ಕರ್ನಾಟಕ ರಾಜ್ಯೋತ್ಸವ ವಿಶೇಷ- ಕನ್ನಡ ಕಲಿಸುವ ಪೋಷಕತ್ವ

Most read

ಕನ್ನಡ ಕಲಿಯುವುದೇ ಅವಮಾನ, ಕಲಿತರೂ ಅದರಿಂದ ಭವಿಷ್ಯವಂತೂ ಇಲ್ಲ, ಖಾಸಗಿ ಶಾಲೆಗಳೇ ಅಂತಿಮ, ಅವೇ ಪ್ರತಿಷ್ಠೆ ಮತ್ತು ಅನ್ನದ ದಾರಿ ತೋರುವ ವ್ಯವಸ್ಥೆ ಇತ್ಯಾದಿ ಅತಿ ರಂಜಿತ ಸ್ಥಿತಿ ಈ ಕಾಲದ್ದು. ಮನೆಯಲ್ಲಿ ಕನ್ನಡ ಬಳಸಲು ಸಾಧ್ಯವಾಗದ, ಶಾಲೆಯಲ್ಲೂ  ಮಾತನಾಡುವ ಅವಕಾಶ ಇಲ್ಲದ ಕಾರಣ ಕನ್ನಡವು ಕಲಿಕಾ ಭಾಷೆಯಾಗುವುದು ಬಿಟ್ಟು ಸಾಮಾನ್ಯ ಭಾಷೆಯಾಗಿಯೂ ನಿಲ್ಲುವ ಪರಿಸ್ಥಿತಿ ಇಲ್ಲವಾಗಿದೆ – ಡಾ. ಸುಂದರ ಕೇನಾಜೆ, ಜಾನಪದ ಸಂಶೋಧಕರು.

ಕನ್ನಡದ ಪರವಾಗಿ ಮಾತನಾಡುವ ಸಂದರ್ಭದಲ್ಲಿ ಪೋಷಕರಾದ ನಾವು ಒಂದಷ್ಟು ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಸಂದರ್ಭಾನುಸಾರ ನಿಭಾಯಿಸಬೇಕು. ಈ ಖಚಿತ ಅರಿವಿನ ಒಂದಷ್ಟು ಮಾಹಿತಿ ಹಾಗೂ ಅನುಭವವನ್ನು ನಾನಿಲ್ಲಿ ಹಂಚುತ್ತಿದ್ದೇನೆ.

ಕನ್ನಡ ಭಾಷೆ ಈ ನಾಡಿನಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಕ್ಕೆ ಪೋಷಕರಲ್ಲಿರುವ ಭವಿಷ್ಯದ ಬಗೆಗಿನ ಆತಂಕ ಹಾಗೂ ಅರಿವಿನ ಕೊರತೆಯೇ ಮುಖ್ಯ ಕಾರಣ. ಅಂದರೆ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದರೆ ಅವರ ಭವಿಷ್ಯ ಹಾಳಾಗಿ ಬಿಡುತ್ತದೆ ಹಾಗೂ ಅಸ್ತಿತ್ವವೇ ಇಲ್ಲವಾಗುತ್ತದೆ ಎನ್ನುವ ತಪ್ಪು ಅಭಿಪ್ರಾಯ ಹೆಚ್ಚಿನವರದು. ಆದರೆ ಇದು ಸುಳ್ಳು ಎಂದು ತಿಳಿಯುವ ಕಾಲಕ್ಕೆ ಆ ಹಂತ ದಾಟಿ ಹೋಗಿರುತ್ತದೆ. ಹಾಗಾಗಿ ಮುಂದೆ ಕಾಡಬಹುದಾದ ಪಶ್ಚಾತ್ತಾಪವನ್ನು ವನ್ನು ತಪ್ಪಿಸುವ ನೆಲೆಯಿಂದ ಇಲ್ಲಿಯ ಈ ಅನುಭವ ಪ್ರೇರಣೆಯಾದರೆ, ಅದು ಕನ್ನಡ ಭಾಷೆಗೆ ಅದಕ್ಕಿಂತಲೂ ವೈಯಕ್ತಿಕವಾಗಿ ಓರ್ವ ಮಗುವಿಗೆ ಸಿಗುವ ಅತ್ಯಂತ ದೊಡ್ಡ ಕೊಡುಗೆ ಎಂದು ಭಾವಿಸುತ್ತೇನೆ. ಮಗುವಿನ ಪ್ರಗತಿಯಲ್ಲಿ ನಿರೀಕ್ಷಿತ ಫಲ ಕಾಣದೇ ಪಾಪಪ್ರಜ್ಞೆಯಿಂದ ಕನ್ನಡದ ಉದ್ಧಾರಕ್ಕಾಗಿ ಕೆಲಸ ಮಾಡುವ ಅಥವಾ ಏನಾದರೂ ಮಾಡಬೇಕೆಂದು ಹೆಣಗಾಡುವ ಒಂದಷ್ಟು ಕನ್ನಡ ಪ್ರೇಮಿಗಳನ್ನೂ  ಇತ್ತೀಚೆಗೆ ಕಾಣುತ್ತಿದ್ದೇನೆ. ಇವರೆಲ್ಲರು ತಾವು ಮಾಡಬಹುದಾದ ಕಾಲದಲ್ಲಿ ಸುಲಭದ ಕೆಲಸವನ್ನು ಮಾಡದೇ, ಈಗ ಬೇರೆಯವರ ಮೂಲಕ ಕನ್ನಡದ ಉದ್ಧಾರಕ್ಕೆ ಹೊರಟಿರುವುದು ವಿಪರ್ಯಾಸ.

