ಬೆಂಗಳೂರು : ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಅದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿರುವ ಕಾರಣಕ್ಕೆ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದುಡಲಾಗಿದೆ.
ಇಂದು (ಶುಕ್ರವಾರ) ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಮಾಡಿದರು. ಇದರಿಂದಾಗಿ ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷರಾದ ಯು ಟಿ ಖಾದರ್, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಬಿಜೆಪಿ ಸದಸ್ಯರು ಪಟ್ಟು ಬಿಡದ ಕಾರಣ ಸಂಧಾನ ವಿಫಲವಾಯಿತು.
ಮತ್ತೆ ಕಲಾಪ ಆರಂಭವಾದರು ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದ ವಿರುದ್ಧ ಧರಣಿಯನ್ನು ಮುಂದುವರೆಸಿ ಗಲಾಟೆ ಮಾಡಿದರು.
ವಿಪಕ್ಷ ನಾಯಕರುಗಳ ಧರಣಿಯ ನಡುವೆಯೇ ಎರಡು ವರದಿಗಳ ಮಂಡನೆ ಮತ್ತು ಎರಡು ಮಸೂದೆಗಳ ಅಂಗೀಕಾರವಾಯಿತು. ಧರಣಿಯು ಮತ್ತಷ್ಟು ಜೋರಾಗುತ್ತಿದಂತೆ ಸ್ಪೀಕರ್ ಯು ಟಿ ಖಾದರ್ ಕಲಾಪವನ್ನು ಸೋಮವಾರ ಬೆಳಗ್ಗೆ 9:30 ಕ್ಕೆ ಮುಂದುಡುವುದಾಗಿ ಪ್ರಕಟಿಸಿದರು.