ಸ್ಮರಣೆ | ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣ ಗುರು

Most read

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಘೋಷಣೆಯ ಮೂಲಕ ಸಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದ ಸಮಾಜ ಸುಧಾರಕ ನಾರಾಯಣ ಗುರುಗಳ ಜಯಂತಿಯ (ಸೆ. 7 ) ಪ್ರಯುಕ್ತ ಅವರನ್ನು ಸ್ಮರಿಸಿ ಉಮೇಶ್ ನಾಯ್ಕ ಅವರು ಬರೆದ ಲೇಖನ ಇಲ್ಲಿದೆ.

ಭಾರತೀಯ ಸಮಾಜವು ಮನುಸ್ಮೃತಿ ನಿರ್ಮಿತ ನಾಲ್ಕು ವರ್ಣಗಳ ಜೊತೆಗೆ ನೂರಾರು ಜಾತಿಗಳಾಗಿ ನಲುಗುತ್ತಿದ್ದ ಕಾಲವದು. ಬ್ರಿಟೀಷರು ರಾಜಕೀಯ ಸ್ವಾತಂತ್ರ್ಯವನ್ನು ಇಡಿಯಾಗಿ ಕಸಿದುಕೊಂಡು ದೇಶವನ್ನು ಗುಲಾಮಗಿರಿಗೆ ತಳ್ಳಿದ ಸಂದರ್ಭವದು. ಇಡಿ ದೇಶವೇ ಬಡತನ, ನಿರಕ್ಷರತೆ, ಜಾತಿ ಆಧಾರಿತ ಶೋಷಣೆ ಮತ್ತು ಅಸ್ಪೃಶ್ಯತೆಯಿಂದ ನಲುಗುತ್ತಿದ್ದ ಆ ಕಠಿಣ ಸಂದರ್ಭದಲ್ಲಿ ಕೇರಳದ ಸಾಮಾಜಿಕ ವ್ಯವಸ್ಥೆಗೆ ಬೆಳಕಾಗಿ ಬಂದವರು ನಾರಾಯಣ ಗುರುಗಳು.

ಕೇರಳವು ಸುಮಾರು ಐನೂರು ಜಾತಿ ಉಪಜಾತಿಗಳಿಂದ ಕೂಡಿದ್ದು ಈ ಎಲ್ಲ ಜಾತಿಗಳನ್ನು  ಪ್ರಮುಖ ಒಂಬತ್ತು ಜಾತಿಗಳಾಗಿ ಗುರುತಿಸ ಬಹುದಾಗಿದೆ. ಬ್ರಾಹ್ಮಣ, ಕ್ಷತ್ರಿಯ, ಅಂಬಳವಾಸಿ   ಅಥವಾ ವಾದ್ಯಗಾರರು, ಸಾಮಂತ ಇವರು ಸ್ಥಳೀಯ ಮುಖಂಡರು, ನಾಯರ್ ಇವರು ವೃತ್ತಿಯಿಂದ ಸೈನಿಕರು ಆದರೆ ಜಾತಿಯಿಂದ ಶೂದ್ರರು, ಕಮ್ಮಾಳ ಇವರು ಕಲೆಗಾರರು, ತೀಯ ಅಥವಾ ಈಳವ  ಬಟ್ಟೆಯ ನೇಯ್ಗೆ, ಬೇಸಾಯ, ವೈದ್ಯಕೀಯ, ಜೋತಿಷ್ಯ ಇವರ ಪ್ರಮುಖ ಉದ್ಯೋಗವಾಗಿದ್ದವು. ಜೊತೆಗೆ ಉಪವೃತ್ತಿಯಾಗಿ ಕಳ್ಳು ತೆಗೆಯುವುದು ಇತ್ತು. ಮುಕ್ಕುವನ್  ಅಂದರೆ ಮೊಗವೀರ ಮತ್ತು ಕೊನೆಯದಾಗಿ ಅವರ್ಣರು–ಇವರು ಚಾತುರ್ವರ್ಣ ವ್ಯವಸ್ಥೆಯ ಹೊರಗಿನವರು. ಮುಖ್ಯವಾಗಿ ಪುಲಯ್ಯ, ನಾಡರ್, ಕಮ್ಮಳರ್, ಅರಯ್ಯರ್, ಪರಯ್ಯರ್, ಕುರವರ್, ವೇಡರ್, ಕಣ್ಣಿಕ್ಕಾರ್, ಪುಳ್ಳವರ್, ನಾಯಡಿ ಮುಂತಾದವರು. ಇವರುಗಳು ಅತೀ ಅಸ್ಪೃಶ್ಯರೆಂದು ಗುರುತಿಸಲ್ಪಡುತ್ತಿದ್ದರು.

