Sunday, July 14, 2024

ಉತ್ತರಾಯಣ ನಿಜವಾಗಿ ಆರಂಭ ಯಾವಾಗ?

Most read

ಭಾರತವೂ ಖಗೋಳ ವಿಜ್ಞಾನದಲ್ಲಿ ಇತಿಹಾಸ ನಿರ್ಮಿಸುತ್ತಿರುವ ಹೊತ್ತಿನಲ್ಲಿ, ಚಂದ್ರನಲ್ಲಿ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಇಳಿಸಿದ್ದು ಮಾತ್ರವಲ್ಲ, ಚಂದ್ರನಲ್ಲಿಗೆ ಮಾನವರನ್ನು ಕಳಿಸಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ವಿಜ್ಞಾನ ಮುಂದಿಟ್ಟ ಸತ್ಯಗಳ ಆಧಾರದಲ್ಲಿ ನಮ್ಮ ನಂಬಿಕೆ ಮತ್ತು ಆಚರಣೆಗಳನ್ನೂ ಬದಲಾಯಿಸಿಕೊಳ್ಳಬೇಡವೇ? ಕಾಲದೊಂದಿಗೆ ನಾವೂ ಬದಲಾಗಬೇಡವೇ? ಮಕರ ಸಂಕ್ರಾಂತಿಯನ್ನು ಎಷ್ಟು ಕಾಲ ಉತ್ತರಾಯಣಾರಂಭ ಪುಣ್ಯಕಾಲ ಎನ್ನುತ್ತ ಕೂರುವುದು? ಶ್ರೀನಿವಾಸ ಕಾರ್ಕಳ

ಜನವರಿ ತಿಂಗಳ 14-15 ರ ಮಕರ ಸಂಕ್ರಾಂತಿ ಬಂತೆಂದರೆ, ದೇಶದ ತುಂಬಾ ಆ ದಿನವನ್ನು ನಾನಾ ರೀತಿಯಲ್ಲಿ ವಿಶೇಷ ಸಂಭ್ರಮ ಸಡಗರದೊಂದಿಗೆ ಅಚರಿಸಲಾಗುತ್ತದೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತಾದಿಗಳಿಂದ ತೀರ್ಥಕ್ಷೇತ್ರಗಳಲ್ಲಿ ಪುಣ್ಯಸ್ನಾನವೂ ನಡೆಯುತ್ತದೆ. ಇದು ಹಬ್ಬಗಳ ದೇಶವಾದ ಭಾರತದಲ್ಲಿ ತಪ್ಪೇನೂ ಅಲ್ಲ. ಆದರೆ  ಅನೇಕ ಮಂದಿ, ಹಾಗೆಯೇ ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಈ ಕಾಲದ ಟಿವಿ ವಾಹಿನಿಗಳಲ್ಲಿ ಮಕರ ಸಂಕ್ರಾಂತಿಯನ್ನು ‘ಉತ್ತರಾಯಣಾರಂಭದ ಪುಣ್ಯಕಾಲ’, ‘ಸೂರ್ಯ ಅಂದು ಪಥ ಬದಲಿಸುತ್ತಾನೆ’ ಎಂದೇ ಮತ್ತೆ ಮತ್ತೆ ಪ್ರಚುರಪಡಿಸಲಾಗುತ್ತದೆ. ಇದು ಎಷ್ಟು ಸರಿ? ಸೂರ್ಯ ಉತ್ತರಕ್ಕೆ ಚಲಿಸಲಾರಂಭಿಸುವುದು ನಿಜವಾಗಿಯೂ ಮಕರ ಸಂಕ್ರಾಂತಿಯಂದೇ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಸರಳ ಪ್ರಯೋಗ

