ಭಾರತದಲ್ಲಿ ಆಹಾರದ ಹಕ್ಕು ಎನ್ನುವುದು ಬ್ರಿಟಿಷರ ಕಾಲದ ಕ್ಷಾಮಗಳ ಕಟು ಸತ್ಯದಿಂದ ಶುರುವಾಗಿ, ಕೃಷಿ ಕ್ರಾಂತಿ, ನ್ಯಾಯಾಂಗದ ಹಸ್ತಕ್ಷೇಪ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಮೂಲಕ ಕಾನೂನಾತ್ಮಕ ಹಕ್ಕಿನವರೆಗೆ ಬೆಳೆದುಬಂದಿದೆ. ಕೇವಲ ಹಸಿವು ನೀಗಿಸುವುದು ಎಂಬ ಮಟ್ಟದಿಂದ ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುಕ್ತ ಆಹಾರ ಸಿಗುವಂತೆ ಮಾಡುವುದು ಭವಿಷ್ಯ ಭಾರತದ ಮುಂದಿನ ಗುರಿಯಾಗಬೇಕಾಗಿದೆ – ಕುಮಾರ್ ಶೃಂಗೇರಿ.
ಇದೇ ಅಕ್ಟೋಬರ್ 16 ರಂದು ವಿಶ್ವ ಅಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಏಕೆ ವಿಶ್ವ ಅಹಾರ ದಿನವೆಂದು ಕರೆಯುತ್ತಾರೆಂದರೆ 1945ರ ಅಕ್ಟೋಬರ್ 16 ರಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO – Food and Agriculture Organization) ಸ್ಥಾಪನೆಯಾದ ದಿನ. ಇದರ ನೆನಪಿಗಾಗಿ 1981 ರಿಂದ ಪ್ರತಿ ವರ್ಷ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವಾಗಿ ಒಂದು ಆಚರಣೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಈ ದಿನದ ಮುಖ್ಯ ಉದ್ದೇಶವೇನೆಂದರೆ ಯಾರು ಹಸಿವಿನಿಂದ ಬಳಲುತ್ತಿದ್ದಾರೋ ಅವರ ಹಸಿವನ್ನು ನೀಗಿಸುವುದು, ಜನತೆಗೆ ಆಹಾರದ ಭದ್ರತೆಯನ್ನು ನೀಡುವುದು, ಉತ್ತಮ ಪೌಷ್ಟಿಕಾಂಶಯುಕ್ತ ಆಹಾರದ ಕ್ರಮವನ್ನು ತಿಳಿಸುವುದು, ಅಪೌಷ್ಟಿಕತೆಯನ್ನು ಹೋಗಲಾಡಿಸುವುದು, ಆಹಾರವನ್ನು ವ್ಯರ್ಥಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿ..
ಆಹಾರ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು
ಆಹಾರವು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕೆಂದು ಪರಿಗಣಿಸಬೇಕು. ಏಕೆಂದರೆ ಒಬ್ಬ ಮನುಷ್ಯ ಜೀವಿಸಬೇಕಾದರೆ ಅವನಿಗೆ ಕನಿಷ್ಟ ಆಹಾರ ಬೇಕಾಗುತ್ತದೆ. ಮನುಷ್ಯನಿಗೆ ಬದುಕುವ ಹಕ್ಕು ಮೂಲಭೂತ ಹಕ್ಕಾದರೆ ಅಹಾರದ ಹಕ್ಕು ಕೂಡ ಮೂಲಭೂತ ಹಕ್ಕಾಗುತ್ತದೆ. ಅಹಾರವೆಂದರೆ ಕೇವಲ ಉಸಿರಾಡುವಷ್ಟು ಮಾತ್ರ ಅಲ್ಲ ಅದು ಮನುಷ್ಯನು ತಾನು ಗೌರವಯುತವಾಗಿ ಬೆಳವಣಿಗೆಯನ್ನು ಹೊಂದಲು ದೇಹಕ್ಕೆ ಬೇಕಾದಷ್ಟು ಪೌಷ್ಟಿಕಾಂಶಯುಕ್ತವಾದ ಅಹಾರ ಅವರಿಗೆ ಲಭ್ಯವಿರಬೇಕು ಎಂದರ್ಥ.
