Thursday, December 12, 2024

ಟಿಪ್ಪು ಸುಲ್ತಾನ್- ಅಭಿವೃದ್ಧಿಯ ವಿನ್ಯಾಸಗಳು

Most read

ನಮ್ಮ ದೇಶದಲ್ಲಿದ್ದ ಹಲವು ಅಧಿಕಾರದ ಕೇಂದ್ರಗಳನ್ನು ನಿಭಾಯಿಸುವ ದೊಡ್ಡ ಸವಾಲು ಎಲ್ಲ ರಾಜರುಗಳಂತೆ ಟಿಪ್ಪು ಸುಲ್ತಾನನಿಗೂ ಇತ್ತು. ಇದೆಲ್ಲವನ್ನೂ ನಿಭಾಯಿಸುತ್ತಾ ಬ್ರಿಟಿಷರ ವಿರುದ್ಧ ಆರಂಭಿಕ ಆಕ್ರಮಣಕಾರಿ ಆಟವಾಡಿದರೂ ಕೊನೆ ಕೊನೆಗೆ ರಕ್ಷಣಾತ್ಮಕವಾಗಿ ಆಡಿ ಸೋಲಬೇಕಾಯಿತು. ಟಿಪ್ಪುವಿಗೆ ರಾಜಕೀಯ ಗೆಲುವು ಸಿಗದೇ ಹೋದರೂ ಈ ಪ್ರದೇಶದ ಜನಜೀವನಕ್ಕೆ ಹೊಸ ಆರ್ಥಿಕ ವಿನ್ಯಾಸವನ್ನು ಪರಿಚಯಿಸಿದ ಕೀರ್ತಿಯಿಂದ ಅವನನ್ನು ವಂಚಿಸುವುದು ಸಾಧ್ಯವಿಲ್ಲ – ಡಾ.ಉದಯ ಕುಮಾರ ಇರ್ವತ್ತೂರು

ಹದಿನೈದನೆಯ ವಯಸ್ಸಿನಲ್ಲಿಯೇ ವೈರಿಪಡೆಯ ವಿರುದ್ಧ ಆತ್ಮವಿಶ್ವಾಸದಿಂದ ಹೋರಾಟ ಆರಂಭಿಸಿ, ರಾಜಕಾರಣದ ಎಲ್ಲ ಆಯಾಮಗಳಲ್ಲಿಯೂ ಹೊಸತನದ ಛಾಪು ಮೂಡಿಸಿದ ಹಜರತ್ ಟಿಪ್ಪು ಸುಲ್ತಾನ್ ಈ ನಾಡು ಕಂಡ ಅಪ್ರತಿಮ ಮುತ್ಸದ್ಧಿ ಎನ್ನಬಹುದು. ವರ್ತಮಾನದ ರಾಜಕೀಯ ಕೆಸರೆರಚಾಟದ ಆಚೆಗೆ, ಟಿಪ್ಪು ಸುಲ್ತಾನ್ ಬದುಕು, ಆಡಳಿತ, ಹೋರಾಟ, ಮತ್ತು ವಸಾಹತುಶಾಹಿಯ ವಿರುದ್ಧ ಆತನಿಗೆ ಇದ್ದ ಆಕ್ರೋಶಗಳ ಅಧ್ಯಯನ ಅಪೇಕ್ಷಣೀಯ. ಏಕೆಂದರೆ ಇದು ಕೇವಲ ಟಿಪ್ಪುವಿನ ಕುರಿತು ವಿಷಯಗಳನ್ನು ತಿಳಿಸುವುದರೊಂದಿಗೇನೆ, ಈ ನಾಡಿನಲ್ಲಿ ವಸಾಹತುಶಾಹಿಯ ಪ್ರವೇಶದಿಂದಾದ ತವಕ, ತಲ್ಲಣಗಳನ್ನು ಮತ್ತು ಆಧುನಿಕ ಅನ್ವೇಷಣೆಗಳಿಗೆ ವರ್ತಮಾನ ತೆಗೆದುಕೊಂಡ ರೀತಿಯನ್ನೂ ತಿಳಿಸುತ್ತದೆ. ಇಂತಹ ತಿಳುವಳಿಕೆ ವರ್ತಮಾನವನ್ನು ಕೂಡ ಹೊಸಬೆಳಕಲ್ಲಿ ಅರ್ಥೈಸಿಕೊಳ್ಳಲಿಕ್ಕೆ ಸಹಕರಿಸಬಲ್ಲುದು.

