ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ- 20 | ಮೂರು ನಿಮಿಷಗಳಲ್ಲಿ ಮೂರು ಆ*ತ್ಮಹ*ತ್ಯೆ!

ಅದು 1981 ರ ಅಕ್ಟೋಬರ್‌ ತಿಂಗಳ 20 ನೇ ತಾರೀಕು. ನನಗೆ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ಅದನ್ನು ಮುಗಿಸಿ ಮನೆಗೆ ಮರಳುತ್ತಲೇ, ನಮ್ಮ ನೆರೆಯ ಜೋಸೆಫ್‌ ಡಿಸೋಜರ ಜಮೀನಿನ ಆಚೆಯ ಕಡೆಯಿಂದ ಹೆಂಗಸರ ಆರ್ತನಾದ ಕೇಳಿಸಿತು. ಏನೋ ಅವಘಡ ಸಂಭವಿಸಿದೆ ಎಂಬುದು ಖಾತರಿಯಾಗಿ ತಕ್ಷಣ ಅಲ್ಲಿಗೆ ಓಡಿದೆ. ಅಲ್ಲಿನ ದೃಶ್ಯ ಮಾತ್ರ ಭೀಕರವಾಗಿತ್ತು. ಹೊಸದಾದ ಮನೆಯ ಬಾವಿ ಕಟ್ಟೆಯ ಬಳಿ ಮೂರು ಶವಗಳನ್ನು ಸಾಲಾಗಿ ಇರಿಸಲಾಗಿತ್ತು. ಸಣ್ಣ ಕೂಸು ಸಹಿತವಾದ ಓರ್ವ ಬಾಣಂತಿ ಮತ್ತು ಹದಿಹರೆಯದ ಹುಡುಗಿಯೋರ್ವಳ ಆಕ್ರಂದನ ಕರುಣಾಜನಕವಾಗಿತ್ತು.

ಆ ಮನೆಯ ಯಜಮಾನ ನಿವೃತ್ತ ಪೊಲೀಸ್‌ ಪೇದೆ. ನಿವೃತ್ತಿಯ ಆನಂತರ ಅಲ್ಲಿ ಮನೆ ಕಟ್ಟಿ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಅವರಿಗೆ ನಾಲ್ಕು ಮಂದಿ ಹೆಣ್ಣುಮಕ್ಕಳು. ಓರ್ವ ಮಗಳು ಹಾರಂಗಿ ಅಣೆಕಟ್ಟು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವಳು ಕೆಲಸ ಕಳೆದುಕೊಂಡು ಮನೆಯಲ್ಲಿ ನೆಲೆಸಿದ್ದಳು. ಆ ಯುವತಿಯ ಅಕ್ಕ ಪುತ್ತೂರಿನಲ್ಲಿ ಟೀಚರ್, ರಜೆಯಲ್ಲಿ ಬಂದಿದ್ದಳು. ಮತ್ತೊಬ್ಬಳು ಕಿರಿಯ ಮಗಳು ಕೂಡಾ ಮನೆಯಲ್ಲಿದ್ದಳು.

ಮನೆಯ ಯಜಮಾನನ ಹಿರಿಯ ಮಗಳು ಹೆತ್ತು ಕೆಲವೇ ದಿನಗಳಾಗಿದ್ದವು. ಮಗುವಿಗೆ ನಾಮಕರಣ ಮಾಡುವ ದಿನವದು. ಆ ಮಗುವಿಗೆ ಸೂಕ್ತ ಹೆಸರು ಇರಿಸುವ ಉದ್ದೇಶದಿಂದ ಜೋಯಿಸರನ್ನು ಭೇಟಿಯಾಗಲು ಅವರು ಹೋಗಿದ್ದರು.

