ಎಚ್ಚೆಮ್ ಪೆರ್ನಾಲರಿಗೆ 2025 ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವು ಅವರ ಸಾಹಿತ್ಯ ವಿಮರ್ಶೆ ’ರುಪಾಂ ಆನಿ ರೂಪಕಾಂ’ ಕೃತಿಗೆ ದೊರೆತದ್ದು ನಮಗೆ ಅತೀ ಹೆಚ್ಚಿನ ಸಂತಸವನ್ನು ತಂದಿದೆ. ಈ ಗೌರವ ಒಬ್ಬ ಸಾಹಿತಿ ಮತ್ತು ಆತನ ಕೃತಿಗೆ ಸಿಕ್ಕ ಗೌರವ ಎನ್ನುವುದಕ್ಕಿಂತಲೂ ಒಂದು ಭಾಷೆಯ ಎಚ್ಚರದ ಪ್ರಜ್ಞೆಗೆ ಸಿಕ್ಕ ಗೌರವವೆಂದೇ ನಾನು ತಿಳಿದುಕೊಳ್ಳುವೆ – ವಿಲ್ಸನ್ ಕಟೀಲ್, ಕೊಂಕಣಿ ಹಾಗೂ ಕನ್ನಡದ ಕವಿ
ಅದು 2003-04 ರ ಇಸವಿ. ಕೊಂಕಣಿಯಲ್ಲಿ ನಾನು ಬರೆಯಲು ಶುರು ಮಾಡಿದ ಕಾಲವದು. ’ರಾಕ್ಣೊ’ ಕೊಂಕಣಿ ಪತ್ರಿಕೆಯಲ್ಲಿ ನನ್ನ ಕವಿತೆಗಳ ಜೊತೆಗೆ ಇನ್ನೊಬ್ಬರ ಕವಿತೆಗಳು ಪ್ರಕಟವಾಗುತ್ತಿದ್ದವು. ಕವಿತೆಗಳ ಕೆಳಗೆ ’ಎಚ್ಚೆಮ್ ಪೆರ್ನಾಲ್’ ಎಂದು ಕವಿಯ ಹೆಸರಿರುತಿತ್ತು. ಈ ಕವಿತೆಗಳು ತುಂಬಾ ಇಷ್ಟವಾಗುತ್ತಿದ್ದವು, ಕಾಡುತ್ತಿದ್ದವು. ಕ್ರಮೇಣ ಈ ಕವಿತೆಗಳ ಮೋಹದಲ್ಲಿ ಬಿದ್ದೆ. ಕೊಂಕಣಿಯ ಇನ್ನೊಂದು ಪತ್ರಿಕೆ ’ಮಿತ್ರ್’ ಪತ್ರಿಕೆಯಲ್ಲಿ ’ಪಡ್ ಬಿಂಬ್’ ಎಂಬ ಹೆಸರಿನ ಅವರ ಅಂಕಣವೂ ಪ್ರಕಟವಾಗುತ್ತಿತ್ತು. ಕೊಂಕಣಿಯ ಸಾಧಾರಣ ಬರಹಕ್ಕಿಂತ ಹೆಚ್ಚು ತೀವ್ರತೆಯಿಂದ ಕೂಡಿದ, ಹೆಚ್ಚು ಸ್ಪಷ್ಟತೆಯಿಂದ ಕೂಡಿದ, ವಿಮರ್ಶಾತ್ಮಕ, ಚಿಕಿತ್ಸಕ ದೃಷ್ಟಿಯಿಂದ ಕೂಡಿದ ಆ ಅಂಕಣ ಓದಲು ’ಮಿತ್ರ್’ ಪತ್ರಿಕೆ ಮನೆಗೆ ಬರಲು ಕಾಯುತ್ತಿದ್ದೆ. ಇಂತಹ ಕವಿತೆಗಳನ್ನು, ಲೇಖನಗಳನ್ನು ಬರೆಯುವ ಎಚ್ಚೆಮ್ ಪೆರ್ನಾಲ್ ಅಂದರೆ ಯಾರು ಎಂದು ಹುಡುಕಾಟ ಶುರು ಮಾಡಿದೆ. ಈ ಬಗ್ಗೆ ’ರಾಕ್ಣೊ’ ಪತ್ರಿಕೆಯ ಸಹಸಂಪಾದಕರನ್ನು ವಿಚಾರಿಸಿದಾಗ “ಅವರು ಮುಂಬಯಿಯಲ್ಲಿದ್ದಾರೆ. ಯಾವತ್ತೋ ಒಂದಿನ ಅವರು ಕೆಲವು ಕವಿತೆಗಳ ಗುಚ್ಛವನ್ನು ಕೊಟ್ಟಿದ್ದರು. ಅದರಲ್ಲಿ ಹುಡುಕಿ ನಾವೀಗ ಪ್ರಕಟ ಮಾಡುತ್ತಿದ್ದೇವೆ.” ಎಂಬ ಉತ್ತರ ಬಂತು. ಜೊತೆಗೆ ಮುಂಬಯಿಯ ಅವರ ಲ್ಯಾಂಡ್ ಲೈನ್ ಫೋನ್ ನಂಬರ್ ಸಿಕ್ಕಿತು. ಅಪರೂಪಕ್ಕೊಮ್ಮೆ ಅವರೊಡನೆ ಮಾತಾಡುತ್ತಿದ್ದೆ. ಮುಂಬೈಯಲ್ಲಿ ಭಾರಿ ನೆರೆ ಬಂದಾಗ, ಬಹುಷಃ 2007 ರಲ್ಲಿ ಅವರು ಮುಂಬೈ ತ್ಯಜಿಸಿ ಮಂಗಳೂರಿನಲ್ಲಿ ಮನೆ ಮಾಡಿಕೊಂಡರು. ಇದರ ನಂತರ ನಮ್ಮ ಪರಿಚಯ-ಸ್ನೇಹ ಗಾಢವಾಯಿತು.


ಇವರ ಮನೆಯೇ ಒಂದು ಸಾಹಿತ್ಯಿಕ, ವೈಚಾರಿಕ ಕೇಂದ್ರವಾಗಿತ್ತು. ಐದಾರು ಗೆಳೆಯರು ಆಗಾಗ ಇವರ ಮನೆಯಲ್ಲಿ ಜೊತೆ ಸೇರಿ ಭಾಷೆ, ಸಾಹಿತ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ನಾನಂತೂ ಇಲ್ಲಿನ ಖಾಯಂ ಸದಸ್ಯನಾಗಿದ್ದೆ.
ಲಂಕೇಶ್, ಬೋದಿಲೇರ್, ತಿರುಮಲೇಶ್, ಎಚ್ ಎಸ್. ಶಿವಪ್ರಕಾಶ್, ಕೆ ಎಸ್. ನ., ಆಲನಹಳ್ಳಿ ಕೃಷ್ಣ, ದೇವನೂರ ಮಹಾದೇವ ಮುಂತಾದವರ ಸಾಹಿತ್ಯದ ಬಗ್ಗೆ ಅವರಿಗೆ ಅಪಾರ ಜ್ಞಾನವಿತ್ತು. ಇದನ್ನು ನಮ್ಮಂತಹ ಯುವ ಬರಹಗಾರರೊಂದಿಗೆ ಹಂಚಿಕೊಳ್ಳುತ್ತಿದ್ದರು. ಮಾತ್ರವಲ್ಲ ನಮಗೆ ಅವರ ಸಾಹಿತ್ಯದ ರುಚಿ ಹಚ್ಚಿಸುತ್ತಿದ್ದರು. ಬರೀ ಸಾಹಿತ್ಯ ಓದುವುದು ಮಾತ್ರವಲ್ಲ, ಓದುವಾಗ ಇರಬೇಕಾದ ಎಚ್ಚರದ ಬಗ್ಗೆ, ಗಮನಿಸಬೇಕಾದ ಸೂಕ್ಷ್ಮತೆಗಳ ಬಗ್ಗೆ ಉದಾಹರಣೆ ಸಮೇತ ವಿವರಿಸುತ್ತಿದ್ದರು. ಇದಕ್ಕೂ ತುಂಬಾ ವರ್ಷಗಳ ಮುಂಚೆಯೇ ಎಚ್ಚೆಮ್ ಪೆರ್ನಾಲರ ಬರಹಗಳು ಕನ್ನಡದ ಪ್ರಸಿದ್ಧ ಪತ್ರಿಕೆಗಳಾದ ’ಶೂದ್ರ’, ’ಸಂಕ್ರಮಣ’ ಮುಂತಾದ ಪತ್ರಿಕೆಗಳಲ್ಲಿ ಬೆಳಕನ್ನು ಕಂಡಿದ್ದವು. ನನ್ನಂತಹ ಹಲವು ಬರಹಗಾರರ ಮೇಲೆ ಎಚ್ಚೆಮ್ ಪೆರ್ನಾಲದ ಪ್ರಭಾವ ಇದೆ. ಯುವಬರಹಗಾರರನ್ನು ಪ್ರೋತ್ಸಾಹಿಸಲು ಎಚ್ಚೆಮ್ ಪೆರ್ನಾಲರು ಇಟ್ಟ ಮುಖ್ಯ ಹೆಜ್ಜೆ – ಕಿಟಾಳ್ ಯುವ ಸಾಹಿತ್ಯ ಪುರಸ್ಕಾರ. ಕೊಂಕಣಿಯ ಬಹುತೇಕ ಪುರಸ್ಕಾರಗಳು ’ಸೀನಿಯರ್ ಸಿಟಿಜನ್ ಕೋಟಾ’ ಆದಂತಹ ಸಮಯದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸಬೇಕು, ಅವರನ್ನೂ ಸಮಾಜ ಗುರುತಿಸಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟು ’ಲಿಯೋ ರೊಡ್ರಿಗಸ್ ಕಿಟಾಳ್ ಯುವ ಪುರಸ್ಕಾರ’ವನ್ನು ಶುರು ಮಾಡಿದರು. ಇದುವರೆಗೆ ಹಲವು ಯುವ ಸಾಹಿತಿಗಳನ್ನು ಈ ಪುರಸ್ಕಾರ ಗುರುತಿಸಿದೆ ಹಾಗೂ ಪುರಸ್ಕರಿಸಿದೆ.
ಇವರ ಕಥೆಗಳ ಲೋಕವಂತೂ ಬೇರೆಯದೇ ಇದೆ. ಮುಂಬೈ ಬದುಕನ್ನು ಹತ್ತಿರದಿಂದ ನೋಡಿದ ಇವರ ಕಥೆಗಳಲ್ಲಿ ಇರುವ ಸಂವೇದನೆ, ಭೀಕರತೆ ಒಂದು ಕ್ಷಣ ಓದುಗರನ್ನು ಬೆಚ್ಚಿ ಬೀಳಿಸುತ್ತದೆ. ಕೊಂಕಣಿಯ ಅತಿ ಶ್ರೇಷ್ಠ ಕತೆಗಳಲ್ಲಿ ಎಚ್ಚೆಮ್ ಪೆರ್ನಾಲರ ಹಲವು ಕತೆಗಳು ಸೇರುತ್ತವೆ. ಒಬ್ಬ ಓದುಗನೊಳಗಿನ ಸೂಕ್ಷ್ಮತೆಯನ್ನು, ಸಂವೇದನೆಯನ್ನು ಈ ಕತೆಗಳು ಸಾಣೆಗೆ ಹಿಡಿಯುತ್ತವೆ. “ನೀವು ನಿಮ್ಮ ಕತೆಗಳನ್ನು ಕನ್ನಡ ಭಾಷೆಗೂ ಅನುವಾದಿಸಬೇಕು’ ಎಂದು ಅವರ ಸಾಹಿತ್ಯದ ಅಭಿಮಾನಿಗಳಾದ ನಾವು ಯಾವಾಗಲೂ ಅವರನ್ನು ಒತ್ತಾಯಿಸುವುದಿದೆ.


