ನವದೆಹಲಿ, ಏಪ್ರಿಲ್ 10: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದ ಬಳಿಕ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಕೆಲವು ವಾಣಿಜ್ಯ ಹಡಗುಗಳಿಂದ ದುಬಾರಿ ಟೋಲ್ ವಸೂಲಿ ಮಾಡುತ್ತಿದೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಮುಖ್ಯವಾದ ತೈಲ ಸಾಗಣೆ ಮಾರ್ಗವಾಗಿದೆ. ಇಲ್ಲಿ ಪ್ರಪಂಚದ ಐದನೇ ಒಂದು ಭಾಗದಷ್ಟು ತೈಲ ಸಾಗಣೆ ನಡೆಯುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಬಲಪಡಿಸುವ ಉದ್ದೇಶದಿಂದ ಈ ಶುಲ್ಕ ವಿಧಿಸುತ್ತಿದೆ ಎಂದು ಇರಾನಿಯನ್ ಸಂಸತ್ ಸದಸ್ಯ ಅಲಾದ್ದೀನ್ ಬೊರೌಜೆರ್ಡಿ ಹೇಳಿದ್ದಾರೆ.
ಇರಾನ್ ಸೇನೆಯೊಂದಿಗೆ ಸಮನ್ವಯ ಮಾಡಿಕೊಂಡು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಮಾತ್ರ ಹಡಗುಗಳಿಗೆ ಸುರಕ್ಷಿತ ಮಾರ್ಗ ನೀಡುತ್ತಿದೆ. ಇತ್ತೀಚೆಗೆ ಇರಾನ್ ಎರಡು ಸುರಕ್ಷಿತ ಮಾರ್ಗಗಳನ್ನು ಪ್ರಕಟಿಸಿದೆ. ಆದರೆ ಜಲಸಂಧಿ ಇನ್ನೂ ಪೂರ್ಣವಾಗಿ ತೆರೆದಿಲ್ಲ. ಹಡಗುಗಳ ಸಂಖ್ಯೆ ಯುದ್ಧಕ್ಕೂ ಮುಂಚಿನ ಮಟ್ಟಕ್ಕಿಂತ ಬಹಳ ಕಡಿಮೆಯಾಗಿದೆ.
ಭಾರತೀಯ ಧ್ವಜ ಹೊತ್ತ ಎಂಟು ಎಲ್‌ಪಿಜಿ ಟ್ಯಾಂಕರ್‌ಗಳು ಈ ಮಾರ್ಗವನ್ನು ದಾಟಿವೆ ಎಂದು ವರದಿಯಾಗಿದೆ. ಇರಾನ್ ಭಾರತವನ್ನು ‘ಸ್ನೇಹಿತ ದೇಶ’ ಎಂದು ಪರಿಗಣಿಸಿ ಸುರಕ್ಷಿತ ಮಾರ್ಗ ನೀಡಿದೆ ಎಂದು ತಿಳಿದುಬಂದಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಟೋಲ್ ಅಥವಾ ಶುಲ್ಕದ ಬಗ್ಗೆ ಇರಾನ್‌ನೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಭಾರತೀಯ ಹಡಗುಗಳು ಯಾವುದೇ ಶುಲ್ಕ ಪಾವತಿಸಿಲ್ಲ.” ಎಂದು ಭಾರತ ಸರ್ಕಾರ ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ವತಂತ್ರ ಮತ್ತು ಸುರಕ್ಷಿತ ಪಯಣ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಭಾರತ ತನ್ನ 90% ತೈಲ ಮತ್ತು ಗ್ಯಾಸ್ ಆಮದನ್ನು ಪಶ್ಚಿಮ ಏಷ್ಯಾದಿಂದಲೇ ಪಡೆಯುತ್ತದೆ. ಇದರಲ್ಲಿ ಹೆಚ್ಚಿನ ಭಾಗ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಈ ಉದ್ವಿಗ್ನತೆಯಿಂದಾಗಿ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಪ್ರಮಾಣ ಕುಸಿದಿದ್ದು, ಗ್ರಾಹಕರು ಪರದಾಡುವಂತಾಗಿದೆ. ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಮೂರರಿಂದ ನಾಲ್ಕು ಪಟ್ಟು ಏರಿವೆ.
ಇರಾನ್ ಈ ಶುಲ್ಕ ವಿಧಿಸುವುದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಯುರೋಪಿಯನ್ ಯೂನಿಯನ್ ವಿರೋಧಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ನ ಈ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ತೆರಳುವ ವಾಣಿಜ್ಯ ಹಡಗುಗಳಿಗೆ ತಲಾ 2 ಮಿಲಿಯನ್ ಡಾಲರ್ (ಸುಮಾರು 18.5 ಕೋಟಿ ರೂಪಾಯಿ) ಸುಂಕ ವಿಧಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ಇರಾನ್ ಸಂಸತ್ ಸದಸ್ಯ ಅಲಾದ್ಧೀನ್ ಬೊರೌಜೆರ್ಡಿ ಹೇಳಿಕೆ ನೀಡಿದ್ದು, ಈ 2 ಮಿಲಿಯನ್ ಡಾಲರ್ ಶುಲ್ಕ ವಸೂಲಿ ಇರಾನ್‌ನ ಬಲವನ್ನು ತೋರಿಸುತ್ತದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸರ್ಕಾರದ ಹಿಡಿತದಲ್ಲಿರುವ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಹೇಳಿದ್ದಾರೆ.

