ಛತ್ತೀಸಗಢ: ಮಾಜಿ ಸಿಎಂ ಬಘೇಲ್ ಪುತ್ರನ ಬಂಧಿಸಿದ ಇಡಿ; ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್‌

Most read

ರಾಯಪುರ: ಛತ್ತೀಸ್‌ ಗಢ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಿದ್ದಾರೆ.

ಸದನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್, ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ. ಜಾರಿ ನಿರ್ದೇಶನಾಲಯ ನಮ್ಮ ಮೇಲೆ ಒತ್ತಡ ಹೇರುವುದಲ್ಲದೇ, ನಮಗೆ ಮತ್ತು ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಯತ್ನಿಸುತ್ತಿದೆ ಎಂದು ಆಪಾದಿಸಿದರು.

ಚೈತನ್ಯ ಬಘೇಲ್ ಅವರ ಹುಟ್ಟುಹಬ್ಬದಂದೇ ಬಂಧಿಸಲಾಗಿದೆ. ವಿಧಾನಸಭೆಯ ಕಲಾಪಗಳನ್ನು ಬಹಿಷ್ಕರಿಸುತ್ತೇವೆ ಎಂದು ಮಹಂತ್ ಹೇಳಿದರು. ಬಳಿಕ ಭೂಪೇಶ್ ಬಘೇಲ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು.

ಏನಿದು ಹಗರಣ?

ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (2019–2022) ನೂರಾರು ಕೋಟಿ ಮೊತ್ತದ ಅಬಕಾರಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಇ.ಡಿ ತನಿಖೆಯ ಭಾಗವಾಗಿ ವಿವಿಧ ಆರೋಪಿಗಳ ಸುಮಾರು ರೂ.205 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಅಬಕಾರಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಬಘೇಲ್‌ ರೂ. 17 ಕೋಟಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚೈತನ್ಯ ಅವರ ಭಿಲಾಯಿ ಪಟ್ಟಣದ ಮನೆ ಹಾಗೂ ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳ ಮೇಲೆ ಜಾರಿ ಇ.ಡಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿದ್ದು ಮಧ್ಯಾಹ್ನ ಚೈತನ್ಯ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

More articles

Latest article