೇಕಾಗಿದೆ.
ಯುದ್ಧವೇಕೆ ನಡೆಯುತ್ತದೆ ಎಂದು ಹುಡುಕ ಹೊರಟರೆ, ಅದಕ್ಕೆ ಯಾವುದೇ ಒಂದೇ ನಿರ್ದಿಷ್ಟ ಕಾರಣ ಗೋಚರಿಸುವುದಿಲ್ಲ. ವಾಸ್ತವದಲ್ಲಿ, ಯುದ್ಧ ನಡೆಯಬೇಕೆಂಬುದು ಪ್ರಭುತ್ವವೊಂದರ ಪೂರ್ವನಿಯೋಜಿತ ಸಂಚಾಗಿರುತ್ತದೆ. ಈ ಮಾತು ಇಂದಿನ ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷಕ್ಕೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಆ ಯುದ್ಧಕ್ಕೆ ಕೇವಲ ಒಂದೇ ಕಾರಣವಿಲ್ಲ— ಭೂಮಿಯ ಮೇಲಿನ ಹಕ್ಕು, ಧಾರ್ಮಿಕ ಅಸ್ಮಿತೆ, ರಾಜಕೀಯ ಅಧಿಕಾರದಾಹ ಮತ್ತು ಚಾರಿತ್ರಿಕ ಗಾಯಗಳು— ಇವೆಲ್ಲವೂ ಬೆರೆತು ಅದನ್ನೊಂದು ನಿರಂತರ ದುರಂತವಾಗಿ ಮಾರ್ಪಡಿಸಿವೆ.

ಟಾಲ್ಸ್ಟಾಯ್ ಕಾದಂಬರಿಯ ತಾತ್ವಿಕ ತಿರುಳು ಅಡಗಿರುವುದೇ ಈ ಮಾತಿನಲ್ಲಿ: “ಯಾರು ಸರಿ, ಯಾರು ತಪ್ಪು? ಯಾರೂ ಸರಿಯಲ್ಲ, ಯಾರೂ ತಪ್ಪಲ್ಲ.” (ಪು.475) ಈ ದ್ವಂದ್ವವು ಪ್ರಿನ್ಸ್ ಆಂಡ್ರೂ ನುಡಿಯಲ್ಲೂ ಪ್ರತಿಧ್ವನಿಸುತ್ತದೆ: “ಎಲ್ಲರೂ ಅವರವರ ನಂಬಿಕೆಗಳನ್ನು ಬಿಟ್ಟು ಬೇರೆ ಕಾರಣಕ್ಕೆ ಯುದ್ಧ ಮಾಡುವುದೇ ಇಲ್ಲ ಅನ್ನುವ ಹಾಗಿದ್ದಿದ್ದರೆ ಯುದ್ಧಗಳೇ ಇರುತ್ತಿರಲಿಲ್ಲ.” (ಪು.35) ಟಾಲ್ಸ್ಟಾಯ್ ಇಲ್ಲಿ ಧ್ವನಿಸುವುದಿಷ್ಟು: ಪ್ರತಿಯೊಬ್ಬ ಯೋಧನೂ, ಪ್ರತಿಯೊಂದು ದೇಶವೂ ತಮ್ಮ ಯುದ್ಧವು ನ್ಯಾಯಸಮ್ಮತವೆಂದೇ ನಂಬಿರುತ್ತವೆ. ಉದಾಹರಣೆಗೆ, ಇಸ್ರೇಲ್ ಸ್ವರಕ್ಷಣೆಯ ಹೆಸರಿನಲ್ಲಿ ಯುದ್ಧಕ್ಕಿಳಿದರೆ, ಹಮಾಸ್ ತನ್ನ ಭೂಮಿ ಮತ್ತು ಮಕ್ಕಳ ಉಳಿವಿಗಾಗಿ ಹೋರಾಡುತ್ತಿದ್ದೇವೆ ಎನ್ನುತ್ತದೆ; ಇತ್ತ ಇರಾನ್ ಇಸ್ಲಾಂ ಧರ್ಮದ ರಕ್ಷಣೆಯ ಕಾರಣ ನೀಡುತ್ತದೆ. ಆದರೆ ಕಟುಸತ್ಯವೆಂದರೆ, “ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ, ಎಲ್ಲವೂ ಒಂದೇ.” (ಪು.805) ಈ ಶೂನ್ಯವಾದಿ (ನಿಹಿಲಿಸ್ಟ್) ಸತ್ಯವು, ಪ್ರಭುತ್ವಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸುವ ಯುದ್ಧದ ಸಂಪೂರ್ಣ ಅರ್ಥಹೀನತೆಯನ್ನು ಬಯಲು ಮಾಡುತ್ತದೆ.
ಟಾಲ್ಸ್ಟಾಯ್ ಯುದ್ಧದ ಹಿಂದೆ ವ್ಯಾಪಾರಿ ವರ್ಗ ಮತ್ತು ಪ್ರಭುತ್ವಗಳು ಆಡುವ ಪಾತ್ರವನ್ನು ತೀಕ್ಷ್ಣವಾಗಿ ಗುರುತಿಸುತ್ತಾರೆ. “ಈ ಜಗತ್ತಿನಲ್ಲಿ ಬೇಕಾದದ್ದು ಜಾಣತನ ಮತ್ತೆ ಕೆಟ್ಟತನ ಅಷ್ಟೇ” (ಪು.113) ಎಂಬ ಮಾತು ಇಂದಿನ ಅಮೆರಿಕದ ವಿದೇಶಾಂಗ ನೀತಿಯ ಸ್ವರೂಪವನ್ನು ವಿವರಿಸಲು ಸಾಕು. ಅಮೆರಿಕವು ಇಸ್ರೇಲ್ಗೆ ನೀಡುವ ಅಖಂಡ ಬೆಂಬಲ ಮತ್ತು ವೆನೆಜುವೆಲಾದ ಮೇಲೆ ಹೇರುತ್ತಿರುವ ಆರ್ಥಿಕ ನಿರ್ಬಂಧ— ಇವೆರಡರ ಹಿಂದೆಯೂ ತೈಲ, ಶಸ್ತ್ರಾಸ್ತ್ರ ವ್ಯಾಪಾರ ಹಾಗೂ ಭೌಗೋಳಿಕ ಅಧಿಕಾರ ಸ್ಥಾಪನೆಯ ಹಿತಾಸಕ್ತಿಗಳೇ ಅಡಗಿವೆ. ‘ಸೈನಿಕರಿಗೆ, ಅಧಿಕಾರಿಗಳಿಗೆ ಉದ್ಯೋಗ ಒದಗಿಸುವುದಕ್ಕಾಗಿಯೇ ಯುದ್ಧ ನಡೆಯುತ್ತದೆಯೇ?’ ಎಂಬ ತೀಕ್ಷ್ಣ ಪ್ರಶ್ನೆಯು ಅಮೆರಿಕದ ಶಸ್ತ್ರಾಸ್ತ್ರ ಮಾರಾಟ ನೀತಿಗೆ ಕನ್ನಡಿ ಹಿಡಿಯುತ್ತದೆ. ಯುದ್ಧದಾಹಿ ಇಸ್ರೇಲ್ಗೆ ಅಮೆರಿಕ ಬೆಂಬಲ ನೀಡುತ್ತಿರುವುದು ಮಾನವೀಯತೆಯ ದೃಷ್ಟಿಯಿಂದಲ್ಲ; ಬದಲಾಗಿ ಮಧ್ಯಪ್ರಾಚ್ಯದಲ್ಲಿ ತನ್ನ ವ್ಯಾಪಾರಿ ಮತ್ತು ಸೇನಾ ನೆಲೆಗಳನ್ನು ಭದ್ರಪಡಿಸಿಕೊಳ್ಳುವ ಕುತಂತ್ರದಿಂದ.
