Thursday, July 25, 2024

ಲೋಕಸಭಾ ಚುನಾವಣೆ: ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ ಸಿದ್ಧರಾಮಯ್ಯ: 26,000 ಕಿಮೀ ಸಂಚಾರ!

Most read

ಬೆಂಗಳೂರು: 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋಮೀಟರ್ ಸಂಚಾರ, ದಿನಕ್ಕೆ 14 ರಿಂದ 18 ಗಂಟೆ ಓಡಾಟ…

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ತವಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಓಡಾಡಿದ ಪರಿ ಇದು.

2024, 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸರಿಯಾಗಿ ಪ್ರಚಾರ ನಡೆಸಲಿಲ್ಲ, ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂಬ ಅಪವಾದವಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಇಡೀ ಮಂತ್ರಿಮಂಡಲ ಮತ್ತು ಕಾಂಗ್ರೆಸ್ ಸಂಘಟನೆ ಬೀದಿಗಿಳಿದು ಹಗಲಿರುಳು ಶ್ರಮಿಸಿತು.

ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಸಲಾಯಿತು. ಎಲ್ಲಾ ಸಮಾವೇಶಗಳಲ್ಲೂ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮ್ಮದೇ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದ್ದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ (ಜನಪರ) ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು ಪರಿಣಾಮಕಾರಿಯಾಗಿತ್ತು

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ “ಪ್ರಜಾಧ್ವನಿ-2” ಜನ ಸಮಾವೇಶಗಳಲ್ಲಿ ಹೈವೋಲ್ಟೇಜ್ ಭಾಷಣಗಳ ಮೂಲಕ ರಾಜ್ಯದ ಜನರಿಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟುವಂತೆ ಅರ್ಥ ಮಾಡಿಸಿದ್ದಕ್ಕೆ ನಾವುಗಳು ಸಾಕ್ಷಿಯಾದವು

ಬಿಜೆಪಿ ಕೇವಲ ಭಾರತೀಯರ ಭಾವನೆಗಳನ್ನು ಕೆರಳಿಸಿ ಬಕ್ರಾ ಮಾಡುತ್ತಿದೆ. ಕಾಂಗ್ರೆಸ್ ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಭರವಸೆಗಳನ್ನು ನೀಡುತ್ತಿದೆ ಎನ್ನುವ ಮುಖ್ಯಮಂತ್ರಿಗಳ ಮಾತಿಗೆ ಮನಸೋತು, ಮಾನ್ಯತೆ ಕೊಟ್ಟ ಮತದಾರರು.

ಪ್ರಜಾಧ್ವನಿ ಜನ-ಸಮಾವೇಶಗಳಲ್ಲಿ ಸಿದ್ಧರಾಮಯ್ಯ ಅವರ ಭಾಷಣದಲ್ಲಿ ಕೆಲವು ಅಂಶಗಳು ಸಾಮಾನ್ಯವಾಗಿ ಇರುತ್ತಿದ್ದವು.

1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆ ಜನ ಕುಳಿತಲ್ಲಿಂದ ಮೇಲೆದ್ದು ಎರಡೂ ಕೈಗಳನ್ನು ಮೇಲೆತ್ತಿ, ಅವರ ಮಾತಿಗೆ ಸಮ್ಮತಿ ಸೂಚಿಸುತ್ತಿದ್ದರು*

2)ಕಪ್ಪು ಮುಖ-ಬೆಳ್ಳಿ ಗಡ್ಡದ ಜನರ ಬಾಯಲ್ಲಿ ಅಂಬಾನಿ-ಅದಾನಿ: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಗೆ ಎಂಥಾ ದುಸ್ಥಿತಿ ತಂದಿಟ್ಟರು ಎನ್ನುವುದನ್ನು ವಿವರಿಸುವಾಗ ಪ್ರತೀ ಸಭೆಗಳಲ್ಲೂ ರೊಚ್ಚಿಗೆದ್ದ ಜನರ ಬಾಯಲ್ಲಿ ಅಂಬಾನಿ-ಅದಾನಿ ಹೆಸರು ಪ್ರಸ್ತಾಪವಾಗುತ್ತಿದ್ದದ್ದು ವಿಶೇಷವಾಗಿತ್ತು. ಇದು ಮಾತ್ರ ಚಾಮರಾಜನಗರದಿಂದ ಬೀದರ್ ವರೆಗೂ ಜನರಿಂದ ವ್ಯಕ್ತವಾಗುತ್ತಿದ್ದ ಸಾಮಾನ್ಯ ವಿದ್ಯಮಾನವಾಗಿತ್ತು.

