17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ( BIFFes) ಬೆಂಗಳೂರಿನ ಲುಲು ಮಾಲ್ ನಲ್ಲಿ ಜನವರಿ 29 ರಿಂದ ಫೆಬ್ರುವರಿ 6 ನೇ ತಾರೀಕಿನವರೆಗೆ ಆಯೋಜನೆಗೊಂಡಿದೆ. “ಸ್ತ್ರೀ ಅಂದರೆ ಅಷ್ಟೇ ಸಾಕೆ” ಎನ್ನುವ ಘೋಷವಾಕ್ಯವನ್ನು ಥೀಮ್ ಆಗಿ ಹೊಂದಿರುವ ಈ ಸಿನಿಮೋತ್ಸವವು “ಸ್ತ್ರೀ ಸಂವೇದನೆ, ಸಮಾನತೆಯ ಧ್ವನಿ” ಯನ್ನು ಪ್ರಮುಖವಾಗಿ ಇಟ್ಟುಕೊಂಡಿದೆ.
ಸಿನಿಮೋತ್ಸವದ ಆಶಯಕ್ಕೆ ಸರಿಯಾಗಿ ಹೊಂದುವಂತಹ ಸ್ಪ್ಯಾನಿಷ್ ಭಾಷೆಯ ಸಿನೆಮಾ “ಕಾಲ್ ಮಲಗಾ” ( Calle Malaga). ಮೊರೊಕ್ಕಾದ ನಿರ್ದೇಶಕಿ ಮರಿಯಮ್ ತೌಝಾನಿಯವರ ನಿರ್ದೇಶನದಲ್ಲಿ ಸ್ಪ್ಯಾನಿಷ್ ನಟಿ ಕಾರ್ಮೆನ್ ಮೌರಾ ರವರು ಅಮೋಘವಾಗಿ ನಟಿಸಿದ್ದಾರೆ. ಈ ಸಿನೆಮಾ 2025ರ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದಿತ್ತು. ವೆನಿಸ್ ಫಿಲಂ ಫೆಸ್ಟಿವಲ್ ನಲ್ಲಿ ಆಡಿಯನ್ಸ್ ಅವಾರ್ಡ್ ಪಡೆದಿದೆ. ಜನವರಿ 31 ರಂದು ಈ ಚಲನಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.
79 ವರ್ಷದ ವೃದ್ಧೆ ಮರಿಯಾ ಆಂಜಲೆಸ್ ಮೊರಾಕ್ಕೋದ ಟ್ಯಾಂಜಿಯರ್ ನಗರದ ಜನನಿಬಿಡ ಪ್ರದೇಶದ ಪ್ಲಾಟ್ ಒಂದರಲ್ಲಿ ಒಂಟಿಯಾಗಿ ಬದುಕುತ್ತಿರುತ್ತಾಳೆ. ಅದೊಂದು ದಿನ ಮ್ಯಾಡ್ರಿಡ್ ನಗರದಿಂದ ಬಂದ ಮಗಳು ಮರಿಯಾ ವಾಸಿಸುತ್ತಿದ್ದ ತನ್ನ ಹೆಸರಿನಲ್ಲಿದ್ದ ಮನೆಯನ್ನು ಮಾರಲು ಪ್ರಯತ್ನಿಸಿ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾಳೆ. ಮನೆಯಲ್ಲಿರುವ ಪಿಠೋಪಕರಣಗಳನ್ನೆಲ್ಲಾ ಸಿಕ್ಕ ಬೆಲೆಗೆ ಮಾರಿ ಹೋಗುತ್ತಾಳೆ. ವೃದ್ಧಾಶ್ರಮದಲ್ಲಿ ಇರಲಾರದೆ ಮರಳಿ ಮನೆಗೆ ಬರುವ ಮಾರಿಯಾ ತನ್ನಲ್ಲಿ ಇರುವ ಹಣದಲ್ಲಿ ಹಂತ ಹಂತವಾಗಿ ತನ್ನ ಪೀಠೋಪಕರಣಗಳನ್ನು ಮರು ಖರೀದಿಸುವ ಹಂತದಲ್ಲಿ ಹಳೆಯ ಪಿಠೋಪಕರಣಗಳ ವ್ಯಾಪಾರಿ ಜೊತೆ ಪ್ರೇಮ ಪ್ರಣಯಕ್ಕೆ ಮುಂದಾಗಿ ಇಳಿ ವಯಸ್ಸಿನಲ್ಲೂ ಜೀವನೋತ್ಸಾಹ ಪಡೆಯುತ್ತಾಳೆ. ಇದು ಕಾಲ್ ಮಲಗಾ ಸಿನೆಮಾದ ಸಂಕ್ಷಿಪ್ತ ಕಥೆ.

