ಮಂಗಳೂರು: ಭಾರೀ ಮಳೆಗೆ ಮೂವರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಂಕನಾಡಿಯ ನಾಗೋರಿಯಲ್ಲಿ ನಡೆದಿದೆ.
ಸತತ ಸುರಿದ ಮಳೆಗೆ ಹಂಚಿನ ಮನೆಯ ಮೇಲೆ ಮಣ್ಣು ಕುಸಿದು ಘಟನೆ ನಡೆದಿದೆ. ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಒಟ್ಟು ಆರು ಜನರಲ್ಲಿ ಮೂವರನ್ನು ರಕ್ಷಿಸಲಾಗಿದೆ.
ಮೂಲತಃ ಬಿಹಾರ ರಾಜ್ಯದ ಮೃತರು ಅನಾಮಿಕ ಚೌರಾಸಿಯ (7), ತನು (3) ಮತ್ತು ಶಾಂತ (35) ಎಂದು ಗುರುತಿಸಲಾಗಿದೆ. ಅಲ್ಕಾ (14), ಅನುಷಾ (11) ಮತ್ತು ಬಾಲಕೃಷ್ಣ (48) ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಪ್ರಸ್ತುತ ಕಂಕನಾಡಿ ಗ್ರಾಮದ, ಕಂಕನಾಡಿ ಪೊಲೀಸ್ ಠಾಣಾ ಹಿಂಭಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುತ್ತಿದ್ದರು.
ಘಟನೆ ವಿವರ :
ನಾಗೋರಿಯ ಹಂಚಿನ ಮನೆಯೊಂದರ ಪಕ್ಕದಲ್ಲಿದ್ದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಮಣ್ಣಿನ ಭಾರಕ್ಕೆ ಮನೆ ಸಂಪೂರ್ಣ ಜಖಂಗೊಂಡಿದೆ. ಈ ಮನೆಯಲ್ಲಿ ಬೇರೆ ಬೇರೆ ಕುಟುಂಬದವರು ಬಾಡಿಗೆ ಆಧಾರದಲ್ಲಿ ವಾಸವಿದ್ದರು. ಈ ಬಾಡಿಗೆ ಮನೆಯ ಒಳಗಿದ್ದ ವಿವಿಧ ಕುಟುಂಬಗಳ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರು. ಎನ್.ಡಿ.ಆರ್.ಎಫ್ ತಂಡವನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್ ಸಿಬ್ಬಂದಿ ಜಂಟಿಯಾಗಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದರು. ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