ಸಂಖ್ಯಾ ಬಾಹುಳ್ಯದ ದೃಷ್ಟಿಯಿಂದ ನಾಯರ್ ಮತ್ತು ಈಳವರು ಪ್ರಧಾನ ಎರಡು ಜನಾಂಗಗಳು. ಆದರೆ ನಾಯರ್ ಜನಾಂಗದವರನ್ನು ಸವರ್ಣೀಯರೆಂದು ಪರಿಗಣಿಸಲಾಗಿತ್ತು  ಮತ್ತು ಈಳವರನ್ನು ವರ್ಣವೇ ಇಲ್ಲದ ಅವರ್ಣೀಯರ ಸಾಲಿನಲ್ಲಿಡಲಾಗಿತ್ತು. ನಾಯರ್ ಜನಾಂಗಕ್ಕಿಂತ ಮೇಲಿನ ಸ್ಥಾನದಲ್ಲಿ ಸಣ್ಣ ಸಂಖ್ಯೆಯ ನಂಬೂದಿರಿ ಬ್ರಾಹ್ಮಣರಿದ್ದರು. ಅಸ್ಪೃಶ್ಯರೆಂದು ಗುರುತಿಸಲಾದ ಈಳವರು ಬ್ರಾಹ್ಮಣರಿಗೆ 32 ಅಡಿಗಳ ಅಂತರದಲ್ಲಿ ಮತ್ತು ನಾಯರ್‌ ರವರಿಗಿಂತ 12 ಅಡಿ ದೂರದಲ್ಲಿ ನಿಲ್ಲಬೇಕಿತ್ತು ಮತ್ತು ಈ ನಿಯಮ ಮುರಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಈಳವ ಮಹಿಳೆಯರ ಸ್ಥಿತಿಯಂತೂ  ಚಿಂತಾಜನಕವಾಗಿತ್ತು.

ಈ ಬಗೆಯ ಅತ್ಯಂತ ಕಠಿಣ ಜಾತಿ ವ್ಯವಸ್ಥೆಯಲ್ಲಿ ನಲುಗುತ್ತಿದ್ದ ಕೇರಳದ ಸಾಮಾಜಿಕ ಸಮಸ್ಯೆಗೆ ಬೆಳಕಿನ ರೂಪದಲ್ಲಿ ಒದಗಿ ಬರಬೇಕಾದ ಒಂದು ಚೇತನದ ಅಗತ್ಯವಿತ್ತು. ಹೀಗಿರುವಾಗ ಕೇರಳದ ತಿರುವನಂತಪುರದಿಂದ ಏಳು ಮೈಲು ಪೂರ್ವೋತ್ತರಕ್ಕೆ  ಚೆಂಬಳಾತಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದ ಮಾಡನ್ ಆಶಾನ್ ಮತ್ತು ಕುಟ್ಟಿಯಮ್ಮ ಎಂಬ ಈಳವ ದಂಪತಿಗಳಿಗೆ ಕ್ರಿ.ಶ.1856 ರಲ್ಲಿ ನಾಲ್ಕನೆಯ ಮಗುವಾಗಿ (ಕೆಲವು ಮೂಲಗಳ ಪ್ರಕಾರ ಕ್ರಿ,ಶ.1854) ಜನಿಸಿದ ಬೆಳಕೆ ನಾರಾಯಣಗುರು.