ಭಾರತದಲ್ಲಿ ಆಹಾರದ ಹಕ್ಕಿನ ಇತಿಹಾಸ

ಭಾರತಕ್ಕೆ ಈ ಆಹಾರದ ಹಕ್ಕು ಎನ್ನುವುದು ತಕ್ಷಣ ದೊರೆಯಲಿಲ್ಲ. ಇಲ್ಲಿನ ಕ್ಷಾಮಗಳು, ಬ್ರಿಟೀಷರ ಶೋಷಣೆಗಳು, ಸ್ವಾತಂತ್ರ್ಯದ ನಂತರದಲ್ಲೂ ಎದುರಿಸಿದ ಹಲವಾರು ಸವಾಲುಗಳ ಪರಿಣಾಮ ಆಹಾರವನ್ನು ನಾವು ನಮ್ಮ ಹಕ್ಕೆಂದು ಹೇಳಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಮ್ಮ ಸಂವಿಧಾನ, ನಮ್ಮ ನ್ಯಾಯಾಂಗ ಜೊತೆಯಲ್ಲಿ ನಾಗರಿಕ ಸಮಾಜದ ಹೋರಾಟಗಳ ಫಲವಾಗಿ ಇಂದು ನಾವು ಆಹಾರ ನಮ್ಮ ಹಕ್ಕೆಂದು ನಾವು ಪರಿಗಣಿಸಿದ್ದೇವೆ ಇದು ಒಂದು ಸುದೀರ್ಘವಾದ ಹೋರಾಟದ ಫಲವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಆಹಾರದ ಹಕ್ಕು
ನಮ್ಮ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಆಹಾರವು ಪ್ರಜೆಗಳ ಹಕ್ಕು ಎಂದು ಪರಿಗಣಿಸಿರಲಿಲ್ಲ. ಅದು ಬರೀ ಅವರ ಕಂದಾಯ ಮತ್ತು ಲಾಭದ ಬಗ್ಗೆ ಮಾತ್ರ ಯೋಚಿಸುತ್ತಿತ್ತು. ಇಂತಹ ಸಂದರ್ಭದಲ್ಲಿಯೂ ಆಹಾರದ ಕೊರತೆಯಿಂದಾಗಿ ನೈಸರ್ಗಿಕ ವಿಕೋಪ ಮತ್ತು ಕ್ಷಾಮಗಳಿಂದ ಲಕ್ಷಾಂತರ ಜನರ ಜೀವ ಬಲಿಯನ್ನು ಪಡೆದಿರುವುದು ನಮಗೆ ಇತಿಹಾಸದಿಂದ ತಿಳಿಯುತ್ತದೆ. ಭಾರತದಲ್ಲಿ ಪ್ರಜೆಗಳ ಆಹಾರದ ಅಭದ್ರತೆಗೆ ಮುಖ್ಯ ಕಾರಣಗಳು ಭೀಕರ ಕ್ಷಾಮಗಳು ಮತ್ತು ಬ್ರಿಟೀಷರ ನೀತಿಗಳು ಎನ್ನಬಹುದು. ಈ ಸರ್ಕಾರಗಳು ಕೇವಲ ಮುಕ್ತ ಮಾರುಕಟ್ಟೆ ಹೆಸರಿನಲ್ಲಿ ಇಲ್ಲಿನ ಆಹಾರ ಪದಾರ್ಥಗಳ ರಫ್ತಿನ ಮೇಲೆ ಹೆಚ್ಚಿನ ಗಮನ ಹರಿಸಿದ್ದರಿಂದಾಗಿ ಸ್ಥಳೀಯವಾಗಿ ಪ್ರಜೆಗಳಿಗೆ ಸರಿಯಾದ ಆಹಾರ ಸಿಗದೆ ಹಸಿವಿನಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿತ್ತು, ಈ ಸಂದರ್ಭದಲ್ಲಿ ಯಾವುದೇ ಉಚಿತ ಮತ್ತು ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಯಾವುದೇ ಯೋಜನೆ ಇರಲಿಲ್ಲ. ಹಾಗೂ ಅಂದಿನ ಬ್ರಿಟಿಷ್ ಸರಕಾರಕ್ಕೆ ಜವಾಬ್ದಾರಿಯೂ ಇರಲಿಲ್ಲ.