ಕನ್ನಡ ಭಾಷೆಯ ಹೆಸರಿನಲ್ಲಿ ಅಥವಾ ಸರಕಾರಿ ಸಂಸ್ಥೆಯ ಹೆಸರಿನಲ್ಲಿ ಅನ್ನ ತಿನ್ನುತ್ತಿದ್ದೇವೆ, ಆದರೆ ಅವೆರಡಕ್ಕೂ ಏನೂ ಮಾಡಲು ಆಗಿಲ್ಲವೆಂದು ಹಪಾಹಪಿಸುವವರೂ ಇಲ್ಲದಿಲ್ಲ. ಒಂದು ಭಾಷೆ, ಕಲೆ ಅಥವಾ ವ್ಯವಸ್ಥೆ ನಾಶವಾದ ನಂತರ ಪರಿತಪಿಸುವ ಬದಲು ಅದಕ್ಕೂ ಮುನ್ನ ನಮ್ಮ ಕಡೆಯಿಂದ ಕಿಂಚಿತ್ತಾದರೂ ಏನು ಮಾಡಬಹುದು, ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ನೈತಿಕ ಜವಾಬ್ದಾರಿಯನ್ನು ಹೇಗೆ ಹೊರಬಹುದು ಎಂದು ಯೋಚಿಸಿದರೆ ಅದೇ ಬಹುದೊಡ್ಡ ಕೊಡುಗೆ. ಅಲ್ಲದೇ ಕನ್ನಡದ ಇಂದಿನ ಸ್ಥಿತಿಗತಿಗಳನ್ನು ಸುಧಾರಿಸುವುದಕ್ಕೆ ನಾಂದಿಯೂ ಆಗಬಹುದು.

ಹಾಗೆಂದು ಕನ್ನಡ ಉಳಿವಿಗೆ ಇದುವೇ ಅಂತಿಮ ಮತ್ತು ಇದರಿಂದಲೇ ಭಾಷೆ ಮತ್ತು ವ್ಯವಸ್ಥೆ ಉಳಿಯುತ್ತದೆ ಎನ್ನುವ ಭ್ರಮೆ ಇಲ್ಲಿಯದ್ದಲ್ಲ. ಆದರೆ ಮುಂದಿನ ತಲೆಮಾರಿಗೆ  ಭಾಷೆಯನ್ನು ವರ್ಗಾಯಿಸಲು ಇರುವ ಏಕೈಕ ದಾರಿ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ಒಂದೇ ಆಗಿದೆ. ಅದಕ್ಕೂ ಮುನ್ನ ನಾನು ಮತ್ತು ನನ್ನಂತೇ ಇರುವ ಅನೇಕರು ಕನ್ನಡ ಕಲಿಯುವ ಕಾಲದಲ್ಲಿ ಅನುಭವಿಸಿದ ಅಧ್ವಾನದ ನೆನಪನ್ನು ಮೊದಲು ಹಂಚಿಕೊಳ್ಳುತ್ತೇನೆ. ಆ ಮೂಲಕ ಆಗ ಕನ್ನಡ ಕಲಿಯಲೇಬೇಕಿದ್ದ ಅನಿವಾರ್ಯ ಮತ್ತು ಈಗ ಕನ್ನಡವನ್ನು ಕಡೆಗಣಿಸುತ್ತಿರುವ ಆಂತರ್ಯವನ್ನು ತಿಳಿಯಲು ಸಾಧ್ಯವಾಗಬಹುದು. ಇದು ನನ್ನೊಬ್ಬನ ಕಥೆ ಮಾತ್ರವಾಗಿರದೇ ಗಡಿ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಬಹುತೇಕರ ಹಿನ್ನೋಟವೂ ಆಗಿರುತ್ತದೆ.

