Thursday, July 25, 2024

“ಯಾರುನ್ ಕೇಳಿ ಮೈ ಮುಟ್ಟಿದ್ಲಾ ಬಿಕ್ನಾಸಿ  ನನ್ ಮಗ್ನೇ…”

Most read

(ಈ ವರೆಗೆ…) ದನವನ್ನು ತನ್ನ ಅಣ್ಣ ತಮ್ಮಂದಿರೇ ಮಾರಿದ ಸುಳಿವು ಸಿಕ್ಕಿ ಗಂಗೆ ಮನೆಗೆ ಹೋಗಿ ಗಲಾಟೆ ಮಾಡುತ್ತಾಳೆ. ಸಿಟ್ಟಿಗೆದ್ದ ಚಂದ್ರಹಾಸ ಗಂಗೆಯನ್ನು ಇನ್ನಿಲ್ಲದಂತೆ ಥಳಿಸುತ್ತಾನೆ. ಪ್ರತಿಬಾರಿಯೂ ಗಂಡುಮಕ್ಕಳ ಪರ ವಹಿಸಿಯೇ ಮಾತಾಡುವ ಅಮ್ಮನನ್ನು ತನ್ನ ಮನೆಯಿಂದ ಕಳಿಸುತ್ತಾಳೆ. ಹೇಗೋ ಸುಧಾರಿಸಿ ಕೊಳ್ಳುವಷ್ಟರಲ್ಲಿ ಅಪ್ಪಜ್ಜಣ್ಣ ಮನೆ ಬಿಟ್ಟು ಹೋಗುತ್ತಾನೆ. ಗಂಗೆಯ ಮುಂದಿನ ಆಯ್ಕೆ ಏನು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆಯ 72ನೇ ಕಂತು.

ಅಪ್ಪಜ್ಜಣ್ಣನೇನೋ  ತಾನು ಗಂಗೆಗೆ ಹೊರೆಯಾಗಬಾರದೆಂದೆಣಿಸಿ ತನ್ನ ಎಂಟ್ಹತ್ತು ವರ್ಷಗಳ  ಸಂಬಂಧವನ್ನು ಕಡಿದುಕೊಂಡು ನೀಸೂರಾಗಿ ನಡೆದು ಬಿಟ್ಟ. ಆದರೆ ಇತ್ತ ಗಂಗೆಯ ಪರಿಸ್ಥಿತಿ ಮತ್ತೊಂದು ಮಗ್ಗುಲಿಗೆ ಹೊರಳಿ ಸಮಸ್ಯೆಗಳ ಸುರುಳಿ‌ಯೇ ಬಿಚ್ಚಿ ಹೆಬ್ಬಾವಿನಂತೆ ಬಾಯಿ ತೆರೆದು ಕೂತಿತ್ತು.

ಹೆಡ್ಡನೊ ದಡ್ಡನೊ ಇದ್ದ ಒಂದು ಗಂಡು ಜೀವದ ನೆರಳೂ ಇಲ್ಲವಾಗಿ, ಬೆಳಗು ರಾತ್ರಿಯಾಗುವುದರಲ್ಲಿ ಊರ ಕಾಮುಕ ಕಣ್ಣುಗಳು ಅವಳ ಮನೆಯ ಸುತ್ತ ಗಿರಕಿ ಹೊಡೆಯ ತೊಡಗಿದವು. ನಟ್ಟ ನಡುರಾತ್ರಿ ಕೇಳಿಬರುತ್ತಿದ್ದ ಬಾಗಿಲು ಬಡಿತದ ಸದ್ದು, ಜಂಜಾಟ ಮರೆತ ಅವಳ ಸಕ್ಕರೆಯಂತಹ  ಸವಿ ನಿದ್ದೆಗೆ ಕನ್ನವಿಕ್ಕಿ  ಅವಳ ಇಡಿ ಜೀವವನ್ನು ಬಾಯಿಗೆ ತರಿಸುತ್ತಿತ್ತು.  ಬಗಲಿಗೆ ಮಲಗಿದ್ದ ತನ್ನೆರಡು  ಗುಬ್ಬಿ ಮರಿಗಳನ್ನು ಅವುಚಿ ರೆಪ್ಪೆ ಮಿಟುಕಿಸದೆ ಚಾತಕ ಪಕ್ಷಿಯಂತೆ ಬೆಳಗಿಗಾಗಿ ಕಾಯುವುದೇ ಅವಳ ಪ್ರತಿ ರಾತ್ರಿಯ ಕೆಲಸವಾಗಿ ಹೋಯಿತು.

ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದಾಗ  ಗರಿಕೆದರುತ್ತಿದ್ದ ಅವಳ ಧೈರ್ಯವೆಲ್ಲ ಸಂಜೆ ಸೂರ್ಯ ಮುಳುಗುವ ಹೊತ್ತಿಗಾಗಲೇ ಪುಕ್ಕ ತರಿದ ಹಕ್ಕಿಯಂತಾಗಿ ಮುರುಟಿ ಬೀಳುತ್ತಿತ್ತು. ಭಯಗೊಂಡ ಎದೆ ಮಂಜುಗಟ್ಟಿದಂತೆ ನಿಶ್ಚಲವಾಗಿ ಕೊರೆಯುತ್ತಿತ್ತು.

ಕೈಗೆ ಸಿಗದ ಗಂಗೆಯಿಂದಾಗಿ ನಿರಾಸೆಗೊಂಡ ಕಾಮಾಂಧರು ಮತ್ತು ಊರ ಬಾಯಿ ಚಪಲಿಗರು ಲೊಟ್ಟೆ ಹೊಡೆಯುತ್ತಾ ಕಾರ್ಗತ್ತಲ ರಾತ್ರಿಯಲ್ಲಿ ಮಿಂಚಿ ಮರೆಯಾಗುತ್ತಿದ್ದ ಆಕೃತಿಗಳ ಸುತ್ತ ವಿಕೃತ ಕತೆ ಹೊಸೆದು ಚಪ್ಪರಿಸಿ ಮನಸ್ಸೊ ಇಚ್ಛೆ ತಣಿದು ನಿರಾಳಾಗುತ್ತಿದ್ದರು…

ಇಷ್ಟು ಸಾಲದೆಂಬಂತೆ ಗಂಗೆ ಕೆಲಸ ಮಾಡುತ್ತಿದ್ದ ಕಾಫಿ ಕಂಪನಿಯಲ್ಲಿ ಹೊಸ ರೀತಿಯ ವರಾತಗಳು ಶುರುವಿಟ್ಟು ಕೊಂಡವು. ಅವಳು ಬೆಳಗಿನಿಂದಲೂ ಆರಿಸಿ ಬೇರ್ಪಡಿಸಿಟ್ಟ ಚೀಲಗಟ್ಟಲೆ ಕಾಫಿ ಬೀಜಗಳು ಮುಂದಿನ ಹಂತಕ್ಕೆ ಹೋಗದೆ ಇಲ್ಲಸಲ್ಲದ ನೆಪ ಹೊತ್ತು ಮತ್ತೆ ಇವಳ ಮುಂದೆ ಬಂದು ಬೀಳುತ್ತಿದ್ದವು. ನೋವಿನಿಂದ ಹಣ್ಣಾದ ಕುತ್ತಿಗೆ ಸೊಂಟ ಹಿಡಿದು ಮತ್ತೆ ಆರಿಸಿ, ಕೇರಿ, ತುಂಬಿಸಿ, ತುಂಬಿದ ಮೂಟೆಯನ್ನು ಬೆನ್ನಿಗೆ ಹೊತ್ತು ಸಾಗಿಸಿ,  ಹೀಗೆ ಮಾಡಿದ್ದೆ ಕೆಲಸವನ್ನು ಮತ್ತೆ ಮತ್ತೆ ಮಾಡಿಸಿ ಅಂದಿನ ಕೂಲಿ ಮೇಲಕ್ಕೇರದಂತೆ ನೋಡಿಕೊಳ್ಳುತ್ತಿದ್ದ ರೈಟರ್  ಕಾರ್ಯಪ್ಪ ಮತ್ತವನ ತೆವಲಿಗ ಚೇಲಗಳ ಕುತಂತ್ರದಲ್ಲಿ ಗಂಗೆ ಸವೆಯ ತೊಡಗಿದಳು.

