“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಬೋಧಕರಾಗಿ, ಸಂಶೋಧಕರಾಗಿ, ಸೂಕ್ಷ್ಮ ವಿಜ್ಞಾನಿಯಾಗಿ, ದಕ್ಷ ಆಡಳಿತಗಾರರಾಗಿ, ಸಾಮಾಜಿಕ ನೋಟ ಉಳ್ಳವರಾಗಿ, ಉತ್ತಮ ಗೃಹಿಣಿಯಾಗಿ- ಮಹಿಳೆಯರು ಬಹುಸ್ತರದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರೆಂಬುದಕ್ಕೆ ಡಾ.ರತ್ನಾನಾಯಕ್ ಉತ್ತಮ ನಿದರ್ಶನ. ಪ್ರಾದೇಶಿಕ ಭಿನ್ನತೆ, ಬಹುಜನಾಂಗೀಯ, ಬಹುಪರಿಣಿತರ ನಡುವೆಯಲ್ಲಿ- ಲಿಂಗ ತಾರತಮ್ಯಗಳನ್ನು ಮೀರಿ ಅವರು ವಿದೇಶದಲ್ಲಿ ಸಾಧನೆ ಮಾಡಿರುವುದು ನಿಜಕ್ಕೂ ಹಾಸನಕ್ಕೆ ಹೆಮ್ಮೆಯ ಸಂಗತಿ. – ರೂಪ ಹಾಸನ.
ವಿಜ್ಞಾನವನ್ನು ಕಲಿಯುವುದು ಹೆಣ್ಣುಮಕ್ಕಳಿಗೆ ಕಷ್ಟ ಎನ್ನುವ ಭಾವನೆ 50 ವರ್ಷಗಳ ಹಿಂದೆ ಬಲವಾಗಿತ್ತು. ಆ ಕಾಲದಲ್ಲಿಯೇ ಅತ್ಯಂತ ಕಠಿಣ ಜ್ಞಾನಶಿಸ್ತು ಎಂದು ಪರಿಗಣಿಸಲ್ಪಟ್ಟಿರುವ ಭೌತಶಾಸ್ತ್ರವನ್ನು ಆಯ್ದುಕೊಂಡು ವಿದೇಶದಲ್ಲಿ ಡಾಕ್ಟರೇಟ್ ಪಡೆದು, ಅಮೆರಿಕಾದ ವೇನ್‍ಸ್ಟೇಟ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ, ಮುಖ್ಯಸ್ಥರಾಗಿ, ಅಸೋಸಿಯೇಟ್ ಡೀನ್ ಆಗಿ ಕಾರ್ಯನಿರ್ವಹಿಸಿದ ಡಾ.ರತ್ನಾನಾಯಕ್ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ನಿವೃತ್ತರಾದರು. ಈಗ 74 ವರ್ಷದ ಈ ಭೌತವಿಜ್ಞಾನಿ, ನಿವೃತ್ತಿಯ ನಂತರವೂ ಓದು, ಸಮಾಜಕಾರ್ಯದಲ್ಲಿ ಅವಿರತ ತೊಡಗಿಕೊಂಡಿದ್ದಾರೆ. ಇವರು ಹಾಸನ ಜಿಲ್ಲೆಯವರೆಂಬುದು ಹೆಮ್ಮೆಯ ಸಂಗತಿ.
