Saturday, May 18, 2024

ದಲಿತರಿಗೆ ವೈದಿಕ ದೇವರುಗಳ ಹಂಗ್ಯಾಕೆ?

Most read

ದೈವ ನಂಬಿಕೆಯೆಂಬುವುದು ಮನುಷ್ಯನ ಒಂದು ದೊಡ್ಡ ದೌರ್ಬಲ್ಯ ಕೂಡ ಹೌದು. ಹೇಳುವಷ್ಟು ಸುಲಭದಲ್ಲಿ ಇವೆಲ್ಲವುಗಳಿಂದ ಏಕಾಏಕಿ  ಕಳಚಿಕೊಳ್ಳಲಾಗದು. ಜೊತೆಗೆ ಇದು ಓರ್ವನ ವೈಯುಕ್ತಿಕ ನಿರ್ಧಾರವೆನಿಸದೇ ಕುಟುಂಬದ ಸದಸ್ಯರ ಮೇಲೂ ಕೂಡ ನೇರವಾಗಿಯೋ, ಪರೋಕ್ಷವಾಗಿಯೋ ಸಂಬಂಧಪಟ್ಟಿರುತ್ತದೆ. – ಶಂಕರ್‌ ಸೂರ್ನಳ್ಳಿ

ಮೊನ್ನೆ ಮೊನ್ನೆ ತರಿಕೆರೆ ತಾಲೂಕಿನ ಗೇರುಮರಡಿ ಗೊಲ್ಲರಹಟ್ಟಿ ಎಂಬಲ್ಲಿ ಪರಿಶಿಷ್ಟ ಜಾತಿಯ ಕೆಲಮಂದಿ ಗ್ರಾಮ ಪ್ರವೇಶಿಸಿದರೆಂಬ ಕಾರಣಕ್ಕೆ ಊರು ಮೈಲಿಗೆಯಾಗಿದೆ ಎಂಬ ನೆಪವೊಡ್ಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇಗುಲಕ್ಕೆ ಬೀಗ ಹಾಕಿದ ಸುದ್ದಿ ಹರಿದಾಡಿತ್ತು. ಈ ಕಾರಣ ದಲಿತ ಮುಖಂಡರು ತರಿಕೆರೆ ತಹಸೀಲ್ದಾರ್ ರವರ ನೇತೃತ್ವದಲ್ಲಿ ದೇವಸ್ಥಾನದ ಬೀಗ ತೆಗೆದು ಒಳ ಪ್ರವೇಶಿಸಿ ಬಿಗಿ ಪೊಲೀಸ್ ಬಂದೋಬಸ್ತಿನಡಿಯಲ್ಲಿ ಪೂಜೆ ಸಲ್ಲಿಸಿದ ಘಟನೆ ವರದಿಯಾಗಿತ್ತು. ಎರಡು ವರ್ಷಗಳ ಹಿಂದೆ ಕೊಪ್ಪಳದ ಮಿಯಾಪುರ ಎಂಬಲ್ಲಿ ಏನೂ ಅರಿಯದ ಮೂರು ವರ್ಷದ ಎಳೆಯ ಕಂದಮ್ಮ ಅರಿವಿಲ್ಲದೇ ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಸಮುದಾಯದ ಆ ಮಗುವಿನ ಪೋಷಕರಿಗೆ 25,000 ರೂ ದಂಡ ವಿಧಿಸಲಾಗಿತ್ತು. ಕೆಲ ದಿನಗಳ ಹಿಂದೆ  ತುಮಕೂರು ತುರುವೇ ಕೆರೆಯ  ತುಯನ ಹಳ್ಳಿಯಲ್ಲಿ ಕೆಲ ದಲಿತ ಭಕ್ತರು ಗುಡಿಯೊಳಗೆ ಪ್ರವೇಶಿಸಿದ್ದರೆಂಬ ನೆಪಕ್ಕೆ ಐದು ವರ್ಷ ಅಲ್ಲಿನ ಜಾತ್ರೆಯನ್ನೇ ನಿಲ್ಲಿಸಿದ್ದ ಸುದ್ದಿ ಪ್ರಸಾರವಾಗಿತ್ತು. ಸರಕಾರ ಆದೇಶಿಸಿದ ಅಸ್ಪೃಶ್ಯತಾ  ಆಚರಣೆ ನಿಷೇಧದ  ಕಾನೂನಿಗೆ ಕವಡೆಕಾಸಿನ ಕಿಮ್ಮತ್ತೂ ಇಲ್ಲಿಲ್ಲ.