ಈ ಕಥೆಯ ನಿರೂಪಣೆ ಹಾಗೂ ಮರಿಯಾ ಪಾತ್ರದ ನಟನೆ ಇಡೀ ಸಿನೆಮಾದ ಹೈಲೈಟ್ ಆಗಿದ್ದು ಚಲನಚಿತ್ರ ಎಲ್ಲೂ ಬೇಸರ ತರಿಸದೆ ನೋಡಿಸಿಕೊಂಡು ಹೋಗುತ್ತದೆ. ಜೀವನದ ಇಳಿಸಂಜೆಯಲ್ಲೂ ಮತ್ತೆ ಬದುಕು ಕಟ್ಟಿಕೊಳ್ಳುವ ಒಂಟಿ ವಯೋವೃದ್ಧೆಯ ಜೀವನೋತ್ಸಾಹ ನೋಡುಗರನ್ನು ಬೆರಗುಗೊಳಿಸುತ್ತದೆ.
ಇಳಿವಯಸ್ಸಿನ ಹೆತ್ತವರನ್ನು ಒಂಟಿಯಾಗಿರಲು ಬಿಟ್ಟು ತಮ್ಮ ಬದುಕು ಭವಿಷ್ಯ ಅರಸಿ ನಗರ ಸೇರುವ ಮಕ್ಕಳೇ ಹೆಚ್ಚು. ಯಾರ ಹಂಗೂ ಇಲ್ಲದೇ ಬಾಕಿ ಬದುಕನ್ನು ಸ್ವಾಭಿಮಾನದಿಂದ ಕಟ್ಟಿಕೊಳ್ಳಬಲ್ಲೆ ಎನ್ನುವ ಹಿರಿಯರು ಅಪರೂಪ. ಅಂತಹ ಸ್ವಾಭಿಮಾನಿ ಮಹಿಳೆಯರ ದಿಟ್ಟ ಧ್ವನಿಯಾಗಿ ಈ ಸಿನೆಮಾದ ಮರಿಯಾ ಪಾತ್ರ ಮೂಡಿಬಂದಿದೆ. ಸ್ತ್ರೀ ಅಂದರೆ ಅಷ್ಟೇ ಸಾಕೆ ಅನ್ನುವುದಕ್ಕಿಂತಾ ಸ್ತ್ರೀ ಅಂದರೆ ಏನೆಲ್ಲಾ ಎಂಬುದರ ಪ್ರಾತ್ಯಕ್ಷಿಕತೆಗೆ ಮರಿಯಾ ಮಾದರಿಯಾಗಿದ್ದಾರೆ.