ಕುಟುಂಬದ ಎಲ್ಲ ಸದಸ್ಯರಿಂದ ‘ನಾಣು’ ಎಂದು ಕರೆಯಿಸಿಕೊಳ್ಳುತ್ತಿದ್ದ ನಾರಾಯಣ ಬಾಲ್ಯದಿಂದಲೂ  ಸತ್ಯ ಸಂಶೋಧಕ ಪ್ರವೃತ್ತಿಯವನಾಗಿದ್ದ. ಈಳವ ಜನಾಂಗ ಎದುರಿಸುತ್ತಿದ್ದ ಸಮಸ್ಯೆಗಳು ಬಾಲಕ ನಾಣುವಿಗೆ ಅದಾಗಲೇ ಅರ್ಥವಾಗತೊಡಗಿದ್ದವು. ಮುಖ್ಯವಾಗಿ ತನ್ನ ಮನೆಯವರೇ  ಆಚರಿಸುತ್ತಿದ್ದ  ಅಸ್ಪೃಶ್ಯತೆಯ ಕುರಿತು ಅಸಮಾಧಾನ  ವ್ಯಕ್ತಪಡಿಸುತ್ತಿದ್ದನು. ತನ್ನ ಮನೆಯ ಹಿರಿಯರು ಈಳವರಿಗಿಂತ ಕೆಳವರ್ಗದವರಾದ ಹೊಲೆಯರನ್ನು  ಮುಟ್ಟುತ್ತಿಲ್ಲವೆಂಬುದನ್ನು, ಅವರನ್ನು ಕೀಳೆಂದು ಪರಿಗಣಿಸುವುದನ್ನು ತಪ್ಪು ಎಂದು ಭಾವಿಸಿಕೊಳ್ಳುತ್ತಿದ್ದ ಮತ್ತು ಈ ನಡೆಯ ವಿರುದ್ಧ ಪ್ರತಿಭಟಿಸುತ್ತಿದ್ದ. ಚಿಕ್ಕವಯಸ್ಸಿನಲ್ಲೇ ಇವರಿಗೆ ಬಡವರು, ಹಿಂದುಳಿದವರನ್ನು ಕಂಡರೆ ಪ್ರೀತಿ ಮತ್ತು ಅನ್ಯಾಯ ಕಂಡರೆ ವಿರೋಧಿಸುವ ಪ್ರವೃತ್ತಿ ಇತ್ತು.

ನಾಣುವಿಗೆ ಹದಿಮೂರು ವರ್ಷವಾಗುವಾಗ ತಾಯಿ ಕುಟ್ಟಿಯಮ್ಮ ಇಹಲೋಕ ತ್ಯಜಿಸುತ್ತಾರೆ. ಈ ಘಟನೆಯಿಂದ, ಬೆಳೆಯುತ್ತಿದ್ದ ಮಗುವಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ. ನಂತರದಲ್ಲಿ ನಾಣು ಕೃಷಿ ಕೆಲಸದಲ್ಲಿ  ಮನೆಯವರಿಗೆ ನೆರವು ನೀಡಲು ಆರಂಭಿಸುತ್ತಾನೆ. ಆದರೆ ಮನೆಯಲ್ಲೂ ಹೊಲದಲ್ಲೂ ಆತನು ಸದಾ ಅನ್ಯಮನಸ್ಕನಾಗಿರುತ್ತಿದ್ದ. ಆತನ ನಡವಳಿಕೆ ಯಾವುದೋ ಸತ್ಯದ ಹುಡುಕಾಟದಂತೆ ಇರುತ್ತಿತ್ತು. ಈ ಅನ್ಯಮನಸ್ಕತೆಯನ್ನು  ಗಮನಿಸಿದ ಕುಟುಂಬದ ಹಿರಿಯರಿಗೆ ‘ಈತನು ಸಾಮಾನ್ಯ ವ್ಯಕ್ತಿಯಾಗಿ ಬಾಳಿ ಬದುಕಲು ಹುಟ್ಟಿದವನಲ್ಲ ಎಂದೆನಿಸಿ ಹೆಚ್ಚಿನ ಓದಿಗೆ ಅವಕಾಶ ಮಾಡಿಕೊಡಬೇಕೆಂದು ಯೋಚಿಸುತ್ತಾರೆ.

