ಶತಾಯುಷಿಗಳು ಹೆಚ್ಚಿರುವ ಜಗತ್ತಿನ ಕೆಲ ಆಯ್ದ ಪ್ರದೇಶಗಳನ್ನು”Blue Zones” ಎಂದು ಕರೆಯುವುದುಂಟು. ಈ ಬ್ಲೂಝೋನ್ಗಳಲ್ಲಿ ವಾಸಿಸುತ್ತಿರುವ ಹಲವು ಶತಾಯುಷಿಗಳು ತಮ್ಮ ದೀರ್ಘಾಯುಷ್ಯದ ಶ್ರೇಯಸ್ಸನ್ನು ತಮ್ಮ ಬದುಕಿನಲ್ಲಿರುವ ಗೆಳೆತನಗಳಿಗೂ ಅರ್ಪಿಸಿದ್ದಾರೆ . ಇವರು ತಮ್ಮ ಗೆಳೆಯರೊಂದಿಗೆ ಚಾಟ್ಬಾಕ್ಸಿನಲ್ಲಿ ವ್ಯವಹರಿಸುವವರಲ್ಲ. ಇವರ ಸಂಭಾಷಣೆಗಳು ಇಮೋಜಿಗಳೊಂದಿಗೆ ಮುಗಿಯುವುದಿಲ್ಲ.ಮನೆಯ ಅಥವಾ ಊರಿನ ಜಗಲಿಯೊಂದರಲ್ಲಿ ಕೂತು ಪರಸ್ಪರ ಹರಟಿದರಷ್ಟೇ ಇವರಿಗೆ ಸುಖ ಸಮಾಧಾನವಂತೆ. ಈ ಬದುಕಿನ ಕಲೆಯನ್ನೇ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಅಚ್ಚರಿ ನನ್ನದು–ಪ್ರಸಾದ್ ನಾಯ್ಕ್, ದೆಹಲಿ.
ಸಂವಹನ ವ್ಯವಸ್ಥೆಯು ಹಿಂದೆಂದಿಗಿಂತಲೂ ಉತ್ತಮವಾಗಿರುವ ಈ ಆಧುನಿಕ ಯುಗದಲ್ಲಿ ನಾವು ನಿಜಕ್ಕೂ ನಮ್ಮ ಸುತ್ತಮುತ್ತಲಿನವರೊಂದಿಗೆ ಬೆರೆಯುತ್ತಿದ್ದೇವಾ?
ಈ ಪ್ರಶ್ನೆಯನ್ನು ನನಗೆ ನಾನೇ ಒಮ್ಮೊಮ್ಮೆ ಕೇಳಿಕೊಳ್ಳುವುದಿದೆ. ಇದಕ್ಕೆ ಕಾರಣಗಳೂ ಹಲವಿದೆ ಅನ್ನೋಣ. ಬೆಸ್ಟ್-ಸೆಲ್ಲರ್ ಸೇಲ್ಸ್ ಸಂಬಂಧಿ ಪುಸ್ತಕಗಳು “ಸೋಷಿಯಲೈಸಿಂಗ್” ಎಂಬ ಆಕರ್ಷಕ ಹೆಸರಿನೊಂದಿಗೆ ಬರುವ ಹಿಂದೆಯೂ ನಮ್ಮಲ್ಲಿ “ಸೋಶಿಯಲೈಸಿಂಗ್ ಸಾಕಷ್ಟಿತ್ತು. ಪರಿಚಯವಿಲ್ಲದಿದ್ದರೂ ಹೊಸಬರನ್ನು ಸಹಜವಾಗಿ ಮಾತಿಗೆಳೆಯುವುದು, ಎಲ್ಲಾದರೂ ಹೋದರೆ ಹೊಸ ಗೆಳೆತನವನ್ನು ಸಂಪಾದಿಸುವುದು, ಸಮಾನಮನಸ್ಕರೆಲ್ಲ ಒಂದೆಡೆ ಸೇರಿ ಪಟ್ಟಾಂಗ ಮಾಡುವುದು, ದೂರದಲ್ಲಿದ್ದವರಿಗೆ ಅಪರೂಪಕ್ಕೊಮ್ಮೆಯಾದರೂ ಪತ್ರ ಬರೆಯುವುದು, ಕರೆ ಮಾಡುವುದು… ಇಂಥವುಗಳೆಲ್ಲ ನಿತ್ಯದ ದಿನಚರಿಗಳಷ್ಟೇ ಸಾಮಾನ್ಯವಾಗಿದ್ದವು. ನನ್ನ ಸಂಬಂಧಿಕರೊಬ್ಬರು ಅದೆಷ್ಟು ಸ್ನೇಹಮಯಿಯಾಗಿದ್ದರೆಂದರೆ ಯಾವ ಆಗಂತುಕರನ್ನಾದರೂ ಮಾತನಾಡಿಸಿ, ಅವರನ್ನು ಮಾತಿಗೆಳೆಯುವ ಕಲೆಯು ಅವರಿಗೆ ಸಿದ್ಧಿಸಿತ್ತು. ಹಾಗಿದ್ದೂ ಅವರು ವಾಚಾಳಿಯಾಗಿರಲಿಲ್ಲ. ಬದಲಾಗಿ “ಇವರು ಕಲ್ಲನ್ನೂ ಮಾತಾಡಿಸಬಲ್ಲರು” ಎಂದು ಅವರ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದ ಓರಗೆಯವರು ಇಂದಿಗೂ ನನಗೆ ನೆನಪಾಗುತ್ತಾರೆ.