“ಚರಿತ್ರೆಯ ವಿಷಯಕ್ಕೆ ಬಂದರೆ ಮಹಾಪುರುಷರೆಂದು ಕರೆಯಲಾಗುವ ಮನುಷ್ಯರು ಆ ಚಾರಿತ್ರಿಕ ಘಟನೆಗಳಿಗೆ ಹಚ್ಚಿದ ಹಣೆಪಟ್ಟಿ ಮಾತ್ರವಾಗಿರುತ್ತಾರೆ. ನಿಜವಾದ ಹಣೆಪಟ್ಟಿಗಳಂತೆಯೇ ಘಟನೆಗಳಿಗೂ ಅವರಿಗೂ ತೀರ ಅಲ್ಪ ಸಂಬಂಧ ಮಾತ್ರವಿರುತ್ತದೆ” (ಪು.908). ಇಂದಿನ ಜಾಗತಿಕ ಸಂದರ್ಭಕ್ಕೆ ಇದನ್ನು ಅನ್ವಯಿಸಿದರೆ, ಬೆಂಜಮಿನ್ ನೆತನ್ಯಾಹು ಅಥವಾ ಅಮೆರಿಕದ ಅಧ್ಯಕ್ಷರು ಈ ಯುದ್ಧಗಳ ‘ಮಹಾನಾಯಕ’ರಂತೆ ಬಿಂಬಿತರಾದರೂ, ಯುದ್ಧದ ಹಿಂದಿನ ನಿಜವಾದ ಚಾಲಕಶಕ್ತಿಯು ಶಸ್ತ್ರಾಸ್ತ್ರ ಕಂಪನಿಗಳ ಆರ್ಥಿಕ ಹಿತಾಸಕ್ತಿಯಲ್ಲಿ, ಜನಸಮೂಹದ ಭಾವನೆಗಳಲ್ಲಿ ಮತ್ತು ದಶಕಗಳ ಇತಿಹಾಸದ ಗಾಯಗಳಲ್ಲಿ ಹುದುಗಿದೆ ಎಂಬ ನಗ್ನಸತ್ಯ ಅರ್ಥವಾಗುತ್ತದೆ.
ಯುದ್ಧದ ಸೋಲು-ಗೆಲುವುಗಳನ್ನು ರಾಜರ ಅಥವಾ ದಂಡನಾಯಕರ ಬುದ್ಧಿವಂತಿಕೆಗೆ ಆರೋಪಿಸುವುದು ಚರಿತ್ರೆಯ ಅತಿದೊಡ್ಡ ಸುಳ್ಳು. ವಾಸ್ತವದಲ್ಲಿ, “ರಾಜನು ಚರಿತ್ರೆಯ ಗುಲಾಮ” (ಪು.907). ಅಂದರೆ, ಪ್ರಭುತ್ವದ ಅಧಿಪತಿಯು ತಾನೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದರೂ, ಆತ ಕೇವಲ ಕಾಲ ಮತ್ತು ಸಂದರ್ಭದ ಕೈಗೊಂಬೆಯಷ್ಟೇ. “ತಾವು ಆಯ್ಕೆಮಾಡಿಕೊಂಡ ಆಳುವ ವ್ಯಕ್ತಿಗೆ ವ್ಯಕ್ತವಾಗಿಯೋ, ಮಾತಿಲ್ಲದೆಯೋ ವರ್ಗಾಯಿಸಲಾಗಿರುವ ಜನತೆಯ ಸಾಮೂಹಿಕ ಇಚ್ಛಾಶಕ್ತಿಯೇ ಅಧಿಕಾರ” (ಪು.1746). ಆದರೆ, ಪ್ರಭುತ್ವವು ಅಹಂಕಾರದಿಂದ ಈ ನೈತಿಕ ಒಪ್ಪಂದವನ್ನು ಮುರಿದು, ತನಗೆ ಶಕ್ತಿ ನೀಡಿದ ಜನಸಾಮಾನ್ಯರನ್ನೇ ಯುದ್ಧದ ಬೆಂಕಿಗೆ ತಳ್ಳುತ್ತದೆ.

“ಸಾಮಾಜಿಕ ಶ್ರೇಣಿಯಲ್ಲಿ ಮೇಲಿನ ಸ್ಥಾನದಲ್ಲಿದ್ದಷ್ಟೂ ಅವರ ಸ್ವಾತಂತ್ರ್ಯ ಕಡಿಮೆಯಾಗಿರುತ್ತದೆ” (ಪು.1019). ಇಸ್ರೇಲಿನ ಇಂದಿನ ನಾಯಕತ್ವ ಈ ಮಾತಿಗೆ ಸಾಕ್ಷಾತ್ ಉದಾಹರಣೆ. ಸ್ವಂತ ಜನರ ಭದ್ರತೆಯ ಹೆಸರಿನ ಒತ್ತಡ, ಅಂತರರಾಷ್ಟ್ರೀಯ ಸಮುದಾಯದ ನಿರ್ಬಂಧ, ಒಳಗಿನ ರಾಜಕೀಯ ತಿಕ್ಕಾಟ— ಇವೆಲ್ಲದರ ಸುಳಿಯಲ್ಲಿ ಸಿಲುಕಿರುವ ಆ ನಾಯಕ ನಿಜಕ್ಕೂ ಸ್ವತಂತ್ರನೇ? ಮತ್ತೊಂದೆಡೆ, ಅಮೆರಿಕವು ಇಸ್ರೇಲ್ಗೆ ನೀಡುತ್ತಿರುವ ಬೆಂಬಲದ ಹಿಂದೆ ಅದರ ರಾಷ್ಟ್ರೀಯ ಹಿತಾಸಕ್ತಿ, ಪ್ರಭಾವಶಾಲಿ ಯಹೂದಿ ಲಾಬಿ, ಶಸ್ತ್ರಾಸ್ತ್ರ ಉದ್ಯಮದ ಲಾಭ ಮತ್ತು ಭೌಗೋಳಿಕ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡುತ್ತಿವೆ. ಇಷ್ಟೆಲ್ಲಾ ಅದೃಶ್ಯ ಶಕ್ತಿಗಳು ಒಂದು ನಿರ್ಧಾರವನ್ನು ಹೇರುತ್ತಿರುವಾಗ, ಅಮೆರಿಕದ ಅಧ್ಯಕ್ಷನೊಬ್ಬ ನಿಜಕ್ಕೂ ‘ಸ್ವತಂತ್ರ’ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ನಾಯಕರ ಅಸ್ತಿತ್ವದ ಅಣಕದಂತೆ ಕಾಡುತ್ತದೆ.
