Wednesday, May 22, 2024

ಕೋಲಾರ ನೆಲಕ್ಕೆ ರಾಮಯ್ಯ ವಿದಾಯ; ದಲಿತ ಸಾಂಸ್ಕೃತಿಕ ಲೋಕಕ್ಕೆ ಆದ ಗಾಯ

Most read

ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಂತೆ ಬದುಕಿದ ಇನ್ನೊಂದು  ಜೀವ ಕೋಟಗಾನಹಳ್ಳಿ ರಾಮಯ್ಯ. ಕವಿಯಾಗಿ, ಬರಹಗಾರರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಹಾಡುಗಾರರಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನು  ಕೊಟ್ಟಿದ್ದಾರೆ. ಹಲವಾರು ನಾಟಕಗಳನ್ನು ರಚಿಸಿ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಬರೆದು ಮಕ್ಕಳ ರಂಗಭೂಮಿಯ ಬೆಳವಣಿಗೆಗೂ ಕಾರಣೀಕರ್ತರಾಗಿದ್ದಾರೆ. ಐದು ದಶಕಗಳಿಂದ ದಲಿತ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದವರು. ಜನಪರ ಚಳುವಳಿಗಳ ಜೊತೆಗೆ ಬೆಳೆದವರು. ಅತ್ಯಂತ ಸೂಕ್ಷ್ಮಮತಿಯಾದ ಭಾವಜೀವಿ. ತನಗಾಗಿ ಏನನ್ನೂ ಮಾಡಿಕೊಳ್ಳದೇ ಸಮಾಜದ ಒಳಿತಿಗಾಗಿ, ಸಾಂಸ್ಕೃತಿಕ ಸಂಘಟನೆಗಾಗಿ ತಮ್ಮ ಬದುಕಿನ ಬಹುಭಾಗವನ್ನು ಕಳೆದವರು.

ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ “ದಿನಕ್ಕೊಂದು ರೂಪಾಯಿ, ಮನೆಗೊಂದು ಹುಂಡಿ” ಯೋಜನೆ ರೂಪಿಸಿ ಒಂದೊಂದು ರೂಪಾಯಿ ಸಂಗ್ರಹಿಸಿ ಕಲ್ಲು ಬಂಡೆಗಳಿದ್ದ  10 ಗುಂಟೆ ಜಾಗ ಖರೀದಿಸಿ ಅಲ್ಲಿ ‘ಆದಿಮ’ ಎನ್ನುವ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಿದ್ದರ ಹಿಂದೆ ರಾಮಯ್ಯನವರ ಪರಿಕಲ್ಪನೆ, ಶ್ರಮ ಮತ್ತು ಮುಂದಾಲೋಚನೆ ಇತ್ತು.

ಕೋಲಾರದ ಹತ್ತಿರದ ಶಿವಗಂಗೆ ಗ್ರಾಮದ ಪಕ್ಕದಲ್ಲಿರುವ ತೇರಹಳ್ಳಿ ಬೆಟ್ಟದಲ್ಲಿ 2005 ರಿಂದ ‘ಆದಿಮ’ ವನ್ನು ಆರಂಭಿಸಿದ ರಾಮಯ್ಯನವರು ಅಲ್ಲಿ ಹಲವಾರು ಕಲೆ ಸಾಹಿತ್ಯದ ಕಾರ್ಯಕ್ರಮಗಳನ್ನು  ಆಯೋಜಿಸಿದ್ದರು. ಆದಿಮ ಸ್ಕೂಲ್ ಆಫ್ ಥಾಟ್ ಪರಿಕಲ್ಪನೆಯೊಂದಿಗೆ ರೈತ ಚಳವಳಿ, ಮಹಿಳಾ ಚಳವಳಿ, ಕಾರ್ಮಿಕ ಚಳವಳಿ, ದಲಿತ ಚಳವಳಿ ಸೇರಿದಂತೆ ಎಲ್ಲ ಜನಪರ ಹೋರಾಟಗಳ ಅಧ್ಯಯನ ಶಿಬಿರಗಳಿಗೆ ಆದಿಮ ಅವಕಾಶ ಕಲ್ಪಿಸಿತು. ರಂಗಭೂಮಿಯ ಚಟುವಟಿಕೆಗಳಿಗೆ ‘ಆದಿಮ’ ಭೂಮಿಕೆಯಾಯಿತು. ಪ್ರತಿ ವರ್ಷ 200 ಕ್ಕೂ ಹೆಚ್ಚು ಮಕ್ಕಳಿಗಾಗಿ ‘ಚುಕ್ಕಿ ಮೇಳ’ ಎನ್ನುವ ಸಾಂಸ್ಕೃತಿಕ ಶಿಬಿರವನ್ನು ಉಚಿತವಾಗಿ ಪ್ರತಿವರ್ಷ ಆದಿಮದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.  ಪ್ರತಿ ತಿಂಗಳೂ ಹುಣ್ಣಿಮೆಯಂದು ‘ಹುಣ್ಣಿಮೆ ಹಾಡು’ ಹೆಸರಿನಲ್ಲಿ ಯಾವುದಾದರೊಂದು ನಾಟಕ ತಂಡವನ್ನು ಕರೆಸಿ ನಾಟಕ ಪ್ರದರ್ಶನ ಮಾಡಿಸಲಾಗುತ್ತಿದೆ. ಸಾಂಸ್ಕೃತಿಕ ಮನಸ್ಸಿನ ಯುವಕರ ಪಡೆಯನ್ನೇ ಕಟ್ಟಿದ ರಾಮಯ್ಯನವರು ಪ್ರೇಕ್ಷಕರ ಸಮೂಹವನ್ನೇ ಹುಟ್ಟು ಹಾಕಿದ್ದರು.