ನಾಗರತ್ನ.ಎಚ್.ಎಂ. ಹುಟ್ಟಿದ್ದು ಆಲೂರು ತಾಲೂಕಿನ ಯಡೂರಿನಲ್ಲಿ. ತಂದೆ ಎಚ್.ಮಲ್ಲಪ್ಪ ಪೊಲೀಸ್ ಕಛೇರಿಯಲ್ಲಿ ಗುಮಾಸ್ತರಾಗಿದ್ದರು. ತಾಯಿ ಪಾರ್ವತಮ್ಮ ಅಲ್ಪ ವಿದ್ಯಾವಂತೆ. ನಾಗರತ್ನ ಅವಿಭಕ್ತ ಕುಟುಂಬದ ಶ್ರೀಮಂತ ಮನೆತನದವರಾಗಿದ್ದರೂ ಪುರುಷ ಪ್ರಧಾನ್ಯತೆ ಹಾಗೂ ಲಿಂಗ ತಾರತಮ್ಯಗಳಿಂದ ಅಲಕ್ಷ್ಯಕ್ಕೆ ಒಳಗಾದವರು. ನಾಲ್ಕನೇ ವರ್ಷಕ್ಕೆ ಹಾಸನದ ಸೆಂಟ್ ಫಿಲೋಮಿನಾ ಶಾಲೆಗೆ ಸೇರಿಸಿದರು. ಪ್ರತಿದಿನ 6 ಕಿಲೋಮೀಟರ್ ನಡೆದುಕೊಂಡು ಹೋಗಿ, ವಿದ್ಯಾಭ್ಯಾಸ ಮಾಡಿ, ಹದಿನಾಲ್ಕನೆಯ ವಯಸ್ಸಿಗೆ ಎಸ್‍ಎಸ್‍ಎಲ್‍ಸಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಾಸು ಮಾಡಿದ್ದೊಂದು ಹೆಗ್ಗಳಿಕೆ.
ಜಾತಕದಲ್ಲಿ ‘ಹದಿನಾಲ್ಕನೇ ವಯಸ್ಸಿಗೆ ಮದುವೆ ಮಾಡದಿದ್ದರೆ ಮುಂದೆ ಮದುವೆಯಾಗುವುದು ಕಷ್ಟ’ ಎಂದು ಬರೆದಿದ್ದರಿಂದ ಮದುವೆ ಪ್ರಯತ್ನಗಳು ನಡೆದವು. ನಾಗರತ್ನರಿಗೆ ಮದುವೆ ಇಷ್ಟವಿರಲಿಲ್ಲ. ಹೇಳಲು ಭಯ. ಬೆಂಬಲಕ್ಕೆ ನಿಂತಿದ್ದು ತಾಯಿ. ‘ತಾವು ಚಿಕ್ಕ ವಯಸ್ಸಿಗೆ ಮದುವೆಯಾಗಿ ಅನುಭವಿಸಿದ್ದಾಯ್ತು. ಮಗಳು ಓದಿ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ನಿಲ್ಲಲಿ’ ಎಂಬ ಬಯಕೆ ಅವರಿಗಿತ್ತು. ಮನೆಯವರೆಲ್ಲರ ವಿರೋಧ ಕಟ್ಟಿಕೊಂಡು ಮಗಳ ವಿದ್ಯಾಭ್ಯಾಸಕ್ಕೆ ಬೆಂಬಲವಾದರು. ಸರ್ಕಾರಿ ಕಾಲೇಜಿನಲ್ಲಿ ಓದಿ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದಿದ್ದರಿಂದ ವೈದ್ಯಕೀಯ ಅಥವಾ ಇಂಜಿನಿಯರಿಂಗ್‍ಗೆ ಸೇರಲು ಸಾಧ್ಯವಿತ್ತು. ಆದರೆ ಹೆಣ್ಣುಮಕ್ಕಳನ್ನು ವೃತ್ತಿ ಕೋರ್ಸುಗಳಿಗೆ ಕಳುಹಿಸುವ ವಾತಾವರಣ ಆಗಿರಲಿಲ್ಲ, ಖರ್ಚು ಭರಿಸುವ ಮನಸ್ಸಿರಲಿಲ್ಲ! ಅದುವರೆಗೂ ಸಂಬಂಧಿಕರಲ್ಲಿ ಯಾವ ಹುಡುಗಿಯೂ ವಿಜ್ಞಾನದಲ್ಲಿ ಅಷ್ಟೊಂದು ಅಂಕ ಪಡೆದಿರಲಿಲ್ಲವಾದ್ದರಿಂದ ನಾಗರತ್ನಾರ ಸಾಧನೆ ಸುದ್ದಿಯಾಯಿತು.