ಈ ಪ್ರಯೋಗವನ್ನು ನೀವೂ ಮಾಡಬಹುದು; ಅದಕ್ಕೆ ವಿಜ್ಞಾನಿಗಳೇ ಆಗಬೇಕೆಂದೇನೂ ಇಲ್ಲ. ಸೂರ್ಯೋದಯ ಮತ್ತು ಸೂರ್ಯಾಸ್ತ ಬಿಂದುಗಳನ್ನು ವರ್ಷದ ಉದ್ದಕ್ಕೂ ಗುರುತಿಸುತ್ತಾ ಹೋದರೆ, ಕೆಲವು ತಿಂಗಳ ಕಾಲ ಅವು ಉತ್ತರದ ಕಡೆಗೂ, ಇನ್ನು ಕೆಲವು ತಿಂಗಳ ಕಾಲ ದಕ್ಷಿಣದ ಕಡೆಗೂ ಲೋಲಕದಂತೆ ತೊನೆಯುವುದನ್ನು ಕಾಣಬಹುದು. ಇದಕ್ಕೆ ಅನುಗುಣವಾಗಿ ಹಗಲು ರಾತ್ರಿಗಳ ಅವಧಿಯಲ್ಲಿಯೂ ಕ್ರಮೇಣ ವ್ಯತ್ಯಾಸವಾಗುತ್ತಾ, ಅದು ಕನಿಷ್ಠ- ಗರಿಷ್ಠ ಪರಿಮಿತಿಗಳ ನಡುವೆ ಓಲಾಡುತ್ತದೆ. ಹಗಲಿನ ಅವಧಿಯು ಕನಿಷ್ಠ ಇದ್ದ ದಿನದಂದು ಸೂರ್ಯನ ಉದಯಾಸ್ತ ಬಿಂದುಗಳು ದಕ್ಷಿಣತಮ ನೆಲೆಯಲ್ಲಿಯೂ, ಗರಿಷ್ಠವಾದಂದು ಉತ್ತರತಮ ನೆಲೆಯಲ್ಲಿಯೂ ಇದ್ದು, ಮುಂದಿನ ದಿನಗಳಲ್ಲಿ ಉತ್ತರ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ಸರಿಯತೊಡಗುತ್ತದೆ. ಹಾಗಾಗಿಯೇ, ಉದಯಾಸ್ತ ಬಿಂದು ಉತ್ತರದೆಡೆಗೆ ಸರಿಯಲಾರಂಭಿಸುವ ದಿನವನ್ನು ಉತ್ತರಾಯಣಾರಂಭ ದಿನವೆಂದೂ, ದಕ್ಷಿಣದೆಡೆಗೆ ಸರಿಯುವ ದಿನವನ್ನು ದಕ್ಷಿಣಾಯಣಾರಂಭ ದಿನವೆಂದೂ ಕರೆಯುತ್ತಾರೆ. ವರ್ತಮಾನ ಕಾಲದಲ್ಲಿ ಇವು ದಿನಾಂಕ ಡಿಸೆಂಬರ್ 21/ 22 ಮತ್ತು ಜೂನ್ 21/22 ರಂದು ಘಟಿಸುತ್ತವೆ. ಈ ಅರ್ಥದಲ್ಲಿ ಯಾವ ನೆಲೆಯಿಂದ ನೋಡಿದರೂ ಉತ್ತರಾಯಣಾರಂಭವಾಗುವುದು ಸ್ಪಷ್ಟವಾಗಿ ಡಿಸೆಂಬರ್ 22 ರಂದು. ಅಲ್ಲಿಂದ ಮುಂದಕ್ಕೆ ಹಗಲಿನ ಅವಧಿ ಹಿರಿದಾಗುತ್ತಾ ರಾತ್ರಿಯ ಅವಧಿ ಕಿರಿದಾಗುತ್ತಾ ಹೋಗುತ್ತದೆ.

