Thursday, July 25, 2024

ಹುಚ್ಚು ದೊರೆಯ ಹತಾಶ ಮುಖಗಳು

Most read

ತನ್ನ ಆದೇಶ ಹಾಗೂ ಉದ್ದೇಶವನ್ನು ಮೀರಿ ಬೆಳೆಯುತ್ತಿರುವ ದೊರೆಯನ್ನು ಆರೆಸ್ಸೆಸ್ ಈ ಸಲ ಬೆಂಬಲಿಸುತ್ತಿಲ್ಲ. ಜೀ ಟಿವಿಯಂತಹ ಮಾಧ್ಯಮ ದೈತ್ಯ ಕಂಪನಿ ದೊರೆಗೆ ಕೊಟ್ಟ ಬೆಂಬಲದಿಂದ ಹಿಂದೆ ಸರಿದಿದೆ. ಸೋಲಿನ ಸುಳಿವರಿತ ಗೋದಿ ಮಾಧ್ಯಮಗಳು ಸಾವಕಾಶವಾಗಿ ಬಣ್ಣ ಬದಲಾಯಿಸುತ್ತಿವೆ. ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗರೇ ಹೆಚ್ಚು ಆಸಕ್ತಿ ತೋರುತ್ತಿಲ್ಲ.  ವಿರೋಧ ಪಕ್ಷಗಳೆಲ್ಲಾ ಒಂದಾಗಿ ನಿಂತಿವೆ. ಹೀಗಾಗಿ ಸೋಲಿನ ಹತಾಶೆ ಅತಿಯಾದಂತೆಲ್ಲಾ ದೊರೆಗೆ ಹುಚ್ಚು ಕೆರಳುತ್ತಲೇ ಇದೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ದೊರೆಗೆ ಹುಚ್ಚು ಹಿಡಿದಿದೆ. ಸೋಲಿನ ಭಯ, ಅಧಿಕಾರದಿಂದ ದೂರಾಗುವ  ಭಯ, ಜನಪ್ರಿಯತೆ ಜಾರಿ ಹೋಗಿರುವ ಭಯ, ಇಷ್ಟು ದಿನ ಕಟ್ಟಿಕೊಂಡ ಇಮೇಜ್ ಇತಿಹಾಸ ಸೇರೀತೆಂಬ ಭಯ, ಮುಂದೆ ಬಂದವರು ಹಿಂದೆ ಮಾಡಿದ ಹಗರಣಗಳ ಬಯಲು ಮಾಡಬಹುದೆಂಬ ಭಯ, ಮಾಡಿದ ಪಾಪಗಳು ಶಾಪವಾಗಿ ಕಾಡುವ ಭಯ, ದಶಕದಿಂದ ದೇಶಕ್ಕೆ ಮಾಡಿದ ಗಾಯಗಳು ವೃಣವಾಗಿ ಕಾಡುವ ಭಯ, ಅಗಣಿತ ಸುಳ್ಳುಗಳ ಅಂತರಂಗ ಬಹಿರಂಗವಾಗುವ ಭಯ..

ಸುಳ್ಳಿನ ಕಳಂಕಗಳೆಲ್ಲ ಒಟ್ಟು ಸೇರಿ ಸೋಲಿನ ಆತಂಕ ಹುಟ್ಟಿಸಿದ ಭಯ. ಹೀಗೆ ಭಯದ ಭೂತಗಳು ಬೆಂಬಿಡದೆ ಬೆನ್ನಟ್ಟಿದಂತೆಲ್ಲಾ ದೊರೆಗೆ ಹುಚ್ಚು ಹಿಡಿದಿದೆ. ಹುಚ್ಚು ಹೆಚ್ಚಾದಂತೆಲ್ಲಾ ಮೆದುಳಿನ ಮೇಲೆ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಮಾತಾಡುವ ಕಾಯಿಲೆ ಅತಿಯಾಗಿದೆ. ಹೀಗಾಗಿ ಮಹಾಪ್ರಭುವಿಗೆ ಹುಚ್ಚು ಹಿಡಿದಿದೆ ಎಂದು ಪ್ರಜೆಗಳಲ್ಲ ನೇಕರು ಮಾತಾಡಿ ಕೊಳ್ಳುತ್ತಿದ್ದಾರೆ. ದೊರೆಯ ಅಸಂಬದ್ಧ ನಡೆ ನುಡಿಗಳ ಕುರಿತು ಆಡಿಕೊಳ್ಳುತ್ತಿದ್ದಾರೆ.

