Thursday, May 23, 2024

ಪ್ರೇಮಿಗಳ ದಿನಕ್ಕೊಂದು ಕಥೆ |ನಮ್ಮವರ ಪ್ರೇಮ ಕಥೆ…

Most read

ನಮ್ಮನ್ನ ನೋಡಿದ್ರೆ ಸಾಮಾನ್ಯ ಪೋಲೀಸರೂ ಅಂದ್ಕೊಳ್ಳೋದು ನಾವು ಸೆಕ್ಸ್ ಮಾತ್ರ ಹುಚ್ಚುಚ್ಚಾಗಿ ಮಾಡಕ್ಕೇ ಹುಟ್ಟಿದ್ದೀವಿ ಅಂತ. ನಾವು ಹಾಗಲ್ಲ ನಾವೂ ನಿಮ್ಮಂತೆ ಸಾಮಾನ್ಯ ಜನರು ಅಂತ ಹೇಳೋದನ್ನ ಕೇಳೋದೇ ಇಲ್ಲ ರೂಮಿ ಹರೀಶ್

ಕೇಳಿ ಕೇಳಿ ಕೇಳೀ …

ಮಹನೀಯರೆ ಮಹಿಳೆಯರೆ ….. ಅರೆ ಇದು ಹಳೇ ಶೈಲಿ ಅಲ್ವ???? ಮಹಿಳೆಯರು ಮಹಾ ಏನಲ್ಲ. ಮತ್ತೆ ನಾವು ಇದರಲ್ಲಿ ಇಲ್ಲ… ನಾವು ಹೊಸದಾಗಿ ಶುರು ಮಾಡೋಣ ಎಲ್ಲರನ್ನೂ ಒಳಗೊಳ್ಳುವ ಕರೆ!!!

ಕೇಳಿ ಕೇಳಿ ಕೇಳೀ … ಸ್ನೇಹಿತರೆ, ಇಂತಿಪ್ಪ ಇಂಡಿಯಾ ಮಾಹಾ ದೇಶದಲ್ಲಿ, ಕರ್ನಾಟಕ ರಾಜ್ಯದಲ್ಲಿ ಪ್ರಪಂಚಕ್ಕೆ ಒಂದಷ್ಟು ಜನ ಸಾಮಾನ್ಯ ಎಂದೆನಿಸಿಕೊಳ್ಳದವರು …… ಅಂದ್ರೆ ನಂ ತರದವ್ರು, ಸಾಮಾನ್ಯ ಜನರ ಭಾಷೆಯಲ್ಲಿ ಚಕ್ಕ, ಕೋಜ ಒಂಬೋದು ಎನಿಸಿಕೊಂಡೋವ್ರು…. ಅಲ್ಲಲ್ಲಿ ಮನೆಗಳನ್ನು  ಮಾಡ್ಕೊಂಡಿದ್ವು. ನಾವೆಲ್ಲಾ ಸ್ನೇಹಿತರು…. ನಮಗೇಕೆ ಹೆಸರು…. ಜಗತ್ತು ಕೊಟ್ಟಿರೋದನ್ನ ಸಕತ್ತಾಗಿ ಪಾಲಿಸ್ತೀವಿ. ಅದ್ರಲ್ಲಿ ಒಂದಷ್ಟು ಜನ ನಾವು ಹೀಗೂ ಇದ್ವಿ -ಹೆಣ್ಣಾಗಿ ಹುಟ್ಟಿ ಗಂಡಸಾದವರು. ಅವ್ರಿಗೆ ಈ ಸಾಮಾನ್ಯ ಮಾನವ ಸಮಾಜ ಈ ತರ ಹೆಸ್ರೇ ಇಟ್ಟಿಲ್ಲ ಯಾಕಂದ್ರೆ ಆ ಅಸ್ತಿತ್ವನೇ ಗೊತ್ತಿಲ್ಲ.

ಇಂಥಾ ವ್ಯಕ್ತಿಯ ಒಂದು ಕಥೆಯನ್ನೇ ಇಲ್ಲಿ ಹೇಳ್ತಿರೋದು. ಸಾಮಾನ್ಯ ಜನರಿಗೆ ಹೆಚ್ಚೇನು ಗೊತ್ತಿರಲ್ಲ. ಆದ್ರೆ ನಮ್ಮನ್ನ ನೋಡಿದ್ರೆ ಸಾಮಾನ್ಯ ಪೋಲೀಸರೂ ಅಂದ್ಕೊಳ್ಳೋದು ನಾವು ಸೆಕ್ಸ್ ಮಾತ್ರ ಹುಚ್ಚುಚ್ಚಾಗಿ ಮಾಡಕ್ಕೇ ಹುಟ್ಟಿದ್ದೀವಿ ಅಂತ. ನಾವು ಹಾಗಲ್ಲ ನಾವೂ ನಿಮ್ಮಂತೆ ಸಾಮಾನ್ಯ ಜನರು ಅಂತ ಹೇಳೋದನ್ನ ಕೇಳೋದೇ ಇಲ್ಲ.