ಮನೆಯಲ್ಲಿ ತಾಯಿಗೂ ಹಾರಂಗಿಯಲ್ಲಿದ್ದ ಮಗಳಿಗೂ ಜಗಳವಾಗಿದೆ. ಮಾತು ʼಅನ್ನದಂಡ ಭೂಮಿ ಭಾರʼ ಎಂಬಲ್ಲಿವರೆಗೂ ತಲಪಿತ್ತಂತೆ. ಮೊದಲೇ ಕೆಲಸ ಕಳೆದುಕೊಂಡ ದುಃಖ, ಜತೆಗೆ ಈ ಅವಮಾನದ ಮಾತು. ʼನಾನು ನಿಮಗೆಲ್ಲ ಹೊರೆಯಾಗಿದ್ದೇನಲ್ಲʼ ಎನ್ನುತ್ತಾ ಆಕೆ ಹೊರಬಂದಿದ್ದಾಳೆ. ಬಾಗಿಲು ತೆರೆದರೆ ಕೆಲವೇ ಹೆಜ್ಜೆಗಳ ದೂರದಲ್ಲಿ ಬಾವಿ. ತಕ್ಷಣ ಅದರೊಳಕ್ಕೆ ಜಿಗಿದಿದ್ದಾಳೆ. ಎಷ್ಟಾದರೂ ಮಗಳಲ್ಲವೇ? ನೋಡುತ್ತ ಕೂರಲಾಗುತ್ತದೆಯೇ? ಮಗಳನ್ನು ರಕ್ಷಿಸಲೆಂದು ತಾಯಿ ಕೂಡಾ ಬಾವಿಗೆ ಜಿಗಿದಿದ್ದಾಳೆ. ತಾಯಿ ಮತ್ತು ತಂಗಿ ಬಾವಿಗೆ ಜಿಗಿದುದನ್ನು ಕಂಡು ಅವರನ್ನು ರಕ್ಷಿಸಲೆಂದು ಟೀಚರ್‌ ಮಗಳು ಕೂಡಾ ಜಿಗಿದಿದ್ದಾಳೆ. ಕಂಗೆಟ್ಟ ಬಾಣಂತಿ ಮಗಳು, ಕೆಳಗೆ ಬಿದ್ದವರು ಬದುಕಲಿ ಎಂದೋ ಏನೋ ಬಾವಿಯ ಹಗ್ಗವನ್ನು ತಕ್ಷಣ ಇಳಿಬಿಟ್ಟಿದ್ದಾಳೆ. ಪುಟ್ಟ ಹಸುಳೆಯ ಸೆಳೆತದ ಕಾರಣದಿಂದ ಆಕೆ ಜಿಗಿಯಲಿಲ್ಲ. ಬಾವಿಗೆ ಬಿದ್ದ ಹಗ್ಗವನ್ನು ಕೆಳಗಿದ್ದ ಮೂವರೂ ಹಿಡಿದುಕೊಂಡಿದ್ದಾರೆ. ಅವರು ಬದುಕುವ ಸಾಧ್ಯತೆ ಇತ್ತು. ಆದರೆ ಬಾಣಂತಿ ಅಕ್ಕ ಕೂಡಾ ಬಾವಿಗೆ ಜಿಗಿಯುತ್ತಾಳೇನೋ ಎಂದು ಗಾಬರಿಯಿಂದ ತಪ್ಪು ತಿಳಿದುಕೊಂಡ ಇನ್ನೊಬ್ಬಳು ತಂಗಿ ಬಾಣಂತಿ ಅಕ್ಕನನ್ನು ಹಿಡಿದೆಳೆದಾಗ ಹಗ್ಗ ಸರ್ರನೆ ಬಾವಿಯೊಳಗೆ ಹೋಗಿಬಿಟ್ಟಿದೆ. ಹಗ್ಗ ಹಿಡಿದಿದ್ದ ಮೂವರೂ ಬಾವಿಯಲ್ಲಿ ಮುಳುಗಿದ್ದಾರೆ. ಇವರ ಬೊಬ್ಬೆ ಕೇಳಿ ಅಲ್ಲೇ ಹೋಗುತ್ತಿದ್ದ ದಾರಿಹೋಕನೊಬ್ಬ ಆ ಮೂವರ ಶ*ವಗಳನ್ನೂ ಎತ್ತಿಹಾಕಿ, ಮುಂದೆ ಪೊಲೀಸ್‌ ತನಿಖೆ ಇತ್ಯಾದಿ ಕಿರಿಕಿರಿ ಯಾಕೆ ಎಂದು ಅಲ್ಲಿಂದ ಮಾಯವಾಗಿದ್ದಾನೆ.

ವಿಷಯ ಗೊತ್ತಾಗಿ ಜನ ಸೇರಿದ್ದಾರೆ, ಪೊಲೀಸರು ಬಂದಿದ್ದಾರೆ, ಮಹಜರು ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟಾಗುವಾಗ ಮಗುವಿಗೆ ಹೆಸರು ನಿಶ್ಚಯಿಸಿಕೊಂಡು ಯಜಮಾನ ಮರಳಿದ್ದಾರೆ. ನೋಡುವುದೇನು ಹೆಂಡತಿ ಮತ್ತು ಇಬ್ಬರು ಮಗಳಂದಿರ ಶ*ವ ಅಂಗಳದಲ್ಲಿ! ಅವರ ಎದೆ ಒಡೆಯುವುದೊಂದೇ ಬಾಕಿ. ʼನಾನೂ ಬಾವಿಗೆ ಹಾರುತ್ತೇನೆʼ ಎಂದು ಹೊರಟ ಅವರನ್ನು ಹಿಡಿದು ನಿಲ್ಲಿಸುವುದೇ ಉಳಿದವರಿಗೆ ದೊಡ್ಡ ಸವಾಲಾಯಿತು.

ಮಗುವಿನ ನಾಮಕರಣದ ದಿನದಂದೇ ಮನೆಯಲ್ಲಿ ಮೂರು ಸಾ*ವು ನಡೆದದ್ದು ಎಂತಹ ದುರಂತ! ಭಾರವಾದ ಮನಸಿನೊಂದಿಗೆ ಮನೆಗೆ ಮರಳಿ ಅಮ್ಮನಿಗೆ ವಿಷಯವನ್ನು ವಿವರಿಸಿದೆ.

ಕಾರ್ಕಳದ ಮನೆಯನ್ನು ನೆನಪಿಸಿದಾಗಲೆಲ್ಲ ಕಣ್ಣ ಮುಂದೆ ಬರುವುದು ಇಂತಹ ವಿಷಾದದ ಘಟನೆಗಳೇ. ಅಥವಾ ವಿಷಾದದ ಘಟನೆಗಳು ಮಾತ್ರವೇ ಹೆಚ್ಚಾಗಿ ನೆನಪಿನಲ್ಲಿ ಉಳಿಯುವುದೇ?

ನಾಪತ್ತೆಯಾದ ಜೋಸೆಫ್‌ ಡಿಸೋಜರು!

ನಾವು ಹೊಸದಾಗಿ ಮನೆ ಕಟ್ಟಿದಾಗ ನಮಗೆ ನೀರಿನ ಸೌಲಭ್ಯವಿರಲಿಲ್ಲ. ಅದಕ್ಕೆ ನಾವು ಪಕ್ಕದ ಜೋಸೆಫ್‌ ಡಿಸೋಜರ ಬಾವಿಯನ್ನು ಆಶ್ರಯಿಸಬೇಕಾಗಿತ್ತು. ಆ ಬಾವಿ ವಿಸ್ತಾರವಾಗಿತ್ತು. ಆದರೆ ಅದರಲ್ಲೂ ಬಹಳ ಏನೂ ನೀರಿರಲಿಲ್ಲ. ಬೇಸಗೆಯಲ್ಲಿ ಒಂದೆರಡು ಅಡಿ ಅಷ್ಟೇ ನೀರಿರುತ್ತಿದ್ದುದು.