ನಿಜವಾಗಿಯೂ ವಿಶ್ವಗುರುವಿನ ಪಿತ್ತ ನೆತ್ತಿಗೇರಿದೆಯಾ? ಗೊತ್ತಿಲ್ಲ. ಆದರೆ ಆ ಲಕ್ಷಣಗಳು ಢಾಳಾಗಿಯೇ ಗೋಚರಿಸುತ್ತಿವೆ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ಆದ ವಿಕ್ಷಿಪ್ತ ಬದಲಾವಣೆಗಳು ಹುಚ್ಚಿಗೆ ಸಾಕ್ಷಿ ಒದಗಿಸುತ್ತಿವೆ.

ಮೊದಲ ಹಂತದ ಮತದಾನ ಮುಗಿಯುವ ಮುನ್ನ “ಇಸ್ ಬಾರ್ ಚಾರ್ ಸೌ ಬಾರ್” ಎನ್ನುತ್ತಿದ್ದ ದೊರೆಗೆ ಅದೇನಾಯ್ತೋ ಗೊತ್ತಿಲ್ಲಾ ಎರಡನೇ ಹಂತದ ಚುನಾವಣಾ ಪ್ರಚಾರದ ಹೊತ್ತಿಗೆ ಚಾರ್ ಸೌ ಪಾರ್ ಹೋಗಿ ಕಾಂಗ್ರೆಸ್ ಗೆದ್ದರೆ… ಎಂದು ರಾಗ ಬದಲಾಗ ತೊಡಗಿತು. ಅಂದರೆ ಮೊದಲನೇ ಹಂತದ ಮತದಾನದಲ್ಲಿ ಸೋಲುವ ವಾಸನೆ ದೊರೆಯ ಇಂದ್ರಿಯಗಳಿಗೆ ಗೊತ್ತಾಯಿತು. ತದನಂತರ ಭಾಷಣದ ವರಸೆಯೇ ಬದಲಾಯಿತು. ಕಾಂಗ್ರೆಸ್ ಪಕ್ಷದ ಒಕ್ಕೂಟ ಗೆಲ್ಲಬಹುದೆಂಬ ಅವ್ಯಕ್ತ ಭೀತಿಯಿಂದ ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವುದಕ್ಕೇ ಭಾಷಣದ ಬಹುತೇಕ ಸಮಯವನ್ನು ದೊರೆಗಳು ಮೀಸಲಾಗಿಟ್ಟರು. ಮುಸ್ಲಿಂ ಸಮುದಾಯದ ಮೇಲೆ ಹಿಂದೂಗಳನ್ನು ಎತ್ತಿಕಟ್ಟಿ ಕಾಂಗ್ರೆಸ್ಸನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ದೊರೆಗಳು ತಮ್ಮ ಸಮಯವನ್ನು ಮೀಸಲಿಟ್ಟರು.

“ಎಸ್ಸಿ ಎಸ್ಟಿ ಓಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ” ಎಂದು ದೊರೆಗಳು ಹೇಳಿದ್ದನ್ನು ಕೇಳಿ ಕಾಂಗ್ರೆಸ್ ಪ್ರಣಾಳಿಕೆಯ ಮೂಲೆ ಮೂಲೆ ಹುಡುಕಿದರೂ ಈ ರೀತಿ ಎಲ್ಲಿಯೂ ಇರಲಿಲ್ಲ. ಆದರೂ ದೊರೆಗಳು ಸುಳ್ಳು ಹೇಳುವುದು ಬಿಡಲಿಲ್ಲ. “ಸಂಪತ್ತಿನ ಸಮಾನ ಹಂಚಿಕೆ ನೆಪದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂಗಳ ಆಸ್ತಿಯನ್ನು ಕಬಳಿಸಿ ಮುಸ್ಲೀಮರಿಗೆ ನೀಡುತ್ತದೆ” ಎಂದು ಮತ್ತೊಂದು ಸುಳ್ಳಿನ ಬಾಣವನ್ನು ದೊರೆಗಳು ಬಿಟ್ಟರಾದರೂ ಸಂವಿಧಾನದಲ್ಲಿ ಅದು ಸಾಧ್ಯವೇ ಇಲ್ಲ.

