ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿಯಲ್ಲಿ ‘ಲೆಹರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಾಡಲಿ) ಪ್ರತಿಭಟನೆ ನಡೆಯಿತು.
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ರಾಷ್ಟ್ರಧ್ವಜ ಹಿಡಿದು ಬೀದಿಗಿಳಿದರು. ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೂ, ನೂರಾರು ಪ್ರತಿಭಟನಾಕಾರರು ಕನಾಟ್ ಪ್ಲೇಸ್ ಮತ್ತು ಮಂಡಿ ಹೌಸ್ ಪ್ರದೇಶಗಳಲ್ಲಿ ಜಮಾಯಿಸಿದರು. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆಗೂ ಮುನ್ನವೇ ಅಭಿಜೀತ್ ದಿಪ್ಕೆ ವಶಕ್ಕೆ
‘ತಿರಂಗಾ ಮಾರ್ಚ್’ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹಾಗೂ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು.
ಕನಾಟ್ ಪ್ಲೇಸ್ ಸಮೀಪ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಅಭಿಜೀತ್ ದಿಪ್ಕೆ ಅವರನ್ನು ಜಾಫರ್ಪುರ ಕಲಾನ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಧ್ವಜ ಹಿಡಿದು ಪ್ರತಿಭಟನಾಕಾರರ ಆಕ್ರೋಶ
ಪೊಲೀಸರ ನಿರ್ಬಂಧ ಹಾಗೂ ನಾಯಕರ ಬಂಧನದ ನಡುವೆಯೂ ನೂರಾರು ಪ್ರತಿಭಟನಾಕಾರರು ಕನಾಟ್ ಪ್ಲೇಸ್ನ ಇನ್ನರ್ ಸರ್ಕಲ್ ಪ್ರದೇಶದಲ್ಲಿ ಜಮಾಯಿಸಿದರು.
ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಪಾಲಿಕಾ ಬಜಾರ್ ಸಮೀಪ ಸ್ಥಳೀಯ ವ್ಯಾಪಾರಿ ಸಂಘಟನೆಗಳ ಸದಸ್ಯರು ಹಾಗೂ ಪ್ರತಿಭಟನೆಯನ್ನು ವಿರೋಧಿಸುವ ಗುಂಪುಗಳು ಜಮಾಯಿಸಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು. ಸಿಜೆಪಿ ಬೆಂಬಲಿಗರು ಮತ್ತು ಪ್ರತಿಪಕ್ಷದ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲ
ಆಮ್ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ರಾಜಕೀಯ ಸಂಕೇತಗಳ ನಡುವಿನ ಸಂಘರ್ಷವೆಂದು ಬಣ್ಣಿಸಿದರು.
ಇನ್ನೊಂದೆಡೆ, ಮಂಡಿ ಹೌಸ್, ಪಾರ್ಲಿಮೆಂಟ್ ಸ್ಟ್ರೀಟ್ ಮತ್ತು ಕನಾಟ್ ಪ್ಲೇಸ್ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಹಾಗೂ ರಸ್ತೆ ಮಾರ್ಗ ಬದಲಾವಣೆಯಿಂದ ಸಂಜೆ ವೇಳೆ ವಾಹನ ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿತು.
‘ಇದು ಅಘೋಷಿತ ತುರ್ತು ಪರಿಸ್ಥಿತಿ’: ಮಮತಾ ಬ್ಯಾನರ್ಜಿ ಆಕ್ರೋಶ
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಭಾರತೀಯ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಲು ಮುಂದಾದ ಕಾರಣಕ್ಕೆ ಅಭಿಜೀತ್ ದಿಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಯುವಜನರನ್ನು ಬೆದರಿಸಿ ಅವರ ಧ್ವನಿಯನ್ನು ಅಡಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಿಜೆಪಿ ನಾಯಕರಾದ ಅಭಿಜೀತ್ ದಿಪ್ಕೆ, ಆಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಬಂಧನ ಮತ್ತು ಬೆದರಿಕೆಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