ಬ್ರಿಟೀಷ್ ವಸಾಹತುಶಾಹೀ ಆಡಳಿತ ಭಾರತೀಯ ಉಪಖಂಡದಲ್ಲಿ ಆಳವಾಗಿ ಬೇರೂರಿ, ಈ ನೆಲದ ಸತ್ವವನ್ನು ಹೀರಿ ಬ್ರಿಟನ್ನಿನಲ್ಲಿ ಹೂಬಿಡುತ್ತಿತ್ತು. ಇದಕ್ಕೆಲ್ಲ ಈ ನೆಲದ ಜನರ ಬೆವರು, ಈ ನೆಲದ ಸಂಪತ್ತು ವಿನಿಯೋಗವಾಗುತ್ತಿತ್ತು. ಈ ಬೆಳವಣಿಗೆಯನ್ನು ಕಂಡು ತಲ್ಲಣಗೊಂಡ ರಾಜ, ಮಹಾರಾಜರು ಬ್ರಿಟೀಷರ ವಿರುದ್ಧ ತೊಡೆತಟ್ಟಿದ್ದರೂ ಕೂಡಾ. ಅಂತಹ ಎಲ್ಲ ಹೋರಾಟಗಳು ಬಹಳ ದಿನ ಮುಂದುವರಿಯುತ್ತಿರಲಿಲ್ಲ. ಬ್ರಿಟೀಷರ ಕುಟಿಲ ರಾಜಕೀಯ, ದೇಶೀಯ ರಾಜರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ, ನಿಜವಾದ ವೈರಿಯನ್ನು ಅಡಗಿಸಿ ಕಲ್ಪಿತ ಬೆದರು ಬೊಂಬೆಯ ವಿರುದ್ಧ ಕಾದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜಕೀಯ ಮಹತ್ವಾಕಾಂಕ್ಷೆಯ ಅಮಲು ಹತ್ತಿಸಿ ರಾಜ ಮಹಾರಾಜರ ಆಪ್ತ ವಲಯದಲ್ಲಿಯೇ ವಿರೋಧ ಹುಟ್ಟಿಸಿ ಬಿಟ್ಟು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಿರಂತರ ಹೋರಾಟ ಮಾಡಿ ಅವರ ಶಕ್ತಿಯನ್ನು ಕುಂದಿಸಲು ಟಿಪ್ಪು ಸುಲ್ತಾನ್ ಮಾಡಿದ ಹೋರಾಟ ಇತರರಿಗಿಂತ ಈ ಮೇಲಿನ ದೃಷ್ಟಿಯಿಂದ ಭಿನ್ನವಾದದ್ದು. ರಾಜಕೀಯ ಹೋರಾಟ ನಡೆಸುತ್ತಲೇ ರಾಜ್ಯವನ್ನೂ ಆರ್ಥಿಕವಾಗಿ ಸಮೃದ್ಧಗೊಳಿಸಲು, ಸೂಕ್ತ ಅಭಿವೃದ್ಧಿಯನ್ನು ವಿನ್ಯಾಸಗೊಳಿಸಿದ ಹಿರಿಮೆ ಬಾದ್‍ಶಾ ನಸೀಬ್ ಉದ್‍ದೌಲಾ ಸುಲ್ತಾನ್ ಮಿರ್ ಫತೇ ಅಲೀ ಬಹಾದುರ್ ಟಿಪ್ಪುವಿನದ್ದು.

ಟಿಪ್ಪು ಸುಲ್ತಾನ್ ಬದುಕಿದ್ದು 49 ವರ್ಷ (10.11.1750ರಿಂದ 04.05.1799) ಇದರಲ್ಲಿ ಆಡಳಿತ ವಹಿಸಿಕೊಳ್ಳುವವರೆಗಿನ 22 ವರ್ಷ ಮತ್ತು ರಾಜ್ಯಭಾರ ನಡೆಸಿದ 27 ವರ್ಷಗಳ ಅವಧಿ ಸೇರಿಕೊಂಡಿದೆ. ಮೊದಲ 22 ವರ್ಷಗಳಲ್ಲಿ ಪಡೆದ ಎಲ್ಲ ಅನುಭವಗಳನ್ನು, ರಚನಾತ್ಮಕವಾಗಿ ಬಳಸಿಕೊಂಡು ಸದೃಢ ರಾಜ್ಯವನ್ನು ನಿರ್ಮಾಣ ಮಾಡಲು ಕಾರ್ಯ ನಿರ್ವಹಿಸಿದ್ದನ್ನು ಕಾಣಬಹುದು. ಒಬ್ಬ ರಾಜನಾಗಿ, ಆಡಳಿತಗಾರನಾಗಿ ದೇಶ ಆಳುವಾಗ ಆಡಳಿತ ನಡೆಸುವಾಗ ಕೆಲವೊಂದು ಅತಿರೇಕಗಳಿವೆ ಎಂದು ಅನಿಸಿದಾಗ ನಾವು ಟಿಪ್ಪುವನ್ನು ವ್ಯಕ್ತಿಯಾಗಿ ನೋಡದೆ ಒಬ್ಬ ಆಡಳಿತಗಾರನಾಗಿ ನೋಡಬೇಕಾಗಿದೆ. ತನ್ನ ಬದ್ಧ ವೈರಿಗಳ ಜೊತೆ ಯಾರಾದರೂ ಸೇರಿದ್ದಾರೆ ಎಂಬ ಗುಮಾನಿ ಇದ್ದಾಗ, ಟಿಪ್ಪು ಬಹಳ ಕಠೋರವಾಗಿ ವರ್ತಿಸಿದ್ದಾನೆ. ಆದರೆ ಆ ಕಾಠಿಣ್ಯವೇ ಟಿಪ್ಪುವಿನ ಸಮಗ್ರ ವ್ಯಕ್ತಿತ್ವವಲ್ಲ ಎನ್ನುವ ಎಚ್ಚರ ನಮ್ಮಲ್ಲಿರಬೇಕಿದೆ.