ನನ್ನದು ಮೂಲತಃ ಕೇರಳ ಗಡಿನಾಡ ಪ್ರದೇಶ. ಮನೆ ಭಾಷೆ ಕನ್ನಡವಲ್ಲ, ಆದರೆ ನಾನು ಕಲಿಕೆಯ ಭಾಷೆಯಾಗಿ ಸ್ವೀಕರಿಸಬೇಕಾಗಿದ್ದುದು ಕನ್ನಡ. ಅದು ಗಡಿನಾಡಿನಲ್ಲಿರುವ ಕರ್ನಾಟಕದ ಪ್ರಾಥಮಿಕ ಶಾಲೆಯಲ್ಲಿ. ನನ್ನ ದುರಾದೃಷ್ಟವೋ ಕಾಲದ ಮಹಿಮೆಯೋ ಆ ಕಾಲದಲ್ಲಿ ಈ ಗಡಿ ಭಾಗದ ಶಾಲೆಗೆ ಬರುತ್ತಿದ್ದ ಏಕೋಪಾಧ್ಯಾಯರು ಮಧ್ಯಾಹ್ನ ಹನ್ನೊಂದುವರೆಯ ನಂತರವೇ ಶಾಲೆ ಪ್ರವೇಶಿಸುತ್ತಿದ್ದರು. ಹಾಗೆಂದು ಬಂದ ಮೇಷ್ಟ್ರು ನಾಲ್ಕೂ ಕ್ಲಾಸಿನ ಹಾಜರಿ ಕರೆದು, ಆ ದಿನ ನಡೆದ ನಮ್ಮ ಗಲಾಟೆಗಳನ್ನೆಲ್ಲ ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿ, ಮಧ್ಯಾಹ್ನದ ಸಜ್ಜಿಗೆ ತಿನ್ನಿಸಿ, ಆಟಕ್ಕೂ ಬಿಟ್ಟು, ಅವರೂ ಬೀಡಿ ಹೊಗೆ ಕುಡಿದು, ಎಲೆಯಡಿಕೆಯನ್ನೂ ತಿಂದು ಮುಗಿಯುವ ಹೊತ್ತಿಗೆ, ಅವರಿಗೆ ಮತ್ತೆ ನಾಲ್ಕು ಕಿ.ಮೀ ನಡೆದು ಬಸ್ಸು ಹಿಡಿದು ಮನೆಗೆ ತಲುಪಬೇಕಾದ ತರಾತುರಿಯ  ನೆನಪಾಗುತ್ತಿತ್ತು. ಹಾಗಾಗಿ ಸಂಜೆ ಮೂರರ ಒಳಗೆ ಶಾಲೆಗೆ ಬೀಗವೂ ಬೀಳುತ್ತಿತ್ತು. ಪರಿಣಾಮ, ಮೊದಲೇ ಕನ್ನಡವಲ್ಲದ ಮಾತೃಭಾಷೆಯ ನನ್ನಂತವ ತರಗತಿಯಿಂದ ತರಗತಿಗೆ ದಾಟುತ್ತಿದ್ದರೂ ಗಣಿತ, ವಿಜ್ಞಾನ ಬಿಡಿ, ಸರಿಯಾಗಿ ಕನ್ನಡ ಮಾತನಾಡಲು ಮತ್ತು ಅಕ್ಷರ ಕಲಿಯಲು ಮತ್ತೆ ನಾಲ್ಕು ವರ್ಷಗಳ ಹೆಚ್ಚುವರಿ ಸಮಯವೇ ಬೇಕಾಗುತ್ತಿತ್ತು (ಕೆಲವರಿಗೆ ಮತ್ತೆ ನಾಲ್ಕು ವರ್ಷ ಕಲಿಯುವ ಸಂದರ್ಭವೇ ಸೃಷ್ಟಿಯಾಗದ ಕಾರಣ ಬೀದಿ ಅನುಭವದಿಂದಲೇ ಕನ್ನಡ ಕಲಿತಿರಬಹುದು)  

ಮಲೆಯಾಳಂ, ತುಳು, ಮರಾಠಿ, ಕೊಂಕಣಿಯೇ ಮುಖ್ಯ ಭಾಷೆಯಾಗಿದ್ದ ಕರ್ನಾಟಕದ ಈ ಭಾಗದಲ್ಲಿ ನಮ್ಮ ಇಡೀ ಶಾಲೆಯಲ್ಲಿ ಕನ್ನಡ ಮಾತನಾಡಲು ಗೊತ್ತಿದ್ದವರೆಂದರೆ ಇಬ್ಬರು ಮಾತ್ರ (ಕೋಟ ಕ್ಷತ್ರಿಯ ಮಕ್ಕಳು) ಅವರಿಗೆ ಕೋಟ ಕನ್ನಡ ಬಿಟ್ಟು ಬೇರೆ ಭಾಷೆಯೂ ಬಾರದಿದ್ದ ಕಾರಣ ಹಾಗೂ ಶಾಲೆಯಲ್ಲಿ ಕನ್ನಡ ಪಠ್ಯದ ಹೊರತು ಬೇರೆಲ್ಲವೂ ನಡೆಯುತ್ತಿದ್ದ ಕಾರಣ ಅವರು ಆ ಕಾಲದಲ್ಲಿ ಕನ್ನಡ ನಾಡಿನಲ್ಲಿದ್ದೂ ಭಾಷಾ ಅಲ್ಪಸಂಖ್ಯಾತರಾಗಿಯೂ ಒಂಟಿತನದ ನಿರಾಶೆಯನ್ನು ಅನುಭವಿಸುವ ವಿದ್ಯಾರ್ಥಿಗಳಾಗಿಯೂ ಇದ್ದರು.