ಇನ್ನು ನಗರಗಳಿಗೆ ಬಂದರೆ ವೈಮಾನಿಕ ಪ್ರಯಾಣಗಳಲ್ಲಿ “ಸೋಶಿಯಲೈಸಿಂಗ್” ಮಾಡುವುದು ಬಹಳ ಕಷ್ಟವೆಂಬ ಅಭಿಪ್ರಾಯಗಳು ಒಂದು ಕಾಲದಲ್ಲಿದ್ದವು. ಇದರ ಹಿಂದಿದ್ದಿದ್ದು ಒಂದೇ ತರ್ಕ. ಅದೇನೆಂದರೆ ವಿಮಾನಗಳಲ್ಲಿ ಪ್ರಯಾಣಿಸುವವರು ಸಾಮಾನ್ಯವಾಗಿ ಶ್ರೀಮಂತರು ಮತ್ತು ಶ್ರೀಮಂತರು ಹಾಗೆಲ್ಲ ಸಿಕ್ಕಸಿಕ್ಕವರೊಂದಿಗೆ ಹರಟೆಗಿಳಿಯುವುದಿಲ್ಲ ಎಂಬುದು. ಹಾಗಂತ ಅದು ಸಂಪೂರ್ಣ ಸತ್ಯವೂ ಆಗಿರಲಿಲ್ಲ. ಸಣ್ಣ ಹಾಯ್-ಹಲೋ-ನಮಸ್ಕಾರಗಳಿಂದ ಶುರುವಾದ ಮಾತುಕತೆಗಳು ಸುದೀರ್ಘ ಪ್ರಯಾಣದ ಪ್ರಯಾಸವನ್ನು ಕಮ್ಮಿಯಾಗಿಸುವುದು ಇರುತ್ತಿತ್ತು. ವಿಸಿಟಿಂಗ್ ಕಾರ್ಡುಗಳು, ದೂರವಾಣಿ ಸಂಖ್ಯೆಗಳೂ ವಿನಿಮಯವಾಗುತ್ತಿದ್ದವು. ಕ್ರಮೇಣ ವೈಮಾನಿಕ ಪ್ರಯಾಣಗಳು ಮೇಲ್ವರ್ಗಕ್ಕಷ್ಟೇ ಸೀಮಿತವೆಂಬ ಭ್ರಮೆಗಳೂ ಕಳಚಿಹೋದವು. ಆದರೆ ಇಂದಿನ ಒಡನಾಟಗಳು ಹಿಂದಿನಷ್ಟು ಸುಲಲಿತವೇ? ಇದಮಿತ್ಥಂ ಎಂದು ಹೇಳುವುದಂತೂ ಕಷ್ಟ.

