Thursday, July 25, 2024

“ಹೆಣ್ಮಕ್ಳು ಅಂದ್ರೆ ನಿನ್ನಂಗಿರ್ಬೇಕು ಕನ್ ಗಂಗೂ”

Most read

(ಈ ವರೆಗೆ…) ಅಪ್ಪಜ್ಜಣ್ಣ ಹೊರಟು ಹೋದಮೇಲೆ ಏಕಾಂಗಿಯಾದ ಗಂಗೆಯ ಮೇಲೆ ಕಾಮುಕರ ಕಣ್ಣುಗಳು ಬಿದ್ದವು. ತಾನು ಕೆಲಸ ಮಾಡುವ ಕಾಫಿ ಕಂಪೆನಿಯ ರೈಟರ್ ಇನ್ನಿಲ್ಲದಂತೆ ಆಕೆಯನ್ನು ಪೀಡಿಸ ತೊಡಗಿದ. ಒಂದು ದಿನ ಗಂಗೆಯ ಮೇಲೆರಗ ಬಂದ ಆತನ  ಮೈ ಮುಖಕ್ಕೆ ಗುದ್ದಿ ತಪ್ಪಿಸಿಕೊಂಡು ಮನೆಗೆ ಓಡಿ ಬರುತ್ತಾಳೆ. ಮನೆಗೆ ಬಂದು ಗಂಗೆ ಏನು ಮಾಡುತ್ತಾಳೆ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆಯ 73 ನೇ ಕಂತು.

ರೈಟರ್ ಕಾರ್ಯಪ್ಪನನ್ನು ತದುಕಿ ಮನೆಗೆ ಬಂದ ಗಂಗೆಯ ಒಳಗೆ ಏನೋ ಮಹತ್ತರವಾದದ್ದನ್ನು ಸಾಧಿಸಿ ಬಂದಂತಹ ನೆಮ್ಮದಿ ಎದ್ದು ಕಾಣುತ್ತಿತ್ತು. ಅದುವರೆಗೂ ತನ್ನೊಳಗೇ ಮುಸುಕೊದ್ದು ಮಲಗಿದ್ದ ಧೈರ್ಯ, ಕೆಚ್ಚು, ಚಾಣಾಕ್ಷತನ, ಹಿಡಿದದ್ದನ್ನು ಮಾಡೇ ತಿರುವ ಹಠಮಾರಿತನ ಎಲ್ಲವೂ ಒದ್ದುಕೊಂಡು ಹೊರ ಬಂದವು. ರೊಚ್ಚಿಗೆದ್ದವಳಂತೆ ಅವತ್ತು ರಾತ್ರಿ ಚಿಲಕ ಸದ್ದಾಗಲೆಂದೇ ಬಾಗಿಲತ್ತ ಕಿವಿ ನಿಮಿರಿಗೆ  ಕೂತಳು. ಆದರೆ ಇಡೀ ರಾತ್ರಿ ಕಣ್ಣು ಮಿಟುಕಿಸದೆ ಕಾದರೂ ಯಾವ ಸದ್ದು ಕೇಳಿ ಬರಲಿಲ್ಲ. ಕೊನೆಗೆ ಕಾದು ಕಾದು ಸಾಕಾಗಿ ನಿರಾಸೆಯಿಂದ ಮಧ್ಯರಾತ್ರಿ ಯಾವಾಗಲೋ ನಿದ್ದೆಗೆ ಜಾರಿದ್ದಳು.

