Monday, May 20, 2024

ಸೋಲಿನ ಹಾದಿಯಲ್ಲಿ ಮೋದಿ?

Most read

ಮೋದಿಯವರು ಇತ್ತೀಚಿನ ದಿನಗಳಲ್ಲಿ ತಮ್ಮ ಸ್ಥಾನದ ಘನತೆ ಮರೆತು, ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತಾಡುತ್ತಿರುವುದಕ್ಕೆ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲದಿರುವುದೂ ಒಂದು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ ಶ್ರೀನಿವಾಸ ಕಾರ್ಕಳ.

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು? ಮೋದಿಯವರ ಪಕ್ಷದ ಗೆಲುವಿನ ಹಾದಿ ಸುಗಮವಿದೆಯೇ? ಇದನ್ನು ಊಹಿಸಲು ಭಾರೀ ಪಾಂಡಿತ್ಯದ ಅಗತ್ಯವಿಲ್ಲ. ಮೊದಲ ಮತ್ತು ಎರಡನೆ ಹಂತದ ಮತದಾನ ನಡೆದ ಬಳಿಕ ಮೋದಿಯವರ ಭಾಷಣದಲ್ಲಾದ ಬದಲಾವಣೆಗಳನ್ನು ಗಮನಿಸುತ್ತಾ ಹೋಗಿ. ಅಲ್ಲಿ ಒಂದು ಬಲವಾದ ಸೂಚನೆ ನಿಮಗೆ ಸಿಕ್ಕೀತು.

ಚುನಾವಣೆಯ ಆರಂಭದಲ್ಲಿ ವಿಪಕ್ಷ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಮೇಲೆ ಮಾತಿನ ಧಾಳಿ ನಡೆಸುತ್ತಿದ್ದರೂ, ಮೋದಿಯವರು ಅಲ್ಲಿ ಹಿಂದೂ ಮುಸ್ಲಿಂ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿರಲಿಲ್ಲ. ಭಾಷಣಗಳಲ್ಲಿ ಒಂದು ಮಟ್ಟಿನ ಸಭ್ಯತೆಯನ್ನು ಕಾಪಾಡಿ ಕೊಂಡಿದ್ದರು.

ತನ್ನ ‘ಅಬ್ ಕಿ ಬಾರ್ ಚಾರ್ ಸೌ ಪಾರ್’ (ಈ ಬಾರಿ ನಾಲ್ಕು ನೂರಕ್ಕೂ ಹೆಚ್ಚು) ಗುರಿ ಸಾಧನೆಗೆ ಅವರಿಗೆ ಕೇರಳ, ತಮಿಳುನಾಡುಗಳಲ್ಲಿ ಕೆಲವಾದರೂ ಸ್ಥಾನ ಗೆಲ್ಲಲೇಬೇಕಿತ್ತು. ಆದರೆ, ಕೇರಳ ಮತ್ತು ತಮಿಳುನಾಡು ಚುನಾವಣೆ ಮುಗಿದಾಗ ಬಂದ ಮಾಹಿತಿಗಳ ಪ್ರಕಾರ, ಅಲ್ಲಿ ಬಿಜೆಪಿಗೆ ಒಂದು ಸ್ಥಾನ ಸಿಗುವುದೂ ಕಷ್ಟ.

ಇದು ತಿಳಿಯುತ್ತಲೇ ಮೋದಿಯವರ ಭಾಷಣದ ಧಾಟಿಯೇ ಬದಲಾಯಿತು. ತಮ್ಮ ಮುಖವಾಡವನ್ನು ಕಳಚಿಟ್ಟ ಅವರು ಮತ್ತೆ ತಮ್ಮ ಕೋಮುವಾದಿ ಪುಸ್ತಕ ತೆರೆದರು. ಮೊಗಲರು, ಮುಸ್ಲಿಮರು, ಮುಸ್ಲಿಂ ಲೀಗ್, ಮಚಲಿ, ಮಟನ್, ಮಂಗಳ ಸೂತ್ರ ಎಲ್ಲವೂ ಅವರ ಭಾಷಣಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು.