ಒಂದೆರಡು ತಿಂಗಳ ಹಿಂದೆ 22 ವರ್ಷ ವಯಸ್ಸಿನ ಕೇರಳದ ಯದುಕೃಷ್ಣನ್ ಎಂಬ ತರುಣ ಕೇರಳದ ಪಟ್ಟಣಂತಿಟ್ಟ ಬಳಿಯ ಮಣಪ್ಪುರಂ ನ ಶಿವ ದೇಗುಲಕ್ಕೆ ಅರ್ಚಕನಾಗಿ ಅಧಿಕಾರ ವಹಿಸಿಕೊಂಡ ಸುದ್ದಿ ಬಂದಿತ್ತು. ಅಂದ ಹಾಗೆ, ಈ ಯುವಕ ದಲಿತ ಸಮುದಾಯಕ್ಕೆ ಸೇರಿದಂತವನು ಎಂಬುದಿಲ್ಲಿ ಗಮನಾರ್ಹ. ಸಂಪ್ರದಾಯವಾದಿಗಳ ಕಣ್ಣು ಕೆಂಪಗಾಗಿಸಿದ ಕೇರಳ ಹಾಗು ತಮಿಳುನಾಡು ಸರಕಾರಗಳ ಅರ್ಚಕ ವೃತ್ತಿಯನ್ನು ಬ್ರಾಹ್ಮಣ ಏಕಸ್ವಾಮ್ಯದಿಂದ ಮುಕ್ತಗೊಳಿಸಿ ಸಾರ್ವತ್ರಿಕೀಕರಣಗೊಳಿಸುವ ಇಂತಹ ನಿರ್ಧಾರಗಳ ವಿರುದ್ಧ ಪೇಜಾವರ ಸ್ವಾಮಿಗಳಂತವರು ಇದು ಸರಿಯಾದ ಕ್ರಮವಲ್ಲವೆಂದು ವಿರೋಧಿಸಿದ್ದರು. ದಲಿತ ಹಾಗು ಹಿಂದುಳಿದ ವರ್ಗಗಳಲ್ಲಿ ಅವರದೇ ಆದ ಆರಾಧನಾ ಪದ್ಧತಿಗಳಿವೆ. ನಂಬಿ ಆರಾಧಿಸಿಕೊಂಡು ಬಂದಂತಹ ಅನೇಕ ಅಲೌಕಿಕ ಶಕ್ತಿಗಳೂ ಹಾಗು ಆಚರಣೆಗಳು ಈ ಸಮುದಾಯಗಳಲ್ಲಿ ಬೇಕಷ್ಟಿವೆ. ಆದರೂ ಈ ವೈದಿಕ ದೇವರುಗಳ ಹಂಗ್ಯಾಕೋ.. ಬದಲಾವಣೆಗೆ ಇದು ಸಕಾಲ..

ವಿಶ್ವದ ಯಾವುದೇ ಭಾಗದಲ್ಲೂ ಕೂಡ ಅಲ್ಲಿನ ಸಾಮಾಜಿಕ ನಡವಳಿಕೆ ಕಟ್ಟುಪಾಡುಗಳೆಲ್ಲ ಅಲ್ಲಿ ನಿರಂತರವಾಗಿ ಸಾಗಿ ಬಂದಂತಹ ಸಾಮಾಜಿಕ ಹಾಗು ರಾಜಕೀಯ ಪ್ರಭಾವದಡಿಯಿಂದಲೇ ಬೆಳೆದು ಬಂದಿರುತ್ತದೆ. ಈಗ ನಾವು ಪರಿಕಲ್ಪಿಸಿಕೊಂಡಿರುವಂತಹ ಭಾರತದ ಬಹುತೇಕ ಭಾಗ ಹಿಂದೆ ಬೌದ್ಧ ಮತಾವಲಂಬಿ ಸಾಮ್ರಾಟರಿಂದ ಜೈನ ಮತಾವಲಂಬಿ ದೊರೆಗಳಿಂದ, ಇಸ್ಲಾಮ್ ಧರ್ಮೀಯ ಮೊಗಲರಿಂದ ಅಥವಾ ಕ್ರೈಸ್ತ ಮತಾವಲಂಬಿ ಬ್ರಿಟಿಷರಿಂದ ಆಳಿಸಿಕೊಂಡು ಬಂದಿರುವುದು ಇತಿಹಾಸ. ಒಂದು ವೇಳೆ ಮೇಲಿನ ಯಾವ ಐತಿಹಾಸಿಕ ಪಲ್ಲಟಗಳೂ ನಡೆಯದೇ ಚಕ್ರವರ್ತಿ ಅಶೋಕನಂತಹ ಬೌದ್ಧ ಅಥವಾ ಮತ್ಯಾವುದೋ ಜೈನ ಸಾಮ್ರಾಟರ ಪರಂಪರೆಯೇ ಹಾಗೇ ಮುಂದುವರೆದು ಉಳಿದಿದ್ದರೆ ಅಲ್ಪಸಂಖ್ಯಾತ ವೈದಿಕತೆಗೆ ಈ ದೇಶದಲ್ಲಿ ಅಸ್ತಿತ್ವವೇ ಇದ್ದಿರುತ್ತಿರಲಿಲ್ಲ. ಈ ಭಯದ ಹಿನ್ನೆಲೆಯಿಂದಲೇ ಬೌದ್ಧ ಚೈತ್ಯಾಲಯಗಳ ದ್ವಂಸ ಹಾಗು ಬೌದ್ಧಾನುಯಾಯಿಗಳ ಮಾರಣ ಹೋಮ ನಡೆಸಿ  ದೇಶದಿಂದಲೇ  ಅವರನ್ನು ಕುತಂತ್ರದಿಂದ ಕಿತ್ತೋಡಿಸಲಾಗಿತ್ತು.