ಬೆಳಗಿನ ಸುಮಾರು ನಾಲ್ಕರ ಜಾವವಿರಬೇಕು  ಇನ್ನೂ ಕತ್ತಲು ದಟ್ಟೈಸಿ ಕೂತಿತ್ತು, ಗಂಗೆಯ ಕಣ್ಣಿಗೆ ಮೆತ್ತಿದ್ದ ಸಕ್ಕರೆಯಂತಹ ನಿದ್ದೆಗೆ ಕಟ್ಟಿರುವೆ ಕಚ್ಚಿದಂತೆ ಬಾಗಿಲ ಸಂದಿನಿಂದ ಸಣ್ಣಗೆ ಗುಸು ಗುಸ ಸದ್ದು ಕೇಳಿದಂತಾಯ್ತು.  ದಡಕ್ಕನೆ ಎದ್ದು ಕೂತವಳ ಮೈ  ರೋಮವೆಲ್ಲ ನಿಗುರಿ  ಕೊಂಡಿತು. ಮತ್ತೆ ಬಾಗಿಲಿಗೆ ಕಿವಿ ಕೊಟ್ಟಳು. ಸಣ್ಣಗೆ ಚಿಲಕ ತಟ್ಟಿದ  ಸದ್ದಾಯ್ತು. ಮತ್ತೆ ತನ್ನ ಬಾಲ್ಯದ ಸಾಹಸದ ದಿನಗಳಿಗೆ ಮರಳಿದವಳಂತೆ ತಲೆ ಸಂಧಿಯಲ್ಲಿ ಇಟ್ಟುಕೊಂಡಿದ್ದ ಕಾರದಪುಡಿ ಮತ್ತು ಮಚ್ಚನ್ನು ಕೈಗೆತ್ತಿಕೊಂಡಳು. “ವಸಿ ಬೇಗ ಬಾಗ್ಲು ತಗಿ ಗಂಗಿ ನೀ  ಕೇಳಿದ್ ಕೊಟ್ಟೇವು ” ಸ್ಪಷ್ಟವಾದ ಎರಡು ಗಂಡು ದನಿ ಚೇಳಿನಂತೆ ಗಂಗೆಯ ಎದೆ ಕುಟುಕಿತು. ಎದ್ದ ಕೋಪವನ್ನು  ತೋರಗೊಡದೆ “ಯಾರದು? ಬಂದೆ ವಸಿ ತಡಿರಿ…” ಎಂದು ಪಿಸುಮಾತಿನಲ್ಲೆ ನಾಜೂಕಾಗಿ ರಾಗ ಎಳೆದಳು. ಸದ್ದಾಗದಂತೆ ನಿಧಾನವಾಗಿ  ಬಾಗಿಲು ತೆಗೆದು  ಕಣ್ಣು ಮುಚ್ಚಿ ಬಿಡುವುದರಲ್ಲಿ ತನ್ನ ಕೈಲಿದ್ದ ಕಾರದ ಪುಡಿಯನ್ನು ರಪ್ಪನೆ  ಎದುರಿದ್ದ ಆಕೃತಿಗಳತ್ತ ಎರಚಿ ” ಹಾಟ್ಗಾಳ್ ನನ್ ಮಕ್ಳ ನಿಮ್ಗೇನು ಅಕ್ಕ ತಂಗಿರಿಲ್ವೇನ್ರೋ…ಇವತ್ತು ನಿಮ್ಮ್ ರುಂಡನ ಚಂಡಾಡ್ಲಿಲ್ಲ ಅಂದ್ರೆ ಅಪ್ಪಂಗುಟ್ಟಿದ್ ಮಗ್ಳೆ ಅಲ್ಲ” ಎನ್ನುತ್ತಾ ಅವರತ್ತ ಬಿರುಸಾಗಿ ಕತ್ತಿ  ಬೀಸಿದಳು.

ಯಾರಿಗೂ ಗೊತ್ತಾಗ ಬಾರದೆಂದು ತಮ್ಮ ಸೊಂಟಕ್ಕೆ ಸುತ್ತಿಕೊಂಡಿದ್ದ   ಬಿಳಿ ಪಂಚೆ ಎತ್ತಿ ಮುಖದ ತುಂಬಾ ಗುಬುರು ಹಾಕಿಕೊಂಡು ಬಂದು ನಿಂತಿದ್ದ ಆ ಎರಡು ಗಂಡು ಆಕೃತಿಗಳು ತಮ್ಮ ತೆಳ್ಳನೆಯ ಪಂಚೆಯ ಸಂದಿನಿಂದಲೆ ಗಂಗೆಯ ರೌದ್ರಾವತಾರವನ್ನು  ಗಮನಿಸಿದರು. ಅಲ್ಲದೆ ಮುಖ ಮುಚ್ಚಿದ್ದ ಬಟ್ಟೆ ದಾಟಿ  ಕಣ್ಣಿನೊಳಕ್ಕೆ ಚಿಮ್ಮಿದ  ಕಾರದ ಪುಡಿಯ ಕಣದ ಉರಿ ಅವರನ್ನು ಮತ್ತಷ್ಟು ಕಂಗೆಡಿಸಲಾಗಿ ಸತ್ತೆವೊ ಕೆಟ್ಟೆವೊ ಎಂದು ಬಿದ್ದಂಬೀಳ ಓಡ  ತೊಡಗಿದವು. “ಎತ್ತಗೋಡ್ತಿರಿ ನಿಂತ್ಕೊಳ್ರೊ ಹಾದ್ರು ಬಡ್ಕ್ ನನ್ಮಕ್ಳ” ಎಂದು ಗಂಟಲು ಹರಿದು ಹೋಗುವಂತೆ ಚೀರುತ್ತಾ ತನ್ನ ಕೈಲಿದ್ದ ಮಚ್ಚನ್ನು  ಮತ್ತೊಮ್ಮೆ  ಬೀಸಿ ಒಗೆದಳು .

ಗಂಗೆಯ ಚೀರಾಟ ಕೇಳಿ ಅಕ್ಕ-ಪಕ್ಕದ ಮನೆಯವರೆಲ್ಲ ಹೊರಗೋಡಿ ಬಂದರು. ಮೇಗಳ  ಬೀದಿಯ ಆ ತಿರುವಿನಲ್ಲಿ ಬಾಯಿಗೆ ಬಂದಂತೆ ಬಯ್ಯುತ್ತಾ ರಣಚಂಡಿಯಂತೆ ಓಡುತ್ತಿದ್ದ  ಗಂಗೆಯನ್ನು ಹಿಂಬಾಲಿಸಿದ ಜನ, ಅವಳನ್ನು ಹಿಡಿದು ನಿಲ್ಲಿಸಿ ಏನು ಎತ್ತ ತಿಳಿದುಕೊಂಡು ತಾವು ಕೂಡ ವೀರಾವೇಶದಿಂದ ಅವಳೊಂದಿಗೆ ಕೈ ಜೋಡಿಸಿದರು. ಆದರೆ  ಅದ್ಯಾವ ಮಾಯದಲ್ಲೊ  ಆ ಎರಡು ಆಕೃತಿಗಳು ಬೇಲಿಸಾಲುಗಳ ನಡುವೆ ಮಂಗಮಾಯಾವಾಗಿ ಹೋಗಿದ್ದವು..

ಆದರೆ ಗಂಗೆ ಬೀಸಿದ್ದ ಮಚ್ಚಿಗೆ ಅಂಟಿದ್ದ ರಕ್ತ ಊರ ತುಂಬಾ ಒಂದು ದೊಡ್ಡ ಸಂಚಲನವನ್ನೇ ಉಂಟು ಮಾಡಿತು‌. ಮಚ್ಚಿನ ಮೇಲಿದ್ದ ಹೆಪ್ಪು ಗಟ್ಟಿದ ರಕ್ತವನ್ನು ಕಂಡ  ಕೆಲವು ಮಂದಿ ಅವಳ ಧೈರ್ಯ ಸ್ಥೈರ್ಯದ ಬಗ್ಗೆ  ಬಾಯಿ ತುಂಬಾ ಹೊಗಳಾಡಿದರೆ, ಒಳಗೊಳಗೆ ಅವಳಿಗಾಗಿ ಹಂಬಲಿಸುತ್ತಿದ್ದ ಕಚ್ಚೆಹರುಕ ಉಡಾಳರು ಇನ್ನೆಂದೂ ಆ ರಣಚಂಡಿಯ ಸುದ್ದಿಗೆ ಹೋಗಬಾರದೆಂದು ನಿರ್ಧರಿಸಿ ಗಪ್ಚುಪ್ ಆದರು. ಊರ ಹೆಂಗಸರಂತೂ ನಾ ಮುಂದು ತಾ ಮುಂದು ಎಂಬಂತೆ  ಆ ಘಟನೆಯನ್ನು ಪದೇ ಪದೇ ಕೇಳಿ ರೋಮಾಂಚಿತರಾದರು. ” ಹೆಣ್ಮಕ್ಳು ಅಂದ್ರೆ ನಿನ್ನಂಗಿರ್ಬೇಕು ಕನ್ ಗಂಗೂ… ನಮ್ ಹೆಣ್ ಹೈಕ್ಳುಗು ವಸಿ ಧೈರ್ಯ ತುಂಬವ್ವ… ” ಎಂದು ಬೆನ್ನು ತಟ್ಟಿದರು.