ಕೃಪೆ: ಸತೀಶ್‌ ಆಚಾರ್ಯ

ಈ ಸುಳ್ಳುಗಳು ಅಂದುಕೊಂಡಷ್ಟು ಸಂಚಲನ ಮೂಡಿಸದೇ ಇದ್ದಾಗ ಮಂಗಳಸೂತ್ರವನ್ನೇ ಭಾಷಣದಲ್ಲಿ ಪ್ರಭುಗಳು ಎಳೆದು ತಂದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಸೇರಿದಂತೆ ಜನರ ಚಿನ್ನ, ಆಸ್ತಿಯನ್ನು ಕಿತ್ತುಕೊಂಡು ಹೆಚ್ಚು ಮಕ್ಕಳು ಇರುವವರಿಗೆ, ನುಸುಳುಕೋರರಿಗೆ ಹಂಚುತ್ತದೆ ಹಾಗೂ ದೇಶದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ”  ಎಂದು ಹಸಿ ಸುಳ್ಳನ್ನು ಹೇಳಿ ಜನರ ಭಾವನೆಗಳನ್ನು ಪ್ರಚೋದಿಸಿದಾಗ ದೊರೆಯ ಹುಚ್ಚು ಉಲ್ಬಣವಾಗಿರುವ ಲಕ್ಷಣಗಳು ಕಾಣತೊಡಗಿದವು.

” ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬದಲಾಯಿಸುತ್ತದೆ. ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಲಾಗುತ್ತದೆ.  ದೇಶದ ಜನರ ಪಿತ್ರಾರ್ಜಿತ ಆಸ್ತಿ ಕರ 55% ತೆರಿಗೆ ಹೇರಲಿದೆ..” ಹೀಗೆ ಮತ್ತೆ ಮತ್ತೆ ಹತ್ತು ಹಲವು ಸುಳ್ಳುಗಳನ್ನು ಪುಂಖಾನುಪುಂಖವಾಗಿ ದೊರೆ ಭಾಷಣಿಸುತ್ತಾ ಸಾಗಿದ್ದನ್ನು ನೋಡಿ ಕೇಳಿ ಸ್ವತಃ ಬಿಜೆಪಿಗರೇ ಬೆಚ್ಚಿ ಬಿದ್ದರು. ಯಾಕೆಂದರೆ ಇವೆಲ್ಲವೂ ಸೋಲಿನ ಭೀತಿಗೊಳಗಾದ ದೊರೆಯ ಕಪೋಲ ಕಲ್ಪಿತ ಸುಳ್ಳುಗಳಾಗಿದ್ದವು.

” ಕಾಂಗ್ರೆಸ್ ನವರು ಶಿವಾಜಿ ಮಹರಾಜ್, ಕಿತ್ತೂರು ಚೆನ್ನಮ್ಮ, ಮೈಸೂರಿನ ದೊರೆಗಳನ್ನು ನಿಂದಿಸುತ್ತಾರೆಯೇ ಹೊರತು ನವಾಬರನ್ನು ಠೀಕಿಸುವುದಿಲ್ಲ, 2008 ರಲ್ಲಿ ಮುಂಬೈ ದಾಳಿ ಮಾಡಿದ ಉಗ್ರರ ಜೊತೆಗೆ ಕಾಂಗ್ರೆಸ್ ಸಂಪರ್ಕ ಇತ್ತು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉಗ್ರರಿಗೆ  ಪ್ರಧಾನಮಂತ್ರಿ ನಿವಾಸದಲ್ಲಿ ಸ್ವಾಗತ ಕೋರಲಾಗಿತ್ತು” ಎಂದು ಎಗ್ಗು ಸಿಗ್ಗಿಲ್ಲದೇ ಸುಳ್ಳುಗಳ ಸರಮಾಲೆ ಪೋಣಿಸಿ ದೊರೆಗಳು ಹೇಳಿದ್ದನ್ನು ಕೇಳಿದ ಜನರಿಗೆ ಅವರಿಗೆ ಬುದ್ಧಿ ಭ್ರಮಣೆ ಆಗಿದೆಯಾ ಎಂಬ ಸಂದೇಹ ಮೂಡತೊಡಗಿತು.

