ರಸ್ತೆ ಅಪಘಾತ; ದೆಹಲಿಗೆ ಮೊದಲ ಸ್ಥಾನ, ಬೆಂಗಳೂರಿಗೆ 2ನೇ ಸ್ಥಾನ; ನಿತಿನ್ ಗಡ್ಕರಿ

Most read

ನವದೆಹಲಿ: ದೇಶದಲ್ಲಿ ಪ್ರತಿ ವರ್ಷ 1.78 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಸಾಯುವವರಲ್ಲಿ ಶೇಕಡ 60ರಷ್ಟು ಮಂದಿ 18 ರಿಂದ 34 ವರ್ಷ ವಯಸ್ಸಿನ ನಡುವಿನವರು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ.

ರಸ್ತೆ ಅಪಘಾತ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಗರಗಳ ಪೈಕಿ, ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗುವುದು ದೆಹಲಿಯಲ್ಲಿ ವರ್ಷಕ್ಕೆ 1,400, ಎರಡನೆಯ ಸ್ಥಾನದಲ್ಲಿ ಬೆಂಗಳೂರು (ವರ್ಷಕ್ಕೆ 915 ಸಾವು) ಮತ್ತು ಜೈಪುರದಲ್ಲಿ 850 ಸಾವುಗಳು ಸಂಭವಿಸುತ್ತವೆ ಎಂದರು.

ಅಪಘಾತಗಳಿಂದ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 23,000 ಸಾವುಗಳು ಸಂಭವಿಸುತ್ತಿವೆ. ತಮಿಳುನಾಡಿನಲ್ಲಿ 18,000, ಮಹಾರಾಷ್ಟ್ರದಲ್ಲಿ 15,000 ಮತ್ತು ಮಧ್ಯಪ್ರದೇಶದಲ್ಲಿ 13,000 ಸಂಭವಿಸುತ್ತಿವೆ ಎಂದು ತಿಳಿಸಿದರು.

ಅಪಘಾತಗಳಿಗೆ ಪ್ರಮುಖ ಕಾರಣ ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ. ಪರಿಸ್ಥಿತಿಯನ್ನು ಸುಧಾರಿಸಲು ನಾವು ನಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ನಿರ್ಧಿಷ್ಟವಾಗಿ ಹೇಳಬೇಕೆಂದರೆ ಟ್ರಕ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು, ಶಿಸ್ತನ್ನು ಪಾಲಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣ. ಟ್ರಕ್ ಗಳು ಹೆದ್ದಾರಿಗಳಲ್ಲಿ ನಿರ್ಧಿಷ್ಟ ಪಥದಲ್ಲಿ ಸಾಗುವುದಿಲ್ಲ. ಇದೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯನ್ನು ಮೊದಲ ಬಾರಿಗೆ ವಹಿಸಿಕೊಂಡಾಗ ತಾವು ರಸ್ತೆ ಅಪಘಾತಗಳ ಪ್ರಮಾಣವನ್ನು ಶೇಕಡ 50ರಷ್ಟು ತಗ್ಗಿಸುವ ಗುರಿಯನ್ನು ಹೊಂದಿದ್ದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದಿರಲಿ, ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವ ಅಳುಕೂ ಇಲ್ಲ ಎಂದರು.

ನಾನು ಮತ್ತು ನನ್ನ ಕುಟುಂಬದ ಸದಸ್ಯರು ಅಪಘಾತಕ್ಕೆ ಒಮ್ಮೆ ತುತ್ತಾಗಿದ್ದರೂ, ದೇವರ ದಯೆಯಿಂದಾಗಿ ಉಳಿದೆವು. ಆದರೆ, ಭಾರತದಲ್ಲಿ ಬಸ್ಗಳಿಗೆ ಕವಚ ನಿರ್ಮಿಸುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾನದಂಡದ ಪಾಲನೆ ಆಗಬೇಕು ಎಂದು ಆದೇಶಿಸಲಾಗಿದೆ. ಬಸ್ನ ಕಿಟಕಿಗಳ ಬಳಿ ಸುತ್ತಿಗೆ ಇರಬೇಕು. ಆಗ, ಅಪಘಾತದ ಸಂದರ್ಭದಲ್ಲಿ ಕಿಟಕಿಯನ್ನು ಸುಲಭವಾಗಿ ಒಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

More articles

Latest article