ಹತ್ತು ವರ್ಷಗಳ ಕಾಲ ಆದಿಮ ಟ್ರಸ್ಟಿಗೆ ಅಧ್ಯಕ್ಷರಾಗಿದ್ದ ರಾಮಯ್ಯನವರು ತದನಂತರ ಆರಂಭವಾದ ಹಲವಾರು ಭಿನ್ನಾಭಿಪ್ರಾಯಗಳಿಂದ ಆದಿಮದಿಂದ ಬೇರೆಯಾದರು.

ಆದರೆ.. ಈಗ ರಾಮಯ್ಯನವರು ಆದಿಮದಿಂದ ದೂರಾಗಿ ಏಳೆಂಟು ವರ್ಷಗಳೇ ಆಗಿವೆ. ಅದೇ ಆದಿಮದ ಹತ್ತಿರದ ಶಿವಗಂಗೆ ಗ್ರಾಮದಲ್ಲಿ  ‘ಬುಡ್ಡಿದೀಪ’ ಎನ್ನುವ ಹೆಸರಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ಓದು ಬರಹಗಳ ಜೊತೆ ಸರಳವಾಗಿ ಬದುಕುತ್ತಿದ್ದಾರೆ.

ಆದರೆ ಅದೇನಾಯ್ತೋ ಏನೋ ಈಗ ದಲಿತ ಚಳುವಳಿಯ ಸಹವಾಸವೇ ಸಾಕೆಂದು ನಿರ್ಧರಿಸಿದ್ದಾರೆ. ಹುಟ್ಟಿ ಬೆಳೆದು ಹೋರಾಡಿದ ಕೋಲಾರವನ್ನೇ ತ್ಯಜಿಸಿ ಹೋಗುತ್ತೇನೆಂದು ಘೋಷಿಸಿದ್ದಾರೆ. ಇನ್ನು ಮೇಲೆ ಈ ಪ್ರಾಂತ್ಯದಲ್ಲೇ ಇರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಮಯ್ಯರವರಂತಹ ಹೋರಾಟಗಾರನಿಗೆ ಈ ರೀತಿಯ ನೋವು ಆಗಿದ್ದಾದರೂ ಯಾಕೆ? ಭ್ರಮನಿರಸನಕ್ಕೆ ಕಾರಣಗಳಾದರೂ ಏನು? ‘ಆದಿಮ’ದಂತೆ ಕೋಲಾರಕ್ಕೆ ವಿದಾಯ ಹೇಳುವ ನಿರ್ಧಾರ ಬೇಕಿತ್ತೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ.

ಇತ್ತೀಚೆಗೆ ‘ಸಂವಿಧಾನದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ’ ಸಮಾವೇಶದ ವೇದಿಕೆಯಲ್ಲಿ ಕೋಟಗಾನಹಳ್ಳಿ ರಾಮಯ್ಯನವರು ಮಾಡಿದ ವಿದಾಯ ಭಾಷಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರ ಆಕ್ರೋಶಕ್ಕೆ ಬಹು ಮುಖ್ಯ ಕಾರಣವೇ ಈ ರಾಜಕಾರಣಿಗಳ ಆಟಾಟೋಪ. ರಾಮಯ್ಯನವರು ಕಟ್ಟಿ ಬೆಳೆಸಿದ ‘ಆದಿಮ’ ದ ಮೇಲೆ ಈಗ ರಾಜಕೀಯ ನಾಯಕರ ಕಣ್ಣು ಬಿದ್ದಿದೆ. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಕೊತ್ತೂರು ಮಂಜು ಆದಿಮಕ್ಕೆ ಬಂದು ವ್ಯತಿರಿಕ್ತವಾಗಿ ಮಾತಾಡಿದ್ದರು. ಬಿಜೆಪಿ ಸಂಸದ ಮುನಿಸ್ವಾಮಿಯವರು ಆದಿಮ ಇರುವ ಬೆಟ್ಟವನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ಅಲ್ಲಿರುವ ಬಂಡೆಗಳ ಮೇಲೆ ಯೋಗದ ಕುರಿತ ಘೋಷಣೆಗಳನ್ನು ಬರೆಸಿ ಇಡೀ ಸಾಂಸ್ಕೃತಿಕ ವಾತಾವರಣವನ್ನೇ ಕೇಸರಿಮಯ ಮಾಡಲು ಪ್ರಯತ್ನಿಸಿದ್ದಾರೆ. ಈ ರಾಜಕೀಯದವರ ಹಸ್ತಕ್ಷೇಪದಿಂದಾಗಿ ರಾಮಯ್ಯ ಸಿಡಿದೆದ್ದರು. ‘ಆದಿಮ’ ದಿಂದ ದೂರಾದರೂ ಅದರ ಜೊತೆ ಮಾನಸಿಕ ಸಂಬಂಧವನ್ನು ಬಿಟ್ಟುಕೊಡದ ರಾಮಯ್ಯನವರಿಗೆ ಇಡೀ ಬೆಟ್ಟದ ಸುಂದರ ಪರಿಸರದ ಜೊತೆ ಅವಿನಾಭಾವ ಸಂಬಂಧವಿತ್ತು. ಅದಕ್ಕೆ ಬೆಟ್ಟದ ಪಕ್ಕದ ಗ್ರಾಮದಲ್ಲೇ ಪುಟ್ಟ ಗುಡಿಸಲು ಕಟ್ಟಿಕೊಂಡಿದ್ದರು.

