Sunday, July 14, 2024

ಸಂಬಂಧ ಮಾರಕ್ಕಾಗಲ್ಲ.. ಸೆಕ್ಸ್ ಮಾತ್ರ ಮಾರ್ಬೋದು!!!

Most read

ಅವಳು ಯೋಚಿಸಿದ ಹಾಗೆ ಆ ಬಸ್ ಸ್ಟಾಂಡು ತುಂಬಾ ಗಲೀಜಾಗಿತ್ತು. ಪುತಪುತಾ ಅಂತ ಆ ಊರು ಈ ಊರು ಅಂತ ಜನ….. ಅವಳ ಯೋಚನೆಗಳಿಗೆ ಆವತ್ತು ಕೊನೆಯೇ ಇಲ್ಲ. ಸಡನ್ನಾಗಿ ನನಗೆ ಫೋನ್ ಮಾಡಿದಳು.

ಅವಳು: “ರೂಮಿ…. ಏನ್ ಮಾಡ್ತಿದ್ದೀಯ?….”

ನಾನು: “ನಾನಿನ್ನೇನು ಮಾಡ್ತೀನಿ ಹೇಳು… ಏನೋ ಬರೀತಾ ಇದ್ದೀನಿ, ನೀನೆಲ್ಲಿದ್ದೀಯ? ಸ್ಟಾಂಡಲ್ಲಾ”

ಅವಳು: “ಹೂ ಕಣೋ, ಯಾಕೋ ಇಡೀ ಸ್ಟಾಂಡ್ ಕ್ಲೀನ್ ಮಾಡ್ಬೇಕು ಅನಸ್ತಾ ಇದೆ…. ಎಷ್ಟು ಕೊಳಕು”

ನಾನು: “ನಿಂಗೆ ಓಸಿಡಿ ಇದೆ ಕಣೆ ಅದಕ್ಕೆ ಇಲ್ಲಾಂದ್ರೆ ಆ ಸ್ಟಾಂಡು ಏನ್ ಹಾಕಿದ್ರೂ ಕ್ಲೀನ್ ಆಗಲ್ಲ”

ಅವಳು: “ಹೊಗಲೇ. ನಿಂತರ ನಂಗೆ ಕೊಸಿಡಿ ಪಿಸಿಡಿ ಎಲ್ಲಾ ಇಲ್ಲ. ನಿಂಗ್ ಹುಚ್ಚು ನೀನು ಪಬ್ಲಿಕ್ ಟಾಯ್ಲೆಟ್ ನ ಕ್ಲೀನ್ ಮಾಡಿ ಉಪಯೋಗಿಸ್ತೀಯ”.

ನಾನು: “ಏನ್ ಮಾಡೋದು ಹೇಳು, ಈ ಹಾಳು ಗಂಡಸರಿಗೆ ಹುಯ್ಯಕ್ಕೆ ಎಲ್ಲಿ ಬೇಕಾದ್ರೂ ಆಗುತ್ತೆ ಆದ್ರೂ ಅವರಿಗೆ ಆ ಯೂರಿನಲ್ಲೇ ಬೇಕು. ಕಮೋಡೋ ನಮ್ ಸಂಡಾಸೋ ಅಗಲ್ಲ. ಆಗ ನಮ್ಮಂತವರು ಆ ಗಬ್ಬು ನಾತದಲ್ಲಿ ಕಾದು ಆ ರೂಂ ಸಿಕ್ಕಾಗ ಒಳಗೆ ಹೋದ್ರೆ ಮಾಡಿದ್ದೆಲ್ಲಾ ಅಲ್ಲಲ್ಲೇ ಇರುತ್ತೆ. ಆಗ ಕ್ಲೀನ್ ಮಾಡ್ದೇ ಇದ್ರೆ ಯುಟಿಐ ಬರುತ್ತೆ”.

ಅವಳು: “ನಿಜ ನಿಜ. ಒಪ್ಲೇ ಬೇಕಾದ್ದು. ನಿಂಗೆ ಏನೋ ಕೇಳೋಣ ಅಂತ ಇದ್ದೆ. ಅಲ್ಲ ಈ ಜನಕ್ಕೆ ಸೂಳೆ ಮತ್ತು ಮದ್ವೆ ಆಚೆಯ ಸಂಬಂಧಗಳ ವ್ಯತ್ಯಾಸನೇ ಗೊತ್ತಿಲ್ವಲ್ಲಾ. ಎಲ್ಲಾದಕ್ಕೂ ಒಂದೇ ಹೆಸ್ರು ಹೇಳ್ತಾರೆ…. ಸಂಬಂಧದ ಬೆಲೆನೇ ಗೊತ್ತಿಲ್ವ?’