ನಗರ ಸೇರಿದ ಸಂತಾನಗಳೇನು ನೆಮ್ಮದಿಯಾಗಿದ್ದಾರಾ? ಅದೂ ಇಲ್ಲ. ನಗರದ ಧಾವಂತ, ಮೋಸ, ವಂಚನೆಗಳಿಗೆ ಬಲಿಯಾಗಿ ಕನಸು ನುಚ್ಚುನೂರಾಗಿ ಬದುಕು ಕಳೆದುಕೊಂಡವರ ಸಂಖ್ಯೆ ಕಡಿಮೆ ಏನಿಲ್ಲ. ಆಗ ಅಂತವರಿಗೆ ನೆನಪಾಗುವುದು ಹೆತ್ತವರಿಗಿಂತಾ ಅವರ ಬೆಲೆಬಾಳುವ ಆಸ್ತಿ. ಗಂಡನಿಂದ ವಿಚ್ಛೇದನೆ ಪಡೆದು, ಕೆಲಸ ಕಳೆದುಕೊಂಡು, ಎರಡು ಮಕ್ಕಳನ್ನು ಸಾಕುವ ಹೊಣೆಗಾರಿಕೆ ಹೊತ್ತ ಮಾರಿಯಾಳ ಮಗಳಿಗೂ ವಯೋವೃದ್ಧ ತಾಯಿ ವಾಸಿಸುವ ಮನೆಯ ಮೇಲೆ ಆಸೆ. ಅದನ್ನು ಮಾರಿ ತನ್ನ ಕಷ್ಟ ನಷ್ಟಗಳನ್ನು ತೀರಿಸಿಕೊಳ್ಳುವ ಬಯಕೆ. ಅದಕ್ಕಾಗಿ ತಾಯಿ ಮುಂದೆ ಮಗಳು ಎರಡು ಆಪ್ಶನ್ ಇಡುತ್ತಾಳೆ. ತನ್ನ ಜೊತೆಗೆ ನಗರಕ್ಕೆ ಬಂದು ಮೊಮ್ಮಕ್ಕಳನ್ನು ನೋಡಿಕೊಂಡಿರಬೇಕು, ಇಲ್ಲವೇ ವೃದ್ಧಾಶ್ರಮ ಸೇರಬೇಕು. ಮಗಳ ಹಂಗಿನಲ್ಲಿ ಬದುಕಲು ಇಚ್ಚಿಸದ ಮಾರಿಯಾ ವೃದ್ಧಾಶ್ರಮವನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಆದರೆ ಮತ್ತೆ ತನ್ನ ಮನೆಯನ್ನೇ ಸೇರಿಕೊಂಡು, ಆದಾಯದ ದಾರಿ ಹುಡುಕಿಕೊಂಡು ಸ್ವಾಭಿಮಾನದಿಂದ ಬದುಕಲು ಆರಂಭಿಸುತ್ತಾಳೆ. ಮಗಳು ಮಾರಿದ್ದ ಪಿಠೋಪಕರಣಗಳನ್ನು ಮತ್ತೆ ಮರಳಿ ಕೊಂಡು ತರುತ್ತಾಳೆ.
ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುವ ಛಲವೊಂದಿದ್ದರೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೇ ಎನ್ನುವುದು ಈ ಸಿನೆಮಾದ ತಾತ್ಪರ್ಯ. ಮಕ್ಕಳಿಗೆ ಹೊರೆಯಾಗಿ, ಅವರು ಹೇಳಿದಂತೆ ಕೇಳಿಕೊಂಡು ಹೇಗೋ ಬದುಕುವುದಕ್ಕಿಂತಲೂ ಮರಿಯಾ ಅಜ್ಜಿ ಆಯ್ಕೆ ಮಾಡಿಕೊಂಡ ದಾರಿ ಭರವಸೆ ಕಳೆದುಕೊಂಡ ವೃದ್ಧರಿಗೆ ದಾರಿದೀಪ.
ಇಳಿವಯಸಿನಲ್ಲಿ ಪ್ರೀತಿ ಪ್ರೇಮ ಪ್ರಣಯದಲಿ ಮಿಂದೆದ್ದ ಮಾರಿಯಾಳಂತವರನ್ನು ಭಾರತೀಯ ಸಾಂಪ್ರದಾಯಿಕ ಸಮಾಜ ಮಾನ್ಯ ಮಾಡದೇ ಇರಬಹುದು. ಆದರೆ ವಯೋವೃದ್ಧರಿಗೂ ಒಂದು ಮನಸ್ಸಿದೆ, ಅದೂ ಸಹ ಸಂಗಾತಿಯ ಸಾಂಗತ್ಯಕ್ಕೆ ಹಾತೊರೆಯುತ್ತದೆ, ಸಂಕಷ್ಟದಲಿ ಜೊತೆಯಾಗುವ ಜೀವಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ಬಯಸುತ್ತದೆ ಎನ್ನುವುದನ್ನು ಈ ಸಿನೆಮಾ ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದೆ. ಕೊನೆಗೂ ತಾಯಿಯ ಹಠಮಾರಿತನದಿಂದಾಗಿ ತನ್ನ ಮನೆ ಮಾರುವ ಪ್ರಯತ್ನವನ್ನು ಮೊಟಕುಗೊಳಿಸುವ ಮಗಳು ಮರಳಿ ಹೋಗುವ ಹಾಗೂ ತಾನು ವಾಸಿಸುವ ಮನೆಯನ್ನು ಉಳಿಸಿಕೊಳ್ಳುವ ಮೂಲಕ ಮಾರಿಯಾ ಗೆಲ್ಲುವ ಮೂಲಕ ಈ ಸಿನೆಮಾ ಅಂತ್ಯಗೊಳ್ಳುತ್ತದೆ. ಸಿನೆಮಾ ಮುಗಿದರೂ ಅಜ್ಜಿಯ ಜೀವನೋತ್ಸಾಹ ವೀಕ್ಷಕರನ್ನು ಬಿಟ್ಟು ಬಿಡದಂತೆ ಕಾಡುತ್ತದೆ.