ಇದರ ಜೊತೆಗೆ 50 ವರ್ಷಗಳಿಂದ ದಲಿತ ಚಳುವಳಿಗಳಲ್ಲಿ ತೊಡಗಿಕೊಂಡಿದ್ದ ರಾಮಯ್ಯನವರಿಗೆ ಆ ಸಂಘಟನೆಯಲ್ಲಿನ ವ್ಯತಿರಿಕ್ತ ಬೆಳವಣಿಗೆಗಳು ಭ್ರಮನಿರಸನವನ್ನುಂಟು ಮಾಡಿದ್ದವು. ಇತ್ತೀಚೆಗೆ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ರಾಮಯ್ಯನವರು ಹೋಗಿದ್ದಾಗ ರಾಜಕಾರಣಿಯೊಬ್ಬರ ಸ್ವಾಗತಕ್ಕೆ ತಮಟೆ ಬಾರಿಸಿ, ಪಟಾಕಿ ಸಿಡಿಸಿ ಆಯೋಜಕರು ಸಂಭ್ರಮಿಸಿದ್ದರು. ಇದೂ ಸಹ ರಾಮಯ್ಯನವರ ಅಸಹನೆಗೆ ಕಾರಣವಾಗಿತ್ತು. ರಾಜಕಾರಣಿಗಳನ್ನು ಓಲೈಸಲು ಈ ರೀತಿಯ ವಿದ್ಯಮಾನಗಳು ದಲಿತ ಚಳುವಳಿಯಲ್ಲಿ ಹಿಂದೆಂದೂ ಇರಲಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದೇ ತಮ್ಮ ವಿದಾಯ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವಿದಾಯದ ಮಾತುಗಳು

ಹೀಗೆ ಹೇಳುವ ಮೂಲಕ ರಾಮಯ್ಯನವರು ಅಂಬೇಡ್ಕರವರ ಆಶಯವನ್ನು ಮರೆತು ಅಂಬೇಡ್ಕರ್ ಆರಾಧನೆಯಲ್ಲಿ ಸಂಭ್ರಮಿಸುವ ದಲಿತ ಚಳುವಳಿಯ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು.

” ಸರ್ಕಾರವೇ ಪ್ರಾಯೋಜಿಸಿರುವ ಯಾತ್ರಾ ಅಂಬೇಡ್ಕರ್. ಫ್ಲೆಕ್ಸ್ ಅಂಬೇಡ್ಕರ್ ಆಯಿತು. ಪುತ್ಥಳಿ ಅಂಬೇಡ್ಕರ್ ಆಯಿತು. ದೀಕ್ಷಾ ಭೂಮಿ ಚಲೋ, ಚೈತ್ಯ ಭೂಮಿ ಚಲೋ. ಕೋರೆಗಾಂವ್ ಚಲೋ. ಹುಟ್ಟಿದೂರು ಮಾಹೆ ಚಲೋ… ಅಲ್ಲಿಗೆ ನಿಮ್ಮನ್ನು ಯಾತ್ರೆಗಳಲ್ಲೇ ಮುಳುಗಿಸ್ತಾ ಇದ್ದಾರೆ. ಫ್ಲೈಟ್‌ನಲ್ಲಿ ಹೋಗುವಷ್ಟು ದುಡ್ಡಿರುವವರು, ನಮ್ಮ ಕೆಲವು ನಾಯಕರಂತೆ, ಅವರು ಫಾರಿನ್ನಿಗೆ ಹೋಗ್ತಾರೆ, ಕೊಲಂಬಿಯಾ ಯೂನಿವರ್ಸಿಟಿಗೆ ಹೋಗ್ತಾರೆ. ಈ ಎಲ್ಲ ಯಾತ್ರಾ ಸ್ಥಳಗಳಿಗೆ ಹೋಗುವುದೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಮಾಡಿ, ಅಂಬೇಡ್ಕರ್ ಏನು ಹೇಳಿದ್ದಾರೆ ಎನ್ನುವುದನ್ನೇ ಮುಚ್ಚಿಹಾಕಿದ್ದಾರೆ. ಅದಕ್ಕೆ ಕೆಲವು ದಿನಾಂಕಗಳನ್ನು ಇಟ್ಟಿದ್ದಾರೆ. ಒಂದು ಡಿಸೆಂಬರ್‌ ಆರು. ಇನ್ನೊಂದು ಕೋರೆಗಾಂವ್ ಜನವರಿ ಒಂದು. ಇನ್ನೊಂದು ದೀಕ್ಷಾ ಭೂಮಿ ಅಕ್ಟೋಬರ್ 14. ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ, ಅದು ಏಪ್ರಿಲ್ 14. ಆದರೆ, ನಮಗೆ ಗೊತ್ತಿಲ್ಲ. ಈ ಎಲ್ಲ ದಿನಾಂಕಗಳನ್ನು ಕಿತ್ತುಹಾಕೋದಕ್ಕೆ ಈಗಾಗಲೇ ಆರ್‌ಎಸ್‌ಎಸ್‌ ಆರಂಭ ಮಾಡಿದೆ. ಅದರೊಳಗೆ ಒಂದು ಯಾವುದಪ್ಪಾ ಅಂದ್ರೆ, ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಒಡೆದು ಹಾಕಿದ್ದು… ಅಲ್ಲಿಗೆ ಬಾಬಾ ಸಾಹೇಬರ ಪರಿನಿರ್ವಾಣವನ್ನು, ಕ್ರಾಂತಿಕಾರಕವಾದಂಥ ದಾರಿಯನ್ನು ಅಲ್ಲಿ ಮುಚ್ಚಿಹಾಕಲಾಯಿತು. ಇನ್ನೊಂದು ಈಗ ಕೋರೆಗಾಂವ್ ಗುರುತು. ಜನವರಿ ಒಂದು. ಆ ದಿನವನ್ನು ವಿಶ್ವಕರ್ಮ ಜಕಣಾಚಾರಿ ದಿನಾಚರಣೆಯಾಗಿ ಭಾರತದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಏಪ್ರಿಲ್ 14 ಅನ್ನು ಅಳಿಸಿಹಾಕಲು ಹುನ್ನಾರ ನಡೀತಿದೆ, ಅದೂ ಕೂಡ ಆಗುತ್ತೆ” ಎನ್ನುವ ರಾಮಯ್ಯನವರ ಮಾತುಗಳಲ್ಲಿ ಕಟುವಾದ ಸತ್ಯವೇ ಅಡಗಿತ್ತು. ಈಗಿನ ದಲಿತ ಸಂಘಟನೆಗಳ ನಾಯಕತ್ವವನ್ನು ವಿಮರ್ಶಿಸುತ್ತಲೇ ಅಂಬೇಡ್ಕರ್ ಕುರಿತ ಮಹತ್ವದ ದಿನಾಂಕಗಳನ್ನೇ ಮರೆಸುವ ಶಡ್ಯಂತ್ರ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ಅತ್ಯಂತ ನೋವಿನಿಂದಲೇ ಹೇಳಿಕೊಂಡರು.