ಮೊದಲಿನಿಂದಲೂ ಗಂಗೆಯ  ಏಳು ಬೀಳುಗಳನ್ನು ನೋಡುತ್ತಲೇ ಬಂದಿದ್ದ ಪಕ್ಕದ ಮಾದಲಾಪುರ ಮಂಡಲ ಪಂಚಾಯ್ತಿ ಅಧ್ಯಕ್ಷರಾಗಿದ್ದ ಶಂಕರಪ್ಪನವರು ಅವಳ ಈ ಕಥೆಯನ್ನು ಕೇಳಿ ಮನೆಗೆ ಕರೆಸಿ ಮೆಚ್ಚುಗೆ ಸೂಚಿಸಿದರು. ಸಾಲದೆಂಬಂತೆ ತಿಂಗಳಿಗೆ ಇಂತಿಷ್ಟು ಸಂಬಳ ಎಂದು ಗೊತ್ತು ಮಾಡಿ, ಪ್ರತಿದಿನ ಸಂಜೆ  ಭಜನಾ ಮಂದಿರದಲ್ಲಿ ಸೇರುತ್ತಿದ್ದ ಗಂಡಸರು ಹೆಂಗಸರಿಗೆ ವಯಸ್ಕರ ಶಿಕ್ಷಣದ ಅಡಿಯಲ್ಲಿ ಪಾಠ ಮಾಡಬೇಕೆಂದು ನೇಮಿಸಿ ಮುಂಗಡವಾಗಿ ಒಂದಿಷ್ಟು  ಹಣ ಮತ್ತು ಪುಸ್ತಕಗಳನ್ನು ಅವಳ  ಕೈಗಿಟ್ಟರು….ಹೀಗೆ ಶಂಕರಪ್ಪನವರು ಕೈಗಿಟ್ಟ ಪುಸ್ತಕಗಳನ್ನು ಕಂಡು ಒಮ್ಮೆಗೆ ಬಾಲ್ಯಕ್ಕೆ ಜಾರಿದಳು ಗಂಗೆ.

ಏಳನೆ ತರಗತಿಗೆ ಮೈನೆರೆದವಳನ್ನು ಮನೆಯವರು  ಶಾಲೆ ಬಿಡಿಸಿ  ಅಡಿಗೆ ಕೋಣೆಗೆ ಹಾಕಿದ್ದರು. ಇವಳ ಓದಬೇಕು ಅನ್ನುವ ಹಠಮಾರಿತನಕ್ಕೆ ಮನೆಯವರ್ಯಾರೂ ಸೊಪ್ಪಾಕಿರಲಿಲ್ಲ. ಅಂತಹ ಸಮಯದಲ್ಲೆ ಅಣ್ಣ ಗಿರಿಧರ ತನ್ನ ಕಾಲೇಜಿನ ಲೈಬ್ರರಿಯಿಂದ ತಂದು ಓದುತ್ತಿದ್ದ ಕತೆ, ಕಾದಂಬರಿ ಪುಸ್ತಕಗಳು ಇವಳ ಕಣ್ಣಿಗೆ ಬಿದ್ದವು. ಇವಳು ಎಷ್ಟು ಗೋಗರೆದರು ಅವನು  ಪುಸ್ತಕಗಳನ್ನು ಮುಟ್ಟಿ ನೋಡಲು ಕೂಡ ಕೊಡುತ್ತಿರಲಿಲ್ಲ.  ಗಿರಿಧರ ತಾನು ಓದುತ್ತಿದ್ದ ಪುಸ್ತಕಗಳನ್ನು ಇವಳ ಕೈಗೆ ಸಿಗದಂತೆ  ಟ್ರಂಕಿಗೆ ಹಾಕಿ ಬೀಗ ಜಡಿದು, ಅದರ ಕೀಲಿಯನ್ನು ಬಚ್ಚಿಟ್ಟು ಹೋಗುತ್ತಿದ್ದ. ಈ ಕೀಲಿ ಇಡುವ ಜಾಗವನ್ನು ಕಂಡುಕೊಂಡಿದ್ದ ಗಂಗೆ, ಮನೆಯ ಎಲ್ಲಾ ಕೆಲಸದ ನಡುವೆಯೆ ಆ ಪುಸ್ತಕವನ್ನು ಅವನ ಟ್ರಂಕಿನಿಂದ ಎಗರಿಸಿ ದಮ್ಮು ಕಟ್ಟಿ  ಓದಿ, ಅವನು ಕಾಲೇಜು ಮುಗಿಸಿ ಬರುವುದರಲ್ಲಿ ಮತ್ತೆ ಟ್ರಂಕಿಗೆ ಸೇರಿಸಿ ಬಿಡುತ್ತಿದ್ದಳು.. ಹೀಗೆ ಒಮ್ಮೆ ಅವನ ಕೈಗೆ ಸಿಕ್ಕಿಬಿದ್ದು ದೊಡ್ಡ ರಣರಂಪವಾಗಿ ಇವಳ ಪುಸ್ತಕ ಓದುವ ಆಸೆಗೆ ಕಡಿವಾಣ ಬಿದ್ದಿತ್ತು.