ಫ್ಯಾಮಿನ್ ಕೋಡ್ ಗಳ (Famine Codes) ರಚನೆ – 1880 ರಲ್ಲಿ ಬ್ರಿಟೀಷರು ‘ಫ್ಯಾಮಿನ್ ಕೋಡ್ಗಳನ್ನು’ ರೂಪಿಸಿದರು. ಆದರೆ, ಇದನ್ನು ಗಮನಿಸಿದರೆ, ಅಧ್ಯಯನ ಮಾಡಿದರೆ ಇದು ಜನರ ಹಸಿವನ್ನು ನೀಗಿಸುವ ಬದಲು ಇಂತಹ ಪರಿಸ್ಥಿತಿಯಲ್ಲಿ ಪ್ರಜೆಗಳು ದಂಗೆ ಏಳುವುದನ್ನು ತಡೆಯಲು ಹೆಚ್ಚಿಗೆ ಬಳಸಲಾಯಿತು ಎಂದು ಹೇಳಬಹುದು. ಆ ನಂತರದಲ್ಲಿ 1943 ರ ಬಂಗಾಳದ ಭೀಕರ ಕ್ಷಾಮವು ಸ್ವಾತಂತ್ರ್ಯ ಪೂರ್ವದ ಅತ್ಯಂತ ದುರಂತಮಯ ಕಥೆಯಂತಲೇ ಹೇಳಬಹುದು. ಏಕೆಂದರೆ ಸುಮಾರು 30 ಲಕ್ಷಕ್ಕೂ ಅಧಿಕ ಜನರು ಈ ಕ್ಷಾಮದಿಂದ ಹಸಿವನಿನಿಂದ ಸತ್ತಿರಬಹುದು ಎಂದು ಇತಿಹಾಸ ಹೇಳುತ್ತದೆ. ಏಕೆಂದರೆ ಅಂದಿನ ಬ್ರಿಟೀಷ್ ಸರಕಾರವು ಎರಡನೇ ಯುದ್ಧ ಸಂಬಂಧಿ ಆಹಾರವನ್ನು ದಾಸ್ತಾನು ಮಾಡುವ ಉದ್ದೇಶದಿಂದ ಸರಿಯಾದ ರೀತಿಯಲ್ಲಿ ಪ್ರಜೆಗಳಿಗೆ ಆಹಾರವನ್ನು ಸಿಗದ ರೀತಿಯಲ್ಲಿ ನೋಡಿಕೊಂಡು ಕೃತಕ ಕ್ಷಾಮವನ್ನು ಸೃಷ್ಟಿಸಿದ್ದರು ಎಂಬುದು ಕೆಲವು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಇಂತಹ ಸಂದರ್ಭದಲ್ಲಿ ದಂಗೆ ಏಳಲು ಪ್ರಾರಂಭಿಸಿದ ಜನರಿಗೆ ಆಹಾರವನ್ನು ನೀಡುವ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಇದನ್ನೇ ಮೊದಲು ಭಾರತದಲ್ಲಿ ಪ್ರಜೆಗಳಿಗೆ ಆಹಾರ ನೀಡುವ ವ್ಯವಸ್ಥೆ ಎಂತಲೂ ಕರೆಯಬಹುದು.
ಸ್ವಾತಂತ್ರ್ಯಾನಂತರದಲ್ಲಿ ಆಹಾರದ ಹಕ್ಕು
ನಮಗೆಲ್ಲರಿಗೂ ತಿಳಿದಹಾಗೆ ಅನೇಕರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯವು ಸಿಕ್ಕಿತು. ಬ್ರಿಟೀಷರ ಆಳ್ವಿಕೆಯಲ್ಲಿದ್ದ ಭಾರತವು ಬಳಿಕ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬೆಳವಣಿಗೆಯ ಹಂತದಲ್ಲಿಯೂ ಕೂಡ ಸ್ವತಂತ್ರ ಭಾರತವು ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು ಉದಾಹರಣೆಗೆ- ಆಹಾರ ಧಾನ್ಯಗಳ ತೀವ್ರ ಕೊರತೆ, ಹಸಿವಿನಿಂದ ಬಳಲುವ ಜನರು ಇತ್ಯಾದಿ. ಇಂತಹ ಸಂದರ್ಭದಲ್ಲಿ ನಮ್ಮ ಸಂವಿಧಾನದಲ್ಲಿ ಆಹಾರದ ಹಕ್ಕು ಎಂದು ನೇರವಾಗಿ ಹೇಳದಿದ್ದರೂ ಸಂವಿಧಾನದ 21ನೇ ವಿಧಿ ಜೀವಿಸುವ ಹಕ್ಕಿನ ಅಡಿಯಲ್ಲಿ ಆಹಾರವನ್ನು ಆಂತರಿಕವಾಗಿ ಗುರುತಿಸಲಾಗಿತ್ತು. ಅಲ್ಲದೇ ಭಾರತದ ಸಂವಿಧಾನದ ವಿಧಿ 42 ( ರಾಜ್ಯ ನಿರ್ದೇಶಕ ತತ್ವಗಳು) ಸ್ಪಷ್ಟವಾಗಿ “ತನ್ನ ನಾಗರೀಕರ ಪೌಷ್ಟಿಕಾಂಶದ ಮಟ್ಟ ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ನಾಗರೀಕರ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಮೊದಲ ಕರ್ತವ್ಯವಾಗಿದೆ” ಎಂದು ಹೇಳುತ್ತದೆ. ನಮ್ಮ ಸಂವಿಧಾನವು ಆಹಾರ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಕೊಟ್ಟಿತ್ತು ಎನ್ನುವುದನ್ನು ಇಲ್ಲಿ ಕಾಣಬಹುದು.
