ಅಬ್ದುಲ್ ಕಲಾಂ ಅವರ ಜನ್ಮ ದಿನ ವಿಶೇಷ
ಇಂದು ಕೇವಲ ಒಬ್ಬ ವಿಜ್ಞಾನಿಯ ಹುಟ್ಟುಹಬ್ಬವಲ್ಲ. ಅದು ಶ್ರೀರಂಗಪಟ್ಟಣದ ಕಬ್ಬಿಣದ ಕುಲುಮೆಯಿಂದ ಶುರುವಾಗಿ ಇಸ್ರೋದ ನಭದವರೆಗೆ ಸಾಗಿದ ಭಾರತದ 250 ವರ್ಷಗಳ ರಾಕೆಟ್ ತಪಸ್ಸಿನ ಸಂಕೇತ. ಕಲಾಂ ಹೇಳುತ್ತಿದ್ದ ಕನಸು ಕಾಣಿರಿ, ಕಲಿಯಿರಿ, ಸಾಧಿಸಿರಿ, ಯಶಸ್ವಿಯಾಗಿರಿ ಎಂಬ ನಾಲ್ಕು ಮೆಟ್ಟಿಲುಗಳು ಇಂದು ಪ್ರತಿಯೊಬ್ಬ ಕನ್ನಡದ ವಿದ್ಯಾರ್ಥಿಯ ಮಂತ್ರವಾಗಲಿ. ಆಗ ಮಾತ್ರ ಶ್ರೀರಂಗಪಟ್ಟಣದಿಂದ ಶುರುವಾದ ಆ ಬೆಂಕಿ ನಮ್ಮೆಲ್ಲರಲ್ಲಿ ಶಾಶ್ವತವಾಗಿ ಉಳಿಯುತ್ತದೆ – ಕೆ ಎಸ್ ಜಯಶಂಕರ್, ಬರಹಗಾರರು.
ಅಕ್ಟೋಬರ್ 15 ಆಧುನಿಕ ಭಾರತದ ರಾಕೆಟ್ ಪಿತಾಮಹ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ. ಭಾರತದ ಕನಸುಗಳಿಗೆ ರೆಕ್ಕೆ ಕಟ್ಟಿ, ಆ ಕನಸು ನನಸಾಗುವವರೆಗೆ ಶ್ರಮಿಸಿರಿ ಎಂದು ಇಡೀ ಯುವ ಪೀಳಿಗೆಗೆ ಕಿವಿಮಾತು ಹೇಳಿದ ಮಹಾಚೇತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 95ನೇ ಜನ್ಮದಿನ ಇಂದು. ಈ ದಿನವನ್ನು ವಿಶ್ವಸಂಸ್ಥೆ 2010ರಲ್ಲಿ ವಿಶ್ವ ವಿದ್ಯಾರ್ಥಿಗಳ ದಿನ ಎಂದು ಘೋಷಿಸಿರುವುದೇ ಅವರ ವಿದ್ಯಾರ್ಥಿ ಪ್ರೇಮಕ್ಕೆ ಸಾಕ್ಷಿ. ರಾಮೇಶ್ವರದ ಮಸೀದಿ ಬೀದಿಯ ಬಡ ಕುಟುಂಬದಲ್ಲಿ 1931ರ ಅಕ್ಟೋಬರ್ 15 ರಂದು ಜನಿಸಿದ ಬಾಲಕ, ಬೆಳಿಗ್ಗೆ ಪತ್ರಿಕೆ ಹಂಚಿ, ಸಂಜೆ ಶಾಲೆಗೆ ಹೋಗಿ, ಸೇಂಟ್ ಜೋಸೆಫ್ ಕಾಲೇಜು ಮತ್ತು ಮದ್ರಾಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ವಿದ್ಯೆ ಕಲಿತು, ದೇಶದ ಅತ್ಯುನ್ನತ ವಿಜ್ಞಾನಿ, 11ನೇ ರಾಷ್ಟ್ರಪತಿ, ಪೀಪಲ್ಸ್ ಪ್ರೆಸಿಡೆಂಟ್ ಆದ ಕಥೆ ಪ್ರತಿಯೊಬ್ಬ ಕನ್ನಡ ವಿದ್ಯಾರ್ಥಿಗೂ ಸ್ಫೂರ್ತಿ. ಕೊನೆಗೆ 2015ರ ಜುಲೈ 27ರಂದು ಶಿಲ್ಲಾಂಗ್ನ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಲೇ ಕೊನೆಯುಸಿರೆಳೆದ ಅವರ ಬದುಕೇ ಒಂದು ತೆರೆದ ಪುಸ್ತಕ.
