ಬೆಂಗಳೂರು: ಸಕಾಲ ಗ್ಯಾರಂಟಿ ಸೇವೆಯನ್ನು ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ನೀಡಬೇಕಾದರೆ ಸಕಾಲಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಯ ಸೇವೆಯ ಡೇಟಾ ಬೆರಳ ತುದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿ ಸಕಾಲ ಸೇವೆಗಳ ಅಡಿಯಲ್ಲಿ ನೀಡುತ್ತಿರುವ ಕೃಷಿ, ಸಾರಿಗೆ, ಶಿಕ್ಷಣ ಹಾಗೂ ಆದಾಯ ತೆರಿಗೆ ಇಲಾಖೆಗಳ ಇ-ಆಡಳಿತಕ್ಕೆ ಮತ್ತಷ್ಟು ವೇಗ ತುಂಬಿ ಲಂಚ ಮುಕ್ತಗೊಳಿಸುವ ಸಂಬಧ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ಕಳೆದ ಎರಡೂವರೆ ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಸಕಾಲ ಕುಟುಂಬ ಡೇಟಾಬೇಸ್ ಅಪ್‌ಡೇಟ್ ಮಾಡಲಾಗುತ್ತಿದೆ. ಅಲ್ಲದೆ ಕೆಲವು ಸೇವೆಗಳನ್ನು ಆಟೋಮೇಷನ್ ಮಾಡಬೇಕು.
ಆಟೋಮೇಷನ್ ಮಾಡಿದರೆ ಮಾತ್ರ ಸರ್ಕಾರದ ಸೇವೆಗಳು ಜನರಿಗೆ ಶೀಘ್ರ ತಲುಪಿ ಲಂಚದ ಪಿಡುಗು ನಿವಾರಣೆಯಾಗುತ್ತದೆ. ಅಲ್ಲದೆ ಜನರಿಗೆ ಶೋಷಣೆಯಿಂದ ಮುಕ್ತಿ ಸಿಗಲಿದೆ ಎಂದರು.
ಸಕಾಲದಲ್ಲಿ ಹತ್ತಾರು ಇಲಾಖೆಗಳಿದ್ದು ಹಲವು ಸೇವೆಗಳನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಹೊರಗುತ್ತಿಗೆ ನೌಕರರ ಸಂಬಳವನ್ನು ಕುಟುಂಬ ಆ್ಯಪ್ ಮೂಲಕ ನೀಡುವಂತಾಗಬೇಕು. ವೃತ್ತಿ ತೆರಿಗೆ ಸಹ ಕುಟುಂಬಕ್ಕೆ ಏಕೀಕೃತ ಆಗಬೇಕು. ವೃತ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಸಂಗ್ರಹಿಸುತ್ತಿರುವುದರಿಂದ ಅದನ್ನು ಏಕೀಕರಣ ಮಾಡುವುದು ಕಷ್ಟವಲ್ಲ. ಅಧಿಕಾರಿಗಳು ಪ್ರಯತ್ನಪಡಬೇಕು ಅಷ್ಟೇ ಎಂದರು.
ಸರಕು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಕೂಡ ಏಕೀಕೃತ ಮಾಡಬೇಕು. ವಾಹನ ಚಾಲನಾ ಪರವಾನಗಿಗೆ ಆಧಾರ್ ಕಡ್ಡಾಯವಾಗಿರಬೇಕು. ಆದರೆ ವಾಹನ ನೋಂದಣಿಗೆ ಆಧಾರ್ ಇ ಕೆವೈಸಿ ಯನ್ನು ಏಕೆ ಕಡ್ಡಾಯ ಮಾಡಬಾರದು ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಆಸ್ತಿ ನೋಂದಣಿಯಲ್ಲಿ ಆಧಾರ್,ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಈ ಮೂರು ದಾಖಲೆಗಳಲ್ಲಿ ಒಂದನ್ನು ಕಡ್ಡಾಯ ಮಾಡಿದ್ದೇವೆ. ವಾಹನ ನೋಂದಣಿಯೂ ಆಸ್ತಿ ಪ್ರಕಾರವೇ ಆಗಿದ್ದು ಆಧಾರ್ ಇ ಕೆವೈಸಿ ಕಡ್ಡಾಯ ಮಾಡುವುದು ಸೂಕ್ತ ಎಂದು ಅವರು ಹೇಳಿದರು.