ನಾನು: “ನೀನೇನು ಅಲ್ಲಿ ಕೆಲಸಕ್ಕೆ ನಿಂತ್ಕೊಂಡು ಈ ಯೋಚನೆಯಲ್ಲಿ ಮುಳುಗಿದ್ದೀಯ…. ಗಿರಾಕಿ ಸಿಗಲ್ಲ ನೋಡು”

ಅವಳು: “ಇವತ್ತು ಸಿಗ್ದೇ ಇದ್ರೂ ಸೈ…. ಆದ್ರೆ ಇದಕ್ಕೆ ಪರಿಹಾರ ಬೇಕು…. ನಾವು ಮಾಡೋದು ಕೆಲಸ, ಗಿರಾಕಿ ಏನ್ ಕೇಳ್ತಾನೋ ಅದನ್ನ ಕೊಡೋದು, ಅದಕ್ಕಿಷ್ಟು ಅಂತ ಬೆಲೆಕಟ್ಟಿ ಅದ್ರಿಂದ ಬಾಳ್ವೆ ಮಾಡ್ತೀವಿ. ಆದ್ರೆ ಹೆಂಡತಿ ಇದ್ದೂ ಇನ್ನೊಂದು ಸಂಬಂಧ ಮಾಡೋದು? ನಾನ್ ಹೇಳ್ತಿರೋದು ಸಂಬಂಧ. ಅದಕ್ಕೊಂದು ಭಾವನೆ ಇರುತ್ತೆ ಪ್ರಣಯ ಇರುತ್ತೆ ಆದ್ರೂ ಅದನ್ನು ನಮ್ಮ ಕೆಲಸಕ್ಕೆ ಹೋಲಿಸಿದರೆ! ನಂಗೆ ಎಷ್ಟು ಕೋಪ ಬರ್ತಿದೆ ಗೊತ್ತಾ?”   

ನಾನು: “ಏಯ್ ರಾಶಿ ಏನಾಯ್ತು? ನಿನ್ ಲವ್ವರ್ ಏನಾದ್ರು ಕೆಟ್ಟದಾಗಿ ಮಾತಾಡಿದ್ನನಿನ್ ಕೆಲಸದ ಬಗ್ಗೆ”

ಅವಳು: ಅವಳ ತುಂಬಾ ನಡುಗುತ್ತಾ ಒಂಥರಾ ವಿಷಾದದಲ್ಲಿ “ಹೂ ಕಣೋ, ಅವ್ನು ಇಷ್ಟು ವರ್ಷ ನನ್ ಜೊತೆ ಇದ್ದದ್ದು ಸೂಳೆಗಾರಿಕೆ ಅಂತೆ, ಅವನಿಗೆ ಬೇರೆ ಲವ್ವರ್ ಇದ್ದಾರಂತೆ ಮತ್ತೆ ಅವನಿಗೆ ಸಂಬಂಧ ಇರೋದು ಅವನ ಹೆಂಡತಿ ಜೊತೆ ಮಾತ್ರವಂತೆ… ಅಷ್ಟಿಟ್ಟಲ್ಲ 7 ವರ್ಷ ನನ್ ಜೊತೆ ಇದ್ದ. ನಾನು ಅವನಿಗೆ ಎಷ್ಟು ಆರೈಕೆ ಮಾಡಿದ್ದೀನಿ, ಅವನೂ ಅಷ್ಟೆಲ್ಲ ಪ್ರೀತಿ ಕೊಟ್ಟು ಇದ್ದವನು ಇವತ್ತು ಬೆಳಿಗ್ಗೆ ಹೊರಟೇ ಬಿಟ್ಟ …. ನಮ್ ನಡುವೆ ಇದ್ದದ್ದು ವ್ಯವಹಾರವಂತೆ”  (ಸ್ವಲ್ಪ ಅಳ್ತಾ ಇದ್ಲು)