ಕಲಾಂ ಅವರ ದಾಖಲೆಯ ಸಾಧನೆಗಳು
ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಇತಿಹಾಸವನ್ನು ಕಲಾಂ ಇಲ್ಲದೆ ಬರೆಯಲಾಗದು.
1980ರ ಜುಲೈ 18ರಂದು ಇಸ್ರೋದಲ್ಲಿ ಯೋಜನಾ ನಿರ್ದೇಶಕರಾಗಿ ಭಾರತದ ಮೊದಲ ಸ್ವದೇಶೀ ಉಪಗ್ರಹ ಉಡಾವಣಾ ವಾಹನ ಎಸ್ಎಲ್ವಿ-3 ಮೂಲಕ ರೋಹಿಣಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಭಾರತವನ್ನು ಬಾಹ್ಯಾಕಾಶ ಕ್ಲಬ್ಗೆ ಸೇರಿಸಿದರು.
1983ರಿಂದ ಡಿಆರ್ಡಿಒದಲ್ಲಿ ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ನೇತೃತ್ವ ವಹಿಸಿ ಅಗ್ನಿ, ಪೃಥ್ವಿ, ಆಕಾಶ್, ತ್ರಿಶೂಲ್, ನಾಗ್ ಎಂಬ ಐದು ಕ್ಷಿಪಣಿಗಳನ್ನು ನೀಡಿ ಕ್ಷಿಪಣಿ ಪುರುಷ ಎನಿಸಿದರು.
1998ರ ಪೋಖ್ರಾನ್-2 ಪರಮಾಣು ಪರೀಕ್ಷೆಯ ವೈಜ್ಞಾನಿಕ ಮತ್ತು ತಾಂತ್ರಿಕ ರೂವಾರಿ ಅವರೇ.
ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ಪ್ರಶಸ್ತಿಗಳು, 48 ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ಗಳು ಸಂದಿವೆ. ವಿಂಗ್ಸ್ ಆಫ್ ಫೈರ್, ಇಗ್ನೈಟೆಡ್ ಮೈಂಡ್ಸ್, ಇಂಡಿಯಾ 2020 ಅವರ ಅಮರ ಕೃತಿಗಳು. ಆದರೆ ಕಲಾಂ ಅವರ ಬದುಕಿನ ಅತ್ಯಂತ ರೋಚಕ ಮತ್ತು ನಮ್ಮ ಕನ್ನಡ ನಾಡಿಗೆ ಹೆಮ್ಮೆ ತರುವ ಘಟನೆ ನಡೆದದ್ದು ಅಮೆರಿಕದ ನಾಸಾದಲ್ಲಿ.

ನಾಸಾ ಗೋಡೆಯ ಮೇಲೆ ನಮ್ಮ ಶ್ರೀರಂಗಪಟ್ಟಣ.