ಈಗ ಮೂರನೇ ಹಂತ ಮುಗಿಯತ್ತಲೇ ಇನ್ನೂ ಉಗ್ರರಾಗಿರುವ ಮೋದಿಯವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರನ್ನು ತುಂಬಿಸುತ್ತಾರೆ, ಅದಾನಿ ಅಂಬಾನಿಯಿಂದ ಕಾಂಗ್ರೆಸ್ ಗೆ ಟೆಂಪೋ ತುಂಬಾ ಕಪ್ಪು ಹಣ ಬಂದಿದೆ, ರಾಷ್ಟ್ರಪತಿ ಮುರ್ಮುವನ್ನು ಕಾಂಗ್ರೆಸ್ ದ್ವೇಷಿಸಲು ಅವರ ಮೈ ಬಣ್ಣವೇ ಕಾರಣ ಎಂಬ ತೀರಾ ಆಕ್ಷೇಪಾರ್ಹ ಮಾತುಗಳ ಮಟ್ಟಕ್ಕೂ ತಲಪಿದರು. ಇದು ಅವರ ಹತಾಶೆಯನ್ನು ಬಿಂಬಿಸುವ ಜತೆಗೆ ಅವರ ಸೋಲಿನ ಸೂಚನೆಯನ್ನೂ ನೀಡುತ್ತಿದೆಯೇ?

ಪರಿಸ್ಥಿತಿ ಬಿಜೆಪಿಗೆ ಪ್ರತಿಕೂಲವಾಗುತ್ತಿದೆ

ಇದೀಗ ಮೂರನೇ ಹಂತದ ಮತದಾನ ಮುಗಿದಿದೆ. ದೇಶದ ಅರ್ಧದಷ್ಟು ಅಂದರೆ 293 ಸ್ಥಾನಗಳಲ್ಲಿ ಮತದಾನ ಮುಗಿದಿದೆ. ಲಭ್ಯ ಸಂಕೇತಗಳನ್ನು ಗಮನಿಸಿದರೆ 400 ಬಿಡಿ, 300 ಸ್ಥಾನ ಕೂಡಾ ಬಿಜೆಪಿಗೆ ಕಷ್ಟವಾಗುತ್ತಿದೆ.

ಖ್ಯಾತ ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಹೇಳುವ ಪ್ರಕಾರ, ಒಡಿಶಾ ಕರಾವಳಿಯಿಂದ ಕೇರಳ ತನಕ ಬಿಜೆಪಿಗೆ ಮತಗಳ ಲಾಭ ಆಗಬಹುದು. ಆದರೆ ಸೀಟುಗಳ ಲಾಭವಾಗಲಾರದು. ಉತ್ತರ ಮತ್ತು ಪಶ್ಚಿಮದ ಹಿಂದಿ ಪಟ್ಟಿಯಲ್ಲಿ ಗುಜರಾತ್ ಕೂಡಾ ಸೇರಿದ್ದು ಈ ರಾಜ್ಯಗಳು ಬಿಜೆಪಿಯು ಧೂಳೀಪಟವಾಗದಂತೆ ನೋಡಿಕೊಳ್ಳಬಹುದು. ಇಲ್ಲೂ ಕೂಡಾ ವಿಪಕ್ಷಗಳು ತಮ್ಮ ರಣನೀತಿಯನ್ನು ಸರಿಯಾಗಿ ಬಳಸಿದರೆ ಬಿಜೆಪಿಯಿಂದ ಒಂದಷ್ಟು ಸೀಟುಗಳನ್ನುಕಸಿದುಕೊಳ್ಳಬಹುದು.

