ಕೋಲಾರ : ಕಳೆದ ಎರಡು ವರ್ಷಗಳಿಂದ ಮುಳಬಾಗಲು ಹಾಗೂ ಇನ್ನಿತರೆ ಸ್ಥಳಗಳಲ್ಲಿ ಸುಮಾರು 10 ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮುಳಬಾಗಲು ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು ಅವರಿಂದ ಸುಮಾರು 322 ಗ್ರಾಂ ಚಿನ್ನ ಹಾಗೂ 2 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡಿನ ತಿರುಪತ್ತೂರು ಜಿಲ್ಲೆ, ನಾಟ್ರಂಪಲ್ಲಿ ತಾಲೂಕಿನ ಕೋವಿಲ್ ಗ್ರಾಮದ ಮುನಿರಾಜು (45) ಹಾಗೂ ಅದೇ ಜಿಲ್ಲೆಯ ಕೊನೆರಿ ಕುಪ್ಪಂ ಗ್ರಾಮದ ಸತೀಶ್ ಕುಮಾರ್ ( 34) ಮತ್ತು ಕೃಷ್ಣಾಪುರ ಗ್ರಾಮದ ಪೆರುಮಾಳ್ (35) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ಕೊಂಡಿರುವ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿಪಾಲ್ ಸದರಿ ಆರೋಪಿಗಳು ಬೈಸಿಕಲ್ ಹಾಗೂ ಮೊಪೆಡ್ ವಾಹನದಲ್ಲಿ ಪಾತ್ರೆ ಸಾಮಾನುಗಳು ಹಾಗೂ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಸಂಚರಿಸುತ್ತಾ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನಗಳನ್ನು ನಡೆಸುತ್ತಿದ್ದರು. ಸದರಿ ಆರೋಪಿಗಳ ವಿರುದ್ಧ ಮುಳಬಾಗಲು ಗ್ರಾಮಾಂತರ ಪ್ರದೇಶದಲ್ಲಿ ಒಂದು ಪ್ರಕರಣ ಹಾಗೂ ಮುಳಬಾಗಿಲು ನಗರ ಠಾಣೆಯಲ್ಲಿ ಏಳು ಪ್ರಕರಣಗಳು ಅಲ್ಲದೆ ಮಾಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಇದಲ್ಲದೆ ಆರೋಪಿ ಮುನಿರಾಜು ಹಾಗೂ ಕೃಷ್ಣ ಎಂಬ ತನ ಮೇಲೆ ಹೊಸೂರಿನಲ್ಲಿ ಏಳು ಪ್ರಕರಣಗಳು ಕಳಗಿದ್ದು ಆರೋಪಿ ಸಂತೋಷ ಈ ಮೊದಲು ಅಕ್ಕಿ ಕಳ್ಳ ಸಾಗಾಣಿಕೆ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದು ಈತನ ಮೇಲೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವಿವರಿಸಿದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಳಬಾಗಲು ಉಪ ವಿಭಾಗದ ಎಎಸ್ಪಿ ಕುಮಾರಿ ಮನಿಷ, ಇನ್ಸ್ಪೆಕ್ಟರ್ ಸತೀಶ್, ಪಿ ಐ ಸುಧಾಕರ ರೆಡ್ಡಿ ಅಲ್ಲದೆ ಪಿಎಸ್ಐ ರಾಮು, ಅರುಣ್ ಗೌಡ ಪಾಟೀಲ್ ಹಾಗೂ ಮತ್ತವರ ತಂಡವು ಭಾಗವಹಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಮತ್ತು ಅವರ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