ಕಲಾಂ ತಮ್ಮ ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ಪುಟ 165ರಲ್ಲಿ ಒಂದು ಅಚ್ಚರಿಯ ದಾಖಲೆಯನ್ನು ಬರೆದಿದ್ದಾರೆ. ಅವರು ಅಮೆರಿಕದ ನಾಸಾದ ವಾಲೋಪ್ಸ್ ಹಾರಾಟ ಕೇಂದ್ರಕ್ಕೆ ಭೇಟಿ ನೀಡಿದಾಗ, ಉಡಾವಣಾ ಕೇಂದ್ರದ ಸ್ವಾಗತ ಕೋಣೆಯ ಗೋಡೆಯ ಮೇಲೆ ಒಂದು ದೊಡ್ಡ ತೈಲವರ್ಣ ಚಿತ್ರವನ್ನು ಕಂಡರು. ಯುದ್ಧಭೂಮಿಯಲ್ಲಿ ಕಪ್ಪು ಮೈಬಣ್ಣದ ಸೈನಿಕರು ರಾಕೆಟ್ಗಳನ್ನು ಹಾರಿಸುತ್ತಿರುವ ದೃಶ್ಯ. ಬಿಳಿಯರಲ್ಲದ ಸೈನಿಕರು ರಾಕೆಟ್ ಹಾರಿಸುತ್ತಿರುವುದೇನು ಎಂದು ಕುತೂಹಲದಿಂದ ನೋಡಿದಾಗ ತಿಳಿದದ್ದು, ಅದು 1780ರ ಪೊಲ್ಲಿಲೂರು ಮತ್ತು ಶ್ರೀರಂಗಪಟ್ಟಣದ ಯುದ್ಧದಲ್ಲಿ ಟಿಪ್ಪು ಸುಲ್ತಾನನ ಸೈನ್ಯ ಬ್ರಿಟಿಷರ ಮೇಲೆ ಮೈಸೂರು ರಾಕೆಟ್ಗಳ ಮಳೆ ಸುರಿಸುತ್ತಿರುವ ಚಿತ್ರ. “ನಮ್ಮ ದೇಶದಲ್ಲೇ ಮರೆತುಹೋದ ಇತಿಹಾಸವನ್ನು, ವಿಶ್ವದ ಬಾಹ್ಯಾಕಾಶ ಸಂಸ್ಥೆಯೊಂದು ತನ್ನ ಹೆಮ್ಮೆಯ ಇತಿಹಾಸವಾಗಿ ಗೋಡೆಯ ಮೇಲೆ ನೇತುಹಾಕಿದೆ” ಎಂದು ಕಲಾಂ ಹೆಮ್ಮೆ ಮತ್ತು ನೋವಿನಿಂದ ಬರೆದಿದ್ದಾರೆ. ಈ ಒಂದು ಚಿತ್ರ ಭಾರತದ ರಾಕೆಟ್ ಪರಂಪರೆಯ ಕೊಂಡಿಯನ್ನು ಬೆಸೆಯುತ್ತದೆ.
ವಿಶ್ವದ ಮೊದಲ ಕಬ್ಬಿಣದ ರಾಕೆಟ್ ನಮ್ಮದು.
ರಾಕೆಟ್ ತಂತ್ರಜ್ಞಾನ ಮೊದಲು ಚೀನಾದಲ್ಲಿ ಹುಟ್ಟಿದರೂ ಅವು ಕಾಗದ ಮತ್ತು ಬಿದಿರಿನ ಪಟಾಕಿಗಳಂತಿದ್ದವು. ಆದರೆ ಮೈಸೂರು ಸಂಸ್ಥಾನದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ತಾರಾಮಂಡಲಪೇಟೆಯಲ್ಲಿ ಅಭಿವೃದ್ಧಿಪಡಿಸಿದ ರಾಕೆಟ್ ವಿಶ್ವದಲ್ಲೇ ಮೊದಲ ಕಬ್ಬಿಣದ ಕವಚದ ರಾಕೆಟ್ ಆಗಿತ್ತು. ಇದನ್ನು ನಾಸಾ ಮತ್ತು ಸ್ಮಿತ್ಸೋನಿಯನ್ ಸಂಸ್ಥೆ ಅಧಿಕೃತವಾಗಿ ದಾಖಲಿಸಿವೆ.
ದಾಖಲೆಗಳು ಹೇಳುವುದೇನು?