ಹಸಿರು ಕ್ರಾಂತಿ ಮತ್ತು ಆಹಾರದ ಸ್ವಾವಲಂಬನೆ
ಸ್ವಾತಂತ್ರ್ಯದ ಆರಂಭಿಕ ಕಾಲಘಟ್ಟದಲ್ಲಿ ಭಾರತವು ಆಹಾರ ಧಾನ್ಯಗಳಿಗಾಗಿ ವಿದೇಶಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಭಾರತದಲ್ಲಿ ಸುಮಾರು 1960 – 70ರಲ್ಲಿ ಅನೇಕ ವಿಜ್ಞಾನಿಗಳು ಸೇರಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕೆಂದು ಮಾತನಾಡಲು ಪ್ರಾರಂಭಿಸಿದರು. ಇದರ ನಾಯಕತ್ವವನ್ನು ಎಂ.ಎಸ್. ಸ್ವಾಮಿನಾಥನ್ ವಹಿಸಿದ್ದರು. ಹಸಿರು ಕ್ರಾಂತಿಯನ್ನು ಮಾಡಿದರು. ಆಗ ಭಾರತವು ಗೋಧಿ ಮತ್ತು ಭತ್ತದ ಉತ್ಪಾದನೆಯಲ್ಲಿ ಸ್ವಾವಲಂಬಿಯಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಆಹಾರ ನಿಗಮ (Food Corporation of India – FCI) ಹಾಗೂ ಕೃಷಿ ವೆಚ್ಚ ಹಾಗೂ ಬೆಲೆಗಳ ನಿಗದಿ ಆಯೋಗ (CACP) ಸ್ಥಾಪನೆಯಾಯಿತು. ಇದರಿಂದಾಗಿ ರೈತರಿಂದ ಆಹಾರ ಧಾನ್ಯವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಸಾರ್ವಜನಿಕರಿಗೆ ವಿತರಣೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದನ್ನೇ ಪಿ.ಡಿ.ಎಸ್. (Public Distribution System(PDS) ಎಂತಲೂ ಕರೆಯುತ್ತಾರೆ. ಇದು ದೇಶದಲ್ಲಿ ಬಡವರಿಗೆ, ಅಗತ್ಯವಿರುವವರಿಗೆ ಆಹಾರವನ್ನು ವಿತರಿಸಲು ಬೃಹತ್ ಜಾಲವಾಗಿ ಮಾರ್ಪಾಡಾಯಿತು.
