“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಕಷ್ಟ ಎಂದು ತಮ್ಮ ಹವ್ಯಾಸವನ್ನು ಕೈ ಬಿಡದೆ, ಪುಟ್ಟತಾಯಕ್ಕ ಹಬ್ಬ, ಸುಗ್ಗಿ , ಮದುವೆ ಮನೆ ಕೆಲಸ ಮಾಡುವಾಗ ಜಾನಪದ ಗೀತೆ, ಸೋಬಾನೆ ಹಾಡುವುದನ್ನು, ಒಗಟು, ಗಾದೆ ಹೇಳುವುದನ್ನು ಬಿಡಲಿಲ್ಲ. ಹಾಸನ ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಜಾನಪದ ಗೀತೆ ಮತ್ತು ಸೋಬಾನೆ ಹಾಡುಗಳನ್ನು ಹಾಡಿ ಶ್ರೋತೃಗಳ ಮನಗೆದ್ದರು. ಊರಲ್ಲಿ ಮಹಿಳಾ ಸಮಾಜದ ಸದಸ್ಯರಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಭಾವಗೀತೆ ಭಕ್ತಿಗೀತೆ ಜಾನಪದಗೀತೆ ಸೋಬಾನೇ ಪದಗಳನ್ನು ಊರು ಮನೆಯ ಹೆಣ್ಣುಮಕ್ಕಳಿಗೆಲ್ಲ ಕಲಿಸಿ ಊರಿನ ಮನೆಮನೆಯ ಹೆಣ್ಣುಮಕ್ಕಳೂ ಹಾಡುವಂತಾಗಿದ್ದು, ತಂಡ ಸೇರಿ, ಕಾರ್ಯಕ್ರಮ ಇಲ್ಲದಿದ್ದಾಗಲೂ ಹಾಡುವಂತೆ ಮಾಡಿದ್ದು ಇವರ ವಿಶೇಷ ಗುಣ. - ಬಿ.ಎಂ.ಭಾರತಿ ಹಾದಿಗೆ.
“ಊರ ಮುಂದ್ಲ ಬಾವಿಗೆ ಬಿದ್ರೂ ಚಿಂತಿಲ್ಲ. ಊರವರ ಬಾಯಿಗೆ ಬೀಳಬಾರದು” ಇದು ಪುಟ್ಟತಾಯಕ್ಕ ಪದೇಪದೇ ಹೇಳುವ ಗಾದೆ ಮಾತು. ಕಷ್ಟವಾದರೂ ಸರಿ, ಎಚ್ಚರದ ಹೆಜ್ಜೆಗಳನ್ನು ಇಡುತ್ತಾ ಜೀವನ ನಡೆಸಬೇಕು ಎಂಬ ಈ ಗಾದೆ ಮಾತಿನಂತೆಯೇ ಬದುಕುತ್ತಿರುವ, ಮಾತಿಗೊಂದು ಗಾದೆ ಹೇಳುವ ಕೃಷಿ ಮಹಿಳೆ- ಪುಟ್ಟತಾಯಕ್ಕ ಬೇಲೂರಿನ ಸಮೀಪದ ಸಾಣೇನಹಳ್ಳಿಯವರು. ಇವರ ತವರು ಸಂಪಿಗೆಮರದ ಕೊಪ್ಪಲು. ತಾಯಿ ಸಿದ್ದಮ್ಮ, ತಂದೆ ಗೊರಹರಳೆಗೌಡ- ಇವರ ಪುತ್ರಿಯಾಗಿ ಜನಿಸಿದವರು ಪುಟ್ಟತಾಯಕ್ಕ. ಬಾಲ್ಯದಲ್ಲಿ ಶಿಕ್ಷಕಿ ಆಗುವ ಕನಸು ಕಂಡವರು. ಆದರೆ ಚಿಕ್ಕ ವಯಸ್ಸಿಗೆ ತಾಯಿ ತೀರಿ ಹೋದ ಕಾರಣ ಅವರ ಕನಸು ನನಸಾಗಲಿಲ್ಲ.