ಇಷ್ಟಕ್ಕೆ ಸುಮ್ಮನಾಗದ ಗಂಗೆ ಅವನ ವಿರುದ್ಧ ಜಿದ್ದಿಗೆ ಬಿದ್ದಂತೆ ಯಾರಿಗೂ ತಿಳಿಯದ ಹಾಗೆ ಕಣಜದಲ್ಲಿದ್ದ ಬತ್ತ, ರಾಗಿಯನ್ನು ಕದ್ದು ಅಕ್ಕಪಕ್ಕದವರಿಗೆ ಮಾರಿ, ಸೋಪಾನಪೇಟೆಯ ಕಾಲೇಜಿಗೆ ಹೋಗುತ್ತಿದ್ದ ಕೆಳಗಿನ ಬಿದಿಯ ಕೃಷ್ಣ ಭಟ್ಟರ ಮಗಳು ಗಾಯಿತ್ರಿಯಿಂದ  ಕತೆ ಕಾದಂಬರಿ ಪುಸ್ತಕಗಳನ್ನು, ಮಂಗಳ ಮುಂತಾದ ವಾರಪತ್ರಿಕೆಗಳನ್ನು ತರಿಸಿಕೊಂಡು ಓದಿ ತಣಿಯ ತೊಡಗಿದ್ದಳು. ಅದರಲ್ಲೂ ಪತ್ತೆದಾರಿ ಕಾದಂಬರಿಗಳೆಂದರೆ  ಹುಚ್ಚೆದ್ದು ಓದುತ್ತಿದ್ದ ಗಂಗೆ ತನ್ನ ದಿನಚರಿಯಲ್ಲು ಒಂದು ಕತೆಯ ಅಥವಾ ಕಾದಂಬರಿಯ ಪಾತ್ರವಾಗಿಯೇ ಎದೆಗಾರಿಕೆಯಿಂದ ಓಡಾಡುತ್ತಿದ್ದಳು. ಹಾಗಾಗಿಯೆ ಅವಳಲ್ಲಿ ಕೆಚ್ಚು ರೊಚ್ಚು ಸಿಟ್ಟು ಸೆಡವು, ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಛಲವೆಲ್ಲ ಬಾಲ್ಯದಿಂದಲೇ ಮೈಗೂಡಿ ಬಿಟ್ಟಿತ್ತೇನೋ. ಮದುವೆ ನಂತರದ ಬದುಕಿನ ಹೊಡೆತದಲ್ಲಿ ತತ್ತರಿಸಿ  ತನ್ನನ್ನೇ ಕಳೆದುಕೊಂಡಿದ್ದ ಗಂಗೆ,  ಈಗ ಮತ್ತೆ ಎಚ್ಚೆತ್ತಂತೆ  ಬದುಕಿನೆದುರು ಮೈ ಕೊಡವಿ ನಿಂತಳು.