ಇಂದು ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಹಲವು ಮಂದಿ ತಮ್ಮ ಬೋಗಿಯಲ್ಲಿರುವ 95% ಸಹಪ್ರಯಾಣಿಕರು ತಮ್ಮ ಸ್ಮಾರ್ಟ್-ಫೋನ್ ಪರದೆಗಳಲ್ಲಿ ಕಳೆದುಹೋಗಿರುವುದನ್ನು ನೋಡಿಯೇ ಇರುತ್ತಾರೆ. ಇಂತಹ ಚಿಕ್ಕ ಪ್ರಯಾಣಗಳಲ್ಲಿ ಪುಸ್ತಕ ಹಿಡಿದುಕೊಂಡು ಮಗ್ನರಾಗಿರುವ ಮಂದಿ ಇಂದು ಅಲ್ಪಸಂಖ್ಯಾತರು. ಇಂದು ಮೆಟ್ರೋ ಬೋಗಿಗಳಲ್ಲಿ ಜನಸಾಮಾನ್ಯರು ಪರಸ್ಪರ ಮಾತಾಡುವುದಕ್ಕಿಂತಲೂ ಹೆಚ್ಚು ಸದ್ದು ಮಾಡುವುದು ಎಲ್ಲರ ಕೈಯಲ್ಲಿರುವ ಫೋನುಗಳಲ್ಲಿ ಮೂಡಿ ಮರೆಯಾಗುವ ರೀಲುಗಳದ್ದು. ಇನ್ನು ಕೆಲವರಂತೂ ತಮ್ಮ ಫೋನುಗಳನ್ನು ರೇಡಿಯೋ ಸ್ಟೇಷನ್ನುಗಳಂತೆ ಭಾವಿಸಿ, ತಮ್ಮ ರೀಲುಗಳ ಶಬ್ದಮಾಲಿನ್ಯವನ್ನು ತಮ್ಮ ಸುತ್ತಮುತ್ತಲಿದ್ದವರಿಗೂ ವಿನಾಕಾರಣ ಹೇರುತ್ತಿರುತ್ತಾರೆ. ಒಟ್ಟಿನಲ್ಲಿ ಪುಟ್ಟ ಲೋಹದ ಡಬ್ಬಿಯಲ್ಲಿ ಜೊತೆಯಾಗಿ ಸಾಗುತ್ತಿರುವ ಜನಸಮೂಹದ ದೊಡ್ಡ ಭಾಗವೊಂದು ಮೊಬೈಲುಗಳೆಂಬ ಮಾಯಾಲೋಕದಲ್ಲಿ ಕಳೆದುಹೋಗಿರುವ ದೃಶ್ಯವನ್ನು ನೋಡುವುದೇ ಒಂಥರಾ ಸೈ-ಫೈ ಚಲನಚಿತ್ರಗಳಲ್ಲಿ ಕಾಣಬರುವ ಪರಲೋಕದ ದೃಶ್ಯದಂತೆ.
ಇನ್ನು ಆಗಸದೆತ್ತರದಲ್ಲಿ ಮೊಬೈಲ್ ನೆಟ್ವರ್ಕ್‌ಗಳು ಇಲ್ಲವಾಗಿ ಜಗತ್ತು ಕೆಲ ತಾಸುಗಳ ಮಟ್ಟಿಗಾದರೂ ಶಾಂತವಾಗಿಬಿಡುವ ಕಾಲವು ಬಹುತೇಕ ಮುಗಿದುಹೋಗಿದೆ. ನಿಜಕ್ಕೂ ಕೆಲಸಕ್ಕೆಂದು ಲ್ಯಾಪ್-ಟ್ಯಾಪ್/ಟ್ಯಾಬ್ ಬಳಸುವ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿ, ಇಲ್ಲೂ ಬಹುತೇಕ ಮಂದಿ ಒಟಿಟಿ ವೇದಿಕೆಗಳಿಂದ ಡೌನ್ಲೋಡ್ ಮಾಡಿರುವ ಕಂಟೆಂಟುಗಳನ್ನೇ ಸಾಮಾನ್ಯವಾಗಿ ಪ್ರಯಾಣದುದ್ದಕ್ಕೂ ವೀಕ್ಷಿಸುತ್ತಿರುತ್ತಾರೆ. ತಮಗೆ ನಿಗದಿಯಾಗಿರುವ ಸೀಟನ್ನು ಹುಡುಕಿ, ತಲೆಯ ಮೇಲಿರುವ ಕ್ಯಾಬಿನ್ನಿನಲ್ಲಿ ತಮ್ಮ ಬ್ಯಾಗನ್ನು ತುರುಕಿ, ಸ್ಮಾರ್ಟ್-ಫೋನ್ ಮತ್ತು ಇಯರ್ ಬಡ್ಸ್ ಆನ್ ಮಾಡಿ ಕೂತರೆಂದರೆ ಆರಿಂಚಿನ ಪರದೆಯಾಚೆಗಿನ ಜಗತ್ತು ಏಕಾಏಕಿ ಮರೆಯಾಗಿಬಿಟ್ಟಂತಹ ಭಾವ. ಮನಸ್ಸು ಸಂತೆಯೊಳಗಿನ ಸಂತ.
