Thursday, December 12, 2024

ಸೌಹಾರ್ದವೇ ಇದ್ದ ಹಾವೇರಿ ಜಿಲ್ಲೆಯ ಆ ಪುಟ್ಟ ಗ್ರಾಮ ಕಡಕೋಳದಲ್ಲಿ ಕಂಡದ್ದೇನು?

Most read

ನಿನ್ನೆ ನಮ್ಮ ಬಾಂಧವ್ಯ ವೇದಿಕೆಯ ತಂಡದೊಂದಿಗೆ  ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮಕ್ಕೆ ಹೋಗಿದ್ದೆ. ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ನಡೆದ ರಾಜಕೀಯಪ್ರೇರಿತ ಗಲಭೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಈ ಗ್ರಾಮವನ್ನು ತೊರೆದಿವೆ. ಹೀಗಿದ್ದರೂ ಕೆಲವಷ್ಟು ಮುಸ್ಲಿಂ ಕುಟುಂಬಗಳು ಅಲ್ಲೇ ಇವೆ. ಅವರಲ್ಲಿ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಕುಟುಂಬ ಕೂಡ ಇದೆ. ಸರಿಯಾಗಿ ಕಣ್ಣಿನ ದೃಷ್ಟಿ ಇಲ್ಲದ, ಗೋವುಗಳನ್ನು ಮನೆಯ ಒಳಗೇ ಮಕ್ಕಳಂತೆ ಸಾಕುವ, ಒಂದಷ್ಟು ಜಮೀನನ್ನು ಹೊಂದಿರುವ ಅಪ್ಪಟ ಕೃಷಿಕ ಈ ಮೌಲಾಸಾಬ್. ಗಲಭೆಯಲ್ಲಿ ಮೌಲಾಸಾಬ್ ಮಾತ್ರವಲ್ಲದೆ ಅವರ ಮನೆಯ ಹೆಂಗಸರು ಮಕ್ಕಳು ಸೇರಿದಂತೆ ಎಲ್ಲ ಸದಸ್ಯರಿಗೂ ಗಲಭೆಕೋರರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೌಲಾಸಾಬ್ ಸೇರಿದಂತೆ ಮನೆಯ ಉಳಿದ ಸದಸ್ಯರಿಗೆ ಅವರಿಗೆ ಯಾಕೆ ಥಳಿಸಿದ್ದಾರೆ ಎಂದು ಥಳಿತಕ್ಕೆ ಒಳಗಾಗಿ ಒಂದು ವಾರದ ನಂತರವೂ ಗೊತ್ತಾಗುತ್ತಿಲ್ಲ..