ತಂತ್ರಜ್ಞಾನ ಕ್ರಾಂತಿ: ಮೃದು ಕಬ್ಬಿಣದ ಕೊಳವೆಯನ್ನು ಸುತ್ತಿ, ಒಳಗೆ ಎರಡು ಕೆಜಿ ಗನ್ ಪೌಡರ್ ಅನ್ನು ಅತಿ ಹೆಚ್ಚು ಒತ್ತಡದಲ್ಲಿ ತುಂಬಿ, ಹಿಂಭಾಗದಲ್ಲಿ ನಳಿಕೆಯನ್ನು ಅಳವಡಿಸಲಾಗುತ್ತಿತ್ತು. ಹೆಚ್ಚು ಒತ್ತಡದಿಂದ ಹೆಚ್ಚು ನೂಕುಬಲ ಸಿಗುತ್ತಿತ್ತು. ಯುರೋಪಿನ ರಾಕೆಟ್ಗಳು ಕೇವಲ ಎರಡು ನೂರು ಮೀಟರ್ ಹಾರಿದರೆ, ಮೈಸೂರು ರಾಕೆಟ್ ಎರಡು ಕಿಲೋಮೀಟರ್ ವರೆಗೆ ಹಾರಿ ಬ್ರಿಟಿಷರಲ್ಲಿ ಭೀತಿ ಹುಟ್ಟಿಸಿತ್ತು. ಮುಂದೆ ಚೂಪಾದ ಕತ್ತಿಯನ್ನು ಕಟ್ಟಿ ಶತ್ರು ಸೈನ್ಯದೊಳಗೆ ನುಗ್ಗುವಂತೆ ಮಾಡಲಾಗುತ್ತಿತ್ತು.
ವಿಶ್ವದ ಅತಿ ದೊಡ್ಡ ಕ್ಷಿಪಣಿ ಪಡೆ: ಟಿಪ್ಪು ಬಳಿ ಸುಮಾರು 5 ಸಾವಿರ ಸೈನಿಕರ, 27 ತುಕಡಿಗಳ ಪ್ರತ್ಯೇಕ ಕುಶೂನ್-ಎ-ರಾಕೆಟ್ ಪಡೆ ಇತ್ತು. ಇದು 18ನೇ ಶತಮಾನದ ವಿಶ್ವದ ಅತಿ ದೊಡ್ಡ ಕ್ಷಿಪಣಿ ಪಡೆಯಾಗಿತ್ತು.
ಬ್ರಿಟಿಷರಿಂದ ಕಳವು: 1799ರ ಮೇ 4ರಂದು ಶ್ರೀರಂಗಪಟ್ಟಣ ಪತನದ ನಂತರ ಬ್ರಿಟಿಷರು 700ಕ್ಕೂ ಹೆಚ್ಚು ಬಳಕೆಯಾಗದ ರಾಕೆಟ್ಗಳು ಮತ್ತು 900 ಖಾಲಿ ಕವಚಗಳನ್ನು ವಶಪಡಿಸಿಕೊಂಡು ಲಂಡನ್ನಿನ ವೂಲ್ವಿಚ್ನ ರಾಯಲ್ ಫಿರಂಗಿ ವಸ್ತುಸಂಗ್ರಹಾಲಯಕ್ಕೆ ಸಾಗಿಸಿದರು. ಇಂದಿಗೂ ಅವು ಅಲ್ಲಿ ಪ್ರದರ್ಶನದಲ್ಲಿವೆ. ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲೂ ಒಂದು ಮೂಲ ಮೈಸೂರು ರಾಕೆಟ್ ಇದೆ.
ವಿಶ್ವಕ್ಕೆ ಹರಡಿದ್ದು ಹೇಗೆ? : ಆ ರಾಕೆಟ್ಗಳನ್ನು ಅಧ್ಯಯನ ಮಾಡಿದ ಬ್ರಿಟಿಷ್ ವಿಜ್ಞಾನಿ ಸರ್ ವಿಲಿಯಂ ಕಾಂಗ್ರೀವ್ 1805ರಲ್ಲಿ ಕಾಂಗ್ರೀವ್ ರಾಕೆಟ್ ತಯಾರಿಸಿದ. ಅದನ್ನೇ ಬ್ರಿಟಿಷರು 1812ರ ಯುದ್ಧದಲ್ಲಿ ಅಮೆರಿಕದ ವಿರುದ್ಧ ಬಳಸಿದರು. ಅಮೆರಿಕದ ರಾಷ್ಟ್ರಗೀತೆಯಲ್ಲಿನ ‘ರಾಕೆಟ್ಸ್ ರೆಡ್ ಗ್ಲೇರ್, ಬಾಂಬ್ಸ್ ಬರ್ಸ್ಟಿಂಗ್ ಇನ್ ಏರ್’ ಎಂಬ ಸಾಲು ಈ ಮೈಸೂರು ರಾಕೆಟ್ನಿಂದಲೇ ಪ್ರೇರಿತವಾಗಿದೆ.
