ಒಲವೇ ವಿಸ್ಮಯ

Most read

ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್‌ಪೋರ್ಟ್‌ಗೆ ಬರುವಾಗ ನಾನು ಪಿಕ್ ಮಾಡಲಾ’ ಅವನ ತಡರಾತ್ರಿಯ ಮೆಸೇಜ್.

‘ಹೇ ಬೇಡ ಬೇಡ… I will manage. ಏರ್‌ಪೋರ್ಟ್‌ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು, ಮತ್ತೆ ಇಲ್ಲಿಂದ ಅಲ್ಲಿಯವರೆಗೆ ಹೋಗೋದೆಲ್ಲ ಬೇಡ’

‘ಅದೆಲ್ಲ ಮಹಾ ಕಷ್ಟವಾ? ನೀನೊಬ್ಬಳು.

ಸರಿ ಪ್ಯಾಕಿಂಗ್ ಆಯ್ತಾ? ಆ ಸರೋಂಗ್ ಮರೆಯದೇ ಇಟ್ಕೋ’

‘ಹೋ! ಅದನ್ನು ಯಾರು ಮರೀತಾರೆ ಹೇಳು! ಅದನ್ನೇ ಮೊದಲು ಇಟ್ಟುಕೊಂಡಿದ್ದು’

‘ಎಲಿಫೆಂಟ್ ಗ್ರೇಗೆ ರೆಡ್ ಬಾರ್ಡರ್‌ದು ತಾನೇ? ಮತ್ತೊಂದು ಮಲ್ಟಿಕಲರ್ ಬೇಡ. ಇದು ನಿನಗೆ ಚೆನ್ನಾಗಿ ಕಾಣತ್ತೆ’

‘ಅಡೆ ಪಾವಿ! ಬಣ್ಣ ಕೂಡಾ ನೆನಪಿದೆಯಾ ನಿನಗೆ?’

‘ನೆನಪಿಲ್ಲದೆ ಏನು… ನಾನೇ ಆರಿಸಿದ್ದಲ್ಲವಾ ಅದನ್ನು. ಈಗ ನಾವಿಬ್ಬರೂ ಹೀಗೆ ಮಾತಾಡ್ತಲೇ ಇದ್ದರೆ ಬೆಳಗಾಗಿ ಹೋಗುತ್ತೆ. ಬೇಗ ಮಲಗು. ನಾಳೆ ಮಾತಾಡೋಣ’

ಅವಳಿಗೆ ಸಂಭ್ರಮ… ಕೋಲ್ಕತ್ತಾ!

ನಾಳೆ ನಾವಿಬ್ಬರೂ ಅಲ್ಲಿರುತ್ತೇವೆ!

ಕೋಲ್ಕತ್ತಾಗೆ ಹೋಗಬೇಕೆನ್ನುವ ಕನಸು ಅದೆಷ್ಟು ಕಾಲದ್ದು! ಈಗ ಅದು ಕೈಗೂಡಿತು… ಅದೂ ಅವನ ಜೊತೆ!

ಹೀಗೆ ಹುಚ್ಚು ಹುಚ್ಚಾಗಿ ಬದುಕುವುದು ಅವಳ ಅದೆಷ್ಟೊಂದು ದಿನಗಳ ಕನಸು! ಅವಳಂಥದ್ದೇ ಹುಚ್ಚನೊಬ್ಬ ಎದುರಾಗಿ ಆ ಕನಸು ಹೀಗೆ ನಿಜವಾಗಿ ಬಿಟ್ಟಿತ್ತು!

***

‘ಕಪ್ಪು ಲಾಂಗ್ ಕೋಟ್ ತಂದಿದ್ದೀಯಲ್ಲವಾ? ಹಾಕಿಕೋ. ಹೊರಗೆ ಮರಗಟ್ಟಿಸುವ ಚಳಿ’

‘ನೀನಿದ್ದಿಯಲ್ಲ ಸಾಕು ಬಿಡು’

‘ಏನು ನಾನಿರುವುದು ನಿನ್ನ ತಲೆ? ತುಂಬ ಚಳಿ ಕಣೇ, ನಿಜವಾಗಲೂ ಹೇಳ್ತಿದ್ದೀನಿ. ನಿನ್ನ ಎಂದಿನ ತರಲೆ ಬುದ್ದಿ ತೋರಿಸಬೇಡ’ ಅವಳ ಭಿಡೆಯಿಲ್ಲದ ಮಾತಿಗೆ ನಾಚಿದ ಅವನು.

