ರಂಗ ವಿಮರ್ಶೆ | ಸ್ತ್ರೀ ಕೇಂದ್ರಿತ ಸಂವೇದನೆಯ ಶರ್ಮಿಷ್ಠೆ

ಈ ಪೌರಾಣಿಕ ಪಾತ್ರಗಳೇ ಹೀಗೆ, ಅವರವರ ಭಾವ ಭಕ್ತಿಗೆ ತಕ್ಕ ಹಾಗೆ, ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು.

ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರ ಶರ್ಮಿಷ್ಠೆ.‌   ಪಾಂಡವ ಹಾಗೂ ಕೌರವ ಸಂತಾನದ ಮೂಲ ಬೇರು ಈಕೆ. ಈ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು ಬೇಲೂರು ರಘುನಂದನರವರು ಏಕ ವ್ಯಕ್ತಿ ನಾಟಕ ರಚಿಸಿದ್ದು ಚಿದಂಬರರಾವ್ ಜಂಬೆಯವರು ನಿರ್ದೇಶಿಸಿದ್ದಾರೆ. “ರಂಗ ಸಂಪದ” ತಂಡವು ಈ ನಾಟಕವನ್ನು ಪ್ರಾಯೋಜಿಸಿದ್ದು ಫೆ.22 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ಹೊನ್ನಾರು’ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆಯಿತು.

ಈ ನಾಟಕದಲ್ಲಿ ಪ್ರಸ್ತಾಪಿಸಲಾದ ವಸ್ತು ವಿಷಯದ ಮೂಲದ ಬಗ್ಗೆ ಈಗಾಗಲೇ ಗೊತ್ತಿದ್ದವರಿಗೆ ನಾಟಕ ಒಂದಿಷ್ಟು ಅರ್ಥವಾಗಬಹುದಿತ್ತು. ಆದರೆ ಈ ಪೌರಾಣಿಕ ಕಥಾನಕದ ಹಿನ್ನಲೆ ಅರಿಯದ ಪ್ರೇಕ್ಷಕರ ಮತಿಗೆ ಈ ಪ್ರಯೋಗ ಸುಲಭಕ್ಕೆ ಜೀರ್ಣವಾಗದ ಕಬ್ಬಿಣದ ಕಡಲೆ. ಚದುರಿದ ಚಿತ್ರಗಳಂತಿರುವ ಶರ್ಮಿಷ್ಠೆಯ ಬದುಕಿನ ನೆನಪಿನ ಪುಟಗಳ ಘಟನೆಗಳನ್ನು ಕ್ರಮಬದ್ದವಲ್ಲದ ರೀತಿಯಲ್ಲಿ ಜೋಡಿಸಲಾಗಿದೆ. ಸನ್ನಿವೇಶಗಳ ಕಲಸುಮೆಲೋರಗವು ನಿರ್ದೇಶಕರ ತಂತ್ರಗಾರಿಕೆ ಇರಬಹುದಾದರೂ ಪ್ರೇಕ್ಷಕರ ಗ್ರಹಿಕೆಗೆ ಕಷ್ಟಕರವಾಗುವಂತಿದೆ. ಅದಕ್ಕಾಗಿಯೇ ನಾಟಕಕ್ಕೆ ಮುನ್ನ ಕಥೆಯ ಹಿನ್ನಲೆಯನ್ನು ಪೀಠಿಕೆ ರೂಪದಲ್ಲಿ ಪ್ರಸ್ತಾಪಿಸಲಾಗಿದೆಯಾದರೂ ಹಲವಾರು ಪ್ರಶ್ನೆಗಳು ನಾಟಕ ನೋಡಿದ ನಂತರವೂ ಕಾಡುತ್ತವೆ.