ವಯಸ್ಕರಿಗೆ ಪಾಠ ಮಾಡುವ ನೆಪದಲ್ಲಿ ಗಂಗೆ ಮತ್ತೆ ತನ್ನ ಇಷ್ಟದ ಓದನ್ನು ಆರಂಭಿಸಿದಳು.  ಮಾದಲಾಪುರ ಮತ್ತು ಸೋಪಾನ ಪೇಟೆಯ ಲೈಬ್ರರಿಯಲ್ಲಿದ್ದ ಪುಸ್ತಕಗಳೆಲ್ಲಾ ಇವಳ ಮನೆಯ ಹೊಸ ಅತಿಥಿಗಳಾಗಿ ಬಂದು ಹೋಗ ತೊಡಗಿದವು. ಪ್ರತೀ ರಾತ್ರಿ ತನ್ನಿಬ್ಬರು ಮಕ್ಕಳ ಕೈಹಿಡಿದು, ಚಂದಮಾಮಾನ ಕತೆ ಹೇಳುತ್ತಾ ಲಾಟೀನಿನ ಬೆಳಕಿನಲ್ಲಿ ಮಾದಲಾಪುರಕ್ಕೆ ಹೋಗಿ  ಅಲ್ಲಿ ಸೇರಿದ್ದ ವಯಸ್ಕ ಗಂಡಸರು ಹೆಂಗಸರಲ್ಲದೆ ಶಾಲೆ ಬಿಟ್ಟ ಹದಿಹರೆಯದವರನ್ನೂ ಒಟ್ಟು ಗೂಡಿಸಿ, ಅಕ್ಷರ ತಿದ್ದಿಸುವುದರಿಂದ ಹಿಡಿದು ತಾನು ಓದಿದ, ಕಂಡ, ಅನುಭವಿಸಿದ ಎಲ್ಲಾ ವಿಷಯಗಳನ್ನು ಕಥೆಯಾಗಿಸಿ ಹೇಳುತ್ತಾ ಅವರ ಕಷ್ಟಗಳಿಗೆ ಮಿಡಿದು, ನಕ್ಕು ನಗಿಸುತ್ತ ಬಹು ಬೇಗ ಅವರೆಲ್ಲರೊಳಗೊಬ್ಬಳಾಗಿ ಅವರ ಪ್ರೀತಿಗೆ ಪಾತ್ರಳಾದಳು.

ಈ ಕೆಲಸ ಗಂಗೆಯಲ್ಲಿ ವಿಶೇಷ ಧೈರ್ಯ ತುಂಬಿದ್ದು ಮಾತ್ರವಲ್ಲ  ಅವಳ  ಪುಟ್ಟ ಜಗತ್ತನ್ನು ಕೂಡ ವಿಸ್ತಾರಗೊಳಿಸಿತು. ವ್ಯಾವಹಾರಿಕವಾಗಿಯೂ ಪಳಗ ತೊಡಗಿದ ಗಂಗೆ, ಹೆಚ್ಚು ಕ್ರಿಯಾಶೀಲವಾಗಿದ್ದ ಸೋಪಾನಪೇಟೆಯ ಮಹಿಳಾ ಸಮಾಜದ ಸಂಪರ್ಕಕ್ಕೆ ಬಂದಳು.  ಅಲ್ಲಿ ನಡೆಯುತ್ತಿದ್ದ ವೇತನ ಸಹಿತ ಉಚಿತ ತರಬೇತಿಗಳಿಗೆ ತಾನೂ ಸೇರಿದಂತೆ  ನಾರಿಪುರ, ಗೌರಿಪುರ,  ಮಾದಲಾಪುರ ಮೊದಲಾದ ಅಕ್ಕಪಕ್ಕದ ಊರುಗಳ ಖಾಲಿ ಕೂತ ಹಲವು ಹೆಣ್ಣು ಮಕ್ಕಳನ್ನು ಹುರಿದುಂಬಿಸಿ ಅವರ ತಂದೆ ತಾಯಿಯರನ್ನು, ಗಂಡಂದಿರನ್ನು ಮನವೊಲಿಸಿ  ಟೈಲರಿಂಗ್, ಊದುಬತ್ತಿ,  ಮುಂತಾದ ಹಲವು ತರಬೇತಿಗಳಿಗೆ ಕರೆದುಕೊಂಡು ಹೋಗ ತೊಡಗಿದಳು.