ಹೀಗೆ ಸುಲಭವಾಗಿ ಭಾಷೆ ಕಲಿಯುವ ಕಾಲದಲ್ಲಿ ಶಿಕ್ಷಕ- ಪೋಷಕರ ಬೆಂಬಲವಿಲ್ಲದೇ ಒದ್ದಾಡಬೇಕಾಯಿತು. ಆದರೆ ಕನ್ನಡ ಶಾಲೆಯ, ಅದೂ ಸರಕಾರಿ ಶಾಲೆಯ ಹೊರತಾಗಿ ಬೇರೆ ಶಾಲೆಗಳ ಆಯ್ಕೆಯೇ ಇಲ್ಲದ ಕಾರಣ ಕಿರಿಯ ಪ್ರಾಥಮಿಕ ಹಂತದಲ್ಲಿ ನಡೆಯದಿದ್ದರೂ ಮುಂದಿನ ಹಂತದಲ್ಲಾದರೂ ಕನ್ನಡ  ಕಲಿಯುವ ಅನಿವಾರ್ಯ ಇದ್ದೇ ಇತ್ತು. ಆಗ ಸರಕಾರಿ ಶಾಲೆ ಬೇಡ ಎಂದವರಿಗೆ ನಮ್ಮ ಪರಂಪರೆಯಲ್ಲಿದ್ದ ಉದ್ಯೋಗವೇ ಅಂತಿಮವಾಗಿದ್ದ ಕಾರಣ ಅದನ್ನು ತಪ್ಪಿಸುವುದಕ್ಕಾದರೂ ಶಾಲೆಗೆ ಹೋಗುವ, ಕಲಿಯುವ ಒಂದಷ್ಟು ಅನಿವಾರ್ಯ ನನ್ನಂತವನ ಪಾಲಿಗಿತ್ತು.

ಇದು ನನ್ನ ಕಾಲ. ಆದರೆ ನನ್ನ ಮಕ್ಕಳ ಕಾಲದ ಕಲಿಕೆಯ ಚಿತ್ರಣವೇ ಬೇರೆ. ಕನ್ನಡ ಕಲಿಯುವುದೇ ಅವಮಾನ, ಕಲಿತರೂ ಅದರಿಂದ ಭವಿಷ್ಯವಂತೂ ಇಲ್ಲ, ಖಾಸಗಿ ಶಾಲೆಗಳೇ ಅಂತಿಮ, ಅವೇ ಪ್ರತಿಷ್ಠೆ ಮತ್ತು ಅನ್ನದ ದಾರಿ ತೋರುವ ವ್ಯವಸ್ಥೆ ಇತ್ಯಾದಿ ಅತಿ ರಂಜಿತ ಸ್ಥಿತಿ ಈ ಕಾಲದ್ದು. ಮನೆಯಲ್ಲಿ ಕನ್ನಡ ಬಳಸಲು ಸಾಧ್ಯವಾಗದ (ಕರಾವಳಿಯ ಬಹುತೇಕರ ಮನೆ ಭಾಷೆ ಕನ್ನಡವಲ್ಲ), ಶಾಲೆಯಲ್ಲೂ  ಮಾತನಾಡುವ ಅವಕಾಶ ಇಲ್ಲದ ಕಾರಣ ಕನ್ನಡವು ಕಲಿಕಾ ಭಾಷೆಯಾಗುವುದು ಬಿಟ್ಟು  ಸಾಮಾನ್ಯ ಭಾಷೆಯಾಗಿಯೂ ನಿಲ್ಲುವ ಪರಿಸ್ಥಿತಿ ಇಲ್ಲವಾಗಿದೆ.

ಈ ಮಧ್ಯೆ ನಾನು ನನ್ನ ಮಕ್ಕಳಿಗೆ ಕನ್ನಡವನ್ನೇ ಕಲಿಕೆಯ ಭಾಷೆಯಾಗಿ ಕಲಿಸಲು ಒಂದಷ್ಟು ಸಾಹಸ ಮಾಡಬೇಕಾಯಿತು. ಮೊದಲನೆಯದು ಮೇಲೆ ಹೇಳಿದಂತೆ ನನ್ನದು ಕನ್ನಡೇತರ ಮನೆ ಭಾಷೆ, ಆದರೆ ನನ್ನ ಪತ್ನಿಯದ್ದು ಕನ್ನಡ. ಸಾಮಾನ್ಯವಾಗಿ ಮನೆಗೆ ಸೊಸೆಯಾಗಿ ಬರುವ ಯಾರೇ ಆದರೂ ಆ ಮನೆಯ ಭಾಷೆಯನ್ನೇ ಕಲಿಯಬೇಕು ಮತ್ತು ಮಾತನಾಡಬೇಕು ಎನ್ನುವುದು ಬಹುತೇಕ ಮನೆಗಳ ಅಲಿಖಿತ ಶಾಸನ. ಆದರೆ ಮೊದಲು ನಾವು ಈ ಶಾಸನವನ್ನು ಮುರಿಯಬೇಕಾಗಿತ್ತು. ಹಾಗಾಗಿ ಕೆಲವು ಒತ್ತಡಗಳ ಮಧ್ಯೆಯೂ ನನ್ನ ಪತ್ನಿ ಮತ್ತು ಮಕ್ಕಳ ಜತೆ ಆರಂಭದಿಂದಲೇ ನಾನು ಕನ್ನಡದಲ್ಲೇ ಮಾತನಾಡಲು ತೀರ್ಮಾನಿಸಿದೆ.‌ ಮನೆಯ ಇತರರು ತಮ್ಮ ಮನೆ ಭಾಷೆಯಲ್ಲೇ ಮಕ್ಕಳಲ್ಲಿ ಮಾತನಾಡುತ್ತಿದ್ದರೂ ನಾವು ಮಕ್ಕಳಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದೆವು. ಇದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಎರಡು ಭಾಷೆಗಳ ಕಲಿಕಾ ಅನುಭವ ಸಿಗಲು ಸಾಧ್ಯವಾಯಿತು (ಇಂದಿಗೂ ಮಕ್ಕಳು ತಮ್ಮ ಅಜ್ಜ ಅಜ್ಜಿಯರಲ್ಲಿ ಮನೆ ಭಾಷೆಯಲ್ಲೂ ನಮ್ಮಲ್ಲಿ ಕನ್ನಡದಲ್ಲೂ ಮಾತನಾಡುತ್ತಿದ್ದಾರೆ).