ಬಾಲ್ಯದೊಂದಿಗೆ ನಾವು ಕಳೆದುಕೊಳ್ಳುವ ಅತಿದೊಡ್ಡ ಸಂಗತಿಯೆಂದರೆ ಹೊಸ ಗೆಳೆತನ-ಬಾಂಧವ್ಯಗಳ ಸಂಪಾದನೆ. ವಯಸ್ಸಾದಂತೆ ಇದು ಸಹಜವೆಂದು ವಿಜ್ಞಾನವೂ ಹೇಳುತ್ತದೆ. ಏಕೆಂದರೆ ಬದಲಾಗುವ ಆದ್ಯತೆ, ಬದುಕಿನ ವ್ಯಸ್ತತೆ, ಎಲ್ಲರನ್ನು ಒಂದು ಸಂದೇಹದ ದೃಷ್ಟಿಯಿಂದಲೇ ಕಾಣುವ ಅತಿ ಜಾಗರೂಕತೆ, ವಿಶೇಷವಾಗಿ ಮೆಟ್ರೋ ನಗರಗಳಲ್ಲಿರುವ ಮಂದಿಗೆ ತಾವು ಇಲ್ಲಿಯವರಲ್ಲ ಎಂಬ ಕಟುಸತ್ಯದ ಜೊತೆಗೆ ಬರುವ ಅಭದ್ರತೆ… ಹೀಗೆ ಎಲ್ಲವೂ ಒಂದಕ್ಕೊಂದು ಕೊಂಡಿಯಾಗಿ ಹೊಸ ಗೆಳೆತನಗಳನ್ನು ಸಂಪಾದಿಸುವುದೇ ಕಷ್ಟಸಾಧ್ಯ ಎಂಬಂತಾಗುವುದುಂಟು. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಗಟ್ಟಲೆ ಹಿಂಬಾಲಕರಿದ್ದರೂ, ತಮ್ಮದೇ ವಲಯದಲ್ಲಿ ಸಾಕಷ್ಟು ಪರಿಚಿತರಿದ್ದರೂ, “ಇವನೊಬ್ಬ ನನ್ನ ನಿಜವಾದ ಸ್ನೇಹಿತ” ಎಂದು ಎದೆ ತಟ್ಟಿ ಹೇಳಲು ಕಷ್ಟವಾಗುವುದು ಈ ಕಾರಣಕ್ಕೇನೇ. ಏಕೆಂದರೆ ಗೆಳೆತನವೆಂಬುದು ಜವಾಬ್ದಾರಿಯೊಂದಿಗೆ ಬರುವಂತಹ ಸಂಗತಿ. ಅದನ್ನು ನಿಭಾಯಿಸುವಂತೆ ಇತರರಿಂದ ನಿರೀಕ್ಷಿಸುವುದು ಎಷ್ಟು ದೊಡ್ಡ ಸವಾಲೋ, ಸ್ವತಃ ಅದನ್ನು ನಿಭಾಯಿಸಲು ಬೇಕಿರುವ ಬದ್ಧತೆಯೂ ಅಷ್ಟೇ ದೊಡ್ಡದು.