ಕ್ರಮೇಣ ಎಲ್ಲರಿಗೂ ದಿನದ ಓಡಾಟಕ್ಕೆ ಸೋಪಾನ ಪೇಟೆಯ ದಾರಿ ದೂರ ಎನ್ನಿಸಿ ಒಬ್ಬೊಬ್ಬರೇ ರಾಗ ಎಳೆಯ ತೊಡಗಿದಾಗ  ಗಂಗೆ ತನ್ನೊಂದಿಗೆ ಓಡಾಡುತ್ತಿದ್ದ ಅಷ್ಟೂ  ಹೆಂಗಸರನ್ನು ಒಟ್ಟು ಗೂಡಿಸಿ ಊರ ಪಟೇಲರ ಸಮ್ಮತಿ ಪಡೆದು ಹಳೆ ನಾರಿಪುರದ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮಹಿಳಾ ಸಂಘವನ್ನು ಆರಂಭಿಸಿದಳು. ಅವಳ ಬೆನ್ನಿಗೆ ನಿಂತ ಸೋಪಾನ ಪೇಟೆಯ ಮಹಿಳಾ ಸಮಾಜದ ಗೆಳತಿಯರು ತಾವೆ ಮುಂದೆ ನಿಂತು ನಾರಿಪುರದ ಹೆಂಗಸರಿಗೆ ಸಣ್ಣಪುಟ್ಟ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುವ, ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಸಣ್ಣ ಊರಿನಲ್ಲಿ ಮತ್ತೊಂದು ಸಂಚಲನವನ್ನುಂಟು ಮಾಡಿದರು.

ಹೆಣ್ಣು ಮಕ್ಕಳ ಈ ಕೆಲಸವನ್ನು ಸಹಿಸದ ಅಲ್ಲಿನ ಎಷ್ಟೋ ಸಿನಿಕ ಗಂಡಸರು ಗಂಗೆ ಮತ್ತು ಮಹಿಳಾ ಸಂಘದ ವಿರುದ್ಧ ತಿರುಗಿ ಬಿದ್ದರು. ಅಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ನೂರಾರು ಕಿಡಿಗೇಡಿ ಹುನ್ನಾರಗಳನ್ನು ಹೆಣೆದು ಯಾವುದೂ ಫಲಿಸದೆ ಸೋತರು. ಗಂಗೆಯೊಂದಿಗೆ ಗಟ್ಟಿಯಾಗಿ ನಿಂತ ಊರ ಹೆಂಗಸರು ತಮ್ಮ ಗಂಡಸರ ಯಾವ ಹೂಂಕಾರ ಠೇಂಕಾರಗಳಿಗೂ ಅಂಜದೆ ವರ್ಷ ಒಪ್ಪತ್ತು ಎನ್ನುವುದರೊಳಗೆ ಊರಿನ ನಡು ಭಾಗದಲ್ಲಿ ಖಾಲಿ ಬಿದ್ದಿದ್ದ ಇಷ್ಟಗಲ ಸರ್ಕಾರಿ ಜಾಗದಲ್ಲಿ ಊದುಬತ್ತಿ ತಯಾರಿಸುವ ಒಂದು ಸಣ್ಣ ಘಟಕವನ್ನು ಆರಂಭಿಸಿ ಗೆದ್ದರು. ಅದಕ್ಕೆ ಒತ್ತಿಕೊಂಡಂತೆ ಮತ್ತೊಂದು ಸಣ್ಣ ಕೋಣೆ ನಿರ್ಮಿಸಿ ತಮ್ಮ ಮಕ್ಕಳಿಗೆ ಅಂಗನವಾಡಿಯನ್ನೂ ಆರಂಭಿಸಿದರು…..