ಜೋಸೆಫ್‌ ಸೋಜರು ಶ್ರಮಜೀವಿ. ಅಂತಹ ಕಲ್ಲುಭೂಮಿಯಲ್ಲಿಯೂ ಸಣ್ಣ ಮಟ್ಟಿನ ಗದ್ದೆ ವ್ಯವಸಾಯ ಮಾಡಿಕೊಂಡಿದ್ದರು. ಅವರ ಗದ್ದೆಯಲ್ಲಿ ನೇಜಿ ನೆಡುವಾಗ ನಮ್ಮ ಅಮ್ಮ ಕೂಡಾ ಹೋಗಿ, ಆ ಕೆಲಸದಲ್ಲಿ ಅವರಿಗೆ ನೆರವಾಗುತ್ತಿದ್ದರು. ಅವರ ಮನೆಯಲ್ಲಿ ಅವರಲ್ಲದೆ ಇದ್ದುದು ಅವರ ಹೆಂಡತಿ ಮತ್ತು ಸಣ್ಣ ವಯಸಿನ ಮಗ.

1980ರ ಫೆಬ್ರವರಿ 29 ರ ರಾತ್ರಿ. ಮನೆಯಲ್ಲಿ ಮಲಗಿದ್ದ ಜೋಸೆಫ್‌ ಡಿಸೋಜರು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಬೆಳಗಾಗುವಾಗ ಎಲ್ಲೆಲ್ಲೂ ಸುದ್ದಿ ಸೋಜರು ಇಲ್ಲವಂತೆ! ಬಾವಿಯ ಹಗ್ಗವೂ ಇಲ್ಲವಾಗಿತ್ತು. ಹಾಗಾಗಿ, ಎಲ್ಲಾದರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಊಹೆಗಳೂ ಹರಡತೊಡಗಿದವು. ಅದರ ಜತೆಯಲ್ಲಿ ಸಹಜವಾಗಿ ಅಕ್ರಮ ಸಂಬಂಧದ ಕತೆಗಳೂ ಸೃಷ್ಟಿಯಾದವು.

ಪೊಲೀಸರು ಬಂದರು. ನಾವು ಅವರ ಜತೆಯಲ್ಲಿ ಹೋಗಿ ಕಗ್ಗಲ್ಲಿನ ಬೆಟ್ಟ ಬೆರ್ಮರ ಪಾದೆಯ ಮೇಲೆ, ಸುತ್ತ ಮುತ್ತ ಎಲ್ಲ ಹುಡುಕಿದೆವು. ಸೋಜರು ಸಿಗಲಿಲ್ಲ. ಒಂದು ದಿನವಾಯಿತು, ಎರಡು ದಿನವಾಯಿತು, ಒಂಬತ್ತು ದಿನ ಕಳೆದುಹೋಯಿತು. ಹತ್ತನೇ ದಿನ ಅಂದರೆ ಮಾರ್ಚ್‌ 12, 1980 ರಂದು ಒಂದು ಸುದ್ದಿಬಂತು. ಬೆರ್ಮರ ಪಾದೆಯ ಮಗ್ಗುಲಲ್ಲಿ ಶವ ಸಿಕ್ಕಿದೆ; ಹದ್ದುಗಳು ಹಾರಾಡುತ್ತಿದ್ದುದರಿಂದ ವಿಷಯ ಬೆಳಕಿಗೆ ಬಂತು!

ಪೊಲೀಸರು ಬಂದು ತನಿಖೆ ಶುರುಮಾಡಿದರು. ವಿಚಾರಣೆಗಾಗಿ ನಮ್ಮ ಅಪ್ಪನನ್ನೂ ಕರೆದರು. ಜೋಸೆಫ್‌ ರ ಮನೆಯವರು ಪ್ರಭಾವಿಗಳಲ್ಲ. ಹಾಗಾಗಿ ತನಿಖೆ ಬಹಳ ಮುಂದೆ ಹೋಗಲಿಲ್ಲ. ಕೊನೆಗೂ ಉಳಿದುಕೊಂಡ ಪ್ರಶ್ನೆ ಎಂದರೆ, ಜೋಸೆಫ್‌ ರು ಆತ್ಮಹತ್ಯೆ ಮಾಡಿಕೊಂಡರೇ? ಮಾಡಿಕೊಂಡದ್ದು ಹೌದಾದರೆ ಎಲ್ಲಿ? ನಾವೆಲ್ಲರೂ ಅಲ್ಲಿನ ಮೂಲೆ ಮೂಲೆಯನ್ನೂ ಹುಡುಕಿದ್ದೆವಲ್ಲ, ಆಗ ಶವ ಯಾಕೆ ಸಿಗಲಿಲ್ಲ? ಅಪಹರಿಸಿ ಕೊಲೆ ಮಾಡಿದ್ದಿರಬಹುದೇ? ಹೌದಾದರೆ, ಅದನ್ನು ಮಾಡಿದ್ದು ಯಾರು? ಅಷ್ಟು ದಿನ ಜೋಸೆಫರನ್ನು ಜೀವಂತವಾಗಿಯೋ ಕೊಂದೋ ಎಲ್ಲಿ ಇರಿಸಿದ್ದರು? ಅಂತೂ ಇಂತೂ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ಸಿಗಲಿಲ್ಲ. ಜೋಸೆಫ್‌ ಡಿಸೋಜರ ಸಾವಿನ ಘಟನೆ ಕೊನೆಗೂ ರಹಸ್ಯವಾಗಿಯೇ ಉಳಿಯಿತು.