ವಿಜ್ಞಾನ ತಿಳಿಸಿದ ಸತ್ಯಗಳು

ಇಂದು ಖಗೋಳ ವಿಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳದು ನಿಂತಿದೆ. ಮಾನವ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದ್ದಾನೆ. ಮಂಗಳ ಗ್ರಹದತ್ತ ದಿಟ್ಟಿ ನೆಟ್ಟಿದ್ದಾನೆ. ಈ ಭೂಮಿಯನ್ನು, ಆಕಾಶಕಾಯಗಳನ್ನು, ಹಗಲು ರಾತ್ರಿ, ಮಳೆಗಾಲ, ಬೇಸಗೆ ಕಾಲ ಹೀಗೆ ನೈಸರ್ಗಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ವಿಜ್ಞಾನ ನಮಗೆ ಸಹಾಯ ಮಾಡಿದೆ. ಭೂಮಿ ಚಪ್ಪಟೆಯಾಗಿಲ್ಲ, ಅದು ಗುಂಡಗಿದೆ, ಸೂರ್ಯ ತಿರುಗುವುದಿಲ್ಲ, ಭೂಮಿಯೇ ಸೂರ್ಯನ ಸುತ್ತ ತಿರುಗುವುದು,  ನಿಜವಾಗಿ ಸೂರ್ಯ ಉದಯಿಸುವುದಿಲ್ಲ ಅಸ್ತಮಿಸುವುದೂ ಇಲ್ಲ, ಭೂಮಿಯು ತನ್ನ ಅಕ್ಷದಲ್ಲಿ ತಿರುಗುವುದರಿಂದ ಸೂರ್ಯೋದಯ ಸೂರ್ಯಾಸ್ತ ಅದಂತೆ ನಮಗೆ ಕಾಣಿಸುವುದು, ಗ್ರಹಣ ಅಂದರೆ ಸೂರ್ಯ ಚಂದ್ರರನ್ನು ರಾಹು ಕೇತು ನುಂಗುವುದಲ್ಲ, ಅದು ಸೂರ್ಯ, ಭೂಮಿ ಮತ್ತು ಚಂದ್ರರ ನೆರಳಿನಾಟ ಎಂಬ ಸತ್ಯವನ್ನು ತಿಳಿಯಲೂ ಅದು ನಮಗೆ ಸಹಾಯ ಮಾಡಿದೆ.

ವಿಜ್ಞಾನ ಇಂದಿನ ರೀತಿ ಬೆಳೆದು ಬಂದಿರದ ಒಂದು ಕಾಲದಲ್ಲಿ ಅಜ್ಞಾನ ಮತ್ತು ಅರೆಜ್ಞಾನದ ಕಾರಣ ನಮ್ಮಲ್ಲಿ ಅನೇಕ ತಪ್ಪು ತಿಳಿವಳಿಕೆಗಳು ನೆಲೆಯಾಗಿದ್ದವು. ಪ್ರಕೃತಿಯ ವಿದ್ಯಮಾನಗಳ ಅರಿವಿಲ್ಲದೆ, ಸಾಮಾನ್ಯ ವಿದ್ಯಮಾನಗಳಿಗೂ ಮಾನವ ಹೆದರಿ ಅನೇಕ ಹಾಸ್ಯಾಸ್ಪದ ಪ್ರತಿಕ್ರಿಯೆಗಳಿಗೆ ಮುಂದಾಗುತ್ತಿದ್ದ. ಚೀನಾದಲ್ಲಿ ಗ್ರಹಣ ಎಂದರೆ ಸೂರ್ಯ ಚಂದ್ರರನ್ನು ಡ್ರಾಗನ್ ನುಂಗುವುದು ಎಂದು ತಿಳಿದುಕೊಂಡು ಜೋರಾಗಿ ನಗಾರಿ ಬಾರಿಸುವುದು, ಗದ್ದಲ ಎಬ್ಬಿಸುವುದು ಎಲ್ಲ ಮಾಡುತ್ತಿದ್ದರಂತೆ. ಗ್ರಹಣ ಮುಗಿದಾಗ ನಮ್ಮ ಪ್ರಯತ್ನದಿಂದಾಗಿ ಸೂರ್ಯ ಚಂದ್ರರು ಉಳಿದುಕೊಂಡರು ಡ್ರಾಗನ್ ಹೆದರಿ ಓಡಿಹೋಯಿತು ಎಂದು ಅಂದುಕೊಳ್ಳುತ್ತಿದ್ದರಂತೆ.