ಭಾರತದಲ್ಲಿ ಗುರಿ ಆಧಾರಿತ ಪಡಿತರ (ಟಿ.ಪಿ.ಡಿ.ಎಸ್) ವ್ಯವಸ್ಥೆ

ಭಾರತದಲ್ಲಿ ಆಹಾರ ಭದ್ರತೆಯ ಬಗ್ಗೆ ಚರ್ಚೆಗಳಾಗುತ್ತಿದ್ದರೂ ಇದಕ್ಕೆ ಒಂದು ಗುರಿ ಇರಲಿಲ್ಲ. ಅದ್ದರಿಂದ 1997 ರಲ್ಲಿ ಏನು ಪಿ.ಡಿ.ಎಸ್. ಪಡಿತರ ವ್ಯವಸ್ಥೆ ಇತ್ತೋ ಅದನ್ನು ಗುರಿ ಆಧಾರಿತ ಪಡಿತರ ವ್ಯವಸ್ಥೆಯನ್ನು(Targeted PDS) ಜಾರಿಗೆ ತರಲಾಯಿತು. ಈ ವ್ಯವಸ್ಥೆಯಲ್ಲಿ ಗುರಿ ಆಧಾರಿತವಾಗಿ ಬಡತನ ರೇಖೆಗಿಂತ ಕೆಳಗಿರುವವರು (BPL) ಮತ್ತು ಬಡತನ ರೇಖೆಗಿಂತ ಮೇಲಿರುವವರು (APL) ಕುಟುಂಬಗಳೆಂದು, ಅತ್ಯಂತ ಬಡಕುಟುಂಬಗಳಿಗೆ ಅಂತ್ಯೋದಯ ಅನ್ನ ಯೋಜನೆ (AAY) ಎಂದು ವಿಂಗಡಿಸಿ ಅವರವರ ಅವಶ್ಯಕತೆಗಾಗಿ ಆಹಾರ ಧಾನ್ಯಗಳನ್ನು ನೀಡುವ ಯೋಜನೆ ಜಾರಿಯಾಯಿತು.
ಆಹಾರ ಭದ್ರತೆ ಮತ್ತು ನ್ಯಾಯಾಂಗದ ಒಳಗೊಳ್ಳುವಿಕೆ
ನಮ್ಮ ದೇಶದಲ್ಲಿ ಆಹಾರ ಭದ್ರತೆ ಎನ್ನುವುದು ಕೇವಲ ಯೋಜನೆಗಳಾಗಿರದೆ ಅದು ಒಂದು ಹಕ್ಕಾಗಬೇಕು ಎಂದು ಅನೇಕ ಆಹಾರ ಮತ್ತು ವಿಷಯ ತಜ್ಞರು ಸೇರಿ ಭಾರತದಲ್ಲಿ ಮಾತನಾಡಲು ಪ್ರಾರಂಭಿಸಿದರು. ಇದೆ ಸಂದರ್ಭದಲ್ಲಿ ರಾಜಸ್ಥಾನದಲ್ಲಿ ಬರಗಾಲ ಬಂದಿದ್ದು ಒಂದು ಕಡೆಯಾದರೆ ಸರ್ಕಾರದ ಗೋದಾಮುಗಳಲ್ಲಿ ಲಕ್ಷಾಂತರ ಕಿಲೊ ಆಹಾರ ಧಾನ್ಯಗಳು ಕೊಳೆತಿದ್ದು ಸುದ್ದಿಯಾಗಿತ್ತು. ಇದು ಒಂದು ಕಾರಣ ಇರಬಹುದು. ನಂತರ ದೇಶದಲ್ಲಿ ವಿವಿಧ ನಾಗರಿಕ ಸಮಾಜದ ಜನರು ಸಕ್ರಿಯವಾಗಿ ಭಾಗಿಯಾಗಿ ಆಹಾರದ ಹಕ್ಕಿಗಾಗಿ ಹೋರಾಟಗಳು ಪ್ರಾರಂಭವಾದವು. ಇದು ಸುಮಾರು 2001 ರಲ್ಲಿ ಪಿ.ಯು.ಸಿ.ಎಲ್. ಎಂಬ ಜಾಲಬಂಧ ಸಂಘಟನೆಯು ಮೊದಲು ಆಹಾರದ ಹಕ್ಕಿಗಾಗಿ ನ್ಯಾಯಾಂಗದ ಮೊರೆ ಹೋಯಿತು. PUCL (People’s Union for Civil Liberties) Vs Union of India ಇದು ಭಾರತದಲ್ಲಿ ಆಹಾರದ ಹಕ್ಕಿನ ಬಗ್ಗೆ ನ್ಯಾಯಾಂಗದ ಮಟ್ಟಕ್ಕೆ ಹೋಗಿದ್ದು ಮೊದಲಿನದು ಎನ್ನಬಹುದು. ಇದನ್ನು ಮನಗಂಡ ಸುಪ್ರೀಂ ಕೋರ್ಟ್ ಒಂದು ಚಾರಿತ್ರಿಕ ತೀರ್ಪನ್ನು ನೀಡುತ್ತದೆ. ಅದೇನೆಂದರೆ ಆಹಾರದ ಹಕ್ಕೆಂಬುದು ವಿಧಿ 21ರ ಅಡಿಯಲ್ಲಿ ಜೀವಿಸುವ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಸ್ಪಷ್ಟ ಪಡಿಸಿತ್ತು. ಈ ತೀರ್ಪು ದೇಶದಲ್ಲಿ ಆಹಾರ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದವರಿಗೆ ಒಂದು ದೊಡ್ಡ ಜಯ ಎನ್ನಬಹುದು ಮತ್ತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಬಹಳ ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆಯಿತು. ಇದು ಮೊದಲಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಮತ್ತು ಶಾಲೆಗಳಲ್ಲಿ ಬಿಸಿಯೂಟ ಯೋಜನೆಗಳನ್ನು ಜಾರಿಗೊಳಿಸಲು ನಿರ್ದೇಶನವನ್ನು ನೀಡಿತು. ಇದು ಆಹಾರದ ಹಕ್ಕನ್ನು “ ಶಾಸನ ಬದ್ಧವಾದ ಹಕ್ಕನಾಗಿಸಲು” ಮೊದಲು ದಾರಿಯನ್ನು ನಿರ್ಮಿಸಿತ್ತು ಎಂದರೆ ತಪ್ಪಾಗಲಾರದು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ – 2013 ರ ಜಾರಿ
ಇದೇ ರೀತಿಯಲ್ಲಿ ಮುಂದುವರಿದ ಆಹಾರದ ಹಕ್ಕಿನ ಕೂಗು ಹಾಗೂ ಸುಪ್ರೀಂ ಕೋರ್ಟ್ ಗಳ ನಿರ್ದೇಶನಗಳು ಕ್ರಮೇಣವಾಗಿ ಆಹಾರದ ಹಕ್ಕಿಗಾಗಿ ಅಂದೋಲನಗಳು, ಅಭಿಯಾನಗಳು ಹುಟ್ಟಿಕೊಳ್ಳಲು ಕಾರಣಗಳಾದವು. ಇದು ರಾಷ್ಟ್ರಾದ್ಯಂತ ಹೋರಾಟಗಳನ್ನು ಪ್ರಾರಂಭಿಸಿದವು. ಆಹಾರದ ಹಕ್ಕು ಕೇವಲ ಸುತ್ತೋಲೆ, ನಿರ್ದೇಶನ ಗಳಿಂದ ಸಾಧ್ಯವಿಲ್ಲ. ಇದಕ್ಕೊಂದು ನೀತಿ/ ನಿರೂಪಣೆ, ಕಾಯ್ದೆಯಾಗಬೇಕೆಂದು. ಇವುಗಳ ಫಲವಾಗಿ 2013ರಲ್ಲಿ ಇಡೀ ದೇಶದಲ್ಲಿ ಮಹತ್ತರವಾದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ -2013 (National Food Security Act – NFSA 2013) ಜಾರಿಯಾಯಿತು.
NFSA 2013 ರ ಪ್ರಮುಖ ವೈಶಿಷ್ಟ್ಯಗಳು
ಮೊದಲನೆಯದಾಗಿ ಇದು ಒಂದು ಕಾನೂನಾತ್ಮಕ ಹಕ್ಕು. ಅದ್ದರಿಂದ ಇದು ಕೇವಲ ಕ್ಷೇಮಾಭಿವೃದ್ಧಿಯ ಯೋಜನೆಯಲ್ಲ. ಆಹಾರ ಭದ್ರತೆಯನ್ನು ಕೇವಲ ಯೋಜನೆಗಳ ದೃಷ್ಟಿಯಲ್ಲಿ ನೋಡದೆ ಇದು ನಾಗರಿಕರ ಶಾಸನ ಬದ್ಧ ಹಕ್ಕು ಎಂದು ಈ ಕಾಯ್ದೆಯಲ್ಲಿ ಪರಿಗಣಿಸಲಾಗಿದೆ.