“ಲೇ ಗಂಗೂ ಚಡ್ತ ಬುಟ್ಟು ವಸಿ ರೈಟ್ರುಗಳು  ಹೇಳ್ದಂಗೆ ಕೇಳು ಯಾಕೆ ಕಾಫಿ ಬೀಜ ಮುಂದುಕ್ಹೋಗಕ್ಕಿಲ್ಲ ನೋಡು ಬೇಕಾರೆ” ಎಂದು ಕಿಸಕ್ಕನೆ ಹಲ್ಲು ಕಿಸಿದು ಕಣ್ಣು ಮಿಟುಕಿಸುತ್ತಿದ್ದ ಜೊತೆಗಾರ್ತಿಯರ ಮುಳ್ಳಿನ ಮೊನೆಯಂತಹ ಮಾತುಗಳು ಗಂಗೆಯನ್ನು ತಿವಿದು ತಿವಿದು ಘಾಸಿಗೊಳಿಸುತ್ತಿದ್ದವು. ಆದರೂ ಗಂಗೆ ಈ ಯಾವುದಕ್ಕೂ ಜಗ್ಗದೆ ಅವರು ಕೊಟ್ಟಷ್ಟೂ ಕೆಲಸವನ್ನು ಯಾವ ಭಾವವನ್ನು ವ್ಯಕ್ತಪಡಿಸದೆ ಕೊರಡಂತೆ ಮಾಡಿ ಕೊಟ್ಟಷ್ಟು ಕೂಲಿ ತೆಗೆದುಕೊಂಡು ಬರುತ್ತಿದ್ದಳು…

ಅವತ್ತೊಂದು ದಿನ ಬೆಳಂ ಬೆಳಗ್ಗೆಯೇ ಹಠ ಹಿಡಿದು ಕೂತ ತನ್ನ ಹಿರಿಕೂಸು ಯಶಿಯನ್ನು ಸಂಭಾಳಿಸಿ ತುಸುವೆ ತಡವಾಗಿ ಕಾಫಿ ಕಂಪೆನಿ ಹೊಕ್ಕ ಗಂಗೆಯನ್ನು ಎದುರುಗೊಂಡ ರೈಟರ್ ಕಾರ್ಯಪ್ಪ, ಎಲ್ಲರೆದುರು ಅವಳನ್ನು ಹಿನಾಮಾನವಾಗಿ ಬೈದು ತನ್ನ ಕೋಣೆಗೆ ಬಂದು ತಪ್ಪೊಪ್ಪಿಗೆ ಚೀಟಿ ಬರೆದು ಕೊಟ್ಟು ಹೋಗುವಂತೆ ತಾಕೀತು ಮಾಡಿ ಹೋದ. ಇರುವ ಕೆಲಸವೂ ಕೈತಪ್ಪಿ ಮಕ್ಕಳು ಹಸಿದು ಬಿದ್ದರೆ ಎನ್ನುವ ಭಯ ಮತ್ತು  ತನಗೆ ಇದರ ಹೊರತಾಗಿ ಬೇರೆ ಯಾವ ಕೆಲಸವನ್ನು ಮಾಡಲು ಬರುವುದಿಲ್ಲ ಎನ್ನುವ ಅಳುಕು ಅವಳನ್ನು ಈ ಎಲ್ಲಾ ಕಿರಿಕಿರಿಗಳನ್ನು ಸಹಿಸಿ  ಬಾಯಿ ಮುಚ್ಚಿ ನಡೆಯುವಂತೆ ಮಾಡಿತ್ತು. ಹಾಗಾಗಿ ಅತ್ತು ಕೆಂಪಾದ ಮುಖವನ್ನು ಸೆರೆಗ ತುದಿಯಲ್ಲಿ ಮರೆಮಾಡಿಕೊಂಡು ಕಾರ್ಯಪ್ಪನ ಮುಂದೆ ಬಂದು ನಿಂತಳು ಗಂಗೆ.