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಬರೀ ಮುಸ್ಲಿಮರೇ ಇರುತ್ತಾರೆ” ಎಂದು ಅತ್ಯಂತ ಹತಾಶೆಗೊಳಗಾಗಿ ದೊರೆ ಹೇಳಿದ ಯಾರೂ ನಂಬಲಾಗದ ಸುಳ್ಳನ್ನು ಕೇಳಿದಾಗ ಹುಚ್ಚು ನೆತ್ತಿಗೇರಿದ್ದು ದೃಢವಾಯಿತು. “ಕಳೆದ ಐದು ವರ್ಷಗಳಿಂದ ಆದಾನಿ ಅಂಬಾನಿಗಳನ್ನು ಪ್ರಶ್ನೆ ಮಾಡುತ್ತಿದ್ದ ರಾಹುಲ್ ಗಾಂಧಿ ಏಕಾಏಕಿ ಪ್ರಶ್ನೆ ಮಾಡುವುದನ್ನೇ ನಿಲ್ಲಿಸಿದ್ದೇಕೆ? ಹಣ ತುಂಬಿದ ಟೆಂಪೋಗಳು ಕಾಂಗ್ರೆಸ್ ಮನೆಗೆ ತಲುಪಿದೆಯಾ?” ಎಂದು ಹುಚ್ಚು ದೊರೆ ಬಹಿರಂಗವಾಗಿ ಪ್ರಶ್ನಿಸಿದಾಗ ಆರೆಸ್ಸೆಸ್ ನಾಯಕರೇ ಬೆಚ್ಚಿಬಿದ್ದರು. ಯಾಕೆಂದರೆ ದೊರೆಯ ಪಕ್ಷವನ್ನು ಸಾಕಿ ಸಲಹುತ್ತಿರುವುದೇ ಈ ಆದಾನಿ ಅಂಬಾನಿಗಳು. ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ದೇಣಿಗೆ ಕೊಟ್ಟಿದ್ದೇ ಈ ಕಾರ್ಪೋರೇಟ್ ಕುಳಗಳು. ಅವರ ಮೇಲೆಯೇ ಆರೋಪ ಮಾಡಿದರೆ ಅಚ್ಚರಿ ಆಗದೇ ಇದ್ದೀತೆ?. ಅಷ್ಟಕ್ಕೂ ರಾಹುಲ್ ಗಾಂಧಿ ತಮ್ಮ ಬಹುತೇಕ ಭಾಷಣಗಳಲ್ಲಿ ಆದಾನಿ ಅಂಬಾನಿಗಳ ಮೇಲೆ ಆರೋಪ ಮಾಡಿ ಟೀಕಿಸುತ್ತಲೇ ಇದ್ದಾರೆ. ಆದರೂ ಹಣ ಪಡೆದು ಪ್ರಶ್ನಿಸುತ್ತಿಲ್ಲ ಎಂಬ ಆರೋಪವೇ ಶತಮಾನದ ಸುಳ್ಳಾಗಿದೆ. ಇದನ್ನು ಬಿಜೆಪಿಗರು, ಸಂಘ ಪರಿವಾರಿಗರೂ ನಂಬಲು ಸಾಧ್ಯವಿಲ್ಲ. ಆದರೆ ಸೋಲಿನ ಭೀತಿಯಿಂದ ಬುದ್ಧಿಭ್ರಮಣೆಗೆ ಒಳಗಾದಂತೆ ಆಡುತ್ತಿರುವ ದೊರೆ ಮಾತ್ರ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಕೇಳಿದವರು ಅಪನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ. ಮತಗಳನ್ನು ತರಬಹುದೆಂದು ಹೇಳಲಾಗುವ ಸುಳ್ಳಗಳು ಜನರ ಮತಗಳಿಂದ ದೂರಾಗುವುದು ಮತದಾನದ ಹಂತಗಳಲ್ಲಿ ಗೋಚರವಾಗುತ್ತಿದೆ.