ಹೀಗಾಗಿಯೇ ಸಂವಹನ ವ್ಯವಸ್ಥೆಯು ಈ ಮಟ್ಟಿಗೆ ವಿಕಾಸವಾಗಿದ್ದರೂ ಅರ್ಥಪೂರ್ಣ ಗೆಳೆತನಗಳನ್ನು ಸಂಪಾದಿಸಲು ನಾವು ವಿಫಲವಾಗುತ್ತಿರುವುದು. ಬಹಳಷ್ಟು ಬೆಸ್ಟ್-ಸೆಲ್ಲರ್ ಪುಸ್ತಕಗಳಲ್ಲಿ ಬರುವ “ಸೋಶಿಯಲೈಸಿಂಗ್” ಅಂತಿಮವಾಗಿ ಪ್ರತಿಫಲವೊಂದರ ನಿರೀಕ್ಷೆಯಲ್ಲೇ ಇರುವ ಪ್ರಕ್ರಿಯೆಗಳಾಗಿರುವುದರಿಂದ ಅವುಗಳೂ ತಮ್ಮ ಕೃತಕತೆಯಿಂದಾಗಿ ಕ್ರಮೇಣ ಸೋಲುತ್ತಿರುವುದು. ಮನುಷ್ಯನಲ್ಲಿ ದಿನಗಳೆದಂತೆ ಅಗಾಧವಾಗುತ್ತಿರುವ ಒಬ್ಬಂಟಿತನವು ಇವತ್ತಿನ ಮಟ್ಟಿಗೆ ಒಂದು ಜಾಗತಿಕ ಸಮಸ್ಯೆ. ಬ್ರಿಟಿಷ್ ಸರ್ಕಾರವು ಕೆಲ ವರ್ಷಗಳ ಹಿಂದೆ “ಮಿನಿಸ್ಟ್ರಿ ಆಫ್ ಲೋನ್ಲಿನೆಸ್” ಎಂಬ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದನ್ನು ಕೂಡ ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಸ್ಮಾರ್ಟ್-ಫೋನಿನ ಪರದೆಯಲ್ಲಿ ಒಬ್ಬರಿಗೊಬ್ಬರು “ಕನೆಕ್ಟ್” ಆಗಿರುವ ಭರದಲ್ಲಿ ನೈಜ ಒಡನಾಟಗಳು ಮರೆಯಾಗುತ್ತಿರುವುದು ಹೊಸ ಸಂಗತಿಯಾಗಿಯೇನೂ ಉಳಿದಿಲ್ಲ. ಬಹುತೇಕ ಹೊಸ ತಲೆಮಾರಿನ ಮಂದಿಗಂತೂ ಇಂತಹ ನೈಜ ಒಡನಾಟಗಳು ದೊಡ್ಡ ಸಾಹಸವೆಂಬಂತೆ ಕಾಣುತ್ತಿದೆಯಂತೆ. ವೈಯಕ್ತಿಕ ಬದುಕು ಮತ್ತು ಔದ್ಯೋಗಿಕ ಬದುಕಿನ ಅಸಮತೋಲನವು ತೀರಾ ಹದೆಗೆಟ್ಟು ಮನುಷ್ಯ ಯಂತ್ರಮಾನವನಂತೆ ಬದಲಾಗುತ್ತಿರುವುದು, ಆಟೋ-ಪೈಲಟ್ ಮೋಡಿನಲ್ಲಿ ಬದುಕುತ್ತಿರುವುದು ತಾಂತ್ರಿಕವಾಗಿ ಮುಂದುವರಿದಂತಹ ಜಪಾನಿನಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿಯೇ ಅಲ್ಲಿ ಇಂತಿಷ್ಟು ಮೊತ್ತವನ್ನು ಪಾವತಿಸಿ, ಕೆಲ ನಿಮಿಷಗಳವರೆಗೆ ಅಪ್ಪುಗೆಯನ್ನು ಪಡೆದುಕೊಳ್ಳುವ ವ್ಯವಸ್ಥೆಗಳು (Cuddling) ಚಾಲ್ತಿಯಲ್ಲಿವೆ. ಕೆಲ ಮೊಬೈಲ್ ಆಪ್ ಗಳಲ್ಲಿ ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ಗಳು ಬಾಡಿಗೆಗೂ ಸಿಗುತ್ತಾರೆ.