18ನೇ ಶತಮಾನದ ಉತ್ತರಾರ್ಧದ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಿನ್ಯಾಸಗಳು ಒಂದು ನಿರ್ದಿಷ್ಠ ರೂಪ ಪಡೆದುಕೊಂಡು, ಮುಂದಿನ ದಿನಗಳಲ್ಲಿ ಈ ಪ್ರದೇಶವು ಅಭಿವೃದ್ಧಿಯನ್ನು ಹೊಂದಲು ಸಹಕಾರಿಯಾಯಿತು ಎನ್ನುವ ಮಹತ್ವದ ಅಂಶ ತಿಳಿಯುತ್ತದೆ. ವಸಾಹತುಶಾಹಿಗಳಲ್ಲಿ ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟೀಷರು ಮುಂತಾದ ಯುರೋಪಿನ ದೇಶಗಳಿದ್ದರೂ, ಇಲ್ಲಿನ ಪರಿಸ್ಥಿತಿಯನ್ನು ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡವರಲ್ಲಿ ಬ್ರಿಟೀಷರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತೀಯ ಉಪಖಂಡದಲ್ಲಿ ಇರುವ ವೈವಿಧ್ಯವನ್ನು ವೈರುಧ್ಯವಾಗಿಸಿ, ಸ್ಥಳೀಯ ಅರಸು ಮನೆತನಗಳ ಮಧ್ಯೆ, ಸಂಶಯದ ಬೀಜ ಬಿತ್ತಿ ಅದು ಸಮೃದ್ಧವಾಗಿ ಬೆಳೆಯುವಂತೆ ಮಾಡಿ ‘ಕುಟಿಲೋಪಾಯದ’ ಮೂಲಕ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಬೆನ್ನೆಲುಬಾಗಿದ್ದ ಬ್ರಿಟೀಷ್ ಆಡಳಿತದ ವಿರುದ್ಧ ಟಿಪ್ಪು ಸುಲ್ತಾನನಿಗಿದ್ದ ಆಕ್ರೋಶ ಅಪಾರವಾದದ್ದು. ಪ್ರಾಯಶ: (ಟಿಪ್ಪುವಿನಲ್ಲಿದ್ದ ‘ಬ್ರಿಟೀಷ್ ಸೈನಿಕನ ಕತ್ತಿಗೆ ಕಚ್ಚಿ ಎಳೆದಾಡುವ’ ಮರದ ಹುಲಿಯ ಗೊಂಬೆ ಇದರ ರೂಪಕವಾಗಿದೆ ಎಂದು ತಿಳಿಯಬಹುದು. (ಮರದ ಈ ಬೃಹತ್ ಗೊಂಬೆ ಸದ್ಯ ಇಂಗ್ಲೆಂಡಿನ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂನಲ್ಲಿದೆ).

ಟಿಪ್ಪು ಸುಲ್ತಾನ್ ಆಡಳಿತ ಚುಕ್ಕಾಣಿ ಹಿಡಿದ ನಂತರ ನಡೆದ ಎರಡು, ಮೂರು ಮತ್ತು ನಾಲ್ಕನೇ ಮೈಸೂರು ಯುದ್ಧ ಮತ್ತು ಇತರ ರಾಜಕೀಯ ವಿಷಯಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಕೇವಲ ರಾಜಕೀಯ ವಿಷಯಗಳಿಗಷ್ಟೇ ಅಧ್ಯಯನವನ್ನು ಮಿತಿಗೊಳಿಸಿದರೆ ಬಹುಮುಖ್ಯವಾದ ಅಭಿವೃದ್ಧಿಯ ವಿಷಯ ಮತ್ತು ಈ ಕಾರಣದಿಂದ ರೂಪುಗೊಂಡ ಅಭಿವೃದ್ಧಿಯ ವಿನ್ಯಾಸ ನೇಪಥ್ಯಕ್ಕೆ ಸರಿಯಬಹುದು. ಹಾಗಾಗಿ ಈ ಲೇಖನದಲ್ಲಿ ಟಿಪ್ಪುವಿನ ಕಾಲದಲ್ಲಿ ಆದ ಒಟ್ಟು ಬೆಳವಣೆಗೆಗಳು ಹೇಗೆ ಆಧುನಿಕತೆಯ ಹೊಸ ವಿನ್ಯಾಸಕ್ಕೆ ಕಾರಣವಾಯಿತು ಎನ್ನುವುದರ ಕುರಿತು ಚರ್ಚಿಸಲಾಗಿದೆ.

ಬ್ರಿಟೀಷರು ಭಾರತೀಯ ಉಪಖಂಡವನ್ನು ವಸಾಹತು ಆಗಿ ಮಾಡಲು ಮತ್ತು ಇದರ ಮೇಲೆ ಹಿಡಿತ ಸಾಧಿಸಲು ಅವರಿಗಿದ್ದ ಮೂಲ ಉದ್ದೇಶವೇ ಇಲ್ಲಿಂದ ದೊರೆಯುವ ಅಪಾರ ಸಂಪತ್ತು. ಅವರ ಈ ಉದ್ದೇಶ ಈಡೇರಿಕೆಗಾಗಿ ರಾಜಕೀಯ ಅಧಿಕಾರ ಬೇಕಿತ್ತು. ಈ ಹುನ್ನಾರವನ್ನು ಸರಿಯಾಗಿಯೇ ಮನವರಿಕೆ ಮಾಡಿಕೊಂಡಿದ್ದ ಟಿಪ್ಪು ಸುಲ್ತಾನ್, ಆರ್ಥಿಕ ಮತ್ತು ರಾಜಕೀಯವಾಗಿ ಅವರನ್ನು ಎದುರಿಸಿ ಮಣಿಸಲು ಪ್ರಯತ್ನ ಪಟ್ಟಿದ್ದಾನೆ ಎನ್ನುವುದು ದಾಖಲೆಗಳಿಂದ ತಿಳಿದುಬರುತ್ತದೆ.