ಮಾಡಿದ ಅಭಿವೃದ್ದಿಯ ಕುರಿತು ಪ್ರಚಾರ ಮಾಡಿ ಮತಯಾಚಿಸುವುದನ್ನು ಬಿಟ್ಟು ಮತಾಂಧತೆಯನ್ನು ಪ್ರಚೋದಿಸುವ ಮೂಲಕ ಮತ ಕೇಳುತ್ತಿರುವುದು ಬಿಜೆಪಿ ಪಕ್ಷಕ್ಕೆ ಈ ಸಲ ದುಬಾರಿಯಾಗಲಿದೆ. ಆದರೆ ಹುಚ್ಚು ದೊರೆಗೆ ಕಾಂಗ್ರೆಸ್ ಗುಮ್ಮ ಪ್ರತಿಕ್ಷಣವೂ ಕಾಡುತ್ತಿದೆ. ಹೋದಲ್ಲಿ ಬಂದಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೇನು ಮಾಡುತ್ತೇನೆ ಎಂದು ಹೇಳುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲಾ ಆಗುತ್ತದೆ” ಎಂದು ಹೇಳುವುದರಲ್ಲೇ ದೊರೆ ಮಗ್ನನಾಗಿರುವುದು ನೋಡಿದರೆ ಹುಚ್ಚು ದೊರೆಗೆ ಕಾಂಗ್ರೆಸ್ ಸಿಂಡ್ರೋಮ್ ಕಾಯಿಲೆ ಬಂದಂತಿದೆ.

ಚಿತ್ರ ಕೃಪೆ: ವಾಟ್ಸ್ಯಾಪ್

ಬಹುಮತ ಗಳಿಸಲು ಬೇಕಾದಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿಯೇ ಇಲ್ಲ. ಕಾಂಗ್ರೆಸ್ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಗೆದ್ದರೂ ಬಹುಮತ ಪಡೆಯಲು ಸಾಧ್ಯವಿಲ್ಲ. ಇಂಡಿಯಾ ಅಲಯನ್ಸ್ ಪಕ್ಷಗಳು ಹೆಚ್ಚು ಸೀಟು ಗೆದ್ದಾಗ ಮಾತ್ರ ಬಹುಮತ ಸಾಧ್ಯ. ಕಾಂಗ್ರೆಸ್ ಪಕ್ಷವು ಇಂಡಿಯಾ ಘಟಬಂಧನ್ ಭಾಗವೇ ಹೊರತು ಇಡೀ ಘಟಬಂಧನ್ ಅಲ್ಲ. ಇಂಡಿಯಾ ಒಕ್ಕೂಟ ಬಹುಮತ ಪಡೆದು ಸರಕಾರ ರಚಿಸಿದರೂ, ರಾಹುಲ್ ಅಥವಾ ಖರ್ಗೆ ಪ್ರಧಾನ ಮಂತ್ರಿ ಆದರೂ ಏಕಪಕ್ಷೀಯವಾಗಿ ಕಾಂಗ್ರೆಸ್ ತನ್ನ ನಿಲುವುಗಳನ್ನು ಹೇರಲು ಸಾಧ್ಯವಿಲ್ಲ. ಹಾಗೆ ಹೇರಿದರೆ ಘಟಬಂಧನ್ ಉಳಿಯುವುದೂ ಇಲ್ಲ. ಇದು ಅಸಲಿ ಸತ್ಯ. ಆದರೂ ಹುಚ್ಚು ದೊರೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಭ್ರಮೆ ಹೆಚ್ಚಾಗಿದೆ. ಅದಕ್ಕೆ ಕಾಂಗ್ರೆಸ್ ಮೇಲೆ ಇಲ್ಲದ ಆರೋಪಗಳ ದಾಳಿ ಮಾಡಲಾಗುತ್ತಿದೆ. ವಿಶ್ವಗುರುವಿನ ಆತಂಕ, ಸೋಲುವ ಭಯಗಳನ್ನು ಗಮನಿಸಿದರೆ ಕಾಂಗ್ರೆಸ್ ನೇತೃತ್ವದ ಸರಕಾರ ಬರುವುದು ನಿಶ್ಚಿತವೆನಿಸುತ್ತದೆ. ಈ ಸತ್ಯವೇ ದೊರೆಯ ಹುಚ್ಚು ಹೆಚ್ಚಾಗಲು ಕಾರಣವಾಗಿದೆ. ತನ್ನನ್ನು ಸಾಕಿದವರನ್ನೇ ಕಚ್ಚಲು ಮುಂದಾದಂತಿದೆ.

