ಬೆಂಗಳೂರು : ರಾಜ್ಯದ 18 ಜಿಲ್ಲೆ, 141 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದ್ದು, ಕರ್ನಾಟಕದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳುಹಿಸಿ, ಅಗತ್ಯ ನೆರವಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಎಲ್ ನೀನೋ ಪರಿಣಾಮದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಶೇ. 30ರಷ್ಟು (ಜು.11ರ ಮಾಹಿತಿ)ಮಳೆ ಕೊರತೆಯಾಗಿದ್ದು, ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ನಿಯೋಜಿಸಬೇಕು ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ನಿಯೋಜಿತ ತಂಡದ ಭೇಟಿಯೂ ಉದ್ಭವಿಸುತ್ತಿರುವ ಬರ ಪರಿಸ್ಥಿತಿಯ ತೀವ್ರತೆಯನ್ನು ಪ್ರತ್ಯಕ್ಷವಾಗಿ ಮೌಲ್ಯಮಾಪನ ಮಾಡಲು ಸಹಕಾರಿಯಾಗುತ್ತದೆ. ಈ ಕಷ್ಟದ ಅವಧಿಯಲ್ಲಿ ಭಾರತ ಸರ್ಕಾರವು ತಮ್ಮೊಂದಿಗಿದೆ ಎಂಬ ಭರವಸೆಯನ್ನು ರೈತ ಸಮುದಾಯಕ್ಕೆ ನೀಡುತ್ತದೆ. ಭಾರತ ಸರ್ಕಾರದಿಂದ ಆರಂಭಿಕ ಮೌಲ್ಯಮಾಪನ ಮತ್ತು ಸಮಯೋಚಿತ ಬೆಂಬಲವು, ವಿಕೋಪಕ್ಕೆ ತಿರುಗುತ್ತಿರುವ ಬರ ಪರಿಸ್ಥಿತಿಯ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಜ್ಯ ಸರ್ಕಾರವು ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ ಎಂದು ವಿವರಿಸಿದ್ದಾರೆ.
ಮುಂಗಾರು ಮಳೆ ಅವಲಂಬನೆ:
ರಾಜ್ಯವು 10 ವಿಭಿನ್ನ ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77 ರಷ್ಟು ಭಾಗವು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯವು ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿ ಹೊಂದಿದ್ದು, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಕಾರಣದಿಂದಾಗಿ ಇಲ್ಲಿನ ಕೃಷಿ ಉತ್ಪಾದನೆಯು ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿದೆ ಎಂದು ಹೇಳಿದ್ದಾರೆ.
ರಾಜ್ಯದ ವಾರ್ಷಿಕ ಮಳೆಯಲ್ಲಿ ಶೇ.74 ಮಳೆಯು ನೈಋತ್ಯ ಮುಂಗಾರು ಅವಧಿಯಲ್ಲೇ ಲಭ್ಯವಾಗುವುದರಿಂದ, ಮಳೆಯ ವ್ಯತ್ಯಾಸ, ಸುದೀರ್ಘ ಒಣ ಹವೆ ಮತ್ತು ಮರುಕಳಿಸುವ ಬರಗಾಲದ ಪರಿಸ್ಥಿತಿಗಳಿಗೆ ಕರ್ನಾಟಕವು ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಕೃಷಿ, ಕುಡಿಯುವ ನೀರಿನ ಲಭ್ಯತೆ, ಜೀವನೋಪಾಯ ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ತೀವ್ರ ಮಳೆ ಕೊರತೆ
ರಾಜ್ಯದಲ್ಲಿ ಮಳೆಯ ಕೊರತೆಯು ಗಮನಾರ್ಹವಾಗಿ ಕಂಡುಬಂದಿದೆ. 11 ಜುಲೈ 2026 ರ ಮಾಹಿತಿಯಂತೆ, ಕರ್ನಾಟಕದಲ್ಲಿ ವಾಡಿಕೆ ಮಳೆಯಾದ 292 ಮಿಮೀ ಗೆ ಪ್ರತಿಯಾಗಿ ಕೇವಲ 203 ಮಿಮೀ ಮಳೆಯಾಗಿದೆ. ಇದು ‘ಕೊರತೆ ಮಳೆ’ಯ ವರ್ಗಕ್ಕೆ ಸೇರುತ್ತದೆ. 22 ಜೂನ್ 2026 ರ ವೇಳೆಗೆ ಮುಂಗಾರು ರಾಜ್ಯ ವ್ಯಾಪಿಸಿತ್ತಾದರೂ 11 ಜುಲೈ 2026 ರ ಹೊತ್ತಿಗೆ, ಒಟ್ಟು 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ತೀವ್ರ ಕೊರತೆ ಎದುರಿಸಿವೆ. ತಾಲ್ಲೂಕು ಮಟ್ಟದಲ್ಲಿ ನೋಡುವುದಾದರೆ, 240 ತಾಲ್ಲೂಕುಗಳಲ್ಲಿ 141 ತಾಲ್ಲೂಕುಗಳು ಕೊರತೆಯಿಂದ ತೀವ್ರ ಕೊರತೆಯ ಮಳೆಯ ವಿಭಾಗದಲ್ಲಿ ದಾಖಲಾಗಿದ್ದು, ಮಳೆ ಕೊರತೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿರುವುದನ್ನು ಇದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಮಳೆ ಕೊರತೆಯಿಂದ ಮುಂಬರುವ ತಿಂಗಳುಗಳಲ್ಲಿ ಜಲಾಶಯಗಳ ಒಳಹರಿವು, ನೀರಾವರಿ, ಕುಡಿಯುವ ನೀರಿನ ಭದ್ರತೆ ಮತ್ತು ಜಲವಿದ್ಯುತ್ ಉತ್ಪಾದನೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. 10 ಜುಲೈ 2026 ರ ಮಾಹಿತಿಯಂತೆ, ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿನ ಒಟ್ಟು ಸಂಗ್ರಹಣೆಯು ಕೇವಲ 303 ಟಿಎಂಸಿ ಆಗಿದ್ದು, ಇದು ಒಟ್ಟು ಒಟ್ಟಾರೆ ಸಂಗ್ರಹಣಾ ಸಾಮರ್ಥ್ಯವಾದ 895.65 ಟಿಎಂಸಿಯ ಕೇವಲ ಶೇಕಡಾ 34 ರಷ್ಟಾಗಿದೆ ಎಂದು ಹೇಳಿದ್ದಾರೆ.
ನೀರಿನ ಲಭ್ಯತೆಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಸಂರಕ್ಷಿಸಲು ರಾಜ್ಯ ಸರ್ಕಾರವು ಅತ್ಯುನ್ನತ ಆದ್ಯತೆ ನೀಡುವ ನೀತಿ ನಿರ್ಧಾರವನ್ನು ಕೈಗೊಂಡಿದೆ ಎಂದು ಸಿಎಂ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಉತ್ಪಾದನೆ ಮೇಲೆ ಪರಿಣಾಮ
ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದಿರುವುದು ಮತ್ತು ಮಳೆಯ ಖಾತರಿ ಇಲ್ಲದಿರುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಪರಿಸ್ಥಿತಿಯು ರಾಷ್ಟ್ರೀಯ ಮಟ್ಟದಲ್ಲೂ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ಕರ್ನಾಟಕವು ಭಾರತದಲ್ಲಿ ಬೇಳೆಕಾಳುಗಳನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಪ್ರಸ್ತುತ ಬರಗಾಲದ ಪರಿಸ್ಥಿತಿಯಿಂದಾಗಿ ಉತ್ಪಾದನೆಯಲ್ಲಿ ಯಾವುದೇ ಗಮನಾರ್ಹ ಕುಸಿತ ಉಂಟಾದರೂ, ಅದು ರಾಷ್ಟ್ರೀಯ ಮಟ್ಟದಲ್ಲಿ ಬೇಳೆಕಾಳುಗಳ, ವಿಶೇಷವಾಗಿ ತೊಗರಿ ಬೇಳೆಯ ಲಭ್ಯತೆ ಮತ್ತು ಬೆಲೆಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಸಿಎಂ ಹೇಳಿದ್ದಾರೆ.