‘ದೈವ ಭಕ್ತಿ’ ಮತ್ತು ‘ಕರ್ಮ ಸಿದ್ಧಾಂತ’ದಲ್ಲಿ ನಂಬಿಕೆ ಇಟ್ಟಿರುವ ಭಾರತೀಯ ಉಪಖಂಡದ ರಾಜರಲ್ಲಿ ಸಂಪತ್ತನ್ನು ಗಳಿಸಿ ಗುಡ್ಡೆ ಹಾಕುವ ಹಪಹಪಿಕೆ ತುಂಬಾ ಕಡಿಮೆಯೇ ಎನ್ನಬಹುದು. ಹೊಸ ಆವಿಷ್ಕಾರಗಳ ಮೂಲಕ ಯಂತ್ರ ನಾಗರಿಕತೆಗೆ ಬಲಿಯಾದ ‘ಯುರೋಪಿನ ದೇಶಗಳಿಗೆ ಸದಾ ಸ್ಥಿರತೆ ಮತ್ತು ಹೊಸದಾಗಿ ದೊರಕಿದ ಮೇಲ್ಮೆಯನ್ನು’ ಕಾಯ್ದುಕೊಂಡು ಪೋಷಿಸುವ ಧಾವಂತವಿತ್ತು. ಟಿಪ್ಪು ಬ್ರಿಟನ್ನಿನ ನವ ಉದ್ಯಮಶೀಲ ವರ್ಗದ ಸಂಪತ್ತು ಗಳಿಸುವ ಈ ವ್ಯಾಧಿಯನ್ನು ಸರಿಯಾಗಿಯೇ ಗುರುತಿಸಿದ್ದ. ಹಾಗಾಗಿ ಅವರನ್ನು ಮಣಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ ಮತ್ತು ತನ್ನ ಇಂತಹ ಪ್ರಯತ್ನದ ಭಾಗವಾಗಿ ಫ್ರೆಂಚರ ಸಹಾಯ ಹಾಗೂ ಸಹಕಾರವನ್ನು ಪಡೆದ. ಟಿಪ್ಪು ಸುಲ್ತಾನನ ರಾಜಕೀಯ ಕನಸು ಕೈಗೂಡದಿದ್ದರೂ ಅವನ ಆಡಳಿತ ಕಾಲದಲ್ಲಿ ಅನುಷ್ಠಾನಗೊಂಡ ಬಹಳಷ್ಟು ಯೋಜನೆಗಳು ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಹಾದಿಮಾಡಿ ಕೊಟ್ಟಿರುವುದಂತೂ ಸತ್ಯ. ಮಾತ್ರವಲ್ಲದೆ ರಾಜ್ಯದ ಬಹುತೇಕ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದಡಿಯಲ್ಲಿ ಬಂದಿರುವುದೂ ಕೂಡಾ ಒಂದು ಪ್ರಮುಖ ಬೆಳವಣಿಗೆ.

ಟಿಪ್ಪೂ ಕಾಲದ ನಾಣ್ಯ

ಟಿಪ್ಪುವಿನ ಕಾಲದಲ್ಲಿ ಮೈಸೂರು ಒಂದು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಕುಶಲ ಕರ್ಮಿಗಳ ಕೆಲಸಗಳು ಇತ್ಯಾದಿಗಳಿಂದಾಗಿ ಮೈಸೂರು ಸಂಸ್ಥಾನದಲ್ಲಿ ತಲಾ ಆದಾಯ ಅಧಿಕವಿದ್ದು, ವಾಸ್ತವಿಕ ಆದಾಯ ಇತರ ಪ್ರದೇಶಗಳಿಗಿಂತ ಬಹಳಷ್ಟು ಅಧಿಕವಾಗಿತ್ತು. ಈ ರೀತಿಯ ಆರ್ಥಿಕ ಸುಭಿಕ್ಷಕ್ಕೆ ಆಧಾರಗಳನ್ನು ಹುಡುಕುತ್ತಾ ಹೋದರೆ ನಮಗೆ ಬಹಳಷ್ಟು ಪುರಾವೆಗಳು ದೊರೆಯುತ್ತವೆ. ಹಾಗಾಗಿ ಆರ್ಥಿಕ ಅಭಿವೃದ್ಧಿಯ ತಿಳಿವಿಗೆ ಕಸುವು ನೀಡಬಲ್ಲ ಈ ವಿಷಯಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದು, ದೇಶದ ವರ್ತಮಾನ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯುಕ್ತ ಎನ್ನುವುದು ನನ್ನ ಭಾವನೆ.