ನಾನು: “ಸಮಾಧಾನ ಮಾಡ್ಕೊ ಮಗಾ ಇದೆಲ್ಲ ನಿಂಗೆ ಹೊಸದೇನಲ್ಲ…. ಗಂಡ ಬಿಟ್ಟೋದಾಗ್ಲೇ ನೀನು ಧೈರ್ಯದಿಂದ ಮಕ್ಕಳ್ನ ಬೆಳಸ್ತೀನಿ ಅವ್ನು ಹಾಳಾಗೋಗ್ಲಿ ಅಂತ ಏನೆಲ್ಲಾ ಕೆಲಸ ಮಾಡಿ ಕಡೆಗೆ ಜನರ ಕಿರುಕುಳ ತಡೀಲಾರದೆ ಈ ಕೆಲಸಕ್ಕೆ ಬಂದು ಮಕ್ಕಳನ್ನ ಹಾಸ್ಟೆಲ್ನಲ್ಲಿ ಓದುಸ್ತಾ ಇದ್ಯ…. ಅದು ಬಿಟ್ಟು ಇನ್ನೂ ಇಬ್ರು ಹೆಣ್ಮಕ್ಳುನ್ನ ಓದುಸ್ತಾ  ಇದ್ಯ…. ನೀನು ಎಂಥೆಂಥಾ ಸಂಬಂಧಗಳನ್ನ ಕಟ್ಟಿದ್ದೀಯ… ಆ ವೇಸ್ಟ್ ಪೀಸ್ಗೆ ಯಾಕೆ ಕೊರಗ್ತೀಯ?….”

ಅವಳು: “ಥೋ ನಿನ್ನ…. ನೀನಾದ್ರೂ ಅರ್ಥ ಮಾಡ್ಕೊತೀಯ ಅಂತ ಶೇರ್ ಮಾಡ್ಕೊಂಡ್ರೆ …. ಅಲ್ಲ ಕಣೋ ಇವನ ಜೊತೆ ನಂಗೆ ಪ್ರೇಮ ಇತ್ತು…. ನಿಜವಾದ ಪ್ರೇಮ…. ಪ್ರೇಮ ಸಿಗಲಿಕ್ಕೆ ಗಂಡನೇ ಬೇಕು ಅಂತ ಏನಿಲ್ಲ, (ಸ್ವಲ್ಪ ಹೊತ್ತು ಮೌನವಾಗಿ ಬಿಟ್ಳು)….

ನಾನು: “ಎಲ್ಲಿದ್ದೀಯ ನೀನು, ಮಾತಾಡೇ ಅಮ್ಮ…. ರಾಶಿ ಮುದ್ದು… “

ಅವಳು: “ನೋಡು ನಿನ್ನ ನನ್ನ ಮಧ್ಯ ಸೆಕ್ಸಿಲ್ಲ ಆದ್ರೂ  ನೀನು ನನ್ನ ಮುದ್ದು ಅಂತೀಯ ಲೂಸ್ ಅಂತೀಯ, ಪ್ರೀತಿಯಿಂದ ಚಟ್ನಿಪುಡಿ ಅಂತ ಕರಿತೀಯ…. ಇದೂ   ಒಂಥರ ಪ್ರೇಮ ಅಲ್ವ? ನಂಗೆ ನಿಂಗೆ ಸಂಬಂಧ ಇದೆ ಅಂದ್ರೆ  ನೀನು ಒಪ್ಪಲ್ವ?”

ನಾನು: ಮನಸ್ಸಿನಲ್ಲಿ (ಪ್ರೇಮನೋ ಸ್ನೇಹನೋ) ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ …..

ಅವಳು: “ಯಾಕೆ ನಿಂಗೂ ಅವಮಾನಾನಾ ನಂಜೊತೆ ಸಂಬಂಧ ಅಂದ್ರೆ?”

ನಾನು: “ಅಲ್ವೋ ಪ್ರೇಮ ಪ್ರೀತಿ ಇಲ್ಲದ ಸಂಬಂಧ ಈ ಜಗತ್ತಿನಲ್ಲಿ ಇಲ್ವೇ ಇಲ್ಲ… ಆದ್ರೇ ಎಲ್ಲಾ ಪ್ರೇಮ ಪ್ರೀತಿ ಒಂದೇ ಆಗುತ್ತಾ? ನಮ್ದು ಸ್ನೇಹ ಅಲ್ವಾ?”