ಎರಡನೆಯದಾಗಿ ಈ ಕಾಯ್ದೆಯಲ್ಲಿ ಸುಮಾರು ದೇಶದ ಒಟ್ಟು ಜನಸಂಖ್ಯೆ 67% (ಗ್ರಾಮೀಣ ಪ್ರದೇಶದಲ್ಲಿ 75% ಮತ್ತು ನಗರ ಪ್ರದೇಶದಲ್ಲಿ ಸುಮಾರು 50%) ಜನರಿಗೆ ಈ ಕಾಯ್ದೆಯಡಿಯಲ್ಲಿ ಕಡಿಮೆ ಬೆಲೆಗೆ ಆಹಾರ ಧಾನ್ಯವನ್ನು ಪಡೆಯುವ ಹಕ್ಕು ನೀಡಲಾಗಿದೆ.
ಮೂರನೆಯದಾಗಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯವನ್ನು ನೀಡುವುದು ಅಂದರೆ ಪ್ರತಿ ಫಲಾನುಭವಿಗೆ ತಿಂಗಳಿಗೆ ಕನಿಷ್ಠ 5ಕೆ.ಜಿ. ಆಹಾರ ಧಾನ್ಯವನ್ನು ನೀಡುವುದು. ಅದಕ್ಕೆ ಪ್ರತಿ ಕೆ.ಜಿ. ಅಕ್ಕಿಗೆ ರೂ. 3, ಗೋಧಿ ರೂ. 2 ಎಂದು ನಿಗದಿ ಮಾಡಲಾಗಿದೆ. (ಕರ್ನಾಟಕದಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದೆ) ಅಂತ್ಯೋದಯ (AAY) ಕುಟುಂಬಗಳಿಗೆ ತಿಂಗಳಿಗೆ 35 ಕೆ.ಜಿ ಧಾನ್ಯವನ್ನು ನೀಡಲಾಗುತ್ತದೆ. (ಕೇಂದ್ರ ಸರ್ಕಾರ ಇದಕ್ಕೆ ಈಗ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದು ಪ್ರತಿ ಸದಸ್ಯರಿಗೆ 7 ಕೆ.ಜಿ. ಗೆ ನಿರ್ಬಂಧಿಸಬೇಕೆಂದು ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ).
ನಾಲ್ಕನೆಯದಾಗಿ ಈ ಕಾಯ್ದೆಯ ಪ್ರಮುಖವಾದ ಅಂಶವೇನೆಂದರೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಪಡಿತರ ಕಾರ್ಡ್ ಗಳಲ್ಲಿ ಕುಟುಂಬದ ಮುಖ್ಯಸ್ಥರು ಎಂಬಲ್ಲಿ 18 ವರ್ಷ ಪೂರ್ಣಗೊಳಿಸಿದ ಮಹಿಳೆಯೇ ಕುಟುಂಬದ ಮುಖ್ಯಸ್ಥರಾಗಿರುತ್ತಾರೆ. ಇದರಿಂದ ಪುರುಷಾಧಿಪತ್ಯವಿದ್ದ ಭಾರತದಲ್ಲಿ ಮಹಿಳೆಯೂ ಕೂಡ ಕುಟುಂಬದ ಮುಖ್ಯಸ್ಥೆ ಎಂದು ಗುರುತಿಸುವ ಕಾರ್ಯದಲ್ಲಿ ಈ ಕಾಯ್ದೆ ಬಹಳ ಪ್ರಗತಿಪರವಾಗಿ ರೂಪುಗೊಂಡಿದೆ.
ಐದನೆಯದಾಗಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈ ಕಾಯ್ದೆ ರಕ್ಷಣೆಯನ್ನು ನೀಡುತ್ತದೆ. ಇವರಿಗೆ ಉಚಿತವಾದ ಪೌಷ್ಟಿಕಾಂಶದ ಜೊತೆಗೆ ಮಾತೃತ್ವದ ಸೌಲಭ್ಯವನ್ನು (Matricity Benefit) ನೀಡಲು ಸೂಚಿಸುತ್ತದೆ. ಕನಿಷ್ಟ 6000 ರೂಗಳನ್ನು ನೀಡಬೇಕೆಂದು ಸೂಚಿಸುತ್ತದೆ.
ಆರನೆಯದಾಗಿ ಮಕ್ಕಳ ಪೌಷ್ಟಿಕಾಂಶದ ಬಗ್ಗೆಯೂ ಕೂಡ ಸ್ಪಷ್ಟವಾಗಿ ಹೇಳಿತ್ತು. 6 ತಿಂಗಳಿಂದ 14 ವರ್ಷದ ವರೆಗಿನ ಮಕ್ಕಳಿಗೆ ಅಂಗನವಾಡಿ ಮತ್ತು ಶಾಲೆಗಳ ಮೂಲಕ ಉಚಿತ ಪೌಷ್ಟಿಕಾಂಶ ಯುಕ್ತ ಆಹಾರವನ್ನು ನೀಡಬೇಕೆಂದು ಹೇಳುತ್ತದೆ.