ತನ್ನ ಕೋಣೆಯಲ್ಲಿ ಚಡಪಡಿಸುತ್ತಾ ಓಡಾಡುತ್ತಿದ್ದ ರೈಟರ್ ಕಾರ್ಯಪ್ಪ ತಲೆತಗ್ಗಿಸಿ ಬಂದು ನಿಂತ ಗಂಗೆಯನ್ನು ಮೇಲಿನಿಂದ ಕೆಳಗಿನವರೆಗೂ ತದೇಕವಾಗಿ ನೋಡಿದ. ಮಕ್ಕಳಂತೆ ಒಳಗೊಳಗೆ ಬಿಕ್ಕಳಿಸುತ್ತಿದ್ದ ಗಂಗೆಯ ಕಣ್ಣು ಮೂಗಿನಿಂದ ಒಂದೇ ಸಮನೆ ನೀರು ಸುರಿಯುತ್ತಿತ್ತು. ಚಂಗನೆ  ಅವಳ ಬಳಿ ನೆಗೆದ ಕಾರ್ಯಪ್ಪ ಅವಳ ಗಲ್ಲ ಎತ್ತಿ “ನಾನು ಬೈದದ್ದು ನಿನಗೆ ಬೇಜಾರಾಯ್ತಾ ಗಂಗಮ್ಮ” ಎಂದು ಕಣ್ಣೀರೊರೆಸಲು ಮುಂದಾದ.  ಅವನ ಕೈಕೊಸರಿ ದೂರ ಸರಿದು ನಿಂತ ಗಂಗೆ “ವಸಿ ದೂರ ನಿಂತ್ಕೊಂಡು ಮಾತಾಡಿ ರೈಟ್ರೆ” ಎಂದು ಭುಸುಗುಟ್ಟಿ ತನ್ನ ಸೆರಗ ತುದಿಯಿಂದ ಕಣ್ಣು ಮೂಗು ವರೆಸಿಕೊಂಡಳು.

 ” ನಿನ್ನ ಜೊತೆ ಮಾತಾಡ್ಬೇಕು ಅಂತ ಇಂತ ಒಂದು ದಿನಕ್ಕಾಗಿ ಎಷ್ಟ್ ಕಾಯ್ತಿದ್ದೆ ಗೊತ್ತಾ ಗಂಗಮ್ಮ” ಎಂದು ಒಂದೇ ಉಸಿರಿಗೆ ಹೇಳಿದ. ತಲೆ ಎತ್ತಿ ಕಾರ್ಯಪ್ಪನನ್ನೇ ದಿಟ್ಟಿಸಿ ನೋಡಿದಳು. ತುಸು ಅಂಜಿದವನಂತೆ ಕಂಡ ಕಾರ್ಯಪ್ಪ ಗಂಗೆಯ ದಿಟ್ಟ ನೋಟವನ್ನು ಎದುರಿಸಲಾರದೆ ಕಿಟಕಿ ಆಚೆ ಕಣ್ಣು ಹಾಯಿಸಿದ. ಅಲ್ಲಿ ಕೆಲಸ ನಿಲ್ಲಿಸಿ ಮಾತಿಗಿಳಿದಿದ್ದ ಇಬ್ಬರು ಕೆಲಸಗಾರರನ್ನು ಕಂಡು ” ಕಳ್ಳ ನನ್ನ ಮಕ್ಳ ಮಾಡೋ ಕೆಲಸ ಬಿಟ್ಟು ಪಟ್ಟಂಗ ಹೊಡೆಯೋದ…. ಹೀಗೆ ಮಾಡ್ತಿದ್ರೆ ಪರ್ಮನೆಂಟ್ ಮನೆಗೆ ದಬ್ಬಿ ಬಿಡ್ತೀನಿ” ಎಂದು ಅವರನ್ನು ಗದರಿ ಗಂಗೆಯ ತೀಕ್ಷ್ಣ ನೋಟದಿಂದ ತಪ್ಪಿಸಿ ಕೊಂಡು ಒಂದು ಸಣ್ಣ ನಿಟ್ಟುಸಿರು ಬಿಟ್ಟ. 