ನಾಣು‘ಆಶಾನ್’ಆದರು

ಪ್ರಬುದ್ಧ ಚಿಂತಕರಾಗಿ ರೂಪುಗೊಂಡ ನಾರಾಯಣ ಸಮಾಜದಲ್ಲಿ ಕೆಳವರ್ಗ ಅನುಭವಿಸುತ್ತಿರುವ ಹಲವು ಸಂಕಷ್ಟಗಳನ್ನು ಚಿಕ್ಕವಯಸ್ಸಿನಲ್ಲಿಯೇ ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಹೊಂದಿದ್ದರು ಮತ್ತು ಆ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಶಿಕ್ಷಣ ಎನ್ನುವ ಅರಿವು ಅವರಿಗಿತ್ತು. ಈ ತುಡಿತಗಳ ಕಾರಣದಿಂದಾಗಿ ‘ಕಡಕ್ಕವೂರು’ ಎಂಬಲ್ಲಿ ಬಡ ಮತ್ತು ಹಿಂದುಳಿದ ಮಕ್ಕಳಿಗಾಗಿ ಓದು ಬರಹ ಕಲಿಸುವ ಉದ್ದೇಶದಿಂದ ಶಾಲೆಯನ್ನು ತೆರೆದು ತಾವೇ ಪಾಠ ಪ್ರವಚನ ಆರಂಭಿಸುತ್ತಾರೆ.

ನಂತರದಲಿ ‘ಅಂಚುತೆಂಗು’ ಎಂಬಲ್ಲಿ ಮತ್ತೊಂದು ಶಾಲೆಯನ್ನು ತೆರೆದು ತಮ್ಮ ಶಿಕ್ಷಣ ಸೇವೆ ತೀವ್ರಗೊಳಿಸುತ್ತಾರೆ. ಈ ಕೆಲಸದಿಂದಾಗಿ ಎಲ್ಲರ ಪ್ರೀತಿಯ ನಾಣು ‘ಆಶಾನ್’ ಆಗಿ ಅಂದರೆ ಶಿಕ್ಷಕನಾಗಿ ಗುರುತಿಸಲ್ಪಡುತ್ತಾರೆ. ಆದರೆ ಇಲ್ಲಿಯೂ ಕೂಡ ಶಾಲಾ ಸಮಯದ ನಂತರ ಪುಲಯ್ಯರ ಕೇರಿಯ ಮಕ್ಕಳಿಗೆ ಪಾಠ ಹೇಳುತ್ತಿದ್ದ ಕಾರಣದಿಂದ ಸಂಪ್ರದಾಯವಾದಿಗಳ ಕೋಪಕ್ಕೆ ಗುರಿಯಾಗುತ್ತಾರೆ. ಆದರೆ ಅದಾವುದರಿಂದಲೂ ವಿಚಲಿತರಾಗದ ನಾರಾಯಣ ಗುರುಗಳು ತಮ್ಮ ಸೇವೆಯನ್ನು ಮುಂದುವರಿಸುತ್ತಾರೆ.

ಸುಧಾರಣಾ ಚಳುವಳಿಗಳು

ಕರ್ನಾಟಕದಲ್ಲಿ ಕ್ರಾಂತಿಕಾರಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರಾಗಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಬಹುಮುಖ್ಯವಾಗಿ ಗುರುತಿಸಲ್ಪಟ್ಟರೆ, ಕೇರಳದಲ್ಲಿ ಅಂತಹ ಮಹತ್ವದ ಕೆಲಸವನ್ನು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಮಾಡಿ ತೋರಿಸಿದವರು  ನಾರಾಯಣಗುರುಗಳು.