ಮರಳಿದ್ದು ಹೆಣವಾಗಿ

ನಾವು ಕೊಂಡುಕೊಂಡ ಆಸ್ತಿ ಮೂಲತಃ ನಮ್ಮ ಜಮೀನಿನ ಸರಹದ್ದಿನಲ್ಲಿ ನೈಋತ್ಯಕ್ಕಿರುವ ಜಿನರಾಜ ಕಡಂಬರದಾಗಿತ್ತಂತೆ. ಅದು ಗುತ್ತಿನ ಮನೆ. ಜೈನರ ಗುತ್ತಿನ ಮನೆಯೊಂದು ಸಾಮಾನ್ಯವಾಗಿ ಹೇಗಿರುತ್ತದೆ ಎಂಬುದಕ್ಕೆ ಉದಾಹರಣೆಯಂತಿತ್ತು ಅದು. ಸದಾ ನೀರು ತುಳುಕುವ ಬಾವಿ, ಫಲವತ್ತಾದ ಬಾಕ್ಯಾರು ಗದ್ದೆ, ಭವ್ಯವಾದ ಪಾರಂಪರಿಕ ಶೈಲಿಯ ಮನೆ, ಹೊರಬಾಗಿಲು ದಾಟಿ ಒಳ ಹೋದರೆ ಮಧ್ಯದಲ್ಲಿ ಒಂದು ಅಂಗಳ, ಮುಂಭಾಗದಲ್ಲಿ ವಿಶಾಲವಾದ ಹಜಾರ, ಅದನ್ನು ದಾಟಿದರೆ ಅಡುಗೆ ಕೋಣೆ, ಪಡಸಾಲೆ, ಮೇಲೊಂದು ಪುಟ್ಟ ಮಹಡಿ. ಅವರಲ್ಲಿ ದೈವಗಳಿದ್ದವು ಮತ್ತು ಅವುಗಳಿಗೆ ಕೋಲವೂ ಸಂದಾಯವಾಗುತ್ತಿತ್ತು. ಜಿನರಾಜರಿಗೆ ಮೂವರು ಮಗಂದಿರು, ಮೂವರು ಮಗಳಂದಿರು. ಹಿರಿಯ ಮಗಳು ಪ್ರೇಮ ಮತ್ತು ಕಿರಿಯ ಮಗಳು ಹೇಮ. ಮನೆಯ ಯಜಮಾನಿ ತೀರಿಕೊಂಡ ಮೇಲೆ ಮನೆಯ ಯಜಮಾನನ ಬೇಜವಾಬ್ದಾರಿಯ ಕಾರಣ ಮನೆ ಪಾಳು ಬಿದ್ದಂತಿತ್ತು.

ಮನೆ ಪಾಳುಬಿದ್ದಂತಿದ್ದರೂ, ಊಟಕ್ಕೂ ತತ್ವಾರದಂತಹ ಪರಿಸ್ಥಿತಿ ಇದ್ದರೂ, ಪ್ರೇಮ ಮತ್ತು ಹೇಮ ಜೋಡಿಹಕ್ಕಿಗಳಂತೆ ಆ ಮನೆಯಲ್ಲಿ ಖುಷಿಖುಷಿಯಲ್ಲಿದ್ದರು, ಸಾಧ್ಯವಾದಷ್ಟು ಮಟ್ಟಿಗೆ ಹಬ್ಬಹರಿದಿನಗಳ ಸಹಿತ ಮನೆತನದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಹಿರಿಯ ಮಗಳು ಪ್ರೇಮ ಮದುವೆಯ ವಯಸಿಗೆ ಬಂದಿದ್ದರೂ ಆಕೆಯ ಮದುವೆ ಮಾಡಿಸುವವರು ಯಾರೂ ಇರಲಿಲ್ಲ. ಆಕೆಗೆ ಮದುವೆಯಾಗಿ ಗಂಡನ ಮನೆಗೆ ಹೋಗುವ ದೊಡ್ಡ ಕನಸಿತ್ತು.

ಹೀಗಿರುತ್ತಾ ಒಂದು ದಿನ ಆಕೆಗೆ ಜ್ವರ ಶುರುವಾಯಿತು. ಆಕೆಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಹಾಕಿದರು. ಮನೆಯಲ್ಲಿ ಕೇಳಿದರೆ, ʼಈವತ್ತು ಬರುತ್ತಾಳೆ, ನಾಳೆ ಬರುತ್ತಾಳೆʼ ಎಂಬ ಉತ್ತರಗಳೇ ಸಿಗುತ್ತಿದ್ದವು. ಕೊನೆಗೊಂದು ದಿನ (17.7.1981) ಆಕೆ ಬಂದುದು ಶವವಾಗಿ. ನಮ್ಮ ಅಪ್ಪನಿಗೆ ಅವರೊಂದಿಗೆ ಸರಿ ಇಲ್ಲವಾಗಿ ಮಾತು ಬಿಟ್ಟಿದ್ದರೂ, ಅಂಬುಲೆನ್ಸ್‌ ನಿಂದ ಇಳಿಸುವಾಗ ಶವಕ್ಕೆ ಹೆಗಲು ಕೊಟ್ಟರು.

ಅಕ್ಕ ಇಲ್ಲವಾದ ಮೇಲೆ ಆ ಭೂತಬಂಗಲೆಯಂತಹ ಮನೆಯಲ್ಲಿ ತಂಗಿ ಹೇಮಳ ಸ್ಥಿತಿ ಹೇಗಿರಬಹುದು. ಆಘಾತದಿಂದ ಆಕೆ ಮಾನಸಿಕ ಸಮಸ್ಯೆಗೆ ತುತ್ತಾದಳು. ಇದರ ವೈಜ್ಞಾನಿಕ ಕಾರಣ ಪತ್ತೆ ಹಚ್ಚುವ ಬದಲು ಇದನ್ನು ದೈವದ ಕೋಪಕ್ಕೆ ಜೋಡಿಸಿದರು. ಕೊನೆಗೊಂದು ದಿನ ಇದೇ ಕಾರಣಕ್ಕೆ ಅಲ್ಲಿ ಭೂತದ ಕೋಲ ನಡೆಸುವುದೆಂದಾಯಿತು. ಅಲ್ಲಿಗೆ ನಾನೂ ಹೋಗಿದ್ದೆ. ಸರ್ವಾಲಂಕೃತಳಾಗಿದ್ದ ಹೇಮಳ ಮುಂದೆ ದೈವದ ಪಾತ್ರಿ ನಿಂತುಕೊಂಡ. ತಕ್ಷಣ ದೈವ ಬಂದುದು ಹೇಮಳ ಮೇಲೆ. ಕ್ಷಣ ಮಾತ್ರದಲ್ಲಿ ಆಕೆ ತನ್ನ ಜಡೆ ಬಿಚ್ಚಿ, ಎಲ್ಲ ಅಲಂಕಾರ ಕಿತ್ತು ಹಾಕಿಕೊಂಡು ಭಯಾನಕ ರೂಪದಲ್ಲಿ ದೈವದ ಪಾತ್ರಿಯನ್ನು ಅಣಕಿಸತೊಡಗಿದಳು. ಪಾತ್ರಿಯ ಮೈಮೇಲೆ ದೈವ ಬರಲಿಲ್ಲ. ಕೊನೆಗೆ ಆಕೆಯ ಮೂಲಕ ಒಂದು ಎಳನೀರು ಕೊಡಿಸುತ್ತಲೇ ಪಾತ್ರಿಯ ಮೇಲೆ ದೈವ ಬಂತು. ಕೋಲ ಮುಂದುವರಿಯಿತು.