ಕಲಾಂ ಅವರ ಮಾತು: ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಅವರ ಮಾತಿನಲ್ಲಿ “ಇಂದು ವಿಶ್ವದಲ್ಲಿರುವ ಎಲ್ಲಾ ರಾಕೆಟ್ಗಳ ಮೂಲ ನಮ್ಮ ಮೈಸೂರು ರಾಕೆಟ್ಗಳೇ”.
ಶ್ರೀರಂಗಪಟ್ಟಣದ ತಾರಮಂಡಲದಿಂದ ಚಂದ್ರನವರೆಗೆ
ಹೀಗೆ ನೋಡಿದಾಗ ಕಲಾಂ ಅವರ ಪಯಣ ಹೊಸದಲ್ಲ. ಅದು 250 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಕುಲುಮೆಯಲ್ಲಿ ಆರಂಭವಾದ ಪಯಣ. ಆ ಕುಲುಮೆಯ ಬೆಂಕಿ ಎಸ್ಎಲ್ವಿಯಾಗಿ, ಪಿಎಸ್ಎಲ್ವಿಯಾಗಿ, ಜಿಎಸ್ಎಲ್ವಿಯಾಗಿ, ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಆಗಿ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿತು.
ಇಂದು ಕೇವಲ ಒಬ್ಬ ವಿಜ್ಞಾನಿಯ ಹುಟ್ಟುಹಬ್ಬವಲ್ಲ. ಅದು ಶ್ರೀರಂಗಪಟ್ಟಣದ ಕಬ್ಬಿಣದ ಕುಲುಮೆಯಿಂದ ಶುರುವಾಗಿ ಇಸ್ರೋದ ನಭದವರೆಗೆ ಸಾಗಿದ ಭಾರತದ 250 ವರ್ಷಗಳ ರಾಕೆಟ್ ತಪಸ್ಸಿನ ಸಂಕೇತ. ಕಲಾಂ ಹೇಳುತ್ತಿದ್ದ ಕನಸು ಕಾಣಿರಿ, ಕಲಿಯಿರಿ, ಸಾಧಿಸಿರಿ, ಯಶಸ್ವಿಯಾಗಿರಿ ಎಂಬ ನಾಲ್ಕು ಮೆಟ್ಟಿಲುಗಳು ಇಂದು ಪ್ರತಿಯೊಬ್ಬ ಕನ್ನಡದ ವಿದ್ಯಾರ್ಥಿಯ ಮಂತ್ರವಾಗಲಿ. ಆಗ ಮಾತ್ರ ಶ್ರೀರಂಗಪಟ್ಟಣದಿಂದ ಶುರುವಾದ ಆ ಬೆಂಕಿ ನಮ್ಮೆಲ್ಲರಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಕೆ ಎಸ್ ಜಯಶಂಕರ್
ಸಮರ್ಪಣ ಟ್ರಸ್ಟ್, ಶ್ರೀರಂಗ ಪಟ್ಟಣ
ಇದನ್ನೂ ಓದಿ- https://kannadaplanet.com/its-a-big-story-part-of-atma-katha-32/ ಅದೊಂದು ದೊಡ್ಡ ಕತೆ- ಆತ್ಮ ಕಥನ ಸರಣಿ- 32 | ತಮಿಳುನಾಡಿನಲ್ಲಿ ಒಂದು ತಿಂಗಳು


