ಇಸ್ಲಾಮಾಬಾದ್/ಬೀಜಿಂಗ್/ನವದೆಹಲಿ, ಏಪ್ರಿಲ್ 8: ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಪಾಕಿಸ್ತಾನ ಒಂದು ಭಯೋತ್ಪಾದನಾ ರಾಷ್ಟ್ರ” ಎಂದು ಟೀಕಿಸುತ್ತಿದ್ದರು. ಆದರೆ ಇಂದು ಅದೇ ಪಾಕಿಸ್ತಾನ ದೇಶ ಅಮೆರಿಕ-ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮಕ್ಕೆ ಮುಖ್ಯ ಸಂಧಾನಕಾರನಾಗಿ ಹೊರಹೊಮ್ಮಿದೆ. ಶುಕ್ರವಾರ (ಏಪ್ರಿಲ್ 10) ಇಸ್ಲಾಮಾಬಾದ್ನಲ್ಲಿ ಮಾತುಕತೆಗಳು ಆರಂಭವಾಗುತ್ತಿವೆ. ಆದರೆ ಈ “ಪಾಕಿಸ್ತಾನಿ ಜಯ”ದ ಹಿಂದೆ ನಿಜವಾದ ಆರ್ಕಿಟೆಕ್ಟ್ ಯಾರು? ಪಾಕಿಸ್ತಾನಕ್ಕೆ ಈ ಶಕ್ತಿ ಎಲ್ಲಿಂದ ಬಂತು ಎಂಬ ಚರ್ಚೆಗಳು ಆರಂಭವಾಗಿವೆ.
ಪಾಕಿಸ್ತಾನ ಮಧ್ಯಸ್ಥಿಕೆದಾರನಾಗಿ ತೋರಿಸಿಕೊಳ್ಳುತ್ತಿದ್ದರೂ, ಅದರ ಹಿಂದೆ ನಿಂತಿರುವುದು ಬಲಾಢ್ಯ ಚೀನಾ. ಪಾಕಿಸ್ತಾನವನ್ನು ಮುಂಚೂಣಿಗೆ ತಳ್ಳಿರುವ ಚೀನಾ ಹಿಂದಿನಿಂದ ತಂತ್ರ ನಡೆಸುತ್ತಿದೆ. ಇದು ಕೇವಲ ಶಾಂತಿ ಸಂಧಾನವಲ್ಲ, ಚೀನಾದ ಜಾಗತಿಕ ಶಕ್ತಿ ಪ್ರದರ್ಶನದ ಒಂದು ಮಾಸ್ಟರ್ ಪ್ಲ್ಯಾನ್.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳನ್ನು ಇಸ್ಲಾಮಾಬಾದ್ಗೆ ಆಹ್ವಾನಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಅವರು ತೋಳಿನ ಮೂಳೆ ಬಿರುಕು ಬಿಟ್ಟಿದ್ದರೂ ಬೀಜಿಂಗ್ಗೆ ತುರ್ತು ಭೇಟಿ ನೀಡಿ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆ ಸಭೆಯ ನಂತರ ಪಾಕಿಸ್ತಾನ-ಚೀನಾ ಜಂಟಿ ಐದು ಅಂಶಗಳ ಶಾಂತಿ ಯೋಜನೆ ಸಿದ್ಧವಾಯಿತು. ತಕ್ಷಣದ ಕದನ ವಿರಾಮ, ಶಾಂತಿ ಮಾತುಕತೆಗಳು, ನಾಗರಿಕರ ರಕ್ಷಣೆ, ಹಾರ್ಮುಜ್ ಕಾಲುವೆಯಲ್ಲಿ ಸುರಕ್ಷಿತ ಸಾಗಣೆ ಮತ್ತು ಯುಎನ್ (UN) ಚೌಕಟ್ಟಿನಲ್ಲಿ ಒಪ್ಪಂದ – ಇವು ಪಾಕಿಸ್ತಾನ-ಚೀನಾ ನಡುವಿನ ಮಾತುಕತೆಗಳ ಸಾರಾಂಶ.