ಇದರ ಜೊತೆಗೆ ದೊರೆಯ ಹುಚ್ಚಿಗೆ ಇನ್ನೂ ಹಲವು ಕಾರಣಗಳಿವೆ. ತನ್ನ ಆದೇಶ ಹಾಗೂ ಉದ್ದೇಶವನ್ನು ಮೀರಿ ಬೆಳೆಯುತ್ತಿರುವ ದೊರೆಯನ್ನು ಆರೆಸ್ಸೆಸ್ ಈ ಸಲ ಬೆಂಬಲಿಸುತ್ತಿಲ್ಲ. ಜೀ ಟಿವಿಯಂತಹ ಮಾಧ್ಯಮ ದೈತ್ಯ ಕಂಪನಿ ದೊರೆಗೆ ಕೊಟ್ಟ ಬೆಂಬಲದಿಂದ ಹಿಂದೆ ಸರಿದಿದೆ. ಸೋಲಿನ ಸುಳಿವರಿತ ಗೋದಿ ಮಾಧ್ಯಮಗಳು ಸಾವಕಾಶವಾಗಿ ಬಣ್ಣ ಬದಲಾಯಿಸುತ್ತಿವೆ. ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗರೇ ಹೆಚ್ಚು ಆಸಕ್ತಿ ತೋರುತ್ತಿಲ್ಲ.  ದೊರೆಯ ಮುಖವನ್ನು ತೋರಿಸಿ ಮತ ಗಳಿಸುತ್ತಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೂ ಮುಖದ ಪ್ರಭಾವಳಿ ಕಡಿಮೆಯಾಗಿದ್ದು ಗೊತ್ತಾಗಿದೆ. ವಿರೋಧ ಪಕ್ಷಗಳೆಲ್ಲಾ ಒಂದಾಗಿ ನಿಂತಿವೆ. ಹೀಗಾಗಿ ಸೋಲಿನ ಹತಾಶೆ ಅತಿಯಾದಂತೆಲ್ಲಾ ದೊರೆಗೆ ಹುಚ್ಚು ಕೆರಳುತ್ತಲೇ ಇದೆ. ಅವರ ಪ್ರತಿಯೊಂದು ಭಾಷಣದಲ್ಲೂ ಅದು ವ್ಯಕ್ತವಾಗುತ್ತಲೇ ಇದೆ. ದೊರೆತನದ ಘನತೆಯನ್ನೂ ಮರೆತು ಕ್ಷುಲ್ಲಕ ಮಾತುಗಳು ಭಾಷಣಗಳಾಗುತ್ತಿವೆ. ದೊರೆಯ ನೇತೃತ್ವದ ಪಕ್ಷದ ಹಡಗು ತನ್ನ ಸುಳ್ಳುಗಳ ಭಾರಕ್ಕೆ ಮುಳುಗುತ್ತಿದೆ. ಇಷ್ಟು ದಿನ ಜೊತೆಯಲ್ಲಿದ್ದವರೆಲ್ಲಾ ಕಂಗಾಲಾಗಿ ತಮ್ಮ ರಕ್ಷಣೆ ತಾವು ಮಾಡಿಕೊಳ್ಳಲು ತಯಾರಾಗಿದ್ದಾರೆ. ಕೊನೆಗೆ ಮುಳುಗಿದ ಟೈಟಾನಿಕ್ ಹಡಗಿನಲ್ಲೇ ಅಂತ್ಯಕಂಡ ಕ್ಯಾಪ್ಟನ್ ಗೆ ಬಂದ ಗತಿ ಹುಚ್ಚು ದೊರೆಗೂ ಬರಲಿದೆ. ಬರುತ್ತದೆ. ಬರಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article