ಟಾಲ್ಸ್ಟಾಯ್ ಯುದ್ಧದ ನೈಜ ಸ್ವರೂಪವನ್ನು ಬಯಲು ಮಾಡುವಾಗ ಮಿಲಿಟರಿ ವರ್ಗದ ಮೇಲೆ ಅತ್ಯಂತ ತೀಕ್ಷ್ಣವಾದ ಟೀಕೆ ಮಾಡುತ್ತಾರೆ: “ಯುದ್ಧದ ಗುರಿ—ಕೊಲೆ. ಗೂಢಚರ್ಯೆ, ದ್ರೋಹ ಮತ್ತು ಅವುಗಳಿಗೆ ಪ್ರೋತ್ಸಾಹ, ದೇಶದ ಜನರನ್ನು ನಾಶಮಾಡುವುದು, ಅವರ ಮನೆಗಳನ್ನು ಲೂಟಿ ಮಾಡುವುದು, ಸೈನ್ಯಕ್ಕೆ ಬೇಕೆಂದು ಜನರ ವಸ್ತುಗಳನ್ನು ಕದಿಯುವುದು—ಇವೆಲ್ಲ ಯುದ್ಧದ ದಾರಿಗಳು. ಮೋಸ ಮತ್ತು ಸುಳ್ಳನ್ನು ಮಿಲಿಟರಿ ಚಾತುರ್ಯ ಎಂದು ಹೊಗಳುವುದು, ಶಿಸ್ತಿನ ಹೆಸರಿನಲ್ಲಿ ಸೈನಿಕರ ಸ್ವಾತಂತ್ರ್ಯವನ್ನು ಅಪಹರಿಸುವುದು, ಸೋಮಾರಿತನ, ಮೌಢ್ಯ, ಕ್ರೌರ್ಯ, ಸ್ತ್ರೀಲಂಪಟತನ, ಕುಡುಕತನ… ಇವು ಮಿಲಿಟರಿ ವರ್ಗದ ಲಕ್ಷಣಗಳು” (ಪು.1156). ಈ ಕಟು ವಾಸ್ತವವು ಇಂದಿನ ಗಾಜಾ, ವೆನೆಜುವೆಲಾದ ಮೇಲಿನ ರಾಜಕೀಯ ಒತ್ತಡಗಳಲ್ಲಿ ಅಕ್ಷರಶಃ ಸತ್ಯವೆನಿಸುವುದಿಲ್ಲವೇ? ಗಾಜಾದ ಆಸ್ಪತ್ರೆಗಳ ಮೇಲಿನ ದಾಳಿ, ಶರಣಾಗತ ನಾಗರಿಕರ ಮೇಲೆ ಬಾಂಬ್ ಹಾಕುವುದು, ಇರಾನ್ನ ಶಾಲೆಗಳ ಮೇಲೆ ಕ್ಷಿಪಣಿಗಳನ್ನು ಎರಚಿ ಮುಗ್ಧ ಮಕ್ಕಳ ಸಾವಿಗೆ ಕಾರಣವಾಗುವುದು— ಇಂಥ ಅಮಾನವೀಯ ಕೃತ್ಯಗಳನ್ನೇ ಇಂದು ಪ್ರಭುತ್ವಗಳು “ಮಿಲಿಟರಿ ಚಾತುರ್ಯ” ಎಂದು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುತ್ತಿವೆ.
“ಕಡ್ಡಾಯವಾಗಿ ಸೋಮಾರಿಗಳಾಗಿದ್ದೂ, ಯಾವ ಅಪರಾಧೀ ಪ್ರಜ್ಞೆಯಿಂದಲೂ ನರಳದ ಸ್ಥಿತಿ ಸೈನಿಕ ವರ್ಗಕ್ಕೆ ಸೇರಿದ್ದು. ನಿಂದನೆಗೆ ಅವಕಾಶವೇ ಇಲ್ಲದ ಕಡ್ಡಾಯ ಸೋಮಾರಿತನವೇ ಸೈನಿಕ ವೃತ್ತಿಯ ಮುಖ್ಯ ಆಕರ್ಷಣೆಯಾಗಿತ್ತು, ಮುಂದೆಯೂ ಹಾಗೇ ಇರುತ್ತದೆ” (ಪು.726). ಟಾಲ್ಸ್ಟಾಯ್ ಅವರ ಈ ವ್ಯಂಗ್ಯವು ಇಂದಿನ ಜಗತ್ತಿನ ಯಾವುದೇ ದೇಶದ ಮಿಲಿಟರಿಗೂ ಕರಾರುವಾಕ್ಕಾಗಿ ಅನ್ವಯಿಸುತ್ತದೆ. ವಾಸ್ತವದಲ್ಲಿ, ಶಾಂತಿಯ ಕಾಲದಲ್ಲಿ ಸೈನ್ಯದ ಅಸ್ತಿತ್ವವೇ ಅರ್ಥಹೀನವೆನಿಸುತ್ತದೆ. ಆದ್ದರಿಂದಲೇ ಶಸ್ತ್ರಾಸ್ತ್ರ ತಯಾರಕರು, ಅಧಿಕಾರಿ ವರ್ಗ ಹಾಗೂ ಪ್ರಭುತ್ವಗಳು ಸದಾ ಯಾವುದಾದರೊಂದು ‘ಬೆದರಿಕೆ’ಯನ್ನು (Threat) ಕೃತಕವಾಗಿ ಸೃಷ್ಟಿಸುತ್ತಲೇ ಇರಬೇಕಾಗುತ್ತದೆ. ಅಮೆರಿಕವು ವೆನೆಜುವೆಲಾದ ಮೇಲೆ ಹೇರುತ್ತಿರುವ ನಿರಂತರ ಆರ್ಥಿಕ ಒತ್ತಡ ಮತ್ತು ಇಸ್ರೇಲ್-ಇರಾನ್ ನಡುವಿನ ಪ್ರಸ್ತುತ ಸಂಘರ್ಷಗಳು – ಕೇವಲ ರಾಷ್ಟ್ರರಕ್ಷಣೆಯ ನೆಪಗಳಲ್ಲ; ಬದಲಾಗಿ, ಜಾಗತಿಕ ‘ಮಿಲಿಟರಿ-ಆರ್ಥಿಕ ಸಂಕೀರ್ಣ’ದ (Military-Economic Complex) ಬೃಹತ್ ಜಾಲವನ್ನು ಜೀವಂತವಾಗಿರಿಸುವ ರಕ್ತಸಿಕ್ತ ಫಲಗಳಾಗಿವೆ.