ನಿಮ್ಮನ್ನು ಈ ರೀತಿ ಪೀಡಿಸಿದರೂ ಕೂಡ ನೀವ್ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಮೌಲಾಸಾಬ್ ಗೆ ಕೇಳಿದಾಗ” ಏನು ಮಾಡುವುದು ಸ್ವಾಮಿ? ನಮಗೆ ಪೆಟ್ಟು ತಿನ್ನುವ ಸಮಯ. ನಾವು ದೂರು ಕೊಟ್ಟರೆ ಯಾರ್ಯಾರನ್ನೋ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಹೀಗೆ ಹಿಡಿದುಕೊಂಡು ಹೋದ ನಂತರ ಅವರ ಮನೆಯವರ ಪರಿಸ್ಥಿತಿ ನನಗೆ ನೋಡಲಾಗುವುದಿಲ್ಲ. ದಿನಾ ಬೆಳಿಗ್ಗೆ ಎದ್ದು ಪರಸ್ಪರ ಮುಖ ನೋಡಿಕೊಂಡು ಇರುವವರು ನಾವು. ನನಗೆ ಪೊಲೀಸರನ್ನು ಕಂಡರೆ ಭಯ. ಬದುಕಿನಲ್ಲಿ ಇಲ್ಲಿಯವರೆಗೂ ಒಮ್ಮೆಯೂ ಪೊಲೀಸ್ ಸ್ಟೇಷನ್ ಗೆ ಹೋದವನಲ್ಲ. ನನಗೆ ಪೆಟ್ಟು ತಿಂದಿದ್ದಕ್ಕೆ ಅಷ್ಟೇನೂ ಬೇಸರ ಇಲ್ಲ. ಮನೆಯ ಹೆಣ್ಣುಮಕ್ಕಳಿಗೂ ಕೂಡ ಹೊಡೆದಿದ್ದಾರೆ. ಅವರ ಮುಖವನ್ನು ನನಗೆ ನೋಡಲಾಗುತ್ತಿಲ್ಲ. ಕನಿಷ್ಠ ಹೊಡೆಯುವರು ಯಾಕೆ ಹೊಡೆಯುತ್ತಿದ್ದೇವೆ ಎಂದು ಹೇಳಿದರೂ ನಾನು ಸಮಾಧಾನ ಪಟ್ಟು ಅವರನ್ನು ಸಮಾಧಾನಿಸುತ್ತಿದ್ದೆ” ಎಂದಾಗ ವೇದಿಕೆಯ ಸದಸ್ಯರು ಮತ್ತು ನಮ್ಮೊಂದಿಗೆ ಬಂದ ಪೊಲೀಸರ ಕಣ್ಣಾಲಿಗಳು ಕೂಡ ತೇವಗೊಂಡಿದ್ದವು. ಮಾತನಾಡುವಾಗ ಮೌಲಾಸಾಬ್ ಕಣ್ಣಿನಲ್ಲಿ ಧಾರಾಕಾರ ಕಣ್ಣೀರು ಸುರಿಯುತಿತ್ತು. ರಾಜಕಾರಣದ ಕಪಿಮುಷ್ಠಿಯಲ್ಲಿ ಸಿಕ್ಕು ವೈಮನಸ್ಸು ಮೂಡಿಸಿಕೊಂಡ ಗ್ರಾಮಸ್ಥರನ್ನು ಒಂದುಗೂಡಿಸಬೇಕೆಂಬ ಆಶಯದೊಂದಿಗೆ ನಮ್ಮ ವೇದಿಕೆಯ ತಂಡ ಅಲ್ಲಿಗೆ ಭೇಟಿ ನೀಡಿತ್ತು..

ನಾವು ಗ್ರಾಮದಲ್ಲಿ ಹಲವು ಹಿರಿಯ ಹಿಂದೂ ಮುಸ್ಲಿಂ ನಾಯಕರನ್ನು ಸಂಪರ್ಕ ಮಾಡಿ ಸೌಹಾರ್ದದ ಅಗತ್ಯ ಮತ್ತು ಆಶಯವನ್ನು ವ್ಯಕ್ತಪಡಿಸಿದಾಗ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಮೌಲಾಸಾಬ್ ಬಾಲ್ಯದ ಗೆಳೆಯ ರಾಮಪ್ಪ ಎಲ್ಲಪ್ಪ ಕಳಸದ್ ಮಾತನಾಡುತ್ತಾ” ನೋಡ್ರಿ, ನಾವ್ಯಾಕೆ ವೈಮನಸ್ಸು ಮೂಡಿಸಿಕೊಳ್ಳಬೇಕು? ಇದೇ ಮೌಲಾಸಾಬ್ ನನಗಿಂತ  ಹಿರಿಯವನು. ನಾನು ಸಣ್ಣವನಿರುವಾಗ ಕೂಲಿಗೆ ಹೋಗುತ್ತಿದ್ದೆ. ಅದೊಂದು ದಿನ ನಾನು ಕಾಲು ಜಾರಿ ಬಿದ್ದಾಗ ನನ್ನನ್ನು ನೋಡಿದ ಈ ಮೌಲಾಸಾಬ್ ಎತ್ತಿಕೊಂಡು ಬಂದು ಅವನ ಮನೆಯಲ್ಲಿ ಉಪಚಾರ ಮಾಡಿದ್ದ. ಹೊತ್ತಿಗೆ ಸರಿಯಾಗಿ ಮೌಲಾಸಾಬ್ ಅಂದು ಬರದೇ ಇದ್ದಿದ್ದರೆ ಇಂದು ನಾನು ಇರುತ್ತಿರಲಿಲ್ಲ. ನಾವು ಕೂಡಿ ಬದುಕಿದ ಹೇಳಿ ಮುಗಿಸಲಾರದಷ್ಟು ನೆನಪುಗಳಿವೆ. ಆದರೆ ಯಾರಿಗೆ ಹೇಳೋನ್ರಿ? ಈಗ ಇದನ್ನು ಕೇಳುವ ಮನಸ್ಸು ಯಾರಿಗಿದೆ? ಅವನಿಗೆ ಪೆಟ್ಟು ಬಿದ್ದ ದಿನದಿಂದ ನನಗೂ ಕೂಡ ರಾತ್ರಿಯ ನಿದ್ದೆಗಳಿಲ್ಲ. ಕಾಲ ಬಾಳ ಕೆಟ್ಟೋಗಿದೆರಿ ” ಅನ್ನುತ್ತಾ ತುಂಬಾ ಹೊತ್ತು ತಲೆಯನ್ನು ಕೆಳಗೆ ಮಾಡಿಕೊಂಡು ಮೌನವಾಗಿಯೇ ಕುಳಿತರು ..

ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲರೂ ಸಮಾನವಾಗಿ ಗೌರವಿಸುವ ಸಿದ್ದಪ್ಪ ಸಣ್ಣಪ್ಪ ಗುಂಜಾಳ, ಊರಿನ ಸೌಹಾರ್ದದ ಇತಿಹಾಸ ಮತ್ತು ಹಿನ್ನೆಲೆಯನ್ನು ಸುದೀರ್ಘವಾಗಿ ವಿವರಿಸಿದರು. “ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿದ್ದವರು. ಈಗ ನೀವೇ ನೋಡಿ, ನೀವು ಬರುವಾಗ ಬರೀ ಪಂಚೆಯಲ್ಲಿದ್ದ ನನಗೆ ನನ್ನ ಅಂಗಿ ಮತ್ತು ಶಾಲನ್ನು ಅವನೇ ನನಗೆ ನನ್ನ ಮನೆಯ ಒಳಗಿನಿಂದ ತಂದು ತೊಡಿಸಿದ. ನಮ್ಮ ಬಾಂಧವ್ಯ ಹೀಗೆ ಇತ್ತು ಈಗಲೂ ಹೀಗೆಯೇ ಇದೆ. ಹೀಗಾಗಬಾರದಾಗಿತ್ರಿ, ನಮ್ ಮಾತು ಯಾರೂ ಕೇಳಲ್ರಿ ” ಎಂದು ತಮ್ಮ ಸಹಾಯಕತೆಯನ್ನು ವ್ಯಕ್ತಪಡಿಸಿದ್ದರು..

ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಎಲ್ಲರೂ ಕೂಡ ಸೌಹಾರ್ದ ಪ್ರಿಯರೇ. ಅವರನ್ನೆಲ್ಲ ಮಾತನಾಡಿಸಿದಾಗ ಅವರಿಂದಲೇ ನಮಗೆ ತುಂಬ ಕಲಿಯುವುದು ಉಂಟು ಎನ್ನುವ ಭಾವನೆ ಮೂಡುತ್ತದೆ. ಹೀಗಿದ್ದರೂ ಸೌಹಾರ್ದ ಕೆಡಿಸುತ್ತಿರುವುದು ಯಾರು ಎಂಬ ಪ್ರಶ್ನೆ ನಮ್ಮನ್ನು ದಾರಿಯುದ್ದಕ್ಕೂ ಕಾಡುತ್ತಿತ್ತು. ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಮೌಲಾಸಾಬ್ ಮುಖ ಕಾಣುತ್ತಿದ್ದಾಗ ಯಾಕೋ ಸಂಕಟವಾಗುತ್ತಿತ್ತು. ಬಸವ ತತ್ವದ ಘಮಘಮ, ಕನಕರು ಹುಟ್ಟಿದ ಹಿರಿಮೆ,  ಶಿಶುನಾಳ ಶರೀಫರ ತತ್ವ ಪದಗಳ ಗುನುಗುನುವಿಕೆ ಇರುವ ನೆಲದಲ್ಲೇ ಹೀಗಾದರೆ ಧರೆ ಹತ್ತಿ ಉರಿದಂತಲ್ಲವೇ?

ಮುಷ್ತಾಕ್ ಹೆನ್ನಾಬೈಲ್ 

ಬರಹಗಾರರು

ಈ ಸುದ್ದಿ ಓದಿದ್ದೀರಾ? ಗಲಭೆಗ್ರಸ್ತ ಕಡಕೋಳ ಗ್ರಾಮಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವ್ಯ ವೇದಿಕೆ

More articles

Latest article