ಇತ್ತೀಚೆಗೆ ನಮ್ಮ ನಡುವಿನ ಪ್ರತಿಭಾವಂತ ಬರಹಗಾರರಾದ ಮಂಜುನಾಥ ಚಾರ್ವಾಕರವರು ಅನುವಾದಿಸಿದ್ದ “ಕಿನೋ ಮತ್ತು ಇತರ ಕತೆಗಳು” ಎಂಬ ಪುಸ್ತಕವನ್ನು ಮರುಓದಿಗೆಂದು ಕೈಗೆತ್ತಿಕೊಳ್ಳುವ ಸಂದರ್ಭ ಒದಗಿ ಬಂದಿತ್ತು. ಜಪಾನಿನ ಪ್ರಖ್ಯಾತ ಲೇಖಕರಾದ ಹರುಕಿ ಮುರಾಕಮಿಯವರ ಸಣ್ಣ ಕತೆಗಳ ಅನುವಾದ ಸಂಕಲನವಿದು. ಜಪಾನಿನ ಜೀವನಶೈಲಿಯನ್ನು ಕೇಂದ್ರವಾಗಿಸಿ ಮೂಡಿಬಂದಿರುವ ಈ ಕತೆಗಳಲ್ಲೂ ಒಂಟಿತನದ ಛಾಯೆಯನ್ನು ನಾವು ದಟ್ಟವಾಗಿ ಕಾಣಬಹುದು. ಮುರಾಕಮಿಯವರ ಕಥಾಪಾತ್ರಗಳು ಒಂಟಿತನವನ್ನು ಅದೆಷ್ಟು ತೀವ್ರವಾಗಿ ವ್ಯಕ್ತಪಡಿಸುತ್ತವೆಂದರೆ ಓದುಗರಾದ ನಾವೂ ಆ ಭಾವದಲ್ಲಿ ಒಂದಿಷ್ಟು ನಲುಗಿಹೋಗುತ್ತೇವೆ. ಇದರೊಂದಿಗೆ ನಮ್ಮೊಳಗೂ ಇಷ್ಟಿಷ್ಟೇ ಹೆಚ್ಚುತ್ತಿರುವ ಒಂಟಿತನವು ಅದೇಕೋ ಭಾರ ಅನ್ನಿಸತೊಡುತ್ತದೆ.
ಫೇಸ್-ಬುಕ್ಕಿನಲ್ಲಿ “Extrovert Indian” ಎಂಬ ಜನಪ್ರಿಯ ವ್ಲಾಗೊಂದನ್ನು ನಡೆಸುತ್ತಿರುವ ಯುವಕನೊಬ್ಬ ಭಾರತದ ಹಲವು ನಗರಗಳಲ್ಲಿ ಆಗಂತುಕರನ್ನು ಮಾತನಾಡಿಸುತ್ತಿರುತ್ತಾನೆ. ಗೊತ್ತುಗುರಿಯಿಲ್ಲದ ಈ ಪುಟ್ಟ ಸಂಭಾಷಣೆಗಳೇ ಈ ವ್ಲಾಗಿನ ಜೀವಾಳ. ಸಾಮಾನ್ಯವಾಗಿ ತಮ್ಮ ಪಾಡಿಗೆ ವ್ಯಸ್ತರಾಗಿರುವಂತೆ ಕಾಣುವ ಹಲವಾರು ಮಂದಿ, ಆಗಂತುಕನೊಬ್ಬ ಅಚಾನಕ್ಕಾಗಿ ಸಂಭಾಷಣೆಯನ್ನು ಆರಂಭಿಸಿದ ನಂತರ ನಿಧಾನವಾಗಿ ತೆರೆದುಕೊಳ್ಳುವ ಪರಿ ಇಲ್ಲಿ ಗಮನಿಸುವಂಥದ್ದು. ಆಧುನಿಕತೆಯು ತಂದು ಸುರಿದಿರುವ ತಂತ್ರಜ್ಞಾನಗಳು ನಮ್ಮನ್ನು ಕೆಲ ಕ್ಷಣಗಳ ಕಾಲ ರಂಜನೀಯ ಸ್ಥಿತಿಯಲ್ಲಿಡಬಹುದು. ಬದುಕಿನ ಒತ್ತಡಗಳಿಂದ ತಪ್ಪಿಸಿಕೊಳ್ಳಲು ಚಿಕ್ಕದೊಂದು ತಾತ್ಕಾಲಿಕ ವಿರಾಮದಂತೆಯೂ ನಮಗದು ಕಾಣಬಹುದು. ಆದರೆ ಸಂಘಜೀವನದ ಹಂಬಲವು ಮನುಷ್ಯನ ಸಹಜ ಮೂಲಗುಣವಾದ್ದರಿಂದ ಒಂದಿಷ್ಟು ಅಡೆತಡೆಗಳ ಹೊರತಾಗಿಯೂ ಮನಸ್ಸು ಮತ್ತೆ ಅಲ್ಲಿಗೇ ಮರಳುವುದು ಸಹಜ ಕೂಡ.