ಟಾಲ್ಸ್ಟಾಯ್ ಅವರ ಮತ್ತೊಂದು ಪ್ರಮುಖ ತಾತ್ವಿಕ ಒಳನೋಟವಿದು: “ಮನುಷ್ಯರ ಬದುಕಿನಲ್ಲಿ ದುಷ್ಟತನದ ಮೂಲಗಳು ಎರಡೇ—ಸೋಮಾರಿತನ ಮತ್ತು ಮೂಢನಂಬಿಕೆ; ಹಾಗೆಯೇ ಸದ್ಗುಣದ ಮೂಲಗಳೂ ಎರಡೇ—ಚಟುವಟಿಕೆ ಮತ್ತು ಬುದ್ಧಿವಂತಿಕೆ” (ಪು.131). ಇಂದಿನ ಇಸ್ರೇಲ್-ಇರಾನ್ ಸಂಘರ್ಷವನ್ನು ಈ ಚೌಕಟ್ಟಿನಲ್ಲಿಟ್ಟು ನೋಡಿದಾಗ ಒಂದು ಕಟುಸತ್ಯ ಗೋಚರಿಸುತ್ತದೆ: ಇರಾನ್ನ ಧಾರ್ಮಿಕ ನಾಯಕತ್ವದ ಮೂಲಭೂತವಾದವಿರಲಿ ಅಥವಾ ಇಸ್ರೇಲಿನ ಅತಿರೇಕದ ರಾಷ್ಟ್ರೀಯತೆಯಿರಲಿ—ಎರಡೂ ಸಹ ‘ಮೂಢನಂಬಿಕೆ’ಯ ಬೇರೆ ಬೇರೆ ವಿಕೃತ ರೂಪಗಳೇ ಆಗಿವೆ.
ಇನ್ನೊಂದೆಡೆ, ಧರ್ಮ ಮತ್ತು ದೇವರನ್ನು ಯುದ್ಧದ ಅಸ್ತ್ರವಾಗಿ ಬಳಸಿಕೊಳ್ಳುವ ಪರಿಯನ್ನು ಕಾದಂಬರಿ ತೀವ್ರವಾಗಿ ಖಂಡಿಸುತ್ತದೆ. “ನಮ್ಮ ಮನಸ್ಸಿಗೆ ಸಮಾಧಾನ ತರುವುದಕ್ಕೆ ಧರ್ಮ ಎಂಬುದೊಂದು ಇರದಿದ್ದರೆ ಬದುಕೇ ದುರ್ಭರವಾಗುತ್ತಿತ್ತು” (ಪು.139) ಎಂಬುದು ನಿಜವಾದರೂ, ಪ್ರಭುತ್ವಗಳು ಇದೇ ಧರ್ಮವನ್ನು ಯುದ್ಧದ ಸರಕನ್ನಾಗಿ ಮಾಡುತ್ತವೆ. ಇಸ್ರೇಲ್ ತಾನು ‘ದೇವರ ಆಯ್ದ ಜನ’ (Chosen People) ಎಂಬ ಧಾರ್ಮಿಕ ಅಹಂಕಾರದೊಂದಿಗೆ ಪ್ಯಾಲೆಸ್ತೀನಿಯರ ಮೇಲೆರಗಿದರೆ, ಇಸ್ಲಾಮಿಕ್ ರಾಷ್ಟ್ರಗಳೂ ಧರ್ಮದ ಹೆಸರಿನಲ್ಲೇ ಪ್ರತಿದಾಳಿಗೆ ಇಳಿಯುತ್ತವೆ. ಇಲ್ಲಿ ಧರ್ಮವು ಜನರನ್ನು ಒಂದುಗೂಡಿಸುವ ಬದಲು, ವಿಭಜಿಸಿ ಕೊಲ್ಲುವ ಸಾಧನವಾಗುತ್ತದೆ. ಪುರಾಣಗಳು ಮತ್ತು ಕಾವ್ಯಗಳು ಹುಟ್ಟುಹಾಕಿದ ಸ್ವರ್ಗದ ಕಲ್ಪನೆಯು ಅಮಾಯಕ ಜನರನ್ನು ಯುದ್ಧೋನ್ಮಾದಕ್ಕೆ ತಳ್ಳುತ್ತದೆ. “ಸಾವಿನ ಆಚೆಗೆ ಏನಿದೆ ಅನ್ನುವುದು ಗೊತ್ತಿದ್ದಿದ್ದರೆ ನಾವು ಯಾರೂ ಸಾಯುವುದಕ್ಕೆ ಹೆದರುತ್ತಲೇ ಇರಲಿಲ್ಲ” (ಪು.266). ಸ್ವರ್ಗದಲ್ಲಿ ಕನ್ಯೆಯರು ಸಿಗುತ್ತಾರೆಂಬ ಭ್ರಮೆಯನ್ನು ಕಾವ್ಯಗಳು ಬಿತ್ತಿವೆ; ಆದರೆ ವಾಸ್ತವದಲ್ಲಿ ಅಲ್ಲಿ ಸ್ವರ್ಗವೆಂಬುದಿಲ್ಲ, ಇರುವುದು ಬರೀ ಶೂನ್ಯ ಆಕಾಶ. ಈ ವಾಸ್ತವವನ್ನರಿಯದ ಎಷ್ಟೋ ಯುವಕರು, ಧರ್ಮದ ಹೆಸರಿನಲ್ಲಿ ಪ್ರಭುತ್ವದ ದಾಳಗಳಾಗಿ ಬಲಿಯಾಗುತ್ತಿರುವುದು ಇಂದಿನ ದುರಂತ.
