ಯತ್ನಾಳ್‌ ಟೀಂಗೆ ಠಕ್ಕರ್‌ ನೀಡಲು ವಿಜಯೇಂದ್ರ ಬಣ ನಿರ್ಧಾರ; ದಾವಣಗೆರೆಯಲ್ಲಿ ಸಮಾವೇಶಕ್ಕೆ ತೀರ್ಮಾನ

Most read

ಬೆಂಗಳೂರು; ರಾಜ್ಯ ಬಿಜೆಪಿ ಘಟಕದಲ್ಲಿ ಬಣ ರಾಜಕಾರಣ ತೀವ್ರಗೊಂಡಿದ್ದು, ಭಿನ್ನಮತೀಯ ಗುಂಪಿನ ಅಘೋಷಿತ ನಾಯಕರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿಷ್ಠರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ವಿಜಯೇಂದ್ರ ಬಣದ ಮುಖಂಡರು ಸುಧೀರ್ಘ ಚರ್ಚೆ ನಡೆಸಿ ಯತ್ನಾಳ್‌ ಟೀಂಗೆ ಠಕ್ಕರ್‌ ನೀಡಲು ನಿರ್ಧರಿಸಿದ್ದಾರೆ. ಇವತ್ತಿನ ಸಭೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ವೈ ಸಂಪಂಗಿ ಸೇರಿದಂತೆ ಅನೇಕು ಮುಖಂಡರು ಭಾಗವಹಿಸಿದ್ದರು. ಯತ್ನಾಳ್  ತಂಡದ ವಕ್ಫ್ ವಿರೋಧಿ ಹೋರಾಟಕ್ಕೆ ಪರ್ಯಾಯವಾಗಿ ದಾವಣಗೆರೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಸಭೆಯ ನಂತರ ಮಾತನಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರನ್ನು ನರೇಂದ್ರ ಮೋದಿ ಅಧ್ಯಕ್ಷರಾಗಿ ನೇಮಿಸಿದ್ದಾರ.  ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಡಿಸೆಂಬರ್ ಗೆ ಅಂತ್ಯವಾಗುತ್ತದೆ ಎಂದು ಹಾದಿಬೀದಿಯಲ್ಲಿ ಹೇಳುತ್ತಿದ್ದಾರೆ. ವಿಜಯೇಂದ್ರ ವ್ಯಕ್ತಿ ಅಲ್ಲ, ಪಕ್ಷದ ಅಧ್ಯಕ್ಷರು. ಇವರನ್ನು ಪ್ರಶ್ನೆ ಮಾಡುವುದು ರಾಷ್ಟ್ರೀಯ ನಾಯಕರನ್ನು ಪ್ರಶ್ನೆ ಮಾಡಿದಂತೆ. ವಿಜಯೇಂದ್ರ ನಿಂದಿಸುವುದು ಮೋದಿ, ಶಾ, ಸಂತೋಷ್ ಅವರನ್ನು ಬೈದಂತೆ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಇವರು ಕಣ್ಣು ಬಿಟ್ಟಿರಲಿಲ್ಲ. ಈಗ ವಿಜಯೇಂದ್ರ ಬಗ್ಗೆ ಮಾತನಾಡುತ್ತಾರೆ. ನಾಲ್ಕೈದು ಜನರದ್ದು ತೋಳದ ಕಥೆಯಾಗಿದೆ ಎಂದು ಕಿಡಿಕಾರಿದರು. ಇದೇ 29 ರಂದು ಹತ್ತು ಗಂಟೆಗೆ ಕೋಲಾರ ಮುಳಬಾಗಿಲು ಗಣೇಶನ ದೇವಸ್ಥಾನಕ್ಕೆ ಭೇಟಿ ಕೊಡುತ್ತೇವೆ. ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಯಡಿಯೂರಪ್ಪ ಕಷ್ಟದಲ್ಲಿ ಪಕ್ಷ ಕಟ್ಟಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ತರಲು ಅವರ ಪಾತ್ರ ಪ್ರಮುಖವಾಗಿದೆ. ಪಕ್ಷ ಕಟ್ಟಿದ ನಾಯಕರ ಬಗ್ಗೆ ಮಾತನಾಡುವುದು ರಾಷ್ಟ್ರೀಯ ನಾಯಕರ ವಿರುದ್ಧ ಮಾತನಾಡಿದಂತೆ ಎಂದು ಅವರು ಕಿಡಿಕಾರಿದರು.
ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ. ಬಳಿಕ ಮೈಸೂರಿನಲ್ಲಿ ಚಾಮುಂಡೇಶ್ವರಿ, ಮುರುಡೇಶ್ವರಕ್ಕೂ ಭೇಟಿ ನೀಡಲು ಮುಖಂಡರು ನಿರ್ಧರಿಸಿದ್ದಾರೆ.
ಮಾಜಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ‌ ಯಾರ ಅನುಮತಿ ಮೇರೆಗೆ ವಕ್ಫ್ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ ಎಂದು ಗೊತ್ತಿಲ್ಲ.  ಈಗಾಗಲೇ ರಾಜ್ಯಾಧ್ಯಕ್ಷರು ಮೂರು ತಂಡ ಮಾಡಿದ್ದಾರೆ‌. ಇಂತಹ ಸಂದರ್ಭದಲ್ಲಿ ವಕ್ಫ್ ವಿರೋಧಿ ಅಭಿಯಾನ ನಡೆಸುತ್ತಿದ್ದಾರೆ. ಪಕ್ಷ ಇಲ್ಲದೆ ಚಿಹ್ನೆ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮೆಚ್ಚುಗೆ ಪಡೆಯಲು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಫಲಿತಾಂಶ ಬರುವುದು ಸಹಜ. ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ವಿಜಯೇಂದ್ರ ಅವರನ್ನು ಹೊಣೆಯಾಗಿ ಮಾಡಲಾಗುತ್ತಿದೆ. ಸೋತ ತಕ್ಷಣ ಎಲ್ಲವೂ ಮುಗಿದು ಹೋಗಿದೆ ಎಂದಲ್ಲ ಎಂದರು.

More articles

Latest article