ಇಷ್ಟಕ್ಕೆ ಸುಮ್ಮನೆ ಕೂರದ ಗಂಗೆ ಇದುವರೆಗೂ ವಾರ ಗುತ್ತಿಗೆಗೆ ಕೊಡುತ್ತಿದ್ದ ತನ್ನ ಜಮೀನನ್ನು ತಾನೇ ವಹಿಸಿಕೊಂಡು ಗೇಯ್ಮೆಗಿಳಿದಳು. ಅಣ್ಣಂದಿರು ಕಳ್ಳತನದಿಂದ ಮಾರಿಕೊಂಡ ತನ್ನ ಕಾವೇರಿ ಹಸುವಿನ ಸ್ಥಾನಕ್ಕೆ ಮತ್ತೊಂದು ಹಸುವನ್ನು ತಂದು ಕಟ್ಟಿ ತನ್ನ ಕೊರಗನ್ನು ನೀಗಿಕೊಂಡಳು. ಇದರ ನಡುವೆಯೇ, ಬೆಳೆಯುತ್ತಿದ್ದ ಮಕ್ಕಳ ಭದ್ರತೆಯ ದೃಷ್ಟಿಯಿಂದ  ಅದೇ ಊರಿನ ಕೆಳಗಿನ ಬೀದಿಯಲ್ಲಿದ್ದ ತುಸು ಸುಭದ್ರವೂ ವಿಶಾಲವೂ ಆದ ಮನೆಗೆ ಸ್ಥಳಾಂತರಗೊಂಡಳು.

ಗ್ರಾಮಪಂಚಾಯ್ತಿಯ ಚುನಾವಣೆಗೆ ನಿಲ್ಲಿಸಲು ಉಮೇದುತೋರಿದ  ಊರ ಹೆಂಗಸರ ಬಯಕೆಯನ್ನು  ನಯವಾಗಿ ತಳ್ಳಿ ಹಾಕಿದ ಗಂಗೆ, ಮಹಿಳಾ ಸಂಘಟನೆಯ ಮುಖಾಂತರ ಮತ್ತಷ್ಟು ತೀವ್ರವಾಗಿ ತನ್ನೂರಿನ  ಕೆಲಸದಲ್ಲಿ  ತೊಡಗಿಕೊಂಡಳು. ದಿನ ಬೆಳಗಾದರೆ  ಕುಡಿದು ಮನೆಯ ನೆಮ್ಮದಿಯನ್ನೆ  ಹಾಳುಮಾಡುತ್ತಿದ್ದ ಊರ ಗಂಡಸರ ಅಟ್ಟಹಾಸ ಕ್ರಮೇಣ ತಹಬದಿಗೆ ಬರ ತೊಡಗಿತು. ಕೋಳಿ ಕೂಗುವುದಕ್ಕೂ ಮುಂಚೆ  ನೀರಿನ ತಂಬಿಗೆ ಹಿಡಿದು, ಹೊಲ, ಗದ್ದೆಗಳತ್ತ ದೌಡಾಯಿಸುತ್ತಿದ್ದ ಹೆಂಗಸರು ಒಬ್ಬರಿಗೊಬ್ಬರು ಇಂಬಾಗಿ ನಿಂತು ಮನೆಗಳಲ್ಲಿಯೆ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದರು. ಅತ್ತೆ, ಮಾವನ ಕಾಟಕ್ಕಂಜಿ ಮಕ್ಕಳನ್ನು ಹೆರುವ ಮಿಷನ್‌ಗಳಂತಾಗಿದ್ದ ಸೊಸೆಯರೆಲ್ಲ ಈಗ ತಾವೇ ಮುಂದಾಗಿ  ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗಿ ಸುತ್ತಮುತ್ತಲ ಹಳ್ಳಿಗಳಲ್ಲಿಯೂ ಅರಿವು ಮೂಡಿಸ ತೊಡಗಿದರು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಿಂದಿನ ಕಂತು ಓದಿದ್ದೀರಾ? http://“ಯಾರುನ್ ಕೇಳಿ ಮೈ ಮುಟ್ಟಿದ್ಲಾ ಬಿಕ್ನಾಸಿ ನನ್ ಮಗ್ನೇ…” https://kannadaplanet.com/thanti-melina-nadige-72/

More articles

Latest article