ಹಗಲು-ರಾತ್ರಿ ಕಷ್ಟಪಟ್ಟು ಓದಿ ಹದಿನೆಂಟನೇ ವಯಸ್ಸಿಗೆ, ಉತ್ತಮ ಅಂಕಗಳೊಂದಿಗೆ ಬಿಎಸ್‍ಸಿ ಪದವಿ ಪಡೆದದ್ದು ಮತೊಮ್ಮೆ ಸುದ್ದಿಯಾಯಿತು! ನಾಲ್ಕು ಹೆಣ್ಣುಮಕ್ಕಳಲ್ಲಿ ಮೊದಲ ಮಗಳಾದ್ದರಿಂದ ಬೇಗ ಮದುವೆಯಾಗಿ, ತಂಗಿಯರ ಮದುವೆಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಡವಿತ್ತು. ಆದರೆ ಅವರ ತಂದೆ ನಿವೃತ್ತಿ ಹೊಂದುವುದರಲ್ಲಿದ್ದರಿಂದ ಮುಂದಕ್ಕೆ ಓದಿ ಕೆಲಸಕ್ಕೆ ಸೇರಿ ಕುಟುಂಬದ ಜವಾಬ್ದಾರಿ ಹೊರಬೇಕೆಂಬುದು ನಾಗರತ್ನರ ಆಸೆಯಾಗಿತ್ತು. ಮತ್ತೆ ಇವರ ತಾಯಿ, ಹಠ ಹಿಡಿದು ಸಂಬಂಧಿಕರ ಮನೆಯಲ್ಲಿ ಇರಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿಗೆ ಸೇರಿಸಿದರು. ಅದರಲ್ಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು! ಎರಡೂ ವರ್ಷಗಳಲ್ಲೂ ದೊರೆತ ಮೆರಿಟ್ ಸ್ಕಾಲರ್‌ಶಿಪ್ ನ್ನು ತಂದೆಗೆ ನೀಡಿ ಕುಟುಂಬದ ಹೊರೆಯನ್ನು ಕಡಿಮೆ ಮಾಡಿದರು. ಸ್ಕಾಲರ್‌ಶಿಪ್ ನ ಮಹತ್ವವನ್ನು ಅರಿತು ಬೇರೆ ಹೆಣ್ಣುಮಕ್ಕಳಿಗೂ ಅನುಕೂಲವಾಗಲೆಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ನೀಡಲು ಈಗ ನಾಗರತ್ನ ತಾವೇ ದತ್ತಿ ಸ್ಥಾಪಿಸಿದ್ದಾರೆ.

ಎಂಎಸ್‍ಸಿ ಮುಗಿದ ಮೇಲೆ ಕುಟುಂಬದಲ್ಲಿ ನಾಗರತ್ನ ಅವರ ಮದುವೆ ಪ್ರಯತ್ನಗಳು ನಡೆದವು. ಆದರೆ ಅವರು ದೃಢ ಚಿತ್ತದಿಂದ ಚಾಮರಾಜನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. ಪೋಷಕರಿಗೆ ಆರ್ಥಿಕವಾಗಿ ನೆರವಾಗಿ ಉತ್ತಮ ಶಿಕ್ಷಕಿಯಾಗಲೆತ್ನಿಸುತ್ತಿರುವಾಗಲೇ ಅವರ ತಂದೆಯವರಿಗೆ ಕಾಯಿಲೆಯಾಗಿ ತೀರಿ ಹೋದಾಗ, ಇಡೀ ಕುಟುಂಬದ ಜವಾಬ್ದಾರಿ ನಾಗರತ್ನ ಅವರ ಮೇಲೆ ಬಿದ್ದಿತು. ದೂರದಲ್ಲಿದ್ದರೆ ಕಷ್ಟವೆಂದು ಹಾಸನದ ಎವಿಕೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ದುಃಖತಪ್ತ ತಾಯಿಗೆ ಸಮಾಧಾನ ಹೇಳುತ್ತಾ ನಾಲ್ಕು ಮಂದಿ ತಂಗಿಯರು ಹಾಗೂ ತಮ್ಮನ ಹೊಣೆಯನ್ನು ಹೊತ್ತುಕೊಂಡು ವೃತ್ತಿಯನ್ನು ಮುಂದುವರೆಸಿ ಅತ್ಯುತ್ತಮ ಉಪನ್ಯಾಸಕಿಯಾದರು. ಆ ದಿನಗಳಲ್ಲಿ ಚಿಕ್ಕವರಿಗೆ ಶ್ರದ್ಧೆ, ಕಲಿಕೆ, ಪ್ರಾಮಾಣಿಕತೆ, ಸರಳತೆ, ವೃತ್ತಿಪರತೆಯಲ್ಲಿ ಮಾದರಿಯಂತಿದ್ದರು ನಾಗರತ್ನ.