ಇಂತಹ ಎಚ್ಚೆಮ್ ಪೆರ್ನಾಲರಿಗೆ 2025 ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಅವರ ಸಾಹಿತ್ಯ ವಿಮರ್ಶೆ ’ರುಪಾಂ ಆನಿ ರೂಪಕಾಂ’ ಕೃತಿಗೆ ದೊರೆತದ್ದು ನಮಗೆ ಅತೀ ಹೆಚ್ಚಿನ ಸಂತಸವನ್ನು ತಂದಿದೆ. ಈ ಗೌರವ ಒಬ್ಬ ಸಾಹಿತಿ ಮತ್ತು ಆತನ ಕೃತಿಗೆ ಸಿಕ್ಕ ಗೌರವ ಎನ್ನುವುದಕ್ಕಿಂತಲೂ ಒಂದು ಭಾಷೆಯ ಎಚ್ಚರದ ಪ್ರಜ್ಞೆಗೆ ಸಿಕ್ಕ ಗೌರವವೆಂದೇ ನಾನು ತಿಳಿದುಕೊಳ್ಳುವೆ. ಏಕೆಂದರೆ ಈ ಎಚ್ಚರದ ಪ್ರಜ್ಞೆಯಲ್ಲಿಯೇ ’ರುಪಾಂ ಆನಿ ರೂಪಕಾಂ’ ಕೃತಿಯ ಬರಹಗಳು ಮೂಡಿ ಬಂದಿವೆ. ಎಚ್ಚೆಮ್ ಪೆರ್ನಾಲರ ಈ ಎಚ್ಚರದ ಪ್ರಜ್ಞೆ ಈ ಒಂದು ಕೃತಿಗೆ ಮಾತ್ರ ಸೀಮಿತವಲ್ಲ. ಅದು ಕೊಂಕಣಿಯ ವ್ಯಾಪ್ತಿಯೊಳಗೆ ಅತಿ ದೊಡ್ಡ ಬೌದ್ಧಿಕ ಕ್ರಾಂತಿಯನ್ನೇ ಮಾಡಿದೆ. ಎಚ್ಚೆಮ್ ಪೆರ್ನಾಲ್ ಒಂದು ಕಾರ್ಯಕ್ರಮದಲ್ಲಿ ಪ್ರೇಕ್ಷಕನಾಗಿ ಹಾಜರಿದ್ದರೂ ವೇದಿಕೆಯಲ್ಲಿ ಮಾತಾಡುವವರಿಗೂ ಒಂದು ರೀತಿಯ ಎಚ್ಚರ, ಜಾಗರೂಕತೆ ಹಾಗೂ ಮಾತಿನ ಮೇಲೆ ಹಿಡಿತ ಬರುತ್ತದೆ. ಇದು ಅತಿಶಯೋಕ್ತಿ ಖಂಡಿತ ಅಲ್ಲ. ವಿಚಾರವನ್ನು ಬದಿಗೊತ್ತಿ ಕೊಂಕಣಿ ಭಾಷೆಯ ಬಗ್ಗೆ ಅತೀವ ಭಾವುಕರಾಗಿ, ಗೊಂದಲಕಾರಿಯಾಗಿ, ಸ್ಪಷ್ಟತೆ ಇಲ್ಲದೆ, ಪರಸ್ಪರ ಪೊಳ್ಳು ಹೊಗಳುವಿಕೆಯೇ ಬಂಡವಾಳ ಮಾಡಿಕೊಂಡ ’ಮುಖ್ಯ ಅತಿಥಿಗಳು’ ಎಚ್ಚೆಮ್ ಎದುರಿರುವಾಗ ಕೊಂಚ ತಡವರಿಸುತ್ತಾರೆ. ಕೆಲವರಂತೂ ವೇದಿಕೆಯಿಂದಲೇ ಎಚ್ಚೆಮ್ ಪೆರ್ನಾಲರ ಹೆಸರೆತ್ತಿದ್ದೂ ಇದೆ. ಅಸಹನೆಯನ್ನು ಹೊರ ಹಾಕಿದ್ದೂ ಇದೆ. ತನ್ನ ಸಂಪಾದಕತ್ವದ ’ಕಿಟಾಳ್’ ಅಂತರ್ಜಾಲ ಪತ್ರಿಕೆಯಲ್ಲಿ ಅವರು ಮಾಡುವ ಟೀಕೆಗಳು ಈ ಹೊತ್ತಿನ ಕೊಂಕಣಿಯ ಜಾಗೃತ ಪ್ರಜ್ಞೆಯನ್ನು ಬೆಳೆಸಿದೆ. ತಪ್ಪಾದಾಗ ಮುಲಾಜಿಲ್ಲದೆ ಖಂಡಿಸುವ, ಟೀಕಿಸುವ ಗುಣ ಕೊಂಕಣಿಯ ಆರೋಗ್ಯಕ್ಕೆ ತನ್ನದೇ ಆದ ದೇಣಿಗೆಯನ್ನು ನೀಡಿದೆ. ಹೌದು ಇದರಿಂದ ಕೆಲವರಿಗೆ ನೋವಾಗುವುದು ಸಹಜ. ಕೊಂಚವೂ ನೋವು ಮಾಡದೆ ಸಮಾಜದ ರೋಗಗಳಿಗೆ ಚಿಕಿತ್ಸೆ ಮಾಡಲಾಗುವುದಿಲ್ಲ ಎಂಬ ಸತ್ಯ ಹೆಚ್ಚಿನವರಿಗೆ ತಿಳಿದಿದೆ. ಅವರ ದನಿ ಇಲ್ಲದ, ಅವರ ಟೀಕೆ ಟಿಪ್ಪಣಿಗಳಿಲ್ಲದ ಕೊಂಕಣಿ ಸಮಾಜ ಇನ್ನೂ ಕೂಡಾ ಆತ್ಮರತಿಯಲ್ಲಿಯೇ, ಭಾವುಕತೆಯಲ್ಲಿಯೇ ನರಳಿರುತ್ತಿತ್ತು ಎಂಬುದರಲ್ಲಿ ನನಗಂತೂ ಸಂಶಯವಿಲ್ಲ. ಎಚ್ಚೆಮ್ ಪೆರ್ನಾಲರನ್ನು ಒಂದರ್ಥದಲ್ಲಿ ಕೊಂಕಣಿಯ ಲಂಕೇಶ್ ಎಂದು ಕರೆದರೆ ತಪ್ಪಾಗಲಾರದು.