“ಕರ್ನಾಟಕದಲ್ಲಿ ಅಂಬೇಡ್ಕರ್ ಬಗ್ಗೆ ಅಧ್ಯಯನಗಳು ಶುರುವಾಗಿದ್ದು 1980ರ ಸುಮಾರಿಗೆ. 1978ರಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನಾವು ಬೃಹತ್ತಾದ ರೀತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆ ಆರಂಭ ಮಾಡಿದ್ವಿ. ಯಾಕೆ ಆರಂಭ ಮಾಡಿದ್ವಿ ಅಂದರೆ, ಆಗ ದಲಿತ ಚಳವಳಿ ಎಂಥ ದುಃಸ್ಥಿತಿಯಲ್ಲಿತ್ತು ಅಂದರೆ, ಅನೇಕ ಕಡೆ ನಾವು ದೊಡ್ಡ ದೊಡ್ಡ ಫ್ಯೂಡಲ್ ಲಾರ್ಡ್‌ಗಳನ್ನು ಎದುರು ಹಾಕಿಕೊಂಡಿದ್ವಿ. ರಾಜಕೀಯ ನಾಯಕರನ್ನು ಎದುರು ಹಾಕಿಕೊಂಡಿದ್ವಿ. ಹಳ್ಳಿಗಳಲ್ಲಿ ದೌರ್ಜನ್ಯಗಳು ಶುರುವಾಗಿದ್ದವು. ನಮ್ಮ ಕಾರ್ಯಕರ್ತರು ಕೊಲೆಯಾಗ್ತಿದ್ದರು. ಕಾರ್ಯಕರ್ತರನ್ನು ಸಂರಕ್ಷಿಸಬೇಕಾದರೆ ನಾವು ಬೃಹತ್ ಶಕ್ತಿಯಾಗಬೇಕು ಅಂತ ಆ ಕಾರ್ಯಕ್ರಮವನ್ನು ನಾನೇ ವಿನ್ಯಾಸಗೊಳಿಸಿದ್ದು. ನಾನೇ ಅಂತ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಯಾವ ಕಾಲಕ್ಕೆ ಯಾವುದನ್ನು ಮಾಡಬೇಕು ಅದನ್ನು ಮಾಡ್ತಾ ಬಂದಿದ್ದ ಒಬ್ಬ ಚಾಕರ ನಾನಾಗಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ಆನಂತರ ನಡೆದಿದ್ದು ಜನಕಲಾಮೇಳ. ಈ ಎರಡನ್ನು ಸರಿಯಾಗಿ ನಡೆಸೋದಕ್ಕೆ ನಮಗೆ ಸಾಧ್ಯವಾಗಿದ್ದಿದ್ರೆ ಇವತ್ತು ಈ ರೀತಿಯ ಬಿಕ್ಕಟ್ಟನ್ನು ನಾವು ಅನುಭವಿಸುತ್ತಾ ಇರಲಿಲ್ಲ. ಅದು ಬೇರೆ ವಿಚಾರ” ಎಂದು ರಾಮಯ್ಯನವರು ಅಂಬೇಡ್ಕರ್ ಜಯಂತಿ ಆಚರಣೆಯ ಆರಂಭದ ಹಿಂದಿರುವ ಉದ್ದೇಶವನ್ನು ವಿವರಿಸಿದರು.