ಯುದ್ಧ ಎಂಬುದು ಅಸಂಖ್ಯಾತ ಜನರ ಇಚ್ಛೆಗಳು ಪರಸ್ಪರ ಹೋರಾಟ ನಡೆಸುವ ಆಡುಂಬೊಲ (ಪು.1061). ವಿಪರ್ಯಾಸವೆಂದರೆ, ಇಂತಹ ಯುದ್ಧಗಳ ಇತಿಹಾಸವನ್ನು ಬರೆಯುವವರು ಯಾರು? ಖಂಡಿತವಾಗಿಯೂ ಯುದ್ಧದ ನೋವುಂಡ ಜನಸಾಮಾನ್ಯರೋ ಅಥವಾ ರೈತರೋ ಚರಿತ್ರೆಯನ್ನು ಬರೆಯುವುದಿಲ್ಲ. ಇತಿಹಾಸವು ಸದಾ ವಿಜಯಿಗಳ ಪರವಾಗಿ ಕವಿಗಳು ಮತ್ತು ಚರಿತ್ರೆಕಾರರು ಕಟ್ಟುವ ಕಲ್ಪಿತ ಕಥೆಯಾಗಿರುತ್ತದೆ. ವಾಸ್ತವ ಘಟನೆಗಳನ್ನು ಯಥಾವತ್ತಾಗಿ ದಾಖಲಿಸುವಲ್ಲಿ ಅಂದಿನ ಚರಿತ್ರೆಕಾರರು ಹೇಗೆ ವಿಫಲರಾಗಿದ್ದರೊ, ಇಂದಿನ ಕಾರ್ಪೊರೇಟ್ ಮಾಧ್ಯಮಗಳು ಕೂಡ ಅಮೆರಿಕ ಮತ್ತು ಇಸ್ರೇಲ್ ಪರವಾಗಿ ಅದೇ ರೀತಿಯ ಸುಳ್ಳು ಕಥನಗಳನ್ನು ಹೆಣೆಯುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನವೆಂದರೆ— ಇಸ್ರೇಲ್-ಇರಾನ್ ನಡುವಿನ ಯುದ್ಧದ ನೈಜ ಕಾರಣಗಳ ಬಗ್ಗೆ ಬಹುಪಾಲು ಭಾರತೀಯರಿಗೆ ಪೂರ್ಣಜ್ಞಾನವಿಲ್ಲ; ನಮ್ಮ ಮಾಧ್ಯಮಗಳು ಉಣಬಡಿಸಿದ ‘ಕಥೆ’ಗಳನ್ನೇ ನಾವು ವಾಸ್ತವವೆಂದು ನಂಬುತ್ತಿದ್ದೇವೆ. “ಚರಿತ್ರೆಕಾರನು ಕೆಲವೊಮ್ಮೆ ಸತ್ಯವನ್ನು ತಿರುಚಿ, ತನ್ನ ನಾಯಕನ ಎಲ್ಲ ಕ್ರಿಯೆಗಳನ್ನೂ ಅವನ ಚಾರಿತ್ರಿಕ ವ್ಯಕ್ತಿತ್ವಕ್ಕೆ ಆರೋಪಿಸಲಾದ ಧೋರಣೆಗೆ ಅನುಗುಣವಾಗಿರುವಂತೆ ತಿದ್ದಿ ವಿವರಿಸಬೇಕಾಗುತ್ತದೆ… (ಪು.1815)” ಎಂಬ ಟಾಲ್ಸ್ಟಾಯ್ ಅವರ ಮಾತು, ಇಂದು ನಮಗೆ ಸಿಗುತ್ತಿರುವ ಯುದ್ಧದ ಮಾಹಿತಿಗಳೆಲ್ಲವೂ ಪ್ರಭುತ್ವ-ನಿಯಂತ್ರಿತ ಸುಳ್ಳುಗಳು ಎಂಬುದನ್ನು ದೃಢಪಡಿಸುತ್ತದೆ.

“ತಾಳ್ಮೆ ಮತ್ತು ಕಾಲ— ಇವಕ್ಕಿಂತ ಬಲವಾದ ಸೈನ್ಯ ಇನ್ನಿಲ್ಲ. ಈ ಸೈನ್ಯ ಇದ್ದರೆ ಸಾಧಿಸಲಾಗದ್ದು ಯಾವುದೂ ಇಲ್ಲ” (ಪು.1111). ಈ ಮಾತು ಕೇವಲ ಮಿಲಿಟರಿ ಯುದ್ಧತಂತ್ರಕ್ಕಷ್ಟೇ ಸೀಮಿತವಲ್ಲ; ಇದೊಂದು ಜೀವನ ತತ್ವ. ಪ್ಯಾಲೆಸ್ಟೀನ್ ಜನತೆ ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಉಳಿದುಕೊಂಡಿರುವುದು, ಬಿಡದ ಮನೋಬಲದಿಂದ ಬದುಕಿರುವುದು ಇದೇ ತತ್ವದ ಅಡಿಯಲ್ಲಿ. ಕೇವಲ ಸೈನಿಕರ ಸಂಖ್ಯೆ ಅಥವಾ ಶಸ್ತ್ರಾಸ್ತ್ರಗಳ ರಾಶಿ ಸೋಲು-ಗೆಲುವುಗಳನ್ನು ನಿರ್ಧರಿಸುವುದಿಲ್ಲ; ಅಂತಿಮವಾಗಿ ನಿರ್ಣಾಯಕವಾಗುವುದು ಸೈನಿಕನ ಮತ್ತು ಆ ದೇಶದ ಜನರ ಮನೋಸ್ಥೈರ್ಯ. ಆಧುನಿಕ ಯುದ್ಧಗಳಲ್ಲಿ ಸೈನಿಕ ಶಕ್ತಿಯ ಅಸಮಾನತೆ ಎಷ್ಟೇ ಇದ್ದರೂ, ಅಂತಿಮವಾಗಿ ಗೆಲ್ಲುವುದು ‘ಆತ್ಮಸ್ಥೈರ್ಯ’ವೇ ಎಂಬ ಭರವಸೆಯನ್ನು ಈ ಸತ್ಯ ನೀಡುತ್ತದೆ.