ಕಾಲೇಜಿನಲ್ಲಿ ಸಹೋದ್ಯೋಗಿಯೊಬ್ಬರು ವಿದೇಶಕ್ಕೆ ವ್ಯಾಸಂಗಕ್ಕೆ ಹೋದಾಗ ಇವರಿಗೂ ವಿದೇಶಕ್ಕೆ ಬರಲು ಆಹ್ವಾನವಿತ್ತರು. ಮುಂದೆ ಉನ್ನತ ವಿದ್ಯಾಭ್ಯಾಸ ಪಡೆಯುವ ಹಂಬಲವಿದೆಯೆಂದು ತಾಯಿ ಬಳಿ ಹೇಳಿಕೊಂಡರು. ಮದುವೆಯಾಗದ ಮಗಳನ್ನು ಒಂಟಿಯಾಗಿ ವಿದೇಶಕ್ಕೆ ಕಳುಹಿಸಿದರೆ ಜನ ಏನೆನ್ನುತ್ತಾರೆಂಬ ಅಂಜಿಕೆಯ ಮಧ್ಯೆಯೂ ಮಗಳ ಭವಿಷ್ಯ ಮುಖ್ಯವೆಂದು ವಿದೇಶಕ್ಕೆ ಹೋಗಲು ಅನುವು ಮಾಡಿದರು. 70ರ ದಶಕದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಒಂಟಿಯಾಗಿ ವಿದೇಶಕ್ಕೆ ಹೋಗುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅಪರಿಚಿತ ದೇಶಕ್ಕೆ ಒಂಟಿಯಾಗಿ ಹೋಗಿ ಶೈಕ್ಷಣಿಕವಾಗಿ ಸಾಧನೆಗೈದು, ವೈಯಕ್ತಿಕ ಜೀವನವನ್ನು ಮತ್ತು ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಾಗರತ್ನ ಅವರದು.
ಭಾಷೆಯ ತೊಡಕು, ಹೊಸ ಸಂಸ್ಕೃತಿ, ಭೌಗೋಳಿಕ ವ್ಯತಿರಿಕ್ತ ವಾತಾವರಣ, ಆಹಾರ, ಜೀವನಶೈಲಿಗೆ ಒಗ್ಗಿಕೊಳ್ಳಲು ತುಂಬಾ ಕಷ್ಟವಾಯಿತೆಂದು ಅವರು ಹೇಳುತ್ತಾರೆ. ಅಲ್ಲಿ ಇವರ ಸಹಾಯಕ್ಕೆ ಬಂದವರು ಹುಬ್ಬಳ್ಳಿಯವರಾದ ಡಾ.ವಾಮನ್ ನಾಯಕ್. ಅವರೂ ಭೌತಶಾಸ್ತ್ರ ವ್ಯಾಸಂಗ ಮಾಡಿದ್ದರು. ಶೈಕ್ಷಣಿಕ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಇವರಿಗೆ ಹೆಚ್ಚಿನ ಬೆಂಬಲ ನೀಡಿದರು. ಪರಸ್ಪರ ಇವರಲ್ಲಿ ಅನುರಾಗ ಅಂಕುರಿಸಿತ್ತು. ಪಿಎಚ್‍ಡಿ ಮುಗಿಸಿ, ಕೆಲಸ ದೊರಕಿದ ಮೇಲೆ ಮನೆಯವರನ್ನೊಪ್ಪಿಸಿ 1983ರಲ್ಲಿ ವಾಮನ್ ಅವರನ್ನು ವಿವಾಹವಾಗಿ ರತ್ನಾನಾಯಕ್ ಆದರು! ಆ ಕಾಲದಲ್ಲೇ ಅಂತರ್ಜಾತಿಯ ವಿವಾಹವಾಗಿ ನಾಗರತ್ನ ಕ್ರಾಂತಿಕಾರಕ ಹೆಜ್ಜೆಯನಿಟ್ಟಿದ್ದರು.