ಇದಾದ ತರುವಾಯ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವ್ ನಿಂಗ್, “ಯುದ್ಧ ವಿರಾಮ ಜಾರಿಗೆ ತರುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಪಾಕಿಸ್ತಾನವು ಈ ಪ್ರಕ್ರಿಯೆಯಲ್ಲಿ ಮುಂದುವರಿಯಲಿ ಎಂದು ನಾವು ಬಯಸುತ್ತೇವೆ” ಎಂದು ಹೇಳಿದರು.
ಚೀನಾ ವಿಶ್ವದ ಅತಿ ದೊಡ್ಡ ತೈಲ ಆಮದುದಾರ ದೇಶ. ಹಾರ್ಮುಜ್ ಕಾಲುವೆ ಮುಚ್ಚಿದರೆ ಅದರ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಇರಾನ್ ತೈಲದ ಅತಿ ದೊಡ್ಡ ಗ್ರಾಹಕ ಚೀನಾ. ಆದ್ದರಿಂದ ಬೀಜಿಂಗ್ ನೇರವಾಗಿ ಮಧ್ಯವರ್ತಿಯಾಗುವ ಬದಲು ಪಾಕಿಸ್ತಾನವನ್ನು “ಮುಖ”ವಾಗಿ ಬಳಸುತ್ತಿದೆ. ಚೀನಾ-ಪಾಕಿಸ್ತಾನ ಆಪ್ತ ಮಿತ್ರ ರಾಷ್ಟ್ರಗಳು. CPEC (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಮೂಲಕ ಚೀನಾ ಪಾಕಿಸ್ತಾನದಲ್ಲಿ ವ್ಯಾಪಕವಾದ ಹೂಡಿಕೆ ಮಾಡಿದೆ. ಹೀಗಾಗಿ ಪಾಕಿಸ್ತಾನವನ್ನು ಚೀನಾ ಮುಂದಿಟ್ಟುಕೊಂಡು ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದ ಉಪಾಧ್ಯಕ್ಷ ಮತ್ತು ಇರಾನ್ ವಿದೇಶಾಂಗ ಸಚಿವರೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದು, ಇದಕ್ಕೆ ಚೀನಾದ ಬೆಂಬಲವಿರುವುದು ಸ್ಪಷ್ಟ. ತಾನು ಈ ಸಂಘರ್ಷದಲ್ಲಿ ತಟಸ್ಥವಾಗಿದ್ದೇನೆ ಎಂದು ತೋರಿಸಿಕೊಳ್ಳುತ್ತಲೇ ಇರಾನ್ ಪರವಾಗಿ ಲಾಬಿ ನಡೆಸುವುದು ಚೀನಾದ ತಂತ್ರ. ಅದು ಬಹುತೇಕ ಯಶಸ್ವಿಯೂ ಆಗುತ್ತಿದೆ.
ಭಾರತ ಯಾಕೆ ಈ ಅವಕಾಶವನ್ನು ಕಳೆದುಕೊಂಡಿತು?
ಭಾರತವು ಅಧಿಕೃತವಾಗಿ ತಟಸ್ಥ ಎಂದು ಹೇಳಿಕೊಂಡರೂ, ಅದರ ನಿಲುವು ಅಮೆರಿಕ-ಇಸ್ರೇಲ್-ಗಲ್ಫ್ ರಾಷ್ಟ್ರಗಳ ಕಡೆ ಒಲಿದಿದೆ. QUAD, ಇಸ್ರೇಲ್ನೊಂದಿಗಿನ ರಕ್ಷಣಾ ಒಡಂಬಡಿಕೆಗಳು, ಮಧ್ಯಪ್ರಾಚ್ಯದಲ್ಲಿ ಭಾರತದ ಆರ್ಥಿಕ ಹಿತಾಸಕ್ತಿ – ಇವು ಇರಾನ್ ಜೊತೆ ನೇರವಾಗಿ ಗುರುತಿಸಿಕೊಳ್ಳಲು ಅಡ್ಡಿಯಾದವು.
