ಚೆನ್ನೈ : ದ್ರಾವಿಡ ರಾಜ್ಯ ತಮಿಳುನಾಡಿನ ಚುನಾವಣೆ ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಏ.23 ರಂದು ಮತದಾನ ನಡೆದು, ಮುಂದಿನ ಐದು ವರ್ಷಗಳಿಗೆ ಯಾರು ಅಧಿಕಾರದಲ್ಲಿರಬೇಕು ಎಂದು ಮತದಾರ ನಿರ್ಧರಿಸಲಿದ್ದಾನೆ.
ದೇಶದ ರಾಜಕಾರಣದಲ್ಲಿ ತಮಿಳುನಾಡು ಮೊದಲಿನಿಂದಲೂ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಇಲ್ಲಿ ರಾಷ್ಟ್ರೀಯ ಪ್ರಕ್ಷಗಳಿಗೆ ಪ್ರವೇಶ ಇಲ್ಲ. ಡಿಎಂಕೆ ಮತ್ತು ಎಐಡಿಎಂಕೆ ಎರಡೂ ಪಕ್ಷಗಳು ಅಧಿಕಾರವನ್ನು ಹಂಚಿಕೊಂಡೇ ಬಂದಿವೆ. ಆ ಮಟ್ಟಿಗೆ ತಮಿಳುನಾಡು ಮತದಾರ ಇನ್ನೂ ಸ್ಥಳೀಯ ಸೊಗಡಿನ ಪಕ್ಷಗಳನ್ನೇ ಕಾಪಾಡಿಕೊಂಡು ಬಂದಿದ್ದಾನೆ. ಆದರೆ, ಈ ಬಾರಿ ವಿಶೇಷ ಎಂದರೆ ಡಿಎಂಕೆ ಮತ್ತು ಎಐಡಿಎಂಕೆ ರಾಷ್ಟ್ರೀಯ ಪಕ್ಷಗಳ ಮೈತ್ರಿ ಮಾಡಿಕೊಂಡಿವೆ.
ತಮಿಳುನಾಡಿನ ಒಟ್ಟು ಕ್ಷೇತ್ರ 234 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಒಂದೇ ಹಂತದಲ್ಲಿ ಮತದಾ ನಡೆಯಲಿದೆ. ಮೇಲ್ನೋಟಕ್ಕೆ ಡಿಎಂಕೆ ಮತ್ತು ಎಐಡಿಎಂಕೆ ಮೈತ್ರಿಕೂಟದ ಮಧ್ಯೆ ನೇರ ಹಣಾಹಣಿ ಇದ್ದರೂ ಸಹ ಈ ಬಾರಿ ತಟ ವಿಜಯ್ ನೇತೃತ್ವದ ಮಿಳಗ ವೆಟ್ರಿ ಕಳಗಂ ಸ್ಪರ್ಧೆ ಗಮನಾರ್ಹ. ಮುಖ್ಯವಾಗಿ ಯುವ ಸಮುದಾಯವನ್ನು ಸೆಳೆದಿರುವ ವಿಜಯ್ ಅದನ್ನು ಮತವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬುದನ್ನು ಕಾದು ನೋಡಬೇಕು.
ಸಿಎಂ ಸ್ಥಾನದ ಆಕಾಂಕ್ಷಿಗಳಿವರು: ತಮಿಳುನಾಡು ಹಾಲಿ ಮುಖ್ಯಮಂತ್ರಿ, ಡಿಎಂಕೆ ಹಿರಿಯ ನೇತಾರ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. 2021ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಅವರು ಈ ಬಾರಿ ತಮ್ಮದೇ ವರ್ಚಸ್ಸು ಉಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ತಮಿಳು ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ. ಚೆನ್ನೈ ಮೇಯರ್ ಆಗಿ, 8 ಬಾರಿ ಶಾಸಕರಾಗಿ ಅವರು ಕೆಲಸ ಮಾಡಿದವರು. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಡಿಎಂಕೆಯನ್ನು ಮತ್ತೆ ಗೆಲ್ಲಿಸುವ ಭರವಸೆಯೊಂದಿಗೆ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಎಐಡಿಎಂಕೆ ವತಿಯಿಂದ ಎಡಪ್ಪಾಡಿ ಕೆ. ಪಳನಿಸ್ವಾಮಿ ಸಹ ಮತ್ತೊಮ್ಮೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಜಯಲಲಿತಾ ನಿಧನಾನಂತರ ಪನ್ನೀರಸೆಲ್ವಂ ಜತೆಜತೆಗೇ ಅಣ್ಣಾ ಡಿಎಂಕೆ ನೇತೃತ್ವ ವಹಿಸಿಕೊಂಡ ನಾಯಕ ಇವರು. 2017ರಿಂದ 21ರವರೆಗೆ ಸಿಎಂ ಆಗಿದ್ದರು. ಪ್ರಸ್ತುತ ವಿರೋಧ ಪಕ್ಷದ ನಾಯಕ. ಈಗ ತವರು ಕ್ಷೇತ್ರವಾದ ಎಡಪ್ಪಾಡಿಯಿಂದ ಸ್ಪರ್ಧಿಸಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಪಳನಿಸ್ವಾಮಿ 1989ರಿಂದ ಈ ಕ್ಷೇತ್ರವನ್ನು ಹಲವು ಬಾರಿ ಗೆದ್ದಿದ್ದಾರೆ.
ವಿಜಯ್ ಇದೇ ಮೊದಲ ಬಾರಿ ರಾಜಕೀಯ ಪಕ್ಷ ಪ್ರವೇಶಿಸಿ ಟಿವಿಕೆ ಪಕ್ಷ ಸ್ಥಾಪಿಸಿದವರು. ಸಿಎಂ ಆಗುವ ಆಸೆ ಹೊಂದಿರುವ ಅವರು ಮೊದಲ ಬಾರಿಯೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ತಮ್ಮನ್ನು ತಾವು ತಮಿಳುನಾಡಿನ ಹಾಲಿ ರಾಜಕಾರಣಿಗಳಿಗೆ ಪರ್ಯಾಯ ನಾಯಕ ಎಂದು ಬಿಂಬಿಸಿಕೊಂಡಿದ್ದಾರೆ. ಪ್ರಸ್ತುತ ಪೆರಂಬೂರು ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ತಮಿಳುನಾಡಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾನಕ್ಕೂ ಮೊದಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮಾಡಿತ್ತು. ಅಂತಿಮ ಪಟ್ಟಿಯಲ್ಲಿ5.67 ಕೋಟಿಗೂ ಅಧಿಕ ಮತದಾರರ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ತಮಿಳುನಾಡು ಮತದಾರರ ವಿವರ:
ಒಟ್ಟು ಮತದಾರರು: 5,67,07,380
ಪುರುಷರು: 2,77,38,925
ಮಹಿಳೆಯರು: 2,89,60,838
ತೃತೀಯ ಲಿಂಗಿಗಳು: 7,617