ಇವರ ಶೈಕ್ಷಣಿಕ ಸಾಧನೆಗಳು- ಸಾಲಿಡ್ ಸ್ಟೇಟ್ ಫಿಸಿಕ್ಸ್, ಬಯೋ ಫಿಸಿಕ್ಸ್ ಮತ್ತು ಮೆಟೀರಿಯಲ್ಸ್ ಸೈನ್ಸ್‌ನಲ್ಲ್ಲಿ ಇವರದು ವಿಶೇಷ ಪರಿಣಿತಿ. ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಹಾಗೂ ಶಿಕಾಗೋದ ‘ಆರ್ಗೋನೆ ನ್ಯಾಷನಲ್ ಲ್ಯಾಬೋರೇಟರಿ’ಯಲ್ಲಿ ಮ್ಯಾಗ್ನೆಟಿಕ್ ಮೆಟೀರಿಯಲ್ಸ್ ವಿಷಯದಲ್ಲಿ ಪೋಸ್ಟ್ ಡಾಕ್ಟರೇಟ್. ತಮ್ಮನ್ನು ಅಸಂಪ್ರದಾಯಕ ಹಾಗೂ ಮೆಟೀರಿಯಲ್ ಭೌತವಿಜ್ಞಾನಿ ಎಂದು ಕರೆದುಕೊಳ್ಳುವ ರತ್ನಾನಾಯಕ್ ಬಹುಶಾಸ್ತ್ರೀಯ ಸಂಶೋಧನಾ ಕಾರ್ಯಗಳಲ್ಲಿ ವಿಶೇಷ ಆಸಕ್ತರು. ತಮ್ಮ ಸಹೋದ್ಯೋಗಿಗಳೊಂದಿಗೆ ‘ಕರ್ಮಾನೊಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್’ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಯೂನಿವರ್ಸಿಟಿ ಆಫ್ ಮಿಷಿಗನ್ ಇವುಗಳ ಸಹಯೋಗದಲ್ಲಿ “ರಾಮನ್ ಸ್ಟೆಕ್ಟ್ರೋಸ್ಕಫಿ ಫಾರ್ ಕ್ಯಾನ್ಸರ್ ಡಿಟೆಕ್ಷನ್” ಎಂಬ ಮಹತ್ವದ ವಿಷಯದ ಸಂಶೋಧನೆಯನ್ನು ನಡೆಸಿದ್ದಾರೆ.
