ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರ ಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಆರಂಭ. ಸಮೀಕ್ಷೆ ಪ್ರಕಾರ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಚೊಚ್ಚಲ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವಿನ ನಗೆ ಬೀರಲಿದ್ದಾರೆ.
ಮೂರರಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎಂದರೆ ಚನ್ನಪಟ್ಟಣ. ಇಲ್ಲಿ ನಿಖಿಲ್ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪೈಪೋಟಿ ಜೋರಾಗಿದ್ದು ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.
ಚನ್ನಪಟ್ಟಣಕ್ಕೆ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಎಂಟ್ರಿ ಕೊಡುವವರೆಗೂ ಬೊಂಬೆ ನಾಡು ಕೈನತ್ತ ವಾಲಿತ್ತು. ಜಮೀರ್ ಇಲ್ಲಸಲ್ಲದ ಮಾತುಗಳನ್ನಾಡಿದ್ದರ ಪರಿಣಾಮ ವಿಶೇಷವಾಗಿ ಒಕ್ಕಲಿಗ ಸಮುದಾಯದ ಮತಗಳು ನಿಖಿಲ್ ಪರ ವರ್ಗಾವಣೆಯಾಗಿವೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಆಯ್ಕೆಯಾಗಿ ರಾಜೀನಾಮೆ ನೀಡಿದ್ದರಿಂದ ಮರು ಚುನಾವಣೆ ನಡೆದಿತ್ತು.
ಚನ್ನಪಟ್ಟಣ ಕ್ಷೇತ್ರದಲ್ಲಿ 2,32,949 ಮತದಾರರಿದ್ದು 1,20,617 ಮಹಿಳಾ ಮತ್ತು 1,12,324 ಪುರುಷ ಮತದಾರರಿದ್ದಾರೆ.
ಈ ಬಾರಿ ಡಿ.ಕೆ. ಸಹೋದರರು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು.
ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈಗ ಹ್ಯಾಟ್ರಿಕ್ ಸೋಲು ಯಾರದ್ದು ಎನ್ನುವುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.