ಎರಡನೇ ತೀರ್ಮಾನ ಮಕ್ಕಳನ್ನು ಶಾಲೆಗೆ ಸೇರಿಸುವ ಹಂತದ್ದು. ನಾವು ಇಬ್ಬರು ಮಕ್ಕಳನ್ನೂ ಕನ್ನಡ ಶಾಲೆಗೇ ಸೇರಿಸುವುದೆಂದು ತೀರ್ಮಾನ ಮಾಡಿದೆವು. ಅದರಲ್ಲೂ ನಾವಿಬ್ಬರೂ ಸರಕಾರಿ ವ್ಯವಸ್ಥೆಯಲ್ಲಿ ದುಡಿಯುವ ಕಾರಣ ಸರಕಾರಿ ಶಾಲೆಗೇ ಸೇರಿಸಬೇಕೆಂದೂ ತೀರ್ಮಾನಿಸಿದೆವು. ಆ ಹಂತದಲ್ಲಿ ಕೆಲವು ಪ್ರತಿಕ್ರಿಯೆಗಳು, ಕುಹಕಗಳು ಬರತೊಡಗಿದವು. ಕನ್ನಡ ಶಾಲೆ ಅದರಲ್ಲೂ ಸರಕಾರಿ ಶಾಲೆಗೆ ಸೇರಿಸಿದ್ದಲ್ಲಿ ಮಕ್ಕಳ ಕಲಿಕಾ ಭವಿಷ್ಯ ಹೇಗೆ ಅಡ್ಡಿಯಾಗುತ್ತದೆ ಎಂದು ಒಂದಷ್ಟು ಜನ ವಿವರಿಸಿ ಭಯಪಡಿಸಲು ನೋಡಿದ ಸಂದರ್ಭವೂ ಇದೆ. ‘ದುಡ್ಡಿನ ಆಸೆಯಿಂದ’ ಸರಕಾರಿ ಶಾಲೆಗೆ ಕಳುಹಿಸುತ್ತಿರಬೇಕೆಂದು ಮಾತನಾಡಿದವರೂ ಇದ್ದರು. ‌ಆದರೆ ಕನ್ನಡವನ್ನು ಒಂದು ಮಾಧ್ಯಮವಾಗಿ ಕಲಿಯುವ ಅದೂ ಸರಕಾರಿ ವ್ಯವಸ್ಥೆಯಲ್ಲೇ ಉತ್ತಮವಾಗಿ ಪೂರೈಸಬೇಕೆನ್ನುವ ನೆಲೆಯಲ್ಲಿ ಮಕ್ಕಳ ಈ ರೀತಿಯ ಕಲಿಕೆಗೆ ನಾವು ತೀರ್ಮಾನಿಸಿದ್ದೆವು. ಬಾಲ್ಯದಿಂದಲೇ ಇಬ್ಬರಿಗೂ ಕನ್ನಡ ಸಂಬಂಧೀ ಪುಸ್ತಕ, ಸಿನಿಮಾ, ನಾಟಕ, ಸಂಗೀತ, ಭಾಷಣಗಳಲ್ಲಿ ಆಸಕ್ತಿ ಮೂಡುವಂತೆಯೂ ಒಂದಷ್ಟು ತೊಡಗಿಸಿಕೊಂಡಿದ್ದೆವು. ಬೇರೆಬೇರೆ ಕಡೆ ಕರೆದುಕೊಂಡು ಹೋಗುವ, ಭಾಷೆ ಮತ್ತು ವಿಷಯ ಜ್ಞಾನ ಬೆಳೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೆಲಸಗಳೂ ನಡೆಯುತ್ತಿದ್ದವು.