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ಅಮೆರಿಕಾದ ದೊಡ್ಡ ಆಟೋ ಕಂಪನಿಯಾದ “ಜನರಲ್ ಮೋಟರ್ಸ್” ಸಹಯೋಗದೊಂದಿಗೆ ‘ಲಿಥಿಯಮ್ ಲಿಯಾನ್ ಬ್ಯಾಟರಿ, ಎಲೆಕ್ಟ್ರೋಡ್ ಮೆಟೀರಿಯಲ್ಸ್’ ಕುರಿತು ರತ್ನಾನಾಯಕ್‍ರದು ಬಹುಮುಖ್ಯ ಸಂಶೋಧನೆ. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸಹಾಯಕವಾಗುವಂತಹ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು ಇವರ ಹೆಚ್ಚುಗಾರಿಕೆ. ಮುಖ್ಯವಾಗಿ ನ್ಯಾಷನಲ್ ಸೈನ್ಸ್ ಫೌಂಡೇಷನ್‍ನಿಂದ ಅಪಾರವಾದ ಅನುದಾನ ದೊರಕಿಸಿದರು. ಇವರಿಗಿಂತ ಹೆಚ್ಚು ವಯಸ್ಸು, ಅನುಭವದ ಪರಿಣಿತರಿದ್ದರೂ ಇವರ ಪ್ರಾಮಾಣಿಕತೆ, ಬದ್ಧತೆ, ನಿಸ್ವಾರ್ಥ, ಸರಳ… ನಡವಳಿಕೆಗಳಿಂದಾಗಿ ಎರಡನೇ ಅವಧಿಗೆ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರನ್ನಾಗಿ ಮುಂದುವರೆಸಿದ್ದು ಮಹತ್ವದ್ದು. ಓದುವುದರಲ್ಲಿ ಅತೀವ ಆಸಕ್ತಿ ಹೊಂದಿರುವ ರತ್ನಾನಾಯಕ್ ಪ್ರಸ್ತುತ ಮೆದುಳು ನರಕೋಶಗಳ ಮೇಲೆ ಧ್ಯಾನ, ಪ್ರಾಣಾಯಾಮ ಮತ್ತು ಯೋಗಾಭ್ಯಾಸಗಳ ಪರಿಣಾಮ ಕುರಿತು ಆಳ ಅಧ್ಯಯನ ನಡೆಸುತ್ತಾ ಅವುಗಳ ವೈಜ್ಞಾನಿಕ ಸಂಬಂಧವನ್ನು ಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.
ಡಾ.ರತ್ನಾನಾಯಕ್ 200ಕ್ಕೂ ಹೆಚ್ಚು ವಿಭಿನ್ನ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. 15 ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ. ಸ್ಮಾರ್ಟ್ ಸೆನ್ಸರ್ ಮೆಟೀರಿಯಲ್ಸ್ ನಲ್ಲಿ ಮೂರು ಪೇಟೆಂಟ್ ಪಡೆದಿದ್ದಾರೆಂಬುದು ಹೆಗ್ಗಳಿಕೆ. 40 ವರ್ಷಗಳ ಸಮರ್ಥ ಬೋಧನಾ ಅನುಭವವಿರುವ ರತ್ನಾನಾಯಕ್‍ಗೆ ಅನೇಕ ಪ್ರಶಸ್ತಿಗಳು ಸಂದಿವೆ. 1995ರಲ್ಲಿ “ಪ್ರೆಸಿಡೆಂಟ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಟೀಚಿಂಗ್”, “1999ರಲ್ಲಿ ಕಾಲೇಜ್ ಆಫ್ ಸೈನ್ಸ್ ಟೀಚಿಂಗ್ ಗ್ರಾಜುಯೇಟ್ ಮೆಂಟರ್ ಅವಾರ್ಡ್” ಪಡೆದಿದ್ದಾರೆ.