ಇಡೀ ಸಿನೆಮಾದ ಕೇಂದ್ರಬಿಂದು ಮಾರಿಯಾ ಪಾತ್ರಧಾರಿ ಕಾರ್ಮೆನ್ ಮೌರಾ. 79 ವಯಸ್ಸಿನ ಮುದಿತನದ ಪಾತ್ರಕ್ಕೆ ಮೌರಾ ಜೀವದುಂಬಿ ಅಭಿನಯಿಸಿದ ಪರಿಯನ್ನು ಸಿನೆಮಾ ನೋಡಿಯೇ ಅನುಭವಿಸಬೇಕು. ನಟನೆಯ ಉತ್ತುಂಗದ ಅಭಿವ್ಯಕ್ತಿಗೆ ಮೌರಾ ನಿಜಕ್ಕೂ ಅಭಿನಂದನಾರ್ಹರು. ಕೇವಲ ಕಣ್ಣಲ್ಲೇ ತಮ್ಮೆಲ್ಲಾ ಭಾವಗಳನ್ನು ಹೊಮ್ಮಿಸುವ ಕಲೆಗಾರಿಕೆ ವಿಸ್ಮಯ ಹುಟ್ಟಿಸುವಂತಿದೆ. ಪ್ರೀತಿ ಪ್ರಣಯದ ದೃಶ್ಯಗಳಲ್ಲಂತೂ ಮೌರಾಳ ತನ್ಮಯತೆ ಉತ್ಸಾಹ ಅನನ್ಯವಾದಂತಹುದು. ಇವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ಬರಬೇಕಿತ್ತು ಬರಲಿಲ್ಲ. ಇಂತಹ ಮನಮಿಡಿಯುವಂತಹ ಚಲನಚಿತ್ರವನ್ನು ನಿರ್ದೇಶಿಸಿದ ಮರಿಯಮ್ ತೌಝಾನಿಯವರ ಪರಿಶ್ರಮ ಸಿನೆಮಾದಾದ್ಯಂತ ಮಾರ್ದನಿಸಿದೆ. ಉತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಿನೆಮಾಟೋಗ್ರಾಫಿ ಈ ಸಿನೆಮಾವನ್ನು ಗಮನಾರ್ಹಗೊಳಿಸಿವೆ.
17 ನೇ ಅಂತಾರಾಷ್ಟ್ರೀಯ ಸಿನೆಮೋತ್ಸವದಲ್ಲಿ ಪ್ರದರ್ಶನಗೊಂಡ ಕೆಲವೇ ಅತ್ಯುತ್ತಮ ಸಿನೆಮಾಗಳಲ್ಲಿ “ಕಾಲ್ ಮಲಗಾ” ಪ್ರಮುಖವಾಗಿದೆ. ಈ ಸಿನೆಮೋತ್ಸವದ ಘೋಷವಾಕ್ಯವಾದ “ಸ್ರ್ರೀ ಅಂದರೆ ಅಷ್ಟೇ ಸಾಕೆ” ಗೆ ಸೂಕ್ತವಾಗಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ –ಜೈ ಶ್ರೀರಾಮ್ V/s ಹೇರಾಮ್