ಬೆಳೆಯುತ್ತಾ ಮನೆ ತುಂಬಾ ಜನ, ಕೈ ತುಂಬಾ ಕೆಲಸ ಎನ್ನುವಂತೆ ಬೆಳಗ್ಗೆ ಎದ್ದರೆ ಮುಗಿಯಿತು. ರಾಗಿ ಬೀಸು, ಭತ್ತ ಕುಟ್ಟು. ರೊಟ್ಟಿ ತಟ್ಟು, ಹುಣಸೆ ಹಿಂಡಿ ಹುಳಿ ಬೇಸು, ಅಂಬಲಿ ಮಾಡು, ಮುಯ್ಯಾಳು ದನ ಕರ ಕೋಳಿ ಕುರಿ ಮೇಸು… ಇವೆಲ್ಲಾ ಮನಸಿಗೆ ಇಷ್ಟವೋ ಕಷ್ಟವೋ ಒಟ್ಟಲ್ಲಿ ಬದುಕಿಗೆ ದಾರಿಯಾದವು. ಈ ಎಲ್ಲಾ ಕೆಲಸಗಳನ್ನು ಮಾಡುವಾಗ ಶ್ರಮದ ಏಕತಾನತೆ ಕಳೆಯಲು, ಮನಸಿನೊಳಗಿನ ದುಗುಡ ಮೀರಲು, ಪುಟ್ಟತಾಯಕ್ಕ ತಮ್ಮಷ್ಟಕ್ಕೇ ಹಾಡು ಹೇಳುವುದನ್ನು ಅಭ್ಯಾಸ ಮಾಡಿಕೊಂಡರು. ಎದುರಿಗೆ ಬಂದ ಆತ್ಮೀಯರೊಡನೆ ಮಾತಾಡುವಾಗ ಹಳೆಯ ಗಾದೆಗಳನ್ನು ಹೇಳತೊಡಗಿದರು. ಕ್ರಮೇಣ ಇದರಿಂದ ಖುಷಿ ಸಿಗಲಾರಂಭಿಸಿದಾಗ, ತಾವೇ ಹೊಸಹೊಸ ಗಾದೆ ಹೊಸೆದು ಹೇಳತೊಡಗಿದರು. ಗೆಳತಿಯರೂ ಖುಷಿ ಮತ್ತು ಅಚ್ಚರಿಯಿಂದ ‘ಎಲೆಲಾ…’ ಎನ್ನಲಾರಂಭಿಸಿದರು!
ಪುಟ್ಟತಾಯಮ್ಮ ಅವರಿಗೆ ಹದಿನೈದನೇ ವಯಸ್ಸಿಗೆ ಸಾಣೆನಹಳ್ಳಿ ನಿಂಗೆಗೌಡರ ಜೊತೆ ವಿವಾಹವಾಗುತ್ತದೆ. ಅವಿಭಕ್ತ ಕುಟುಂಬ, ಬದುಕು ಏನು ಎಂತು ಎಂದು ತಿಳಿಯದ ಕಾಲ ಅದು. ಕೆಲಸ ಒಂದು ಗೊತ್ತಾದ್ರೆ ಇನ್ನೊಂದು ಗೊತ್ತಾಗುತ್ತಿರಲಿಲ್ಲ. ಒಳ ಹೊರಗಿನ ಬಹಳ ಕಷ್ಟದ ದಿನಗಳು. ಪ್ರತಿ ದಿನ ಏನಾದರೂ ಒಂದು ಗಲಾಟೆ, ಜಗಳ ಮನೆಯಲ್ಲಿ. ನೆಮ್ಮದಿಯೇ ಇಲ್ಲ. ಇದರಲ್ಲೇ ಇಪ್ಪತ್ತೆಂಟು ವರ್ಷ ಕಳೆದು ನಂತರ ಪತಿಯ ಕುಟುಂಬದಿಂದ ಹೊರ ಬರುತ್ತಾರೆ. ಆಗಂತು ಹೊಸ ಸಮಸ್ಯೆಗಳು. ಇರಲು ಮನೆ ಇಲ್ಲ. ಮಕ್ಕಳು ಚಿಕ್ಕವರು. ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಜೀವನ ಆರಂಭಿಸಿದರು. ಮುಯ್ಯಾಳು ಮಾಡುವುದು ಅಭ್ಯಾಸವಾಗಿತ್ತು. ಸುಮಾರು ಮೂವತ್ತೈದು ವರ್ಷ ಮುಯ್ಯಾಳು ಮಾಡಿ ಕೃಷಿ ಮಾಡಿದರು. ಭತ್ತ ರಾಗಿ ಜೋಳ ತರಕಾರಿ- ಇವರು ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳು. ಕೆರೆಯಲ್ಲಿ ನೀರಿಲ್ಲದ ಹೊತ್ತಿನಲ್ಲಿಯೂ, ಧೈರ್ಯಗೆಡದೇ ದೂರದ ಬಾವಿಯಿಂದ ನೀರು ತಂದು ಕೆಲಸ ಮಾಡುತ್ತಾ ಮಕ್ಕಳನ್ನು ಸಾಕಿ ಓದಿಸುತ್ತಾ ಜೀವನ ನಡೆಸಿದರು.