ಅಸ್ಪೃಶ್ಯತೆಯ ವಿರುದ್ಧ ವಿನೂತನ ದನಿ

ನಾರಾಯಣ ಗುರುಗಳ ಸಾಮಾಜಿಕ ಸುಧಾರಣಾ ಚಳುವಳಿಯು 1888 ರಲ್ಲಿ ಕೇರಳದ ಅರವಿಪುರಂ ನಲ್ಲಿ ಲಿಂಗಪ್ರತಿಷ್ಟಾಪನೆಯ ಮೂಲಕ ದೇವಸ್ಥಾನದ ನಿರ್ಮಾಣ ಆಗುವುದರೊಂದಿಗೆ ಆರಂಭವಾಗುತ್ತದೆ. ಆನಂತರದಲ್ಲಿ ಅದು ಮುಂದುವರೆದು ಶೋಷಿತರ ದನಿಯಾಗಿ ಹಲವು ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತದೆ ಮತ್ತು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದ ದೊಡ್ಡ ಬೆಳವಣಿಗೆಗೆ ಮುನ್ನುಡಿಯಾಗುತ್ತದೆ. ಅಸ್ಪೃಶ್ಯತೆಯ ವಿರುದ್ಧ ‘ದೇವಸ್ಥಾನದ ಪ್ರವೇಶ’ ಬದಲಾವಣೆಯ ಒಂದು ಪ್ರಮುಖ ಸಂಕೇತವಾಗಿ ಗುರುತಿಸಿಕೊಳ್ಳಬೇಕು ಎನ್ನುವ ವಿಚಾರಗಳು ಆ ದಿನಗಳ ಹೋರಾಟಗಾರರಲ್ಲಿತ್ತು. ಆದರೆ ನಾರಾಯಣ ಗುರುಗಳು ಈ ದಾರಿಗೆ ಭಿನ್ನವಾದ ಯೋಚನೆಯನ್ನು ಮಾಡಿದ್ದರು. ದೇವಸ್ಥಾನದ ಪ್ರವೇಶಕ್ಕಾಗಿ ಹೋರಾಡುವುದು, ಆ ಮೂಲಕ ಶಾಂತಿ ಭಂಗವಾಗುವ ಅಥವಾ ಹಿಂಸೆಗೆ ಕಾರಣವಾಗುವ ಬದಲಿಗೆ ಸವರ್ಣೀಯರ ದೇವಸ್ಥಾನವನ್ನೇ ತಿರಸ್ಕರಿಸುವ ಯೋಚನೆ ಮಾಡಿದ್ದರು. ಈ ನಡೆ ಸ್ವಾಭಿಮಾನದ ಸಂಕೇತವಾಗಿತ್ತು ಮತ್ತು ಅಸೃಶ್ಯರಿಗೆ ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವುದನ್ನು ಕಲಿಸುವುದಾಗಿತ್ತು.

ದೇವಸ್ಥಾನದ ಪ್ರವೇಶವನ್ನು ಅಸ್ಪೃಶ್ಯರಿಗೆ ನಿರ್ಬಂಧಿಸಿದ ಆ ಕಠಿಣ ದಿನಗಳಲ್ಲಿ ನಾರಾಯಣಗುರುಗಳು ಮಹಾಶಿವರಾತ್ರಿಯ ದಿನದಂದು ನೆಯ್ಯಾರ ನದಿಯ ತಳದಿಂದ ಕಲ್ಲೊಂದನ್ನು ಎತ್ತಿ ತಂದು ‘ಇದೇ ನಮ್ಮ ಶಿವಲಿಂಗ’ ಎಂದು ಪ್ರತಿಷ್ಠಾಪಿಸುತ್ತಾರೆ. ಆದರೆ ಈ ಕ್ರಾಂತಿಕಾರಿ ನಿಲುವು ಸಾವಿರಾರು ವರ್ಷಗಳಿಂದ ಮೇಲ್ವರ್ಗದವರು ಹಾಕಿದ ಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಶೂದ್ರ ಈಳವ ಜನಾಂಗದ ನಾರಾಯಣನಿಗೆ ಶಿವಲಿಂಗ ಪ್ರತಿಷ್ಠಾಪನೆಯ ಅಧಿಕಾರ ಕೊಟ್ಟವರಾರು? ಎಂದು ಬ್ರಾಹ್ಮಣರು ತೀವ್ರವಾಗಿ ವಿರೋಧಿಸಿದಾಗ, “ಅದು ನಿಮ್ಮ ಶಿವ ಅಲ್ಲ ಈಳವರ ಶಿವ. ಅದರ ಬಗ್ಗೆ ನಿಮಗೇಕೆ ವಿರೋಧ?”ಎಂದು ಅಷ್ಟೇ ಮಾರ್ಮಿಕವಾಗಿ ಉತ್ತರ ಕೊಡುತ್ತಾರೆ. ಬ್ರಾಹ್ಮಣರು ‘ಈತ ಶಿವನನ್ನೇ ಮೈಲಿಗೆ ಮಾಡಿದ’ ಎಂದು ಪ್ರಚಾರದಲ್ಲಿ ತೊಡಗಿದಾಗ ತನ್ನವರಾದ ಅಸ್ಪೃಶ್ಯರಿಗೆ “ಉತ್ತಮರೆಂದು ಹೇಳಿಕೊಳ್ಳುವವರ ನಿಂದನೆಗಳಿಗೆ ಹೆದರಬೇಡಿ. ಅವರ ವಿರುದ್ಧ ಪ್ರತೀಕಾರದ ಮಾತೆತ್ತಬೇಡಿ. ನಾನು ಪ್ರತಿಷ್ಠಾಪಿಸಿದ್ದು ನಮ್ಮ ಮೈಲಿಗೆಯ ಶಿವನನ್ನೇ. ಮೈಲಿಗೆಯ ಶಿವನು ನಂಬೂದರಿಯೂ ಅಲ್ಲ ಈಳವನೂ ಅಲ್ಲ” ಎನ್ನುವ  ಸಂದೇಶವನ್ನು ನೀಡುತ್ತಾರೆ.