ಮೂರನೇ ಪಟ್ಟಿಯಲ್ಲಿ ‘ಬ್ಯಾಟಲ್ ಗ್ರೌಂಡ್ ಸ್ಟೇಟ್ಸ್’ (ತೀವ್ರ ಹಣಾಹಣಿಯಿರುವ ರಾಜ್ಯಗಳು) ಎನ್ನಲಾಗುವ ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಮತ್ತು ಬಂಗಾಳದಂತಹ ದೊಡ್ಡ ರಾಜ್ಯಗಳಿದ್ದು, ಇಲ್ಲಿ ಬಿಜೆಪಿಗೆ ಮರ್ಮಾಘಾತವಾಗಲಿದೆ. ಬಂಗಾಳದಲ್ಲಿ ಇಂಡಿಯಾ ಮೈತ್ರಿ ಏರ್ಪಡದ ಕಾರಣ ಬಿಜೆಪಿ ಹಿಂದೆ ಗಳಿಸಿದ್ದ 18 ಸ್ಥಾನಗಳಿಗೆ ದೊಡ್ಡ ತೊಂದರೆಯಾಗಲಾರದು. ಆದರೆ ಕರ್ನಾಟಕ, ಮಹಾರಾಷ್ಟ್ರ, ಬಿಹಾರಗಳಲ್ಲಿ ತಲಾ ಹತ್ತು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡರೂ ಬಹುಮತದ 272 ರ ಗೆರೆಗಿಂತ ಅದು ಕೆಳಗೆ ಬರುತ್ತದೆ.

ಕರ್ನಾಟಕ, ಮಹಾರಾಷ್ಟ್ರ, ಬಿಹಾರ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ, ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇರುವುದು ಮತ್ತು ಆಂತರಿಕ ಕಚ್ಚಾಟ ಇತ್ಯಾದಿಗಳಿಂದಾಗಿ ಬಿಜೆಪಿಯು 2019 ರಲ್ಲಿ ಗಳಿಸಿದ ಸ್ಥಾನಗಳಲ್ಲಿ (28 ರಲ್ಲಿ 25) ಅರ್ಧದಷ್ಟನ್ನು ಕಳೆದುಕೊಳ್ಳಬಹುದಾದರೆ, ಮಹಾರಾಷ್ಟ್ರದಲ್ಲಿ ಅದು ತೀವ್ರ ಮುಖಭಂಗ ಅನುಭವಿಸಲಿದೆ. ಅಲ್ಲಿ ಒಟ್ಟು 48 ಸ್ಥಾನಗಳಿದ್ದು, ಹಿಂದೆ ಉದ್ಧವ್ ರ ಶಿವಸೇನೆಯೊಂದಿಗೆ ಮೈತ್ರಿ ಹೊಂದಿದ್ದಾಗ ಅವೆರಡೂ ಪಕ್ಷಗಳು ಜಂಟಿಯಾಗಿ 42 ಸ್ಥಾನಗಳನ್ನು ಗೆದ್ದಿದ್ದವು. ಈಗ ಉದ್ಧವ್ ಪ್ರತ್ಯೇಕಗೊಂಡಿದ್ದಾರೆ ಮತ್ತು ಮೋದಿ ಹಾಗೂ ಶಾ ಉದ್ಧವ್ ಸರಕಾರವನ್ನು ಉರುಳಿಸಿದ್ದರಿಂದ ಜನರು ಬಿಜೆಪಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಮರಾಠಾ ಮೀಸಲಾತಿಯ ವಿಷಯದಲ್ಲಿಯೂ ಜನರ ಸಿಟ್ಟಿಗೆ ಈಡಾಗಿದೆ. ಮರಾಠಾವಾಡ ಪ್ರದೇಶಗಳಲ್ಲಿ ಬಿಜೆಪಿ ನಾಯಕರನ್ನು ಜನರು ಅಟ್ಟಾಡಿಸಿದ ಬಗ್ಗೆ ವರದಿಗಳು ಬಂದಿವೆ. ಈ ಅರ್ಥದಲ್ಲಿ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ನಷ್ಟವಾಗಲಿದೆ. 48 ರಲ್ಲಿ ‘ಮಹಾ ವಿಕಾಸ ಅಗಾಡಿ’ 30 ನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಬಿಹಾರದಲ್ಲಿ 2019 ರಲ್ಲಿ ಎನ್ ಡಿ ಎ 40 ರಲ್ಲಿ 39 ನ್ನು ಗೆದ್ದಿತ್ತು. ಈಗ  ನಿತೀಶರ ಜೆಡಿಯು ಬಿಜೆಪಿಗೆ ಒಂದು ದೊಡ್ಡ ಹೊರೆಯಾಗಿದೆ. ಅಲ್ಲಿ ತೇಜಸ್ವಿ ಯಾದವ್ ಅವರ ಆರ್ ಜೆ ಡಿ ದಿನೇ ದಿನೇ ಬಲಗೊಳ್ಳುತ್ತಿದೆ. ಅವರ ಚುನಾವಣಾ ಸಭೆಗಳಿಗೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ. ಬಿಹಾರದಲ್ಲಿ ಬಿಜೆಪಿಗೆ ಹೆಚ್ಚಿನ ನಷ್ಟವಾಗಲಾರದು. ಆದರೆ ಅದರ ಮೈತ್ರಿ ಪಕ್ಷ ಜೆಡಿಯು ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಉತ್ತರ ಬಿಹಾರದಲ್ಲಿ ಬಿಜೆಪಿಗೆ ಒಳ್ಳೆಯ ಅವಕಾಶವಿದ್ದರೆ, ದಕ್ಷಿಣ ಬಿಹಾರ ಪೂರ್ತಿಯಾಗಿ ಆರ್‍ ಜೆ ಡಿ ಯತ್ತ ವಾಲಿದೆ. ಹಾಗಾಗಿ ಬಿಹಾರದಲ್ಲಿ ಎನ್ ಡಿ ಎ 25 ಅಥವಾ 30 ರ ಗಡಿ ದಾಟದು ಎಂದು ಅಂದಾಜಿಸಲಾಗಿದೆ.