ಹೆಗಲ ಮೇಲೆ ಹೊದ್ದಿದ್ದ ಸೆರಗ ಸೊಂಟಕ್ಕೆ ಸಿಕ್ಕಿಸಿಕೊಂಡ ಗಂಗೆ “ನಂಜೊತೆ ಮಾತಾಡುವಂತದ್ದು ಅದೇನಿದ್ದಾತು ಹೇಳಿ ರೈಟ್ರೆ ” ಎಂದು ತುಸು ದನಿ ಎತ್ತರಿಸಿಯೇ ಕೇಳಿದಳು. ಈಗ ದೃಢವಾಗಿಯೇ ನಿಂತ ಕಾರ್ಯಪ್ಪ “ನೋಡು ಸ್ವಲ್ಪ ಸಮಾಧಾನವಾಗಿ ನನ್ನ ಮಾತನ್ನ ಕೇಳ್ತಿ ಅಂದ್ರೆ ಹೇಳ್ತಿನಿ ಗಂಗಮ್ಮ. ನಾನೀಗ ಏನ್ಮಾತಾಡಿದ್ರು ಅದು ನಿನ್ನ ಒಳ್ಳೆದಕ್ಕೆ ನಿನ್ನ ಮಕ್ಕಳು ಒಳ್ಳೆದಕ್ಕೆ……” ಮಕ್ಕಳು ಎಂದ ಕೂಡಲೆ ಕೆಂಡದುಂಡೆಯಂತೆ ಉರಿಯುತ್ತಿದ್ದ ಗಂಗೆಯ ಕಣ್ಣುಗಳು ಹಾಗೆಯೆ ಮಂಜುಗಟ್ಟಿದವು ” ನನ್ನ್ ಮಕ್ಳುಗೆ ಒಳ್ಳೆದಾಗೊ ಅಂತ ಮಾತಾಡ್ತಿರಿ ಅಂದ್ರೆ ಅದೇನು ಹೇಳಿ ಕೇಳುಸ್ಕೊತಿನಿ ರೈಟ್ರೆ ” ಎಂದು ಮೃದುವಾಗಿ ಹೇಳಿದಳು.

ಹಿಂದಿನ ಕಂತು ಓದಿದ್ದೀರಾ? http://“ನಿನ್ ಉಪ್ಕಾರ ಸಾಕು.. ಮೊದ್ಲು ಇಲ್ಲಿಂದ ತೊಲಗೋಗು” https://kannadaplanet.com/tanthi-melina-nadige-71/