ಆಕೆ ಯಾಕೆ ಹಾಗೆ ವರ್ತಿಸಿದಳು? ಇದರಲ್ಲಿ ಯಾವುದು ಸತ್ಯ ಯಾವುದು ಅಸತ್ಯ?, ಯಾವುದು ವಿಜ್ಞಾನ ಯಾವುದು ಅವಿಜ್ಞಾನ? ನನ್ನ ಕಣ್ಣ ಮುಂದೆಯೇ ನಡೆದ ಘಟನೆ, ಹಾಗಾಗಿ ಇಂದಿಗೂ ಅದು ನನಗೆ ಅರ್ಥವಾಗಿಲ್ಲ.

ಅಮ್ಮನಿಗೆ ಫಿಟ್ಸ್

ಆಗಿನ ಕಾಲದ ಗಂಡ ಹೆಂಡಿರ ಸಂಬಂಧ, ಹೆಂಡತಿಯ ಬಗೆಗಿನ ಗಂಡನ ಕಾಳಜಿ ಹೇಗಿತ್ತು ನೋಡಿ. ಅದು 1981 ರ ಜುಲೈ 18. ನಡುಮನೆಯಲ್ಲಿ ಮಲಗಿದ್ದ ಅಮ್ಮ ವಿಚಿತ್ರವಾಗಿ ನರಳ ತೊಡಗಿದರು. ಇದು ಮೊದಲು ತಿಳಿದುದು ಅಪ್ಪನಿಗೆ. ಆಕೆಯನ್ನು ಉಪಚರಿಸುವ ಬದಲು ಅವರು ಬಂದು ನನ್ನಲ್ಲಿ ‌ʼನೋಡು ನಿನ್ನ ಅಮ್ಮನಿಗೆ ಏನೋ ಆಗಿದೆʼ ಎಂದರು. ನಾನು ನೋಡುವಾಗ ಅಮ್ಮ ಪ್ರಜ್ಞಾಹೀನ ಸ್ಥಿತಿಯಿಂದ ಮಾಮೂಲು ಸ್ಥಿತಿಗೆ ಮರಳಿದ್ದರು. ಆದರೆ ನಾಲಿಗೆ ಇಡೀ ನೋವು. ಹಲ್ಲಿನಿಂದ ಕಚ್ಚಿ ನಾಲಿಗೆಯಲ್ಲಿ ಗಾಯಗಳಾಗಿದ್ದವು.

ಮಾರನೇ ದಿನ ನಮ್ಮ ಕುಟುಂಬ ವೈದ್ಯ ಸಾಲ್ಮರದ ಡಾ ಉದಯಕುಮಾರ್‌ ಅವರ ಬಳಿಗೆ ಹೋಗಿ ವಿಷಯ ತಿಳಿಸಿದೆ. ಅವರು ಮನೆಗೆ ಬಂದು ಅಮ್ಮನನ್ನು ಪರೀಕ್ಷಿಸಿದರು. ʼಇದು ಫಿಟ್ಸ್‌ ಇರುವ ಸಾಧ್ಯತೆ ಹೆಚ್ಚು. ಮುಂದೊಮ್ಮೆ ಬಂದರೆ ಸರಿಯಾಗಿ ಗಮನಿಸಿʼ ಎಂದು ಹೇಳಿದರು. ಅಮ್ಮನಿಗೆ ಫಿಟ್ಸ್‌ ಮಾತ್ರೆ ಶುರುವಾಯಿತು. ಅಮ್ಮ ಸರಿಯಾಗಿ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲವೋ ಏನೋ, ಫಿಟ್ಸ್‌ ಅಪರೂಪಕ್ಕೊಮ್ಮೆ ಮರುಕಳಿಸುತ್ತಿತ್ತು. ಇದು ಗಂಭೀರ ತೊಂದರೆ ಮಾಡುತ್ತಿರಲಿಲ್ಲವಾದರೂ ಫಿಟ್ಸ್‌ ಬಂದು ಹೋದ ಆನಂತರ ನಾಲಿಗೆಯ ಗಾಯದಿಂದ ಅವರಿಗೆ ಊಟ ಮಾಡಲು ಆಗುತ್ತಿರಲಿಲ್ಲ.

ಅಣ್ಣ ಮನೆಬಿಟ್ಟು ಹೊರಟುಹೋದ

ಕಿರಿಯ ಅಣ್ಣ ಉಮೇಶ ಪಿಯುಸಿ, ಡಿಎಂಸಿ ಅಧ್ಯಯನ ಮುಗಿಸಿ ಮನೆಯಲ್ಲಿದ್ದ. ಆದರೆ ಆತ ಸೋಮಾರಿಯಾಗಿರಲಿಲ್ಲ. ಒಂದೆಡೆ ಖಾಯಂ ಉದ್ಯೋಗಕ್ಕೆ ಯತ್ನಿಸುತ್ತಲೇ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಅಷ್ಟಿಷ್ಟು ಸಂಪಾದಿಸುತ್ತಿದ್ದ. ಆ ದಿನಗಳಲ್ಲಿ ಆತ ಸಾಣೂರಿನ ರೈಸ್‌ ಮಿಲ್‌ ನ ಮಾಲೀಕರ ಅಂಗಡಿಯಲ್ಲಿ ದಿನಸಿ ಸಾಮಾನು ಮಾರುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಧಣಿಗಳೊಂದಿಗೆ ಸರಿಬರದೆ ಕೆಲಸ ಬಿಟ್ಟು ಮನೆಯಲ್ಲಿ ಉಳಿದುಕೊಂಡಿದ್ದ.