ನಂ ಪಪ್ಪು ನಮ್ ಜೊತೆ ಇದ್ದ ನಮ್ಮಂತವ. ಹುಟ್ಟಿದೂರಲ್ಲಿ ಅವನ್ನ ಹೆಂಗಸಾಗಿ ಗುರ್ತುಸ್ತಿದ್ರಂತ ವಲಸೆ ಬಂದು ಇಲ್ಲಿ ನಂ ಜೊತೆ ಸೇರಿದ. ತುಂಬಾ ಚೆನ್ನಾಗಿ ಹಾಡ್ತಿದ್ದ. ಚಿಕ್ಕದಾಗಿ ಗುಂಡ್ಗುಂಡ್ಗೆ ಇದ್ದ. ನೋಡಿದ್ರೆ ಕಸಿವಿಸಿ ಆದ್ರೂ ಮುದ್ದು ಬರೋದು. ನಾವೆಲ್ಲಾ ಮಗು ತರ ನೋಡ್ತಿದ್ವಿ. ಈ ಮಗೂಗೆ ಒಂದು ಪ್ರೇಮಕಥೆ!!!

ಪಪ್ಪು ಪಕ್ಕದ ರಾಜ್ಯದ ಒಂದು ಚಿಕ್ಕ ಹಳ್ಳಿಲಿ ಹುಟ್ಟಿ ಅನುಭವಿಸಿದ್ದೆಲ್ಲಾ ನಮ್ ಗೋಳೇ…. ಹೆಣ್ಣು ಹೆಂಗಸಿನ ತರ ಇರ್ಬೇಕು ಗಂಡಸಿನ ತರ ಆಡ್ಬಾರ್ದು ಇತ್ಯಾದಿ ಇತ್ಯಾದಿ. ಅವರ ಮನೆಯವರು ಕಡು ಬಡವರು. ಮಕ್ಕಳನ್ನು ಓದಿಸಲಾಗದೆ ಮಕ್ಕಳೂ ಸೇರಿ ಚಿಕ್ಕ ವಯಸ್ಸಿನಿಂದ ದಿನಗೂಲಿ ಮಾಡಿಯೇ ಬದುಕಿದವರು. ನಂ ಪಪ್ಪು ಕೂಡ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಆಗಲೂ ತನ್ನ ಹೆಣ್ಣು ಭಾಗಗಳನ್ನು ಬಿಗಿದು ಲಂಗ ಮತ್ತು ಶರ್ಟು ಹಾಕ್ಕೊತ್ತಿದ್ದ. ಆ ಹಳ್ಳೀಲಿ ಒಬ್ಳು ಹುಡುಗಿಗೆ ಮಾತ್ರ ನಂ ಪಪ್ಪು ಹುಡುಗನ ತರವೇ ಫೀಲ್ ಆಗಿದೆ. ಅದೆಷ್ಟೋ ತಿಂಗಳುಗಳು ಬರೀ ಒಬ್ಬರನ್ನು ಒಬ್ರು ನೋಡೋದೇ ಆಗಿತ್ತು. ಹಾಗೇ ಒಂದ್ ದಿವ್ಸ ಪಪ್ಪು ತನ್ನ ಹೆಂಗಸಿನ ಬಟ್ಟೆ ತ್ಯಜಿಸಿ ಒಂದು ಲುಂಗಿ ಟೀಶರ್ಟು ಅದರ ಮೇಲೆ ಒಂದು ಶರ್ಟು ಹಾಕ್ಕೊಳಕ್ಕೆ ಶುರು ಮಾಡಿದ.