“ನಾನು ಈ ನೆಲದಲ್ಲಿ ಇನ್ನೊಂದು ಬಾರಿ ಅಂಬೇಡ್ಕರ್ ಬಗ್ಗೆ ಆಗಲಿ, ನಿಮ್ಮ ಈ ದಲಿತ ಚಳವಳಿ ಬಗ್ಗೆ ಆಗಲಿ ಒಂದು ನುಡಿ ಆಡಿದರೆ ನನ್ನ ನಾಲಿಗೆಯನ್ನು ನೀವು ಕತ್ತರಿಸಬಹುದು. ಈ ನಾಲ್ಕು ದಾರಿಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಅಂಬೇಡ್ಕರ್‌ ಓದಿಗೆ ಹೊಸ ರೀತಿಗಳನ್ನು ನೀವು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬಹಳ ಅಪಾಯಕಾರಿ ಪರಿಸ್ಥಿತಿ ಎದುರಿಸಬೇಕಾಗಿ ಬರುತ್ತದೆ. ನನ್ನತ್ರ ಅವರ 22 ಪುಸ್ತಕ ಇದೆ, ಗ್ರಂಥಾಲಯ ಇದೆ, ಅಷ್ಟಿದೆ ಇಷ್ಟಿದೆ ಅನ್ನೋದೆಲ್ಲ ಬೇಕಿಲ್ಲ. ನೀವು ಒಂದು ಪದ ತಗೊಂಡು ಅಂಬೇಡ್ಕರ್‌ ಅವರನ್ನು ಹುಡುಕುತ್ತಾ ಹೋಗಬಹುದು. ನಾಲ್ಕೇ ಪದದ ಮೂಲಕ ಇವತ್ತಿನ ಸ್ಥಿತಿ ಹೇಳತಾ ಇದೀವಿ. ಫ್ಯಾಸಿಸಂ ಇವತ್ತು ಸಂಪೂರ್ಣ ದೇಶವನ್ನು ಕೈವಶಪಡಿಸಿಕೊಂಡಿದೆ. ಮೊದಲು ಇಟಲಿ, ಜರ್ಮನಿಲಿ ಇತ್ತು. ಇದೀಗ ನಮ್ಮ ದೇಶದಲ್ಲಿ ನೆಲೆಗೊಂಡಿದೆ. ನೆಲೆಗೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಮಾಡಿಕೊಂಡಿದ್ದಾರೆ” ಎಂಬುದಾಗಿ ಹೇಳುತ್ತಾ ಪ್ಯಾಸಿಸ್ಟ್ ಪ್ರಭುತ್ವದ ಅಪಾಯವನ್ನು ಮನದಟ್ಟುಮಾಡಿಸಿದರು. ಈಗಿನ ದಲಿತ ಚಳುವಳಿ ಹಿಡಿದ ಅವಕಾಶವಾದಿತನದ ಬಗ್ಗೆ ಭ್ರಮನಿರಸನಗೊಂಡಿರುವ ರಾಮಯ್ಯನವರು ದಲಿತ ಚಳುವಳಿ ಬಗ್ಗೆ ಇನ್ನು ಮೇಲೆ ಮಾತಾಡುವುದೇ ಇಲ್ಲವೆಂಬ ನಿರ್ಧಾರವನ್ನು ಪ್ರಕಟಿಸಿದರು.

2025ಕ್ಕೆ ಆರ್‌ಎಸ್‌ಎಸ್ ಗೆ 100 ವರ್ಷವಾಗುತ್ತದೆ. ದೇಶವನ್ನು ಅವರು ಹಿಂದೂ ರಾಷ್ಟ್ರ ಎಂದು ಡಿಕ್ಲೇರ್ ಮಾಡುತ್ತಾರೆ. ರಾಷ್ಟ್ರಪಿತ ಆಗಿ ಸಾರ್ವಕರ್ ಅವರನ್ನು ನೇಮಕ ಮಾಡುತ್ತಾರೆ. ಏಕೆಂದರೆ, ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದಾಯಿತು. ಅವರ ವಿಚಾರಗಳನ್ನು ಬಿಜೆಪಿ ತನ್ನ ಪ್ರಣಾಳಿಕೆ ಮಾಡಿಕೊಂಡಿತು. ಗಾಂಧಿಯನ್ನು ಕೊಂದು ಗಾಂಧಿ ಪ್ರಣೀತ ಸಮಾಜವಾದ ಅಂತ ಹಾಕ್ಕೊಂಡಿದ್ದಾರೆ. ಇದು ಫ್ಯಾಸಿಸಂ. ಇದನ್ನು ಅಂಬೇಡ್ಕರ್ ಅವರು ಮೈಕ್ರೋ ಫ್ಯಾಸಿಸಮ್‌ ಎಂದು ಹೇಳಿದ್ದಾರೆ. ನಾವೆಲ್ಲ ಮೈಕ್ರೋ ಫ್ಯಾಸಿಸ್ಟ್‌ಗಳು. ಅಂದರೆ ನಮ್ಮ ಕಿರುನಾಳಗಳಿಗೂ ಭೇದ ಅನ್ನೋದು, ಇನ್ನೊಬ್ಬನಿಗಿಂತ ನಾನು ಮೇಲೆ ಅನ್ನೋದು, ತರತಮ ಅನ್ನೋದು ಬಂದುಬಿಟ್ಟಿದೆ. ಇದು ಚಾತುರ್ವರ್ಣದ ಉದ್ದೇಶವಾಗಿತ್ತು. ಅವರಿಗೆ ಅದು ಬೇಕಾಗಿತ್ತು. ಚಾತುರ್ವರ್ಣದ ಭೇದ ಅಸ್ಪೃಶ್ಯರಿಗೆ, ಹಿಂದುಳಿದವರ ರಕ್ತನಾಳಗಳಿಗೆ ಕಳುಹಿಸಿಬಿಟ್ಟರೆ, ನಾವು ಗೆದ್ದೆವು ಅನ್ನೋದು ಅವರ ಭಾವನೆಯಾಗಿತ್ತು. ಈಗ ಅವರು ದಿಗ್ವಿಜಯಗೊಂಡಿದ್ದಾರೆ. ನಾವು ಕುಬ್ಜಗೊಂಡಿದ್ದೇವೆ. ಇದು ನಾವು ಅರ್ಥ ಮಾಡಿಕೊಳ್ಳಬೇಕಿರುವುದು.” ಎನ್ನುವ ಮೂಲಕ ರಾಮಯ್ಯನವರು  ಮುಂದೊದಗಬಹುದಾದ ಅನಾಹುತದ ಕುರಿತು ಆತಂಕ ವ್ಯಕ್ತಪಡಿಸಿದರು.