ಹಸಿವುಮುಕ್ತ ಭಾರತಕ್ಕಾಗಿ ಪ್ರಮುಖವಾದ ಆಶಯವನ್ನು ಇಟ್ಟುಕೊಂಡ ಈ ಕಾಯ್ದೆ ದೊಡ್ಡ ಬಲ ತಂದಿದೆಯಾದರೂ ಹಲವಾರು ಸವಾಲುಗಳನ್ನು ಎದುರಿಸುತ್ತದೆ. ಅವುಗಳನ್ನು ಬಗೆಹರಿಸಲು ಭಾರತ ಪ್ರಯತ್ನಿಸಿದ್ದರೂ ಇನ್ನೂ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆಯನ್ನು ಇಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇಂದಿಗೂ ಪಡಿತರವೆಂದರೆ ಬರೀ ಅಕ್ಕಿ ಮತ್ತು ಗೋಧಿಯ ಮೇಲೆಯೇ ಹೆಚ್ಚಿನ ಗಮನವಿದೆ. ದೇಶದಲ್ಲಿ ರಕ್ತಹೀನತೆ ಮತ್ತು ಕುಬ್ಜತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಪಡಿತರ ವ್ಯವಸ್ಥೆಯಲ್ಲಿ ಸಿರಿಧಾನ್ಯಗಳು ಮತ್ತು ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳನ್ನು ವಿತರಿಸುವ ಕಾರ್ಯವನ್ನು ಮಾಡಬೇಕಾಗಿದೆ. ಹವಾಮಾನ ವೈಪರೀತ್ಯ, ತಾಂತ್ರಿಕತೆ ಜೋಡಣೆಯ ಸಮಸ್ಯೆಗಳು, ವಿಪರೀತವಾಗಿದೆ. ಇದನ್ನು ಬಗೆಹರಿಸಲು ಸರ್ಕಾರಗಳು ಪ್ರಗತಿಪರವಾಗಿ ಚಿಂತಿಸಲು ಪ್ರಾರಂಭಿಸಬೇಕಾಗಿದೆ.
ಭಾರತವು ಇಂದು ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿದೆ. ಅದಲ್ಲದೆ ಭಾರತವು ಸ್ವಾತಂತ್ರ್ಯಗೊಂಡ ನೂರು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಸಂಕಲ್ಪ ಮಾಡಿಕೊಂಡು ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದೆ. ಭಾರತದಲ್ಲಿ ಆಹಾರದ ಹಕ್ಕು ಎನ್ನುವುದು ಬ್ರಿಟಿಷರ ಕಾಲದ ಕ್ಷಾಮಗಳ ಕಟು ಸತ್ಯದಿಂದ ಶುರುವಾಗಿ, ಕೃಷಿ ಕ್ರಾಂತಿ, ನ್ಯಾಯಾಂಗದ ಹಸ್ತಕ್ಷೇಪ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಮೂಲಕ ಕಾನೂನಾತ್ಮಕ ಹಕ್ಕಿನವರೆಗೆ ಬೆಳೆದುಬಂದಿದೆ. ಕೇವಲ ಹಸಿವು ನೀಗಿಸುವುದು (Food Security) ಎಂಬ ಮಟ್ಟದಿಂದ ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುಕ್ತ ಆಹಾರ (Nutritional Security) ಸಿಗುವಂತೆ ಮಾಡುವುದು ಭವಿಷ್ಯ ಭಾರತದ ಮುಂದಿನ ಗುರಿಯಾಗಬೇಕಾಗಿದೆ.
ಕುಮಾರ್ ಶೃಂಗೇರಿ
ಆಹಾರದ ಹಕ್ಕು ಕಾರ್ಯಕ್ರಮ ಮಗು ಮತ್ತು ಕಾನೂನು ಕೇಂದ್ರ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ
ಬೆಂಗಳೂರು.
ಇದನ್ನೂ ಓದಿ- ಅವಳಿಗೆ ನಿಯಮ, ಅವನಿಗೆ ವಿನಾಯಿತಿಯಾ?