ತಗೋ ಅಲ್ಲೇ ಶುರು ಮನೆಯವರದ್ದು …. ಒಂದು ಲಂಗ ಮತ್ತು ಲುಂಗಿಗೆ ಅಷ್ಟೊಂದು ವ್ಯತ್ಯಾಸನಾ ಈ ಜನಕ್ಕೆ…. ಆ ತೀವ್ರ ಕಿರುಕುಳ ಹಿಂಸೆ ತಡೀಲಾರ್ದೆ ಪಪ್ಪು ಊರು ಬಿಡಲು ತೀರ್ಮಾನಿಸಿದ. ಆದ್ರೆ ಹೇಗೆ ತನ್ನ ಹುಡುಗಿಗೆ ಹೇಳದೆ ಹೋಗೋದು?….. ಕಡೆಗೆ ತಾನು ಕೂಡಿಟ್ಟ ಹಣದಲ್ಲಿ ಅವಳಿಗೊಂದು ಚಿಕ್ಕ ಮೊಬೈಲು ಖರೀದಿಸಿ ಒಂದಿನ ಅವಳು ಕಾಲೇಜಿನಿಂದ ಬರೋ ದಾರೀಲಿ ಅವಳನ್ನು ಕರೆದು ಮಾತಾಡ್ದ. ಅದೇ ಮೊದಲ ಬಾರಿ ಅವಳ ಹತ್ರ ಮಾತಾಡಿದ್ದಂತೆ. ಅವನು ಇಷ್ಟೆ ಹೇಳಿದ್ದು “ನಾನ್ ಪೋರೆ ಸಿಟಿಕು, ನಾ ಇದಿಲಿ ಫೋನ್ ಚೈವ ನೀ ಬದ್ರಮಾ ವೆಚ್ಚು” ಎಂದು ಅಲ್ಲಿಂದ ಹೊರಟ.

ನಾನು ಕೇಳಿದೆ “ಅಲ್ವೋ ಪ್ರಪೋಸೇ ಮಾಡಿಲ್ಲ, ಅವಳು ಇಷ್ಟಪಡ್ತಾಳೋ ಇಲ್ವೋ ಹೇಗ್ ಗೊತ್ತು?” ಅದಕ್ಕೆ ಅವನು ಹೇಳಿದ “ಅಣ್ಣಾ ಅವೆಲ್ಲಾ ಕಣ್ಣಲ್ಲೇ ಮಾತಾಡಿ ಆಗೋಯ್ತು. ನಿಮ್ ತರ ಟೈಮ್ ವೇಸ್ಟ್ ಮಾಡಲ್ಲ”. ಸರಿ ಹಾಗೇ ನಡಿತು. ಒಂದಷ್ಟು ತಿಂಗಳುಗಳು ನಡೀತು ಪೋನ್ನಲ್ಲಿ. ಅವನು ಸ್ವಂತ ಮೊಬೈಲ್ ತಗೊಳೊವರ್ಗೂ ನಮ್ಮೆಲ್ಲರ ಫೋನ್ಗಳಿಂದ ಮೆಸೇಜ್ ಕಳಿಸ್ತಿದ್ದ. ಇವರು ಬರೀ ಒಬ್ಬರನ್ನೊಬ್ಬರು ನೋಡಿದ್ದು ಮತ್ತು ಈಗ ಮೊಬೈಲಲ್ಲಿ ಮಾತಾಡೋದು ನಮಗೆ ಒಂಥರ ಸೋಜಿಗ..

ಸಡನ್ನಾಗಿ ಒಂದಿನ ಪಪ್ಪು ಕೂಗಾಡ್ತಾ ಆಫೀಸಿಗೆ ಬಂದು ಪ್ರಜ್ಞೆ ತಪ್ಪಿ ಬಿದ್ದ. ನಾವೆಲ್ಲಾ ಗಾಭರಿಯಾಗಿ ಅವನಿಗೆ ನೀರು ಚಿಮುಕಿಸಿ ಕೂರ್ಸಿದ್ವಿ. ಅವನ ರೋಧನ ನಿಲ್ತಾನೇ ಇಲ್ಲ ಏನಾಗಿದೆ ಅಂತ ಹೇಳಕ್ಕೆ. ಕಡೆಗೆ ಅವನ ಮೊಬೈಲು ತೋರಿಸಿದ ನನಗೆ. ಮೆಸೇಜ್‌ ನೋಡಿ ಕೈ ಕಾಲ್ ನಡುಗೋಯ್ತು ನಂಗೆ. “ಅಲ್ಲ ಕಣೋ ಅವಳು ಹೇಳಿದ್ದಾಳೆ ಅಷ್ಟೆ ಅವಳು ಆತ್ಮಹತ್ಯೆ ಮಾಡ್ಕೊತಾಳೆ ಅಂತ. ಮಾಡಿದ್ದಾಳ ಇಲ್ವ ಗೊತ್ತಿಲ್ವಲ್ಲ“ ಅಂದೆ.  ಅವನು ರೋಧಿಸುತ್ತಲೇ ಅವಳ ನಂಬರ್ ರಿಂಗ್ ಮಾಡ್ಕೊಟ್ಟ. ಫೋನು ಸ್ವಿಚ್ಚಾಫ್. ಮಧ್ಯ ರಾತ್ರಿನೇ ಮೆಸೇಜ್ ಬಂದಿದೆ. ಆದ್ರೆ ಇವನು ಬೆಳಿಗ್ಗೆ ಯಾವಾಗಲೋ ನೋಡಿದ್ದ. ಅಂದ್ರೆ ಸುಮಾರು 11 ಗಂಟೆ ಮೇಲೆ.