ಹೀಗೆ… ಸುಮಾರು ಹದಿನೈದು ಹದಿನಾರು ವರ್ಷಗಳಿಂದ ಕನ್ನಡವನ್ನು ಅಧಿಕೃತವಾಗಿ ಸರಕಾರಿ ಶಾಲೆಯಲ್ಲಿ ಕಲಿತದ್ದು, ಅಲ್ಲದೇ ಅದಕ್ಕೆ ಪೂರಕವಾಗಿ ತೊಡಗಿಕೊಂಡದ್ದರ ಪರಿಣಾಮ ಅಥವಾ ಅದರ ಫಲಶೃತಿಯಾಗಿ ಮಕ್ಕಳಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿದ್ದೇವೆ. ಈ ಪರಿಣಾಮವನ್ನು ಆಸಕ್ತ ಎಲ್ಲಾ ಪೋಷಕರು ಕಂಡುಕೊಳ್ಳಬಹುದು ಎನ್ನುವ ಕಾರಣಕ್ಕೆ ಕೆಳಗಿನ ಇನ್ನೂ ಕೆಲವು ವಾಸ್ತವವನ್ನು ನೀಡ ಬಯಸುತ್ತೇನೆ.

ಮಕ್ಕಳಿಗೆ ಕನ್ನಡ ಕಲಿಯುವುದರ ಜತೆಗೆ ಇಂಗ್ಲೀಷನ್ನು ಕಲಿಯುವ ಪ್ರಚೋದನೆಯನ್ನು ಎಲ್ಲಾ ಪೋಷಕರು ನಡೆಸಲೇಬೇಕು. ಹಾಗೆಂದು ಅದು ಒತ್ತಡವಾಗಬಾರದು. ಇಂಗ್ಲೀಷ್ ನ ಅಗತ್ಯ ಮತ್ತು ಅನಿವಾರ್ಯವನ್ನು ಮಕ್ಕಳಿಗೆ ತಿಳಿ ಹೇಳಿದರೆ ಮಕ್ಕಳು ಇಂಗ್ಲೀಷ್ ಭಾಷೆಯನ್ನು ಒತ್ತಡವಾಗಿಸದೇ ತಮ್ಮ ಪಾಡಿಗೆ ತಾವು ಕಲಿತು ಬಿಡುತ್ತಾರೆ. ಈ ಒತ್ತಡ ರಹಿತವಾಗಿ ಇಂಗ್ಲೀಷ್ ಕಲಿಸುವ ಕೆಲಸವನ್ನು ನಾವು ನಮ್ಮ ಮಕ್ಕಳಿಗೆ ಆರಂಭದಿಂದಲೇ ಮಾಡಿದ ಕಾರಣ ಇಂಗ್ಲೀಷನ್ನು ಇವರು ಚೆನ್ನಾಗಿ ಓದುವ, ಅರ್ಥೈಯಿಸುವ, ಅನುವಾದಿಸುವ ಮತ್ತು ಇಂಗ್ಲಿಷ್ ನಲ್ಲಿ ಧೈರ್ಯವಾಗಿ ಮಾತನಾಡುವ ಸಾಮರ್ಥ್ಯವನ್ನು ಪ್ರಾಥಮಿಕ ಹಂತದಿಂದಲೇ ರೂಢಿಸಿಕೊಂಡರು. ಹಾಗಾಗಿ ಪ್ರೌಢ ಹಂತದಲ್ಲಿ ಇಂಗ್ಲೀಷ್ ಮಾಧ್ಯಮ ಮತ್ತು ಕಾಲೇಜು ಹಂತದಲ್ಲಿ ಇಂಗ್ಲೀಷ್ ಬಳಕೆ ಇಬ್ಬರಿಗೂ ಕನ್ನಡದಷ್ಟೇ ಸಲೀಸಾಗಿ ರೂಢಿಸಿಕೊಳ್ಳಲು ಸಾಧ್ಯವಾಯಿತು. ಇದು ಮಾತ್ರವಲ್ಲದೇ ಇತರ ಭಾಷೆಗಳನ್ನು ಗೌರವಿಸುವ, ಒಂದು ಸಂವಹನ ಭಾಷೆಯಾಗಿ ಇತರ ಭಾಷೆಗಳನ್ನು ಸ್ವೀಕರಿಸುವ ಪ್ರೋತ್ಸಾಹವೂ ನಡೆಯಬೇಕು. ತುಳು ಮತ್ತು ಹಿಂದಿಯನ್ನು ಈ ನೆಲೆಯಲ್ಲಿ ನಾವು ಪ್ರೋತ್ಸಾಹಿಸಿದ್ದೇವೆ. ಪರಿಣಾಮ ಹಿಂದಿಯನ್ನು ಸಂದರ್ಭ ಬಂದಾಗಲೆಲ್ಲ ಮಾತನಾಡುವ, ತುಳುವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇಬ್ಬರಲ್ಲೂ ಬೆಳೆದಿದೆ. ಕನ್ನಡ ಕಲಿಕೆಯಿಂದಾಗಿ ಕನ್ನಡ ಸಂಬಂಧಿ ಪುಸ್ತಕಗಳಲ್ಲದೇ ಇಂಗ್ಲೀಷ್ ಪುಸ್ತಕಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿದೆ. ಇದರ ಜತೆಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಧೈರ್ಯ ಮತ್ತು ಅದರಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳನ್ನೂ ಈ ಭಾಷೆಗಳ ಸ್ವೀಕರಣದಿಂದ ಸುಲಭ ಸಾಧ್ಯವಾಗಿದೆ.