3)ಖಾಲಿ ಚೊಂಬಿಗೆ ಭರ್ಜರಿ ಟಿಆರ್ ಪಿ: ಮುಖ್ಯಮಂತ್ರಿಗಳ ನಾಟಿ ಶೈಲಿಯ ಭಾಷಣಗಳಲ್ಲಿ ಅರ್ಥಪೂರ್ಣವಾದ ಹಾಸ್ಯವೂ ಮೇಳೈಸಿದ್ದರಿಂದ ರಾಜ್ಯದ ಜನತೆಗೆ ಮನರಂಜನೆಯೂ ಸಿಕ್ಕಿತ್ತು. ಹತ್ತು ವರ್ಷಗಳಲ್ಲಿ ಮೋದಿ ನಿಮ್ಮ ಕೈಗೆ ಏನು ಕೊಟ್ಟರು ಎಂದರು ಜನರೆಡೆಗೆ ಬೆರಳು ಮಾಡಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರೆ, ನೆರೆದಿದ್ದ ಜನತೆ “ಖಾಲಿ ಚೊಂಬು” ಎಂದು ಕೂಗುತ್ತಿದ್ದರು.

4) ತಮ್ಮ ಅವಧಿಯಲ್ಲಿ ಕೊಟ್ಟ ಭಾಗ್ಯಗಳನ್ನು ಒಂದೊಂದಾಗಿ ಹೆಸರಿಸುತ್ತಾ…ಅನ್ನಭಾಗ್ಯ ಕೊಟ್ಟಿದ್ದು ಯಾರು ? ಎಂದು ಕೇಳುತ್ತಿದ್ದರು. ಜನತೆ ಸಿದ್ದರಾಮಯ್ಯ ಎಂದು ಕೂಗುತ್ತಿದ್ದರು. ಇದೇ ರೀತಿ ಒಟ್ಟು 18-20 ಭಾಗ್ಯಗಳನ್ನು ಹೆಸರಿಸಿದರೆ ಅಷ್ಟೂ ಬಾರಿ ಜನ ಸಿದ್ದರಾಮಯ್ಯ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು.

5) ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ‌ ನೆತ್ತಿ ಸುಡುವ ಬಿಸಿಲಿನಲ್ಲೂ ಮಧ್ಯಾಹ್ನದ ವೇಳೆಯಲ್ಲೂ ಕಪ್ಪು ಮುಖ ಬೆಳ್ಳಿ ಗಡ್ಡದ ತಲೆಗೆ ಟವೆಲ್ ಸುತ್ತಿದ ಗಂಡಸರು, ಸೆರಗು ತಲೆಗೆ ಸುತ್ತಿಕೊಂಡ ಮಹಿಳೆಯರು ಗಂಟೆಗಟ್ಟಲೆ ಕಾದು ಭಾಷಣ ಕೇಳುತ್ತಿದ್ದದ್ದು, ಭಾಷಣಕ್ಕೆ ಸ್ಪಂದಿಸುತ್ತಿದ್ದದ್ದನ್ನು ನೋಡಿದಾಗಲೇ ಈ ಬಾರಿ ಮತದಾನ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗುವ ಭರವಸೆ ವ್ಯಕ್ತವಾಗಿತ್ತು‌

6) ಮುಖ್ಯಮಂತ್ರಿಗಳು ಮೋದಿಯವರ “ಅಚ್ಛೇ ದಿನ್ ಆಯೇಂಗೆ” ಎನ್ನುವ ಸುಳ್ಳು ಭರವಸೆಯನ್ನು ಲೇವಡಿ ಮಾಡುವಾಗ ದೀರ್ಘವಾಗಿ “ಅಚ್ಚೆಏಏಏಏಏ ದಿನ್ ಆಯೇಂಗೇ” ಎಂದು ರಾಗ ಎಳೆಯುತ್ತಿದ್ದರೆ, ಸಭೆಯಲ್ಲಿದ್ದ ಜನರೂ ಕೂಡ ರಾಗವಾಗಿ ಕೋರಸ್ ಕೊಡುತ್ತಿದ್ದರು.

8) ದೇಹದ ನೀರನ್ನೆಲ್ಲಾ ಹೀರುವ ಸುಡು ಬಿಸಿಲಿನಲ್ಲೇ 74 ಪ್ರಜಾಧ್ವನಿ ಜನ‌ಸಮಾವೇಶಗಳು ನಡೆದರೆ ಹಾವೇರಿ ಮತ್ತು ದಾವಣಗೆರೆ ಜನ ಸಮಾವೇಶಗಳಲ್ಲಿ ಮಾತ್ರ ತುಂತುರು ಹನಿಯ ಜತೆಗೆ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಮೇ 5 ರಂದು ತೆರೆ ಬಿತ್ತು.

14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು ಬರೋಬ್ಬರಿ 20 ರಿಂದ 26 ಸಾವಿರ ಕಿಲೋಮೋಟರ್.

ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60 ಸಾವಿರದವರೆಗೂ ಜನ ಸೇರಿದ್ದರು.

ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿಗಳು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ.

More articles

Latest article