‘ಚಳಿನಾ… ನಾನಿದ್ದೀನಿ ಬಿಡು ಅಂದಿದ್ದರೆ ಹೇಗಿರುತ್ತಿತ್ತು ಗೊತ್ತಾ!’ ಅವಳದ್ದು ಮತ್ತಿಷ್ಟು ತರಲೆ.

‘ನಿನ್ನ ಹತ್ತಿರ ಹಾಗೆಲ್ಲ ಸುಮ್ಮನೆ ಏನೇನೋ ಹೇಳುವ ಹಾಗಿಲ್ಲ. ನೀನು ನಾನಿದ್ದೀನಿ ಅಂದೆ, ಅದಕ್ಕೇ ನಾನು ಕೋಟ್ ತರಲಿಲ್ಲ ಅಂತ ಶುರು ಮಾಡುತ್ತೀ’

ಅವಳು ಗಹಗಹಿಸಿ ನಕ್ಕಳು ಅವನ

ಕಪ್ಪು- ಬಿಳಿ ಗಡ್ಡ ನೇವರಿಸುತ್ತಾ

ಅಷ್ಟೆಲ್ಲ ಹೇಳಿದ್ದರೂ ಅವಳು ಕೋಟ್ ಧರಿಸದೆಯೇ ಹೊರಟಿದ್ದಳು ಕೊನೆಗೂ.

ಗದಗುಟ್ಟಿಸುವ ಚಳಿಯಲ್ಲಿ ನಡುಕ ಶುರುವಾದಾಗ ‘ಏನು ಗೊತ್ತಾ’ ಎನ್ನುತ್ತಾ ಮೆಲ್ಲನೆ ಅವನ ಕಡೆಗೆ ತಲೆ ತಿರುಗಿಸಿ ‘ತುಂಬ ಚಳಿ’ ಅನ್ನುವಾಗಲೇ ಅವನು ತನ್ನ ಕೋಟ್ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ‘ನೋಡು ನಾನು ಮಾತ್ರ ನನ್ನ ಕೋಟ್ ಕೊಡಲ್ಲ. ಅಷ್ಟು ಹೇಳಿದರೂ ಹಠ ಮಾಡಿ ಬಂದೆಯಲ್ಲವಾ. ಈಗ ಅನುಭವಿಸು’

ಅವಳು ನಗುತ್ತಾ ‘ಥು ಅರಸಿಕನೇ!ಹಾಳಾಗಲಿ ಬಿಡು. ನಿನ್ನ ಕೋಟ್ ನೀನೇ ಇಟ್ಕೋ’ ಎಂದು ದೊಡ್ಡದಾಗಿ ನಗುತ್ತಾ ಅವನ ಸೊಂಟದ ಸುತ್ತ ಕೈ ಹಾಕಿ ಹತ್ತಿರಕ್ಕೆ ಎಳೆದುಕೊಳ್ಳುತ್ತಾ, ಅವನು ಸೇದುತ್ತಿದ್ದ ಸಿಗರೇಟ್ ಕಿತ್ತು ತನ್ನ ಬಾಯಿಗಿರಿಸಿಕೊಂಡು ‘ಇವಿಷ್ಟು ಸಾಕು ಬಿಡು ಬೆಚ್ಚಗಾಗಲು’ ಎಂದಳು.

‘ನೀನು ಬಹಳ ಹಠಮಾರಿ’ ಮುದ್ದು ಸುರಿಸುತ್ತಾ ಹೇಳಿದ

‘ಹೌದು’