ಅದು 1979 ರ ಸೆಪ್ಟೆಂಬರ್‌ 9. ಹೊಸ ಮನೆಯಲ್ಲಿ ಒಕ್ಕಲಾಗಿ ಸರಿಯಾಗಿ ಮೂರು ತಿಂಗಳಾಗಿತ್ತು. ತಂಗಿ ಹೇಮಳಿಗೆ ಬಯ್ದನೆಂಬ ಕಾರಣದಿಂದ ಅಪ್ಪನಿಗೂ ಅಣ್ಣನಿಗೂ ಜಗಳವಾಯಿತು. ಜಗಳ ತಾರಕಕ್ಕೇರಿ ʼನೀನು ತಕ್ಷಣ ಮನೆಬಿಟ್ಟು ಹೋಗುʼ ಎಂದು ಅಪ್ಪ ಅಣ್ಣನನ್ನು ದೂಡಿದರು. ಆತ ಕದಲದೆ ಅಲ್ಲೇ ನಿಂತುಕೊಂಡ. 22 ರ ಗಟ್ಟಿಯುವಕನಲ್ಲವೇ? ಅಪ್ಪನಿಗೆ ಅಲುಗಾಡಿಸಲಾಗಲಿಲ್ಲ. ಅವಮಾನದಿಂದ ಅಪ್ಪನ ಸಿಟ್ಟು ಇನ್ನೂ ಏರಿತು. ಮದ್ದುಗುಂಡು ತುಂಬಿಸಿ ಸಿದ್ಧವಾಗಿದ್ದ ಕೋವಿಯನ್ನು ಹಿಡಿದು ತಂದು ಅಣ್ಣನಿಗೆ ಗುರಿಹಿಡಿದರು. ಇಷ್ಟು ಹೊತ್ತು ಸುಮ್ಮನಿದ್ದ ನಾನು, ಇನ್ನೂ ಸುಮ್ಮನಿದ್ದರೆ ಏನಾದರೂ ಅನಾಹುತವಾಗುವುದು ಖಂಡಿತಾ ಎಂಬುದು ಅರಿವಾಗಿ, ಹೋಗಿ ಅಪ್ಪನ ಕೈಯಿಂದ ಕೋವಿ ಕಿತ್ತು ಅಟ್ಟಕ್ಕೆಸೆದೆ. ಅಣ್ಣನ ಜೀವ ಉಳಿಯಿತು.

ಆದರೆ ಆತನ ಸ್ವಾಭಿಮಾನಕ್ಕೆ ಭಾರೀ ಪೆಟ್ಟುಬಿದ್ದಿತು. ಮನೆಬಿಟ್ಟು ಹೋಗಲು ಆದೇಶವಾಗಿದೆಯಲ್ಲವೇ? ಉಟ್ಟಬಟ್ಟೆಯಲ್ಲಿಯೇ ಅಣ್ಣ ಹೊರಟುಹೋದ. ನಮ್ಮೆಲ್ಲರ ಕಣ್ಣಿನಲ್ಲೂ ನೀರು. ʼಎಲ್ಲಿಗೆ ಹೋಗುತ್ತಾನೆ ಎಂದು ಕೇಳುʼ ಎಂದು ಅಳುತ್ತಲೇ ಅಮ್ಮ ನನ್ನನ್ನು ಕಳಿಸಿದರು. ಶಂಕರಭಟ್ಟರ ಮನೆಗೆ ಹೋಗಿದ್ದ ಅವ ಮಧ್ಯಾಹ್ನದ ಮೇಲೆ ಮನೆಗೆ ಬಂದ. ತನ್ನ ಬಟ್ಟೆಬರೆ ಕಟ್ಟಿಕೊಂಡು, ಕೇವಲ ಎರಡು ರುಪಾಯಿ ಹಿಡಿದುಕೊಂಡು ಹೊರಟೇ ಹೋದ. ಅವನನ್ನು ಹಿಂಬಾಲಿಸಿಕೊಂಡು ಹೋದ ನನ್ನಲ್ಲಿ ʼಶಂಕರನಾರಾಯಣಕ್ಕೆ ಹೋಗುತ್ತೇನೆʼ ಎಂದ (ಅಲ್ಲಿ ನನ್ನ ಹಿರಿಯ ಅಣ್ಣ ಸುಬ್ರಹ್ಮಣ್ಯ ತಾತ್ಕಾಲಿಕ ನೌಕರಿಯೊಂದರಲ್ಲಿದ್ದ).

ಮನೆಬಿಟ್ಟು ಹೋಗು ಎಂದು ಸಿಟ್ಟಿನ ಭರದಲ್ಲಿ ಅಪ್ಪ ಹೇಳಿದ್ದರೇನೋ ನಿಜ. ಆದರೆ ಎಷ್ಟಾದರೂ ಮಗನಲ್ಲವೇ? ಎಲ್ಲಿಗೆ ಹೋಗಿದ್ದಾನೆ ಎಂದು ಅವರು ನಮ್ಮಲ್ಲಿ ಆಗಾಗ ಕೇಳತೊಡಗಿದರು. ʼನೀವೇ ಅಲ್ಲವೇ ಹೋಗು ಎಂದು ಹೇಳಿದ್ದು? ಈಗ ಯಾಕೆ ಕೇಳುವುದು?ʼ ಎಂದು ಮರುಪ್ರಶ್ನೆ ಹಾಕಿ ನಮಗೇನೂ ಗೊತ್ತಿಲ್ಲ ಎಂಬಂತೆ ನಟಿಸಿದೆವು.

