ಬೆಂಗಳೂರು: ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಿ. ಸುಧಾಕರ್ ಇಬ್ಬರೂ ಪ್ರತಿಭಟನೆ ನಡೆಸಿರುವುದನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.
ಭಲೇ ಜೋಡಿ ರೂಪದ ಇವರಿಬ್ಬರೂ ಪ್ರತಿಭಟನೆಯ ನಾಯಕತ್ವವನ್ನು ವಹಿಸಿಕೊಂಡು ರಾಜ್ಯದ ಜನತೆಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಭುಗಿಲೆದ್ದಿರುವ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ಅಶೋಕ್ ಅವರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಾಚಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ವಿಫಲವಾಗಿರುವ ಇವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪದೇಪದೇ ಅನಾವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರು ತಮ್ಮ ಮೇಲಿರುವಂತಹ ಗುರುತರವಾದ ಆರೋಪಗಳಿಗೆ ಸಾರ್ವಜನಿಕವಾಗಿ ಉತ್ತರ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ.
ನೈತಿಕತೆ ಉಳಿಸಿಕೊಂಡಿದ್ದರೆ ಇಬ್ಬರೂ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ರಮೇಶ್ ಬಾಬು ಸವಾಲು ಹಾಕಿದ್ದಾರೆ.
- ಕೋವಿಡ್ ಹಗರಣದಲ್ಲಿ ಮೈಕಲ್ ಡಿಕುನ್ಹಾ ಆಯೋಗದ ವರದಿಗೆ ಅನುಗುಣವಾಗಿ ತನಿಖೆಗೆ ಅಥವಾ ಕಾನೂನು ಕ್ರಮಕ್ಕೆ ನೀವು ಸಮ್ಮತಿ ನೀಡುವಿರಾ?
- ಆರ್. ಅಶೋಕ್ ರವರು ಕರ್ನಾಟಕದ ಪದ್ಮನಾಭನಗರ ಶಾಸಕರಾಗಿ ಪದ್ಮನಾಭನಗರದಲ್ಲಿ ಕೆರೆ ಒತ್ತುವವರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಒತ್ತಾಯ ಮಾಡುವರೇ ?
- ಅಶೋಕ್ ರವರು ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದ ಬಗರ್ ಹುಕುಂ ಸಾಗುವಳಿಯ 2500 ಎಕರೆಯ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ತನಿಖೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವರೇ ?
- ಹಿಂದಿನ ಬಿಜೆಪಿ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ ?
- ಅಂದಿನ ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಂದಾಯ ಜಮೀನಿನ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ತನಿಖೆಗೆ ಒತ್ತಾಯಿಸುವರೇ?
- ಹಿಂದಿನ ಬಿಜೆಪಿ ಸರ್ಕಾರದ ಪಿಎಸ್ಐ ಹಗರಣಗಳ ಮತ್ತು ಕೆಪಿಎಸ್ ಸಿ ಪರೀಕ್ಷಾ ಅಕ್ರಮಗಳ ಮೇಲೆ ತನಿಖೆಗೆ ಒತ್ತಾಯಿಸುವರೇ ?
- ಹಿಂದಿನ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ಹಗರಣದ ತನಿಖೆಗೆ ಇವರು ಒತ್ತಾಯಿಸುವರೆ?
- ಅಶೋಕ್ ರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಪಟ್ಟಂತೆ ಅಕ್ರಮ ಭೂಮಿ ಹಂಚಿಕೆಯ ಸಂಬಂಧ ತನಿಖೆಗೆ ಒತ್ತಾಯಿಸುವರೆ ?
- ಬಿಜೆಪಿ ನಾಯಕ ಯತ್ನಾಳ್ ರವರು ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ 20,000 ಕೋಟಿ ರೂಪಾಯಿಗಳ ಆರೋಪವನ್ನು ವಿಜಯೇಂದ್ರರವರ ಮೇಲೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ?
- ಯತ್ನಾಳ್ ರವರು ಈ ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಶೇಖರಣೆ ಮಾಡಿರುವುದಾಗಿ ವಿಜಯೇಂದ್ರ ಅವರ ಮೇಲೆ ಮಾಡಿರುವ ಆರೋಪವನ್ನು ತನಿಖೆ ಮಾಡಲು ಒತ್ತಾಯಿಸುವರೇ?