ಕಚ ಯಾರು? ದೇವಯಾನಿಯ ಮಾಜಿ ಪ್ರಿಯಕರ. ಸಂಜೀವಿನಿ ಮಂತ್ರ ಕಲಿತಾದ ನಂತರ ದೇವಯಾನಿಯ ಪ್ರೀತಿಯನ್ನು ತಿರಸ್ಕರಿಸಿ ದೇವಲೋಕಕ್ಕೆ ಹೋದವ. ಆದರೆ ಆತ ಮತ್ತೆ ಯಯಾತಿಯ ಒಡ್ಡೋಲಗಕ್ಕೆ ಯಾಕೆ ಬಂದ? ಶರ್ಮಿಷ್ಠೆಯ ಮೇಲೆ ದೇವಯಾನಿ ಸಿಟ್ಟಿಗೇಳಲು ಉಡುಗೆಗಳ ಬದಲಾವಣೆ ಸಕಾರಣವಾದೀತೆ? ಇಲ್ಲಿ ಪೌರಾಣಿಕ ಕಥೆಯನ್ನು, ಪುರಾಣದ ಪಾತ್ರಗಳನ್ನು ಮುರಿದು ಕಟ್ಟಲಾಗಿದೆ. ಹೀಗೆ ಮರುವ್ಯಾಖ್ಯಾನ ಮಾಡುವುದೂ ಸೃಜನಶೀಲತೆಯಾಗಿದೆ. ಆದರೆ ಇರುವುದನ್ನು ಮುರಿದು ಮತ್ತೆ ಕಟ್ಟುವಾಗ ಅಗತ್ಯವಿರುವಷ್ಟು ತರ್ಕಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಕಥಾನಕದ ಸನ್ನಿವೇಶದ ಸರಮಾಲೆಗಳನ್ನು ಹಿಂದು ಮುಂದು ಮಾಡಿ ಜೋಡಿಸಿ ನೋಡುಗರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದೇ ಈ ನಾಟಕದಲ್ಲಿ ಕ್ರಿಯಾಶೀಲತೆ ಆದಂತಿದೆ.

ಶರ್ಮಿಷ್ಠೆ ಪಾತ್ರದ ಮೇಲೆ ಸಹಾನುಭೂತಿ ಹುಟ್ಟಿಸಲು ಇಲ್ಲಿ ದೇವಯಾನಿಯನ್ನು ಖಳನಾಯಕಿಯನ್ನಾಗಿಸುವ ಪ್ರಯತ್ನವನ್ನು ಮಾಡಲಾಗಿದೆ. ಅಸಲಿ ಕಥಾನಕವೇ ಬೇರೆಯಾಗಿದೆ. ಅಲ್ಲಿ ದಾನವ ರಾಜಕುಮಾರಿ ಶರ್ಮಿಷ್ಠೆಯ ಉಡುಪನ್ನು ತೊಟ್ಟಿದ್ದಕ್ಕೆ ಶರ್ಮಿಷ್ಠೆಯೇ ದುರಹಂಕಾರದಿಂದ ಕೋಪಗೊಂಡು ದೇವಯಾನಿಯನ್ನು ನಿಂದಿಸಿ, ಬೆತ್ತಲೆಗೊಳಿಸಿ, ನೀರಿಲ್ಲದ ಹಾಳು ಬಾವಿಗೆ ತಳ್ಳಿ ತನ್ನ ಕ್ರೌರ್ಯವನ್ನು ಮೆರೆಯುತ್ತಾಳೆ. ಬೇಟೆಗಾಗಿ ಬಂದ ರಾಜ ಯಯಾತಿಯು ದೇವಯಾನಿಯ ಕೈಹಿಡಿದು ಮೇಲೆತ್ತಿ ವಸ್ತ್ರ ನೀಡುತ್ತಾನೆ. ಸತ್ತವರನ್ನು ಬದುಕಿಸುವ ಸಂಜೀವಿನಿ ವಿದ್ಯೆಯರಿತ ಗುರು ಶುಕ್ರಾಚಾರ್ಯರ ಮಗಳೆಂದು ತಿಳಿದು ದೇವಯಾನಿಯನ್ನು ಮದುವೆಯಾಗುತ್ತಾನೆ. ತನಗಾದ ಅವಮಾನಕ್ಕೆ ಬದಲಾಗಿ ದೇವಯಾನಿ ತನ್ನ ತಂದೆಯ ಮೂಲಕ ದಾನವ ರಾಜನ ಮೇಲೆ ಒತ್ತಡ ತಂದು ಶರ್ಮಿಷ್ಠೆಯನ್ನು ತನ್ನ ದಾಸಿಯನ್ನಾಗಿಸಿಕೊಂಡು ಅರಮನೆಗೆ ಹೋಗುತ್ತಾಳೆ. ಅಲ್ಲಿ ಯಯಾತಿಯ ಜೊತೆ ಸಂಬಂಧ ಹೊಂದಿ ಮೂವರು ಮಕ್ಕಳಿಗೆ ಜನ್ಮನೀಡಿದ ಶರ್ಮಿಷ್ಠೆಯು ದೇವಯಾನಿ ತನಗೆ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುತ್ತಾಳೆ. ತನಗಾದ ನಂಬಿಕೆ ದ್ರೋಹಕ್ಕೆ ಪ್ರತೀಕಾರವಾಗಿ ದೇವಯಾನಿಯು ಯಯಾತಿಗೆ ಅಕಾಲ ವೃದ್ಧಾಪ್ಯ ಪ್ರಾಪ್ತವಾಗುವಂತೆ ತಂದೆಯಿಂದ ಶಾಪ ಕೊಡಿಸುತ್ತಾಳೆ. ಶರ್ಮಿಷ್ಠೆಯ ಮಗ ಪುರು ಯಯಾತಿಗೆ ತನ್ನ ಯೌವನ ಧಾರೆಯೆರೆಯುತ್ತಾನೆ. ಇದು ಅಸಲಿ ಪುರಾಣ. ಆದರೆ ಈ ನಾಟಕದಲ್ಲಿ ಶರ್ಮಿಷ್ಠೆ ಮಾಡಿದ ಮಿತ್ರದ್ರೋಹ ಮತ್ತು ಗೆಳತಿ ಹಾಗೂ ಒಡತಿಯಾದವಳ ಗಂಡನನ್ನೇ ಮೋಹಿಸಿ ಕೂಡಿದ ನಂಬಿಕೆ ದ್ರೋಹಗಳನ್ನು ಮರೆಮಾಚಿ ಶರ್ಮಿಷ್ಠಾ ಪುರಾಣವನ್ನು ಈ ನಾಟಕದಲ್ಲಿ ಪುನಃ ರಚಿಸಲಾಗಿದೆ. ಶರ್ಮಿಷ್ಠೆಯ ಪಿತೃ ವಾಕ್ಯ ಪರಿಪಾಲನೆ ಮತ್ತು ತ್ಯಾಗಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ.