ಅವರು ಜೀವನದ ಅಧಿಕ ವರ್ಷಗಳನ್ನು ಅಮೆರಿಕಾದಲ್ಲೆ ಕಳೆದಿದ್ದರೂ- ಅವರ ಜೀವನ ಶೈಲಿ, ಊಟ, ಉಡುಪು, ಭಾಷೆ ವ್ಯಕ್ತಿತ್ವ ಹಾಗೂ ಚಿಂತನೆಗಳಲ್ಲಿ ಹೆಚ್ಚಿನ ಭಾರತೀಯತೆಯ ಛಾಪು ಉಳಿಸಿಕೊಂಡಿದ್ದಾರೆ. 30 ವರ್ಷಗಳ ಕಾಲ ಅಮೆರಿಕಾದಲ್ಲಿ ಚಿನ್ಮಯಾನಂದ ಮಿಷನ್ ನಡೆಸುತ್ತಿರುವ ಮಕ್ಕಳಕೂಟದಲ್ಲಿ ಭಾರತೀಯ ಅನುಭಾವದ ಬಗ್ಗೆ ಬೋಧಿಸುತ್ತಾ ಬಂದಿರುವುದು ಅವರ ಮತ್ತೊಂದು ಆಸಕ್ತಿ. ಚಿಕ್ಕವಯಸ್ಸಿನಿಂದಲೂ ಆಧ್ಯಾತ್ಮಿಕ ಒಲವಿದ್ದ ರತ್ನಾನಾಯಕ್ ಅಮೇರಿಕಾದಲ್ಲಿದ್ದು ಭಾರತದ ವಚನಕಾರರು, ತತ್ವಜ್ಞಾನಿಗಳು, ಸಂತರು, ಚಿಂತಕರನ್ನು ಆಳವಾಗಿ ಓದಿಕೊಂಡಿದ್ದಾರೆ. ಸರಳ ಜೀವನ, ಪರೋಪಕಾರ, ನಿಸ್ವಾರ್ಥ, ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಕಾರುಣ್ಯವನ್ನು ಹೊಂದಿದ್ದಾರೆ. ಕರ್ನಾಟಕ ಹಾಗೂ ಹಾಸನದ ಬಡ ಹೆಣ್ಣುಮಕ್ಕಳ ಏಳ್ಗೆಗಾಗಿ ಹಲವು ವಿಧಗಳಲ್ಲಿ ತೆರೆಮರೆಯಲ್ಲೇ ಆರ್ಥಿಕ ಸಹಕಾರ, ಬೆಂಬಲ ನೀಡುವ ಮೂಲಕ- ಅನುಕಂಪ, ಸಾಮಾಜಿಕ ಕಾಳಜಿಯಂತಹ ಉನ್ನತ ಮೌಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹೆಣ್ಣುಸಂಕುಲಕ್ಕೆ ಮಾದರಿಯಾಗಿದ್ದಾರೆ ರತ್ನಾನಾಯಕ್.
ಬೋಧಕರಾಗಿ, ಸಂಶೋಧಕರಾಗಿ, ಸೂಕ್ಷ್ಮ ವಿಜ್ಞಾನಿಯಾಗಿ, ದಕ್ಷ ಆಡಳಿತಗಾರರಾಗಿ, ಸಾಮಾಜಿಕ ನೋಟ ಉಳ್ಳವರಾಗಿ, ಉತ್ತಮ ಗೃಹಿಣಿಯಾಗಿ- ಮಹಿಳೆಯರು ಬಹುಸ್ತರದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರೆಂಬುದಕ್ಕೆ ಡಾ.ರತ್ನಾನಾಯಕ್ ಉತ್ತಮ ನಿದರ್ಶನ. ಪ್ರಾದೇಶಿಕ ಭಿನ್ನತೆ, ಬಹುಜನಾಂಗೀಯ, ಬಹುಪರಿಣಿತರ ನಡುವೆಯಲ್ಲಿ- ಲಿಂಗ ತಾರತಮ್ಯಗಳನ್ನು ಮೀರಿ ಅವರು ವಿದೇಶದಲ್ಲಿ ಸಾಧನೆ ಮಾಡಿರುವುದು ನಿಜಕ್ಕೂ ಹಾಸನಕ್ಕೆ ಹೆಮ್ಮೆಯ ಸಂಗತಿ.
ರೂಪ ಹಾಸನ
ಲೇಖಕರು, ಹೋರಾಟಗಾರರು
ಇದನ್ನೂ ಓದಿ- http://ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…
https://kannadaplanet.com/three-oral-storytellers-from-hagare/