ಸಿ. ಪ್ರೇಮ್ ಕುಮಾರ್ ನಿರ್ದೇಶನದ ಜನಪ್ರಿಯ ತಮಿಳು ಚಿತ್ರವಾದ “96” ನಲ್ಲೊಂದು ದೃಶ್ಯವಿದೆ. ಶಾಲಾಗೆಳೆಯರ ಗುಂಪೊಂದು ಹಲವು ವರ್ಷಗಳ ನಂತರ “Reunion” ಹೆಸರಿನಲ್ಲಿ ಒಂದೆಡೆ ಸೇರಿಕೊಳ್ಳುತ್ತದೆ. ಅದೆಷ್ಟೋ ವರ್ಷಗಳ ನಂತರ ಪರಸ್ಪರರನ್ನು ಮುಖತಃ ಕಾಣುತ್ತಿರುವ, ಭೇಟಿಯಾಗುತ್ತಿರುವ ಗೆಳೆಯರ ಗುಂಪಿದು. ಆದರೆ ಇಂತಹ ಸುಂದರ ಸಂಜೆಯಲ್ಲೂ ಹಲವರು ತಮ್ಮ ಸ್ಮಾರ್ಟ್-ಫೋನ್ ಪರದೆಯಲ್ಲಿ ಕಳೆದುಹೋಗಿರುತ್ತಾರೆ. ಆ ಸುಂದರ ಕ್ಷಣವನ್ನು ಮತ್ತೊಮ್ಮೆ ತಮ್ಮದಾಗಿಸಿಕೊಳ್ಳುವುದು ಕಷ್ಟವೆಂಬುದು ಗೊತ್ತಿದ್ದರೂ ಡಿಜಿಟಲ್ ದುನಿಯಾ ಅವರನ್ನು ಬಿಡದೆ ತನ್ನೆಡೆಗೆ ಸೆಳೆಯುತ್ತಿರುತ್ತದೆ. ವಿಚಿತ್ರವೆಂದರೆ ನೈಜ ಬದುಕಿನ ಸೌಂದರ್ಯವನ್ನು ಮೀರಿಸುವಂತೆ ಅದು ತಕ್ಕಮಟ್ಟಿಗೆ ಯಶಸ್ವಿಯಾಗುತ್ತದೆ ಕೂಡ.
ಶತಾಯುಷಿಗಳು ಹೆಚ್ಚಿರುವ ಜಗತ್ತಿನ ಕೆಲ ಆಯ್ದ ಪ್ರದೇಶಗಳನ್ನು “Blue Zones” ಎಂದು ಕರೆಯುವುದುಂಟು. ಈ ಬ್ಲೂ ಝೋನ್ ಗಳಲ್ಲಿ ವಾಸಿಸುತ್ತಿರುವ ಹಲವು ಶತಾಯುಷಿಗಳು ತಮ್ಮ ದೀರ್ಘಾಯುಷ್ಯದ ಶ್ರೇಯಸ್ಸನ್ನು ತಮ್ಮ ಬದುಕಿನಲ್ಲಿರುವ ಗೆಳೆತನಗಳಿಗೂ ಅರ್ಪಿಸಿದ್ದಾರೆ. ಇವರು ತಮ್ಮ ಗೆಳೆಯರೊಂದಿಗೆ ಚಾಟ್ ಬಾಕ್ಸಿನಲ್ಲಿ ವ್ಯವಹರಿಸುವವರಲ್ಲ. ಇವರ ಸಂಭಾಷಣೆಗಳು ಇಮೋಜಿಗಳೊಂದಿಗೆ ಮುಗಿಯುವುದಿಲ್ಲ. ಮನೆಯ ಅಥವಾ ಊರಿನ ಜಗಲಿಯೊಂದರಲ್ಲಿ ಕೂತು ಪರಸ್ಪರ ಹರಟಿದರಷ್ಟೇ ಇವರಿಗೆ ಸುಖ-ಸಮಾಧಾನವಂತೆ.
ಈ ಬದುಕಿನ ಕಲೆಯನ್ನೇ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಅಚ್ಚರಿ ನನ್ನದು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.