ಯುದ್ಧಪೂರ್ವದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ಮಾಡಿ ಆ ದೇಶಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಕೂಡ ಭಾರತ ಪ್ರಭಾವಶಾಲಿ ಸಂಧಾನಕಾರನಾಗುವ ಅವಕಾಶವನ್ನು ತಪ್ಪಿಸಿತು. ಇರಾನ್ ದಾಳಿಗಳನ್ನು ಖಂಡಿಸುತ್ತಲೇ ಅಮೆರಿಕ-ಇಸ್ರೇಲ್ ದಾಳಿಗಳ ಬಗ್ಗೆ ಮೌನ ವಹಿಸಿದ್ದು ಇದಕ್ಕೆ ಸಾಕ್ಷಿ. ಭಾರತ ಇರಾನ್ನ ಪ್ರಾಚೀನ ಮಿತ್ರನಾಗಿದ್ದರೂ, ಇರಾನ್ನಲ್ಲಿ ತನ್ನ ಹಿತಾಸಕ್ತಿಗಾಗಿ ಚಾಬಹಾರ್ ಬಂದರು ಹೊಂದಿದ್ದರೂ, ಅಮೆರಿಕದ ನಿರ್ಬಂಧಗಳ ಒತ್ತಡದಿಂದಾಗಿ ತಟಸ್ಥ ನೀತಿ ಕಾಯ್ದುಕೊಳ್ಳಲು ವಿಫಲವಾಯಿತು.
ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಪಾಕಿಸ್ತಾನ ರಾಜತಾಂತ್ರಿಕ ಗೆಲುವನ್ನು ಪಡೆದುಕೊಂಡಂತಾಗಿದೆ. ಆದರೆ ಅಷ್ಟೇ ಅಲ್ಲದೆ ಚೀನಾದ “ಸ್ಮಾರ್ಟ್ ಪವರ್” ಪ್ರದರ್ಶನವನ್ನೂ ಇದರ ಹಿನ್ನೆಲೆಯಲ್ಲಿ ನಾವು ಗಮನಿಸಬಹುದಾಗಿದೆ. ಬೀಜಿಂಗ್ ಪಾಕಿಸ್ತಾನವನ್ನು ಮುಂಚೂಣಿಗೆ ತಳ್ಳಿ ತನ್ನ ತೈಲ ಸುರಕ್ಷತೆ, ಮಧ್ಯಪ್ರಾಚ್ಯದಲ್ಲಿ ಪ್ರಭಾವ ಹೆಚ್ಚಿಸುವುದು ಮತ್ತು ಅಮೆರಿಕದ ಏಕಪಕ್ಷೀಯತೆಯನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ.
ಇರಾನ್ನ 10 ಅಂಶಗಳ ಪ್ರಸ್ತಾಪವನ್ನು ಅಮೆರಿಕ ಮಾತುಕತೆಗೆ ಒಪ್ಪಿಕೊಂಡಿರುವುದು ಈ ಚೀನಾ-ಪಾಕಿಸ್ತಾನ ಸಂಯೋಜನೆಯ ರಣತಂತ್ರದ ಗೆಲುವು ಕೂಡ ಆಗಿದೆ. ಭಾರತಕ್ಕೆ ಇದು ದೊಡ್ಡ ರಾಜತಾಂತ್ರಿಕ ಹೊಡೆತ. ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ “ಶಾಂತಿ ರಾಯಭಾರಿ” ಎಂದು ಚಿತ್ರಣಗೊಳ್ಳುತ್ತಿರುವುದು ಭಾರತದ ವಿದೇಶಾಂಗ ನೀತಿಗೆ ದೊಡ್ಡ ಪ್ರಶ್ನೆಗಳನ್ನು ಎತ್ತುವಂತಾಗಿದೆ. ಅಷ್ಟೇ ಯಾಕೆ, ಭಾರತದ ಶತ್ರು ದೇಶಗಳೆಂದೇ ಬಿಂಬಿತವಾಗಿರುವ ಚೀನಾ ಮತ್ತು ಪಾಕಿಸ್ತಾನ ಮತ್ತಷ್ಟು ಹತ್ತಿರವಾಗುತ್ತಿರುವುದು ಕೂಡ ಭಾರತಕ್ಕೆ ಆತಂಕಕಾರಿ ಸಂಗತಿಯೇ ಆಗಿದೆ.