ರಾಜಸ್ಥಾನ, ಉತ್ತರಪ್ರದೇಶ

ದೇಶದ ಅರ್ಧದಷ್ಟು ಭಾಗದಲ್ಲಿ ಚುನಾವಣೆ ಮುಗಿದ ಬಳಿಕ ಕಂಡು ಬಂದ ಸಂಗತಿಯೇನೆಂದರೆ, ಈ ಬ್ಯಾಟಲ್ ಗ್ರೌಂಡ್ ರಾಜ್ಯಗಳಿಗೆ ಈಗ ರಾಜಸ್ಥಾನ, ಉತ್ತರಪ್ರದೇಶ, ಹರ್ಯಾಣ ಕೂಡಾ ಸೇರಿಕೊಂಡಿವೆ. 2019 ರಲ್ಲಿ ಬಿಜೆಪಿಯು ರಾಜಸ್ಥಾನದಲ್ಲಿ ಎಲ್ಲ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ರಜಪೂತ ಸಿಟ್ಟು, ಅಗ್ನಿವೀರ, ರೈತ ಹೋರಾಟ ಇತ್ಯಾದಿ ಅನೇಕ ಕಾರಣಗಳಿಂದ ಅಲ್ಲಿ ಬಿಜೆಪಿಗೆ 8 ರಿಂದ 10 ಸ್ಥಾನಗಳು ನಷ್ಟವಾಗಲಿವೆ.