ಒಂದು ಪ್ರದೇಶದಲ್ಲಿರುವ ಜನ ಸಮುದಾಯದ ಕೈಗಳಿಗೆ ಕೆಲಸ ದೊರೆತು ಸಂಪನ್ಮೂಲ (ಪ್ರಾಕೃತಿಕ ಹಾಗೂ ಮಾನವ ನಿರ್ಮಿತ) ಸರಿಯಾಗಿ ಬಳಕೆಯಾದಲ್ಲಿ ಆ ಪ್ರದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವಿದೆ. ರಾಜ ಮಹಾರಾಜರ ಕಾಲದಲ್ಲಿ ಭೂಮಿಯ ಒಡೆತನ ಕೆಲವೇ ಜನರಲ್ಲಿದ್ದು ಕೃಷಿ ಮತ್ತು ಇನ್ನಿತರ ಭೂ ಆಧಾರಿತ ಉತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ಭೂಮಿ ಕಡಿಮೆಯೇ. ಬಹಳ ದೊಡ್ಡ ಪ್ರಮಾಣದ ಭೂಮಿ ಬಂಜರಾಗಿದ್ದು ಅನುತ್ಪಾದಕವಾಗಿರುತ್ತಿತ್ತು. ಆದರೆ ಟಿಪ್ಪು ಸುಲ್ತಾನ್ ಇಂತಹ ಭೂಮಿಯನ್ನು ಉತ್ಪಾದಕವನ್ನಾಗಿಸಲು ಬದಲಾವಣೆಗಳನ್ನು ತಂದಿರುವುದನ್ನು ಗಮನಿಸಬಹುದು. ಭೂಮಾಲಕರು, ಮಠಮಾನ್ಯಗಳು, ಪಾಳೇಗಾರರು, ಜಾಗೀರುದಾರರು, ಯಾರೆಲ್ಲ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹಿಡುವಳಿಯಾಗಿ ಹೊಂದಿದ್ದರೋ, ಅದೆಲ್ಲವನ್ನೂ ಅವರಿಂದ ಬಿಡಿಸಿ ಕೃಷಿ ಮಾಡುವ ರೈತರಿಗೆ ಸಿಗುವಂತೆ ಮಾಡಲಾಯಿತು. ಇಂತಹ ಬದಲಾವಣೆಯಿಂದ ಕೃಷಿಯ ಉತ್ಪಾದನೆ ಅಧಿಕವಾಯಿತು. ಕೃಷಿ ಭೂಮಿಯ ಶೇಕಡಾ 35%ರಷ್ಟು ಭಾಗ ನೀರಾವರಿಗೆ ಒಳಗಾಯಿತು. ನೀರಾವರಿ ಇರುವಲ್ಲಿ ಕನಿಷ್ಠ ಎರಡು ಬೆಳೆ ಬೆಳೆಯಲಾಗುತ್ತಿತ್ತು. ಈ ಕಾರಣದಿಂದ ಕೃಷಿ ಕ್ಷೇತ್ರದ ಉತ್ಪನ್ನ ಬಹಳಷ್ಟು ಅಧಿಕವಾಯಿತು. ಈ ಮೊದಲು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿಲ್ಲದ ಶಾನುಭೋಗರು ಮತ್ತು ಪಟೇಲರ ಹಿಡಿತವನ್ನು ಸಡಿಲ ಗೊಳಿಸಲಾಯಿತು. ಈ ಹಿಂದಿನಂತೆ ಬೇಕಾಬಿಟ್ಟಿಯಾಗಿ ಭೂಮಿಯ ಜಹಗೀರು ನೀಡುವ ಪದ್ಧತಿಯನ್ನು ಟಿಪ್ಪು ಸುಲ್ತಾನನ ಕಾಲದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಲದ ಯೋಜನೆಯನ್ನು ಪರಿಚಯಿಸಲಾಯಿತು. ಉತ್ಪನ್ನದ ಆರನೇ ಒಂದಂಶ ಭೂ ಕಂದಾಯವಾಗಿ ರಾಜನ ಖಜಾನೆ ಸೇರುತ್ತಿದ್ದುದರಿಂದ ರಾಜ್ಯಾದಾಯವೂ ಅಧಿಕವಾಗಲು ಕಾರಣವಾಯಿತು.  ಭೂಕಂದಾಯ ಪದ್ಧತಿಯಲ್ಲಿಯ ಕ್ರಾಂತಿಕಾರಿ ಸುಧಾರಣೆಯನ್ನು ಮಾಡುವ ಮೂಲಕ ಖಜಾನೆಗೆ ಬರುವ ತೆರಿಗೆ ಹಣ ಹೆಚ್ಚಾಗುವಂತೆ ಮಾಡಲಾಗಿದೆ.

ರೇಷ್ಮೆ ಅಭಿವೃದ್ಧಿ

ಕೃಷಿ ಭೂಮಿಯು ಹೆಚ್ಚಾದಂತೆ, ನೀರಾವರಿ ಸವಲತ್ತು ದೊರಕಿದಂತೆ ಮತ್ತು ಕೃಷಿ ಸಾಲವೂ ದೊರೆತ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಆವಕಾಶಗಳು ಹೆಚ್ಚಾಗತೊಡಗಿದುವು. ಕೃಷಿ ವಲಯ ವಾಣಿಜ್ಯಕರಣ ಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಂತದಲ್ಲಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಲಾಯಿತು. ಟಿಪ್ಪುವು ಪರಿಣಿತರನ್ನು ಬಂಗಾಳಕ್ಕೆ ಕಳುಹಿಸಿ ಅಲ್ಲಿ ರೇಷ್ಮೆ ಬೆಳೆಯುವ ವಿಧಾನ ಮತ್ತು ರೇಷ್ಮೆ ಉದ್ಯಮ ಕಾರ್ಯನಿರ್ವಹಿಸುವ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ಅಧ್ಯಯನ ಮತ್ತು ಪರಿಣಿತರ ಸಹಾಯದಿಂದ ರೇಷ್ಮೆ ಕೃಷಿ ಮತ್ತು ಮೈಸೂರು ಸಿಲ್ಕ್ ಉದ್ಯಮ ಮೈಸೂರು ಸಂಸ್ಥಾನದಲ್ಲಿ ನೆಲೆ ಕಂಡುಕೊಂಡಿತು.

ಇವುಗಳಲ್ಲದೆ, ಇದುವರೆಗೆ ಪರಿಚಯವೇ ಇಲ್ಲದ ಔಷಧೀಯ ಸಸ್ಯಗಳು, ವಾಣಿಜ್ಯ ಕಾಡುಗಳು, ತೋಟಗಾರಿಕೆಯ ಬೆಳೆಗಳು ಕೃಷಿ ರಂಗದಲ್ಲಿ ಪ್ರವೇಶ ಪಡೆದುವು. ಆ ಕಾಲದಲ್ಲಿ ಮೈಸೂರಿಗೆ ಬಂದಂತಹ ವಿದೇಶಿ ಪ್ರವಾಸಿಗರು ಕಂಡಂತೆ ತೋಟಗಾರಿಕೆ ಬಹಳ ಮಹತ್ವ ಪಡೆದಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ಜೀವನ ನಡೆಸಲು ಸಹಕಾರಿಯಾಗಿದ್ದವು. ಅದರಲ್ಲಿಯೂ ತೋಟಗಾರಿಕೆಯ ಕ್ಷೇತ್ರದಲ್ಲಿ ತರಕಾರಿ ತೋಟ, ತೆಂಗಿನ ತೋಟ, ಎಲೆ ತೋಟ ಹಾಗೂ ಹೂವಿನ ತೋಟಗಳ ಬಗ್ಗೆ ವಿವರಗಳನ್ನು ಪ್ರವಾಸಿಗರು ನೀಡಿದ ದಾಖಲೆಗಳ ಮೂಲಕ ಪಡೆಯಬಹುದಾಗಿದೆ. ಬಯಲು ಸೀಮೆ, ಮಲೆನಾಡು ಮತ್ತು ಹಳೆ ಮೈಸೂರು ಸೀಮೆಯಲ್ಲಿ ಈ ಪರಂಪರೆಯು ಇಂದಿಗೂ ಮುಂದುವರಿಯುತ್ತಿರುವುದಕ್ಕೆ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ.