ಆದರೆ ಕಷ್ಟ ಎಂದು ತಮ್ಮ ಹವ್ಯಾಸವನ್ನು ಕೈ ಬಿಡದೆ, ಹಬ್ಬ, ಸುಗ್ಗಿ ಮದುವೆ ಮನೆ ಕೆಲಸ ಮಾಡುವಾಗ ಜಾನಪದ ಗೀತೆ, ಸೋಬಾನೆ ಹಾಡುವುದನ್ನು, ಒಗಟು, ಗಾದೆ ಹೇಳುವುದನ್ನು ಬಿಡಲಿಲ್ಲ. ಹಾಸನ ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಜಾನಪದ ಗೀತೆ ಮತ್ತು ಸೋಬಾನೆ ಹಾಡುಗಳನ್ನು ಹಾಡಿ ಶ್ರೋತೃಗಳ ಮನಗೆದ್ದರು. ಊರಲ್ಲಿ ಮಹಿಳಾ ಸಮಾಜದ ಸದಸ್ಯರಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರಿವರಿಂದ ಬಟ್ಟೆ ಹೊಲಿಯುವುದನ್ನು ಕಲಿತು, ಮೊದಲು ತಮ್ಮ ಹಿರಿ ಮಗಳಿಗೆ ಕಲಿಸಿ, ನಂತರ ಊರ ಇತರ ಹೆಣ್ಣುಮಕ್ಕಳಿಗೂ ಕಲಿಸಿದರು. ಭಾವಗೀತೆ ಭಕ್ತಿಗೀತೆ ಜಾನಪದಗೀತೆ ಸೋಬಾನೇ ಪದಗಳನ್ನು ಊರು ಮನೆಯ ಹೆಣ್ಣುಮಕ್ಕಳಿಗೆಲ್ಲ ಕಲಿಸಿ ಊರಿನ ಮನೆಮನೆಯ ಹೆಣ್ಣುಮಕ್ಕಳೂ ಹಾಡುವಂತಾಗಿದ್ದು, ತಂಡ ಸೇರಿ, ಕಾರ್ಯಕ್ರಮ ಇಲ್ಲದಿದ್ದಾಗಲೂ ಹಾಡುವಂತೆ ಮಾಡಿದ್ದು ಇವರ ವಿಶೇಷ ಗುಣ.
ಊರ ಮಹಿಳಾ ಸಂಘಕ್ಕೆ ಸೇರಿರುವ ಪುಟ್ಟತಾಯಕ್ಕ ಅಲ್ಲೂ ಸದಾ ಹಾಡಿನಲ್ಲಿ ಸಕ್ರಿಯರು. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ಗುಂಪಾಗಿ ಹಾಡೇಳಿಕೊಂಡು ಕೆಲಸ ಮಾಡುತ್ತಿದ್ದರು. ಊರಿನ ಶುಭ ಕಾರ್ಯಕ್ರಮಗಳಲ್ಲಿ ಇಂದಿಗೂ ಪುಟ್ಟ ತಾಯಕ್ಕ ಹಾಡುತ್ತಾರೆ. ಮುತ್ತು ಬಂದಿದೆ ಕೇರಿಗೆ, ಶಿವನ ಮದುವೆಗೋಗನ ಬನ್ನಿ, ಸೋ ಎನ್ನಿರೆ ಸೋಬಾನೇ ಎನ್ನಿರೆ, ತಂಗಿಗೆ ಹೇಳಿದನು ಶ್ರೀ ಕೃಷ್ಣ ಬುದ್ಧಿ ಮಾತನು, ಚಂದದಲಿ ದೇವರನಾಮ ಹಾಡೋಣ ಬನ್ನಿರೆ, ಹೋಗನೇಳು ಜಾತುರಿಗೆ… ಇವೆಲ್ಲಾ ಪುಟ್ಟತಾಯಕ್ಕ ಬಹಳ ಪ್ರೀತಿಯಿಂದ ಹಾಡುವ ಹಾಡುಗಳು.