ಭಾರತ ಉಪಖಂಡ ಹಿಂದಿನಿಂದಲೂ ಹೊರಗಿನ ಯಾರನ್ನೂ ಕೂಡ ನಿರ್ಬಂಧಿಸಿರಲಿಲ್ಲ. ಶಕರು, ಹೂಣರು, ಗ್ರೀಕರು ಎಂಬಂತೆ ಎಲ್ಲೆಲ್ಲಿಂದಲೋ ಯಾರ್ಯಾರೋ ಇಲ್ಲಿಗೆ ಬಂದರು. ನೂರಾರು ರಾಜರುಗಳಿದ್ದ ಈ ದೇಶದಲ್ಲಿ ನೆಲೆಯಾದವರು ಇಲ್ಲಿಯೇ ಒಂದಾಗಿ ಉಳಿದರು. ಸರಿಯೆನಿಸದೇ ವಾಪಾಸಾದವರು ಹೋದರು.  ಶತಮಾನಗಳಿಂದೀಚೆ ಇಲ್ಲಿಗೆ ಬಂದು ಆಳ್ವಿಕೆ ನಡೆಸಿದಂತಹ ಮೊಗಲರಿಂದ ಹಿಡಿದು ಬ್ರಿಟಿಷರ ಆಡಳಿತಾವಧಿಯಲ್ಲಿ ಸ್ಥಳೀಯವಾಗಿ ವಿದ್ಯಾವಂತರೆನಿಸಿಕೊಂಡು ಗ್ರಾಮ ಮಟ್ಟದ ಶಾನುಭೋಗನಿಂದ ಹಿಡಿದು  ರಾಜಧಾನಿಯಲ್ಲಿನ ಸುಲ್ತಾನ ಹಾಗು  ಗವರ್ನರ್ ನ ಆಸ್ಥಾನದವರೆಗೆ, ದಿವಾನಗಿರಿಯ ವರೆಗಿನ ಆಡಳಿತದ ನಿಜ ಚುಕ್ಕಾಣಿ ಹಿಡಿದಂತಹ ವರ್ಗ ಯಾವುದೆಂಬ ಇತಿಹಾಸ ಗುಟ್ಟೇನಲ್ಲ.

