ರಾಯಚೂರು : ಕೃಷ್ಣ ಭಾಗ್ಯ ಜನ ನಿಗಮ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಮನೆ, ಕಚೇರಿ ಹಾಗೂ ಪಾರ್ಮಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬುಧವಾರ ಬೆಳಗ್ಗೆ(ಜು8) ದಾಳಿ ಮಾಡಿದ ಅಧಿಕಾರಿಗಳ ತಂಡವು ನಗರದ ಹೆಚ್.ಆರ್.ಬಿ.ಆರ್ ಲೇಔಟ್‌ನಲ್ಲಿರುವ ಬಸನಗೌಡ ಅವರ ಸ್ವಂತ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದೆ. ಇದರ ಜತೆಗೆ, ಯಕ್ಷಾಸಪುರದಲ್ಲಿರುವ ಅವರ ಅಣ್ಣ ಶಿವನಗೌಡ ಅವರಿಗೆ ಸೇರಿದ ‘ಸೆಲೆಬ್ರಿಟಿ ಗಾರ್ಡನ್’ ಮನೆ ಹಾಗೂ ಅದೇ ಗ್ರಾಮದಲ್ಲಿರುವ ಸಹೋದರರಾದ ದೊಡ್ಡನ ಗೌಡ ಮತ್ತು ಶರಣಗೌಡ ಅವರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ದೇವದುರ್ಗದ ಚಿಕ್ಕಹೊನ್ನಕುಣಿ ಕಚೇರಿಗಳು ಸೇರಿದಂತೆ ಬಸನಗೌಡ, ಅವರ ಪತ್ನಿ ಹಾಗೂ ಅವರ ಸಂಬಂಧಿಕರಿಗೆ ಸೇರಿದ ಮನೆ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ತೀವ್ರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಹೊನ್ನಕುಣಿಯಲ್ಲಿರುವ ಕೆಬಿಜೆಎನ್‌ಎಲ್ ಸಂಸ್ಥೆಯ ನಾಲ್ಕು ಆಫೀಸ್‌ಗಳ ಮೇಲೆ ದಾಳಿ ನಡೆದಿದ್ದು, ಕಚೇರಿಯ ಕಡತಗಳು ಹಾಗೂ ಬ್ಯಾಂಕ್ ವ್ಯವಹಾರಗಳ ಲಿಂಕ್‌ಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಪತ್ನಿ ಹೆಸರಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿ ಪೆಟ್ರೋಲ್ ಬಂಕ್, ಬಾರ್ ಆ್ಯಂಡ್ ರೆಸ್ಟೋರಂಟ್, ರಾಯಚೂರು ನಗರದಲ್ಲಿ ಮೂರು ಮನೆ, ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಬಳಿ ಕೃಷ್ಣಾ ನದಿ ದಂಡೆಯಲ್ಲಿ 30 ಎಕ್ ಜಮೀನು, ಫಾರ್ಮಹೌಸ್ ಇರುವುದು ಪತ್ತೆಯಾಗಿದೆ.
ರಾಯಚೂರಿನ ಎಚ್‌ಆರ್‌ಬಿ ಲೇಔಟ್‌ನಲ್ಲಿ ಮನೆ, ಯಕ್ಷಾಸಪುರದ ಸೆಲೆಬ್ರಿಟಿ ಗಾರ್ಡನ್‌ನಲ್ಲಿರುವ ಅವರ ಅಣ್ಣನ ಮನ ಯಕ್ಷಾಸಪುರದಲ್ಲಿರುವ ಎರಡು ಮನೆ, ಬೈಪಾಸ್ ರಸ್ತೆಯಲ್ಲಿರುವ ಶ್ರೀ ಫಿಲ್ಲಿಂಗ್ ನಾಯರಾ ಪೆಟ್ರೋಲ್ ಬಂಕ್, ಇದರ ಪಕ್ಕದಲ್ಲಿನ ಬಾರ್ ಆ್ಯಂಡ್ ರೆಸ್ಟೋರೆಂಟ್, ಗೋದಾಮು, ತೋಟದ ಮನೆ ಹಾಗೂ ಚಿಕ್ಕಹೊನ್ನಕುಣಿಯ ಕೆಬಿಜೆಎನ್ಎ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ದೂರುಗಳು ಬಂದಿರುವ ಹಿನ್ನಲೆಯಲ್ಲಿ ರಾಯಚೂರು ಲೋಕಾಯುಕ್ತ ಎಸ್.ಪಿ ಗೋಪಾಲ ನೇತೃತ್ವದಲ್ಲಿ ಏಳು ತಂಡಗಳಲ್ಲಿ 30ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
10 ಭ್ರಷ್ಟರಿಗೆ ಸೇರಿದ 53 ಸ್ಥಳಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದು 49.83 ಕೋಟಿ ರೂ. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ.
ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿರುವ ಬಗ್ಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರದಲ್ಲಿ 3, ಚಿತ್ರದುರ್ಗ-2, ಕಲಬುರಗಿ-1, ಬೆಂಗಳೂರು ದಕ್ಷಿಣ ಜಿಲ್ಲೆ-1, ಶಿವಮೊಗ್ಗ-1, ರಾಯಚೂರು-1 ಮತ್ತು ತುಮಕೂರು 1 ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬುಧವಾರ 53 ಸ್ಥಳಗಳಲ್ಲಿ ಏಕ ಕಾಲಕ್ಕೆಶೋಧನಾ ಕಾರ್ಯ ಕೈಗೊಳ್ಳಲಾಗಿತ್ತು. ಆ ವೇಳೆ 10 ಅಧಿಕಾರಿಗಳಿಗೆ ಸೇರಿದ ಒಟ್ಟು 49.83 ಕೋಟಿ ರೂ. ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ.
ದಾಳಿಗೊಳಗಾದ ಅಧಿಕಾರಿಗಳು:
– ಬಿ.ಪ್ರವೀಣ್ ಶ್ರೀಹರಿ, ಅಧೀಕ್ಷಕ ಅಭಿಯಂತ, ಕೆಆರ್‌ಐಡಿಎಲ್ ಬೆಂಗಳೂರು: -5 ಸ್ಥಳಗಳಲ್ಲಿ ಶೋಧ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 4.33 ಕೋಟಿ ರೂ.
– ಡಿ.ಆರ್.ಪುಷ್ಪಾ, ಹೆಚ್ಚುವರಿ ನಿರ್ದೇಶಕ (ಆಡಳಿತ), ಕೃಷಿ ಮಾರಾಟ ಮಹಾ ಮಂಡಳಿ, ಕೇಂದ್ರ ಕಚೇರಿ, ಬೆಂಗಳೂರು: 5 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 5.93 ಕೋಟಿ ರೂ.
ಬಿ.ಎಚ್.ದುಗ್ಗಪ್ಪ, ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಜಿಲ್ಲೆ: 3 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 1.95 ಕೋಟಿ ರೂ.
– ಎಂ.ಶಂಕರ್, ಸಹ ಪ್ರಾಧ್ಯಾಪಕ (ಅಗ್ರಿಕಲ್ಬರಲ್ ಎಂಜಿನಿಯರಿಂಗ್), ತೋಟಗಾರಿಕೆ ಇಲಾಖೆ, ಚಿತ್ರದುರ್ಗ ಜಿಲ್ಲೆ: 6 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 1.87 ಕೋಟಿ ರೂ.
ಅಮೃತರಾವ್, ಸಹಾಯಕ ಕಾರ್ಯಪಾಲಕ ಅಭಿಯಂತ (ವಿ), ಜೆಸ್ಕಾಂ, ಕಲಬುರಗಿ ಜಿಲ್ಲೆ: 7 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 2.65 ಕೋಟಿ ರೂ.
– ತಿಮ್ಮಯ್ಯ, ಪಿಡಿಒ, ಕುಂಬಳಗೋಡು ಗ್ರಾಪಂ, ಬೆಂಗಳೂರು ದಕ್ಷಿಣ ಜಿಲ್ಲೆ. 6 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 3.50 .
– ಕಿರಣ್ ಅಂಗಡಿ, ಎಸಿಎಫ್, ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲೆ: 6 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 1.94 ಕೋಟಿ ರೂ.
– ಬಸನಗೌಡ ಪಾಟೀಲ್, ಕಾರ್ಯಪಾಲಕ ಅಭಿಯಂತ, ಕೆಬಿಜೆಎನ್‌ಎಲ್, ಎನ್‌ಆರ್‌ಬಿಸಿ ಉಪ ವಿಭಾಗ-4, ಚಿಕ್ಕಹೊನಕುನಿ, ದೇವದುರ್ಗ, ರಾಯಚೂರು: 7 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 6.11 ಕೋಟಿ ರೂ.
– ಎನ್.ಮಧುಸೂದನ್, ಸಹಾಯಕ ಅಭಿಯಂತ, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪ-ವಿಭಾಗ: 5 ಕಡೆ ದಾಳಿ. ಒಟ್ಟು ಅಸಮತೋಲನ ಆಸ್ತಿ ಮೌಲ್ಯ 2.10 ಕೋಟಿ ರೂ.