ಎಂಟನೇ ತರಗತಿಯಿಂದ ಇಬ್ಬರೂ ಸರಕಾರಿ ಶಾಲೆಯ ಇಂಗ್ಲೀಷ್ ಮೀಡಿಯಂನಲ್ಲಿ ಕಲಿತರೂ ಇಬ್ಬರೂ ದಾಖಲೆಯ ಅಂಕಗಳನ್ನು(ಓರ್ವ ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್  624/625, ಇನ್ನೊರ್ವ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲೂಕಿನಲ್ಲಿ ಪ್ರಥಮ) ಪಡೆಯಲು ಕನ್ನಡ ಮೂಲವಾಗಿ ಓದಿದ ಹಿನ್ನೆಲೆಯೇ ಕಾರಣವಾಗಿದೆ (ಓರ್ವ ಈಗಲೂ ಸರಕಾರಿ ಪಿಯು ಕಾಲೇಜಿನಲ್ಲೇ ಪಿಯುಸಿ ಮಾಡುತ್ತಿದ್ದಾನೆ).  ಹಾಗಾಗಿ ಕನ್ನಡದಲ್ಲಿ ಅಥವಾ ಸರಕಾರಿ ಶಾಲೆಯಲ್ಲಿ ಓದಿದ್ದಲ್ಲಿ ಅಂಕ ಗಳಿಸಲು ಸಾಧ್ಯವಿಲ್ಲ, ಅಗತ್ಯ ಬಿದ್ದರೆ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲೂ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ತಪ್ಪು ಎಂದು ಅಧಿಕೃತವಾಗಿ ಹೇಳಬಹುದು.

ಇದಲ್ಲದೇ ಈ ಇಬ್ಬರ ಆಸಕ್ತಿಯ ಸಾಂಸ್ಕೃತಿಕ ಕ್ಷೇತ್ರಗಳಾದ ಯಕ್ಷಗಾನ, ನಾಟಕ, ಸಿನಿಮಾದಲ್ಲೂ ತೊಡಗಿಕೊಳ್ಳುವುದಕ್ಕೆ ಕನ್ನಡ ಭಾಷೆಯೇ ಮೂಲ ಪ್ರೇರಣೆ ಮತ್ತು ಸಹಕಾರಿ. ಅನೇಕ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲು, ನಾಟಕದಲ್ಲಿ ಉತ್ತಮ ನಟನೆ ಮಾಡಲು ಮತ್ತು ಸಿನಿಮಾದಲ್ಲೂ ಸಣ್ಣಪುಟ್ಟ ಪಾತ್ರಗಳನ್ನು ಬಾಲ್ಯದಲ್ಲೇ ನಿರ್ವಹಣೆ ಮಾಡಲು ಇವರಿಗೆ ಕನ್ನಡ ಭಾಷೆ ಸಹಕರಿಸಿದೆ. ಬೇರೆಬೇರೆ ಭಾಷೆಗಳ ಸಿನಿಮಾದಲ್ಲಿ ಒಲವು ಮೂಡಿಸಲು ಮತ್ತು ತಮ್ಮ ತಿಳುವಳಿಕೆಗಳನ್ನು ಸಹಜವಾದ ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಕನ್ನಡ ಭಾಷಾ ಕಲಿಕೆ ಕಾರಣವಾಗಿದೆ. ರಾಜ್ಯ ಹಂತದ ಪತ್ರಿಕೆಗಳಿಗೆ ಲೇಖನ ಬರೆಯುವ ಮತ್ತು ಅದು ಪ್ರಕಟಗೊಳ್ಳಲು ಸಾಧ್ಯವಾಗಿಸಬಹುದಾದ ಭಾಷಾ ಹಿಡಿತ ಇಬ್ಬರಲ್ಲೂ ಇರುವುದನ್ನು ಗಮನಿಸಿದ್ದೇವೆ. ತಾಲೂಕು ಹಂತದಿಂದ ರಾಜ್ಯ ಹಂತದವರೆಗೆ ಭಾಷಣ, ಸೆಮಿನಾರ್ ಗಳಲ್ಲಿ ವಿಷಯ ಮಂಡಿಸುವ ಸಂದರ್ಭ ಬಂದರೂ ಭಾಷಾ ತೊಡಕಿಲ್ಲದೇ ಕನ್ನಡ, ಇಂಗ್ಲೀಷ್, ಹಿಂದಿ ಬೇಕಿದ್ದರೆ ಮಲೆಯಾಳಂ ಭಾಷೆಯನ್ನೂ ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ. ವಿಷಯವನ್ನು ಹುಡುಕುವ ಅದಕ್ಕೊಂದು ಚೌಕಟ್ಟನ್ನು ರೂಪಿಸುವ ಕೌಶಲವನ್ನು ಈ ಭಾಷಾ ಕಲಿಕೆ ನೀಡಿದೆ ಎನ್ನಬಹುದು.