ಬೇಲೂರು ರಘುನಂದನ್ ರವರ ಸ್ಕ್ರಿಪ್ಟಿಗೆ ವಿ.ಎಸ್.ಖಾಂಡೆಕರ್ ರವರ ಯಯಾತಿ ಕಾದಂಬರಿಯ ಭಾಗಗಳನ್ನು ಕಸಿ ಮಾಡಿ ಹೆಗ್ಗೋಡಿನ ಉಮಾಮಹೇಶ್ವರ ಹೆಗಡೆಯವರು ಹಾಗೂ ರಮೇಶಚಂದ್ರರವರು ರಂಗಪಠ್ಯವನ್ನು ಸಿದ್ದಪಡಿಸಿದ್ದು ಅದಕ್ಕೆ ಚಿದಂಬರರಾವ್ ಜಂಬೆಯವರು ತಮಗನ್ನಿಸಿದ ಬದಲಾವಣೆಗಳನ್ನು ಮಾಡಿದ್ದಾರೆ. ಒಟ್ಟಿನ ಮೇಲೆ “ಬಹಳ ಜನ ಬಾಣಸಿಗರು ಸೇರಿ ಅಡುಗೆಯ ಸ್ವಾದ ಕೆಡಿಸಿದರು’ ಎನ್ನುವ ಆಂಗ್ಲ ಗಾದೆಯನ್ನು ಸಾಬೀತು ಪಡಿಸಿದ್ದಾರೆ. ನಾಟಕವೊಂದನ್ನು ಕಟ್ಟುವಾಗ ನಿರ್ದೇಶಕರು ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಸಲೀಸಾಗಿ ಮರೆಮಾಚಿ ಪ್ರದರ್ಶನವನ್ನು ಗೆಲ್ಲಿಸಿದ್ದು ಅಭಿಜಾತ ರಂಗಕಲಾವಿದೆಯಾದ ಉಮಾಶ್ರೀಯವರ ಅಪ್ರತಿಮ ಅಭಿನಯ.

