ಬೆಂಗಳೂರು, ಅಕ್ಟೋಬರ್. 08 : ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಮತ್ತು ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸಾರ್ವಜನಿಕ ಸೇವೆಗಳನ್ನು ಸುಲಭಗೊಳಿಸುವ ಸಲುವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ‘ಭಾಷಿಣಿ’ ತಂತ್ರಜ್ಞಾನ ಸಾಧನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಜಾ ಸೇವಾ ಇಲಾಖೆಯ ಇ.ಡಿ.ಸಿಎಸ್ ನಿರ್ದೇಶನಾಲಯವು ವಿಕಾಸ ಸೌಧದಲ್ಲಿ ಆಯೋಜಿಸಿದ್ದ ‘ಭಾಷಿಣಿ-ರಾಜ್ಯಂ’ ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕದ ಪ್ರಗತಿ ಮತ್ತು ಭಾಷಾ ವೈವಿಧ್ಯತೆ:
ಕರ್ನಾಟಕವು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಪ್ರಸ್ತುತ ವಿಶ್ವದ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ (AI) ಕೌಶಲ್ಯದಲ್ಲಿ 5ನೇ ಸ್ಥಾನದಲ್ಲಿದ್ದು, ಅತ್ಯಂತ ದಕ್ಷ ಮಾನವ ಸಂಪನ್ಮೂಲವನ್ನು ಹೊಂದಿದೆ. ಭಾಷಿಣಿ ಯೋಜನೆಯನ್ನು ವೇಗವಾಗಿ ಮುನ್ನಡೆಸಲು ಕರ್ನಾಟಕ ಅತ್ಯಂತ ಸೂಕ್ತವಾದ ರಾಜ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
”ಕರ್ನಾಟಕದಲ್ಲಿ ಪ್ರತಿ 150 ಕಿಲೋಮೀಟರ್ಗೆ ಭಾಷಾ ಶೈಲಿ ಬದಲಾಗುತ್ತದೆ. ಗಡಿಭಾಗಗಳಲ್ಲಿ ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ ಹಾಗೂ ಕರಾವಳಿಯಲ್ಲಿ ತುಳು ಮತ್ತು ಬ್ಯಾರಿ ಭಾಷೆಗಳ ಪ್ರಭಾವವಿದೆ. ಈ ಪ್ರಾದೇಶಿಕ ಭಾಷಾ ವೈವಿಧ್ಯತೆಯಿಂದಾಗಿ ಸ್ಥಳೀಯ ಮಟ್ಟದಲ್ಲಿ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದೆ. ಈ ಸವಾಲನ್ನು ಭಾಷಿಣಿ ತಂತ್ರಜ್ಞಾನದ ಮೂಲಕ ಸುಲಭವಾಗಿ ಮೆಟ್ಟಿಬಾರಬಹುದು” ಎಂದು ಹೇಳಿದರು.
ವಾಟ್ಸಾಪ್, ಚಾಟ್ಬಾಟ್ಗಳ ಮೂಲಕ ನಾಗರಿಕ ಸೇವೆ:
ಪ್ರಸ್ತುತ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು ದೊಡ್ಡ ಅರ್ಜಿಗಳನ್ನು ಭರ್ತಿ ಮಾಡುವ ಬದಲಿಗೆ ವಾಟ್ಸಾಪ್, ಚಾಟ್ಬಾಟ್ಗಳು, ಧ್ವನಿ ಮತ್ತು ವೀಡಿಯೊ ಸಂದೇಶಗಳ ಮೂಲಕ ದೂರು ಸಲ್ಲಿಸಲು ಬಯಸುತ್ತಿದ್ದಾರೆ. ಈ ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭಾಷಿಣಿ ಹಾಗೂ AI ಸಾಧನಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಇ-ಆಫೀಸ್ನಲ್ಲಿ ಭಾಷಿಣಿ ತಂತ್ರಜ್ಞಾನದ ಬಳಕೆ:
ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿ, “ಇ-ಆಫೀಸ್ ವ್ಯವಸ್ಥೆಯಲ್ಲಿ ಭಾಷಿಣಿ ಸಾಧನವನ್ನು ಅಳವಡಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ಇದನ್ನು ಸುಲಭವಾಗಿ ಬಳಸುತ್ತಿದ್ದಾರೆ. ಟೈಪ್ ಮಾಡುವ ಬದಲಿಗೆ ಧ್ವನಿಯಿಂದ ಪಠ್ಯಕ್ಕೆ ರೂಪಾಂತರಿಸಲು ಮತ್ತು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳ ನಡುವೆ ಟಿಪ್ಪಣಿಗಳನ್ನು ತಕ್ಷಣ ಅನುವಾದಿಸಲು ಇದು ನೆರವಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ರೋಗಿಗಳ ಜೊತೆ ಮಾತನಾಡುವಾಗಲೇ ವರದಿ ಸಿದ್ಧಪಡಿಸಲು ಕೂಡ ಈ ತಂತ್ರಜ್ಞಾನ ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ದೆಹಲಿಯಿಂದ ಆಗಮಿಸಿದ್ದ ಭಾಷಿಣಿ ತಂಡದ ಸಿಇಒ ಅಮಿತಾಭ್ ನಾಗ್ ಅವರು ಭಾಷಿಣಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