ವಾರದ ಆನಂತರ ನಾನು ಶಂಕರನಾರಾಯಣಕ್ಕೆ ಹೋದೆ. ಉಮೇಶ ಸುಳ್ಯ ಜಾಲ್ಸೂರು ಪಂಜಿಕಲ್ಲಿನ ನಮ್ಮ ಸೋದರ ಮಾವನ ಮನೆಗೆ ಹೋದ ಎಂದು ಅಣ್ಣ ತಿಳಿಸಿದ. ಅಲ್ಲಿ ಆಗ ಚುನಾವಣಾ ಸಮಯ. ಅಣ್ಣ ಚಿತ್ರಕಲಾವಿದನಲ್ಲವೇ? ಚುನಾವಣಾ ಬ್ಯಾನರ್‌ ಬರೆಯುವ ಕೆಲಸ ಮಾಡಿ ಒಂದಿಷ್ಟು ಸಂಪಾದಿಸಿದ. ಬಳಿಕ ಸುಳ್ಯದ ಚೇತನಾ ಆರ್ಟ್ಸ್‌ ನಲ್ಲಿ ಪೇಂಟರ್‌ ಆಗಿ ಸೇರಿಕೊಂಡ. ರಿಕ್ಷಾದ ನಂಬರ್‌ ಪ್ಲೇಟ್‌ ಬರೆಯುವುದು ಇತ್ಯಾದಿ ಆತನ ಕೆಲಸ.

ಆಗುವುದೆಲ್ಲ ಒಳ್ಳೆಯದಕ್ಕೇ ಎಂಬ ಮಾತೇ ಇದೆಯಲ್ಲ? ಉಮೇಶನ ಬದುಕಿನಲ್ಲಿಯೂ ಹಾಗೆಯೇ ಆಯಿತು. ಇಲ್ಲಿಂದ ಮುಂದೆ ಆತನ ಬದುಕು ಉಜ್ವಲವಾಗುತ್ತಾ ಹೋಯಿತು. ಮುಂದೆ ಕೊಡಗಿನ ಹುದಿಕೇರಿ ಶಾಲೆಯಲ್ಲಿ ಡ್ರಾಯಿಂಗ್ ಮಾಸ್ತರಿಕೆಯ ಖಾಯಂ ಕೆಲಸ ಆತನಿಗೆ ದೊರೆಯಿತು.

ಹನ್ನೊಂದು ತಿಂಗಳು ಸಂಬಳ ಇಲ್ಲ

ಮನೆ ಒಕ್ಕಲಾದ 1979 ನೇ ಇಸವಿ ಹೇಗೋ ಹೋಗಿ 1980 ಬಂತು. ಅದು ಒಂದು ರೀತಿಯಲ್ಲಿ ನಮ್ಮ ಪಾಲಿಗೆ ಕೆಟ್ಟ ವರ್ಷ. ಅಪ್ಪ ಸ್ಪೆಶಲ್‌ ಡ್ಯೂಟಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ಯಾಂಕ್ಶನ್‌ ಇದ್ದಾಗ ಮಾತ್ರ ನಿಯಮಿತವಾಗಿ ಸಂಬಳ. 1980 ರ ಮೇ ತಿಂಗಳ ಸುಮಾರಿಗೆ ಅಪ್ಪನ ಸಂಬಳ ನಿಂತುಹೋಯಿತು. ಇಡೀ ಕುಟುಂಬ ಒಬ್ಬನ ಸಂಬಳ ನಂಬಿಕೊಂಡಿದ್ದಾಗ ಪರಿಸ್ಥಿತಿ ಏನಾಗಬಹುದು ಊಹಿಸಿ. ಬೇರೆ ಯಾವ ಆರ್ಥಿಕ ಮೂಲಗಳೂ ಇಲ್ಲ. ಸಂಬಳ ಈ ತಿಂಗಳು ಬಂದೀತು ಮುಂದಿನ ತಿಂಗಳು ಬಂದೀತು ಎಂದು ಕಾಯುವುದು ನಮ್ಮ ಕೆಲಸವಾಗಿತ್ತು.

ಯಾರೆಲ್ಲ ಕೊಟ್ಟಾರೋ ಅವರಲ್ಲೆಲ್ಲ ಅಪ್ಪ ಸಾಲ ಮಾಡತೊಡಗಿದರು. ಶಿರ್ವ ಶಿವಣ್ಣ ಶೆಟ್ಟರು, ಮರಿಯಣ್ಣ ಭಟ್ಟರು ನಮ್ಮ ಕೈಬಿಡಲಿಲ್ಲ. ಕಾರ್ಕಳ ಜೋಡುರಸ್ತೆಯ ಸುಬ್ರಾಯ ಶಾನುಭಾಗರ ದಿನಸಿ ಅಂಗಡಿಯಿಂದ ಕಡ ರೂಪದಲ್ಲಿ ಸಾಮಾನು ತರತೊಡಗಿದೆವು. ಅಲ್ಲಿಂದ ಸಾಮಾನು ತರುವುದು ನನ್ನ ಕೆಲಸ. ಒಂದೆರಡು ತಿಂಗಳ ಬಳಿಕ ಅವರ ವರ್ತನೆ ಅಸಹನೆಯ ರೂಪವನ್ನು ಪಡೆದುದು ನನಗೆ ತಿಳಿಯ ತೊಡಗಿತು. ಆದರೆ ಅವಮಾನಗಳ ನಡುವೆಯೂ ಅವರಲ್ಲಿ ಬೇಡಿ ತಾರದೆ ನಮಗೆ ಬೇರೆ ದಾರಿಯಿರಲಿಲ್ಲ. ಹೀಗೆಯೇ ಎಂಟೊಂಬತ್ತು ತಿಂಗಳು ಕಳೆದುಹೋದವು.