“ಮನುಷ್ಯ ಏನೂ ಕಂಡುಕೊಂಡಿಲ್ಲ, ಏನೂ ಕಂಡುಹಿಡಿದಿಲ್ಲ. ನಮಗೆ ಏನೂ ಗೊತ್ತಿಲ್ಲ ಅನ್ನುವುದಷ್ಟೇ ನಮಗೆ ಗೊತ್ತಾಗುವುದು. ಅದೇ ಮನುಷ್ಯ ವಿವೇಕದ ಶಿಖರ” (ಪು.519). ಆದರೆ, ಇಂದು ಯುದ್ಧ ನಡೆಸುವ ಯಾವ ದೇಶಕ್ಕೂ ಈ ವಿವೇಕದ ಅರಿವಿಲ್ಲ. ಅರಿವಿದ್ದಿದ್ದರೆ ಅಮೆರಿಕ ಇರಾಕ್, ಅಫ್ಘಾನಿಸ್ತಾನ ಅಥವಾ ವಿಯೆಟ್ನಾಂನಲ್ಲಿ ಅಂತಹ ವಿನಾಶವನ್ನು ತರುತ್ತಿರಲಿಲ್ಲ. ಮುಂದುವರೆದು ಟಾಲ್ಸ್ಟಾಯ್ ಹೇಳುತ್ತಾರೆ: “ಯಾರು ಸಮರ್ಥಿಸಿಕೊಳ್ಳುತ್ತಾರೋ ಅವರು ತಪ್ಪು ಒಪ್ಪಿಕೊಳ್ಳುತ್ತಾರೆ” (ಪು.1117). ಇಂದು ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಮತ್ತು ಅಮೆರಿಕ ಅದಕ್ಕೆ ನೀಡುತ್ತಿರುವ ಬೆಂಬಲವನ್ನು ಸಮರ್ಥಿಸಿಕೊಳ್ಳಲು ಅವರು ನಡೆಸುತ್ತಿರುವ ಸುದ್ದಿಗೋಷ್ಠಿಗಳ ಭಂಗಿ ಹೇಗಿದೆಯೆಂದರೆ— “ತಾನು ಮಾಡಿದ್ದೆ ಸರಿ ಎಂದು ಸಮರ್ಥಿಸಿಕೊಳ್ಳುವ ಸಲುವಾಗಿ ರೇಗಿದ ಮನುಷ್ಯನೊಬ್ಬ ಮಾತು, ಮಾತು, ಮಾತು ಆಡುತ್ತಲೇ ಇರಬೇಕು ಅನ್ನುವಂಥ ಸ್ಥಿತಿ” (ಪು.931). ನೆಪೋಲಿಯನ್ ಕುರಿತ ಟಾಲ್ಸ್ಟಾಯ್ ಅವರ ಈ ಮಾತು ಇಂದಿನ ಯಾವ ರಾಜ್ಯನಾಯಕನಿಗಾದರೂ ಅನ್ವಯಿಸುವಷ್ಟು ಪ್ರಸ್ತುತವಾಗಿದೆ.
“ಯುದ್ಧವನ್ನು ಗೆಲ್ಲುವುದು ವಿಜಯವಲ್ಲ, ಯುದ್ಧದ ಗೆಲುವು ದೇಶವೊಂದರ ವಿಜಯದ ಸೂಚನೆಯೂ ಅಲ್ಲ; ಸೈನ್ಯಗಳು, ಯುದ್ಧಗಳು, ಗೆದ್ದವರು ಜನತೆಯ ವಿಧಿಯನ್ನು ನಿರ್ಣಯಿಸುವುದಿಲ್ಲ, ಜನತೆಯ ವಿಧಿ ನಿರ್ಣಯವಾಗುವುದೇ ತೀರ ಬೇರೆಯ ಕಾರಣದಿಂದ” (ಪು.1521). ಇದು ಟಾಲ್ಸ್ಟಾಯ್ ಅವರ ಅತ್ಯಂತ ಮಹತ್ವದ ಹೇಳಿಕೆ. ಇಸ್ರೇಲ್ ಮಿಲಿಟರಿ ದೃಷ್ಟಿಯಿಂದ ಯುದ್ಧವನ್ನು ಗೆದ್ದರೂ, ನೈತಿಕವಾಗಿ ಹೀನಾಯ ಸೋಲು ಅನುಭವಿಸಬಹುದು. ಅಮೆರಿಕ ವೆನೆಜುವೆಲಾ ಮೇಲೆ ಆರ್ಥಿಕ ಒತ್ತಡ ಹೇರಿ ತಾತ್ಕಾಲಿಕ ಲಾಭ ಪಡೆದರೂ, ದೀರ್ಘಕಾಲದಲ್ಲಿ ಜಾಗತಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದು. ಒಂದು ದೇಶದ ಸೈನ್ಯ ಸೋತ ತಕ್ಷಣ ಆ ದೇಶವೇ ಸೋಲೊಪ್ಪಿಕೊಂಡಂತಲ್ಲ; ಸೇನೆಯು ಸೋತರೂ ಜನತೆಯ ಇಚ್ಛಾಶಕ್ತಿ ಕುಸಿಯದಿದ್ದರೆ ಆ ರಾಷ್ಟ್ರ ಎಂದೂ ಸೋಲುವುದಿಲ್ಲ. ಇರಾನ್ ಅಥವಾ ಪ್ಯಾಲೆಸ್ಟೀನ್ ಜನತೆ ಇಂದಿಗೂ ಮಾನಸಿಕ ಸೋಲನ್ನು ಒಪ್ಪದೇ ಹೋರಾಡುತ್ತಿರುವುದು ಇದೇ ಸತ್ಯಕ್ಕೆ ಸಾಕ್ಷಿಯಾಗಿದೆ.
ಯುದ್ಧದ ಕಾರ್ಮೋಡಗಳ ನಡುವೆ ಸ್ತ್ರೀ ಪಾತ್ರಗಳು ಸಂಘರ್ಷವನ್ನು ಗ್ರಹಿಸುವ ಕ್ರಮವೇ ಅತ್ಯಂತ ತಾತ್ವಿಕ ಮತ್ತು ಭಿನ್ನವಾಗಿದೆ. ಪುರುಷ ಪ್ರಧಾನ ಸಮಾಜವು ಯುದ್ಧವನ್ನು ಶೌರ್ಯ, ಕೀರ್ತಿ ಮತ್ತು ಅಧಿಕಾರದ ಸಂಕೇತವಾಗಿ ಸಂಭ್ರಮಿಸಿದರೆ, ಸ್ತ್ರೀ ಸಂವೇದನೆಯು ಅದನ್ನು ವಿನಾಶ, ಅಸಂಬದ್ಧತೆ ಮತ್ತು ಬದುಕಿನ ಅಣಕವಾಗಿ ನೋಡುತ್ತದೆ. ಕಾದಂಬರಿಯ ಪುಟ್ಟ ರಾಜಕುಮಾರಿ (Little Princess) ಆಡುವ ಮಾತು ಇಡೀ ಸ್ತ್ರೀಕುಲದ ದನಿಯಂತಿದೆ: “ಯುದ್ಧ ಇಲ್ಲದೆ ಬದುಕುವುದಕ್ಕೇ ಆಗುವುದಿಲ್ಲವಲ್ಲಾ ಗಂಡಸರಿಗೆ, ಯಾಕೆ ಅರ್ಥ ಆಗೋದೇ ಇಲ್ಲ? ನನಗಂತೂ ಗೊತ್ತೇ ಆಗಲ್ಲ. ನಮಗೆ, ಹೆಂಗಸರಿಗೆ, ಅದು ಬೇಕು ಅನಿಸುವುದೇ ಇಲ್ಲವಲ್ಲ” (ಪು.35). ಮೂಲತಃ ಮಹಿಳೆಯರಿಗೆ ಬದುಕನ್ನು ಕಟ್ಟುವ ಮತ್ತು ಪೋಷಿಸುವ ‘ಜೀವಪರ ಕಾಳಜಿ’ ಇರುತ್ತದೆ; ಹೀಗಾಗಿ ಯುದ್ಧದಿಂದ ಸಿಗುವ ಕಾಲ್ಪನಿಕ ಲಾಭಗಳಿಗಿಂತ, ಕಳೆದುಕೊಳ್ಳುವ ಸಂಬಂಧಗಳ ಮೌಲ್ಯ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಟಾಲ್ಸ್ಟಾಯ್ ಹೇಳುವಂತೆ, “ಯುದ್ಧಗಳು ಎಲ್ಲಿಯೇ ನಡೆದರೂ ಕಷ್ಟಪಡುವವರು ಮಕ್ಕಳು ಮತ್ತು ಮಹಿಳೆಯರು.” ಇಂದಿನ ಇಸ್ರೇಲ್-ಪ್ಯಾಲೆಸ್ಟೀನ್ ಮತ್ತು ಇರಾನ್ ಯುದ್ಧಗಳಲ್ಲಿ ಅತಿಹೆಚ್ಚು ನರಕಯಾತನೆ ಅನುಭವಿಸುತ್ತಿರುವುದು ಇದೇ ವರ್ಗ. ಪುರುಷರು ಯುದ್ಧರಂಗದಲ್ಲಿ ಮಡಿದರೆ, ಮಹಿಳೆಯರು ಬದುಕಿದ್ದೂ ಸಾಯುವ ಸ್ಥಿತಿಗೆ ತಲುಪುತ್ತಾರೆ.