ಚಿತ್ರ : ಸೂರ್ಯನ ಪಥ — ದಕ್ಷಿಣ ಮತ್ತು ಉತ್ತರ ದಿಕ್ಕಿನ ಅಂಚಿನಲ್ಲಿ


ವಿಜ್ಞಾನದೊಂದಿಗೆ ಬದಲಾಗೋಣ

ಗ್ರಹಣ ಕಾಲದಲ್ಲಿ ಉಪವಾಸ ಇರುವುದು, ಮನೆಯೊಳಗಿನ ನೀರು, ಆಹಾರ ಸಾಮಗ್ರಿಗಳನ್ನು ಎಸೆಯುವುದು ಹೀಗೆ ಅನೇಕ ಅರ್ಥಹೀನ ಮತ್ತು ವಿಚಿತ್ರ ಆಚರಣೆಗಳು ಇರುವುದನ್ನು ನಮ್ಮಲ್ಲಿಯೂ ನೋಡಬಹುದು. ಆದರೆ, ಭಾರತವೂ ಖಗೋಳ ವಿಜ್ಞಾನದಲ್ಲಿ ಇತಿಹಾಸ ನಿರ್ಮಿಸುತ್ತಿರುವ ಹೊತ್ತಿನಲ್ಲಿ, ಚಂದ್ರನಲ್ಲಿ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಇಳಿಸಿದ್ದು ಮಾತ್ರವಲ್ಲ, ಚಂದ್ರನಲ್ಲಿಗೆ ಮಾನವರನ್ನು ಕಳಿಸಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ವಿಜ್ಞಾನ ಮುಂದಿಟ್ಟ ಸತ್ಯಗಳ ಆಧಾರದಲ್ಲಿ ನಮ್ಮ ನಂಬಿಕೆ ಮತ್ತು ಆಚರಣೆಗಳನ್ನೂ ಬದಲಾಯಿಸಿಕೊಳ್ಳಬೇಡವೇ? ಕಾಲದೊಂದಿಗೆ ನಾವೂ ಬದಲಾಗಬೇಡವೇ? ಮಕರ ಸಂಕ್ರಾಂತಿಯನ್ನು ಎಷ್ಟು ಕಾಲ ಉತ್ತರಾಯಣಾರಂಭ ಪುಣ್ಯಕಾಲ ಎನ್ನುತ್ತ ಕೂರುವುದು? ಈ ಪ್ರಶ್ನೆಗಳನ್ನು ನಾವು ಅವಶ್ಯವಾಗಿ ಕೇಳಿಕೊಳ್ಳಬೇಕು. ಈ ಪ್ರಶ್ನೆಗಳಿಗೆ ತರ್ಕಬದ್ಧ ಉತ್ತರ ಕಂಡುಕೊಂಡು, ಸೂರ್ಯನೊಂದಿಗೆ ನಾವೂ ನಮ್ಮ ಪಥವನ್ನೂ ಬದಲಿಸಿಕೊಂಡು, ಸರಿಯಾದ ಹಾದಿಯಲ್ಲಿ ಸಾಗಬೇಕು.

ಶ್ರೀನಿವಾಸ ಕಾರ್ಕಳ, ಚಿಂತಕರು

ಇದನ್ನೂ ಓದಿ-ದಲಿತರಿಗೆ ವೈದಿಕ ದೇವರುಗಳ ಹಂಗ್ಯಾಕೆ?

More articles

Latest article