ಅರಿವಿನ ಕೇಂದ್ರವಾದ ದೇವಾಲಯಗಳು

ನಾರಾಯಣ ಗುರುಗಳ ಸಾಮಾಜಿಕ ಪ್ರಜ್ಞೆಯು ಸರ್ವಜೀವಗಳಲ್ಲಿ ಸಮಾನತೆ ಮತ್ತು ವಿಶ್ವಮಾನವತೆಯನ್ನು ಒಳಗೊಳ್ಳುವುದಾಗಿತ್ತು. ಗುರುಗಳು ತಮ್ಮ ಚಳುವಳಿಯ ಉದ್ದಕ್ಕು ದೇವಾಲಯಗಳನ್ನು ಸಾಮಾಜಿಕ ಬದಲಾವಣೆಯ ಕೇಂದ್ರವಾಗಿ ಹಾಗು ಅರಿವಿನ ವಿಸ್ತಾರದ ಸಾಧನವಾಗಿ ಬಳಸಿಕೊಂಡಿದ್ದರು. ಅವರಿಗೆ ದೇವಾಲಯಗಳು ವ್ಯಾಪಾರಿ ಕೇಂದ್ರವಾಗಬಾರದು. ಹೋಮ, ಹವನ, ಪೂಜೆ…. ಇತ್ಯಾದಿಗಳಿಂದ ಕೂಡಿರುವ, ಬರೀ ಮೌಢ್ಯಗಳನ್ನು ಬೆಳೆಸುವ ಕೇಂದ್ರವಾಗಬಾರದೆಂಬ ಎಚ್ಚರವಿತ್ತು. ದೇವಾಲಯಗಳನ್ನು ವೈಚಾರಿಕತೆಯ ಕೇಂದ್ರವಾಗಿಸಿದ ಗುರುಗಳು ಅಂತಿಮ ಹಂತದಲಿ ದೇವಾಲಯಗಳಲ್ಲಿ ಮೂರ್ತಿ ಸ್ಥಾಪನೆಯನ್ನು ನಿಲ್ಲಿಸಿ, ಅದರ ಬದಲಿಗೆ ಕನ್ನಡಿ ಇಡುವ ಕೆಲಸ ಮಾಡುತ್ತಾರೆ. ಜೊತೆಗೆ ‘ಸತ್ಯ, ಧರ್ಮ, ಶಾಂತಿ, ದಯೆ’ ಎಂಬ ಸಂದೇಶ ಸಾರುವ ಫಲಕ ಇಡುತ್ತಾರೆ ಮತ್ತು ದೇವಾಲಯಗಳಲ್ಲಿ ಅರ್ಚಕರನ್ನಾಗಿ ಕೆಳವರ್ಗದವರನ್ನು ನೇಮಿಸಿದರು. “ಜನರು ದೇವಸ್ಥಾನಕ್ಕೆ ಬಂದು ಪೂಜಿಸಿದ ಮಾತ್ರಕ್ಕೆ ಅಭಿವೃದ್ಧಿ ಅಸಾಧ್ಯ, ದೇವಸ್ಥಾನಗಳು ಇನ್ನು ಶಿಕ್ಷಣದ ಕೇಂದ್ರವಾಗಬೇಕು” ಎಂಬ ತೀರ್ಮಾನಕ್ಕೆ ಬರುತ್ತಾರೆ ಮತ್ತು “ಶಿಕ್ಷಣದಿಂದ ಸ್ವತಂತ್ರರಾಗಿರಿ” ಎಂಬ ಸಂದೇಶ ನೀಡುತ್ತಾರೆ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ “ಇನ್ನು ದೇವಾಲಯಗಳ ಸ್ಥಾಪನೆ ನಿಲ್ಲಿಸಿ, ಬದಲಿಗೆ ಶಿಕ್ಷಣಾಲಯಗಳನ್ನು ಸ್ಥಾಪಿಸಿ” ಎಂದು ಕರೆಕೊಡುತ್ತಾರೆ.