ಗಂಡಸರ ಯುದ್ಧ ನ್ಯಾಯಶಾಸ್ತ್ರದ ಮೂಲ ತತ್ವಗಳು—ಪ್ರತೀಕಾರ, ಸೇಡು ಮತ್ತು ರಕ್ತ ಹರಿಸುವ ಹಕ್ಕು. ಆದರೆ, ಸ್ತ್ರೀ ಸಹಜವಾದ ಅಂತಃಕರಣವು ಈ ವಿಷವರ್ತುಲವನ್ನು ಮುರಿಯಬಲ್ಲದು. ಇದೇ ಕಾರಣಕ್ಕೆ ಟಾಲ್ಸ್ಟಾಯ್, “ಕ್ಷಮಿಸುವುದು ಹೆಂಗಸರ ದೊಡ್ಡ ಗುಣ” ಎನ್ನುತ್ತಾರೆ. “ಪ್ರೀತಿ ಇಲ್ಲದಿದ್ದಾಗ ನಮ್ಮ ಆತ್ಮ ಮೂರ್ಛೆ ಹೋಗಿರುತ್ತದೆ. ಮಣ್ಣಿನ ಮುದ್ದೆ ಹಾಗಿರುತ್ತೇವೆ. ಪ್ರೀತಿ ಹುಟ್ಟಿತೋ ದೇವವೇ ಆಗಿಬಿಡುತ್ತೇವೆ. ಆಗ ತಾನೇ ಹುಟ್ಟಿದ ಮಗುವಿನ ಹಾಗೆ ಶುದ್ಧವಾಗಿಬಿಡುತ್ತೇವೆ” (ಪು.194). ಆದರೆ ಇಂದಿನ ಜಾಗತಿಕ ಸಂಘರ್ಷಗಳಲ್ಲಿ ಈ ‘ಪ್ರೀತಿ’ ಎಲ್ಲೋ ಕಳೆದುಹೋಗಿದೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಯುದ್ಧದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರದ ಸಭಾಂಗಣಗಳಲ್ಲಿ, ಪ್ರೀತಿ ಮತ್ತು ಕ್ಷಮೆಯನ್ನು ಪ್ರತಿಪಾದಿಸುವ ಈ ‘ತಾಯಿಯ ದನಿ’ ಎಂದಿಗೂ ಕೇಳಿಸುವುದೇ ಇಲ್ಲ.
ಟಾಲ್ಸ್ಟಾಯ್ ಕಾದಂಬರಿಯ ಕೊನೆಯಲ್ಲಿ ಒಂದು ಆಶಾವಾದಿ ದೃಷ್ಟಿಕೋನವನ್ನು ತೆರೆದಿಡುತ್ತಾರೆ: “ಪಿಯರೆ ಕಂಡುಕೊಂಡ ಸುಖದ ಸತ್ಯವೆಂದರೆ— ಮನುಷ್ಯ ಸೃಷ್ಟಿಯಾಗಿರುವುದು ಸಂತೋಷವಾಗಿರಲೆಂದು; ಆ ಸಂತೋಷ ಅವನೊಳಗೇ ಇದೆ; ತೀರ ಸರಳವಾದ ಅಗತ್ಯಗಳು ತೃಪ್ತಿಯಾದರೆ ಮನುಷ್ಯ ಸಂತೋಷವಾಗಿರಬಲ್ಲ” (ಪು.1562). ಯುದ್ಧವಿಲ್ಲದ ಜಗತ್ತಿಗಾಗಿ ಇದು ಸ್ಪಷ್ಟ ದಾರಿ: ಸರಳ ಜೀವನ, ಸಮಾನ ಸಂಪನ್ಮೂಲ, ಪ್ರೀತಿ ಮತ್ತು ಸತ್ಯ. “ಮನುಷ್ಯರು ಅದೇಕೆ ಒಬ್ಬರನ್ನೊಬ್ಬರು ಕೊಂದುಕೊಳ್ಳಲು ಆಸೆಪಡುತ್ತಾರೋ” (ಪು.1026) ಎಂಬ ಪ್ರಶ್ನೆ ಪ್ರತಿಯೊಬ್ಬ ವಿವೇಕಿಯನ್ನೂ ಕಾಡಬೇಕು. “ಯುದ್ಧಗಳೇ ಇಲ್ಲದ ಕಾಲ ಬರುತ್ತದೆಯೇ?” ಎಂಬ ಪ್ರಶ್ನೆಗೆ ಟಾಲ್ಸ್ಟಾಯ್, “ಮನುಷ್ಯರ ಮೈಯಲ್ಲಿರುವ ರಕ್ತವನ್ನೆಲ್ಲ ಬಸಿದು ನೀರು ತುಂಬಿಸಿದರೆ ಯುದ್ಧಗಳು ನಡೆಯುವುದಿಲ್ಲ ಅಷ್ಟೇ” (ಪು.585) ಎಂದು ಕರಾಳ ಹಾಸ್ಯದ ಮೂಲಕ ಉತ್ತರಿಸುತ್ತಾರೆ. ಇದರರ್ಥ, ರಕ್ತದ ಗುಣವೇ ಸಂಘರ್ಷವಾಗಿದ್ದರೂ, ಪ್ರಭುತ್ವಗಳು ಸೃಷ್ಟಿಸುವ ಕೃತಕ ರಾಷ್ಟ್ರೀಯತೆ ಮತ್ತು ಧಾರ್ಮಿಕ ಉನ್ಮಾದಗಳನ್ನು ಮೀರಿ, ಸ್ತ್ರೀ ಸಂವೇದನೆಯು ಬಯಸುವ ಸಹಬಾಳ್ವೆ ಮತ್ತು ಪ್ರೀತಿಯನ್ನು ಅಳವಡಿಸಿಕೊಳ್ಳುವುದೇ ಇಂದಿನ ಜಗತ್ತಿನ ಉಳಿವಿಗಿರುವ ಏಕೈಕ ಮಾರ್ಗ.