ಅದುವರೆಗೂ ಅವಕಾಶ ವಂಚಿತ ಬೇಡ, ಕುರುಬ, ಈಡಿಗ, ವಕ್ಕಲಿಗ ಮುಂತಾದ ಸಮುದಾಯದ ಜನರಿಗೆ ಟಿಪ್ಪು ತನ್ನ ಸೇನೆಯಲ್ಲಿ ಅವಕಾಶಗಳನ್ನೂ ಕಲ್ಪಿಸಿದನು. ಸೈನಿಕರಿಗೆ ಉಂಬಳಿ ಭೂಮಿಯನ್ನು ನೀಡುವ ಹಿಂದಿನ ಒಡೆಯರ್ ಮನೆತನ ಆರಂಭಿಸಿದ ಕ್ರಮವನ್ನು ಟಿಪ್ಪು ಸುಲ್ತಾನ ವಿಸ್ತರಿಸಿದ. ಈ ಮೇಲಿನ ಕ್ರಮಗಳಿಂದಾಗಿ ಸಮಾಜದ ಎಲ್ಲಾ ವರ್ಗದ ಜನರಿಗೆ ಆದಾಯ ದೊರೆತು ಉತ್ತಮ ರೀತಿಯಲ್ಲಿ ಜೀವನ ನಡೆಸಲು ಅನುಕೂಲವಾಯಿತು ಎಂದು ತಿಳಿದು ಬರುತ್ತದೆ.

ಆದಾಯ ಮತ್ತು ಉತ್ಪನ್ನಗಳು ವೃದ್ಧಿಯಾದಾಗ ಸ್ವಾಭಾವಿಕವಾಗಿಯೇ ವಿನಿಮಯದ ಅವಶ್ಯಕತೆ ಬರುತ್ತದೆ. ಇಂತಹ ವಿನಿಮಯದ ಅವಶ್ಯಕತೆಗಳ ಕಾರಣದಿಂದ ‘ವಾರದ ಸಂತೆ’ ಚಾಲ್ತಿಗೆ ಬಂತು. ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ವಾರದ ಸಂತೆ ನಡೆಯುತ್ತಿತ್ತು. ಈ ವಾರದ ಸಂತೆಗಳಲ್ಲಿ ವಿನಿಯೋಗಕ್ಕಾಗಿ(ಉಪಭೋಗ) ವ್ಯಾಪಾರ ಮಾಡುವವರು ಮತ್ತು ವಿನಿಮಯಕ್ಕಾಗಿ ವ್ಯಾಪಾರ ಮಾಡುವವರು ಪಾಲುಗೊಳ್ಳುತ್ತಿದ್ದರು. ವಿನಿಯೋಗ ಅಥವಾ ಉಪಭೋಗ ಎಂದರೆ, ವಸ್ತುಗಳನ್ನು ಖರೀದಿಸಿ ಉಪಭೋಗಿಸಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು. ವಿನಿಮಯ ಎಂದರೆ ವ್ಯಾಪಾರಕ್ಕಾಗಿ ವಸ್ತುಗಳನ್ನು ಖರೀದಿಸುವುದು. ಇಂತಹ ವಿನಿಮಯದ ಉದ್ದೇಶ ಒಂದು ಕಡೆ ಕಡಿಮೆ ಬೆಲೆಗೆ ಖರೀದಿಸಿದ ವಸ್ತುಗಳನ್ನು ಬೇರೊಂದು ಕಡೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುವುದು. ಈ ಎರಡೂ ಕ್ರಮಗಳಿಂದ ಮಾರುಕಟ್ಟೆ ಬೆಳೆಯುತ್ತದೆ. ಈ ಬೆಳವಣಿಗೆಗೆ ಉತ್ಪಾದನೆಯಂತೂ ನಿರಂತರವಾಗಿ ಆಗುತ್ತಿರಲೇಬೇಕು. ಮಾರುಕಟ್ಟೆ ವಿಸ್ತರಣೆ ಆಗಬೇಕಾದರೆ ‘ಹಣ’ದ ಪ್ರಸರಣವೂ ಅಧಿಕವಾಗುತ್ತಾ ಹೋಗಬೇಕು. ರಾಜಾಶ್ರಯದಲ್ಲಿ ಟಂಕಸಾಲೆಯ ನಿರ್ವಹಣೆಯೂ ಬಹಳ ಹೊಣೆಗಾರಿಕೆಯಿಂದ ನಡೆದಾಗ ಮಾತ್ರ ಈ ಒಂದು ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ತನ್ನ ರಾಜ್ಯದ ಆರ್ಥಿಕ ನಿರ್ವಹಣೆಯನ್ನು ಟಿಪ್ಪು ಸುಲ್ತಾನ್ ಸಮರ್ಥವಾಗಿ, ಸರಿಯಾದ ತಿಳುವಳಿಕೆಯಿಂದ ನಿರ್ವಹಿಸಿದ ಎನ್ನುವ ಕಾರಣಕ್ಕೆ ನಗದು ಹಣದ ಚಲಾವಣೆಯು ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು. ಈ ಕಾರಣದಿಂದಾಗಿಯೇ ‘ಉತ್ಪಾದನೆ’ ‘ವಿನಿಮಯ’ ಮತ್ತು ‘ನಗದು’ ಆಧಾರಿತ ಆರ್ಥಿಕ ವ್ಯವಸ್ಥೆ ವಿನ್ಯಾಸಗೊಂಡಿರುವುದು ಬಹಳ ಮಹತ್ವ ಪೂರ್ಣವಾದ ಬೆಳವಣಿಗೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೊಸ ರೀತಿಯ ನಾಣ್ಯಗಳನ್ನು ಚಲಾವಣೆ ತಂದ ಟಿಪ್ಪು ಹಣದ ಪ್ರಸರಣಕ್ಕೆ ಒತ್ತು ನೀಡಿದ.