“ಈಗ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ, ಇಂಥ ಹುಸಿ ಹೇಳಿಕೆ ಬದಲಾಗಿ ಅದರ ನಿಜವಾದ ಅರ್ಥಗಳಲ್ಲಿ ಪ್ರಜಾಪ್ರಭುತ್ವಕ್ಕೆ ಬಂದಿರುವ ಕುತ್ತನ್ನು ಎದುರಿಸಲು ನಾವು ಸನ್ನದ್ಧರಾಗಬೇಕಿದೆ. ಯಾವ ರೀತಿ ಸನ್ನದ್ದರಾಗಬೇಕು, ತಮಟೆ ಹೊಡೆಯುವುದರಿಂದ ಆಗುತ್ತಾ? ಅದು ಆಗೋದಿಲ್ಲ. ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ ಅದ್ಭುತ ಬರಹಗಳ ಮೂಲಕ ನಮ್ಮ ಮುಂದೆ ಇಟ್ಟಿದ್ದಾರೆ. ‘ದ ಚಾಲೆಂಜಸ್ ಬಿಫೋರ್ ದ ಪಾರ್ಲಿಮೆಂಟೆಡ್ ಡೆಮಾಕ್ರಸಿ ಇನ್ ಇಂಡಿಯಾ ಅಂಡ್ ದೇರ್ ರೆಮಿಡೀಸ್’… ಅದರಲ್ಲವರು ಎಷ್ಟು ಸ್ತರಗಳಲ್ಲಿ ಹೇಳ್ತಾರೆ ಅಂದರೆ, ಈ ಕಾಲವನ್ನು 1956ರಲ್ಲೇ ಅಂಬೇಡ್ಕರ್‌ ಅವರು ಪುಸ್ತಕಗಳಲ್ಲಿ ಬರೆದಿಟ್ಟಿದ್ದಾರೆ, ಇವತ್ತು ನಾವು ಅನುಭವಿಸುತ್ತಿರುವ ಈ ಸ್ಥಿತಿ ಬರುತ್ತೆ ಎಂದು. ಅವರು ಸಂವಿಧಾನದ ಅರ್ಪಣಾ ದಿನ ಮಾಡಿದ ಭಾಷಣದಲ್ಲಿ ಏನು ಹೇಳಿದ್ದಾರೆ ಅಂದರೆ, ‘ಭಾರತ ದೇಶ ಇವತ್ತಿನಿಂದ ಬಹಳ ವಿರೋಧಾಭಾಸದ ಕಡೆಗೆ ನಡೆಯುತ್ತದೆ. ನಾವು ರಾಜಕೀಯ ಮಾಡೋಕೆ ಕೊಟ್ಟಿದ್ದೀವಿ ಹಾಗೂ ಮತದಾನದ ಹಕ್ಕನ್ನು ಕೊಟ್ಟಿದ್ದೀವಿ. ಆದರೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಆಗಬೇಕಿರುವ ಕೆಲಸಗಳು ಆಗಲಿಲ್ಲವಾದರೆ, ಪ್ರಜಾಪ್ರಭುತ್ವ ಫೇಲ್ ಆಗುತ್ತೆ. ನಮ್ಮ ಪ್ರಜಾಪ್ರಭುತ್ವಕ್ಕೆ ಕಡಿಮೆ ವಯಸ್ಸೆ ಇರಬಹುದು ಆದರೆ, ಅದು ಇಷ್ಟು ಬೇಗ ಬಂಡವಾಳಶಾಹಿಗಳಿಂದ ಹೈಜಾಕ್ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಒಂದು ಕೆಟ್ಟ ಸಂವಿಧಾನ ಆದರೂ ಅದನ್ನು ಜಾರಿಗೊಳಿಸುವವರು ಉತ್ತಮರಾದರೆ, ಅದನ್ನು ಚೆನ್ನಾದ ರೀತಿಯಲ್ಲಿ ಜಾರಿಗೊಳಿಸಬಹುದು. ‘ಅದೆಷ್ಟೇ ಚೆನ್ನಾಗಿರೋ ಸಂವಿಧಾನ ಆದರೂ ಕೆಟ್ಟವರು ಬಂದು ಅದನ್ನು ಕೆಡಿಸಬಹುದು’ ಎಂದು ಅಂಬೇಡ್ಕರ್ ಹೇಳಿದ್ದರು. ‘ಇದು ನಾನು ಪೂರ್ಣ ಸಮಾಧಾನ ಪಟ್ಟುಕೊಳ್ಳುವಂತೆ ಬರೆದಿರುವ ಸಂವಿಧಾನ ಅಲ್ಲ. ಅದನ್ನೇನೂ ತಲೆ ಮೇಲೆ ಹೊತ್ತು ಕುಣಿಯಬೇಕಿಲ್ಲ, ಪೂಜಿಸಬೇಕಿಲ್ಲ. ಸಂವಿಧಾನದ ಒಳಗೆ ಇರಬೇಕಾದದ್ದು ಇಲ್ಲ. ಇರೋದರಲ್ಲೇ ಅದು ಜಾರಿಗೆ ಬರಲಿಲ್ಲ ಅಂದ್ರೆ ನಾನೇ ಮೊದಲಿಗ ಇದನ್ನು ಬೆಂಕಿಗೆ ಹಾಕೋದಕ್ಕೆ’ ಎಂದು ಅಂಬೇಡ್ಕರ್‌ ಅವರು ಹೇಳಿದ್ದರು.” ಎನ್ನುವ ಮಾತುಗಳನ್ನಾಡಿದ ರಾಮಯ್ಯನವರು ನಮ್ಮ ಸಂವಿಧಾನದ ಸಮಸ್ಯೆ ಹಾಗೂ ಸವಾಲಿನ ಕುರಿತು ಕಟ್ಟೆಚ್ಚರವನ್ನು ವ್ಯಕ್ತಪಡಿಸಿದರು.