ಉತ್ತರ ಪ್ರದೇಶದಲ್ಲಿ ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಬಿಜೆಪಿಗೆ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಮತದಾನ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ಬಾರಿ ಬಿಜೆಪಿ ಮೈತ್ರಿಕೂಟ 80 ರಲ್ಲಿ 64 ಸ್ಥಾನವನ್ನು ಗೆದ್ದಿದ್ದರೆ, ಈ ಬಾರಿ ಅದು ಸ್ಥಾನ ಹೆಚ್ಚಿಸಿಕೊಳ್ಳುವ ಬದಲು ಕಳೆದುಕೊಳ್ಳುವತ್ತ ಸಾಗಿದೆ. ಹಳ್ಳಿಗಾಡಿನ ಜನರನ್ನು ಮಾತನಾಡಿಸಿದರೆ ಇದು ಅರ್ಥವಾಗುತ್ತದೆ ಎಂದು ಯೋಗೇಂದ್ರ ಯಾದವ್ ಹೇಳುತ್ತಾರೆ. ಜನರಿಗೆ ಉದ್ಯೋಗ ಮತ್ತು ಬೆಲೆ ಏರಿಕೆಯ ಮುಂದೆ ಮಂದಿರ, ಧರ್ಮ ಮೊದಲಾದ ವಿಷಯಗಳು ಗೌಣವಾಗಿವೆ. ಜನರು ಈಗ ಮೋದಿಯವರ ಹತ್ತು ವರ್ಷಗಳ ಆಡಳಿತದ ಲೆಕ್ಕ ಕೇಳಲಾರಂಭಿಸಿದ್ದಾರೆ.

ರೈತ ಹೋರಾಟಗಾರರು ದೆಹಲಿ ಗಡಿಯೊಳಗೆ ಪ್ರವೇಶಿಸದಂತೆ ತಡೆ

ಹರ್ಯಾಣದ 10 ರಲ್ಲಿ 10 ಸ್ಥಾನವನ್ನೂ ಈ ಹಿಂದೆ ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಮತ್ತೆ ರೈತ ಹೋರಾಟವನ್ನು ಸರಕಾರ ನಿಭಾಯಿಸಿದ ರೀತಿಯಿಂದಾಗಿ ಅದು ದೊಡ್ಡ ಪ್ರಮಾಣದ ಸೋಲು ಅನುಭವಿಸಲಿದೆ. ಇದಕ್ಕೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ದಿಲ್ಲಿ ಮೊದಲಾದ ರಾಜ್ಯಗಳಲ್ಲಿಯೂ ಆಗಲಿರುವ ಕೆಲವು ಸೀಟುಗಳ ನಷ್ಟವನ್ನು ಸೇರಿಸಿದರೆ, ಮತ್ತು ಗಾಳಿ ಹೀಗೆಯೇ ಬೀಸಿದರೆ, ಬಿಜೆಪಿ ಬಿಡಿ, ಎನ್ ಡಿ ಎ ಕೂಡಾ ಬಹುಮತದ ಗೆರೆ ದಾಟಲಾರದು.

ಮೋದಿಯವರು ಇತ್ತೀಚಿನ ದಿನಗಳಲ್ಲಿ ತಮ್ಮ ಸ್ಥಾನದ ಘನತೆ ಮರೆತು, ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತಾಡುತ್ತಿರುವುದಕ್ಕೆ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲದಿರುವುದೂ ಒಂದು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅದೇನೇ ಇರಲೀ, ದೇಶದ ಶಾಂತಿ ಸಾಮರಸ್ಯಕ್ಕೆ ವಿರುದ್ಧವಾಗಿರುವ ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಸೋಲಾಗುವ ಸಾಧ್ಯತೆ ಇರುವುದು ಹೌದೇ ಆದರೆ, ಇದು ಭಾರತದ ಪ್ರಜಾತಂತ್ರದ ಪಾಲಿಗೆ ಒಂದು ಆಶಾದಾಯಕ ಬೆಳವಣಿಗೆಯೇ ಸರಿ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಪಶ್ಚಿಮ ಬಂಗಾಳದ ಸಂದೇಶಖಾಲಿ ಹಗರಣ: ಬಿಜೆಪಿ ಪಿತೂರಿಯೇ ಕಾರಣ

More articles

Latest article