‘ಆದರೂ ಇಷ್ಟವಾಗುತ್ತೀ’ ಅವನ ದನಿಯಲ್ಲಿ ಮಾದಕತೆ

‘ಗೊತ್ತು!’ ತುಂಟತನದಲ್ಲಿ ಹೇಳಿದಳು

***

ಹೀಗೇ ಮಾತಿಗೆ ಮಾತು ಸೇರಿಸುತ್ತ,

ಉತ್ಕಟವಾಗಿ ಪ್ರೀತಿಸಿಕೊಳ್ಳುತ್ತ,

ಮನಸ್ಸು ಬಂದಾಗ ಮಲಗಿ,

ಮನಸ್ಸು ಬಂದಾಗ ಎದ್ದು,

ಬೇಕೆಂದಾಗ ವೋಡ್ಕಾ ಹೀರುತ್ತಾ,

ಅವನ ಮೆಚ್ಚಿನ ಬೆಂಗಾಲ್ ಕಾಟನ್ ಸೀರೆಯುಟ್ಟು,

ಅವನಿಗೆ ಪ್ರಿಯವಾದ ಅಗಲ ಬಿಂದಿ ಇಟ್ಟು,

ಮುದ್ದು ಮಾಡುತ್ತ, ಮಾಡಿಸಿಕೊಳ್ಳುತ್ತ,

ದಿನಗಳು, ಘಂಟೆಗಳು, ನಿಮಿಷಗಳು ಹಾರಿ ಮುಗಿದೇ ಹೋದವು!

ಹೊರಡುವ ದಿನ ಹತ್ತಿರವಾಗುತ್ತಿರುವ ಅರಿವಿನಲ್ಲಿ ಅವಳು ಸಂಕಟ ಪಟ್ಟಾಗ ಅವನು ಸಮಾಧಾನಿಸುತ್ತ, ಅವನು ಸಂಕಟ ಪಟ್ಟಾಗ ಅವಳು ಸಮಾಧಾನಿಸುತ್ತ ಅಂತೂ ಪಯಣದ ಅಂಚಿಗೆ ತಲುಪಿದ್ದರು…

ಹಿಂದಿರುಗಿ ಬರುವಾಗ ಅವನು ಇದ್ದಕ್ಕಿದ್ದಂತೆ ಕೇಳಿದ

‘ಮುಂದಿನ ಟ್ರಿಪ್ ಮಹಾಬಲಿಪುರಕ್ಕೆ?’

ಅವಳು ಖುಷಿಯಲ್ಲಿ ‘ಸರಿ ಕಣೋ ಹುಚ್ಚ! ಲವ್ ಯೂ’ ಅಂದಳು

ಅವನೂ ‘ಲವ್ ಯೂ ಕಣ್ಣಮ್ಮಾ’ ಅಂದ.

***

ಸಮಯ ರಾತ್ರಿ ಒಂದೂವರೆ.

ಇದ್ದಕ್ಕಿದ್ದಂತೆ ಸಮಯ ನೋಡಿಕೊಂಡ ಅವನು ‘ಅಯ್ಯೋ ರಾತ್ರಿ ಒಂದೂವರೆ ಆಗಿಹೋಗಿದೆ. ಮಲಗು ಈಗ. ಎಷ್ಟು ತಡವಾಗಿಹೋಗಿದೆ’

‘ಇನ್ನು 15 ನಿಮಿಷ ಇರು ಪ್ಲೀಸ್’ ಅವಳು ಮುದ್ದುಗರೆದಳು

‘ಬೇಡ ಕಣ್ಣಮ್ಮಾ ಬೆಳಗೆದ್ದು ಪಾತ್ರೆ ತೊಳೆಯುವುದು, ಅಡಿಗೆ ಮಾಡುವುದು, ಕಸ ಬಳಿಯುವುದು ಅಂತ ಕೆಲಸ ಶುರುವಾಗತ್ತೆ ಇಬ್ಬರದ್ದೂ’ ಅಂದ

‘ಥು ಅದ್ಯಾವಾಗ ಈ ಕೊರೋನಾ ಕತೆ ಮುಗಿಯತ್ತೋ ಗೊತ್ತಿಲ್ಲ’ ಬಯ್ದುಕೊಂಡಳು. ‘ಮಲಗು ಮುದ್ದು’ ಎಂದ.

ಅವನೂರಿನಲ್ಲಿ ಮಲಗಿದ ಅವನಿಗೆ ಮತ್ತು

ಇವಳೂರಿನಲ್ಲಿ ಮಲಗಿದ ಇವಳಿಗೆ

ಇಬ್ಬರಿಗೂ ಗಾಢ ನಿದ್ರೆ!

ಬಿ. ವಿ. ಭಾರತಿ

ಕವಿ, ಕಥೆಗಾರ್ತಿ

ಇದನ್ನೂ ಓದಿ- ನುಡಿ ನಮನ |ಕರಾವಳಿಯ ಹಾಡುಹಕ್ಕಿ: ಸುಕ್ರಿ ಬೊಮ್ಮ ಗೌಡ

More articles

Latest article