ಪಂಚಮಸಾಲಿ ಹೋರಾಟ; ಸ್ವಾಮೀಜಿ, ಯತ್ನಾಳ್‌ ಪೊಲೀಸರ ವಶಕ್ಕೆ; ಚರ್ಚೆಗೆ ಅವರೇ ಬರಲಿಲ್ಲ ಎಂದ ಸಿಎಂ

Most read

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ಎದುರು 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ವಿಕೋಪಕ್ಕೆ ತಿರುಗಿದೆ. ಸ್ಥಳಕ್ಕೆ ಮುಖ್ಯಮಂತ್ರಿಗಳು ಬಾರಲಿಲ್ಲ ಎಂದು ಸಾವಿರಾರು ಸಂಖ್ಯೆಯ ಪ್ರತಿಭಟನಾ ನಿರತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹೋರಾಟಗಾರರ ನಡುವೆ ಘರ್ಷಣೆ ನಡೆದು ಮಾತಿನ ಚಕಮಕಿ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಮೀಸಲಾತಿ ಕುರಿತು ಮಾತುಕತೆಗೆ 10 ಮುಖಂಡರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಆಗಮಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ.

ಬೆಳಗಾವಿಯ ಕೊಂಡಸಕೊಪ್ಪದಿಂದ ಪಂಚಮಸಾಲಿ ಮುಖಂಡರು ಸುವರ್ಣಸೌಧದತ್ತ ತೆರಳುತ್ತಿದ್ದರು. ಬೃಹತ್ ಪ್ರಮಾಣದ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ- 4 ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್, ಅರವಿಂದ ಬೆಲ್ಲದ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೊದಲಾದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೂಕುನುಗ್ಗಾಟದಲ್ಲಿ ಪ್ರತಿಭಟನಾಕಾರನೊಬ್ಬ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ. ಘರ್ಷಣೆಯಲ್ಲಿ ಇಬ್ಬರು ಕಾನ್ಸ್ ಟೇಬಲ್, ಒಬ್ಬ ಪಿಎಸ್ ಐಗೆ ಗಾಯವಾಗಿದೆ. ಗಾಯಗೊಂಡ ಪ್ರತಿಭಟನಾಕಾರರು ಮತ್ತು ಪೊಲೀಸರಿಗೆ ಬೆಳಗಾವಿಯಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಸಹಸ್ರಾರು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಡುತ್ತಿದ್ದಾರೆ. ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಪೊಲೀಸ್ ವಾಹನ ತಡೆದು, ಕಲ್ಲು, ಚಪ್ಪಲಿ ತೂರಾಟ ನಡೆಸಿದ್ದಾರೆ. ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಚಿವರಾದ ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್‌ ಸುಧಾಕರ್‌ ಅವರು ಭೇಟಿ ನೀಡಿದ್ದರೂ ಜಯಮೃತ್ಯುಂಜಯ ಸ್ವಾಮೀಜಿ ಕಿವಿಗೊಡಲಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಅನಿವಾರ್ಯವಾಗಿ ಸಚಿವರು ಅಲ್ಲಿಂದ ನಿರ್ಗಮಿಸಿದರು.

More articles

Latest article