ಈ ಏಕ ವ್ಯಕ್ತಿ ನಾಟಕದ ಮಿಸ್ಸಿಂಗ್ ಲಿಂಕ್ ಮತ್ತು ಜಂಪಿಂಗ್ ಲಿಂಕ್ ಮಿತಿಗಳ ನಡುವೆಯೂ ಇಡೀ ನಾಟಕವನ್ನು ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ನೋಡುಗರ ಮನದಾಳದಲ್ಲಿ ಮೂಡಿಸಿ ಮೋಡಿ ಮಾಡಿದ್ದು ಉಮಾಶ್ರೀಯವರ ಅಮೋಘ ಅಭಿನಯ. ಈ ವಯಸ್ಸಿನಲ್ಲಿಯೂ ಅವರ ಪಾದರಸದಂತಹ ಆಂಗಿಕಾಭಿನಯ, ನಿರರ್ಗಳವಾಗಿ ಅಡೆತಡೆ ಇಲ್ಲದೇ ಹರಿದು ಬಂದ ವಾಚಿಕಾಭಿನಯ, ಹೆಜ್ಜೆ ಹೆಜ್ಜೆಗೂ ಬದಲಾಗುವ ಭಾವಾಭಿನಯಗಳು  ಪ್ರೇಕ್ಷಕರ ಮನದಂಗಳದಲ್ಲಿ ಸಂಚಲನ ಹುಟ್ಟಿಸುವಂತಿದೆ. ಒಬ್ಬರೇ ಪಾತ್ರಧಾರಿ ಹಲವು ಪಾತ್ರಗಳನ್ನು ಮಾಡುವಾಗ ಬೇಕಾಗುವ ದಿಢೀರ ಭಾವ ಬದಲಾವಣೆಗಳು ಅಚ್ಚರಿ ಹುಟ್ಟಿಸುವಂತಿವೆ. ನಟನೆಯಲ್ಲಿ ಉಮಾಶ್ರೀಯವರಿಗೆ ಉಮಾಶ್ರೀಯವರೇ ಸಾಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಾಟಕದ ಕಥಾನಕದ ವ್ಯತಿರಿಕ್ತ ನಿರೂಪಣೆ ಹಾಗೂ ಸನ್ನಿವೇಶಗಳ ಕಲಸುಮೇಲೋಗರ ಜೋಡಣೆಗಳನ್ನು ಪಕ್ಕಕ್ಕಿಟ್ಟು ನೋಡಿದಾಗ ನಿರ್ದೇಶಕರು ಸಂಯೋಜಿಸಿದ ಬ್ಲಾಕಿಂಗ್ ಮತ್ತು ಮೂವ್‌ ಮೆಂಟ್ ಗಳು ಗಮನಾರ್ಹವಾಗಿ ಮೂಡಿಬಂದಿವೆ. ಒಬ್ಬರೇ ಪಾತ್ರಧಾರಿ ಕಲಾಕ್ಷೇತ್ರದಂತಹ ದೊಡ್ಡದಾದ ರಂಗವೇದಿಕೆಯನ್ನು ಬಳಸಿಕೊಂಡ ಪರಿ ವಿಸ್ಮಯಕಾರಿಯಾಗಿದೆ.

ಒಳಗಿನ ಹೂರಣ ಹೇಗೆಯೇ ತುಂಬಿರಲಿ, ಮೇಲಿನ ಅಲಂಕಾರದಾವರಣ ತುಂಬಾ ಸೊಗಸಾಗಿದೆ. ಅನುಶ್ ಶೆಟ್ಟಿಯವರು ಸಂಯೋಜಿಸಿದ ಹಿತಮಿತವಾದ ಹಿನ್ನೆಲೆ ಸಂಗೀತ ಮೂಡ್ ಸೃಷ್ಟಿಸುವಲ್ಲಿ ಸಫಲವಾಗಿದೆ. ಪ್ರಮೋದ ಶಿಗ್ಗಾವ್ ರವರ ರಂಗವಿನ್ಯಾಸ ಅತ್ಯಂತ ಸರಳವೂ ಸುಂದರವೂ ಆಗಿದೆಯಾದರೂ ಒಂದಿಷ್ಟಾದರೂ ಅರಮನೆಯನ್ನು ಸಂಕೇತಿಸುವ ಕುರುಹುಗಳನ್ನು ಅಳವಡಿಸಿದ್ದರೆ ಅರ್ಥಪೂರ್ಣವಾಗಬಹುದಾಗಿತ್ತು. ಅರುಣ್ ಮೂರ್ತಿಯವರ ಬೆಳಕಿನ ವಿನ್ಯಾಸ ವಿಭಿನ್ನವೂ ವಿಶಿಷ್ಟವೂ ಆಗಿತ್ತು. ಸ್ಪಾಟ್ ಲೈಟ್ ಮೂಲಕವೇ ಅಗೋಚರ ಪಾತ್ರದ ಇರವನ್ನು ತೋರಿಸಿದ್ದು ಸೊಗಸಾಗಿತ್ತು. ಪಾತ್ರಧಾರಿಯ  ಚಲನೆಯ ಜೊತೆಗೆ ಲೈಟ್ ಕೂಡಾ ಮೂವ್‌ ಮೆಂಟ್ ಆಗಿದ್ದು ಬೆಸ್ಟ್ ಇಫೆಕ್ಟ್ ಸೃಷ್ಟಿಸಿತ್ತು.