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ಅವರು ಕೇಳುವ ಕೆಲ ಒಗಟುಗಳ ನಮೂನೆ ಹೀಗಿವೆ- “ಟಾಕು ಟೀಕಿನ ಮನೆ, ಟಗರು ಕೊಂಬಿನ ಮನೆ, ಬಾಚಿ ಮುಟ್ಟದ ಮನೆ, ಬಡಗಿ ಕೆತ್ತದ ಮನೆ” ಇದಕ್ಕೆ ಉತ್ತರ- ಹುತ್ತ! ಎಂದು ನಾವು ತಿಣುಕಾಡಿ ಹುಡುಕಬೇಕು. “ಅಂಗೈ ಅಗಲ ಕೆರೆ, ಕೆರೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ” ಇದಕ್ಕೆ ಉತ್ತರ- ದೀಪ! “ಒಂದು ಹಾಡುತ್ತೆ, ಒಂದು ಓಡುತ್ತೆ, ಒಂದು ನಿಲ್ಲುತ್ತೆ”- ಇದಕ್ಕೆ ಉತ್ತರ-ನದಿ, “ಒಂದು ಬಿದಿರೊಡೆದು ಒಂಬತ್ತು ಮನೆ ಕಟ್ಟಿ, ಸಾಲು ಕೇರಿಯ ಕಟ್ಟಿ, ಸಗರಪಟ್ಟಣ ಕಟ್ಟಿ, ನೋಡೋಕೆ ಅಂತ ಬಂದವರು ನೇಣ್ ಹಾಕ್ಕೊಂಡು ಸತ್ರು”, ಇದಕ್ಕೆ ಉತ್ತರ-ಮೀನು ಹಿಡಿಯುವ ಕೂಣಿ… ಎಂಬುದನ್ನು ತಿಪ್ಪರಲಾಗ ಹಾಕಿ ಯೋಚಿಸಬೇಕು. ಹೀಗೆ ಹತ್ತಾರು ಒಗಟುಗಳನ್ನು ಹುಟ್ಟಿಸಿ ಹುಟ್ಟಿಸಿ ಕೇಳುತ್ತಾರೆ. ಮಕ್ಕಳ ತಲೆಗೆ ಸದಾ ಯೋಚಿಸುವ ಕೆಲಸ ಕೊಡುತ್ತಾರೆ.
ಗಾದೆಗಳು ನೂರಾರು. ಮಾತಾಡುತ್ತಾ ಆಡುತ್ತಾ ಹೇಳುವಂತವು. ಹುಟ್ಟುವಂತವು- “ಅಳ್ತಾ ಹೋದ ನಾಯಿ ಮೊಲ ಹಿಡಿತಿತಾ”, “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?” “ಕಳ್ಳ ಹೊಕ್ಕ ಮನೆ ಎಣ್ಣೆಗೇಡು”, “ಊರ ಮುಂದ್ಲ ಬಾವಿಗೆ ಬಿದ್ರೂ ಚಿಂತಿಲ್ಲ. ಊರವರ ಬಾಯಿಗೆ ಬೀಳಬಾರದು”… ಇಂತಹ ಅದೆಷ್ಟೋ ಗಾದೆಗಳು ಅವರ ಮಾತಿನ ನಡುವೆ ಪುಂಖಾನುಪುಂಖವಾಗಿ ಬರುತ್ತಲೇ ಇರುವ ಗಾದೆಗಳು.
ಪುಟ್ಟತಾಯಕ್ಕ ದೇಶ ಸುತ್ತಿದ್ದಾರೆ. ಅವರ ಮಕ್ಕಳು ಅವರನ್ನು ವಿಮಾನದಲ್ಲಿ ಕೂರಿಸಿದ್ದಾರೆ. ಅಯೋಧ್ಯೆ, ಬುದ್ಧಗಯಾ, ಕಾಶಿ, ಕೆಂಪು ಕೋಟೆ, ಸೂರ್ಯ ನಾರಾಯಣ ದೇವಾಲಯ, ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿದ ಸ್ಥಳ… ಮುಂತಾದ ಕಡೆ ಪ್ರವಾಸ ಹೋಗಿ ಬಂದಿದ್ದಾರೆ. ಅಲ್ಲಿಯೂ ಮೈಮರೆತು ನಗುನಗುತಾ ಹಾಡಿಕೊಂಡಿದ್ದಾರೆ. ಕಂಬನಿ ಒಳಗೇ ನುಂಗಿಕೊಂಡಿದ್ದಾರೆ. ಅಡಗೂರು