ಟಿಪ್ಪೂವಿನ ಕಾವಲು ಕೋಟೆ ಮಂಗಳೂರಿನ ಸುಲ್ತಾನ್‌ ಬತ್ತೇರಿ

ವಿದೇಶೀ ವ್ಯಾಪಾರಕ್ಕೆ ಮಹತ್ವ ನೀಡಿದ ಟಿಪ್ಪು ಸರಕು ಸಾಗಾಟಕ್ಕೆ ಅನುಕೂಲವಾಗುವಂತೆ ದೊಡ್ಡ ಹಡಗುಗಳನ್ನು ನಿರ್ಮಿಸಿ ಸರಕುಗಳನ್ನು ವಿದೇಶೀ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿ ಅಪಾರ ಪ್ರಮಾಣದ ಹಣ ಗಳಿಸಿರುವುದನ್ನು ನಾವು ಗಮನಿಸಬಹುದು. ಮಂಗಳೂರಿನ ಮೇಲೆ ಹತೋಟಿಗಾಗಿ ಟಿಪ್ಪು ಸುಲ್ತಾನ್ ಪ್ರಯತ್ನಿಸಿರುವುದಕ್ಕೆ ವಿದೇಶೀ ವ್ಯಾಪಾರ ವೃದ್ಧಿಗೆ ಅವನು ನೀಡಿದ ಮಹತ್ವವೂ ಕಾರಣವಾಗಿದೆ. ವ್ಯಾಪಾರ ಮತ್ತು ಮಿಲಿಟರಿಯನ್ನು ಬಲಪಡಿಸುವುದಕ್ಕೆ ಬಂದರು ಅತೀ ಅಗತ್ಯವಾಗಿತ್ತು. ಕರಾವಳಿ ತೀರದ ಮಂಗಳೂರು ಇದಕ್ಕೆ ಅತ್ಯಂತ ಪ್ರಶಸ್ತವಾಗಿದೆ. ನೌಕಾಬಲವನ್ನು ಬಲಪಡಿಸಿ ಸೇನಾ ನೆಲೆಯನ್ನು ಮತ್ತು ವಿದೇಶೀ ವ್ಯಾಪಾರವನ್ನು ವಿಸ್ತರಿಸಿಕೊಂಡ ಟಿಪ್ಪು ಬ್ರಿಟೀಷರಿಗೆ ಸೆಡ್ದು ಹೊಡೆದ ಒಬ್ಬ ಪ್ರಮುಖ ಆಡಳಿತಗಾರ.

ಟಿಪ್ಪು ಸುಲ್ತಾನ್ ಬ್ರಿಟೀಷರ ಹುನ್ನಾರಗಳನ್ನು ತಿಳಿಯಲು ಮತ್ತು ಅವರ ವಿರುದ್ಧ ಅಷ್ಟೊಂದು ಕ್ಷುದ್ರನಾಗಲು ಕಾರಣ ಅವರು ವ್ಯೂಹಾತ್ಮಕವಾಗಿ, ವ್ಯಾಪಾರ, ರಾಜಕೀಯ ಮತ್ತು ನ್ಯಾಯ… ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಮಿಕ್ಕುಳಿದವರನ್ನು ನಯವಾಗಿ ವಂಚಿಸುತ್ತಾ ಬಂದಿದ್ದೇ ಆಗಿರಬೇಕು. ವಿದ್ಯಾವಂತನಲ್ಲದ ಹೈದರಾಲಿ, ಟಿಪ್ಪು ಸುಲ್ತಾನನಿಗೆ ಎಲ್ಲ ರೀತಿಯ ಶಿಕ್ಷಣ ಮತ್ತು ಅನುಭವ ದೊರೆಯುವಂತೆ ನೋಡಿಕೊಂಡ. ರಾಜಕೀಯ ಮತ್ತು ಆಡಳಿತವನ್ನು ಬಹಳ ಹತ್ತಿರದಿಂದ ಕಂಡ ಟಿಪ್ಪು ಸುಲ್ತಾನ್ ರಾಜಕೀಯ, ವ್ಯಾಪಾರ ಮತ್ತು ಆಡಳಿತವನ್ನು ಕರಗತ ಮಾಡಿಕೊಂಡ. ಅಂತಾರಾಷ್ಟ್ರೀಯ ನೆಲೆಯಲ್ಲಿ ದೇಶೀಯ ರಾಜಕೀಯವನ್ನು ನಾವು ಟಿಪ್ಪುವಿನಲ್ಲಿ ಕಾಣಬಹುದು. ಪ್ರಾಯಶ: ಇಂತಹ ರಾಜಕೀಯ ಚತುರತೆಯ ಕಾರಣದಿಂದಾಗಿಯೇ ಬ್ರಿಟೀಷರು ಟಿಪ್ಪುವನ್ನು ಯುದ್ಧದ ಮೂಲಕ ನಿವಾರಿಸಿ ಬಿಡಲು ತೀರ್ಮಾನಿಸಲು ಪ್ರಮುಖ ಕಾರಣವಿರಬಹುದು.