ಎಚ್ಚೆಮ್ ಪೆರ್ನಾಲ್ ಕವನ ಸಂಕಲನಗಳು : ಚಲ್ಯಾಂಕ್ ಚತ್ರಾಯ್, ಕಯ್ದ್ಯಾಚ್ಯೊ ಕವಿತಾ, ಬಾಮುಣಾಂಚೆಂ ಚೆಡುಂ ಜನೆಲ್
ಯಾರು ನಿಷ್ಠುರವಾಗಿ, ಮುಲಾಜಿಲ್ಲದೆ ಸತ್ಯ ನುಡಿಯುತ್ತಾರೋ ಅಂತವರ ಮೇಲೆ ಬಲಾಢ್ಯ ಶಕ್ತಿಗಳಿಗೆ ಅಥವಾ ವ್ಯಕ್ತಿಗಳಿಗೆ ಒಳಗೊಳಗೆ ಅಸಹನೆ ಶುರುವಾಗಿ ತಮ್ಮದೇ ದಾರಿಗಳಲ್ಲಿ ಈ ದನಿಯನ್ನು ಅಡಗಿಸಲು ಪ್ರಯತ್ನಿಸುವ ಚಾಳಿ ಎಲ್ಲಾ ಭಾಷೆಗಳಲ್ಲಿಯೂ, ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಿದ್ದೆ. ಎಚ್ಚೆಮ್ ಪೆರ್ನಾಲರೂ ಇದನ್ನು ತುಂಬಾ ಅನುಭವಿಸಿದ್ದಾರೆ. ಪತ್ರಿಕೆಗಳಲ್ಲಿ ಕೀಳು ಮಟ್ಟದ ದ್ವೇಷ ಪೂರಿತ ಬರಹಗಳು ಪ್ರಕಟವಾದಾಗಲೂ ಒಬ್ಬಂಟಿಯಾಗಿ ಇದರ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಕಥಾ ಸಂಕಲನಗಳು – ದೆವಾಕ್ ಸೊಡ್ ಲ್ಲೊ ಪಾಡೊ, ಬೀಗ್ ಆನಿ ಬಿಗಾತ್
ಕೊಂಕಣಿಯ ಎಷ್ಟೋ ಪ್ರತಿಷ್ಠಿತ ಪುರಸ್ಕಾರಗಳು ಅವರ ಯೋಗ್ಯತೆಗೆ, ಪ್ರತಿಭೆಗೆ ಪ್ರಾಪ್ತವಾಗಬೇಕಿತ್ತು. ಈಗ ಅವರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿರುವುದು ತುಂಬಾ ಸಂತಸದ ವಿಷಯ. ಎಚ್ಚೆಮ್ ಪೆರ್ನಾಲರ ಗಟ್ಟಿತನ, ನಿಷ್ಠುರ ದನಿ, ತೀವ್ರ ಸಂವೇದನೆಯ ಬರಹಗಳಿಗೆ ಇನ್ನಷ್ಟು ಶಕ್ತಿ ಬರಲಿ ಎಂದು ಆಶಿಸುವೆ.
ಸಾಹಿತ್ಯ ವಿಮರ್ಶೆ – ರುಪಾಂ ಆನಿ ರೂಪಕಾ

ವಿಲ್ಸನ್ ಕಟೀಲ್
ಕೊಂಕಣಿ ಮತ್ತು ಕನ್ನಡದ ಜೀವಪರ ಕವಿ
ಇದನ್ನೂ ಓದಿ- http://ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -18 |ಕಾಲೇಜಿಗೆ ಕಾಲಿಟ್ಟೆ https://kannadaplanet.com/thats-a-big-story-autobiography-series-18/