ಆದರೆ ಅದ್ಯಾಕೆ ಅರಮನೆಯ ದಾಸಿಯ ಕೈಯಲ್ಲಿ ಜಾಡಮಾಲಿಯ ಬೀದಿ ಗುಡಿಸುವ ಪೊರಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಅರಮನೆ ಬಿಡಿ, ಯಾರೂ ಮನೆಯೊಳಗೂ ಸಹ ಅಂತಹ ಪೊರಕೆ ಬಳಸುವುದಿಲ್ಲ. ವಸ್ತ್ರವಿನ್ಯಾಸದಲ್ಲಿಯೂ ಅರಮನೆಯ ದಾಸಿಯನ್ನು, ಅರಸನ ಸಂಗಾತಿಯನ್ನು, ಅರಸಿಯ ಗೆಳತಿಯನ್ನು ಯಾವುದೋ ಮನೆಗೆಲಸದ ಹೆಂಗಸಿನಂತೆ ರೂಪಿಸಿದ್ದು ಆಕ್ಷೇಪಣೀಯವಾಗಿದೆ. ಚಕ್ರವರ್ತಿಯ ದಾಸಿಯ ವಸ್ತ್ರಸಂಹಿತೆಯನ್ನು ಅರಮನೆಯ ಘನತೆಗೆ ತಕ್ಕಂತೆ ಬದಲಾಯಿಸುವುದು ಸೂಕ್ತವೆನಿಸುತ್ತದೆ.

ಯಾರಿಗೆ ಈ ನಾಟಕದ ವಸ್ತು ಅದೆಷ್ಟು ದಕ್ಕಿತೋ ಗೊತ್ತಿಲ್ಲ, ಆದರೆ ಒಟ್ಟಾರೆಯಾಗಿ ಇಡೀ ನಾಟಕದ ವೀಕ್ಷಣೆಯ ನಂತರ ಪ್ರೇಕ್ಷಕರ ಮನದಲ್ಲಿ ಸ್ಥಾಯಿಯಾಗಿ ಉಳಿಯುವುದು ಕಲಾವಿದೆ ಉಮಾಶ್ರೀಯವರ ಅಭಿನಯ ಮಾತ್ರ. ಆಗ ಒಡಲಾಳದಲ್ಲಿ ಇಪ್ಪತ್ತು ವಯಸ್ಸಿನ ಉಮಾಶ್ರೀಯವರು ಎಪ್ಪತ್ತು ವರ್ಷದ ವೃದ್ಧೆಯಾಗಿ ಗಮನ ಸೆಳೆದಿದ್ದರು. ಈಗ ಮಾಗಿದ ವಯಸಿನಲ್ಲಿ ಹದಿಹರೆಯದ ಪಾತ್ರಕ್ಕೆ ಜೀವತುಂಬಿ ಲವಲವಿಕೆಯಿಂದ ಅಭಿನಯಿಸಿದ್ದು ರಂಗಭೂಮಿಯ ವಿಸ್ಮಯ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿಗಳು

ಇದನ್ನೂ ಓದಿ- ಸ್ತ್ರೀ ಲೋಕದ ಅಸ್ಮಿತೆ-ಪದ್ಮಾ ಶ್ರೀರಾಮ್

More articles

Latest article

Most read