ಸುಮಾರು ಒಂದು ವಾರ  ಮೌನವಾಗಿದ್ದ. ಒಂದಿನ ಊರಿಗೆ ಹೋಗ್ತೀನಿ ಅಂತ ಹಠ ಹಿಡಿದ. ಸುನಿಲಿಗೆ ಕೂಡ್ಲೆ ಗೊತ್ತಾಯ್ತು. ಇವನು ಏನೋ ತೀರ್ಮಾನಿಸಿನೇ ಹೋಗ್ತಾ ಇದ್ದಾನೆ ಅಂತ. ನಾವು ಎಷ್ಟೇ ಹೇಳಿದ್ರು ನಮಗೆಲ್ಲಾ ಪ್ರಾಮಿಸ್ ಮಾಡಿ ಹೋದ. ಎರಡನೆ ದಿನ ಸುನಿಲನಿಗೆ ಫೋನ್ ಬಂತು; ಹೀಗೆ ಒಬ್ಬರು ಮಾರುವೇಷಧಾರಿ ಟ್ರೇನ್‌ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ. ನಾವೆಲ್ಲರೂ ಸೇರಿದೆವು. ನನಗೆ ಸುನಿಲನಿಗೆ ಎದೆ ಒಡೆದು ಹೋಯ್ತು. ಇತರರು ಅವನು ತೀರಿದ ಸ್ಥಳಕ್ಕೆ ಹೋದರು. ನಾವು ಹೋಗಿ ನೋಡಲು ಆಗದ ಸ್ಥಿತಿಯಲ್ಲಿ ನಂಬ್ ಆಗಿದ್ದೆವು. ಅವನ ಫೋನ್ ಸಿಕ್ತು. ಅದರಲ್ಲಿ ಏನೂ ಮಿಗಿಸದೇ ಖಾಲಿ ಮಾಡಿದ್ದ. ಒಂದು ಕ್ಲೂನೂ ಇರಲಿಲ್ಲ. ನಾವೆಲ್ಲರೂ ಅಂದುಕೊಂಡದ್ದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರು ಅಂತ.

ವರ್ಷಗಳ ಮೇಲೆ ಅವನ ಊರಿಗೆ ಒಮ್ಮೆ ನಾನು ಸುನಿಲ್ ಹೋದಾಗ ಅವನ ಮನೆಯ ಹತ್ತಿರ ಇದ್ದ ಅವಳ ಮನೆಯನ್ನು ನೋಡುತ್ತಾ ನಿಂತೆವು. ಆಗ ಒಬ್ಬಳು ಹುಡುಗಿ  ನಮ್ಮನ್ನು ನೋಡಿ ಓಡಿ ಬಂದು “ನೀಂಗೋ ಸುನಿಲಣ್ಣ ಇಲ್ಲೆಯಾ” ಅಂದ್ಲು. ನಾನು ಸುನಿಲು ಶಾಕಾಗಿ ನಿಂತ್ವಿ. ಅವಳು ಕೇಳಿದಳು…. “ಪಪ್ಪು ಎಂಗೆ… ವರಲೆಯಾ”….

ನಾವು ಮೂರು ಜನ ಅಳುತಿದ್ವಿ…. ಅವಳು ಹೇಳಿದಳು ಅವರಿಬ್ಬರೂ ಒಂದೇ ಸಮಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಅವನು ಕುಡಿದ ಅಮಲಿನಲ್ಲಿ ಮಲಗಿದ. ಅವಳನ್ನು ಮನೆಯಲ್ಲೇ ಬಂಧಿಸಿಟ್ಟದ್ದರಿಂದ ಬಲವಂತವಾಗಿ ಅಂದೇ ಮದುವೆ ಮಾಡಿದ್ದರು. ಆಗ ಅವಳ ಮೊಬೈಲ್ ಸ್ವಿಚ್ಚಾಫ್ ಆಗಿದ್ದು.

ಈಗ ಅವಳು ಗರ್ಭಿಣಿ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article