ರಾಜಾಶ್ರಯ ಹಾಗು ರಾಜ್ಯಾಡಳಿತದ ನಿಯಂತ್ರಣವನ್ನು ಹೊಂದಿರುವ ವೈದಿಕತೆಯ ಪ್ರಭಾವ ಎಲ್ಲಾ ರಂಗಗಳಲ್ಲೂ ಕಾಣಿಸಿಕೊಂಡಿರುವುದು ಸಹಜವೇ. ಧಾರ್ಮಿಕವಾಗಿ ಪ್ರಾಚೀನ ಕಾಲದ ಮಾರಮ್ಮಗಳು, ಉಳ್ಳಾಲ್ತಿಯಂತಹ ದೈವಗಳು ವೈದಿಕ ಪ್ರಭಾವದಿಂದ ಕಾಳಿ, ದುರ್ಗಾ ಪರಮೇಶ್ವರಿಯ ರೂಪಗಳೆನಿಸಿದರೆ, ತುಳುನಾಡಿನ ದೈವಗಳು ಶಿವ ದೂತರೆಂದೆನಿಸಿ ಭೂತಗಣಗಳಾಗಿವೆ. ಅನೇಕ ಜೈನ ಬಸದಿಗಳು  ಬೌದ್ಧ ಚೈತ್ಯಾಲಯಗಳು ಮಂದಿರಗಳಾಗಿ ಮೆರೆಯುತ್ತಿವೆ. ಒಟ್ಟಾರೆ ಈ ದೇಶದಲ್ಲಿ ವೈದಿಕತೆಯ ಪ್ರಭಾವದಿಂದ ಹೊರಬರುವುದು ಸುಲಭದ ಮಾತೇನಲ್ಲ. ಇನ್ನು ಹಿಂದಿನಿಂದಲೂ ಹೇಳುವಂತಹ ಗಟ್ಟಿ ನೆಲೆಯನ್ನು ಹೊಂದಿರದ ಶಿಕ್ಷಣದಿಂದಲೂ ವಂಚಿತರಾಗಿರುವಂತಹ ತಳ ಸಮುದಾಯದ ಪಾಡು Beggars are not choosers ರೀತಿಯಲ್ಲಿ ಅವರ ಆಟ ಅಭಿಪ್ರಾಯಗಳಿಗೆ ಶಿಕ್ಷಣ ಸಾರ್ವತ್ರೀಕರಣಗೊಳ್ಳುವ ತನಕ ಯಾವುದೇ ಬೆಲೆ ಇದ್ದಿರಲಿಲ್ಲ. ಸಮಾಜ ಹೇಗೆ ಸಾಗುತ್ತಿದೆಯೋ ಅದನ್ನು ಅನುಸರಿಸುವುದಷ್ಟೇ ಅವರ ಕರ್ಮವಾಗಿತ್ತು.

ಜಾತೀಯತೆ, ಕಂದಾಚಾರಗಳ ಕಾರಣಕ್ಕೆ ಸ್ವಾಮಿ ವಿವೇಕಾನಂದರಿಂದ ಹುಚ್ಚರ ಸಂತೆ (Lunatic asylum) ಎಂದು ಕರೆಸಿಕೊಂಡ ಹಿಂದಿನ ಕೇರಳದ ಸಮಾಜ ಸುಧಾರಕ ಸಂತ ಶ್ರೀ ನಾರಾಯಣ ಗುರುಗಳು  ತಮ್ಮವರಿಗಾಗಿ ಶಿವನ ದೇವಾಲಯವನ್ನು ಸ್ಥಾಪಿಸಿದಾಗ ಅಲ್ಲಿನ ದೇವ ವಾರಸುದಾರ ಮಂದಿ ಅದನ್ನು ಕಟುವಾಗಿ ವಿರೋಧಿಸಿದ್ದರು. ಅದಕ್ಕುತ್ತರವಾಗಿ ನಾರಾಯಣ ಗುರುಗಳು ನಾವು ಪ್ರತಿಷ್ಠಾಪಿಸ ಹೊರಟಿರುವುದು ಈಳವ ಶಿವ ನಿಮ್ಮ ವೈದಿಕ ಶಿವನಲ್ಲ ಎಂದು ಮುಂದುವರೆದಿದ್ದರು.

ಅಂಬೇಡ್ಕರ್ ರವರ ಪ್ರಸಿದ್ಧ ಕಾಲಾರಾಮ್ ದೇಗುಲ ಪ್ರವೇಶ ಚಳುವಳಿ ಒಂದು ಪ್ರತಿರೋಧದ ಪ್ರಕ್ರಿಯೆಯಾಗಿತ್ತೇ ವಿನಹ ಅದು (ದೇಗುಲ ಪ್ರವೇಶ) ಅವರಿಗೆ ಆದ್ಯತೆಯ ವಿಚಾರ ಆಗಿದ್ದಿರಲಿಲ್ಲ. ದೇಗುಲಕ್ಕಿಂತ ವಿದ್ಯಾ ದೇಗುಲಗಳ ಬಗ್ಗೆಯೇ ಅಂಬೇಡ್ಕರರಿಗೆ ಹೆಚ್ಚಿನ ಒಲವಿತ್ತು. “ಯಾವ ಧರ್ಮ ಅಥವ ದೇವರೂ ಕೂಡ ನಮ್ಮನ್ನು ಉದ್ಧಾರ ಮಾಡುವುದಿಲ್ಲ ನಮ್ಮನ್ನು ಉದ್ಧರಿಸುವುದು ಕೇವಲ ಶಿಕ್ಷಣ ಮಾತ್ರವೇ. ನಮ್ಮ ಉನ್ನತಿಗೇ ಕೇವಲ ನಾವುಗಳಷ್ಟೇ  ಜವಾಬುದಾರರು” ಎಂದು ಅವರು ಹೇಳಿದ್ದರು. ತಳ ಸಮುದಾಯ ಶೋಷಣೆಯಿಂದ ಮುಕ್ತವಾಗಿ ಸ್ವಾಭಿಮಾನದ ಬದುಕನ್ನು ನಡೆಸ ಬೇಕೆಂಬುದು ಬಾಬಾ ಸಾಹೇಬರ ಕನಸಾಗಿತ್ತು.