ಈ ಸುಳ್ಳುಗಳ ಆಚೆಗೆ ನಿಂತು ನೋಡಿದಾಗ, “ಯುದ್ಧವೆನ್ನುವುದು ಸೌಜನ್ಯವಲ್ಲ, ಬದುಕಿನ ಅತ್ಯಂತ ಘೋರವಾದ ಸಂಗತಿ” (ಪು.1156) ಎಂಬ ಕಟುಸತ್ಯ ದರ್ಶನವಾಗುತ್ತದೆ. ಇಂದಿನ ಸಾಮ್ರಾಜ್ಯಶಾಹಿ ನೀತಿಗಳನ್ನು ನಿರ್ದಾಕ್ಷಿಣ್ಯವಾಗಿ ಬಯಲು ಮಾಡುವ ‘ಯುದ್ಧ ಮತ್ತು ಶಾಂತಿ’, ಕೇವಲ ಒಂದು ಐತಿಹಾಸಿಕ ಕಾದಂಬರಿಯಾಗಿ ಉಳಿಯದೆ, ‘ಯುದ್ಧ ಯಾಕೆ? ಯಾರಿಗಾಗಿ? ಯಾರ ಲಾಭಕ್ಕೆ?’ ಎಂಬ ಇಂದಿಗೂ ಉತ್ತರ ಸಿಗದ ತಾತ್ವಿಕ ಮಹಾಪ್ರಶ್ನೆಯಾಗಿ ಕಾಡುತ್ತದೆ. ಈ ಸಂಕೀರ್ಣತೆಗೆ ಪರಿಹಾರವೂ ಟಾಲ್ಸ್ಟಾಯ್ ಅವರ ಚಿಂತನೆಯಲ್ಲೇ ಇದೆ: “ರಾಜರು, ಮಂತ್ರಿಗಳು, ದಂಡನಾಯಕರು ಇವರನ್ನೆಲ್ಲ ಮರೆತು ಅತ್ಯಂತ ಸೂಕ್ಷ್ಮವಾದ, ಚಿಕ್ಕ ಚಿಕ್ಕ ಘಟನೆಗಳನ್ನು ಪರಿಶೀಲನೆಗೆ ತೆಗೆದುಕೊಂಡು ಒಟ್ಟಾರೆ ಜನಸಮೂಹದ ಚಲನೆಗೆ ಕಾರಣವಾಗುವ ಅಂಶಗಳನ್ನು ಕಂಡುಕೊಳ್ಳಬೇಕು” (ಪು.1224). ಅಂದರೆ, ಟ್ರಂಪ್, ನೆತನ್ಯಾಹು, ಖಮೇನಿ ಅಥವಾ ಮಡೂರೋ ಅವರಂತಹ ನಾಯಕರ ರಾಜಕೀಯ ಆಟಗಳನ್ನು ನೋಡುವ ಬದಲು ಜನಸಾಮಾನ್ಯರ ಕಷ್ಟ, ಬದುಕಿನ ಆಸೆ ಮತ್ತು ಮಕ್ಕಳ ಭವಿಷ್ಯದ ಕನಸುಗಳನ್ನು ಗಮನಿಸಿದರೆ ಶಾಂತಿಯ ದಾರಿ ತಾನಾಗಿಯೇ ಗೋಚರಿಸುತ್ತದೆ.
ಯುದ್ಧದ ಈ ಎಲ್ಲ ಭೀಕರತೆಯ ನಡುವೆಯೂ ಮಾನವೀಯ ಬೆಳವಣಿಗೆಯ ಸಾಧ್ಯತೆಗಳನ್ನು ಟಾಲ್ಸ್ಟಾಯ್ ಎತ್ತಿಹಿಡಿಯುತ್ತಾರೆ. “ಆತ್ಮಜ್ಞಾನವು ಸಾಧ್ಯವಾಗುವುದೇ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದರಿಂದ; ಸ್ವ-ಪರಿಪೂರ್ಣತೆ ಸಾಧ್ಯವಾಗುವುದೇ ಸಂಘರ್ಷದಿಂದ” (ಪು.650). ಇಲ್ಲಿನ ಸಂಘರ್ಷ ಬಾಹ್ಯ ಯುದ್ಧವಲ್ಲ, ಅದು ಅಂತರಂಗದ ಮಥನ. ಈ ಆಂತರಿಕ ಸಂಘರ್ಷಗಳು ನಮ್ಮನ್ನು ನಾವೇ ಕಂಡುಕೊಳ್ಳಲು ದಾರಿಯಾದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಮನುಕುಲ ಅರಿಯಬೇಕಾದ ಅಂತಿಮ ಸತ್ಯವೆಂದರೆ, “ದೇವರನ್ನು ವಿಚಾರದ ಮೂಲಕವಲ್ಲ, ಬದುಕಿನ ಮೂಲಕ ಅರಿಯಬೇಕು” (ಪು.524). ಈ ಮಾತು ಎಲ್ಲ ಧರ್ಮಗಳ, ಎಲ್ಲ ಜನರಿಗೂ ನೀಡುವ ಸಂದೇಶ ಒಂದೇ: ನಿಜವಾದ ಧರ್ಮವಿರುವುದು ಪ್ರಭುತ್ವಗಳು ಸೃಷ್ಟಿಸುವ ಯುದ್ಧದಲ್ಲಿ ಅಲ್ಲ, ಬದಲಾಗಿ ಅದು ಸಹಬಾಳ್ವೆ ಮತ್ತು ಬದುಕಿನ ಸರಳತೆಯಲ್ಲಿದೆ.
ಡಾ. ರವಿ ಎಂ ಸಿದ್ಲಿಪುರ
ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಜನಿವಾರ ವಿವಾದ ಜೋರು; ಶ್ರೇಷ್ಠತೆಯ ವ್ಯಸನದ ಕಾರುಬಾರು