ಅವಳು: “ಐ ನಿನ್ ತಲೆ ಹತ್ಕೊಂಡುರಿಯಾ!!!! ಈಗ ನೀನು ಲೂಸು… ನಿಮಗೆಲ್ಲಾ ಏನು ಸೆಕ್ಸ್ ಇರೋದು ಸೆಕ್ಸ್ ಇಲ್ದೇ ಇರೋದು ಈ ಎರಡೇ ಗೊತ್ತಿರೋದಲ್ವ? ಕೂದ್ಲು ಬೆಳ್ಕಾದ್ರೂ ಬುದ್ದಿ ಬಂದಿಲ್ಲ… ಪ್ಲಾಸ್ಟಿಕ್ ನನ್ ಮಗನ್ ತಂದು ಚಚ್ಚಿ ಹೇಳ್ಕೊಡ್ಬೇಕು…. ಅಲ್ಲ ಕಣೋ ನೀನಿನ್ನೂ ಅವ್ನುನ್ನ ಪ್ರೀತಸ್ತೀಯ ಅಲ್ವ? ಒಟ್ಟಿಗೆ ಬದುಕ್ತಿದ್ದೀರ… ಅವನ ಜೊತೆ ಏನು ರೊಮಾನ್ಸ್ ಮಾಡ್ತೀಯಾ? ಸೆಕ್ಸ್ ಮಾಡ್ತೀಯ? ಏನೂ ಇಲ್ಲ. ಆದ್ರೂ ಅವನನ್ನ ಬಿಟ್ಟು ಬದುಕ್ತೀಯಾ? ….. “

ನಾನು: ಗೊಂದಲದಲ್ಲೇ “ಇಲ್ಲಾ, ಆಗಲ್ಲ”

ಅವಳು : ನೀನು ನಿನ್ ಸಿಗರೇಟು ಬಿಡ್ತೀಯಾ? ಸತ್ರೂ ಪರ್ವಾಗಿಲ್ಲ ಅದೂ ನಿನ್ ಜೀವ ಅಂತೀಯ.. ಮತ್ತೆ ಇದೆಲ್ಲಾ ಏನು… ಸಂಬಂಧ ಅಲ್ವ? ಹೋಗ್ಲಿ ಬಿಡು ನನ್ನ ಪ್ರೀತುಸ್ತೀಯ ಅಂತ ಹೇಳ್ಕೊಳಕ್ಕೆ ಅವಮಾನ ಅದ್ರೂ ಏನಿಲ್ಲ”

ನಾನು: ಯಾರೋ ಸುತ್ಗೆ ತಗೊಂಡು ತಲೆ ಮೇಲೆ ಹೊಡ್ದಂಗಾಯ್ತು….. ಇಷ್ಟು ವರ್ಷ ಪ್ರೇಮದ ರಾಜಕೀಯ ಬದುಕೋರು ಅಂತ ಹೇಳ್ಕೊಳ್ಳೋಕ್ಕೇ ನಾಚಿಕೆ ಆಗಬೇಕು ನನಗೆ. “ಇಲ್ಲಾ ಡಾರ್ಲಿಂಗ್, ನೀನು ಹೇಳಿದ್ದು ಸರಿ. ನಾನು ಪ್ರೀತಿ ಪ್ರೇಮ ಸ್ನೇಹ ಮಮತೆ ಸಹೋದರತ್ವ ಎಲ್ಲಾ ಯೋಚನೆ ಮಾಡ್ತಿದ್ದೆ… ಯೂ ಆರ್ ರೈಟ್ ಎಲ್ಲವೂ ಸಂಬಂಧಗಳು. “

ಅವಳು: ಇದೆಲ್ಲದರಲ್ಲಿ ಸಂಬಂಧ ಮಾರಕ್ಕಾಗಲ್ಲ… ಸೆಕ್ಸ್ ನ ಮಾತ್ರ ಮಾರ್ಬೋದು… ಗಿರಾಕಿ ಬಂತು … ಮಲೀಕ್ಕೋ ಹೋಗು…. ನಾಳೆ ಸಿಕ್ತೀನಿ” ಅಂತ ಫೋನ್ ಇಟ್ಳು.

ಎಂಥಾ ವಿಷಯ ಅಲ್ವ? ಯಾವ ತತ್ವ ಜ್ಞಾನಿಗಳಿಗೆ ಇವಳೇನು ಕಡಿಮೆ?

ಸಂಬಂಧ ಮಾರಕ್ಕಾಗಲ್ಲ… ಸೆಕ್ಸ್ ನ ಮಾತ್ರ ಮಾರ್ಬೋದು!!!

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

ಇದನ್ನೂ ಓದಿ- ಪ್ರೇಮಿಗಳ ದಿನಕ್ಕೊಂದು ಕಥೆ |ನಮ್ಮವರ ಪ್ರೇಮ ಕಥೆ…

More articles

Latest article