ಒಟ್ಟಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಮಕ್ಕಳು ಕನ್ನಡ ಪಠ್ಯವನ್ನು ಕಲಿತುದರಿಂದ ಅವರ ಇದುವರೆಗಿನ ಕಲಿಕೆ ಮತ್ತು ಬೆಳವಣಿಗೆಯಲ್ಲಿ ಯಾವ ಧಕ್ಕೆಯೂ ತೊಡಕೂ ಕಂಡುಬಂದಿಲ್ಲ. ಅದರ ಬದಲು ಭಾಷಾ ಕೌಶಲವನ್ನು ಬೆಳೆಸುವಲ್ಲಿ, ವಿಷಯ ಜ್ಞಾನಗಳನ್ನು ಹೆಚ್ಚಿಸುವಲ್ಲಿ ಕನ್ನಡ ಹೆಚ್ಚಿನ ಸಹಕಾರವನ್ನು ನೀಡಿದೆ (ಇದನ್ನು ಮಕ್ಕಳೂ ಒಪ್ಪಿಕೊಳ್ಳುತ್ತಾರೆ). ಇತರ ಭಾಷಾ ಬಳಕೆಯ ಕೌಶಲಕ್ಕೂ ಸಾಂಸ್ಕೃತಿಕ ಗಟ್ಟಿತನಕ್ಕೂ ಕನ್ನಡ ಬುನಾದಿ ಹಾಕಿಕೊಟ್ಟಿದೆ. ಇದನ್ನೂ ಮೀರಿದ ಮುಂದಿನ ಬೆಳವಣಿಗೆ ಮಕ್ಕಳಾದರೂ ಅವರವರ ವೈಯಕ್ತಿಕ ತೀರ್ಮಾನದ್ದೇ ಆಗಿರುತ್ತದೆ.

 ವ್ವಸ್ಥೆಯ ಜತೆಗಿನ ಸಂಬಂಧ, ಸಂಪರ್ಕ, ವೈಯಕ್ತಿಕ, ಸಾರ್ವಜನಿಕ ಬೆಳವಣಿಗೆ, ದೈಹಿಕ, ಮಾನಸಿಕ ಆರೋಗ್ಯ ಇಂತಹಾ ಸಂಗತಿಗಳು ಕೇವಲ ಒಂದು ಭಾಷೆ ಗೊತ್ತಿದ್ದ ಮಾತ್ರಕ್ಕೇ ಅಥವಾ ಕನ್ನಡ ಕಲಿಯುವುದರಿಂದ ಮಾತ್ರ ಬರುತ್ತದೆ ಎಂದು ಹೇಳಲಾರೆ. ಯಾಕೆಂದರೆ ಭಾಷೆ ಎನ್ನುವುದು ಒಂದು ಮಾಧ್ಯಮ(ಕೌಶಲ)ವೇ ಹೊರತು ಭಾಷೆಯೇ ಜ್ಞಾನವಲ್ಲ. ಆದರೆ ಭಾಷೆ ಜ್ಞಾನವೃದ್ದಿಗೆ ಪೂರಕವಾಗಿ ನಿಲ್ಲಬಲ್ಲುದು ಎನ್ನುವುದನ್ನು ಪ್ರಾಯೋಗಿಕವಾಗಿ ಕಂಡುಕೊಂಡಿದ್ದೇನೆ. ಹಾಗೆಂದು ಮಕ್ಕಳ ಮೇಲೆ ಖಚಿತತೆ ಇಲ್ಲದೇ ನಡೆಸುವ ಯಾವುದೇ ಪ್ರಯೋಗಗಳಿಗೆ ನನ್ನ ವಿರೋಧ ಇದೆ. ಆದರೆ ಭಾಷಾ ಕೌಶಲ, ವಿಷಯ ಜ್ಞಾನ ಮತ್ತು ಅನುಭವ ಗಳಿಕೆಯ ಪೂರಕ ಚಟುವಟಿಕೆಗಳು ವೈಯಕ್ತಿಕ ಬೆಳವಣಿಗೆಯ ಸಾಧನಗಳು. ಇದನ್ನು ಪೋಷಕರ ಇಚ್ಛಾಶಕ್ತಿ ಮತ್ತು ಶಿಕ್ಷಕರ ಬೆಂಬಲದಿಂದ ಪಡೆಯಲು ಸಾಧ್ಯ ಎಂದು ಮಾತ್ರ ಹೇಳಬಲ್ಲೆ.

ಡಾ.ಸುಂದರ ಕೇನಾಜೆ

ಅಧ್ಯಾಪಕರು, ಜಾನಪದ ಸಂಶೋಧಕರು.


ಇದನ್ನೂ ಓದಿ- ಬಂಜಾರ ಅಕಾಡೆಮಿ ಅಧ್ಯಕ್ಷರ ತಲೆದಂಡ

More articles

Latest article