ನಾನು ಪದವಿ ಓದುತ್ತಿದ್ದೆ. ಅಣ್ಣ ಆಗಾಗ ನೂರು ರುಪಾಯಿ ಕಳುಹಿಸಿಕೊಡುತ್ತಿದ್ದುದರಿಂದ ನನ್ನ ಓದಿಗೆ ಸ್ವಲ್ಪ ಅನುಕೂಲವಾಗಿತ್ತು. ಅಪ್ಪನ ಸಂಬಳ ಬರುವ ಯಾವ ಸೂಚನೆಯೂ ಕಾಣುತ್ತಿಲ್ಲ. ನಾವು ಕನ್ಸರ್ವೇಟರ್‌ ಆಫ್‌ ಫಾರೆಸ್ಟ್‌ ರಿಗೆ ಪತ್ರ ಬರೆದೆವು, ಟೆಲಿಗ್ರಾಂ ಕೊಟ್ಟೆವು, ಫಲವಿಲ್ಲ. ಆಗ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಆರ್‌ ಗುಂಡೂರಾವ್.‌ ಒಂದು ದಿನ ನಮ್ಮ ಕಷ್ಟ ಹೇಳಿಕೊಂಡು ಗುಂಡೂರಾಯರಿಗೆ ಒಂದು ಪೋಸ್ಟ್‌ ಕಾರ್ಡ್‌ ನಲ್ಲಿ ಪತ್ರ ಬರೆದೆ. ʼನಿಮ್ಮ ಪತ್ರವನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ತಲಪಿಸಲಾಗಿದೆʼ ಎಂದು ಮುಖ್ಯಮಂತ್ರಿ ಕಚೇರಿಯಿಂದ ನನಗೆ ಪತ್ರ ಬಂತು. ಆದರೂ ಸಂಬಳ ಬರಲಿಲ್ಲ. ಕೊನೆಯ ದಾರಿಯಾಗಿ 1981 ರ ಮೇ ತಿಂಗಳಲ್ಲಿ ʼಹನ್ನೊಂದು ತಿಂಗಳಿಂದ ಸಂಬಳವಿಲ್ಲʼ ಎಂಬ ಶೀರ್ಷಿಕೆಯಲ್ಲಿ ಉದಯವಾಣಿ ದೂರುಗಂಟೆಗೆ ಪತ್ರ ಬರೆದೆ. ಆಗ ಉದಯವಾಣಿಯ ದೂರುಗಂಟೆಯಲ್ಲಿ ಪ್ರಕಟವಾಗುವ ಪತ್ರಗಳನ್ನು ಸರಕಾರಿ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಉದಯವಾಣಿಯಲ್ಲಿ ನನ್ನ ಪತ್ರ ಪ್ರಕಟವಾದ ಕೇವಲ 1 ತಿಂಗಳಲ್ಲಿ (8.6.1981) ಅಪ್ಪನ ಹನ್ನೊಂದು ತಿಂಗಳ ಸಂಬಳ, ಒಟ್ಟು 5000 ರುಪಾಯಿ ಒಮ್ಮೆಲೇ ಬಿಡುಗಡೆಯಾಯಿತು. ಇದಕ್ಕೆ ಕಾರಣ ಉದಯವಾಣಿಯಲ್ಲಿ ನನ್ನ ಪತ್ರವೋ ಅಥವಾ ಕೇವಲ ಕಾಕತಾಳೀಯವೋ ತಿಳಿಯದು. ಒಟ್ಟಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಅಪ್ಪ ಮೂಡಬಿದಿರೆಗೆ ಹೋಗಿ ಸಂಬಳ ತಂದರು. ಸುಬ್ರಾಯ ಶಾನುಭಾಗರಿಗೆ ಹನ್ನೊಂದು ತಿಂಗಳಿಂದ ಬಾಕಿ ಇದ್ದ 1175 ರುಪಾಯಿ ಸಾಲ ತೀರಿಸಿದೆವು (ಅದು ಈಗಿನ ಬೆಲೆಯಲ್ಲಿ ಎಷ್ಟು ದೊಡ್ಡ ಮೊತ್ತವಾಗಿರಬಹುದು ಊಹಿಸಿ. ಆಗ ಒಂದು ಕಿಲೋ ಅಕ್ಕಿಯ ಧಾರಣೆ 2.40 ರುಪಾಯಿ). ʼಬಾ ಮಂಗಳೂರಿಗೆ ಹೋಗೋಣʼ ಎಂದು ಅಪ್ಪ ಹೇಳಿದರು. ಅಪ್ಪನ ಮಂಗಳೂರು ಎಂದರೆ ಹಂಪನಕಟ್ಟೆಯ ಬಸ್ ಸ್ಟ್ಯಾಂಡ್‌ ಮತ್ತು ಅದಕ್ಕೆ ತಾಗಿಕೊಂಡಂತಿದ್ದ ಲಿಬರ್ಟಿ ಸ್ಟೋರ್ಸ್‌, ವಾಮನ ನಾಯಕ್‌ ವಾಚಿನ ಅಂಗಡಿ ಇಷ್ಟೇ. ಅಪ್ಪ ನನ್ನನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಮೊದಲಬಾರಿಗೆ ಒಂದು ವಾಚ್‌ ಕೊಡಿಸಿದರು; ಎಚ್‌ ಎಂ ಟಿ ವಿಜಯ್‌ (272 ರುಪಾಯಿ). ಒಂದು ಫಿಲಿಪ್ಸ್‌ ರೇಡಿಯೋ (375 ರುಪಾಯಿ) ಖರೀದಿಸಿ ಮನೆಗೆ ಮರಳಿದೆವು.

ಹೀಗೆ, ಕೊನೆಗೂ ಹನ್ನೊಂದು ತಿಂಗಳ ಯಾತನೆಗೆ ಮುಕ್ತಿ ಸಿಕ್ಕಿತು.

(ಮುಂದುವರಿಯುವುದು…)

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- http://ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ 19 | ಸ್ವಂತದೊಂದು ಮನೆಯ ಮಾಡಿ… https://kannadaplanet.com/thats-a-big-story-autobiography-series-19/

More articles

Latest article

Most read