ಕೋಲಾರ ನೆಲ ಒಂದು ಕಾಲಕ್ಕೆ ಇಡೀ ಭಾರತ ದೇಶಕ್ಕೆ ಅಥವಾ ಇಡೀ ಪ್ರಂಪಚಕ್ಕೆ ಒಂದು ಚಳವಳಿ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು, ಇದೀಗ ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾಗಿದೆ. ಒಂದು ಇಡೀ ಪೊಲಿಟಿಕಲ್ ಫಿಲಾಸಫಿಯನ್ನು, ಲಿಬರೇಷನ್ ಫಿಲಾಸಫಿಯನ್ನು ನಾನು ಬರೆದಿಟ್ಟಿದ್ದೇನೆ. ಯಾರಿಗಾದರೂ ಆಸಕ್ತಿ ಇದ್ದರೆ, ನಿಜವಾಗಿಯೂ ನೀವು ವಿಮೋಚನೆಗೊಳ್ಳಬೇಕು ಅಂದ್ರೆ, ನಮ್ಮ ನೆಲವನ್ನು, ನಮ್ಮ ಮುಂದಿನ ಪೀಳಿಗೆಗಳನ್ನು ವಿಮೋಚನೆ ಗೊಳಿಸಬೇಕು ಅಂದ್ರೆ, ಅಂಥವರ ಜತೆ ನಾನು ಮಾತಾಡ್ತೇನೆ. ಅದರ ಬ್ಲೂಪ್ರಿಂಟ್ ನನ್ನ ಬಳಿ ಇದೆ. ನಾನು ಹತ್ತು ವರ್ಷ ಟೈಮ್ ತಗೊಂಡಿದ್ದೇನೆ. ಇನ್ನು ನಾನು ಈ ನೆಲದಲ್ಲಿ ಇರಲ್ಲ. ನಾನು ಸೆಲ್ಯೂಟ್ ಹೇಳ್ತಾ ಇದ್ದೀನಿ, ಬೇರೆ ನೆಲವನ್ನು ನಾನು ನನ್ನ ಪ್ರಯೋಗ ಭೂಮಿ ಮಾಡಿಕೊಂಡು ನನ್ನ ಚಟುವಟಿಕೆ ಆರಂಭಿಸ್ತೀನಿ.” ಎಂದು ಹೇಳುತ್ತಲೇ ಅತಿಯಾದ ನೋವಿನಿಂದ ಬಾಳಿ ಬದುಕಿದ ಕೋಲಾರದ ನೆಲಕ್ಕೆ ಕೋಟಗಾನಹಳ್ಳಿ ರಾಮಯ್ಯನವರು ಅಂತಿಮ ವಿದಾಯ ಘೋಷಿಸಿದರು.

ಇದನ್ನು ಅವರು ಪಾಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ವಿದಾಯ ಘೋಷಣೆಯ ನೆಪದಲ್ಲಿ ಹೇಳಿದ ಯಾವ ಮಾತುಗಳಲ್ಲೂ ಸುಳ್ಳಿಲ್ಲ. ದಲಿತ ಸಂಘಟನೆಗಳು ವಿಘಟನೆಗೊಂಡು ಸಾವಿರಾರು ಕವಲುಗಳಾಗಿವೆ. ಎಲ್ಲಾ ಸಂಘಟನೆಗಳನ್ನೂ ಒಟ್ಟುಗೂಡಿಸುವ ಪ್ರಯತ್ನಗಳು ವಿಫಲವಾಗಿವೆ. ದಲಿತ ಸಂಘಟನೆಯ ಕೆಲವು ನಾಯಕರು ಒಂದೊಂದು ಪಕ್ಷದ ಪರವಾಗಿದ್ದು ತಮ್ಮ ತಮ್ಮ ಹಿತಾಸಕ್ತಿಯನ್ನು ಕಾಪಾಡಿ ಕೊಂಡಿದ್ದಾರೆ. ಎಲ್ಲಾ ದಲಿತ ಸಂಘಟನೆಗಳ ಮಹಾನಾಯಕ ಅಂಬೇಡ್ಕರ್ ಒಬ್ಬರೇ. ಆದರೆ ಬಾಬಾಸಾಹೇಬರ ಆಶಯಗಳನ್ನು ಬಿಟ್ಟು ಅವರ ಆರಾಧನೆಗಳನ್ನೇ ಮಾಡುತ್ತಿರುವ, ತಮ್ಮ ಸ್ವಾರ್ಥಕ್ಕೆ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿರುವ ದಲಿತ ಚಳುವಳಿಯ ನೇತಾರರು ಹಾಗೂ ಅನುಯಾಯಿಗಳ ಕುರಿತು ರಾಮಯ್ಯನವರು ನಿಷ್ಠುರ ಸತ್ಯವನ್ನೇ ಹೇಳಿದ್ದಾರೆ. ರಾಮಯ್ಯನವರ ಪ್ರತಿ ಮಾತುಗಳೂ ದಲಿತ ಸಂಘಟನೆಯಲ್ಲಿರುವವರಿಗೆ ಎಚ್ಚರದ ನುಡಿಗಳಾಗಿವೆ. ಆರೆಸ್ಸೆಸ್ ಎಂಬ ದೈತ್ಯ ಶಕ್ತಿಯನ್ನು ಎಲ್ಲರೂ ಒಂದಾಗಿ ವಿರೋಧಿಸದೇ ಇದ್ದಲ್ಲಿ ವರ್ಣಾಶ್ರಮ ಆಧಾರಿತ ಫ್ಯಾಸಿಸ್ಟ್ ಪ್ರಭುತ್ವ ಖಂಡಿತ ಎನ್ನುವ ರಾಮಯ್ಯನವರ ಮಾತುಗಳು ಸಂವಿಧಾನ ರಕ್ಷಣೆ ಬಯಸುವವರಿಗೆ ಎಚ್ಚರದ ಗಂಟೆಯಾಗಿದೆ.