ಅಂಬೇಡ್ಕರ್ ನಿರ್ದೇಶಿಸಿದ ಬೌದ್ಧ ಧರ್ಮ ಸ್ವೀಕಾರದ ಪ್ರತಿಜ್ಞೆಯಲ್ಲಿ “ಇನ್ನು ನಾನು ಹಿಂದೂ (ವೈದಿಕ) ದೇವರನ್ನು ನಂಬಿ ಆರಾಧಿಸುವುದಿಲ್ಲ…” ಎಂಬ ಪ್ರತಿಜ್ಞಾ ವಿಧಿಯೂ ಸಹ ಬರುತ್ತದೆ.  (ಪುನಃ ವೈದಿಕತೆಯ ಮೌಢ್ಯ ಕೂಪದ ಹಳೆಯ ಚಾಳಿಗೆ ಬಲಿಯಾಗದಿರಲಿ ಎಂಬ ಉದ್ದೇಶ ಇದರ ಹಿಂದಿದೆ) ಆದರೆ ಯಾವುದೋ ಸಾಂದರ್ಭಿಕ ಕಾರಣಗಳಿಗೆ ಪರಂಪರಾಗತವಾಗಿ ನಂಬಿಕೊಂಡು ಬಂದ ನಂಬಿಕೆ ಆಚರಣೆಗಳ ಏಕಾಏಕಿ ಬದಲಾವಣೆ ಹೇಳುವಷ್ಟು ಸುಲಭವೇ..

ನಿಜಕ್ಕೂ ಕಷ್ಟ.  ಯಾಕೆಂದರೆ, ಈ ದೈವ ನಂಬಿಕೆಯೆಂಬುವುದು ಮನುಷ್ಯನ ಒಂದು ದೊಡ್ಡ ದೌರ್ಬಲ್ಯ ಕೂಡ ಹೌದು. ಹೇಳುವಷ್ಟು ಸುಲಭದಲ್ಲಿ ಇವೆಲ್ಲವುಗಳಿಂದ ಏಕಾಏಕಿ  ಕಳಚಿಕೊಳ್ಳಲಾಗದು. ಜೊತೆಗೆ ಇದು ಓರ್ವನ ವೈಯುಕ್ತಿಕ ನಿರ್ಧಾರವೆನಿಸದೇ ಕುಟುಂಬದ ಸದಸ್ಯರ ಮೇಲೂ ಕೂಡ ನೇರವಾಗಿಯೋ, ಪರೋಕ್ಷವಾಗಿಯೋ ಸಂಬಂಧಪಟ್ಟಿರುತ್ತದೆ. ಉದಾಹರಣೆಗೆ ಒಬ್ಬ ಕಟ್ಟಾ ನಾಸ್ತಿಕನಾಗಿ ಆತ ತನ್ನ ಹೆಂಡತಿಯ ನಂಬಿಕೆಯನ್ನು ಒಂದು ಮಿತಿಯನ್ನು ದಾಟಿ ತಡೆಯ ಹೋದರೆ ಅದು ಅನಾಹುತಕ್ಕೆ ಕಾರಣವಾದೀತು. ಉಡುಪಿ ಜಿಲ್ಲೆಯ ಜ್ಞಾನಪೀಠ ಪುರಸ್ಕೃತ ದಿವಂಗತ ಸಾಹಿತಿಗಳಿಗೆ ದೇವರ ಅಸ್ತಿತ್ವದಲ್ಲಿ ಅಂತಾ ನಂಬಿಕೆ ಇದ್ದಿರಲಿಲ್ಲ ಆದರೆ ಅವರ ಧರ್ಮ ಪತ್ನಿ ಪುಟ್ಟಪರ್ತಿಯ ದೇವ ಮಾನವನೊಬ್ಬನ ಪರಮ ಭಕ್ತೆಯಾಗಿದ್ದರಂತೆ!