ಇತಿಹಾಸ ರಚನೆಯ ‘ಕಾರ್ಯ’ ಮತ್ತು ‘ಕಾರಣ’ ಎರಡರ ಮೇಲೂ ಬ್ರಿಟೀಷರ ಪ್ರಭಾವ ಇದ್ದೇ ಇದೆ. ಆಡಳಿತಕ್ಕೆ ಹತ್ತಿರವಿರುವ ‘ಓದು’ ‘ಬರಹ’ ಬಲ್ಲವರು ಈ ಕೆಲಸದಲ್ಲಿ ಪ್ರಮುಖ ಪಾತ್ರವಹಿಸಿರುವ ಕಾರಣ ಇತಿಹಾಸದ ಅಧ್ಯಯನ ಕುರಿತು “ಬಹುಮುಖ” ದೃಷ್ಟಿಕೋನದ ತಿಳುವಳಿಕೆ ಅಗತ್ಯವೆಂದು ನನ್ನ ಅನಿಸಿಕೆ. ಅಧಿಕಾರದ ಕೇಂದ್ರದಿಂದ ದೂರವಿರುವ ಬಹುಪಾಲು ಜನರ ಮಾತು ಮತ್ತು ಮೌನ ಯಾವಾಗಲೂ ಒಂದು ನಿಟ್ಟುಸಿರಾಗಿಯೇ ಉಳಿದು ಬಿಡಬಹುದಾದರೂ, ಮನದ ಬೇಗುದಿ, ಹೃದಯದ ತಲ್ಲಣ ಎಲ್ಲಾದರೂ ಒಂದು ಸುಳಿವು ನೀಡದೇ ಉಳಿಯುವುದಿಲ್ಲ. ಇಂತಹ ಸುಳಿವಿಗಾಗಿ ಇತಿಹಾಸಕಾರನಲ್ಲಿ ತುಡಿತವಿರಬೇಕು. ಜನಪದ, ಕಲೆ, ಸಂಸ್ಕೃತಿ ಇಂತಹ ಸುಳಿವುಗಳನ್ನು ತನ್ನಲ್ಲಿ ಸದಾ ಹುದುಗಿಸಿಕೊಂಡಿರುತ್ತದೆ. ಟಿಪ್ಪುವಿನ ಕುರಿತಂತೆಯೂ ಇದು ನಮಗೆ ನೆನಪಿರಬೇಕು.

ಟಿಪ್ಪೂ ಮತ್ತು ಆತನ ಹೆತ್ತವರ ಸಮಾಧಿ

ನಮ್ಮ ದೇಶದಲ್ಲಿದ್ದ ಹಲವು ಅಧಿಕಾರದ ಕೇಂದ್ರಗಳನ್ನು ನಿಭಾಯಿಸುವ ದೊಡ್ಡ ಸವಾಲು ಎಲ್ಲ ರಾಜರುಗಳಂತೆ ಟಿಪ್ಪು ಸುಲ್ತಾನನಿಗೂ ಇತ್ತು. ಇದೆಲ್ಲವನ್ನೂ ನಿಭಾಯಿಸುತ್ತಾ ಬ್ರಿಟಿಷರ ವಿರುದ್ಧ ಆರಂಭಿಕ ಆಕ್ರಮಣಕಾರಿ ಆಟವಾಡಿದರೂ ಕೊನೆ ಕೊನೆಗೆ ರಕ್ಷಣಾತ್ಮಕವಾಗಿ ಆಡಿ ಸೋಲಬೇಕಾಯಿತು. ಟಿಪ್ಪುವಿಗೆ ರಾಜಕೀಯ ಗೆಲುವು ಸಿಗದೇ ಹೋದರೂ ಈ ಪ್ರದೇಶದ ಜನಜೀವನಕ್ಕೆ ಹೊಸ ಆರ್ಥಿಕ ವಿನ್ಯಾಸವನ್ನು ಪರಿಚಯಿಸಿದ ಕೀರ್ತಿಯಿಂದ ಅವನನ್ನು ವಂಚಿಸುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಟಿಪ್ಪು ಸುಲ್ತಾನ್, ಮೈಸೂರಿನ ಹುಲಿ ಎನ್ನುವುದು ಸರಿಯಾಗಿಯೇ ಇದೆ. ಉರಿಗೌಡ ನಂಜೇಗೌಡರ ನಕಲೀ ಪಾತ್ರ ಸೃಷ್ಠಿಸಿ ಟಿಪ್ಪುವಿನ ಕುರಿತಂತೆ ಗೊಂದಲ ಉಂಟುಮಾಡುವ ಬದಲಿಗೆ ಇತಿಹಾಸದ ಅಧ್ಯಯನ ಶಿಸ್ತಿನ ಚೌಕಟ್ಟಿನೊಳಗೆ ಈಗಾಗಲೇ ನಡೆದಿರುವ ದಾಖಲೆಗಳ ಆಧಾರದಲ್ಲಿ ವಿಷಯ ವಿಚಾರ ಮಂಥನ ನಡೆಯಲಿ, ಆ ಮೂಲಕ ಆ ನಾಡಿನ ಭವಿಷ್ಯವನ್ನು ಉತ್ತಮಗೊಳಿಸಬಲ್ಲ ಹೊಸ ಹೊಳಹುಗಳೇನಾದರೂ ದೊರೆಯುವುದಿದ್ದರೆ ದೊರೆಯಲಿ. ಕಲಿಯುವುದು ಏನೂ ಇಲ್ಲವೆಂದಾದರೆ ಆದೂ ಬೆಳಕಿಗೆ ಬರಲಿ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಸೌಹಾರ್ದವೇ ಇದ್ದ ಹಾವೇರಿ ಜಿಲ್ಲೆಯ ಆ ಪುಟ್ಟ ಗ್ರಾಮ ಕಡಕೋಳದಲ್ಲಿ ಕಂಡದ್ದೇನು?

More articles

Latest article