ಶಾಲೆಯ ಹಳೇ ವಿದ್ಯಾರ್ಥಿ ಪುಟ್ಟತಾಯಕ್ಕ ಇವತ್ತಿಗೂ ಪುಸ್ತಕ ಓದುವ ಹವ್ಯಾಸ ಇಟ್ಟು ಕೊಂಡಿದ್ದಾರೆ. ಮಕ್ಕಳು ಮೊಮ್ಮಕ್ಕಳು ಸೊಸೆಯರ ಜೊತೆ ಬದುಕುತ್ತಿದ್ದಾರೆ. ಅವರ ಮಗ ಯೋಗೇಶಪ್ಪ ಇವರ ನೂರಾರು ಗಾದೆಗಳು ಮತ್ತು ಒಗಟುಗಳನ್ನು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ- ಸ್ತ್ರೀ ಲೋಕದ ಅಸ್ಮಿತೆ-ಪದ್ಮಾ ಶ್ರೀರಾಮ್
ಕಡೆಯಲ್ಲಿ ಪುಟ್ಟತಾಯಕ್ಕ ಹೇಳಿದ ಕಿವಿಮಾತು- “ನನಗೆ 85 ವರ್ಷ ಕಳೆಯಿತು. ಮಕ್ಕಳು- ಶಿವಮ್ಮ, ಪುಷ್ಪಾವತಿ, ಮಲ್ಲಿಗ್ಯಮ್ಮ, ಯೋಗೇಶಪ್ಪ, ಸತೀಶ್ ಅಂತ. ಇಬ್ಬರು ಗಂಡು, ಮೂವರು ಹೆಣ್ಣುಮಕ್ಕಳು. ಮೊಮ್ಮಕ್ಕಳು ಕೂಡ ಇದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ. ಒಂದು ನೋವಿನ ಸಂಗತಿ ಎಂದರೆ ಬಹಳ ಚಿಕ್ಕ ವಯಸ್ಸಿಗೆ ಎರಡನೇ ಮಗಳು ತೀರಿಹೋದಳು. ಇನ್ನು ನಾನು ಆರೋಗ್ಯವಾಗಿದ್ದೇನೆ. ಕಣ್ಣು ಚೆನ್ನಾಗಿ ಕಾಣುತ್ತಿವೆ. ಕಿವಿ ಕೇಳುತ್ತಿವೆ. ನಿದ್ದೆ ಚೆನ್ನಾಗಿ ಬರುತ್ತವೆ. ಗಂಡಾಗಲಿ ಹೆಣ್ಣಗಲಿ ಕಷ್ಟಪಟ್ಟು ಶ್ರಮದ ಅನ್ನ ತಿನ್ನಬೇಕು. ದಿಟ್ಟತನದಿಂದ ಬದುಕಬೇಕು. ಒಳ್ಳೆ ದಾರೀಲಿ ನೆಡೀಬೇಕು. ನಾನು ಈಗಲೂ ಕುರಿ ಸಾಕಂಡಿದಿನಿ. ನಾಟಿ ಕೋಳಿ ಸಾಕಿದೀನಿ. ತರಕಾರಿ ಬೆಳೀತೀನಿ. ಇವತ್ತಿಗೂ ನಾನು ಒಂದ್ಕಡೆ ಕೂರಲ್ಲ. ಹಾಡೇಳದನ್ನ, ಗಾದೆ ಹೇಳದನ್ನ, ಒಗಟು ಕೇಳದನ್ನ ಪ್ರಾಣ ಓಗೋರ್ಗೂ ಬಿಡಲ್ಲ. ಪೇಟೆ ಪಟ್ಟಣದಲ್ಲಿ ಇರಬೇಕು ಅಂತ ಯಾವತ್ತೂ ಆಸೆ ಪಡಲ್ಲ. ನನಗೆ ನಮ್ಮ ಹಳ್ಳಿನೇ ಚಂದ”.
ಅವರ ಮಾತು ಕೇಳುತ್ತಾ… ಹೀಗೆ ಈ ಹಿರಿಯ ಜೀವ ಪುಟ್ಟತಾಯಮ್ಮ, ರಾಗಿ ಪುಟ್ಟತಾಯಕ್ಕ, ರಾಗಿ ಪುಟ್ಟತಾಯಜ್ಜಿ- ಇಳಿ ವಯಸ್ಸಿನ ಸಾರ್ಥಕ ಜೀವನ ನಡೆಸಲು, ಮನಸು ನಿರಾಳವಾಗಿರಲು- ಇವರಿಗೆ ಆ ಹಾಡು, ಗಾದೆ, ಒಗಟುಗಳೇ ಶಕ್ತಿ ನೀಡ್ತಿರಬೇಕು. ಅವೇ ಅವ್ರನ್ನ ಕಾಪಾಡಲಿ ಎಂದು ಹಾರೈಸುತ್ತಾ ಹೊರ ಬಂದೆ.
ಇದನ್ನೂ ಓದಿ- ಕಸ್ತೂರಬಾ ಸ್ಮರಣೆ | ಚಿಪ್ಪಿನಿಂದ ತಿರುಳಿನೆಡೆಗೆ..