ಹೇಳಿಕೊಂಡ ಹರಕೆ ತೀರಿಸದಿದ್ದರೆ, ಆಚರಣೆ ಅಥವಾ ದೇವರ ಕುರಿತಂತೆ ತನ್ನ ಅಥವಾ ಮನೆ ಮಂದಿಯಿಂದ ಯಾವುದಾದರೂ ಅಚಾತುರ್ಯ ನಡೆದಿದ್ದರೆ,  ಶಾಸ್ತ್ರಿಗಳು ಆಪತ್ತಿನ ಕುರಿತಂತೆ ಮನೆಯವರ ಬಳಿ ಏನಾದರೂ ಹೇಳಿ ಹೆದರಿಸಿದರೆ, ಏನಾದರೂ ಅಪಶಕುನ ಘಟಿಸಿದರೆ ಭಯ ಬೀಳದವರು ವಿರಳ.  ಮುವ್ವತ್ತು ನಲ್ವತ್ತು ವರ್ಷ ಅನುಸರಿಸಿಕೊಂಡು ಬಂದ ಸಿಗರೇಟೋ, ಕುಡಿತವೋ ಅಥವಾ ನಾನ್ ವೆಜ್ಜೋ ಏನನ್ನಾದರೂ ಬಿಡಬಹುದು ಆದರೆ ಅನುಸರಿಸಿ ಬಂದಂತಹ ನಂಬಿಕೆಗಳನ್ನು ಏಕಾಏಕಿ ಬಿಡಲು ಛಲ ಹಾಗು ಎಲ್ಲರ ಸಹಮತವಿಲ್ಲದೇ ಕಷ್ಟ ಸಾಧ್ಯ.

ಅನುಸರಿಸಿ ಬಂದ ನಂಬಿಕೆ, ಆಚರಣೆಗಳನ್ನು  ಏಕಾಏಕಿ ಬಿಡುವುದು ಎನ್ನುವ ಬದಲು ಬದಲಾವಣೆ ಅರ್ಥಾತ್ ತಾರತಮ್ಯ ತೋರುವ ತಮ್ಮದಲ್ಲದ ನಂಬಿಕೆಗಳಿಂದ ತಮ್ಮ ಮೂಲ ಆಚರಣೆಗಳೆಡೆಗೆ ಎಂದು ಹಂತ ಹಂತವಾಗಿ ಜೊತೆಗೆ ಸಾಮೂಹಿಕವಾಗಿ ನಂಬಿಕೆ ಆಚರಣೆಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದರೆ ಬದಲಾವಣೆ ಖಂಡಿತಾ ಅಸಾಧ್ಯದ ಮಾತೇನಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎನಿಸುವ ಸ್ಥಳದಲ್ಲಿ ನಿಮ್ಮ ಚಪ್ಪಲಿಯನ್ನೂ ಕೂಡ ಬಿಡಬಾರದು ಎಂಬ ಅಂಬೇಡ್ಕರರ ಮಾತಿನ ಹಿಂದೆ ಪರಂಪರಾಗತ ಸಾಮಾಜಿಕ ಶೋಷಣೆಯ ನೋವಿದೆ. ಅದು ಇವತ್ತಿನ ಆಧುನಿಕ ಕಾಲದಲ್ಲೂ ಅಸ್ಪೃಶ್ಯತಾ ಆಚರಣೆಗಳ ಮೂಲಕ ಇನ್ನೂ ಮುಂದುವರೆಯುತ್ತಿರುವುದು ದುರದೃಷ್ಟಕರ. ಇದಕ್ಕೆ ಕಾಲವೇ ಉತ್ತರ ನೀಡಲಿದೆ.

ಶಂಕರ್ ಸೂರ್ನಳ್ಳಿ

ಲೇಖಕರು

ಇದನ್ನೂ ಓದಿ-ಕೋಲಾರ ನೆಲಕ್ಕೆ ರಾಮಯ್ಯ ವಿದಾಯ; ದಲಿತ ಸಾಂಸ್ಕೃತಿಕ ಲೋಕಕ್ಕೆ ಆದ ಗಾಯ

More articles

Latest article