‘ಮನುಷ್ಯ ಬದಲಾಗಬೇಕು; ಜಾತಿಯಲ್ಲ’

ಕೆಳವರ್ಗದ ಜನಸಮೂಹ ಈ ಜಾತಿ ಆಧಾರಿತ ದೌರ್ಜನ್ಯದಿಂದ ಪಾರಾಗಲು ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕೇರಳದಲ್ಲಿ ಮತಾಂತರಕ್ಕೆ ಬೇಕಾದಂತ ಎಲ್ಲ ಬಗೆಯ ಪೂರಕ ವೇದಿಕೆಗಳು ಇದ್ದವು. ಮತಾಂತರದ  ಎಲ್ಲ ಬೆಳವಣಿಗೆಯನ್ನು ಅತ್ಯಂತ ಸಂಯಮದಿಂದ ಗಮನಿಸಿ ನಾರಾಯಣ ಗುರುಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 1924 ರ ಫೆಬ್ರುವರಿಯಲ್ಲಿ ಅಲ್ವಾಯಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ಸಂಘಟಿಸಿದರು. ಈ ಸಮ್ಮೇಳನದ ಉದ್ದೇಶ “ತರ್ಕ ನಡೆಸುವುದಕ್ಕಾಗಲಿ, ಗೆಲ್ಲಲಿಕ್ಕಾಗಲಿ ಅಲ್ಲ. ಬದಲಿಗೆ ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು” ಎಂದು ಘೋಷಿಸಿದ್ದರು. ಬಹುತೇಕ ಎಲ್ಲ ಧರ್ಮಗಳ ಮುಖಂಡರು ಭಾಗವಹಿಸಿದ್ದ ಈ ಸಭೆಯಲ್ಲಿ ಮಾತನಾಡುತ್ತ ಗುರುಗಳು “ಮನುಷ್ಯ ಬದಲಾದರೆ ಜಾತಿ ಬದಲಾಯಿಸಬೇಕಾದ ಅಗತ್ಯವಿಲ್ಲ” ಎಂದು ಹೇಳುತ್ತಾರೆ. ಮತಾಂತರದಂತಹ ಸೂಕ್ಷ್ಮ ಸಂಗತಿಯನ್ನು ಅತ್ಯಂತ ಸರಳವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ತಮ್ಮ ಸಂಗಾತಿಗಳಿಗೆ, ಈಳವ ಮತ್ತು ಇತರ ಹಿಂದುಳಿದವರಿಗೆ ಮನದಟ್ಟು ಮಾಡಿಸುತ್ತಾರೆ.