ಯಾವ ದಲಿತ ಚಳುವಳಿಯನ್ನು ಕಟ್ಟಲು ಐವತ್ತು ವರ್ಷಗಳಿಂದ ರಾಮಯ್ಯನವರು ಶ್ರಮವಹಿಸಿದ್ದರೋ ಅಂತಹ ಚಳುವಳಿಯೇ ದಾರಿ ತಪ್ಪಿದ್ದರಿಂದ ಅತೀವ ಬೇಸರಗೊಂಡು ದಲಿತ ಚಳುವಳಿಗೆ ವಿದಾಯ ಹೇಳಿದ್ದಾರೆ. ಕೋಲಾರ ನೆಲದಿಂದಲೇ ದೂರಾಗುವ ನಿರ್ಧಾರ ಮಾಡಿದ್ದಾರೆ.

ಆದರೆ ಎಲ್ಲಿಗೆ ಹೋದರೂ ಹೋರಾಟಗಾರ ರಾಮಯ್ಯನವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ನೆಮ್ಮದಿಯಾಗಿರಲು ಈ ಫ್ಯಾಸಿಸ್ಟ್ ಪ್ರಭುತ್ವ ಮತ್ತು ಅವಕಾಶವಾದಿ ರಾಜಕಾರಣ ಬಿಡುವುದಿಲ್ಲ. ಹಾಗಾಗಿ ಇದ್ದಲ್ಲೇ ಇದ್ದು ಬಿಕ್ಕಟ್ಟುಗಳ ವಿರುದ್ದ ಧ್ವನಿ ಎತ್ತುವುದೇ ಉತ್ತಮ ಮಾರ್ಗ. ಹೇಳಬೇಕಾದದ್ದನ್ನು ಬರೆಯುವ ಮೂಲಕ, ಬರೆದದ್ದನ್ನು ಜನರಿಗೆ ತಲುಪಿಸುವ ಮೂಲಕ, ತಲುಪಿಸಬೇಕಾದದ್ದನ್ನು ನಾಟಕಗಳನ್ನಾಗಿಸಿ ಪ್ರದರ್ಶಿಸುವ ಮೂಲಕ ರಾಮಯ್ಯನವರು ತಮ್ಮ ಸಾಮಾಜಿಕ ಹಾಗೂ ಸಾಂವಿಧಾನಿಕ ಬದ್ಧತೆಯನ್ನು ಕಾಪಾಡಿಕೊಂಡು ಹೋಗಬೇಕಿದೆ. ಅಲ್ಲೇ ಇದ್ದು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಪ್ರಭುತ್ವವನ್ನು ಪ್ರಶ್ನಿಸಬೇಕಾಗಿದೆ. ರಾಮಯ್ಯನವರು ಅನುಭವಿಸಿದ್ದಕ್ಕಿಂತಾ ಸಾವಿರ ಪಟ್ಟು ಅವಮಾನ ನೋವು ಬೇಸರಗಳನ್ನು ಬಾಬಾಸಾಹೇಬರು ಅನುಭವಿಸಿದ್ದಾರೆ. ಅಂಬೇಡ್ಕರ್ ರವರು ಅಸಮಾನತೆಗೆ ಕಾರಣವಾದ ಧರ್ಮವನ್ನು ಧಿಕ್ಕರಿಸಿದರೇ ಹೊರತು  ನೆಲವನ್ನಲ್ಲ. ಇದು ರಾಮಯ್ಯನವರಿಗೆ ಮಾದರಿಯಾಗಲಿ. ತಮ್ಮ ಇತಿಮಿತಿ ಶಕ್ತಿ ಸಾಮರ್ಥ್ಯದ ಒಳಗೆ ವ್ಯವಸ್ಥೆ ವಿರುದ್ದ ಅವರ ಪ್ರತಿರೋಧದ ದ್ವನಿ ಒಡಮೂಡುತ್ತಲೇ ಇರಲಿ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹತಾರಗಳನ್ನು ಇನ್ನಷ್ಟು ಹರಿತಗೊಳಿಸುವ ಮೂಲಕ ಕೋಟಗಾನಹಳ್ಳಿ ರಾಮಯ್ಯನವರು ಈ ನಾಡಿನ ಸಾಂಸ್ಕೃತಿಕ ಎಚ್ಚರದ ಪ್ರಜ್ಞೆಯಾಗಿ ಮುಂದುವರೆಯಲಿ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತ

More articles

Latest article