“ನೋಡು ಸುತ್ತಿ ಬಳಸಿ ಮಾತಾಡುವಷ್ಟು ಟೈಮಾಗ್ಲಿ ವಾತಾವರಣವಾಗ್ಲಿ ಇಲ್ಲಿಲ್ಲ ಗಂಗಮ್ಮ.. ನೇರವಾಗಿ ಹೇಳ್ತೀನಿ ಕೇಳು‌. ಒಂದೆರಡು ವರ್ಷಗಳಿಂದ ನನ್ನ ಹೆಂಡತಿ ಹಾಸಿಗೆ ಹಿಡಿದು ಮಲಗಿ ಬಿಟ್ಟಿದ್ದಾಳೆ.  ಸಿವಿಯರ್  ಅಸ್ತಮಾ ಆಗಲೋ ಈಗಲೋ ಅನ್ನೋ ಹಾಗಿದ್ದಾಳೆ. ಎಲ್ಲಾ ಕಡೆ ತೋರಿಸಿ ಈಗ ಕೈ ಚೆಲ್ಲಿ ಸುಮ್ಮನಾಗಿ ಬಿಟ್ಟಿದ್ದೀನಿ. ನನ್ಗೂ ನಿನ್ನ ಹಾಗೆ ಎರಡು ಚಿಕ್ಕ ಮಕ್ಕಳು ಅವರ ಜವಾಬ್ದಾರಿ ಎಲ್ಲ ನಂದೆ. ನಾನು ಕೂಡ ಸಂಸಾರದ ಸುಖ ಅನ್ನೋದನ್ನ ಅನುಭವಿಸಿ ಬಹಳ ವರ್ಷಗಳೇ ಆಗೋಯ್ತು. ನೀನು ಒಂಟಿ ಹೆಂಗಸು ಸಣ್ಣ ವಯಸ್ಸು ,  ನೋಡೋಕೆ ದಂತದ ಗೊಂಬೆ ಹಾಗಿದ್ದಿ ನಿನ್ನಂತೋಳಿಗೆ ಒಂಟಿ ಜೀವ್ನ ಕಷ್ಟ ಗಂಗಮ್ಮ. ನೀನು ಹುಂ ಅಂದ್ರೆ ನಿನ್ನ ರಾಣಿ ಹಾಗ್ ನೋಡ್ಕೋತೀನಿ ಬೇಡ ಅನ್ಬೇಡ ಒಪ್ಕೊ ನಿನಗೊಂದು ಒಳ್ಳೆ ಜೀವನ ಕೊಡ್ತೀನಿ….” ಎಂದು ಹೇಳಿದ ಕಾರ್ಯಪ್ಪ ಉನ್ಮಾದಗೊಂಡವನಂತೆ ಗಂಗೆಯನ್ನು ಗಟ್ಟಿಯಾಗಿ ತಬ್ಬಿ ಮುಖದ ತುಂಬಾ ಲೊಚಲೊಚನೆ ಮುತ್ತಿಕ್ಕಿ ಬಿಟ್ಟ…

ಗೌರವ ದಿಂದಲೇ ಕಾರ್ಯಪ್ಪನ ಮಾತನ್ನು ಗಂಭೀರವಾಗಿ ಕೇಳಿಸಿ ಕೊಳ್ಳುತ್ತಿದ್ದ ಗಂಗೆಗೆ ಅವನ ಈ ಅನಿರೀಕ್ಷಿತವಾದ ಕ್ರಿಯೆಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೈ ಮೇಲೆ ಬೆಂಕಿ ಬಿದ್ದಂತೆ  ನಖ ಶಿಖಾಂತ ಉರಿದು ಹೋದಳು  “ಯಾರುನ್ ಕೇಳಿ ಮೈ ಮುಟ್ಟಿದ್ಲಾ ಬಿಕ್ನಾಸಿ  ನನ್ ಮಗ್ನೇ….ಹೆಣ್ಮಕ್ಳು ಅಂದ್ರೆ ನಿಮ್ಮಂತೋರ್ ತೆವಲು ತಿರುಸ್ಕೊಳಕಿರೊ ಆಟ ಸಾಮಾನೆನ್ಲಾ.. ಸುಖ ಬೇಕೆಂದ್ಲಾ ಸುಖ ನಿಂಗೆ.. ನೀನ್ ಗಂಡ್ಸೆ ಆಗಿದ್ರೆ ಈಚಿಕ್ ಬಾರ್ಲಾ ತೋರುಸ್ಕೊಟ್ಟೇನು ಸುಖವ” ಎಂದು ಹೇಳುತ್ತಾ ಅವನ ದಟ್ಟ ಗುಂಗುರು ಕೂದಲನ್ನು ಬಲವಾಗಿ ಹಿಡಿದು ಬಗ್ಗಿಸಿ, ಬಿಗಿದ ಮುಷ್ಟಿಯಿಂದ  ಅವನ ಬೆನ್ನ ಮೇಲೆ ಬಡಬಡನೆ ಬಡಿದು, ಮುಖಮೂತಿಯನ್ನೆಲ್ಲಾ ಪರಚಿ, ಅವನು ಉಸಿರು ತಿರುಗಿಸಿ ಕೊಳ್ಳುವುದರ ಒಳಗೆ ಬಂದು ಮನೆ ಸೇರಿದ್ದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article