ಗುರುಗಳ ಕೊನೆಯ ದಿನಗಳು

ಕೇರಳದಲ್ಲಿ ಅಸ್ಪೃಶ್ಯರ ಬದುಕಿನ ಕ್ಲಿಷ್ಟ ದಾರಿಗೆ ಮಹತ್ವದ ಬದಲಾವಣೆಯನ್ನು ತಂದಿದ್ದ ನಾರಾಯಣ ಗುರುಗಳಿಗೆ ಮತ್ತು ಅವರ ಚಿಂತನೆಗಳಿಗೆ ಬೆಂಬಲವಾಗಿ ನಿಂತಿದ್ದ ಎಸ್.ಎನ್.ಡಿ.ಎಫ್ ತನ್ನ ಉದ್ದೇಶಿತ ಸಂಘಟನೆಯ ದೃಷ್ಟಿಯಿಂದ ವಿಶಾಲವಾಗಿ ಬೆಳೆದಿತ್ತು. ನೂರಾರು ಶಿಕ್ಷಣ ಸಂಸ್ಥೆಗಳಿಂದ ಗುರುಗಳ ಆಶಯವನ್ನು ಈಡೇರಿಸುವ ದಾರಿಯಲ್ಲಿ ಸಾಗಿತ್ತು. ಆದರೆ ಅದೇ ಹೊತ್ತಿಗೆ ಕೆಲವು ಮುಖಂಡರ ರಾಜಕೀಯ ಮಹತ್ವಾಕಾಂಕ್ಷೆಗಳಿಂದಾಗಿ ಸಂಘಟನೆಯಲ್ಲಿ ವಿಚಿತ್ರ ಬೆಳವಣಿಗೆಯಾಗಲು ಆರಂಭವಾದವು. ಈ ಬೆಳವಣಿಗೆಯಿಂದ ನೊಂದ ಗುರುಗಳು ನಿಧಾನವಾಗಿ ಅಂತರ್ಮುಖಿಯಾಗ ತೊಡಗಿದರು. ಈ ನಡುವೆ ಯಾವತ್ತೂ ಬೆಂಬಲವಾಗಿ ಸಹಾಯಕರಾಗಿ ಇರುತ್ತಿದ್ದ ಆತ್ಮೀಯ ಶಿಷ್ಯರಾದ ಕುಮಾರ ಆಶಾನ್, ಶಿವಲಿಂಗ ದಾಸ ಸ್ವಾಮಿ, ಸತ್ಯವೃತ ಸ್ವಾಮಿಗಳು, ಆತ್ಮೀಯ ಒಡನಾಡಿಯಾಗಿದ್ದ ಚಟಂಬಿ ಸ್ವಾಮಿಗಳು ತೀರಿಕೊಂಡಿದ್ದರು. ಆಪ್ತರಾಗಿ ಜೊತೆಗಿರುತ್ತಿದ್ದ ಡಾ ಪಲ್ಪುರವರು ಕೂಡ ವೈರಾಗ್ಯ ಎಂಬಂತೆ ಏಕಾಂತವಾಸಿಯಾಗಿ ಮನೆಯಲ್ಲಿದ್ದರು. ಈ ಎಲ್ಲ ಬೆಳವಣಿಯ ಜೊತೆಗೆ ಒಬ್ಬಂಟಿಯಂತಿದ್ದ ಗುರುಗಳ ವಯಸ್ಸು 70 ಕ್ಕೆ ತಲುಪಿತ್ತು.

ಅಂದು ದಿನಾಂಕ: 20/09/1928 ರ ಗುರುವಾರ ಮೂರು ಗಂಟೆಯ ಸಮಯ “ತನಗೆ ಸಂಪೂರ್ಣ ಶಾಂತಿಯ ಅನುಭವವಾಗುತ್ತಿದೆ” ಎಂದು ಅವರು ಹೇಳಿಕೊಳ್ಳುತ್ತಾರೆ ಮತ್ತು ಆಪ್ತ ಶಿಷ್ಯರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾರೆ. ನಂತರದಲ್ಲಿ ಗುರುಗಳ ನಿರ್ದೇಶನದಂತೆ ಆಪ್ತ ಶಿಷ್ಯರುಗಳು ದೈವದಶಕವನ್ನು ಹಾಡಲು ಆರಂಭಿಸುತ್ತಾರೆ. ಶಿಷ್ಯರುಗಳು ದೈವದಶಕವನ್ನು ಹಾಡುತ್ತಿದ್ದಂತೆಯೇ ಗುರುಗಳು ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚುತ್ತಾರೆ.

ಉಮೇಶ್‌ ನಾಯ್ಕ

ಇದನ್ನೂ ಓದಿ – ದಿಕ್ಕು ತಪ್ಪುತ್ತಿರುವ ಭಾರತದ ವಿದೇಶಾಂಗ ನೀತಿಯ ಭವಿಷ್ಯವೇನು?

More articles

Latest article